ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವಗಳ ನಾಡಿನಲ್ಲಿ

Last Updated 7 ಮೇ 2011, 19:30 IST
ಅಕ್ಷರ ಗಾತ್ರ

ಅಂದಿನಿಂದಲೂ ಮನುಷ್ಯ ದೇವರುಗಳಿಗಿಂತ ದೈವಗಳಿಗೆ ಹೆದರುವುದೇ ಹೆಚ್ಚೇನೋ. ಶುಭ ಸಮಾರಂಭಗಳಲ್ಲಿ ಮನೆದೇವರಿಗೆ ಹೇಗೋ ಮನೆದೈವಕ್ಕೂ ಕಾಯಿ ತೆಗೆದಿಟ್ಟು ನಮಸ್ಕರಿಸುತ್ತಾರೆ. ಹಾಗೆ ಮಾಡಿಲ್ಲದ ಪಕ್ಷದಲ್ಲಿ ಏನಾದರೂ ತೊಂದರೆ ಸಂಭವಿಸಿತೋ, ಮೊದಲು ನೆನಪಾಗುವುದು ದೇವರಲ್ಲ, ದೈವಗಳು.

‘ಏನು, ದೈವಕ್ಕೆ ಕಾಯಿ ಇಟ್ಟಿಲ್ಲವೆ?’ ಪ್ರಶ್ನೆ. ಅಂದರೆ ದೇವರನ್ನಾದರೂ ಸಂಭಾಳಿಸಬಹುದು. ದೈವಗಳನ್ನಲ್ಲ. ನಮ್ಮ ಈ ಪರಶುರಾಮ ಕ್ಷೇತ್ರವಂತೂ ದೈವ ದೇವರು ಭೂತಗಳ ಆಡುಂಬೊಲ. ಇಲ್ಲಿನ ದೇವರಾದರೂ ಮಾತಾಡರು. ದೈವಗಳು ಭೂತಗಳು ಮಾತಾಡಿಯೇ ಆಡುವವು.

ದೇವರು ಮಾತಾಡುವ ಧಾಟಿಯನ್ನಾದರೂ ನಾವು ಅರಿಯೆವು. ಆದರೆ ದೈವ ಮಾತಾಡುವ ಧಾಟಿ ಸರಿಸುಮಾರಾಗಿ ನಮಗೆಲ್ಲ ಗೊತ್ತು. ಇಷ್ಟೇ ಅಲ್ಲ, ಮಾತಾಡುವ ದೈವಗಳೇ ಪ್ರತ್ಯೇಕ. ಮಾತಾಡದೆ, ಯಾಕೆ ತೊಂದರೆ ಕೊಡುತಿದ್ದೇನೆ ಏನು ತಪ್ಪು ಅಂತಲೂ ಹೇಳದೆ ತೊಂದರೆ ಕೊಡುತ್ತಲೇ ಇರುವ ಮೌನದೈವಗಳೇ ಪ್ರತ್ಯೇಕ.

ಇಲ್ಲಿನ ಎಂತಹ ವಿದ್ಯಾವಂತರಾದರೂ ಮನೆದೈವಕ್ಕೆ ಶರಣು ಎನ್ನದೆ ಇರಲಾರರು. ಮಾನ್ಯ ಬಿ.ವಿ.ಕಾರಂತರ ಆತ್ಮಕತೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ಯ ಒಂಬತ್ತನೆಯ ಪುಟ ತೆರೆದು ನೋಡಿ. ಅದರಲ್ಲಿ ಅವರು ಕುಟುಂಬದೊಡನೆ ಸೇರಿ ತಾವು ಪಂಜುರ್ಲಿಗೆ ಕೋಲ ಕೊಟ್ಟ ಕತೆ ಹೇಳಿದ್ದಾರೆ.

ಜಾತಿಮತ ಭೇದವಿಲ್ಲದೆ ನಂಬಿಗೆ ಅಪನಂಬಿಗೆ ಇತ್ಯಾದಿಗಳ ಸೋಂಕೇ ಇಲ್ಲದೆ, ಕುಟುಂಬಗಳು ನಡೆಸಿಕೊಂಡು ಬರುವ ಧಾರ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಹೀಗೆ ಬಹಳವಿವೆ. ಹಿರಿಯರು ಅದನ್ನು ನಡೆಸುವಾಗ ನಗುವ ಕಿರಿಯರು, ಹಿರಿಯ ಪಟ್ಟ ತಮಗೇ ಬಂದಾಗ ಚಕಾರವಿಲ್ಲದೆ ಗಂಭೀರವಾಗಿ ಅದನ್ನು ಮುಂದರಿಸುತ್ತಾರೆ. ಒಟ್ಟು ಈ ಕಾಣುವ ಲೋಕದಲ್ಲಿ ಕಾಣದ ದೈವ ದೇವರುಗಳೊಂದಿಗೆ ಬದುಕು ಹೆಣೆದುಕೊಂಡು ಬಂದವರು ನಾವು.

ತೊಂದರೆ ಎದುರಾದಾಗೆಲ್ಲ, ನಮ್ಮನಮ್ಮ ಮೂಲದ ಅಂದರೆ ಬುಡ, ಬಳಿ, ಗುತ್ತು, ಮನೆತನದ ಉಸ್ತುವಾರಿ ದೈವದೇವರುಗಳನ್ನು ಬಿಡದೆ ನೆನೆವವರು. ಜೊತೆಗೇ ಅವವಕ್ಕೆ ಲಗತ್ತಾಗುವಂತಹ ವಾದ್ಯಧ್ವನಿ, ಕುಣಿತ, ರಂಗೋಲಿ, ಚಿತ್ರಕಲೆ, ಹಾಡುಗಬ್ಬ ಪಾಡ್ದನಗಳನ್ನು (ಬಲಿಗಳನ್ನೂ) ರೂಢಿಸಿಕೊಂಡು ಬಂದವರು.  

ಭಾಷೆಯಲ್ಲಿಯೂ ದೈವಗಳು ನಮ್ಮ ಒಡನಾಡುತ್ತವೆ, ಐನ್‌ಟೈಮಿಗೆ ಉಪಮೆಗೆ ಒದಗುತ್ತವೆ! ಮುಖಬೀಗಿಸಿಕೊಂಡು ತಿರುಗುತಿದ್ದರೆ ‘ಏನು ಮೂಡುಭೂತ ಬಡಿಯಿತೆ?’, ಮುಖ ಉಬ್ಬಿಸಿ ವ್ಞೆಂ ಅಂತ ತಿರುಗುತಿದ್ದರೆ (ಆಕೆ ‘ಕಮಲಮುಖಿ’ಯೇ ಆಗಿರಲಿ) ‘ಉಮ್ಮಲ್ತಿ ಸೊಡ್ಡಿನವಳೆ!’. ಆದರೆ ಆ ಉಮ್ಮಲ್ತಿಯನ್ನು ನೋಡಿದವರಾರು? ದೈವವನ್ನು ಕಂಡರೆ ಅಲ್ಲಿಯೇ ರಕ್ತಕಾರಿ ಸಾಯುವುದೇ ಅಂತೆ. ಎಂತಲೇ ನೆನಪಿಡಿ, ಹರಿಯಾದರೂ ಸುಲಭ, ಹಾಯ್ಗುಳಿಯಲ್ಲ. 

ಅಂದಹಾಗೆ ನಮ್ಮ ಮನೆಯ ಸನಿಹದಲ್ಲೇ ಒಂದು ಹಾಯ್ಗುಳಿ ದೈವದ ಸ್ಥಾನವಿದೆ. ಮುರಕಲ್ಲಿನ ಒಂದು ಎತ್ತರ ದಿಡ್ಡು, ಅದರ ಮೇಲೆ ಒಂದು ಒಂಟಿ ಮುರಕಲ್ಲು. ಈ ಒಂಟಿಕಲ್ಲು ಹಾಯ್ಗುಳಿಯ ಸ್ಥಾನ, ಪೂಜೆ ನೈವೇದ್ಯ, ಬಲಿ, ಆರತಿ ಎಲ್ಲ ಸಲ್ಲುವುದು ಅದಕ್ಕೇ. ದೈವಗಳಲ್ಲಿ ಮೇಲುಕೀಳು ವರ್ಗಗಳಿವೆಯಂತೆ. ಹಾಗೆ, ಹಾಯ್ಗುಳಿ ಒಂದು ಕೀಳುದೈವವೆನ್ನುತ್ತಾರೆ.
 
ಕೀಳುದೈವವಾದ ಹಾಯ್ಗುಳಿಯ ಕಣ್ಣು ಹೆಚ್ಚಾಗಿ ಜಾನುವಾರುಗಳ ಮೇಲೆಯೇ. ಅದನ್ನು ಪ್ರಸನ್ನವಾಗಿಡದಿದ್ದರೆ ಹಟ್ಟಿಯಲ್ಲಿ ತಾಪತ್ರಯ ಎಬ್ಬಿಸುತ್ತದೇ ಅಷ್ಟಿಷ್ಟಲ್ಲ. ‘ಹಟ್ಟಿಯಲ್ಲಿನ ತಾಪತ್ರಯ’ ಎಂದರೆ ಏನೆಂದುಕೊಂಡಿರಿ? ಶಬ್ದದಲ್ಲಿರುವಂತೆ ಕೇವಲ ತ್ರಯವಲ್ಲ- ಶತ, ಸಹಸ್ರ. ನಮ್ಮ ಕಾಲದಲ್ಲಿ ಹೆಚ್ಚಿನ ಮನೆಗಳಲ್ಲಿ ಕಡೇಪಕ್ಷ ಒಂದೊಂದು ಗುರುಟಲು ದನವಾದರೂ ತನ್ನದೊಂದು ಬಡಕಟೆ ಕರುವಿನೊಂದಿಗೆ ಇರುವುದು ಸಾಮಾನ್ಯವಾಗಿತ್ತಷ್ಟೆ? ಹಾಗಾಗಿ ಹಾಯ್ಗುಳಿ ದೈವಕ್ಕೆ ವರ್ಷದುದ್ದಕ್ಕೂ ಕೈತುಂಬ ಕೆಲಸವಿರುತಿತ್ತು.

ಉದಾಹರಣೆಗೆ ಹಟ್ಟಿಯಲ್ಲಿನ ದನಕ್ಕೋ ಎಮ್ಮೆಗೋ ಹೆರಿಗೆನೋವು ಸುರುವಾಯಿತೆನ್ನುವ, ಕೂಡಲೇ ಹಾಯ್ಗುಳಿಗೆ ಕಾಯಿ ಸುಳಿದಿಡಲೇ ಬೇಕು. ಇಡದಿದ್ದರೆ ಅದಕ್ಕೆ ಭಯಂಕರ ಅವಮಾನವೆನಿಸಿ ುನಿಯುತ್ತದೆ. ಮುನಿದು ಜಾನುವಾರಿನ ತಾಯಮಾಸು, ಎಂದರೆ ಕಸ, ಹೊರಬೀಳಲು ಬಿಡುವುದಿಲ್ಲ. ಒಂದೊಮ್ಮೆ ಬಿದ್ದರೂ ನಮಗದು ಗೋಚರವಾಗದಂತೆ ಮಾಡುತ್ತದೆ.

ನಾವು ಕಂಡು ದೂರ ಎತ್ತಿ ಹಾಕದಿದ್ದರೆ ‘ಬಾಣಂತಿಗಂಟಿ’ ಅದನ್ನು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ತಿಂದು ಬಿಡುತ್ತದೆ. ಸರಿ, ಕಸ ತಿಂದಿತೋ, ಮುಗಿಯಿತು, ಹಾಲು ಪೂರ್ತಿ ಒಣಗಿದಂತೆಯೇ, ಹಾಲು ಕೊಡದಿದ್ದ ಮೇಲೆ ಕರು ಹಾಕಿ ಏನು ಪ್ರಯೋಜನ? ಬಾಣಂತಿ ಸಾಕಣೆಯೆಲ್ಲ ದಂಡವಾಯಿತೆ? ಜಾನುವಾರು ಸಾಕುವುದು ಎಂದರೇನು, ಆಟವಲ್ಲವಲ್ಲ. ಹಾಯ್ಗುಳಿ ಉಪದ್ರ ಹೀಗೆ- ಸರಣಿ ಸರಣಿ ಪರಿಣಾಮದ್ದು.
ಇನ್ನೊಂದು ವಿಷಯವೆಂದರೆ ಬಿಳಿಬಣ್ಣದ ಬಗ್ಗೆ ಅದಕ್ಕಿದ್ದ ದ್ವೇಷ. ಸುಮ್ಮನೆ ಹೇಳುತ್ತಿಲ್ಲ, ಅದಕ್ಕೆ ಪುರಾವೆಯುಂಟು.

ನಮ್ಮನೆಗೆ ಒಮ್ಮೆ ಒಂದು ಬಿಳೀಬಣ್ಣದ (ಎಂದರೆ ಕಪ್ಪು ಅಲ್ಲದ) ಎಮ್ಮೆ ತಂದರು. ಮಾರಿದವರು, ಮೋಸದವರಲ್ಲ, ಅದು ಹೊತ್ತಿಗೆ ಇಂತಿಷ್ಟು ಹಾಲು ಕೊಡುತ್ತದೆ ಎಂದಿದ್ದರು. ಬಂದ ನಾಕುದಿನ ಅದು ಅವರು ಹೇಳಿದಷ್ಟೇ ಹಾಲು ಕೊಟ್ಟಿತು ಕೂಡ. ಆದರೆ ದಿನ ಹೋದಂತೆ ಹಾಲಿನ ಪ್ರಮಾಣ ಕಮ್ಮಿಯಾಗತೊಡಗಿತು. ಗದರಿದರಿಲ್ಲ, ಕೊಂಡಾಟ ಮಾಡಿದರಿಲ್ಲ, ಕೊದಂಟಿಯ ರುಚಿ ತೋರಿಸಿದರೂ ಇಲ್ಲ.

ಕರುವಿಗೆ ಕುಡಿಯಲು ಬಿಟ್ಟು ಈಚೆ ಎಳೆದುಕೊಳ್ಳುವುದರೊಳಗೆ ಹಾಲನ್ನೆಲ್ಲ ಕೆಚ್ಚಲೊಳಗೆ ಎಕ್ಕಳಿಸಿಕೊಂಡಾಯಿತು. ತಂಬಿಗೆ ಹಿಡಿದು ಹಾಲು ಕರೆಯಲು ಕುಳಿತರೆ ಎಳೆದು ಎಳೆದು ರಟ್ಟೆ ನೋವಾದೀತೆ ಹೊರತು ತಂಬಿಗೆ ತುಂಬುವುದಿಲ್ಲ. ಲೋಟರಿಹಿಂಡಿ ಹಾಕಿದರಿಲ್ಲ, ತೌಡು ಹಾಕಿದರಿಲ್ಲ, ಹತ್ತಿಕಾಳು ಸುರಿದರೂ, ಅಕ್ಕಚ್ಚು ಬೇಯಿಸಿ ಹಾಕಿದರೂ ಊಹೂಂ, ಹಾಲಿಲ್ಲ. ಹಸಿಹುಲ್ಲು ಒಣಹುಲ್ಲು ಅಂತ ಮೇನತ್ತು ಮಾಡಿದ್ದೇ ಮಾಡಿದ್ದು.

ಹಾಕಿದ್ದೆಲ್ಲ ಎಲ್ಲಿ ಹೋಯಿತು? ತಿಳಿಯದೆ ಹಿರಿಯರು ನಿಮಿತ್ಯ ಕೇಳುವಾಗ ‘ಅಯ್ಯೆ, ಇದೆಲ್ಲ ಆ ಹಾಯ್ಗುಳಿ ಉಪದ್ರ. ಅದಕ್ಕೆ ಬಿಳಿಎಮ್ಮೆಗಳನ್ನು ಕಂಡರಾಗದು. ನಿಮಗೆ ತಿಳಿಯದೆ? ನೀವು ಹಾಕಿದ್ದೆಲ್ಲ ಹೋಗುತಿದ್ದುದು ಹಾಯ್ಗುಳಿಯ ಹೊಟ್ಟೆಗೆ’.
‘ಅಯ್ಯೆ, ಹೀಗೋ’.
‘ಮತ್ತೆ! ಈ ಎಮ್ಮೆಯನ್ನು ಇಟ್ಟುಕೊಳ್ಳಬೇಡಿ, ಮಾರಿಬಿಡಿ’.
‘ಮಾರುವುದೆ? ಛೆಛೆ ಅದಾಗದು. ಮೊನ್ನೆಮೊನ್ನೆ ತಂದದ್ದು. ಹೇಗೆ ಮನಸ್ಸು ಬರುತ್ತದೆ?’

‘ಸರಿ, ನೋಡುವ ಹಾಗಾದರೆ’ ಎಂದು, ಜಾನುವಾರುಗಳ ಬೂದಿ ಮಂತ್ರಬಳ್ಳಿ ನಿಮಿತ್ಯ ಬಲ್ಲ ಭಟ್ಟರು ಅವರು, ಮಣಮಣ ಮಂತ್ರ ಹೇಳುತ್ತಾ ಪದೆಪದೇ ಆಕಳಿಸುತ್ತಾ ಎರಡು ಮಂತ್ರಬಳ್ಳಿಯನ್ನು ತಯಾರು ಮಾಡಿದರು. (ಅಂದ ಹಾಗೆ ನಿಮಿತ್ಯ ಹೇಳುವವರಿಗೆ ಮೇಲಿಂದ ಮೇಲೆ ಆಕಳಿಕೆ ಬರುತ್ತಿರುತ್ತದೆ, ನೋಡಿರುವಿರ?)

‘ಏನು ಎಷ್ಟಪ್ಪ ಆಕಳಿಕೆ. ದೈವ ಜೋರಾಗಿಯೇ ಮೆಟ್ಟಿಕೊಂಡಿದೆ, ಇಷ್ಟು ಆಕಳಿಕೆ ಬರುವುದೇ ಅದಕ್ಕೆ ಸಾಕ್ಷಿ’ ಎಂದರು. ‘ಈ ಮಂತ್ರ ಬಳ್ಳಿಯನ್ನು ಎಮ್ಮೆ ಕುತ್ತಿಗೆಗೆ ಕಟ್ಟಿ. ಮತ್ತೆ ಇಕ ಇದನ್ನು ಹಟ್ಟಿಹಣೆಗೆ ಕಟ್ಟಿ. ನೋಡುವ, ಮತ್ತೂ ಅದು ಉಪದ್ರ ಬಿಡದಿದ್ದರೆ ಎಮ್ಮೆಯನ್ನು ಇಟ್ಟುಕೊಳ್ಳಬೇಡಿ, ದಾಂಟಿಸಿ ಬಿಡಿ’.

ಮಂತ್ರಬಳ್ಳಿ ಕಟ್ಟಿಕೊಂಡ ಮೇಲೆ ಅರೆ, ಎಮ್ಮೆ ಹಾಲು ಕೊಡತೊಡಗಿತು! ಹಾಯ್ಗುಳಿ ಸೋತಿತು; ಹಾಗೆ ಎಂದುಕೊಂಡರು ಎಲ್ಲ, ತುಸು ನೆಮ್ಮದಿಗೊಂಡರು.

ಇಂತು ದಿನ ಹೋಗುತ್ತಿರಲು ಆ ಬಿಳಿಎಮ್ಮೆ ಗಬ್ಬ ಕಟ್ಟಿತು. ಅದು ಕರು ಹಾಕುವುದನ್ನೇ ಹಾಯ್ಗುಳಿ ಕಾಯುತ್ತ ಇತ್ತು ಬಹುಶಃ. ಸುಮ್ಮನಿರುವ ಗುಣವೇ ಅದರದಲ್ಲವಲ್ಲ. ದಿನ ತುಂಬಿತು, ಎಮ್ಮೆ ಕರು ಹಾಕಿತು. ಎಂತ ಕರು? ಗುಡ್ಡವ, ಹೆಂಗರುವ ನೋಡಬೇಕು, ಅಷ್ಟರಲ್ಲಿ,  ಆಚೆ ಕಂಡರೆ ಎಮ್ಮೆಯ ‘ಹೊಟ್ಟೆಗೆಡ್ಡೆ’ -ಗರ್ಭಕೋಶ- ಹೊರಬಂದಿದೆ.

ಕೈ ಹಾಕಿ ಹೇಗೆಹೇಗೆ ಒಳದೂಡಿದರೂ ಹೋಗದು. ಗೋಡಾಕ್ಟರನ್ನು ಕರೆಯಲು ಜನ ಓಡಿತು. ಅವರು ಬರುವುದರೊಳಗೆ ಎಮ್ಮೆ ಕಣ್ಣುಮೇಲೆ ಮಾಡಿ ತಲೆ ಅಡ್ಡ ಹಾಕಿಯಾಯಿತು. ಎಲ್ಲ ಮುಗಿಯಿತು ಎಂದು ಹೇಳಲಷ್ಟೇ ಡಾಕ್ಟರು ಬಂದಂತಾಯಿತು. ‘ಹೊಟ್ಟೆ ನೋವು ಸುರುವಾದೊಡನೆ ಹಾಯ್ಗುಳಿಗೊಂದು ಕಾಯಿ ಸುಳಿದಿಡಲು ಛೆ, ಮರೆತೇ ಬಿಟ್ಟೆ. ನಾನೇನೋ ಮರೆತೆ. ನಿನಗೆ ನೆನಪಿಸಲೇನಾಯಿತು?’, ‘ನೀನು ಮರೆತೆ ಅಂತ ನಂಗೇನು ಕನಸೆ?’, ‘ಒಟ್ಟು ಕರ್ಮ’- ವಿಧವಿಧ ಚಕಮಕಿ. ಕಂಪಿಸುವ ದುಃಖಗಳು ಒಮ್ಮೊಮ್ಮೆ ಚಕಮಕಿ ಚರ್ಚೆಯ ರೂಪದಲ್ಲಿಯೂ ಇರುತ್ತವಷ್ಟೆ?.

ಆಗಲೇ ಅದನ್ನು ಬೇರೆಯವರಿಗೆ ದಾಂಟಿಸಿ ಕರಿ ಎಮ್ಮೆ ತಂದಿದ್ದರೆ ಎಂಬ ಪಶ್ಚಾತ್ತಾಪ ಮಾತ್ರ ಮನೆಯನ್ನು ಬಹುಕಾಲ ದಣಿಸಿತು. ಅಂದಿನಿಂದ ನಮ್ಮನೆಯ ಜಾನುವಾರು ಕುರಿತ ಮಾತುಕತೆಯಲ್ಲಿ ‘ನಮ್ಮ ಹಟ್ಟಿಗೆ ಬಿಳಿಎಮ್ಮೆ ಆಗದು. ಹಾಯ್ಗುಳಿ ಅದಕ್ಕೆ ಏಳುಗತಿಯಾಗಲು ಬಿಡುವುದಿಲ್ಲ’ ಎಂಬೊಂದು ತಿಳಿವಳಿಕೆ ದಾಟಿಕೊಂಡೇ ಇರುತ್ತದೆ.
ನಾನು ಸಣ್ಣದಿನಗಳನ್ನು ಕಳೆದದ್ದು ಇಂತಹ ಮನೆಮನೆಯ ಮ್ಯಾಜಿಕ್ಕುಗಳ ಕಾಲದಲ್ಲಿ.

ಹೆತ್ತು ಮೂರು ತಿಂಗಳಾಗುವವರೆಗೂ ಬಾಣಂತಿಯರು ಹೊರಗೆ ಬಚ್ಚಲಿಗೆ ಹೋಗುವಾಗ ಅಂಗೈಯಲ್ಲಿ ಕಬ್ಬಿಣದ ಚೂರಿಯನ್ನು ಮಡಚಿಟ್ಟುಕೊಂಡೇ ಹೊರಡುವುದು ನಮ್ಮಲ್ಲಿ ಅಲಿಖಿತ ರೂಲಾಗಿತ್ತು. ಅದೊಂದು ಮುಟ್ಸು. ಇಲ್ಲವಾದರೆ ಬಾಣಂತಿಯರೆಂದರೆ ಇಷ್ಟಪಡುವ ಕೀಳುಭೂತಗಳು ಅವಳನ್ನು ಅಮರಿ ಹೀರುತ್ತವೆ. ಹಾಗೆ ಒಮ್ಮೆ ನಮ್ಮೂರಲ್ಲಿ ಒಬ್ಬ ವ್ಯಾಪಾರಿಯ ಮಗಳನ್ನು ಭೂತ ಹಿಡಿದು, ಅವಳು ಮಗುವನ್ನು ದೂಡಿಹಾಕಿ ಕುಳಿತಲ್ಲೇ ಹಿಂದೇಮುಂದೇ ತುಯ್ಯುತ್ತ ರುಂಯ್ಞ ರುಂಯ್ಞ ಕಣ್ಣುಬೇಳೆ ತಿರುಗಿಸುತ್ತ ತಾನು ಇಂಥ ಭೂತ ಎಂದು ಹೂಂಕರಿಸಿದ್ದು, ಅದರಿಂದ ಅವಳು ಪಾರಾಗಬೇಕಾದರೆ ಸಾಕೋಸಾಕಾದದ್ದು ಎಲ್ಲವನ್ನು ಹೇಗೆ, ನಂಬದೆ ನಿವೃತ್ತಿ ಇಲ್ಲವೆಂಬಂತೆ, ಕಥಿಸುತಿದ್ದರು! ನಾನೂ ಹೆತ್ತು ಮೂರುತಿಂಗಳವರೆಗೆ ಮಡಚಿದ ಕಬ್ಬಿಣದ ಚೂರಿಯನ್ನು ಕೈಯಲ್ಲಿ ಹಿಡಿದೇ ಹೊರಗೆ ಒಳಗೆ ತಿರುಗುತ್ತಿದ್ದೆ. ಎಂತಲೇ ಸದ್ಯ! ಭೂತದಿಂದ ಬಚಾವಾದೆ.
 
ಇನ್ನೆಲ್ಲ ದೇವದತ್ತನ್ ಕಾಲೊ

ಹಾಯ್ಗುಳಿದೈವದ ಪೂಜೆವಾದ್ಯ ಕೇಳಿಸಿತು. ಅದೊಂದು ವಿಚಿತ್ರ ವಾದ್ಯಧ್ವನಿ. ಕೀಳುದೈವಗಳಿಗೆ ಹಾಗೆಯೇ ನುಡಿಸಬೇಕಂತೆ. ವಾದ್ಯ ಕೇಳುತ್ತಲೂ ಅಮ್ಮ ‘ಮಕ್ಳೆ, ಯಾರಾದ್ರೊಬ್ರ್ ಹಣ್ಕಾಯಿ ತಕಂಡುಹೋಯಿ ದೈವಕ್ಕೆ ಒಡ್ಸ್‌ಕಂಡ್ ಬನ್ನೀ...’ ಅಂತ ಇದ್ದಲ್ಲಿಂದಲೇ ಕೂಗಿದಳು.

ಯಾರಾದರೂ ಅಂದರೆ ಯಾರು? ಸರಿ, ಸಣ್ಣಣ್ಣಯ್ಯ ತಾನು ಹೋಗುತ್ತೇನೆ ಅಂದ, ಹೊರಟ. ಅವನ ಹಿಂದೆಯೇ ನಾವು ತಂಗೀ ಸೌಭದ್ರೆಯರು. ಅಲ್ಲಿಯೋ, ಹಾಯ್ಗುಳಿ ಭಟ್ಟರಿಗೆ ಒಂದು ಬಟ್ಟು ಕೂಡ ಬಿಡುವಿಲ್ಲ. ಇರುವ ಎರಡೇ ಕೈಯಲ್ಲಿ ಪೂಜೆ ಮಾಡಬೇಕು, ಹಣ್ಣುಕಾಯಿ ಒಡೆಯಬೇಕು, ಅದರಲ್ಲಿ ಒಂದು ಹೋಳನ್ನು ಪ್ರಸಾದವಾಗಿ ಕೊಡಬೇಕು, ನಾನ್‌ಸ್ಟಾಪ್ ಮಂತ್ರ ಬೇರೆ ಹೇಳುತ್ತಿರಬೇಕು... ಗಡಿಬಿಡಿ ಗಡಿಬಿಡಿ.

ನಾವು ಹೋಗುವ ಹೊತ್ತಿಗೆ ಆಗಲೇ ಆಸುಪಾಸಿನ ಮಂದಿಯೆಲ್ಲ ಹಣ್ಣುಕಾಯಿಯೊಡನೆ ಅಲ್ಲಿ ಹಾಜರಿದ್ದರು. ಈ ದೈವಕ್ಕೆ ಕೋಳಿ ಅಂದರೆ ಪ್ರಾಣವಂತೆ. ಹಾಗಾಗಿ ಕೋಳಿಬಲಿ ಹರಕೆ ಹೇಳಿಕೊಂಡವರು ಕೋಳಿಗಳನ್ನು ತಂದಿದ್ದರು. ಕೈ ತಪ್ಪಿ ಹಾರದಂತೆ ಅವುಗಳ ಕಾಲು ಕಟ್ಟಿತ್ತು. ಬಲಿ ಕೊಡಲು ತಂದ ಕೋಳಿಗಳನ್ನು ಪ್ರೀತಿಯ ಮಗುವನ್ನು ಎತ್ತಿಕೊಳ್ಳುವಂತೆ ಎತ್ತಿಕೊಂಡು ಅವರೆಲ್ಲ ನಿಂತಿದ್ದರು.

ಅವರ ಕೈಯಿಂದ ಅವು ಅತ್ತಿತ್ತ ಮಿಟಿಮಿಟಿ ನೋಡುತ್ತ ಇದ್ದವು. ತಾವು ಎಲ್ಲಿಗೆ ಬಂದಿದ್ದೇವೆಂದು ಅವು ಅಚ್ಚರಿ ಪಡುತ್ತಿರಬಹುದೆಂದು ನಾವು ಮಾತಾಡಿಕೊಂಡೆವು. ಅವುಗಳ ದೃಷ್ಟಿಯೋ ಒಮ್ಮೆ ಇಲ್ಲಿದ್ದರೆ ಇನ್ನೊಂದು ಕ್ಷಣದಲ್ಲಿ ಅತ್ತ ಸರಿದಾಯಿತು. ನಮ್ಮನ್ನು ನೋಡಿದಂತಾಗಿ ನಾವು ಮುದಗೊಳ್ಳುವುದರೊಳಗೆ ಛಕ್ಕನೆ ಕತ್ತು ಕೊಂಕಿಸಿ ಬೇರೆ ಕಡೆ ತಿರುಗಿಯಾಯಿತು. ಅತ್ತ ಭಟ್ಟರು ಮಂತ್ರ ಹೇಳುತ್ತಿದ್ದಾರೆ.
 
ಅವರೆದುರು ಹಣ್ಣುಕಾಯಿ ತುಂಬಿದ ಹರಿವಾಣಗಳೂ ಬುಟ್ಟಿಗಳೂ ಇವೇ, ಅಷ್ಟಿಷ್ಟಲ್ಲ. ಅವರು ಠಪಠಪ ಕಾಯಿ ಒಡೆಯುತ್ತ ಬಾಳೆಹಣ್ಣುಗಳ ತೊಟ್ಟು ಚಿಮುಟಿ ಚಿಮುಟಿ ನೈವೇದ್ಯ ಮಾಡುತ್ತಿದ್ದರೆ, ನಾವು ಆ ಚಂಚಲ ಕುಕ್ಕುಟಗಳನ್ನೇ ನೋಡುತ್ತ ಮೈಮರೆತಿದ್ದೇವೆ. ಆಗ-

ಹಾ! ಇದೇನು ನಾವು ನೋಡುತ್ತಿರುವುದು!
ಒಬ್ಬಾತ ಒಂದು ಕೋಳಿಯನ್ನು ಎತ್ತಿಕೊಂಡವರೇ ಕೈಯಿಂದ ತೆಗೆದುಕೊಂಡು ಕರಕ್ಕನೆ ಅದರ ಕೊರಳು ಕೊಯ್ದುಬಿಟ್ಟ. ಉಳಿದ ಕೋಳಿಗಳೂ ನಾವೂ ನೋಡುನೋಡುತಿರುವಂತೆಯೇ! ಅಯ್ಯಮ್ಮಾ! ಅಯ್ಯಿ ದೇವರೇ, ಒಂದು ರಕ್ತ ಚಿಮ್ಮಿದ್ದೇ! ಸುರಿದದ್ದೇ! ‘ಕೋಳಿಬಲಿ ಹರ್ಕಿ ಅಂದ್ರೆ ಹೀ..ಂಗೆ’, ‘ರಕ್ತ ಜಾಸ್ತಿ ಹರ್ದಷ್ಟೂ ಹಾಯ್ಗುಳಿಗೆ ಸಂತೃಪ್ತಿ ಹೆಚ್ಚಂಬ್ರಲೆ’. ಯಾರೋ ಯಾರೊಂದಿಗೋ ಪಿಸುಪಿಸು.

ಕೋಳಿಯ ಕೊಂಕುಕೊರಳುಕೊಕ್ಕು ಮಿಟಿಮಿಟಿಕಣ್ಣು ಆ ಚಂದದ ಜಂಭದ ಕೆಂಜುಟ್ಟು, ರುಂಡ ಒಂದೆಡೆ, ಮುಂಡ ಒಂದೆಡೆ. ನೋಡುತ್ತಲೇ ಇದ್ದೇವೆ,  ಅಯಯ, ಮುಂಡ ಮಾತ್ರ ಎದ್ದು ಅಲ್ಲಿಂದ ತಪ್ಪಿಸಿಕೊಳ್ಳಲೋ ಎಂಬಂತೆ ಒಂದೇಸವನೆ ಓಡುತ್ತಿದೆ. ದಿಗ್ಭ್ರಾಂತರಂತೆ ಅಲ್ಲಲ್ಲೆ ನಿಂತು ರವಂಡುರವಂಡಾಗಿ ಗರಗರ ತಿರುಗುತ್ತಿದೆ.

ತಿರುತಿರುಗಿ ತಿರುತಿರುಗಿ ಕಾದಾಡಿ ಸೋತ ಸೈನಿಕನಂತೆ ನೆಲಕ್ಕೊರಗಿದೆ... ಕೊಕೊಕೊ ಕೂಗುತ್ತಿದ್ದಂತೆ ಕ್ಷಣಮಾತ್ರದಲ್ಲಿ ಕೂಗು ಬಂದ್ ಆಗಿ ನೆಲಕ್ಕುರುಳಿ ಮತ್ತೆದ್ದು ಓಡಾಡಿ ಮತ್ತೆ ನೆಲಕ್ಕೊರಗುವ ಮತ್ತಷ್ಟು ಕೋಳಿಗಳು... ಸುತ್ತ ಎಲ್ಲರೂ ಸುಮ್ಮನೆ ನೋಡುತ್ತಿದ್ದಾರೆ. ಆಗಬೇಕಾದ ಕೆಲಸ ಆಗುತ್ತಿದೆಯೋ; ಇದೆಲ್ಲ ಹೀಗೆಯೇ ಆಗಬೇಕಾದ್ದೋ ಎಂಬಂತೆ.

ದೇವದತ್ತ ಬಿಟ್ಟ ಬಾಣದಿಂದ ಗಾಯಗೊಂಡು ರಕ್ತಸುರಿದು ಸಾಯಬಿದ್ದ ಹಂಸವನ್ನು ಬುದ್ಧ ರಕ್ಷಿಸಿದಂತೆ ನಾವೂ ಈ ಕೋಳಿಗಳನ್ನು ರಕ್ಷಿಸುವಂತಿದ್ದರೆ!
‘ಯಂತ? ಬುದ್ಧ್‌ನ? ಅವ್ನ್ ಕಾಲೊ ಯೇಗಳಿಕೋ ಮುಗೀತ್. ಇನ್ನೆಲ್ಲ ದೇವದತ್ತನ್ ಕಾಲೊ’

‘ಇಷ್ಟಕ್ಕೂ ಇದೇನ್ ಹಂವ್‌ಸ್ವಾ? ಎಲ್ಲಬಿಟ್ಟ್, ಕ್ವೋಳಿ’
‘ಹ... ಹಂಸ ಆಯಿದ್ರಾದ್ರೂ ಒಂದ್‌ಲೆಕ್ಕ ಬೇರೆ’.
‘ಕ್ವೋಳಿಗ್ಳನ್ನ ಕಾಪಾಡಿ ಅವನ್ನೆಲ್ಲ ಯಂತಮಾಡ್ತೆ? ಸಾಂಕ್‌ತ್ಯ?’
‘ಕೋಳಿಗ್ಳ್ ಇಪ್ದೇ ಕೊಯ್ಸ್‌ಕಂಬ್ಕೆ ಮಗಾ, ಮರ್ಕತ್ತೆಂತಕೆ’
ಜೋರಾಗಿ ಬಾಯಿತೆಗೆದ ಅಳುವಿಗೆ ಯಾರೋ ಸಮಾಧಾನ ಮಾಡುತ್ತಿದ್ದಾರೆ.
*
ಸಣ್ಣಣ್ಣಯ್ಯ ಹಣ್ಣುಕಾಯಿಯ ತಟ್ಟೆಯನ್ನು ಭಟ್ಟರೆದುರು ಆಗಲೇ ಇರಿಸಿದ್ದಾನೆ. ಇರಿಸಿ ಅವನೂ ಕೋಳಿಬಲಿಯನ್ನು ನೋಡುತ್ತಿದ್ದಾನೆ. ಭಟ್ಟರು ಕರೆದಾಗಲೇ ಈಚಿನ ಧಾತು ಬಂತು ಅವನಿಗೆ. ಅವನಿಗೂ ಮತ್ತು ನಮಗೂ. ಎಚ್ಚರಾಗಿ ಅವನು ಅವರ ಹತ್ತಿರಕ್ಕೆ ಹೋಗುತ್ತಲೂ ಭಟ್ಟರು ಕಾಯಿ ಒಡೆದು, ಹೋಳನ್ನು ಹರಿವಾಣದಲ್ಲಿಟ್ಟು ಕೊಟ್ಟರು.

‘ಹಟ್ಟಿಯ ಹಣೆ’ಗಿಡಲು ಪ್ರಸಾದವನ್ನೂ ಕೊಟ್ಟರು. ಎಲ್ಲವನ್ನೂ ತೆಗೆದುಕೊಂಡು ಅಣ್ಣಯ್ಯ ಮನೆಗೆ ಹೊರಡಲು ‘ಏಯ್ ಮಣಿಯ, ಮುಕ್ಳಿ ತಿರ್‌ಸ್ಕಂಡ್ ಹ್ವೋತ್ತೆಲ್ಲಿಗೆ? ದಕ್ಷಿಣೆ ಎಲ್ಲಿತ್ತ್, ದಕ್ಷಿಣೆ ದಕ್ಷಿಣೆ?’ ಎಂದರು. ಅದುವರೆಗೂ ಕೋಳಿರಣವನ್ನು ನೋಡಿ ಬೆಪ್ಪುಗಟ್ಟಿದಂತಿದ್ದ ಸಣ್ಣಣ್ಣಯ್ಯ. ಏನು ಕಂಡಿತೋ, ದಕ್ಷಿಣೆಗೆಂದು ಅಮ್ಮ ಕೊಟ್ಟ ಪಾವಲಿಯ ನೆನಪೇ ಆಗದೆ ಅದು ಮುಷ್ಟಿಯಲ್ಲಿದ್ದಂತೆಯೇ ‘ದಕ್ಷಿಣೆ ಬೇಕಾರೆ ದಕ್ಷಿಣ ದಿಕ್ಕಿಗ್ ಮುಖ ಮಾಡಿನಿ’ ಎಂದ.

ಎಂದವ ಹೆದರಿ ಅರೆಚಣ ಕೂಡ ನಿಲ್ಲದೆ ಆ ಎತ್ತರದ ದಿಡ್ಡನ್ನು ದಭಕ್ಕನೆ ಹಾರಿ ಮನೆಕಡೆ ಓಟಕಿತ್ತ. ಅವನ ಹಿಂದೆಯೇ ತಂಗಿಯರಾದ ನಾವೂ. ಖಂಡಿತವಾಗಿಯೂ ಭಟ್ಟರು ಬೆನ್ನಟ್ಟಿ ಬರುತ್ತಿದ್ದಾರೆಂಬ ಥತ್ತರ ಭೀತಿಯಲ್ಲಿ. ನಮ್ಮ ಓಟ ನಿಂತದ್ದು ಮನೆಯಂಗಳದಲ್ಲಿಯೇ. ಮನೆಯಲ್ಲಿ ಎಲ್ಲರಿಗೂ ಅಣ್ಣಯ್ಯ ಕೊಟ್ಟ ಉತ್ತರ ಕೇಳಿ ನಗುವೇ ನಗು. ‘ಇವ್ವನ್ನೆಲ್ಲ ಅಲ್ಲಿಗ್ ಯಾಕ್ ಕರ್ಕಂಡ್ ಹೋದೆ?’ -ಬೈಗಳವೂ.
*
ನಮ್ಮದೇ ಉಮ್ಮಲ್ತಿಭೂತ, ಹಾಯ್ಗುಳಿ, ಮೂಡುಭೂತ, ಚಿಕ್ಕಮ್ಮಭೂತ, ಮರುಳುಚಿಕ್ಕು, ಬೊಬ್ಬರ್ಯ, ತೆಂಕಲಾಯಿನ ಭೂತಗಳು...  ಒಂದೆ ಎರಡೆ! ವಿದ್ಯುದ್ದೀಪ ಬರುತ್ತಲೂ ಬೆಳಕಿಗೆ ಹೆದರಿ ಅವು ಎದುರು ಬಾರದೆ ಅಡಗಿರುವವಂತೆ. ಅವು ಇದ್ದರೂ ಕಷ್ಟ; ನಂಬುವುದಿಲ್ಲ, ಎಲ್ಲ ಹೋಗಿರೆಂದು ಕಳಿಸಿಕೊಡುವೆವೆ? ಬದುಕಿನ ಕಲಕಲಗಳೇ ಕಥೆಗಳೇ ಮಾಯಾಲೋಕದ ಒಂದು ವಯರ್ಲೆಸ್ ಕನೆಕ್ಶನ್ನೇ ಮಾಯವಾಗುವುದೋ ಬೇಸರ. (‘ಆದರೆ ಕೋಳಿಗಳು! ನೀ ಅವುಗಳ ಜಾಗದಲ್ಲಿ ಅವಾಗಿ ನಿಂತು ಮಾತಾಡು?’).

ಈಗಾಗಲೇ ಹಾಗೆ ಕೆಲವಾದರೂ ಹೊರಟು ಹೋಗಿಯಾಗಿದೆ. ಮನೆಮನೆಗಳ ಇರಸ್ತಿಕೆಯೇ ಬದಲಾಗಿದೆ, ಜಾನುವಾರು, ಗಬ್ಬ, ಕರು, ಕಸ ಒಂದೂ ಇಲ್ಲದ ಮೇಲೆ, ಅವಾದರೂ ಇದ್ದು ಮಾಡುವುದೇನು? ಬೆಳಂಜಾವ ಕೆಲಸಕ್ಕೆ ಹೊರಟ ಅಂತನೆಂಬವನನ್ನು ಹಿಂಬಾಲಿಸಿ ಬಂದ ಅಂಕದ ಕಟ್ಟೆಯ ಭೂತ, ಎಲ್ಲಿದೆಯೋ..

ವೃತ್ತಾಕಾರದ ಅಂಕದಕಟ್ಟೆ ಮಾತ್ರ ಮುಂಚಿನಂತೆಯೇ ಬಿಳೀನಾಮ ಎಳೆದುಕೊಂಡು ಯಜಮಾನನಿಗೆ ಕಾಯುತ್ತ ನಿಂತ ಸೇವಕನಂತೆ, ರಾತ್ರಿಹಗಲು ಒಂದಾದ ಬೆಳ್ಳಂಬೆಳಕಿನಲ್ಲಿ ಕಮ್ಮಗೆ ನಿಂತಿದೆ.

ಎಲ್ಲೇ ಇರಲಿ ಅವು, ಮಾತ್ರ ಒಮೊಮ್ಮೆ ಭಾಷೆಯ ಕಿಂಡಿಯಲ್ಲಿ ಉಪಮೆಗಳಾಗಿ ಹಣಿಕಿ ‘ನಾವಿಲ್ಲಿ ಹೀಗಿದ್ದೇವೆ’ ಎನ್ನುವುದನ್ನು ಮರೆತಿಲ್ಲ. ದಪ್ಪಮುಖರನ್ನು ಕಂಡಾಗೆಲ್ಲ ಹೋಲಿಸಿ ಮಾತೊಗೆಯಲು ಎಂದೂ ಕಣ್ಣಲ್ಲಿ ಕಾಣದ ಉಮ್ಮಲ್ತಿಭೂತ ಕಣ್ಣೆದುರು ಬರುವಂತೆ. ಭಾಷೆ ಕರಟುವವರೆಗೂ ಹೀಗೆ ಅವು ಇದ್ದೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT