ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿರುವವರಿಗಾಗಿ ದುಬಾರಿ ಫೋನ್

Last Updated 31 ಮೇ 2017, 19:30 IST
ಅಕ್ಷರ ಗಾತ್ರ

ಸದ್ಯಕ್ಕೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಸ್ಯಾಮ್‌ಸಂಗ್. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಎನ್ನಬಹುದಾದ ಫೋನ್‌ಗಳನ್ನು ಅದು ತಯಾರಿಸುತ್ತಿದೆ. ಅದು ತಯಾರಿಸಿದ ಕೆಲವು ಫೋನ್‌ಗಳನ್ನು ಉತ್ತಮ ಹಾಗೂ ಅತ್ಯುತ್ತಮ ಎನ್ನಬಹುದು.

ಆದರೆ ಭಾರತೀಯ ಸಂದರ್ಭದಲ್ಲಿ ಈ ಉತ್ಪನ್ನಗಳು ದುಬಾರಿ ಎಂದೂ ಹೇಳಬಹುದು. ಸ್ಯಾಮ್‌ಸಂಗ್‌ನವರ ಹಲವು ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8 (Samsung Galaxy S8) ಎಂಬ ದುಬಾರಿ ಫೋನನ್ನು.

ಗುಣವೈಶಿಷ್ಟ್ಯಗಳು
2.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಮತ್ತು 1.7 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್, ಗ್ರಾಫಿಕ್ಸ್‌ಗಾಗಿ ಅಧಿಕ ಪ್ರೊಸೆಸರ್, 4 + 64 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ ಇದೆ. 5.8 ಇಂಚು ಗಾತ್ರದ 2960 X 1440 ಪಿಕ್ಸೆಲ್ ರೆಸೊಲೂಶನ್‌ನ ಸೂಪರ್ ಅಮೋಲೆಡ್ ಪರದೆ, ಗೊರಿಲ್ಲ-5 ಗಾಜು, 12 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ, ಅದಕ್ಕೆ ಎಲ್‌ಇಡಿ ಫ್ಲಾಶ್, 5 ಮೆಗಾಪಿಕ್ಸೆಲ್‌ನ ಇನ್ನೊಂದು ಎದುರುಗಡೆಯ ಸ್ವಂತಿ ಕ್ಯಾಮೆರಾ, ಮೂರು ಮೈಕ್‌ಗಳು, 2G/3G/4G ಮೈಕ್ರೊ ಮತ್ತು ನ್ಯಾನೊ ಸಿಮ್‌, ವೈಫೈ, ಅಕ್ಸೆಲೆರೋಮೀಟರ್, ಬೆರಳಚ್ಚು ಸ್ಕ್ಯಾನರ್, ಯುಎಸ್‌ಬಿ ಓಟಿಜಿ, ಎನ್‌ಎಫ್‌ಸಿ, 3000mAh ಬ್ಯಾಟರಿ, 148.9 x 68.1 x 8.0 ಮಿ.ಮೀ. ಗಾತ್ರ, 155 ಗ್ರಾಂ ತೂಕ, ಆಂಡ್ರಾಯ್ಡ್‌ 7.0, ವಯರ್‌ಲೆಸ್‌ ಚಾರ್ಜಿಂಗ್, ಇತ್ಯಾದಿ. ನಿಗದಿತ ಬೆಲೆ ₹57,900.
ಈ ಫೋನಿನ ರಚನೆ ಮತ್ತು ವಿನ್ಯಾಸ ತುಂಬ ಚೆನ್ನಾಗಿದೆ. ಲೋಹದ ಫ್ರೇಂ ಇದೆ. ಮೂಲೆಗಳು ಸ್ವಲ್ಪ ಜಾಸ್ತಿಯೇ ವೃತ್ತಾಕಾರದಲ್ಲಿವೆ. ಹಿಂಭಾಗದ ಕವಚ ತೆಗೆಯಲು ಬರುವುದಿಲ್ಲ.

ಕವಚ ತುಂಬ ನಯವಾಗಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಸಂಭವ ಹೆಚ್ಚು. ಬಲಭಾಗದಲ್ಲಿ ಆನ್/ಆಫ್ ಸ್ವಿಚ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳಿವೆ. ಎಡಭಾಗದಲ್ಲಿ ವಾಲ್ಯೂಮ್ ಬಟನ್‌ನ ಕೆಳಗೆ ಇನ್ನೊಂದು ವಿಶೇಷ ಬಟನ್ ಇದೆ. ಇದನ್ನು ಬಿಕ್ಸ್‌ಬೈಗೆ ಬಳಸಲಾಗುತ್ತದೆ ಮತ್ತು ಅದನ್ನು ಒತ್ತಿದಾಗ ಏನೇನು ಕೆಲಸ ಮಾಡಬೇಕು ಎಂದು ನಾವೇ ಆಯ್ಕೆ ಮಾಡಿಕೊಳ್ಳಬಹುದು. ಮೇಲ್ಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಇದರಲ್ಲಿ ಎರಡು ಸಿಮ್ ಅಥವಾ ಒಂದು ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. 

ಈ ಫೋನಿನ ಬಲ ಭಾಗವನ್ನು ಒತ್ತಿ ಎಡಕ್ಕೆ ಸವರಿದರೆ ಒಂದು ಚಿಕ್ಕ ಪ್ಯಾನೆಲ್ ಮೂಡಿಬರುತ್ತದೆ. ಈ ಪ್ಯಾನೆಲ್‌ನಲ್ಲಿ ಏನನ್ನು ತೋರಿಸಬೇಕು ಎಂಬುದನ್ನು ನಾವೇ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನಮಗೆ ತುಂಬ ಅಗತ್ಯವಾದವರ ಫೋನ್ ಸಂಖ್ಯೆ, ಕ್ಯಾಲೆಂಡರ್, ಹವಾಮಾನ, ಕ್ಯಾಮೆರಾದಂತಹ ಅತೀ ಅಗತ್ಯದ ಆ್ಯಪ್‌ಗಳು.

F/1.7 ಲೆನ್ಸ್ ಇರುವ 12 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ ಎಲ್‌ಇಡಿ ಫ್ಲಾಶ್ ಇದೆ. ಕ್ಯಾಮೆರಾದ ಗುಣಮಟ್ಟ ನಿಜಕ್ಕೂ ತುಂಬ ಚೆನ್ನಾಗಿದೆ. ಇದು ಕಡಿಮೆ ಮೆಗಾಪಿಕ್ಸೆಲ್‌ನ ಕ್ಯಾಮೆರಾ. ಹಾಗಿದ್ದೂ ಇದರಲ್ಲಿ ತೆಗೆದ ಫೋಟೊಗಳು ಇತರೆ ಕೆಲವು ಹೆಚ್ಚು ಮೆಗಾಪಿಕ್ಸೆಲ್‌ನ ಫೋನ್ ಕ್ಯಾಮೆರಾಗಳಿಗಿಂತ ಉತ್ತಮವಾಗಿವೆ. ಚೆನ್ನಾಗಿ ಬೆಳಕು ಇದ್ದಾಗ ಮಾತ್ರವಲ್ಲ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಮೂಡಿಬರುತ್ತದೆ. ಚಿತ್ರದ ಗುಣಮಟ್ಟವನ್ನು ಕೇವಲ ಮೆಗಾಪಿಕ್ಸೆಲ್‌ ತೀರ್ಮಾನಿಸುವುದಿಲ್ಲ ಎಂದು ನಾನು ಹಲವು ಸಲ ಬರೆದಿದ್ದೇನೆ.

ಕಡಿಮೆ ಮೆಗಾಪಿಕ್ಸೆಲ್ ರೆಸೊಲೂಶನ್ ಇದ್ದೂ ಉತ್ತಮ ಫೋಟೊ ತೆಗೆಯುವ ಕ್ಯಾಮೆರಾ ಈ ಫೋನ್‌ನಲ್ಲಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊ ರೆಕಾರ್ಡಿಂಗ್ ಕೂಡ ಮಾಡಬಲ್ಲದು. ಇದು ತಯಾರಿಸಿದ ವಿಡಿಯೊ ಗುಣಮಟ್ಟ ಚೆನ್ನಾಗಿದೆ. ವಿಡಿಯೊ ಚಿತ್ರೀಕರಣ ಮಾಡುವಾಗ ಧ್ವನಿಯನ್ನು ಸ್ಟಿರಿಯೊ ವಿಧಾನದಲ್ಲಿ ರೆಕಾರ್ಡಿಂಗ್ ಮಾಡುತ್ತದೆ. ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಉತ್ತಮ ಹೆಡ್‌ಫೋನ್ ಅಥವಾ ಇಯರ್‌ಫೋನ್ ಬಳಸಿ ಅತ್ಯುತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.

ಇದರ ಕೆಲಸದ ವೇಗ ಅತ್ಯುತ್ತಮವಾಗಿದೆ. ಎಂಟು ಹೃದಯಗಳ ಪ್ರೊಸೆಸರ್, ಹೆಚ್ಚು ಮೆಮೊರಿ, ಜೊತೆಗೆ ಗ್ರಾಫಿಕ್ಸ್ ಪ್ರೊಸೆಸರ್‌ಗಳು ಇರುವುದು ಇದಕ್ಕೆ ಕಾರಣ. ಪರದೆಯಲ್ಲಿ ಐಕಾನ್‌ಗಳನ್ನು ಸರಿಸುವ ಅನುಭವ ಅತ್ಯುತ್ತಮವಾಗಿದೆ. ಈ ಐಕಾನ್ ಸರಿಸುವುದು ಎಷ್ಟು ನಯವಾಗಿದೆಯೆಂದರೆ ಕೆಲವೊಮ್ಮೆ ನಮಗೆ ಬೇಕಾದ ಕೆಲಸ ಬಿಟ್ಟು ಇನ್ನೇನೋ ಆಗಿಬಿಡುತ್ತದೆ!

ಪರ್ ಅಮೋಲೆಡ್ ಆಗಿರುವುದರಿಂದ ಬ್ಯಾಟರಿ ಬಳಕೆ ಕಡಿಮೆ ಆಗಬೇಕು. ಆದರೆ ಇದರ ಬ್ಯಾಟರಿ ಬಳಕೆ ನಾನಂದುಕೊಂಡಷ್ಟು ಕಡಿಮೆ ಅಲ್ಲ. ತೃಪ್ತಿದಾಯಕವಾಗಿಯಂತೂ ಇದೆ ಎನ್ನಬಹುದು. ಎಲ್ಲಾ ನಮೂನೆಯ ಆಟಗಳನ್ನು ಸಂಪೂರ್ಣ ತೃಪ್ತಿದಾಯಕವಾಗಿ ಆಡಬಹುದು. ಆಸ್ಫಾಲ್ಟ್ 8 ಆಟವನ್ನು ಈ ಫೋನಿನಲ್ಲಿ ಆಡಿದರೆ ದೊರೆವ ತೃಪ್ತಿ ಇತರೆ ಕೆಲವೇ ಫೋನ್‌ಗಳಲ್ಲಿ ದೊರೆಯಬಹುದು.

ಇದರ ಬೆರಳಚ್ಚು ಸ್ಕ್ಯಾನರ್ ತೃಪ್ತಿದಾಯಕವಾಗಿದೆ. ನಿಮ್ಮ ಬೆರಳಚ್ಚನ್ನೇ ನೀವು ಪಾಸ್‌ವರ್ಡ್ ಮಾಡಿಟ್ಟುಕೊಳ್ಳಬಹುದು. ಆದರೆ ಈ ಸ್ಕ್ಯಾನರ್ ಇರುವ ಸ್ಥಾನ ಸರಿಯಿಲ್ಲ. ಕ್ಯಾಮೆರಾದ ಪಕ್ಕದಲ್ಲಿಟ್ಟಿದ್ದಾರೆ. ಕ್ಯಾಮೆರಾದ ಕೆಳಗೆ ಇಟ್ಟಿದ್ದರೆ ಚೆನ್ನಾಗಿತ್ತು. ಇದನ್ನು ವಯರ್‌ಲೆಸ್‌ ವಿಧಾನದಲ್ಲಿ ಚಾರ್ಜ್ ಮಾಡಬಹುದು. ಆದರೆ ಅದಕ್ಕಾಗಿ ಸ್ಯಾಮ್‌ಸಂಗ್‌ನವರದೇ ವಿಶೇಷ ಚಾರ್ಜರ್ ಕೊಂಡುಕೊಳ್ಳಬೇಕು. ಅದರ ಮೇಲೆ ಈ ಫೋನನ್ನು ಇಟ್ಟರೆ ಸಾಕು. ಯಾವುದೇ ಕೇಬಲ್ ಜೋಡಣೆಯಿಲ್ಲದೆ ಫೋನ್ ಚಾರ್ಜ್ ಆಗುತ್ತದೆ.

ಕನ್ನಡದ ತೋರುವಿಕೆ ಸರಿಯಾಗಿದೆ ಮಾತ್ರವಲ್ಲ ಸಂಪೂರ್ಣ ಕನ್ನಡ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಸ್ಯಾಮ್‌ಸಂಗ್‌ನವರದೇ ಆದ ಕೀಲಿಮಣೆ ಇದೆ. ಆದರೆ ಅದರ ವಿನ್ಯಾಸ ಮಾತ್ರ ಸ್ವಲ್ಪ ವಿಚಿತ್ರವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ದುಬಾರಿಯಾದ ಆದರೆ ಅತ್ಯುತ್ತಮ ಫೋನ್ ಎನ್ನಬಹುದು. ಇದರ ವಿಡಿಯೊ ವಿಮರ್ಶೆ ನೋಡಬೇಕಿದ್ದರೆ bit.ly/gadgetloka280v ಜಾಲತಾಣಕ್ಕೆ ಭೇಟಿ ನೀಡಿ.

ವಾರದ ಆ್ಯಪ್ - ವೈಟ್‌ಕೇನ್
ದೃಷ್ಟಿವಂಚಿತರಿಗೆ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಉಪಯುಕ್ತ ಸವಲತ್ತುಗಳನ್ನು ನೀಡುವ ಹಲವು ಕಿರುತಂತ್ರಾಂಶಗಳಿವೆ (ಆ್ಯಪ್). ಪರದೆಯಲ್ಲಿ ಮೂಡಿಬರುವ ಪಠ್ಯವನ್ನು ಓದಿ ಹೇಳುವ ಸವಲತ್ತು ಒಂದು ಪ್ರಮುಖ ಉದಾಹರಣೆ. ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾಗಳಿವೆ. ಈ ಕ್ಯಾಮೆರಾದಲ್ಲಿ ಏನು ಕಂಡುಬರುತ್ತಿದೆ ಎಂಬುದನ್ನು ಧ್ವನಿಯ ಮೂಲಕ ತಿಳಿಸಿದರೆ ದೃಷ್ಟಿವಂಚಿತರಿಗೆ ಉಪಯೋಗವಾಗುತ್ತದೆ. ಮೈಕ್ರೋಸಾಫ್ಟ್‌ನವರು ಅಂತಹ ಒಂದು ಕಿರುತಂತ್ರಾಂಶ ತಯಾರಿಸಿದ್ದಾರೆ.

ಇದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ WhiteCane ಎಂದು ಹುಡುಕಬೇಕು ಅಥವಾ bit.ly/gadgetloka280 ಜಾಲತಾಣಕ್ಕೆ ಭೇಟಿ ನೀಡಬೇಕು. ಕ್ಯಾಮೆರಾಕ್ಕೆ ಏನು ಕಾಣಿಸುತ್ತಿದೆ ಎಂಬುದನ್ನು ಇದು ವಿವರಿಸುತ್ತದೆ. ಇನ್ನೂ ಹಲವು ಸವಲತ್ತುಗಳು ಇದರಲ್ಲಿವೆ. ಅವುಗಳೆಂದರೆ ಹಣವನ್ನು ಪತ್ತೆ ಹಚ್ಚುವುದು ಮತ್ತು ಅದರ ಮುಂದೆ ಹಿಡಿದ ನೋಟಿನ ಮೌಲ್ಯವನ್ನು ಓದಿ ಹೇಳುವುದು, ಚಿತ್ರದಿಂದ ಪಠ್ಯಕ್ಕೆ ಪರಿವರ್ತನೆ (ಓಸಿಆರ್), ಎದುರುಗಡೆ ಎಷ್ಟು ಜನ ಇದ್ದಾರೆ, ಅವರು ಗಂಡೋ ಹೆಣ್ಣೋ, ಇತ್ಯಾದಿ. ಇದು ಇನ್ನೂ ಪ್ರಯೋಗಾತ್ಮಕ ಆವೃತ್ತಿ (ಬೀಟ).

*
ಗ್ಯಾಜೆಟ್‌ ಸುದ್ದಿ -ವಾಟ್ಸ್‌ಆ್ಯಪ್ ಮೂಲಕ ನೋಟೀಸು
ವಾಟ್ಸ್‌ಆ್ಯಪ್ ಮೂಲಕ ನೀಡಿದ ನೋಟೀಸನ್ನು ದೆಹಲಿ ಕೋರ್ಟು ಅಂಗೀಕರಿಸಿದೆ. ಒಬ್ಬಾತ ತನ್ನ ಮಗ, ಸೊಸೆ ಮತ್ತು ಅವಳ ಹೆತ್ತವರ ಜೊತೆ ಕೌಟುಂಬಿಕ ಕಲಹವೊಂದರಿಂದಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ. ತನ್ನ ಫ್ಲಾಟ್‌ಗೆ ಅವರು ದಾವೆ ಇತ್ಯರ್ಥವಾಗುವ ತನಕ ಪ್ರವೇಶಿಸಬಾರದು ಎಂದು ನ್ಯಾಯಾಲಯವು ನೋಟೀಸು ನೀಡಬೇಕು ಎಂದು ಕೋರಿಕೊಂಡಿದ್ದ. ಅದಕ್ಕೆ ನ್ಯಾಯಾಲಯವು ಒಪ್ಪಿತ್ತು.

ಆದರೆ ತಮಗೆ ನೋಟೀಸು ತಲುಪಿಲ್ಲ ಎಂಬ ನೆಪವನ್ನು ನೀಡಿ ಅವರು ಫ್ಲಾಟ್‌ಗೆ ಪ್ರವೇಶ ಮಾಡುವ ಸಾಧ್ಯತೆಗಳಿರುವುದರಿಂದ ವಾಟ್ಸ್‌ಆ್ಯಪ್ ಮೂಲಕ ನೋಟೀಸು ನೀಡಲು ಅಪ್ಪಣೆ ಕೋರಿ ಅಂತೆಯೇ ಮಾಡಿದ್ದ. ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ಅದು ತಲುಪಬೇಕಾದವರಿಗೆ ತಲುಪಿ ಅವರು ಅದನ್ನು ಓದಿದರೆ ಎರಡು ನೀಲಿ ಬಣ್ಣದ ಟಿಕ್ ಮಾರ್ಕುಗಳು ಬರುತ್ತವೆ. ಹಾಗೆ ಬಂದುದನ್ನು ಕಲರ್ ಪ್ರಿಂಟ್ ತೆಗೆದು ಕೋರ್ಟಿಗೆ ನೀಡಿದಾಗ ಅವರಿಗೆ ನೋಟೀಸು ತಲುಪಿದೆ ಎಂದು ಕೋರ್ಟು ಒಪ್ಪಿಕೊಂಡಿತು.

*
ಗ್ಯಾಜೆಟ್‌ ಸಲಹೆ -ಸುಬ್ರಹ್ಮಣ್ಯ ಅವರ ಪ್ರಶ್ನೆ: ಸೆನ್‌ಹೈಸರ್ ಸಿಎಕ್ಸ್ 180 ಮತ್ತು ಸಿಎಕ್ಸ್ 213– ಈ ಎರಡು ಇಯರ್‌ಫೋನ್‌ಗಳಲ್ಲಿ ಯಾವುದು ಉತ್ತಮ?

ಉ: ಸಿಕ್ಸ್ 213 ಸ್ವಲ್ಪ ಹೆಚ್ಚು ಬೆಲೆಯದು. ಅಂತೆಯೇ ಸ್ವಲ್ಪ ಮಟ್ಟಿಗೆ ಉತ್ತಮವಾದುದು. ಎರಡರಲ್ಲೂ ಮೈಕ್ರೊಫೋನ್ ಇಲ್ಲ. ನಿಮಗೆ ಫೋನಿಗೆ ಜೋಡಿಸಿ ಮಾತನಾಡಲು ಬಳಸಬೇಕಿದ್ದರೆ ನೀವು  ಸಿಎಕ್ಸ್ 275 ಕೊಳ್ಳುವುದು ಉತ್ತಮ. ಸಿಎಕ್ಸ್ 180 ಮತ್ತು 275 ರ ವಿಮರ್ಶೆಗಳನ್ನು ಗ್ಯಾಜೆಟ್‌ಲೋಕದಲ್ಲಿ ನೀಡಲಾಗಿತ್ತು.

*
ಗ್ಯಾಜೆಟ್‌ ತರ್ಲೆ - ನೀವು ಮನೆಗೆ ತಲುಪಿದ್ದೀರಿ ಎಂದು ಗೊತ್ತಾಗುವುದು ಹೇಗೆ? ನಿಮ್ಮ ಸ್ಮಾರ್ಟ್‌ಫೋನ್ ಮನೆಯ ವೈಫೈಗೆ ಜೋಡಣೆಯಾದಾಗ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT