ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾನಾಟೋಪ್ಸಿಸ್

Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ಆ ತರುಣನ ಬದುಕು ಚೂರು ಚೂರಾದಂತಿತ್ತು. ಅವನ ಕನಸುಗಳು ಕಾಲಬಳಿಯಲ್ಲೇ ಹುಡಿಹುಡಿಯಾಗಿ ಬಿದ್ದಿದ್ದವು. ಮನಸ್ಸಿನಲ್ಲಿ ನಿರಾಸೆ ಮಡುಗಟ್ಟಿತ್ತು. ಆತ ಎಲ್ಲವನ್ನು ಕಳೆದುಕೊಂಡಂತೆ ಮನೆಯಿಂದ ಹೊರಟು ಹತ್ತಿರವೇ ಇದ್ದ ಅರಣ್ಯಪ್ರದೇಶಕ್ಕೆ ಬಂದಿದ್ದ. ಮನೆಯಲ್ಲಿ ಇರುವವರ ಮುಂದೆ ತನ್ನ ದುಃಖ ತೋರಿಸುವುದಕ್ಕಿಂತ ಕಾಡಿನಲ್ಲಿ ಅತ್ತು ಬಿಡುವುದು ವಾಸಿ ಎನ್ನಿಸಿತ್ತು.

ಆತ ತನ್ನ ಶಾಲೆಯನ್ನು ಮುಗಿಸಿ ರಜೆಗೆಂದು ಮನೆಗೆ ಬಂದಿದ್ದ. ರಜೆ ಕಳೆದ ನಂತರ ತನಗೆ ಏಲ್ ವಿಶ್ವವಿದ್ಯಾಲಯದಲ್ಲಿ ಮುಂದಿನ ಕಲಿಕೆಗೆ ಪ್ರವೇಶ ದೊರೆತ ಸಂತಸದಲ್ಲಿ ಉಬ್ಬಿ ಹೋಗಿದ್ದ. ಈ ವಿಷಯ ತಿಳಿದಾಗ ಅವನ ತಂದೆಗೆ ಸಂತೋಷ ಮತ್ತು ದುಃಖ ಏಕಕಾಲದಲ್ಲಿ ಆದವು. ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ದೊರೆತ ಸಂತೋಷ ಒಂದುಕಡೆಯಾದರೆ, ತಮ್ಮ ಮನೆಯ ಆರ್ಥಿಕ ದುರವಸ್ಥೆ ಇನ್ನೊಂದೆಡೆಗೆ. ತಂದೆ ಹೇಳಿದರು, `ಮಗೂ, ನನ್ನನ್ನು ಕ್ಷಮಿಸು. ನಿನ್ನ ಶಿಕ್ಷಣಕ್ಕೆ ಹಣ ಪೂರೈಸುವ ಶಕ್ತಿ ನನಗಿಲ್ಲ'. ತನಗೆ ಕವಿದ ನಿರಾಸೆಯನ್ನು ತಂದೆಗೆ ತೋರಿಸದಿರಲು ತರುಣ ಶತಪ್ರಯತ್ನ ಮಾಡಿದ. ನಂತರ ಮನೆಯಲದಲ್ಲಿ ಇರಲಾರದೇ ಹೊರಬಂದ. ಆ ತರುಣನ ಹೆಸರು ವಿಲಿಯಂ ಬ್ರಯಾಂಟ್. ಕಾಡಿನಲ್ಲಿ ವಸಂತಮಾಸ ಆವರಿಸುತ್ತಿದೆ.

ಹತ್ತಿರದಲ್ಲೇ ಒಂದು ಚೆಲುವಾದ ಪಕ್ಷಿ ಇಂಪಾಗಿ ಕೂಗಿತು. ಪಕ್ಷಿಗಳ ಚಿಲಿಪಿಲಿ, ಸಣ್ಣ ಹುಳಗಳ ಕಿರ್ ಕಿರ್ ಸದ್ದು, ತರಗೆಲೆಗಳ ಹಾರಾಟದ ಸಪ್ಪಳ, ಗಾಳಿಯ ಸುಂಯ್‌ಗುಡುವಿಕೆ ಇವೆಲ್ಲ ಸೇರಿ ಅವನ ಸುತ್ತ ಒಂದು ಅಮೋಘವಾದ ಸಂಗೀತ ಗೋಷ್ಠಿ ನಡೆದಿತ್ತು. ಇದು ನಿಸರ್ಗದ ಸಂಭ್ರಮದ ಕಿರೀಟ. ಅದೆಂಥ ಸುಂದರ ಈ ವಸಂತ ಮಾಸ! ಇದನ್ನೆಲ್ಲ ಮೌನವಾಗಿ ಗ್ರಹಿಸಿದ ಬ್ರಯಾಂಟ್. ತಕ್ಷಣವೇ ಇನ್ನೊಂದು ವಿಚಾರ ಮನಸ್ಸಿಗೆ ಬಂತು. ಇಡೀ ವರ್ಷದಲ್ಲಿ ಈ ವಸಂತಮಾಸದ ಅವಧಿ ಎಷ್ಟು ಚಿಕ್ಕದಲ್ಲವೇ? ಹಾಗೆಯೇ ತನ್ನ ಜೀವನದ ಈಗಿನ ವಸಂತವೂ ಕ್ಷಣಿಕವಾದದ್ದು. ಅದು ಇದೆ ಎಂದು ಸಂಭ್ರಮಿಸುವಷ್ಟರಲ್ಲೇ ಕರಗಿ ಹೋಗಿ ಕೇವಲ ನೆನಪುಗಳ ಮುದ್ರೆ ಉಳಿಯುತ್ತದೆ. ತನ್ನ ಜೀವನದಲ್ಲೂ ಈಗ ಯೌವನದ, ಆಸೆಯ, ಅವಕಾಶಗಳ ವಸಂತ ಬಂದಿದೆ. ಇದೂ ಸರಿದು ಹೋಗಿ ಒಂದು ದಿನ ಯಾರೂ ತಪ್ಪಿಸಿಕೊಳ್ಳಲಾರದ ಸಾವು ತನ್ನನ್ನು ಅಪ್ಪುತ್ತದೆ. ಹಾಗಾದರೆ ತಾನೇಕೆ ಕ್ಷಣಕಾಲದ ಸಂತೋಷಕ್ಕೆ ಇಷ್ಟೊಂದು ಸಂಕಟಪಡುವುದು? ಜೀವನವನ್ನು ಸಂತೋಷದಿಂದ, ಸಂತೃಪ್ತಿಯಿಂದ ಕಳೆದು ಸಾವನ್ನು ಪ್ರೀತಿಯಿಂದ ಸ್ವೀಕರಿಸುವುದೇ ಸಾಕಲ್ಲವೇ?

ಆತ ತನಗಾದ ಅಪಾರ ನಿರಾಸೆಯನ್ನು ಸಾವಿನ ಅನಿವಾರ್ಯತೆಯಲ್ಲಿ ಮರೆಯಲು ಪ್ರಯತ್ನಿಸಿದ. ಆ ಕ್ಷಣದಲ್ಲೇ ಅವನ ಹೃದಯದಲ್ಲಿ ಹಾಡಿನ ಸಾಲೊಂದು ಹುಟ್ಟಿತು.  ತೆರೆದ ಆಗಸದೆಡೆಗೆ ನಡೆದು ನಿಸರ್ಗದ ಬೋಧನೆಗೆ ಕಿವಿಗೊಡು. ನಿಧಾನವಾಗಿ ಮನೆಗೆ ಬಂದ ವಿಲಿಯಂ ಬ್ರಯಾಂಟ್. ತಲೆಯಲ್ಲಿ ತುಂಬಿಕೊಂಡ ವಿಚಾರಗಳು ಸುಲಲಿತವಾಗಿ ಕಾಗದದ ಮೇಲೆ ಮೂಡುತ್ತ ಬಂದವು. ಬರೆದದ್ದನ್ನು ಮರಳಿ ಓದಿದಾಗ ತಾನು ಹೀಗೆ ಬರೆಯಬಲ್ಲೆನೇ ಎಂದು ಅವನಿಗೇ ಆಶ್ಚರ್ಯವಾಯಿತು. ಈಗ ಅವನಿಗೆ ತನ್ನ ಭವಿಷ್ಯದ ಚಿಂತೆ, ಆತಂಕಗಳು ಮಾಯವಾದಂತೆನಿಸಿತು. ತನ್ನ ಕವನಕ್ಕೆ ಆತ  ಥಾನಾಟೋಪ್ಸಿಸ್  ಎಂದು ಹೆಸರಿಟ್ಟ. 

ಗ್ರೀಕ್ ಭಾಷೆಯಲ್ಲಿ  ಥಾನಾಟೋಸ್  ಎಂದರೆ  ಸಾವು.  ಓಪ್ಸಿನ್  ಎಂದರೆ  ಒಂದು ನೋಟ  ಥಾನಾಟೋಪ್ಸಿಸ್ ಎಂದರೆ  ಸಾವಿನೆಡೆ ಒಂದು ನೋಟ. ಈ ಕಾವ್ಯವನ್ನು ತನ್ನ ಇತರ ಪದ್ಯಗಳ ಜೊತೆಗೆ ತನ್ನ ಮೇಜಿನ ಡ್ರಾಯರ್‌ನಲ್ಲಿಟ್ಟುಹೋದ. ಅವು ಆರು ವರ್ಷ ಹಾಗೆಯೇ, ಅಲ್ಲಿಯೇ ಇದ್ದವು. ಒಂದು ದಿನ ಬ್ರಯಾಂಟ್‌ನ ತಂದೆ ಅವನ್ನು ನೋಡಿ, ಸಂತೋಷಪಟ್ಟು  `ನಾರ್ಥ ಅಮೆರಿಕನ್ ರಿವ್ಯೆ' ಎಂಬ ಪತ್ರಿಕೆಯ ಸಂಪಾದಕರಿಗೆ ಕೊಟ್ಟಾಗ ಅವರೂ ಈ ಕಾವ್ಯದ ಸೌಂದರ್ಯ ಮತ್ತು ಶಬ್ದಗಳ ಪ್ರಭಾವಕ್ಕೆ ಬೆರಗಾದರು. ಅದು 1817 ರಲ್ಲಿ ಪ್ರಕಟವಾಯಿತು. ಒಂದೆರಡು ವರ್ಷಗಳಲ್ಲಿ ಈ ಕಾವ್ಯ ಪ್ರಪಂಚದಾದ್ಯಂತ ಒಂದು ಸಂಚಲನವನ್ನೇ ಉಂಟುಮಾಡಿತು. ಅಮೆರಿಕೆಯ ಸಾರ್ವಕಾಲಿಕ ಶ್ರೇಷ್ಠ ಕಾವ್ಯಗಳಲ್ಲಿ ಇದೊಂದು ಎಂದು ಈಗಲೂ ಪರಿಗಣಿಸಲಾಗುತ್ತದೆ. ಕವನದ ಕೊನೆಯ ಸಾಲುಗಳಂತೂ ಅದೆಷ್ಟು ಲಕ್ಷಾಂತರ ಜನರನ್ನು ತಟ್ಟಿದೆಯೋ!
ಗೆಳೆಯಾ, ಸಾವಿನ ಮನೆಯಿಂದ ಕರೆಬಂದಾಗ,
ಮಧ್ಯರಾತ್ರಿಯಲ್ಲಿ ಗಣಿಯಲ್ಲಿ ದುಡಿಯುವ ಗುಲಾಮ,
ಜೈಲಿಗೆ ಹೋಗುವಂತೆ ಕೊರಗುತ್ತ ಹೋಗಬೇಡ.
ಸಂತೋಷದಿಂದ, ನಿನ್ನ ಮನೆಯ ಮಂಚದ ಮೇಲೆ,
ಬೆಚ್ಚಗಿನ ಹೊದಿಕೆಯನ್ನಪ್ಪಿಕೊಂಡು ಅವನ ಸುಂದರ ಕನಸುಗಳನ್ನೇ ಕಾಣುತ್ತ
ಭಗವಂತನಲ್ಲಿ ನಿಶ್ಚಲವಾದ ಶ್ರದ್ಧೆಯನ್ನಿಟ್ಟು, ನಿನ್ನ ಸಮಾಧಿ ಸೇರು.

ಗಲಿಬಿಲಿಯಾದ ಮನಸ್ಸಿನಿಂದಲೇ ಸ್ಥಿರತೆ ಹುಟ್ಟಿ ಬರುತ್ತದೆ, ಆತಂಕದ ಬಸುರಿನಿಂದಲೇ ನಿಶ್ಚಯದ ಕೃತಿ ಬರುತ್ತದೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ, ನಿರಾಸೆಯ ಮಡುವಿನಿಂದಲೇ ಶ್ರದ್ಧೆಯ ಸಂದೇಶ ಉಕ್ಕಿ ಬರುತ್ತದೆ. ಅದಕ್ಕೊಂದು ನಿದರ್ಶನ ವಿಲಿಯಂ ಬ್ರಯಾಂಟ್‌ನ ಸರ್ವಮಾನ್ಯವಾದ ಕವನ  ಥಾನಾಟೋಪ್ಸಿಸ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT