ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಣಿವು ಪಥಿಕರಿಗೇ ಹೊರತು ಪಥಕ್ಕಲ್ಲ

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ನಾನೊಮ್ಮೆ ಕೊಪ್ಪ ಸೀಮೆಯಲ್ಲಿರುವ ಸಿದ್ಧರಮಠವನ್ನು ನೋಡಲು ಹೋಗಿದ್ದೆ. ಕುವೆಂಪು ಕಾದಂಬರಿಗಳಲ್ಲಿ ಪ್ರಸ್ತಾಪಗೊಳ್ಳುವ ಈ ಮಠ, ನಾಥಪಂಥಕ್ಕೆ ಸಂಬಂಧಪಟ್ಟಿರಬಹುದೇ ಎಂದು ಪರಿಶೀಲಿಸುವುದು ನನ್ನ ಇರಾದೆಯಾಗಿತ್ತು. ಅಲ್ಲಿ ನನಗೆ ಪಕ್ಕಾ ಮಾಹಿತಿ ಸಿಗಲಿಲ್ಲ. ಅಲ್ಲಿದ್ದ ಒಬ್ಬರು ‘ಊರಲ್ಲಿ ಸುಬ್ಬಣ್ಣ ಅಂತ ಹಿರಿಯರಿದ್ದಾರೆ. ಅವರನ್ನು ಕೇಳಿನೋಡಿ. ಅವರು 20 ವರ್ಷದ ಬಳಿಕ ಊರಿಗೆ ಈಗಷ್ಟೆ ಬಂದಿದ್ದಾರೆ’ ಎಂದರು. ‘ಅವರು ಎಲ್ಲಿಗೆ ಹೋಗಿದ್ದರು?’ ಎಂದು ಕೇಳಿದೆ. ಅವರು ವ್ಯಂಗ್ಯವಾಗಿ ‘ಹಿಂಗೇ ದೇಶ ಸುತ್ತೋಕೆ. ಬೇಗ ಹೋಗಿ, ನೀವು ಹೋಗುವುದರೊಳಗೆ ಮನೆಬಿಟ್ಟು ಹೋದರೂ ಹೋದರೆ’ ಎಂದರು. ನಾನು ತರಾತುರಿಯಿಂದ ಅವರ ಮನೆಯತ್ತ ಓಡಿಹೋದೆ.

ಆದರೆ ನನ್ನ ಅವಸರಕ್ಕೆ ಕಾರಣವಿರಲಿಲ್ಲ. 75 ದಾಟಿದ್ದ ಸುಬ್ಬಣ್ಣ, ಪಡಸಾಲೆಯಲ್ಲಿದ್ದ ಮಂಚದ ಮೇಲೆ ಆಸೀನರಾಗಿ, ಮನೆಯ ಮುಂದಿನ ತೋಟ ನೋಡುತ್ತ, ಕವಳ ಮೆಲ್ಲುತ್ತ, ಎಷ್ಟೊ ವರ್ಷದಿಂದ ಅಲುಗಾಡದೆ ಇದ್ದಾರೆ ಎಂಬಂತೆ ನಿರಾಳ ಕೂತಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡು ದೇಶಾಟನೆ ಮಾಡುವ ಮತ್ತು ಹೀಗೆ ತಪಕ್ಕೆ ಕೂತವರಂತೆ ಕೂತಿರುವ ಅವರನ್ನು ವಿಸ್ಮಯದಿಂದಲೂ ಅಸೂಯೆಯಿಂದಲೂ ನೋಡುತ್ತ, ಅವರ ಮಾತು ಕೇಳುತ್ತ, ನನಗೆ ಮಠದ ಬಗ್ಗೆ ಕೇಳುವುದೇ ಮರೆತುಹೋಯಿತು. ಸುಬ್ಬಣ್ಣ ಹೇಳಿದ ಕೆಲವು ಪ್ರಸಂಗಗಳು ವಿಶಿಷ್ಟವಾಗಿದ್ದವು. 1. ಅಪ್ಪ ಇನ್ನು ಬರುವುದಿಲ್ಲ ಎಂದುಕೊಂಡು ಮಕ್ಕಳೆಲ್ಲ ಆಸ್ತಿ ಹಿಸ್ಸೆ ಮಾಡಿಕೊಳ್ಳುವುದಕ್ಕೆ ಸೇರಿಸಿಕೊಂಡಿದ್ದ ಹೊತ್ತಲ್ಲಿ, ಥಟ್ಟನೆ ಸುಬ್ಬಣ್ಣ ಪ್ರತ್ಯಕ್ಷವಾಗಿ, ‘ನನ್ನ ಘಟ ಇರುವಾಗಲೇ ಮನೆ ಒಡೆಯೋ ಕೆಲಸ ಮಾಡ್ತಿದೀರೇನ್ರೊ’ ಎಂದು ಗರ್ಜನೆ ಹಾಕಿ, ಪಂಚಾಯತಿಗೆ ಸೇರಿದರವನ್ನೆಲ್ಲ ಮನೆಬಿಟ್ಟು ಓಡಿಸಿದ್ದು. 2. ಸುಬ್ಬಣ್ಣ ಖಂಡಿತ ತೀರಿಹೋಗಿರಬೇಕು ಎಂದು ಮನೆಯವರು ತಿಥಿಮಾಡಿ ಮುಗಿಸಿದ ಮಾರನೇ ದಿನ, ಗಜಾನನ ಬಸ್ಸಿನಿಂದಿಳಿದು ಮನೆಗೆ ಬಂದಿದ್ದು. ‘ತಿಥಿ ದಿನವಾದರೂ ಬಂದಿದ್ದರೆ ಒಳ್ಳೇ ಭೋಜನ ಸಿಗುತಿತ್ತು’ ಎಂದು ಸುಬ್ಬಣ್ಣ ನಕ್ಕರು.

ಸಣ್ಣ ಜಮೀನ್ದಾರರಾಗಿದ್ದ ಸುಬ್ಬಣ್ಣ ಆಸ್ತಿ ಸಂಭಾಳಿಸಿಕೊಂಡು, ಎಲ್ಲರಂತೆ ಇರುವುದು ಬಿಟ್ಟು ದೇಶ ತಿರುಗುವುದಕ್ಕೆ ಯಾಕೆ ಹೊರಡುತ್ತಿದ್ದರು? ಹೊರಜಗತ್ತನ್ನು ಕತ್ತರಿಸುವಂತೆ ಮನೆಯಲ್ಲಿ ಬಂಧಿಸಿ ಸುರಿವ ಮಳೆ, ಹಸಿರು ಕಕ್ಕುವ ಕಾಡು, ನಿರ್ಜನತೆ- ಇವು ಹುಟ್ಟಿಸಿದ ಏಕತಾನತೆ ಹೊರಹೋಗಲು ಪ್ರೇರಿಸಿದವೇ? ಅಥವಾ ಕೆಲವರ ಸ್ವಭಾವದಲ್ಲಿಯೇ ತಿರುಗುವ ಗುಣವಿರುತ್ತದೆಯೊ? ತಿಳಿಯದು. ಆದರೆ ಸುಬ್ಬಣ್ಣ ಬುದ್ಧನಂತೆ, ಮನೆಬಿಟ್ಟು ಖಾಯಮ್ಮಾಗಿ ಹೊರಹೋದವರಲ್ಲ; ನೆನಪಾದಾಗ ಮನೆಗೆ ಬರುವವರು. ಆದರೆ ಆಸಾಮಿ ಮತ್ತೆ ಯಾವಾಗ ಕಾಲು ಕೀಳುತ್ತದೆಯೋ? ಸ್ವತಃ ಅವರಿಗೂ ತಿಳಿಯದು. 

ಹುಟ್ಟಿಬೆಳೆದ ಊರು-ಮನೆ ಬಿಟ್ಟು, ಹೊಸ ಸ್ಥಳ ನೋಡಲು ಜನ ಆದಿಮ ಕಾಲದಿಂದಲೂ ತಿರುಗಾಟ ಮಾಡುತ್ತಾ ಬಂದಿದ್ದಾರೆ. ಅವಕ್ಕೆ ಪ್ರವಾಸ, ಯಾತ್ರೆ, ವಿದ್ಯಾರ್ಜನೆ, ಉದ್ಯೋಗ, ಭಿಕ್ಷಾಟನೆ, ಕಲಾಪ್ರದರ್ಶನ, ವಲಸೆ ಎಂಬ ನೂರಾರು ನೆಪಗಳು ಒದಗಿವೆ. ಎಲ್ಲ ಬಗೆಯ ತಿರುಗಾಟಕ್ಕೂ ಅವುಗಳದ್ದೇ ಆದ ವಿನ್ಯಾಸವಿದೆ. ವಿಶಿಷ್ಟತೆಯಿದೆ; ಎಲ್ಲವುಗಳಲ್ಲೂ ‘ಇರುವುದನ್ನು ಬಿಟ್ಟು ಇರದುದೆಡೆಗೆ ತುಡಿಯುವ’ ಗುಣವಿದೆ.  

ಧಾರ್ಮಿಕ ತಿರುಗಾಟಗಳ ಉದ್ದೇಶ, ದೈವದರ್ಶನ ಮತ್ತು ಪುಣ್ಯಪ್ರಾಪ್ತಿ ಎನ್ನಲಾಗುತ್ತದೆ. ಆದರೆ ಇಲ್ಲೂ ಅತಿಪರಿಚಿತ ಪರಿಸರದಿಂದ ಕೆಲ ಕಾಲ ತಪ್ಪಿಸಿಕೊಂಡು ಹೋಗಿ, ಹೊಸ ದೇಶವನ್ನೋ ಅಲ್ಲಿನ ಜೀವನ ಕ್ರಮವನ್ನೋ ನೋಡುವ ಕುತೂಹಲವೂ ಕೆಲಸ ಮಾಡುತ್ತಿರುತ್ತದೆ. ಇಲ್ಲದಿದ್ದರೆ ನಮ್ಮ ಪುಣ್ಯಕ್ಷೇತ್ರಗಳು ಯಾಕಷ್ಟು ಅಂಗಡಿ ಮುಂಗಟ್ಟುಗಳು ತುಂಬಿದ ಮಾರುಕಟ್ಟೆಗಳಾಗಬೇಕು? ಮೆಕ್ಕಾಯಾತ್ರೆಯ ಬಗ್ಗೆ ನನ್ನಮ್ಮ ಒಂದು ಕತೆ ಹೇಳುತ್ತಿದ್ದಳು. ಪವಿತ್ರ ಹಜ್ ನಮಾಜಿನ ವೇಳೆಗೆ ಸರಿಯಾಗಿ ಸೋವಿಯಲ್ಲಿ ಚಿನ್ನ ಸಿಗುವ ಮೀನಾಬಜಾರನ್ನು ದೇವರು ಏರ್ಪಡಿಸುವನಂತೆ. ನಮಾಜು ಮುಗಿವ ಹೊತ್ತಿಗೆ ಬಜಾರೂ ಮುಗಿಯುತ್ತದೆ. ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ಈ ಕತೆ ಲೌಕಿಕತೆ ಅಲೌಕಿಕತೆಗಳ ನಡುವಣ ಕರ್ಷಣದ ರೂಪಕದಂತಿದೆ.  

ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಸ್ಥರು ಮಾಡುವ ಸರ್ಕ್ಯೂಟುಗಳಲ್ಲೂ ತಿರುಗಾಟವಿರುತ್ತದೆ. ಆದರೆ ಎಲ್ಲವೂ ಸಜ್ಜಾಗಿರುವ ಈ ಫಿರತಿಗಳಲ್ಲಿ ಸಿಗುವ ಲೋಕಾನುಭವಕ್ಕೆ ಮಿತಿಯಿದೆ. ಇದೂ ತಾನೇ ಅಧಿಕಾರಿಯ ಮನೋಧರ್ಮದ ಮೇಲೆ ನಿರ್ಣಯವಾಗುವ ಬಾಬತ್ತು. ಒಡೆಯರ ಕಾಲದಲ್ಲಿ ಕಂದಾಯ ಇಲಾಖೆಯಲ್ಲಿ ದೊಡ್ಡ ಅಧಿಕಾರಿಯಾಗಿದ್ದ ನವರತ್ನ ರಾಮರಾಯರ ಆತ್ಮಕತೆ (‘ಕೆಲವು ನೆನಪುಗಳು’) ತಿರುಗಾಟದ ರೋಮಾಂಚಕ ಘಟನೆಗಳಿಂದ ಕೂಡಿದೆ. ಮೈಸೂರಿನ ಒಡೆಯರಾಗಿದ್ದ 10ನೇ ಚಾಮರಾಜೇಂದ್ರ ಅವರಿಗೆ ದೇಶಸುತ್ತುವ ಹವ್ಯಾಸವಿತ್ತು. ಬಾಬರನ ಆತ್ಮಕತೆ ಸಹ ಇಂತಹ ತಿರುಗಾಟದ ಅನುಭವಗಳಿಂದ ಕೂಡಿದೆ.

ವಣಿಕರ ತಿರುಗಾಟದಲ್ಲಿ ನಿರ್ದಿಷ್ಟ ಜನರೇ ಭೇಟಿಯಾಗುವ ಕಾರಣ, ಅವರ ಅನುಭವದಲ್ಲಿ ವೈವಿಧ್ಯ ಇರುವುದಿಲ್ಲ. ಆದರೆ ಅಲ್ಲೂ ಕೆಲವರು ತಮ್ಮ ಅನುಭವವನ್ನು ಊರಿಗೆ ತಂದು ಕತೆಮಾಡಿ ಹೇಳುವವರುಂಟು. ಬಾಗ್ದಾದಿನ ವಣಿಕ ಸಿಂದಾಬಾದನು ತನ್ನ ವಣಿಕ ಸುತ್ತಾಟಗಳಿಂದ ಊರಿಗೆ ಮರಳಿದೊಡನೆ, ಅವನ ಮನೆಗೆ ಕತೆ ಕೇಳುವ ಜನ ಮುತ್ತಿಗೆ ಹಾಕುತ್ತಿದ್ದರು. ಬಹುಶಃ ಅಧಿಕಾರಿಗಳಿಗೂ ವ್ಯಾಪಾರಿಗಳಿಗೂ ಸಿಕ್ಕದ ಅನುಭವಲೋಕದ ದರ್ಶನ ದೈಹಿಕ ದುಡಿಮೆಗೆ ಹೋದವರಿಗೆ ಸಿಗುತ್ತದೆ. ಕಾರಣ, ಅವರು ಬದುಕುವ ಸ್ತರವೇ ತಳಮಟ್ಟದ್ದು. ನನಗೆ ದುಡಿಮೆಗೆಂದು ಗೋವಾ, ಪುಣೆ, ಮುಂಬೈ, ಮಂಗಳೂರು, ಬೆಂಗಳೂರು ಕಡೆ ಹೋಗುವ ನಮ್ಮ ಉತ್ತರ ಕರ್ನಾಟಕ ಜನರ ಅನುಭವ ಕೇಳುವ ಆಸೆಯಿದೆ. ಆದರೆ ನಮ್ಮ ಕಥನಕುತೂಹಲದಲ್ಲಿ ಅವರು ಪಟ್ಟಿರುವ ಅಪಮಾನ ಮತ್ತು ಕಷ್ಟಗಳು ಅರಗಾಗಿಬಿಡುವ ಅಪಾಯವೂ ಇದೆ.  

ಚಳವಳಿಗಾರರೂ ದೇಶಾಟನೆ ಮಾಡುತ್ತಾರೆ. ಲೋಹಿಯಾ ಹಾಗೆ ದೇಶ ತಿರುಗಿದವರು. ಗಾಂಧಿ ಕೂಡ. ವ್ಯಾಪಾರಕ್ಕಾಗಿ ವಲಸೆ ಮಾಡುತ್ತಿದ್ದ ಬನಿಯಾ ಕುಟುಂಬದಲ್ಲಿ ಹುಟ್ಟಿದ ಗಾಂಧಿ ಓದಲು ಇಂಗ್ಲೆಂಡಿಗೂ ವೃತ್ತಿಗಾಗಿ ಆಫ್ರಿಕಕ್ಕೂ ಹೋದವರು; ಅಲ್ಲಿಂದ ಮರಳಿದ ಬಳಿಕ ದೇಶವಿಡೀ ತಿರುಗಿದವರು. ಕಚ್ಚೆಪಂಚೆ ಮೇಲೆತ್ತಿ ಕಟ್ಟುವುದರಿಂದ ಮತ್ತಷ್ಟು ಉದ್ದವಾಗಿ ಕಾಣುತ್ತಿದ್ದ ಅವರ ಕಾಲು, ಕೈದೊಣ್ಣೆ, ಚಪ್ಪಲಿ, ತೆಳ್ಳನೆ ಬಡಕಲು ದೇಹ ಎಲ್ಲವೂ ತಿರುಗಾಟಕ್ಕಾಗಿ ಹೊಂದಿಸಿಕೊಂಡ ಉಪಕರಣಗಳಂತೆ ತೋರುತ್ತವೆ. ಸೈನಿಕರಿಗೂ ದೇಶವನ್ನು ತಿರುಗುವ ಅವಕಾಶ ಒದಗುತ್ತದೆ. ಆದರೆ ಕೈಯಲ್ಲಿ ಆಯುಧ ಹಿಡಿದು ಕೊಲ್ಲಲೊ ಸಾಯಲು ತಿರುಗುವವರಿಗೆ, ತಿರುಗಾಟದ ಸಂತೋಷವೆಷ್ಟು ದಕ್ಕುವುದೊ ತಿಳಿಯದು. ಅವರಿಗಿಂತ ಭಿಕ್ಷುಕರೇ ವಾಸಿ. ಭಿಕ್ಷುಕರಿಗೆ  ಹೊಟ್ಟೆಹೊರೆವ ಸೆಣಸಾಟ ಇದ್ದರೂ ಗಾಢ ಲೋಕಾನುಭವ ಪಡೆಯುವಂತೆ ಅವರು ಗಲ್ಲಿಗಲ್ಲಿ ತಿರುಗುತ್ತಾರೆ. ಜನರನ್ನು ಮಾತಾಡುತ್ತಾರೆ. ಅವರಿಂದ ಅನಿಸಿಕೊಳ್ಳುತ್ತಾರೆ.

ಸರ್ಕಸ್ ಅಥವಾ ನಾಟಕ ಕಂಪನಿಯ ಕಲಾವಿದರೂ ಸಂಗೀತಗಾರರೂ ಅಲೆಮಾರಿಗಳೇ. ಭಾಷೆಯ ಹಂಗಿಲ್ಲದ ಸಂಗೀತ ಮತ್ತು ಸರ್ಕಸ್ ಕಲಾವಿದರಿಗೆ ತಿರುಗುವ ಅವಕಾಶ ಇನ್ನೂ ಹೆಚ್ಚು. ಹೀಗಾಗಿ ಅವರು ಇಡೀ ದೇಶದ ಕಲಾವಿದರಾಗುವುದು ಸುಲಭ ಕೂಡ. ಆದರೆ ಕ್ಲಾಸಿಕಲ್ ಕಲಾವಿದರಿಗೆ ಸಿಗದ ಜನಸಂಪರ್ಕ ಜನಪದ ಕಲಾವಿದರಿಗೆ ಸಿಗುತ್ತದೆ. ಉತ್ತರ ಕರ್ನಾಟಕದ ಜನಪದ ಕಲಾವಿದರಾದ ವೇಷಗಾರರು ಇಡೀ ದಕ್ಷಿಣ ಭಾರತವನ್ನೇ ತಿರುಗುವರು. ಎರಡು ವರುಷಕ್ಕೊಮ್ಮೆ ಕೊಪ್ಪಳ ಜಿಲ್ಲೆಯ ಕುದುರೆಮೋತಿಯಲ್ಲಿ ಸೇರಿಕೊಳ್ಳುವರು. 10-15 ದಿನಗಳ ಕಾಲ ಮಾಡಿದ ತಿರುಗಾಟದ ಮೇಲೆ ಮುಯ್ಯಿ ತೀರಿಸಿಕೊಳ್ಳುವಂತೆ, ಕುಡಿದು ತಿಂದು ಕುಪ್ಪಳಿಸುವರು. ಬಳಿಕ ಮತ್ತೆ ತಿರುಗಾಟಕ್ಕೆ ಹೊರಡುವರು. ಆದರೆ ಈ ಅಲೆಮಾರಿ ಕಲಾವಿದರು ತಮ್ಮ ತಿರುಗಾಟಕ್ಕೆ ತೆರುವ ಬೆಲೆ ಎಷ್ಟು ದುಬಾರಿ! ಮಕ್ಕಳಿಗೆ ವಿದ್ಯೆಯಿಲ್ಲ. ಉಳಲು ಭೂಮಿಯಿಲ್ಲ. ನೆಲೆಸಲು ಖಾಯಂ ಮನೆಯಿಲ್ಲ.

ಅರಿವಿಗಾಗಿ ಗುರುವನ್ನು ಅರಸಿಕೊಂಡು ಶಿಷ್ಯರು ತಿರುಗಾಟ ಮಾಡುವುದು ಸಂಗೀತ ಮತ್ತು ಅನುಭಾವ ಕ್ಷೇತ್ರಗಳಲ್ಲಿ ಸಾಮಾನ್ಯ. ಭೀಮಸೇನ ಜೋಶಿ, ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ ಮುಂತಾದವರ ಅಲೆದಾಟ ಸೋಜಿಗ ಬರಿಸುತ್ತದೆ. ಯೋಗಿಗಳಲ್ಲಿ ನಾನು ಓದಿರುವಂತೆ, ಹಂಪಿಯ ಸದಾಶಿವ ಯೋಗಿಯವರಷ್ಟು ತಿರುಗಾಟ ಮಾಡಿದವರಿಲ್ಲ. ನಾನೊಮ್ಮೆ ಬಾಬಾಬುಡನಗಿರಿಯ ದಾರಿಯಲ್ಲಿ ಭೇಟಿಯಾದ ಫಕೀರನು ಕಾಶ್ಮೀರದಿಂದ ನಡೆದುಬಂದಿದ್ದನು. ನಾಥರಲ್ಲಿ ಸದಾ ತಿರುಗುವ ರಮತೆ ಸಾಧು ಎಂಬ ವರ್ಗವೇ ಇದೆ. ಬ್ರಿಗ್ಸ್ ಎಂಬ ವಿದ್ವಾಂಸನು ಭೇಟಿ ಮಾಡಿದ ಒಬ್ಬ ನಾಥನು ಇಡೀ ಏಶಿಯಾ ಖಂಡವನ್ನೇ ತಿರುಗಾಟ ಮಾಡಿದ್ದನು. ಮಂಗಳೂರಿನ ಕದ್ರಿ ಗುಡಿಯಲ್ಲಿರುವ ಗೋರಖನಾಥನ ಮೂರ್ತಿಯು, ತಿರುಗಾಟಕ್ಕೆಂದು ಒಂದು ಕಾಲನ್ನು ಹೊರಗಿಟ್ಟಂತೆ ಇದ್ದು, ಮಾರ್ಮಿಕವಾಗಿದೆ.

ಬೆರಳಿನಿಂದ ಭೂಸ್ಪರ್ಶ ಮಾಡುತ್ತ ಯೋಗಭಂಗಿಯಲ್ಲಿ ಕುಳಿತೇ ಪರಿಚಿತನಾಗಿರುವ ಬುದ್ಧನು ಮೂಲತಃ ಅಲೆಮಾರಿಯಾಗಿದ್ದವನು. ಅಲೆಮಾರಿಯ ನಡೆಭಂಗಿ ಮತ್ತು ಪದ್ಮಾಸನದ ಕೂರುಭಂಗಿ, ಅವನ ಜ್ಞಾನೋದಯದಲ್ಲಿ ಅವಿನಾ ಸಂಬಂಧ ಪಡೆದಿದ್ದವು. ಕರ್ನಾಟಕದಲ್ಲಿ ಹಾಗೆ ತಿರುಗಾಟ ಮಾಡಿದ ಯೋಗಿಗಳಲ್ಲಿ ಅಲ್ಲಮನೂ ಒಬ್ಬನು.

ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಹೇಳಿಕೆ ಮಾಡಿದವನು ಬಸವಣ್ಣ; ಆದರೆ ನಿಜವಾಗಿ ಜಂಗಮನಾಗಿ ದೇಶ ತಿರುಗಿದವನು ಅಲ್ಲಮ. ವಿಶೇಷವೆಂದರೆ ತಿರುಗುವ ದಾರ್ಶನಿಕರ ಜೀವನಕಥೆಗಳಲ್ಲಿ, ವಿಭಿನ್ನ ಸಾಧಕರನ್ನು ಮುಖಾಮುಖಿ ಮಾಡುವ, ಅವರನ್ನು ಸೋಲಿಸುವ ಅಥವಾ ಅವರಿಂದ ಸೋಲುವ ಕಥನಗಳಿರುವುದು. ಅಲ್ಲಮ ಮತ್ತು ಶಂಕರರ ಜೀವನಕಥೆಗಳಲ್ಲಿ ಇಂತಹ ಕಥನಗಳಿವೆ. 

ಅರಿವು ಬರುವುದು ದೇಶಾಟನೆಯಿಂದಲೋ ಕೋಶದ ಓದಿನಿಂದಲೊ? ಈ ಪ್ರಶ್ನೆಗೆ ಕಡ್ಡಿತುಂಡು ಮಾಡಿದಂತೆ ಉತ್ತರಿಸಲಾಗದು. ಯಾಕೆಂದರೆ, ಕೋಶಗಳ ಮೂಲಕವೇ ವಿದ್ವತ್ತನ್ನು ರೂಪಿಸಿಕೊಂಡ ಶಂಬಾ ಜೋಶಿಯವರಿಗೆ ಹೋಲಿಸಿದರೆ, ತಿರುಗಾಡಿ ಅಧ್ಯಯನ ಮಾಡಿದ ಮರಾಠಿಯ ರಾ.ಚಿಂ.ಢೇರೆಯವರ ವಿದ್ವತ್ತು ಅಷ್ಟು ಆಳವಾದುದಲ್ಲ.

ತಿರುಗಾಟದಿಂದ ದಕ್ಕುವ ಅನುಭವವು ಸೃಜನಶೀಲಗೊಂಡು ಕಲೆ ಅಥವಾ ಅರಿವಿನ ರೂಪಾಂತರ ಪಡೆಯಬೇಕಾದರೆ, ಅದು ಧ್ಯಾನಸ್ಥ ಸ್ಥಿತಿಯಲ್ಲಿ ಹಾಯಲೇಬೇಕು. ತಿರುಗಾಟದ ಬಹಿರ್ಮುಖತೆಗೆ ಚಿಂತನೆಯ ಅಂತರ್ಮುಖತೆಯಲ್ಲಿ ಪಳಗದ ಹೊರತು ದಾರ್ಶನಿಕ ಅಲಗು ಮೂಡುವುದಿಲ್ಲ. ಕುವೆಂಪು ‘ಬಹೂದಕ’, ‘ಕುಟೀಚಕ’ ಎಂಬ ಎರಡು ಪರಿಭಾಷೆ ಬಳಸುವುದುಂಟು. ಬಹೂದಕರು ತೀರ್ಥಕ್ಷೇತ್ರ ಇದ್ದೆಡೆಗೆಲ್ಲ ಹೋಗುವವರು; ಕುಟೀಚಕರು ಒಂದೆಡೆ ನೆಲೆನಿಂತು ಧ್ಯಾನಮಗ್ನರಾಗುವವರು. ತಿರುಗಾಟವನ್ನು ಒಲ್ಲದ ಕುವೆಂಪು ಸ್ವತಃ ಒಬ್ಬ ಕುಟೀಚಕರಾಗಿದ್ದರು. ಅವರಿಗೆ ಹೋಲಿಸಿದರೆ ಶಿವರಾಮ ಕಾರಂತರು (ರಂಗಕರ್ಮಿ ಬಿ.ವಿ.ಕಾರಂತರು ಕೂಡ) ನೀರ್ದಾಣ ಹುಡುಕಿ ವಲಸೆ ಹೋಗುವ ಹಕ್ಕಿಯಂತೆ ಬಹೂದಕರು. ಆದರೆ ನಿಜವಾದ ತಿಳಿವಳಿಕೆ ಎನ್ನುವುದು ಈ ಎರಡೂ ಮನಸ್ಥಿತಿಗಳ ಮಿಲನದಿಂದ ಹುಟ್ಟುತ್ತದೆ.

ಅರ್ಥಪೂರ್ಣ ಜ್ಞಾನಕ್ಕೆ ಬಸವ ಮತ್ತು ಅಲ್ಲಮತನಗಳೆರಡೂ ಕೂಡಬೇಕು; ಕುವೆಂಪು ಮತ್ತು ಕಾರಂತನಗಳೆರಡೂ ಬೆರೆಯಬೇಕು.

ತಮ್ಮ ಪೂರ್ವಕಲ್ಪಿತ ತೀರ್ಮಾನಗಳಿಗೆ ಸಾಕ್ಷ್ಯ ಹುಡುಕುವವರು ತಿರುಗಾಟದಿಂದ ಏನನ್ನೂ ಕಲಿಯರು. ತೆರೆದ ಮನಸ್ಸಿನಿಂದ ಹೊರಟು, ತಿರುಗಾಟದ ಅನುಭವದ ಮೂಲಕ ಹೊಳಹು ಹುಟ್ಟಿಸುವವರು ದೊಡ್ಡದನ್ನು ನಿರ್ಮಿಸಬಲ್ಲರು.

ನಮ್ಮ ಇಬ್ಬರು ಒಳ್ಳೇ ತಿರುಗಾಟಗಾರರೂ ಗದ್ಯಲೇಖಕರೂ ಆದ ಬಿಜಿಎಲ್ ಸ್ವಾಮಿ ಮತ್ತು ಕೃಷ್ಣಾನಂದ ಕಾಮತರ ಕೃತಿಗಳಲ್ಲಿ ಅಪೂರ್ವ ಅನುಭವಗಳಿವೆ. ಆದರೆ ಪೂರ್ವಗ್ರಹೀತ ದೃಷ್ಟಿಯಿಂದಲೇ ‘ಹೋದಲ್ಲಿ ತನಕ’ ಬದುಕನ್ನು ನೋಡುವ ಕಾರಣ, ಅವರಲ್ಲಿ ತಿರುಗಾಟದಿಂದ ಬರುವ ಕಲಿಕೆಯ ಗುಣವೇ ಗೈರುಹಾಜರು.  ನಿಜವಾದ ತಿರುಗಾಡಿಗಳು ತಮ್ಮ ಪರಿಶೀಲಕ ದಿಟ್ಟಿಯಿಂದ ಮಾತ್ರವಲ್ಲ, ಸಮುದಾಯಗಳ ಒಡನಾಟದಿಂದಲೂ ಅರಿವನ್ನು ಪಡೆಯುವರು. ಆ ಅರಿವಿಗೆ ಸಿಗುವ ಮಾನವೀಯ ಆಳವೇ ಬೇರೆ. ಆದರೆ ಅಧ್ಯಯನದಿಂದ ಬರುವ ಪಾಂಡಿತ್ಯದಂತೆ ತಿರುಗಾಟದ ಅನುಭವವೂ ಸೊಕ್ಕನ್ನು ಹುಟ್ಟಿಸಬಲ್ಲದು. ಪ್ರದರ್ಶನ ಚಪಲವನ್ನು ಪ್ರೇರಿಸಬಲ್ಲದು. ಸದಾಶಿವ ಯೋಗಿಯವರಂತೆ, ತಿರುಗಾಟದ ಅನುಭವವನ್ನು ಸೊಕ್ಕಿಲ್ಲದೆ ಹೇಳುವುದು ಸಾಧ್ಯವಾಗುವುದಾದರೆ, ಅದನ್ನು ತಿಳಿವಿನ ತಿಳಿನೀರಿನಂತೆ ಕುಡಿಯಬಹುದು.

ತಿರುಗಾಟದಲ್ಲಿ ಹುಟ್ಟಿ ಬೆಳೆದ ಊರು ಮನೆ ಬಿಟ್ಟು ಬೇರೆಡೆ ಹೋಗುವುದು ಅನಿವಾರ್ಯ. ಅಷ್ಟರಮಟ್ಟಿಗೆ ಅದು ಸಂಸಾರ ವಿರೋಧಿ. ಸಿದ್ಧರಮಠದ ಸುಬ್ಬಣ್ಣನವರ ಮಡದಿಯ ಪ್ರತಿಕ್ರಿಯೆ ತಿಳಿಯುವುದು ನನಗೆ ಸಾಧ್ಯವಾಗಿದ್ದರೆ, ತಿರುಗಾಟದ ಇನ್ನೊಂದು ಮುಖ ತಿಳಿಯುತ್ತಿತ್ತೋ ಏನೊ? ಗೃಹಸ್ಥರು ಮನೆಬಿಟ್ಟು ಗುರಿಯಿಲ್ಲದೆ ತೆರಳುವುದಕ್ಕೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಆಯಾಮವೂ ಇದೆ. ಅಂತಹ ಪಲಾಯನವಾದಿಗಳನ್ನು ಕಾರಂತರು ತಮ್ಮ ಕಾದಂಬರಿಗಳಲ್ಲಿ ಕಟುವಾಗಿ ಚಿತ್ರಿಸುತ್ತಾರೆ.  

ತಿರುಗಾಟಕ್ಕೆ ಅದರದ್ದೇ ಆದ ಕಷ್ಟ ಮತ್ತು ಇಕ್ಕಟ್ಟುಗಳ ಮುಖವೂ ಇದೆ. ಭಾರತಕ್ಕೆ ಬಂದ ಅನೇಕ ವಿದೇಶ ಪ್ರವಾಸಿಗರು ಎಂತಹ ಅಪಾಯಕಾರಿ ಸನ್ನಿವೇಶಗಳಲ್ಲಿ ಪ್ರವಾಸ ಮಾಡಿಹೋಗಿದ್ದಾರೆ! ದುರ್ಗಮ  ಹಾದಿ, ಕಳ್ಳರ ಆಕ್ರಮಣ, ಕಾಯಿಲೆ, ಹಸಿವು, ಎಲ್ಲವನ್ನೂ ಅವರು ಎದುರಿಸಿದರು. ‘ಪ್ರವಾಸಿ ಕಂಡ ಇಂಡಿಯಾ’ ಸಂಪುಟಗಳಲ್ಲಿ ಈ ಕುರಿತ ಚಿತ್ರಗಳಿವೆ. ತಿರುಗಾಟದ ಮಹಾರೂಪಕದಂತಿರುವ ಹ್ಯೂಯನ್‌ತ್ಸಾಂಗನ ಅನುಭವಗಳು ಈಗಲೂ ಮನುಕುಲ ಬಳಸುತ್ತಿದೆ.

ವಿಶೇಷವೆಂದರೆ, ನಮ್ಮಲ್ಲಿ ತಿರುಗಾಟದ ಮಹತ್ವ ಸೂಚಿಸುವ ಮಾತುಗಳಂತೆ, ಅದನ್ನು ನಿಷೇಧಿಸುವ ನಂಬಿಕೆಗಳೂ ಇವೆ. ಸಮುದ್ರ ದಾಟಿ ಹೊರನಾಡಿಗೆ ಹೋಗುವುದನ್ನು ಉಚ್ಚಜಾತಿಗಳು ನಿಷೇಧಿಸಿಕೊಂಡಿದ್ದವಷ್ಟೆ. ಇದಕ್ಕೆ ಒಂದು ಕಾರಣ, ತಿರುಗಾಟದಲ್ಲಿ ಮಡಿಮೈಲಿಗೆ ಜಾತಿಧರ್ಮ ಪಾಲನೆ ಅಸಾಧ್ಯವಾಗುವುದು. ಆ ಕಾರಣಕ್ಕೆ ತಿರುಗಾಟ ಮಹಾಮಲಿನ ಮತ್ತು ಅದೇ ಕಾರಣಕ್ಕೆ ಪವಿತ್ರ ಕೂಡ. ವಿಚಿತ್ರವೆನಿಸುವುದು ಪುರುಷರು ಮಹಿಳೆಯರ ತಿರುಗಾಟವನ್ನು ನಿಷೇಧಿಸುವುದು. ‘ಹೆಂಗಸು ತಿರುಗಿ ಕೆಟ್ಟಳು. ಗಂಡಸು ಕೂತು ಕೆಟ್ಟ’ ಎಂಬ ಗಾದೆ ಈ ಮನಃಸ್ಥಿತಿಯಲ್ಲೇ ಹುಟ್ಟಿದ್ದು. ಒಮ್ಮೆ ನನ್ನೊಬ್ಬ ಸಹ ಲೇಖಕಿ ‘ನೀವು ಎಷ್ಟಾದರೂ ಗಂಡಸರಪ್ಪ, ತಿರುಗಾಡ್ತೀರಿ’ ಎಂದರು. ಯಾಕೀ ವೇದನೆ?

ಮಹಿಳೆಯರಿಗೆ ತಿರುಗಾಡುವ ಶಕ್ತಿಯಿಲ್ಲವೆಂದೊ ಅಥವಾ ಅವರ ಸಾರ್ವಜನಿಕ ಮುಕ್ತ ಓಡಾಟಕ್ಕೆ ನಮ್ಮ ಸಾಮಾಜಿಕ ಮನಃಸ್ಥಿತಿ ಇನ್ನೂ ಸಿದ್ಧವಾಗಿಲ್ಲವೆಂದೊ? ವೈದೇಹಿಯವರ ಕತೆಯೊಂದು ನೆನಪಾಗುತ್ತಿದೆ. ಹೊಸದಾಗಿ ನೌಕರಿ ಸಿಕ್ಕಿದ ಮಗಳನ್ನು ಆ ಊರಿಗೆ ಬಿಡಲು ಅವಳ ತಂದೆ ತೆಗೆದುಕೊಳ್ಳುವ ಮುತುವರ್ಜಿಯೇ ಅದರ ವಸ್ತು. ಅಲ್ಲಿ ಮಗಳೆಂಬ ಅಕ್ಕರೆಗಿಂತ ಮನೆಯಾಚೆ ಹೊರಡುವ ಅವಳ ಶೀಲರಕ್ಷಣೆಯ ತುಡಿತವೇ ಮುಖ್ಯವಾಗುತ್ತದೆ. ಭಾರತೀಯ ಗಂಡಸರು ಮನೆಯಿಂದ ಹೊರಗೆ ಹೋದ ಮಹಿಳೆಯರ ವಿಷಯದಲ್ಲಿ ಮಾಡುವ ಕಳವಳದ ಆಳದಲ್ಲಿ ಇರುವುದು, ನಮ್ಮ ಸಮಾಜದ ವಾಸ್ತವಿಕತೆ ಮಾತ್ರವಲ್ಲ, ಅದನ್ನು ರೂಪಿಸಿರುವ ನಮ್ಮ ಮನಸ್ಸಿನೊಳಗಿನ ಕೊಳಕು ಕೂಡ.

ತಿರುಗಾಟದಲ್ಲಿ ಸದಾ ಬೇರಿಲ್ಲದ ಸ್ಥಿತಿ ಇರುತ್ತದೆ. ಆ ಕಾರಣಕ್ಕೇ ಅದರ ಮೂಲಕ ದಕ್ಕುವ ಅನುಭವಕ್ಕೆ ಮಿತಿಯಿದೆ. ಆದರಿದು ಬೇರು ಬಿಡುವಿಕೆಯಿಂದ ಅಮರಿಕೊಳ್ಳುವ ಕಾಯಿಲೆಗಳಿಂದ ಮುಕ್ತವಾಗಿರುತ್ತದೆ. ದೇಶಬದ್ಧತೆ ಅನುಭವಕ್ಕೆ ಒದಗಿಸುವ ಸೀಮಿತತೆ, ತಿರುಗಾಟದ ಚಲನಶೀಲತೆಯಿಂದ ಭಗ್ನವಾಗುತ್ತದೆ. ಇದು ಪುಸ್ತಕಿ ಅಥವಾ ಕೇಳಕಿ ಮೂಲಕ ಬಂದ ತಿಳಿವಳಿಕೆಯ ಏಕರೂಪಿತನವನ್ನು ಅಥವಾ ಸರಳೀಕರಣವನ್ನು ಕಳೆಯುತ್ತದೆ. ಓದು ಮತ್ತು ಕೇಳುವಿಕೆಗಿಂತ ನೋಟಕ್ಕೆ ಹೆಚ್ಚು ಶಕ್ತಿ. ನಮ್ಮ ನಾಡಿನ ಬಹುತ್ವ ಅರಿಯಬೇಕಾದರೆ ತಿರುಗಬೇಕು. ಉತ್ತರ ಭಾರತವೆಲ್ಲ ಹಿಂದಿಮಯ ಎಂಬ ಗ್ರಹಿಕೆಯ ಸುಳ್ಳನ್ನು ಒಡೆಯಬೇಕಾದರೆ, ದೆಹಲಿಗಲ್ಲ, ಗೋರಖಪುರ, ಉತ್ತರಾಂಚಲಗಳಿಗೆ ಹೋಗಬೇಕು.

ಕರ್ನಾಟಕವನ್ನು ತಿರುಗುವಾಗ, ಇಲ್ಲಿರುವುದು ಕನ್ನಡವಲ್ಲ, ಕನ್ನಡಗಳು ಎಂದು ಅರಿವಾಗುತ್ತದೆ. ಕರ್ನಾಟಕದ ಉರುಸು ಜಾತ್ರೆಯ ಆಚರಣೆಗಳಲ್ಲಿ ಐದು ಮೈಲಿಗೊಂದರಂತೆ ಭಿನ್ನತೆಯಿದೆ. ನಮ್ಮಲ್ಲಿ ವಿಭಿನ್ನ ಧಾರ್ಮಿಕ ಸಮುದಾಯಗಳು ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲವೆಂದು ಮತೀಯ ಚಿಂತಕರು ಅಪ್ಪಣೆ ಕೊಡುವುದುಂಟು. ಅವರಿಗೆ ದಯವಿಟ್ಟು ವಿಜಾಪುರ ಜಿಲ್ಲೆಯ ಹಳ್ಳಿಗಳಲ್ಲಿ ಇದ್ದು ಬನ್ನಿ ಎಂದಷ್ಟೇ ವಿನಂತಿಸಬಹುದು. ಆದರೆ ತಿರುಗಾಟದಿಂದ ಕಲಿಯದಷ್ಟು ಪೂರ್ವಗ್ರಹಗಳು ಆಳವಾಗಿದ್ದರೆ, ರಾಜಕೀಯ ಕಾರಣದಿಂದ ವಸ್ತುಸ್ಥಿತಿಯನ್ನು ಒಪ್ಪುವವರಿದ್ದರೆ, ತಿರುಗಾಟದಿಂದ ಪ್ರಯೋಜನವಾದರೂ ಏನು?

ಕನ್ನಡದಲ್ಲಿ ಕೆಲವು ಮಾದರಿಗಳಿವೆ. ಒಡೆದುಹೋಗಿದ್ದ ನಾಡನ್ನು ಭಾವನಾತ್ಮಕವಾಗಿ ಬೆಸೆಯಲು ತಿರುಗಿದ ಬಿಎಂಶ್ರೀ ಮಾದರಿ; ತನ್ನಲ್ಲಿರುವ ಕಾವ್ಯದ ತಿಳಿವನ್ನು ನಾಡವರಿಗೆ ಹಂಚಲು ತಿರುಗಿದ ಕಿರಂ ಮಾದರಿ; ರಂಗಕರ್ಮಕ್ಕಾಗಿ ದೇಶವನ್ನೆಲ್ಲ ಅಲೆದ ಬಿ.ವಿ.ಕಾರಂತರ ಮಾದರಿ; ತನ್ನ ಪ್ರಮೇಯಗಳಿಗೆ ಸಾಕ್ಷ್ಯಗಳನ್ನು ಹುಡುಕಿಕೊಂಡು ತಿರುಗುವ ಭೈರಪ್ಪನವರ ಮಾದರಿ; ಲೋಕಾನುಭವಕ್ಕಾಗಿ ಅಲೆಯುವ ಕಾರಂತ ಅನಕೃ ಮಾದರಿ- ಇತ್ಯಾದಿ. ಕರ್ನಾಟಕದ ರಂಗಭೂಮಿ, ಸಿನಿಮಾ, ಸಂಗೀತ, ಸಾಹಿತ್ಯ, ರಾಜಕಾರಣ ಕ್ಷೇತ್ರದ ಅನೇಕರ ಜತೆ ಸಂಬಂಧ ಇಟ್ಟುಕೊಂಡಿದ್ದ ಅನಕೃ ಅವರ ಆಸಕ್ತಿಯಂತೇ ಅವರ ತಿರುಗಾಟಗಳೂ ಬಹುಮುಖಿಯಾಗಿದ್ದವು. ಅವರು ಮನ್ಸೂರರ ಜತೆ ಹೋಗಿ ಲಕ್ಷ್ಮೇಶ್ವರದ ಬಚ್ಚಾಸಾನಿ ಅವರ ಸಂಗೀತ ಕೇಳಬಲ್ಲವರಾಗಿದ್ದರು; ಪ್ರೇಮಾಯತನ ಆಶ್ರಮದಲ್ಲಿದ್ದ ಪಂಡಿತ ತಾರಾನಾಥರಲ್ಲಿ ಹೋಗಿ ಚರ್ಚೆ ಮಾಡಬಲ್ಲವರಾಗಿದ್ದರು. ಕೆಲವೊಮ್ಮೆ ಕಾರಂತರ ಅತಿ ಆತ್ಮವಿಮರ್ಶೆಯ ವಿದೇಶಿ ಪ್ರವಾಸ ಕಥನಗಳಿಗಿಂತ, ಅನಕೃ ಮಾಡಿದ ಕರ್ನಾಟಕ ತಿರುಗಾಟ, ಅದರಿಂದ ಅವರು ಕಲ್ಪಿಸಿಕೊಂಡ ಕರ್ನಾಟಕ ಸಂಸ್ಕೃತಿಯ ಬಹುತ್ವ ಮುಖ್ಯವೆಂದು ಕಾಣುತ್ತದೆ.

ಮನೆಹಾಳು ಪ್ರವೃತ್ತಿಯೆಂದೂ ಜ್ಞಾನಾರ್ಜನೆಯ ವಿಧಾನವೆಂದೂ ಎರಡು ಅತಿಗಳಲ್ಲಿ ಗ್ರಹಿಸಲಾಗಿರುವ ತಿರುಗಾಟದ ನಿಜ ಸ್ವರೂಪವೇನು? ಬಹುಶಃ ಅದು ತನಗೆ ತಾನೇ ಒಳಿತೂ ಅಲ್ಲ. ಕೆಡುಕೂ ಅಲ್ಲ. ಅದನ್ನು ಯಾರು ಯಾಕಾಗಿ ಮಾಡುತ್ತಾರೆ ಎಂಬುದರ ಮೇಲೆ ಅದರ ಮೌಲ್ಯ ನಿರ್ಣಯವಾಗುತ್ತದೆ. ಕನ್ನಡ ಪ್ರವಾಸ ಸಾಹಿತ್ಯದಲ್ಲಿ ಇದರ ಫಲ ನಿಷ್ಫಲಗಳೆರಡೂ ಇವೆ. 

ನಿಸ್ಸಂಶಯವಾಗಿ ತಿರುಗಾಟವು ನಾಡಿನ ಬದುಕನ್ನು ಅರಿಯುವ ಒಂದು ಅಪೂರ್ವ ವಿಧಾನಗಳಲ್ಲಿ ಒಂದು. ಇದಕ್ಕೆ ತಕ್ಕಂತೆ ನಡೆದಷ್ಟೂ ನಮ್ಮ ನಾಡು ವಿಶಾಲವಾಗಿದೆ. ಕೊನೆಗೂ ದಣಿವು ಪಥಿಕರಿಗೇ ಹೊರತು ಪಥಕ್ಕಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT