ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಜಾತ್ಯತೀತ ನೀತಿಗಳ ಮೇಲಿನ ಮೊದಲ ಪ್ರಹಾರ!

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಹಜ್ ಯಾತ್ರಿಗಳಿಗೆ ನೀಡುವ ಸಬ್ಸಿಡಿಯನ್ನು ಸ್ಥಗಿತಗೊಳಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ನಕಲಿ ಜಾತ್ಯತೀತತೆ ಮತ್ತು ಅಲ್ಪಸಂಖ್ಯಾತರ ಓಲೈಕೆಯ ದುರ್ವಾಸನೆ ಬೀರುತ್ತಿದ್ದ ನೀತಿಯೊಂದನ್ನು ಸರಿಪಡಿಸಲು ಇಟ್ಟಿರುವ ಮೊದಲ ಪ್ರಮುಖ ಹೆಜ್ಜೆ. ಕಳೆದ ಏಳು ದಶಕಗಳ ಅವಧಿಯಲ್ಲಿ ಬಹುತೇಕ ಎಲ್ಲಾ ಪ್ರಮುಖ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ನಡೆಸಿವೆ. ಹೀಗಿದ್ದರೂ, ಯಾವುದೇ ಪಕ್ಷ ಅಥವಾ ಯಾವುದೇ ಮೈತ್ರಿಕೂಟ ಈ ಸಬ್ಸಿಡಿಯ ವಿಷಯ ಮುಟ್ಟಲು ಧೈರ್ಯ ತೋರಿಸಿರಲಿಲ್ಲ– ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವವರಂತೆ ತಾವು ಕಾಣಿಸಿಕೊಳ್ಳಬಾರದು ಎಂಬ ಉದ್ದೇಶದಿಂದ.

ಆದರೆ, ಈ ಒಂದು ಅಪ್ರಿಯ ಕೆಲಸ ಮಾಡಲು ಮೋದಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಹಜ್‌ ಯಾತ್ರಿಗಳಿಗೆ ನೀಡುವ ಸಬ್ಸಿಡಿಯನ್ನು ಹತ್ತು ವರ್ಷಗಳಲ್ಲಿ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ 2012ರಲ್ಲೇ ಸೂಚಿಸಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಸಬ್ಸಿಡಿ ನಿಲ್ಲಿಸುವ ಕಾನೂನು ಮತ್ತು ನೈತಿಕ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಆದೇಶದ ಮೂಲಕ ದೊರೆಯಿತು. ಕೋರ್ಟ್‌ ನಿರ್ದೇಶನದ ಅನುಸಾರ, ಹಜ್ ಯಾತ್ರಿಗಳಿಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಸಾಮಾಜಿಕ ಅಭಿವೃದ್ಧಿ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಘೋಷಿಸಿದೆ. ಈ ಹಣವನ್ನು ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಶಿಕ್ಷಣ ಹಾಗೂ ಅವರ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ.

1990ರಲ್ಲಿ ₹ 10 ಕೋಟಿ ಆಗಿದ್ದ ಸಬ್ಸಿಡಿ ಮೊತ್ತ 2012ರ ವೇಳೆಗೆ ₹ 836 ಕೋಟಿಗಳಿಗೆ ಏರಿಕೆ ಕಂಡಿತ್ತು. 1990ರಲ್ಲಿ ಅಂದಾಜು 20 ಸಾವಿರ ಇರುತ್ತಿದ್ದ ಯಾತ್ರಿಗಳ ಸಂಖ್ಯೆ 2012ರ ವೇಳೆಗೆ 1.5 ಲಕ್ಷಕ್ಕೆ ಹೆಚ್ಚಳವಾಗಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ, ಹಜ್ ಸಬ್ಸಿಡಿ ಮೊತ್ತವನ್ನು ಸರ್ಕಾರ ಅಂದಾಜು ₹ 400 ಕೋಟಿಗಳಿಗೆ ಇಳಿಸಿದೆ.

ಕಾಂಗ್ರೆಸ್ ಪಕ್ಷ, ಅದರ ಮಿತ್ರರು ಮತ್ತು ಭಾರತೀಯ ಜನತಾ ಪಕ್ಷ ಹಾಗೂ ಅದರ ಸೈದ್ಧಾಂತಿಕ ಸ್ನೇಹಿತರ ನಡುವೆ ಹಜ್ ಸಬ್ಸಿಡಿ ವಿಚಾರವಾಗಿ ಚರ್ಚೆಗಳು, ಅಭಿಪ್ರಾಯ ಭೇದಗಳು ಬಹುಕಾಲದಿಂದ ಇವೆ. ಮೊದಲ ಗುಂಪಿನ ಪಕ್ಷಗಳು, ಅಂದರೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಯತ್ನಿಸುವ ಪಕ್ಷಗಳು, ಇಂತಹ ವಿಷಯಗಳನ್ನು ಮುಟ್ಟಲು ಯಾವತ್ತೂ ಹಿಂಜರಿದಿವೆ. ‘ಇಂತಹ ಸಬ್ಸಿಡಿ ನೀತಿಗಳು ನಕಲಿ ಜಾತ್ಯತೀತತೆಯ ಅತಿದೊಡ್ಡ ಸಂಕೇತ, ಇಂತಹ ಕ್ರಮಗಳು ನಿಜವಾದ ಜಾತ್ಯತೀತ ಹಾಗೂ ಪ್ರಜಾತಾಂತ್ರಿಕ ಧೋರಣೆಗಳಿಗೆ ವಿರುದ್ಧವಾಗಿವೆ’ ಎಂದು ಬಿಜೆಪಿಯನ್ನು ಬೆಂಬಲಿಸುವವರು ವಾದಿಸುತ್ತ ಬಂದಿದ್ದಾರೆ. ಇವರು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂದೂ ಆಗ್ರಹಿಸುತ್ತಿದ್ದಾರೆ.

‘ನಾವು ದೇಶದ ಎಲ್ಲ ಮುಸ್ಲಿಮರ ಪರವಾಗಿ ಮಾತನಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿಲ್ಲ, ಮುಸ್ಲಿಮರ ‍ಪಾಲಿಗೆ ಒಳ್ಳೆಯ ಅಥವಾ ಕೆಟ್ಟ ಧಾರ್ಮಿಕ ಆಚರಣೆಗಳು ಯಾವುವು ಎಂಬುದನ್ನು ನಾವು ಹೇಳುವುದು ನಮ್ಮ ಮಿತಿಗಳನ್ನು ಮೀರಿದಂತೆ ಆಗುತ್ತದೆ’ ಎಂಬ ಮಾತನ್ನು ಹಜ್ ಸಬ್ಸಿಡಿ ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತು. ‘ಹಜ್ ಯಾತ್ರೆಗೆ ತೆರಳುವ ಉದ್ದೇಶದಿಂದ ಹಜ್ ಸಮಿತಿಗೆ ಅರ್ಜಿ ಸಲ್ಲಿಸುವ ಬಹುತೇಕ ಮುಸ್ಲಿಮರಿಗೆ ತಮ್ಮ ಯಾತ್ರೆಯ ಹಿಂದಿರುವ ಆರ್ಥಿಕ ವಿಚಾರಗಳು ಗೊತ್ತಿರಲಿಕ್ಕಿಲ್ಲ. ತಮ್ಮ ಯಾತ್ರೆಗೆ ಗಣನೀಯ ಮೊತ್ತವು ಸರ್ಕಾರದಿಂದ ಬರುತ್ತಿದೆ ಎಂಬುದು ಗೊತ್ತಾದಾಗ, ಅವರಲ್ಲಿ ಬಹುತೇಕರು ಸಂತೋಷಪಡಲಿಕ್ಕಿಲ್ಲ’ ಎಂದು ಕೋರ್ಟ್‌ ಹೇಳಿತ್ತು. ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಮಾತುಗಳನ್ನು ಉದಾಹರಿಸಿದ್ದ ಕೋರ್ಟ್‌, ಯಾತ್ರೆಗೆ ಸಬ್ಸಿಡಿ ನೀಡುವುದು ಒಳ್ಳೆಯ ಕ್ರಮ ಅಲ್ಲ ಎಂದಿತ್ತು. ಸಬ್ಸಿಡಿ ನೀಡುವುದನ್ನು ಹತ್ತು ವರ್ಷಗಳಲ್ಲಿ ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿತ್ತು. ಸಬ್ಸಿಡಿಗೆ ನೀಡುವ ಮೊತ್ತವನ್ನು ಸಮುದಾಯದ ಶಿಕ್ಷಣ ಮತ್ತು ಸಮುದಾಯದ ಸಾಮಾಜಿಕ ಅಭಿವೃದ್ಧಿಯ ಇತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದೂ ಕೋರ್ಟ್‌ ಹೇಳಿತ್ತು.

ಹಜ್ ಯಾತ್ರೆಯ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸಿದ್ದು ಹಲವಾರು ಸಂಕೀರ್ಣ ಪರಿಣಾಮಗಳನ್ನು ಉಂಟುಮಾಡಿತ್ತು, ಸರ್ಕಾರವು ವಿವಿಧ ವಿಷಯಗಳಲ್ಲಿ ನೀತಿಗಳನ್ನು ರೂಪಿಸುವಂತೆ ಮಾಡಿತ್ತು. ಉದಾಹರಣೆಗೆ: 1967ರಿಂದ ಸರ್ಕಾರವು ಹಜ್‌ಗೆ ಪ್ರತಿವರ್ಷವೂ ಒಂದು ನಿಯೋಗವನ್ನು ಕಳುಹಿಸುತ್ತಿತ್ತು. ಅಲ್ಲಿ ನಮ್ಮ ದೇಶದ ಬಗ್ಗೆ ಸದಭಿಪ್ರಾಯ ಮೂಡಲಿ ಎಂಬ ಉದ್ದೇಶದಿಂದ ಕಳುಹಿಸುತ್ತಿದ್ದ ನಿಯೋಗ ಇದು. 1965ರಲ್ಲಿ ನಡೆದ ಭಾರತ – ಪಾಕಿಸ್ತಾನ ನಡುವಣ ಯುದ್ಧದ ನಂತರ, ಹಜ್ ಯಾತ್ರೆಯನ್ನು ಪಾಕಿಸ್ತಾನವು ಭಾರತ ವಿರೋಧಿ ಪ್ರಚಾರಗಳಿಗೆ ಬಳಸಿಕೊಳ್ಳಲು ಯತ್ನಿಸಿದ ಪರಿಣಾಮವಾಗಿ, ಆ ಅಪಪ್ರಚಾರವನ್ನು ಎದುರಿಸಲು ಭಾರತವು ನಿಯೋಗವನ್ನು ಕಳುಹಿಸಲು ಆರಂಭಿಸಿತು ಎಂದು ಕೋರ್ಟ್‌ ಉಲ್ಲೇಖಿಸಿತ್ತು. ಆದರೆ ಈಗ ಆ ಸಮಸ್ಯೆ ಇಲ್ಲ. ಏಕೆಂದರೆ ಪಾಕಿಸ್ತಾನವು ಅಲ್ಲಿಗೆ ತನ್ನ ನಿಯೋಗವನ್ನು ಕಳುಹಿಸುತ್ತಿಲ್ಲ. ಭಾರತ ಕಳುಹಿಸುತ್ತಿದ್ದ ನಿಯೋಗದಲ್ಲಿ ಯಾರಿರಬೇಕು ಎಂಬುದನ್ನು ತೀರ್ಮಾನಿಸಲು ನಿಯಮಗಳು ಇಲ್ಲ ಎಂಬುದೂ ಒಂದು ತಕರಾರಿನ ಸ್ವರೂಪ ಪಡೆದಿತ್ತು.

‘ದೊಡ್ಡದಾದ, ನಿಯಮಗಳಿಲ್ಲದೆ ಆಯ್ಕೆ ಮಾಡಿದ ಸದಸ್ಯರು ಇರುವ ನಿಯೋಗವನ್ನು ಕಳುಹಿಸುವ ಮೂಲಕ’ ಅದರ ಮೂಲ ಉದ್ದೇಶವಾದರೂ ಈಡೇರುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಕೋರ್ಟ್‌ ಹೇಳಿತ್ತು. ಹಾಗಾಗಿ, ಹಜ್‌ಗೆ ನಿಯೋಗವನ್ನು ಕಳುಹಿಸುವ ಕೆಲಸವನ್ನು ನಿಲ್ಲಿಸುವಂತೆ ಅದು ಸರ್ಕಾರಕ್ಕೆ ಸೂಚಿಸಿತ್ತು. ನಿಯೋಗ ಕಳುಹಿಸುವ ಬದಲು, ಭಾರತದಿಂದ ಕೆಲವು ಆಯ್ದ ಗಣ್ಯ ಮುಸ್ಲಿಮರು ಅಲ್ಲಿಗೆ ಹೋಗುವಂತೆ ಮಾಡಿ, ಅವರು ಭಾರತವನ್ನು ಪ್ರತಿನಿಧಿಸುವಂತೆ ಸೌದಿ ಅರೇಬಿಯಾದಲ್ಲಿನ ಭಾರತದ ರಾಯಭಾರಿಯು ಮಾಡಬಹುದಾಗಿತ್ತು. ಹೀಗೆ ಮಾಡುವುದು, ‘ಯುಕ್ತವಲ್ಲದ ಅಂಶಗಳನ್ನು ಆಧರಿಸಿ ಆಯ್ಕೆಯಾಗುತ್ತಿದ್ದ ಸದಸ್ಯರಿರುವ ನಿಯೋಗವನ್ನು ಕಳುಹಿಸುವುದಕ್ಕಿಂತ’ ಉತ್ತಮ ಎಂದೂ ಕೋರ್ಟ್‌ ಹೇಳಿತ್ತು.

ಇದಲ್ಲದೆ, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಕೋಟಾ ನಿಗದಿ ಮಾಡುವ ವಿಚಾರವಾಗಿ ಸರ್ಕಾರದ ವಿರುದ್ಧ ಕೋರ್ಟ್‌ ಪ್ರಕರಣಗಳು ದಾಖಲಾಗಿದ್ದವು. ಈ ವಿಚಾರದಲ್ಲಿ ಕೂಡ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕಾಯಿತು. ಖಾಸಗಿ ಸಾರಿಗೆ ಸಂಸ್ಥೆಗಳ ಸಂಖ್ಯೆಯು ಆರು ವರ್ಷಗಳ ಅವಧಿಯಲ್ಲಿ 293ರಿಂದ 567ಕ್ಕೆ ಹೆಚ್ಚಳವಾಯಿತು ಎಂಬುದನ್ನು ಸುಪ್ರೀಂ ಕೋರ್ಟ್‌ ತನ್ನ ಒಂದು ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿತ್ತು. ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಇದೊಂದು ಲಾಭದಾಯಕ ವ್ಯವಹಾರ. ಸರ್ಕಾರಗಳ ನಡುವಿನ ಒಪ್ಪಂದದ ಅನ್ವಯ ಯಾವುದೇ ಖಾಸಗಿ ಸಾರಿಗೆ ಸಂಸ್ಥೆಗೆ ನೀಡುವ ಕೋಟಾ ಅಡಿ 50ಕ್ಕಿಂತ ಹೆಚ್ಚು ಹಜ್ ಯಾತ್ರಿಗಳು ಇರಬೇಕಾಗಿತ್ತು. ‘ಸಾಮಾನ್ಯವಾಗಿ, ಐವತ್ತು ಯಾತ್ರಿಗಳ ಕೋಟಾ ಅಂದರೆ, ₹ 35 ಲಕ್ಷದಿಂದ ₹ 50 ಲಕ್ಷದವರೆಗಿನ ಲಾಭ. ನೋಂದಣಿ ಮಾಡಿಸಿಕೊಳ್ಳುವ ಯಾವುದೇ ಖಾಸಗಿ ಸಾರಿಗೆ ಸಂಸ್ಥೆಯ ಮಾಲೀಕ, ಎರಡು ತಿಂಗಳ ಅವಧಿಯಲ್ಲಿ ₹ 35 ಲಕ್ಷದಿಂದ ₹ 50 ಲಕ್ಷದವರೆಗೆ ಲಾಭ ಮಾಡಿಕೊಳ್ಳುತ್ತಿದ್ದ. ಅಷ್ಟು ಲಾಭ ಮಾಡಿಕೊಂಡ ನಂತರ, ವರ್ಷದ ಇನ್ನುಳಿದ ಅವಧಿಯನ್ನು ಯಾವುದೇ ಮೂಲದಿಂದ ದೊಡ್ಡ ಮಟ್ಟಿನ ವಹಿವಾಟು ದೊರೆಯದಿದ್ದರೂ ಆರಾಮವಾಗಿ ಕಳೆಯಬಹುದು’ ಎಂದು ನ್ಯಾಯಾಲಯ ಹೇಳಿತ್ತು.

ಹಜ್‌ನಲ್ಲಿ ಹಲವು ಹಂತಗಳಿವೆ, ಪ್ರತಿ ಹಂತವನ್ನೂ ಕಟ್ಟುನಿಟ್ಟಾಗಿ, ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದು ಕೋರ್ಟ್‌ ಹೇಳಿತ್ತು. ಯಾತ್ರೆಯ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದವರನ್ನು, ರೋಗಪೀಡಿತರಾದವರನ್ನು ಸಾರಿಗೆ ಸಂಸ್ಥೆಯವರು ಮಧ್ಯದಲ್ಲೇ ಬಿಟ್ಟುಹೋದ ವರದಿಗಳು ಇವೆ. ಹಜ್ ಯಾತ್ರಿಗಳ ಹಿತರಕ್ಷಿಸುವ ನಿಟ್ಟಿನಲ್ಲಿ, ಖಾಸಗಿ ಸಂಸ್ಥೆಗಳ ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸುವುದು ಒಳ್ಳೆಯದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ಕೇಂದ್ರ ಸರ್ಕಾರದ ಒಟ್ಟು ಬಜೆಟ್‌ನ ಗಾತ್ರವನ್ನು ಪರಿಗಣಿಸಿದರೆ ₹ 800 ಕೋಟಿ ದೊಡ್ಡ ಮೊತ್ತವೇನೂ ಅಲ್ಲದಿರಬಹುದು. ಆದರೆ, ವಿವಿಧ ಧರ್ಮಗಳಿಗೆ ಸೇರಿದವರನ್ನು ಕೇಂದ್ರ ಸರ್ಕಾರವು ಸಮಾನವಾಗಿ ಕಾಣುತ್ತದೆ ಎಂಬ ಗಟ್ಟಿ ಸಂದೇಶವನ್ನು ಇದು ರವಾನಿಸುತ್ತದೆ. ಸದಭಿಪ್ರಾಯ ಮೂಡಿಸಲು ಇರುವ ನಿಯೋಗವನ್ನು ಸೌದಿ ಅರೇಬಿಯಾಕ್ಕೆ ಕಳುಹಿಸುವುದನ್ನು ನಿಲ್ಲಿಸುವ ಅಧಿಕಾರ ಕೂಡ ಈಗ ಕೇಂದ್ರಕ್ಕೆ ಇದೆ. ಇಂತಹ ಕ್ರಮಗಳು, ಶುದ್ಧ ಧಾರ್ಮಿಕ ಚಟುವಟಿಕೆಗಳಿಂದ ಹೊರಬರಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತವೆ. ಇದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವೆ ಸೌಹಾರ್ದ ಭಾವ ಮೂಡಿಸುವ ನಿಟ್ಟಿನಲ್ಲಿ, ಸರ್ಕಾರವು ‘ಎಲ್ಲರ ಜೊತೆಗೂಡಿ, ಎಲ್ಲರ ಅಭಿವೃದ್ಧಿ’ಯಲ್ಲಿ ಬದ್ಧತೆ ಹೊಂದಿದೆ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಇಟ್ಟ ಒಂದು ಹೆಜ್ಜೆ ಕೂಡ ಹೌದು.

(ಲೇಖಕ ‘ಪ್ರಸಾರ ಭಾರತಿ’ಯ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT