ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಇಚ್ಛಾಶಕ್ತಿ ಅಗತ್ಯ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ರಾಜ್ಯದ ಹಿಂದುಳಿದ 114 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಪತ್ತೆ ಹಚ್ಚಿ ಯಾವ್ಯಾವ ತಾಲ್ಲೂಕು ಯಾವ್ಯಾವ ಕ್ಷೇತ್ರದಲ್ಲಿ ಹಿಂದುಳಿದಿವೆ, ಆ ತಾಲ್ಲೂಕುಗಳಲ್ಲಿ ಯಾವ್ಯಾವ ರೀತಿಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು ಎಂಬ ವಿಸ್ತೃತ ವರದಿಯನ್ನು ಡಾ. ಡಿ.ಎಂ.ನಂಜುಂಡಪ್ಪ ಸಮಿತಿ 2002ರಲ್ಲಿ ಸರ್ಕಾರಕ್ಕೆ ಸಲ್ಲಿಸಿದಾಗ ಇನ್ನೇನು ಈ ತಾಲ್ಲೂಕುಗಳ ಬವಣೆಗಳು ನೀಗಿ ಅವು ಅಭಿವೃದ್ಧಿ ಹೊಂದಿ ಕಂಗೊಳಿಸಲಿವೆ ಎಂಬ ಭಾವನೆ ಮೂಡಿಸಿತ್ತು. ಏಕೆಂದರೆ ಈ ಸಮಿತಿಯನ್ನು ರಚಿಸಿದ್ದ ಸರ್ಕಾರವೇ ಇನ್ನೂ ಅಧಿಕಾರದಲ್ಲಿತ್ತು. ಹಾಗಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರ ಗಂಭೀರ ಪ್ರಯತ್ನ ನಡೆಸಲಿದೆ ಎಂಬ ವಿಶ್ವಾಸವೂ ಇತ್ತು.

2002ರ ಬಜೆಟ್‌ನಲ್ಲಿಯೇ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರಥಮ ಕಂತು ಹಣ ಬಿಡುಗಡೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮತಿಯು ಮೊದಲೇ ಮಧ್ಯಂತರ ವರದಿಯನ್ನು ನೀಡಿತ್ತಾದರೂ ಆಗಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಮಾತ್ರ ಇದನ್ನು ಬಜೆಟ್‌ನಲ್ಲಿ ಸೇರಿಸಲಿಲ್ಲ. ಈ ಮೂಲಕ ಜನರ ನಂಬಿಕೆಗೆ ತಕ್ಕಂತೆ ಸರ್ಕಾರ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ನಿದರ್ಶನವೂ ಆಯಿತು. 

2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೂ ಮತ್ತೆ ಮುಖ್ಯಮಂತ್ರಿ ಸ್ಥಾನ ಅದೇ ಪಕ್ಷಕ್ಕೆ ಲಭಿಸಿತು. ಉತ್ತರ ಕರ್ನಾಟಕದ ಅದರಲ್ಲೂ ಅತಿ ಹೆಚ್ಚು ಹಿಂದುಳಿದಿರುವ ಗುಲ್ಬರ್ಗ ವಿಭಾಗದವರೇ ಆದ ಧರಂಸಿಂಗ್ ಮುಖ್ಯಮಂತ್ರಿಯಾದರೂ ನಂಜುಂಡಪ್ಪ ವರದಿ ಜಾರಿಗೆ ಲಕ್ಷ್ಯ ನೀಡಲಿಲ್ಲ. ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಪಾಲು ಪಡೆದಿದ್ದ ಜನತಾದಳ (ಎಸ್) ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಬಂದ ಜನತಾದಳ (ಎಸ್)-ಬಿಜೆಪಿ ಸಮ್ಮಿಶ್ರ ಸರ್ಕಾರ ಈ ಕಡೆ ಗಮನಹರಿಸಿ ಹಣ ಬಿಡುಗಡೆಗೆ ಮುಂದಾಯಿತು. ತದನಂತರದ ವರ್ಷಗಳಲ್ಲೂ ಬಿಜೆಪಿ ಸರ್ಕಾರ ಹಣ ಬಿಡುಗಡೆಯನ್ನು ಘೋಷಿಸಿತು.

ಸಮಿತಿಯ ಆಶಯದಂತೆ ರಾಜ್ಯ ಸರ್ಕಾರ ಕೆಲಸ ಮಾಡಿದ್ದರೆ 2010ರ ವೇಳೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿ ಹಿಂದುಳಿದಿದ್ದ ತಾಲ್ಲೂಕುಗಳೆಲ್ಲವೂ ನಳನಳಿಸಬೇಕಿತ್ತು. ಏಕೆಂದರೆ ಸಮತಿಯು ಎಂಟು ವರ್ಷದಲ್ಲಿ ಒಟ್ಟು ರೂ. 16,000 ಕೋಟಿಯನ್ನು ಹೆಚ್ಚುವರಿಯಾಗಿ (ಬಜೆಟ್‌ನಲ್ಲಿ ನೀಡುವ ಹಣವನ್ನು ಹೊರತುಪಡಿಸಿ) ವಿಶೇಷ ಅಭಿವೃದ್ಧಿ ಯೋಜನೆಗೆ ಒದಗಿಸಿ, ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸುವ ಮೂಲಕ ಅಸಮತೋಲನ ನಿವಾರಿಸಬೇಕು ಎಂದು ಶಿಫಾರಸು ಮಾಡಿತ್ತು.

ವಿಪರ್ಯಾಸವೆಂದರೆ 2013 ಆದರೂ ಇನ್ನೂ ಸಮಿತಿಯ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಅಷ್ಟೇ ಏಕೆ, ಐದು ವರ್ಷಗಳಷ್ಟು ತಡವಾಗಿ, 2007-08ನೇ ಸಾಲಿನಿಂದ ಮುಂದಿನ ನಾಲ್ಕು ವರ್ಷಗಳವರೆಗೆ ಸರ್ಕಾರ ಬಿಡುಗಡೆ ಮಾಡುವುದಾಗಿ ಘೋಷಿಸಿದ ಹಣ ಕೂಡ ಪೂರ್ಣವಾಗಿ ಬಿಡುಗಡೆಯಾಗಲಿಲ್ಲ. ಜತೆಗೆ ಬಿಡುಗಡೆಯಾದ ಹಣವೂ ಸಂಪೂರ್ಣವಾಗಿ ಬಳಕೆಯಾಗಲಿಲ್ಲ ಎಂಬ ಅಂಶವನ್ನು `ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ಡೆವೆಲಪ್‌ಮೆಂಟ್ ರಿಸರ್ಚ್' ಅಧ್ಯಯನ ಸ್ಪಷ್ಟಪಡಿಸುತ್ತದೆ. ನಂತರದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.

ಎಂಟು ವರ್ಷಗಳ ಕಾಲ ಪ್ರತಿ ವರ್ಷ ರೂ. 2000 ಕೋಟಿಯಂತೆ ಹೆಚ್ಚುವರಿಯಾಗಿ ಹಿಂದುಳಿದ ತಾಲ್ಲೂಕುಗಳ ವಿಶೇಷ ಅಭಿವೃದ್ಧಿ ಯೋಜನೆಗೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಅತ್ಯಂತ ಹಿಂದುಳಿದ 39 ತಾಲ್ಲೂಕುಗಳ ಪೈಕಿ 26 ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಈ ಕಾರಣಕ್ಕಾಗಿಯೇ ಅಲ್ಲಿಗೆ ಹೆಚ್ಚಿನ ಅನುದಾನ ಸಲ್ಲುವುದು ನ್ಯಾಯ. ಇದನ್ನು ನಂಜುಂಡಪ್ಪ ಸಮಿತಿ ಸ್ಪಷ್ಟವಾಗಿ ಗುರುತಿಸಿದ್ದು ಉತ್ತರ ಕರ್ನಾಟಕಕ್ಕೆ (ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗ) ಶೇ 60ರಷ್ಟು ಅನುದಾನ ಕೊಡಬೇಕು ಎಂದು ಹೇಳಿದೆ. ಆದರೆ ಹೆಚ್ಚಿನ ಹಣ ಉತ್ತರ ಕರ್ನಾಟಕಕ್ಕೆ ಹೋಗುತ್ತದೆ ಎನ್ನುವ (ಒಳ) ಕಾರಣವೇ ವರದಿ ಅನುಷ್ಠಾನಕ್ಕೆ ದೊಡ್ಡ ಅಡ್ಡಿ ಆಗಿದ್ದರೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಎನ್ನುವುದು ಕನ್ನಡಿಯೊಳಗಿನ ಗಂಟಾಗಿಯೇ ಉಳಿಯುತ್ತದೆ ಅಷ್ಟೇ.

ತೀರಾ ಹಿಂದುಳಿದ ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ವರದಿ ಒಂದು ನೀಲನಕ್ಷೆಯೇ ಸರಿ. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವವರೆಗೆ ಪ್ರಾದೇಶಿಕ ಅಸಮತೋಲನದ ಕೂಗು ಕೇವಲ ಭಾವನಾತ್ಮಕ ಸಂಗತಿಯಾಗಿತ್ತು. ನಂಜುಂಡಪ್ಪ ಸಮಿತಿ ಅದಕ್ಕೆ ರಕ್ತ-ಮಾಂಸ ತುಂಬಿ ಜೀವ ಕೊಟ್ಟಿತು. ಈಗ ನೀಲನಕ್ಷೆ ಕೈಯಲ್ಲಿದ್ದರೂ, ಹೇಗೆ, ಯಾವ್ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕು ಎಂಬುದು ಸ್ಪಷ್ಟವಾಗಿದ್ದರೂ ಸರ್ಕಾರ  ಸಮರ್ಪಕವಾಗಿ ಅನುದಾನ ಒದಗಿಸುತ್ತಿಲ್ಲ. ಹಾಗಾಗಿ ಅನುಷ್ಠಾನ ತೃಪ್ತಿಕರವಾಗಿಲ್ಲ.

ಆದರೆ ನಂಜುಂಡಪ್ಪ ಸಮಿತಿಯ ವರದಿಯ ಅನುಷ್ಠಾನಕ್ಕೆ ಏಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಈ ಬಗ್ಗೆ ಯಾರೂ ಕೇಳುತ್ತಿಲ್ಲ. ಬಿಡುಗಡೆಯಾದ ಹಣವೂ ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗಿದೆಯೇ ಎಂಬುದನ್ನೂ ಯಾರೂ ಪರಿಶೀಲಿಸುತ್ತಿಲ್ಲ. ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಶಿಲ್ ನಮೋಶಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿದ್ದರು. ಈ ಸಮಿತಿ ಕೆಲವು ಸಭೆಗಳನ್ನು ನಡೆಸಿ ಅಭಿವೃದ್ಧಿ ಬಗ್ಗೆ ಪರಿಶೀಲಿಸಿತ್ತು. ಆದರೆ ಸರ್ಕಾರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಹಣ ವಿಶೇಷ ಅಭಿವೃದ್ಧಿ ಯೋಜನೆಗೆ ಬಿಡುಗಡೆಯಾಗದಿದ್ದಾಗ ಒತ್ತಡ ಹೇರುವ ಕೆಲಸವಾಗಲಿಲ್ಲ.

ಉತ್ತರ ಕರ್ನಾಟಕದ (ಮುಂಬೈ-ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕ) ಒಟ್ಟು 96 ಶಾಸಕರು ವಿಧಾನಸಭೆಯಲ್ಲಿದ್ದಾರೆ. ತಮ್ಮ ಭಾಗದಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ತಮ್ಮ ತಾಲ್ಲೂಕು ಅಥವಾ ತಮ್ಮ ಜಿಲ್ಲೆಯ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂಬ ಛಲ ಚುನಾಯಿತ ಪ್ರತಿನಿಧಿಗಳಲ್ಲಿ ಇಲ್ಲದಿರುವುದು ಎದ್ದು ಕಾಣುತ್ತಿದೆ. ಜತೆಗೆ ಈ ಭಾಗದ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಅಗಾಧವಾಗಿದೆ. ಹಾಗಾಗಿಯೇ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ಚುನಾವಣೆ ಸಂದರ್ಭದಲ್ಲಿ ಮತಯಾಚಿಸುವಾಗ ರಾಜಕಾರಣಿಗಳು ಬರೀ ಅಭಿವೃದ್ಧಿ ವಿಷಯವನ್ನೇ ಮಾತನಾಡುತ್ತಾರಾದರೂ ಯಾವ ರೀತಿಯ ಅಭಿವೃದ್ಧಿ ಎಂಬುದು ಅವರ ಮನದಲ್ಲಿ ಇರುವುದಿಲ್ಲ. ಮೊದಲು `ಅಭಿವೃದ್ಧಿ'ಯನ್ನು ವ್ಯಾಖ್ಯಾನಿಸಿಕೊಳ್ಳುವುದು ಮತ್ತು ವಿವರಿಸುವುದು ಮುಖ್ಯ. ಅಭಿವೃದ್ಧಿ ಎಂಬುದು ರಸ್ತೆಗಳೇ? ಕಟ್ಟಡಗಳೇ ? ಶಿಕ್ಷಣವೇ? ಮೂಲಸೌಕರ್ಯಗಳೇ? ಉದ್ಯೋಗಾವಕಾಶಗಳೇ? ನೀರಾವರಿಯೇ?  ರಿಯಾಯಿತಿ ದರದ ಪಡಿತರವೇ ? ಯಾವ ಯೋಜನೆಗಳ ಅಗತ್ಯವಿದೆ?  ಎಂಬ ಬಗ್ಗೆ ಸ್ಥಳೀಯವಾಗಿ ಅಲ್ಲಿನ ಶಾಸಕರೇ ಯೋಚಿಸಬೇಕು. ಈ ಕೆಲಸ ಇಲ್ಲಿ ಆಗುತ್ತಿಲ್ಲ. ಇಂತಹವರಿಗೆಲ್ಲ ನಂಜುಂಡಪ್ಪ ವರದಿ ಒಂದು ಭಗವದ್ಗೀತೆ ಅಥವಾ ಬೈಬಲ್ ಅಥವಾ ಕುರಾನ್. ಆದರೆ ಅದನ್ನು ನೋಡುವ, ತಿಳಿದುಕೊಳ್ಳುವ ವ್ಯವಧಾನ ಅವರಲ್ಲಿ ಇಲ್ಲ.

ಹೋಗಲಿ, ಸರ್ಕಾರವೇ ನಂಜುಂಡಪ್ಪ ವರದಿ ಜಾರಿಗೆ ನಿಜವಾಗಲೂ ಆಸಕ್ತಿ ತೋರಿದ್ದರೆ ಆಯಾ ಜಿಲ್ಲಾ ಪಂಚಾಯ್ತಿ ಅಥವಾ ತಾಲ್ಲೂಕು ಪಂಚಾಯ್ತಿಗಳಿಂದ ಶಿಫಾರಸು ಆಧರಿಸಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಿ ಅವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಮುಂದಾಗಬಹುದಿತ್ತು. ಆ ಮೂಲಕ ನಿರ್ದಿಷ್ಟ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪರಿಪೂರ್ಣಗೊಳಿಸಲೂ ಸಾಧ್ಯವಿತ್ತು. ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದ ವೇಗವನ್ನು ನೋಡಿದರೆ ಸರ್ಕಾರಕ್ಕೂ ಈ ಬಗ್ಗೆ ಆಸಕ್ತಿ ಇಲ್ಲ ಎನಿಸುತ್ತದೆ.

ನಂಜುಂಡಪ್ಪ ಸಮಿತಿ ವರದಿ ಸಲ್ಲಿಸಿ 11 ವರ್ಷಗಳಾಗಿವೆ. ವರದಿ ಸಿದ್ಧಪಡಿಸಿದ ಸಂದರ್ಭದಲ್ಲಿನ ದರಗಳನ್ನು ಆಧರಿಸಿ ಸಮಿತಿಯು ವಿವಿಧ ವಿಶೇಷ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನಿಗದಿಪಡಿಸಿದ್ಧ ಹಣ ಈಗ ಬಹುತೇಕ ದುಪ್ಪಟ್ಟು ಆಗಿದೆ. ವರದಿ ಆಧರಿಸಿ ಹಣ ಬಿಡುಗಡೆ ಮಾಡಿದರೆ ಈಗ ಅದು ಯಾವುದಕ್ಕೂ ಸಾಲದು. ಹಿಂದುಳಿದ ತಾಲ್ಲೂಕುಗಳ ಬಗ್ಗೆ ಸರ್ಕಾರಕ್ಕೆ ನಿಜವಾದ ಕಳಕಳಿ ಇದ್ದರೆ ನಂಜುಂಡಪ್ಪ ಸಮಿತಿ ನೀಡಿರುವ ಖರ್ಚು-ವೆಚ್ಚ ಪರಿಷ್ಕೃತವಾಗಬೇಕು.

ಅಷ್ಟಕ್ಕೂ ಈ ವಿಶೇಷ ಅನುದಾನ ಎನ್ನುವುದು ಕೇವಲ ತಾರತಮ್ಯ ನಿವಾರಣೆಗಾಗಿ, ಹಿಂದುಳಿದ ತಾಲ್ಲೂಕುಗಳು ಚೇತರಿಸಿಕೊಳ್ಳಲಿಕ್ಕಾಗಿ ಕೊಡುವ ಒಂದು ಸಣ್ಣ ಬಲವಷ್ಟೆ. ಆ ಬಲವು ಆರು ದಶಕಕ್ಕೂ ಹೆಚ್ಚು ಕಾಲ ಹಿಂದುಳಿದವರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡವರ ನೋವನ್ನು ಶಮನ ಮಾಡುವ ಸಣ್ಣ ಪ್ರಯತ್ನ. ಹಾಗಾಗಿ ಸರ್ಕಾರ ನಿಗದಿತ ಯೋಜನೆಯ ಅನುಷ್ಠಾನಕ್ಕೆಂದೇ ಹಣವನ್ನು ಬಿಡುಗಡೆ ಮಾಡಬೇಕು. ಆಗ ಮಾತ್ರ ಹಿಂದುಳಿದ ತಾಲ್ಲೂಕುಗಳ ಹಣೆಪಟ್ಟಿಯನ್ನು ಕಿತ್ತುಹಾಕಿ ಇತರೆ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಮಟ್ಟಕ್ಕೆ ಏರಲೂ ಸಾಧ್ಯವಾಗುತ್ತದೆ. ಕನಿಷ್ಠ ಆ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT