ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗಾಗಿ ಎರಡು ರಾತ್ರಿ ಕಳೆದರೆ ಸಾಕೇ?!

Last Updated 8 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಭಾರತೀಯ ಜನತಾ ಪಕ್ಷದ ಸಂಸದರು ದಲಿತರಿಗೆ ಹತ್ತಿರವಾಗಬೇಕು ಎಂಬ ಪ್ರೇರಣೆಯನ್ನು ಪ್ರಧಾನಿಯವರು ನೀಡಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನವಾದ ಏಪ್ರಿಲ್‌ 14ರ ಆಸುಪಾಸಿನಲ್ಲಿ ಬಿಜೆಪಿಯ ಪ್ರತಿ ಸಂಸದ ಕೂಡ ಎರಡು ರಾತ್ರಿಗಳನ್ನು ದಲಿತರು ಹೆಚ್ಚಿರುವ ಹಳ್ಳಿಗಳಲ್ಲಿ ಕಳೆಯುವ ಮೂಲಕ ಈ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ. ಅಂಬೇಡ್ಕರ್ ಅವರನ್ನು ಗೌರವಿಸಲು ಕ್ರಮಗಳನ್ನು ಕೈಗೊಂಡ ಪಕ್ಷ ಬಿಜೆಪಿ ಎಂಬುದನ್ನು ದಲಿತ ಸಮುದಾಯಕ್ಕೆ ನೆನಪಿಸಿಕೊಡುವಂತೆಯೂ ಪ್ರಧಾನಿಯವರು ತಮ್ಮ ಪಕ್ಷದ ಸಂಸದರಿಗೆ ಹೇಳಿದ್ದಾರೆ. ದಲಿತರು ಸರ್ಕಾರದ ವಿರುದ್ಧ ಬೀದಿಗೆ ಇಳಿದ ಈಚಿನ ಘಟನೆಗಳ ಕಾರಣಕ್ಕಾಗಿ ಮೋದಿ ಅವರು ತಮ್ಮ ಸಂಸದರಿಗೆ ಈ ರೀತಿ ಹೇಳಿದ್ದಾರೆ. ವಿಶೇಷ ಕಾನೂನೊಂದರ ಅಡಿಯಲ್ಲಿ ತಾವು ಹೊಂದಿದ್ದ ರಕ್ಷಣೆಯನ್ನು ಸುಪ್ರೀಂ ಕೋರ್ಟ್‌ ತೆಗೆದಿರುವುದಕ್ಕೆ ಕಳೆದ ಮೂರು ವರ್ಷಗಳಿಂದ ನಿಧಾನವಾಗಿ ಹರಡುತ್ತಿರುವ ಹಿಂದುತ್ವವೇ ಕಾರಣ ಎಂದು ಪ್ರತಿಭಟನೆ ನಡೆಸಿದ ದಲಿತರು ನಂಬಿದ್ದಾರೆ.

ದಲಿತರ ಹಿತ ಕಾಯುವ ಆಶಯ ಬಿಜೆಪಿಯ ಹೃದಯದಲ್ಲಿ ಇದೆ. ಹಾಗಾಗಿ, ಬಿಜೆಪಿ ಸಂಸದರು ದಲಿತರ ಜೊತೆ ಸಾಂಕೇತಿಕವಾಗಿ ಸಮಯ ಕಳೆಯಬೇಕು ಎಂದು ಪ್ರಧಾನಿಯವರು ಕರೆ ನೀಡಿದ್ದಾರೆ. ಇಷ್ಟು ಮಾಡಿದರೆ ಸಾಕೇ? ಈ ಪ್ರಶ್ನೆಯನ್ನು ನಾವು ಬಿಜೆಪಿಯ ದೃಷ್ಟಿಕೋನದಿಂದ ಗಮನಿಸೋಣ. ಎಲ್ಲ ಹಿಂದೂಗಳನ್ನು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಒಗ್ಗೂಡಿಸುವುದು ಈ ಪಕ್ಷದ ಗುರಿ. ಹಾಗೆ ಮಾಡುವುದು ಪಕ್ಷದ ಸಿದ್ಧಾಂತವೂ ಹೌದು, ಇದರಲ್ಲಿ ಪಕ್ಷಕ್ಕೆ ನಿಜವಾಗಿಯೂ ನಂಬಿಕೆ ಇದೆ. ಈ ಕೆಲಸವನ್ನು ಬಿಜೆಪಿಯು ಸಾಧ್ಯವಾಗಿಸುವುದು ಹೇಗೆ?

'ಹಿಂದೂಗಳ' ನಿಖರ ಸಂಖ್ಯೆ ಎಷ್ಟು ಎಂಬುದನ್ನು ಲೆಕ್ಕಹಾಕುವುದು ಸುಲಭದ ಕೆಲಸವಲ್ಲ. ಏಕೆಂದರೆ, ಸಿಖ್ಖರು ಮತ್ತು ಜೈನರು (ಬಹುಶಃ, ಈಗ ಲಿಂಗಾಯತರು ಕೂಡ) ತಮ್ಮನ್ನು ಹಿಂದೂಗಳು ಎಂದು ಭಾವಿಸುವುದಿಲ್ಲ. ಆದರೂ ಅವರೆಲ್ಲರನ್ನೂ ಹಿಂದೂಗಳು ಎಂದು ಪರಿಗಣಿಸಿದರೆ, ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 85ರಷ್ಟು ಜನರನ್ನು ಒಂದುಗೂಡಿಸಬೇಕು ಎಂದಾಗುತ್ತದೆ.

ಶೇಕಡ 15ರಷ್ಟು ಇರುವ ಜನರಿಗೆ ಎದುರಾಗಿ ಶೇಕಡ 85ರಷ್ಟು ಇರುವವರನ್ನು ಒಂದು ಮಾಡುವುದು ಸುಲಭದ ಕೆಲಸ. ಭಾರತ ಉಪಖಂಡದಲ್ಲಿ ಸಾಮಾನ್ಯವಾಗಿ ಆಗುವುದೇ ಇದು. ದಕ್ಷಿಣ ಏಷ್ಯಾದ ಎಲ್ಲ ದೇಶಗಳಲ್ಲೂ ಅಲ್ಪಸಂಖ್ಯಾತ ಸಮುದಾಯದವರು ಬಹುಸಂಖ್ಯಾತ ಸಮುದಾಯದವರಿಂದ ದಬ್ಬಾಳಿಕೆಗೆ ಗುರಿಯಾಗುತ್ತಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತದಲ್ಲಿ ಶಾಸನಸಭೆಗಳು, ಸರ್ಕಾರ, ಪೊಲೀಸ್ ಇಲಾಖೆ, ಸಶಸ್ತ್ರ ಪಡೆಗಳು ಮತ್ತು ಖಾಸಗಿ ಕ್ಷೇತ್ರದ ಉದ್ಯೋಗಗಳಲ್ಲಿ ಅಲ್ಪಸಂಖ್ಯಾತರು ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ. ಹಾಗೆಯೇ, ಮನೆ ಹುಡುಕಿಕೊಳ್ಳುವ ಕಷ್ಟ ಹಾಗೂ ಇತರರು ತಮ್ಮನ್ನು ಶತ್ರುಗಳಂತೆ ಕಾಣುವ ಪರಿಸ್ಥಿತಿಯನ್ನೂ ಎದುರಿಸುತ್ತಾರೆ.

ಆದರೆ ನಾವು ಇಲ್ಲಿ ಮಾತನಾಡುತ್ತಿರುವ ವಿಚಾರ ಅದಲ್ಲ. ದಲಿತರ ಪ್ರತಿಭಟನೆ ನಮಗೆ ತೋರಿಸಿಕೊಟ್ಟಿರುವಂತಹ ಆಂತರಿಕ ವಿಭಜನೆಗಳು ಇರುವಾಗ ಶೇಕಡ 85ರಷ್ಟು ಜನರನ್ನು ಒಗ್ಗೂಡಿಸುವುದರಲ್ಲಿ ಇರುವ ಸಮಸ್ಯೆಗಳತ್ತ ನಾವು ಗಮನ ನೀಡೋಣ. ನಮ್ಮ ಅಗತ್ಯಗಳಾದ ಭಾಷೆ, ಆಹಾರ ಅಥವಾ ಸಂಗೀತದ ಹೆಸರಿನಲ್ಲಿ ಕೂಡ ಐಕ್ಯ ಸಾಧಿಸುವುದು ಸುಲಭದ ಕೆಲಸವಲ್ಲ. ಲತಾ ಮಂಗೇಶ್ಕರ್ ಅವರನ್ನು ಅಖಿಲ ಭಾರತ ಮಟ್ಟದ ಗಾಯಕಿಯನ್ನಾಗಿ ಸುಲಭವಾಗಿ ಕಾಣಲಾಗುತ್ತದೆ. ಆದರೆ ಎಂ.ಎಸ್. ಸುಬ್ಬುಲಕ್ಷ್ಮಿ ವಿಚಾರದಲ್ಲಿ ಹಾಗಿಲ್ಲ. ಬಾಲಿವುಡ್ ಮತ್ತು ಕ್ರಿಕೆಟ್‌ ದೇಶದ ಈಶಾನ್ಯ ರಾಜ್ಯಗಳ ಜನರಲ್ಲಿ ಅಷ್ಟೇನೂ ಆಸಕ್ತಿ ಕೆರಳಿಸುವುದಿಲ್ಲ. ರಾಷ್ಟ್ರೀಯತೆಯು ನಮ್ಮನ್ನು ಒಗ್ಗೂಡಿಸಬಹುದಾದರೂ, ಅದು ಹೊರಗಿನವರ ವಿರುದ್ಧ ಮಾತ್ರ ನಮ್ಮನ್ನು ಒಂದು ಮಾಡಲು ಸಾಧ್ಯ. ಆದರೆ, ನಮ್ಮೊಳಗೇ ಸಮಸ್ಯೆ ಇದ್ದಾಗ ಏನಾಗುತ್ತದೆ?

ಎಲ್ಲ ಹಿಂದೂಗಳನ್ನು ಒಗ್ಗೂಡಿಸಬೇಕು ಎಂದು ಹಿಂದುತ್ವ ಬಯಸುತ್ತದೆ. ಆದರೆ ಆ ಒಗ್ಗೂಡುವಿಕೆಯು ಹಿಂದುತ್ವ ಮುಂದಿಡುವ ಷರತ್ತುಗಳಿಗೆ ಅನುಗುಣವಾಗಿ ಆಗಬೇಕಾಗುತ್ತದೆ. ಉದಾಹರಣೆಗೆ, 'ಹಿಂದೂ' ಅಂದರೆ ಗೋಮಾಂಸ ಸೇವನೆ ಮಾಡದ, ಸಸ್ಯಾಹಾರಿ ಆಗಿದ್ದರೆ ಹೆಚ್ಚು ಸ್ವೀಕಾರಾರ್ಹ ಆಗುವ ವ್ಯಕ್ತಿ. ಪ್ರಧಾನಿಯವರು ಗುಜರಾತಿನ, ಮಾಂಸ ಸೇವಿಸುವ ಸಮುದಾಯವೊಂದಕ್ಕೆ ಸೇರಿದವರು. ಆದರೆ ಅವರು ಮಾಂಸ ಸೇವನೆಯ ಸಂಸ್ಕೃತಿಯನ್ನು ಬಿಟ್ಟು, ಆರ್‌ಎಸ್‌ಎಸ್‌ನವರಂತೆ ಆಗುವುದನ್ನು (ಅಂದರೆ ಬ್ರಾಹ್ಮಣ ಸಂಸ್ಕೃತಿಯನ್ನು ಹೆಚ್ಚು ಒಪ್ಪಿಕೊಳ್ಳುವುದು) ಆಯ್ಕೆ ಮಾಡಿಕೊಂಡಿರುವವರು. ಈ ಕಾರಣದಿಂದಾಗಿ ಅವರು ಸ್ವೀಕಾರಾರ್ಹ ಆಗಿದ್ದಾರೆ. ಅವರು ಗೋಮಾಂಸ ಸೇವಿಸುವ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದಿದ್ದರೆ, ಅವರನ್ನು ಗುಜರಾತಿನ ಮುಖ್ಯಮಂತ್ರಿಯನ್ನಾಗಿ ಮಾಡುವುದು ಆರ್‌ಎಸ್‌ಎಸ್‌ಗೆ ಸುಲಭದ ಕೆಲಸ ಆಗುತ್ತಿರಲಿಲ್ಲ.

ಕೆ.ಬಿ. ಹೆಡ್ಗೇವಾರ್, ಲಕ್ಷ್ಮಣ್ ಪರಾಂಜಪೆ, ಗುರೂಜಿ ಗೊಳ್ವಲಕರ್, ಬಾಳಾಸಾಹೇಬ್ ದೇವರಸ್, ರಾಜೇಂದ್ರ ಸಿಂಗ್, ಕು.ಸಿ. ಸುದರ್ಶನ್ ಅವರು ಆರ್‌ಎಸ್‌ಎಸ್‌ನ ಮುಖ್ಯಸ್ಥರ ಸ್ಥಾನದಲ್ಲಿದ್ದವರು. ಈಗಿನ ಮುಖ್ಯಸ್ಥರು ಮೋಹನ್ ಭಾಗವತ್. ಠಾಕೂರ್‌ ಸಮುದಾಯಕ್ಕೆ ಸೇರಿದ ಸಿಂಗ್ ಅವರನ್ನು ಹೊರತುಪಡಿಸಿದರೆ ಇನ್ನುಳಿದವರೆಲ್ಲರೂ ಬ್ರಾಹ್ಮಣರು. ದಲಿತ ವ್ಯಕ್ತಿಯೊಬ್ಬ ಆರ್‌ಎಸ್‌ಎಸ್‌ನ ಮುಖ್ಯಸ್ಥ ಯಾವತ್ತೂ ಆಗಿರಲಿಲ್ಲ. ನಿಜವಾದ ಅಧಿಕಾರವನ್ನು ಕೊಟ್ಟು, ಸರಸಂಘಚಾಲಕರ ಸ್ಥಾನಕ್ಕೆ ದಲಿತ ಅಥವಾ ಆದಿವಾಸಿ ವ್ಯಕ್ತಿಯನ್ನು (ಅದರಲ್ಲೂ ದಲಿತ ಅಥವಾ ಆದಿವಾಸಿ ಮಹಿಳೆಯ ನೇಮಕವಾದರೆ ಉತ್ತಮ) ನೇಮಿಸುವಂತೆ ಬಿಜೆಪಿಯು ಆರ್‌ಎಸ್‌ಎಸ್‌ಗೆ ಪ್ರೇರಣೆ ನೀಡಿದರೆ ಒಳ್ಳೆಯದು ಎಂದು ಬಿಜೆಪಿಯ ಹಿತೈಷಿಯ ಸ್ಥಾನದಲ್ಲಿ ನಿಂತು ಹೇಳಬಹುದೇನೋ.

ಹಿಂದೂಗಳನ್ನು ಒಗ್ಗೂಡಿಸುವ ಕೆಲಸದಲ್ಲಿ ಇರುವ ಇನ್ನೊಂದು ಸಮಸ್ಯೆಯೆಂದರೆ, ಬಿಜೆಪಿಯ ಸಹಜ ಬೆಂಬಲಿಗರಾಗಿರುವ ಹಿಂದೂ ಮೇಲ್ಜಾತಿಗಳ ಜನ. ಇವರು ಮೂಲಭೂತವಾಗಿ ದಲಿತರ ಹಕ್ಕುಗಳಿಗೆ ವಿರೋಧ ವ್ಯಕ್ತಪಡಿಸುವವರು. ದಲಿತರ ಹಕ್ಕುಗಳನ್ನು ವಿರೋಧದ ನೆಲೆ
ಯಲ್ಲಿ ಅವರು ನೋಡದಿದ್ದರೂ, ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಅದು ಸ್ಪಷ್ಟವಾಗುತ್ತದೆ. ಮೇಲ್ಜಾತಿಯ ಜನ ಮೀಸಲಾತಿಯನ್ನು ಬೆಂಬಲಿಸುತ್ತಾರಾ? ಇದಕ್ಕೆ ಉತ್ತರ 'ಇಲ್ಲ'. ಏಕೆಂದರೆ, ದಲಿತರು ಮತ್ತು ಆದಿವಾಸಿಗಳಿಗೆ ಕೊಡುವ ಮೀಸಲಾತಿ ಈ ವರ್ಗದವರಿಗೆ ನಷ್ಟ ಉಂಟುಮಾಡಿದೆ. ಈ ವಿಭಜನೆ ಅದೆಷ್ಟು ಆಳವಾಗಿದೆಯೆಂದರೆ, ಇದನ್ನು ಹಿಂದೂ ಐಕ್ಯದ ಹೆಸರಿನಲ್ಲಿ ಮುಚ್ಚಿಹಾಕಲು ಸಾಧ್ಯವೇ ಇಲ್ಲ. ಮೀಸಲಾತಿಯನ್ನು ಇಲ್ಲವಾಗಿಸುವ ಆಲೋಚನೆಯನ್ನು ಬೆಂಬಲಿಸುವ ದಲಿತ ಅಥವಾ ಆದಿವಾಸಿ ಸಂಸದ ಬಿಜೆಪಿಯಲ್ಲಿ ಕೂಡ ಇಲ್ಲ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಮೂಲದಲ್ಲಿ ಇರುವುದು ಕೂಡ ಇದೇ ಸಮಸ್ಯೆ. ದಲಿತರು ಮತ್ತು ಆದಿವಾಸಿಗಳ ವಿರೋಧಕ್ಕೆ ಕಾರಣವಾಗುವ ತೀರ್ಪೊಂದನ್ನು ಸುಪ್ರೀಂ ಕೋರ್ಟ್‌ ಧೈರ್ಯದಿಂದ ನೀಡಿದೆ. ಮೇಲ್ಜಾತಿ ಹಿಂದೂಗಳು ತಮ್ಮನ್ನು ಅವಮಾನಕ್ಕೆ ಗುರಿಪಡಿಸುವುದನ್ನು ತಡೆಯುವ ರಕ್ಷಣಾ ವ್ಯವಸ್ಥೆ ಎಂಬ ರೀತಿಯಲ್ಲಿ ದಲಿತರು ಮತ್ತು ಆದಿವಾಸಿಗಳು ಈ ಕಾಯ್ದೆಯನ್ನು ನೋಡುತ್ತಾರೆ. ಈ ಕಾನೂನಿನ ಅನುಷ್ಠಾನ ಕಟ್ಟುನಿಟ್ಟಾಗಿ ಇಲ್ಲ, ಈ ಕಾಯ್ದೆಯ ಅಡಿ ಪೊಲೀಸರು ಒಂದು ದೂರು ದಾಖಲಿಸಿಕೊಳ್ಳುವಂತೆ ಮಾಡುವುದೂ ಸುಲಭದ ಕೆಲಸವಲ್ಲ ಎಂಬುದು ನಿಜ. ಹೀಗಿದ್ದರೂ, ಈ ಕಾಯ್ದೆಯು ಈ ಎರಡು ದುರ್ಬಲ ಸಮುದಾಯಗಳ ಪಾಲಿಗೆ ಕಾಗದದ ಮೇಲೆಯಾದರೂ ಒಂದು ರಕ್ಷಣಾ ವ್ಯವಸ್ಥೆಯಂತೆ ಇತ್ತು - ಇದನ್ನು ಇಬ್ಬರು ನ್ಯಾಯಮೂರ್ತಿಗಳು ದುರ್ಬಲಗೊಳಿಸಿದ್ದಾರೆ. ಈ ವಿಚಾರದಲ್ಲಿ ಕೂಡ ವಿಭಜನೆಯು ಆಳವಾಗಿಯೇ ಇದೆ. ಕೋರ್ಟ್‌ ತೀರ್ಪನ್ನು ಮೇಲ್ಜಾತಿಗಳ ಎಷ್ಟು ಜನ ವಿರೋಧಿಸುತ್ತಾರೆ? ಹೆಚ್ಚಿನವರು ವಿರೋಧಿಸಲಿಕ್ಕಿಲ್ಲ. ಏಕೆಂದರೆ ಈ ಕಾಯ್ದೆಯ ಅನ್ವಯ ಶಿಕ್ಷೆಗೆ ಒಳಗಾಗುವವರು ಮೇಲ್ಜಾತಿಗಳ ಜನ. ಈ ಕಾಯ್ದೆಯು ದಲಿತರು ಹಾಗೂ ಆದಿವಾಸಿಗಳನ್ನು ಸಶಕ್ತರನ್ನಾಗಿ ಮಾಡುತ್ತದೆ. ಇದು ನಮ್ಮಲ್ಲಿ ಹಲವರ ಪಾಲಿಗೆ ಅಪಥ್ಯ.

ಇಂತಹ ಸ್ಥಿತಿಯಲ್ಲಿ 'ಸಬ್‌ ಕಾ ಸಾಥ್‌' (ಎಲ್ಲರ ಜೊತೆಗೂಡಿ) ಎಂಬುದು ಸಾಧ್ಯವಾಗುವಂಥದ್ದಲ್ಲ. ಬಲಾಢ್ಯನು ಕೆಲವು ರಿಯಾಯಿತಿಗಳನ್ನು ನೀಡಿದಾಗ ಮಾತ್ರ ದುರ್ಬಲ ವ್ಯಕ್ತಿ ಮುಂದುವರಿಯಬಲ್ಲ. ಆದರೆ ಇದು ಸಾಧ್ಯವಾಗುತ್ತಿಲ್ಲ. ಆರ್‌ಎಸ್‌ಎಸ್‌ ಮುಖ್ಯಸ್ಥರು ಅಥವಾ ಬೇರೆ ಯಾರಾದರೂ ಮೀಸಲಾತಿ ವಿರೋಧಿ ಹೇಳಿಕೆ ನೀಡಿದಾಗ ಎದುರಾದ ಸ್ಥಿತಿಯನ್ನು ಬಿಜೆಪಿ ಎಷ್ಟು ಬಾರಿ ನಿಭಾಯಿಸಬೇಕಾಗಿ ಬಂದಿದೆ ಎಂಬುದನ್ನು ಗಮನಿಸಿ ನೋಡಿ. ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಆ ಮಾತಿನಲ್ಲಿ ಬದ್ಧತೆ ಇಲ್ಲ. ತನಗೆ ತಲೆಬಿಸಿ ಆಗಿರುವ ಕಾರಣದಿಂದಾಗಿ ಅದು ಹೀಗೆ ಹೇಳುತ್ತಿದೆ. ದಲಿತರು ಹೆಚ್ಚಿರುವ ಹಳ್ಳಿಯಲ್ಲಿ ಎರಡು ರಾತ್ರಿ ಕಳೆಯಿರಿ ಎಂಬ ಹೇಳಿಕೆ ಹಿಂದಿರುವ ಭಾವ ಮತ್ತು ಪುನರ್‌ ಪರಿಶೀಲನಾ ಅರ್ಜಿಯ ಹಿಂದಿರುವ ಭಾವ ಒಂದೇ.

ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸರಿಯಿಲ್ಲ ಎಂದು ಹೇಳುವ ಹಲವು ಸಂಘಟನೆಗಳು ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ನಾನು ಕಳೆದ ವಾರ ಪಾಲ್ಗೊಂಡಿದ್ದೆ. ಅದರಲ್ಲಿ ಭಾಗವಹಿಸಿದ್ದ ಒಬ್ಬ ಭಾಷಣಕಾರ ಕಮ್ಯುನಿಸ್ಟ್‌ ಪಕ್ಷದ ಸಂಸದ ಡಿ. ರಾಜಾ ಅವರು. ಬಿಜೆಪಿಯು ಅಂಬೇಡ್ಕರ್ ಅವರನ್ನು ಗೌರವಿಸಿದ ಪಕ್ಷ ಎಂದು ಮೋದಿ ಹೇಳಿದ್ದನ್ನು ಉಲ್ಲೇಖಿಸಿ ರಾಜಾ, 'ಅಂಬೇಡ್ಕರ್ ಅವರನ್ನು ಗೌರವಿಸುವುದು ಬೇಕಾಗಿಲ್ಲ. ನೀವು ದಲಿತರಿಗಾಗಿ ಏನು ಮಾಡಿದ್ದೀರಿ' ಎಂದು ಪ್ರಶ್ನಿಸಿದರು.

ಈ ಮಾತು ತಲೆಯ ಮೇಲೆ ನೇರವಾಗಿ ಒಂದು ಮೊಳೆ ಹೊಡೆದಂತೆ ಇದೆ. ಸರ್ಕಾರ ದಲಿತರ ಪರ ಇದೆ ಎಂದಾದರೆ ಅದನ್ನು ಅರ್ಥ ಮಾಡಿಕೊಳ್ಳುವ ಜಾಣ್ಮೆ ದಲಿತರಿಗೆ ಇದೆ. ಹಳ್ಳಿಯಲ್ಲಿ ಎರಡು ರಾತ್ರಿಗಳನ್ನು ಕಳೆಯುವ ಅಗತ್ಯ ಇರುವುದಿಲ್ಲ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT