ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ನೋವುಗಳು ತೀರಲಿಲ್ಲ

Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ದೇವನೂರು ಒಲ್ಲೆ ಎಂದ ಸಮ್ಮೇಳನ. ಸಿದ್ಧಲಿಂಗಯ್ಯ ಒಪ್ಪಿಕೊಂಡ ಸಮ್ಮೇಳನ. ಕಸಾಪದ ಶತಾಯುಷ್ಯ ಸಮ್ಮೇಳನ. ಎಂದಿನ ಮೆರವಣಿಗೆ, ಉದ್ಘಾಟನೆ, ಗೋಷ್ಠಿ, ಸನ್ಮಾನ, ಸಂವಾದ, ಮನರಂಜನೆ ಮತ್ತು ಸಮಾರೋಪಗಳ ಸರಪಳಿಯ ಅಖಿಲ ಭಾರತ ಎಂಬತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಮೈದಾನದಲ್ಲಿ ಆಟವಾಡುವ ತನ್ನ ಮಕ್ಕಳ ಸಂಭ್ರಮ, ಸಂತೋಷ, ಹಾರಾಟ, ನೂಕಾಟ, ಜಗಳ, ವಾಗ್ವಾದಗಳನ್ನು ತಾಯ ಮಂದಸ್ಮಿತ ನೋಟದಿಂದ ಸುಮ್ಮನೆ ನೋಡುತ್ತಾ ನಿಂತ ಬಾಹುಬಲಿಯ ದೈವಾಧ್ಯಕ್ಷತೆಯ ಶ್ರವಣಬೆಳಗೊಳದ ಸಮ್ಮೇಳನ.

ಸಮ್ಮೇಳನವನ್ನು ಜರಿಯುವುದು, ಅದರ ನಿರುಪಯುಕ್ತತೆ ಬಗ್ಗೆ ಮಾತನಾಡುವುದು ಸುಲಭ. ಅರ್ಥಪೂರ್ಣ ಪರ್ಯಾಯ ಸೂಚಿಸುವುದು ಕಷ್ಟ. ಕೆಲವರು ಸೂಚಿಸುವ ಹೊಸ ಪ್ರಯೋಗಗಳು ಬಹುಜನರಿಗೆ ಮೆಚ್ಚಿಗೆಯಾಗುವುದು ಇನ್ನೂ ಕಷ್ಟ. ಆದ್ದರಿಂದಲೇ ಔಪಚಾರಿಕ ಮಾತು, ನಡೆಗಳು ಮುಂದುವರಿದುಕೊಂಡು ಹೋಗುತ್ತವೆ. ಅದರಲ್ಲೂ ಸರ್ಕಾರ, ಸಾರ್ವಜನಿಕ ಹಣ, ಪ್ರಜಾಸತ್ತಾತ್ಮಕ ಸ್ವರೂಪಗಳಿರುವ ಸಾಹಿತ್ಯ ಸಮ್ಮೇಳನಗಳನ್ನು ಒಮ್ಮೆಲೇ ಹೊಸ ಆಕೃತಿಗಳಾಗಿ ಮಾಡಲಾಗುವುದಿಲ್ಲ. ಆದರೆ ಇದೊಂದೇ ನೆನಪಾಗಬಾರದು. ಸಿದ್ಧ ಚೌಕಟ್ಟಿನೊಳಗೇ ಹೊಸ ಚಿತ್ರ ಬರೆಯಬಹುದು. ನಾನು ಭಾಗವಹಿಸಿರಲಿಲ್ಲವಾದರೂ ಈ ಸಲದ ಚಿಕ್ಕನಾಯ್ಕನಹಳ್ಳಿಯ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಓದಿದಾಗ ಸೃಜನಾತ್ಮಕತೆ ಎದ್ದು ತೋರುತ್ತಿತ್ತು.

ಎಲ್ಲ ಕಡೆ ಆಗುವ ಸಾಮಾನ್ಯ ತೊಂದರೆ ಸಮಯ ಪಾಲಿಸದಿರುವುದು, ಶುಷ್ಕ ವಾದಮಂಡನೆ ಮತ್ತು ‘ಗಣ್ಯರ’ ಉಪಸ್ಥಿತಿಗಳು. ನಮ್ಮಿಂದ ಹಣ ಬೇಕು ; ನಾವು ಬೇಡವೇ ? ನಮ್ಮ ಮಾತು ಬೇಡವೇ ? ಎನ್ನುವ ರಾಜಕಾರಣಿ- -–ಅಧಿಕಾರಿಗಳು, ಕರುಣಾಮಯಿಗಳಾಗಿ ವೇದಿಕೆಯ ಕೆಳಗೆ ಕುಳಿತರೆ ಸಮ್ಮೇಳನಕ್ಕೆ ಶೋಭೆ. ಹಾಗೆ ಕೂರುವ ಸಜ್ಜನರು ಕೆಲವರಿದ್ದರೂ ಅವರು ಸಭೆಗೆ ಆಗಮಿಸುತ್ತಿದ್ದಂತೆಯೇ ನಡೆಯುತ್ತಿದ್ದ ಕಾರ್ಯಕ್ರಮವನ್ನು ತಟ್ಟನೆ ನಿಲ್ಲಿಸಿ, ಬಂದವರನ್ನು ಬಲವಂತವಾಗಿ ವೇದಿಕೆ ಹತ್ತಿಸಿ, ಕುರ್ಚಿ ಎಳೆದು ಹಾಕಿ, ಅವರ ಬಾಯಿಗೆ ಮೈಕ್ ಇಟ್ಟುಬಿಡುವ ಭಟ್ಟಂಗಿಗಳ ಉತ್ಸಾಹ ಅಪಾಯಕಾರಿ. ಈಗ ಬೇಕಾಗಿರುವ ಮೂಲಭೂತವಾದ ಶಿಸ್ತು ಎಂದರೆ, ನಿಗದಿಯಾದವರು ಮಾತ್ರ ವೇದಿಕೆ ಏರುವುದು, ನಿಗದಿಯಾದ ಅವಧಿಯಲ್ಲಿ ಮಾತು ಮುಗಿಸುವುದು ಮತ್ತು ಆಡುವ ಮಾತು ತಾಜಾತನದಿಂದ ಕೂಡಿರುವಂತೆ ನೋಡಿಕೊಳ್ಳುವುದು. ಇದು ವೇದಿಕೆಯ ಮೇಲೆ ಮಾತನಾಡುವವರೆಲ್ಲರ ಹೊಣೆಗಾರಿಕೆ ಆದಾಗ ಮಾತ್ರ ಸಮ್ಮೇಳನಗಳು ಅರ್ಥಪೂರ್ಣ.

ಒಳನಾಡಿನ, ಗಡಿನಾಡಿನ, ಹೊರನಾಡಿನ ಮತ್ತು ವಿದೇಶದಲ್ಲಿ ನಡೆಯುವ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ, ಆಗದಿದ್ದಾಗ ಅವುಗಳ ಮಾಹಿತಿಗಳನ್ನು, ವರದಿಗಳನ್ನು ಓದುತ್ತಾ ಬಂದ ನನಗೆ, ನನ್ನ ಅನುಭವದಲ್ಲಿ ತೀರಾ ಸವಕಲಾಗಿರುವ ಸಾಲು ಎಂದರೆ, ಸಮ್ಮೇಳನಗಳಲ್ಲಿ ಕುವೆಂಪು ಆತ್ಮವೇ ಉಸಿರುಕಟ್ಟುವಷ್ಟು ಬಳಕೆಯಾಗುವ ‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಕವಿತೆ. ಏನಾದರೊಂದು ಬಾಯಿಗೆ ಸಿಕ್ಕಿಬಿಟ್ಟರೆ ಅದನ್ನೇ ಜಗಿಯುತ್ತಾ ಹೋಗುವುದು ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಕಾಣುವ ಸಂಗತಿ. ಮಿತಿ ಇಲ್ಲದ ಪುನರಾವರ್ತನೆಗಳು ಜೀವ ಕಳೆದುಕೊಂಡು ಒಂದು ಸಂಪ್ರದಾಯವಾಗಿಬಿಡುತ್ತವೆ. ಇಂಥ ಸಾಂಪ್ರದಾಯಿಕ ತಿರುಗಣಿಯ ನಡುವೆ ಈ ಸಲ ದಲಿತರೊಬ್ಬರು ಸಮ್ಮೇಳನಾಧ್ಯಕ್ಷರಾಗಬೇಕೆಂದು ಹಾಲಂಬಿ ಮತ್ತವರ ತಂಡಕ್ಕೆ ಹೊಳೆದಿರುವುದು ಸ್ತುತ್ಯಾರ್ಹ. ಇದರಿಂದ ಎಲ್ಲ ಬದಲಾಗಿಬಿಡುತ್ತದೆ ಎನ್ನಲಾಗದಿದ್ದರೂ ಇಂಥ ಹೊಸ ಆಲೋಚನೆಗಳಿಂದ ಮಾತ್ರ ಸಮ್ಮೇಳನಗಳನ್ನು ಹೊಸಹೊಸದಾಗಿ ರೂಪಿಸಲು ಸಾಧ್ಯ.

ಇತ್ತೀಚೆಗೆ ಮೈಸೂರಿನಲ್ಲಿ ಒಂದು ಪಾರಂಪರಿಕ ಹಳೆ ಮನೆ ಕೆಡವಿ, ಅಪಾರ್ಟ್‌ಮೆಂಟ್ ಕಟ್ಟುವಾಗ ಮನೆಯ ಒಡತಿ ಸುಶೀಲಮ್ಮ, ಆಕೆಯ ದಿವಂಗತ ಪತಿ ಪ್ರೊ.ಮೈ.ಶಿ. ಶ್ರೀಕಂಠಯ್ಯನವರ ಅಮೂಲ್ಯ ಸಂಗ್ರಹದ ಹತ್ತಾರು ಕೃತಿಗಳನ್ನು ನನಗೆ ಕೊಟ್ಟರು. ಅಲ್ಲಿ ಸಿಕ್ಕ ಒಂದು ಲೇಖನ ಕುತೂಹಲ ಕೆರಳಿಸಿತು. ಅದು ಕುಮಟಾದಲ್ಲಿ ನಡೆದ ೧೯೫೩ರ ಡಿಸೆಂಬರ್ 26,೨೭,೨೮ ರಂದು 36ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮತ್ತು ಸಮ್ಮೇಳನದ ವರದಿ. ಸಮ್ಮೇಳನಾಧ್ಯಕ್ಷರು ಪ್ರೊ. ವಿ. ಸೀತಾರಾಮಯ್ಯ. ಕುಮಟಾದ ಗಿಬ್ಸ್ ಹೈಸ್ಕೂಲಿನ ಆವರಣದಲ್ಲಿ ಕೇಂದ್ರದ ವಾಣಿಜ್ಯ ಮಂತ್ರಿ ಕರಮರ್‌ಕರ್ ಉದ್ಘಾಟಿಸಿದ್ದಾರೆ. ಕಲಾಪ್ರದರ್ಶನ, ಪತ್ರಿಕಾಗೋಷ್ಠಿ, ಯಕ್ಷಗಾನಗೋಷ್ಠಿ, ವಿಜ್ಞಾನಗೋಷ್ಠಿ, ಮಹಿಳಾಗೋಷ್ಠಿ ನಡೆದಿವೆ.

ನಾಯಕ ವೆಂಕಟರಾಯ, ವೆಂಕಟಪ್ಪ ಶೆಟ್ಟಿ, ಪಡುಕೋಣೆ ರಮಾನಂದ ರಾಯ, ಶಿವರಾಮ ಕಾರಂತ, ತೀನಂಶ್ರೀ, ಬೇಂದ್ರೆ, ಮುಗಳಿ, ಇನಾಂದಾರ್, ಎಕ್ಕುಂಡಿ, ರಾಮಚಂದ್ರ ಶರ್ಮ, ತರಾಸು ಮುಂತಾದವರೆಲ್ಲ ಭಾಗವಹಿಸಿದ್ದಾರೆ. ರಘುವೀರರ ಕೆತ್ತನೆ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಇಡಗುಂಜಿಯ ಸಿದ್ಧಿ ವಿನಾಯಕ ಯಕ್ಷ ನಾಟಕ ಮಂಡಳಿ, ಕರ್ಕಿ ಹಾಸ್ಯಗಾರ ಕುಟುಂಬ ಮೇಳದವರು ನರ್ತಿಸಿದ್ದಾರೆ. ಗದಾಯುದ್ಧ, ಶಬರಶಂಕರ ವಿಲಾಸ ನಾಟಕಗಳು ಪ್ರೇಕ್ಷಕರ ಮೈಮುಳ್ಳೇಳುವಂತೆ ಮಾಡಿವೆ. ಹಾಸ್ಯಗಾರ ಸುಬ್ಬಣ್ಣ ಮೋಹಕವಾಗಿ ಸಿಂಹದ ಕುಣಿತ ಮಾಡಿದ್ದಾರೆ. ವಾಸ್ತವವಾಗಿ ಸಿಂಹದ ಕುಣಿತ ಭಯ ಹುಟ್ಟಿಸುವಂತಿರಬೇಕು ; ಇರಲಿ. ಇಲ್ಲಿ ಸ್ವಾರಸ್ಯಕರವಾದ ಎರಡು ಗೊತ್ತುವಳಿಗಳನ್ನು ಅಂಗೀಕರಿಸಲಾಗಿದೆ.

ಮೊದಲನೆಯದು ದೈನ್ಯತೆಯುಳ್ಳ ಪುಟ್ಟ ಬೇಡಿಕೆ. ಆಕಾಶವಾಣಿಯವರು ಲೇಖನಗಳನ್ನು ಪ್ರಸಾರ ಮಾಡಿದ ಮೇಲೆ ಲೇಖಕರು ಅವನ್ನು ಅಚ್ಚುಮಾಡಿಕೊಳ್ಳಬಯಸಿದರೆ ಯಾವ ರುಸುಮೂ ಇಲ್ಲದೆ ಪ್ರಕಟಿಸುವ ಸ್ವಾತಂತ್ರ್ಯ ಉಳ್ಳವರಾಗಬೇಕು. ಹೇಳಿ ಕೇಳಿ ಬರಹಗಾರರು ಬಡವರು. ಈ ತಬ್ಬಲಿಗಳನ್ನು ಸರ್ಕಾರವು ಕಾನೂನಿಗೆ ಸಿಕ್ಕಿಸಿಕೊಳ್ಳುವುದು ಸುತರಾಂ ಸರಿಯಲ್ಲ! ಎರಡನೆಯದು ಭಾರತ ಸರ್ಕಾರವು ಪ್ರಾಂತಗಳ ಪುನರ್ರಚನೆ ಮಾ­ಡುವ ಪ್ರಯತ್ನವನ್ನು ಸಮ್ಮೇಳನವು ಸ್ವಾಗತಿಸುತ್ತದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಗೆ ನೆರವಾಗುವಂತೆ ಕರ್ನಾಟಕ ಪ್ರಾಂತ ರಚನೆಯಾಗುತ್ತದೆಂದು ಸಮ್ಮೇಳನವು ಆಶಿಸುತ್ತದೆ.

ಮನೆಮಾತು ಯಾವುದೇ ಇರಲಿ, ಪ್ರಾಂತಭಾಷೆ ಕನ್ನಡವೇ ಆಗಬೇಕು. ಕರ್ನಾಟಕ ಏಕೀಕರಣವಾಗುವ ಮುನ್ನ ಅರವತ್ತೆರಡು ವರ್ಷಗಳ ಹಿಂದೆ ನಡೆದ ಈ ಸಾಹಿತ್ಯ ಸಮ್ಮೇಳನದಲ್ಲಿ ಏಕೀಕರಣದ ಪ್ರಕ್ರಿಯೆ ಮೂಲಕ ಕನ್ನಡ ಉಳಿಸಬೇಕು ಎಂಬ ಗೊತ್ತುವಳಿ. ಈಗ ಏಕೀಕೃತ ನಾಡಲ್ಲೂ ಕನ್ನಡಕ್ಕೆ ಉಳಿಗಾಲವಿಲ್ಲವಲ್ಲ ಎಂಬ ಆತಂಕದ ಗೊತ್ತುವಳಿ. ಹಾಗಾದರೆ ಕನ್ನಡವು ನಿರಾತಂಕವಾಗಿ ಬದುಕಿದ ಕಾಲಘಟ್ಟವೇ ಇಲ್ಲವೆ? ಕನ್ನಡಮ್ಮನ ಗಾಯಗಳು ವಾಸಿಯಾಗಲೇ ಇಲ್ಲವೆ? ಸ್ವಾತಂತ್ರ್ಯಪೂರ್ವದಲ್ಲೂ, ಸ್ವಾತಂತ್ರ್ಯೋತ್ತರದಲ್ಲೂ, ಏಕೀಕರಣಪೂರ್ವದಲ್ಲೂ, ಏಕೀಕರಣದ ನಂತರವೂ ಆತಂಕ ನಿವಾರಣೆಯಾಗಲಿಲ್ಲವೇ?

ಈ ಸಮ್ಮೇಳನದ ಅಧ್ಯಕ್ಷೀಯ ಭಾಷಣದ ಸಾರಾಂಶ : ಭಾರತದ ಯಾವ ಭಾಷಾವರ್ಗವೂ ಕನ್ನಡದವರಷ್ಟು ಕಷ್ಟಪಟ್ಟಿದ್ದಿಲ್ಲ. ಬೊಂಬಾಯಿ, ಹೈದರಾಬಾದು, ಮದ್ರಾಸು, ಮಂಗಳೂರು, ಕೊಡಗು, ಮೈಸೂರು ಎಂದು ಚೆದುರಿ ಹೋಗಿದ್ದಾರೆ. ಮೈಸೂರಿನವರನೇಕರಿಗೆ ಹೊರಕನ್ನಡಿಗರ ಕಷ್ಟ ತಿಳಿಯದು. ನಾವು ಹಿಂದಿನಂತೆಯೇ ಇರೋಣ. ಕನ್ನಡದ ಇತರ ಭಾಗಗಳು ಬೇಕಾದರೆ ಬೇರೆ ಒಂದು ಕರ್ಣಾಟಕ ಸ್ಥಾಪಿಸಿಕೊಳ್ಳಲಿ. ಕಾಲಕ್ರಮದಲ್ಲಿ ಅಗತ್ಯಬಿದ್ದರೆ ಎರಡೂ ಭಾಗಗಳೂ ಸೇರಲಿ ಎನ್ನುವವರಿದ್ದಾರೆ. ಒಂದು ಮುಖವಿಲ್ಲ. ಒಂದು ಕೊರಲಿಲ್ಲ. ಎಲ್ಲ ಭಾಗದವರೂ ಒಪ್ಪುವ ನಾಯಕತ್ವವಿಲ್ಲ. ಜನರ ಸ್ಫುಟಧ್ವನಿ, ವಾದ ಎಲ್ಲಿ ಹೇಗೆ ಕೇಳಿಸಬೇಕೋ ಅಷ್ಟು ಕೇಳಿಸಲಿಲ್ಲ. ಭಾಷಾಪ್ರಾಂತ ರಚನೆಯಿಂದ ದೇಶ ದುರ್ಬಲವಾಗುತ್ತದೆ ಎನ್ನುವವರಿದ್ದಾರೆ.

ಚಪ್ಪನ್ನೈವತ್ತಾರು ರಾಜ್ಯಗಳಿದ್ದುವೆಂದು ಕೇಳಿದ್ದೆವು. ಮದರಾಸಿನಿಂದ ಒರಿಸ್ಸಾ ಒಡೆಯಿತು. ಬೊಂಬಾಯಿಯ ಅರ್ಧಭಾಗ ಕಳಚಿಕೊಂಡಿತು. ಯಾವ ಪ್ರಳಯವೂ ಆಗಲಿಲ್ಲ. ವಿರಸ, ಕಹಿಯಿಂದ ಆಂಧ್ರ ಉದಯವಾಗಿದೆ. ದೇವರ ಪೂಜೆಯಂತೆ ನೆರವೇರಬೇಕಾದ ಕೆಲಸ ಭೂತದ ಆರಾಧನೆಯಂತೆ ನಡೆಯಿತು. ೧೯೫೫ ಮುಗಿಯುವುದರೊಳಗೆ ಕರ್ನಾಟಕ ಪ್ರಾಂತ ಖಚಿತವಾಗಿ ಏರ್ಪಟ್ಟೇಪಡುವುದೆಂದು ನನ್ನ ನಂಬಿಕೆ. ಈ ನಂಬಿಕೆಗೆ ಹಲವು ಆಧಾರಗಳಿವೆ. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಉದಾರವಾಣಿ ಧಾರ್‌ಸಮಿತಿಯ ಆತಂಕಗಳನ್ನೆಲ್ಲ ನಿವಾರಿಸಿದೆ.

ಪ್ರಧಾನಿ ನೆಹರೂ ‘ಸ್ವಲ್ಪ ತಡೆಯಿರಿ ; ಒಂದು ಪ್ರಾಂತ ಸೀಮಾನಿರ್ಣಾಯಕ ಸಮಿತಿಯನ್ನು ರಚಿಸೋಣ ; ಉಗ್ರ ಒತ್ತಾಯ ಮಾಡಬೇಡಿ’ ಎಂದಿದ್ದಾರೆ. Down with the centre ಎಂಬ ಘೋಷಣೆ ತಪ್ಪು. ಇಂಡಿಯಾದ ಕೇಂದ್ರ ಹೋದರೆ ಯಾವ ಪ್ರಾಂತ ಉಳಿದೀತು? ಹಾಗೆಯೇ ಪ್ರಾಂತಗಳನ್ನು ಕೃಶಮಾಡಿ, ಕುಗ್ಗಿಸಿ ಕೇಂದ್ರ ಹೇಗೆ ಬಲಗೊಂಡೀತು? ಕನ್ನಡಿಗರ ಸ್ವರೂಪ ಲಕ್ಷಣವಾಗಿರುವ ಸಭ್ಯತೆ, ಸಂಸ್ಕಾರ, ತಾಳ್ಮೆಗಳೂ ಇಂಥ ಸಮಯದಲ್ಲಿ ಒದಗಲಿ. ಹೊಸ ವಿಂಗಡಣೆಯಲ್ಲಿ ಕರ್ನಾಟಕದ ನಿರ್ಮಾಣ ಮೊದಲ ಗಣ್ಯತೆ ಪಡೆಯಬೇಕು. ನಮ್ಮ ಪ್ರಾಂತ ಆಗದಿದ್ದರೆ ಎರಡು ಕೋಟಿ ಜನರಿಗೆ ಪರಮ ಅನ್ಯಾಯವಾಗುತ್ತದೆ. ಹಿಂದೆ ಸ್ವರಾಜ್ಯ ಸಾಧನೆಗೆ ಒಮ್ಮನಸ್ಸಿನಿಂದ ದುಡಿದೆವು.

ಆ ದೇಶಭಕ್ತಿಯನ್ನು ಉಳಿಸಿಕೊಂಡೇ ನಮ್ಮ ಭಾಷಾಪ್ರೀತಿಯನ್ನು ಕಾಪಾಡಿಕೊಳ್ಳಬೇಕು. ದೇಶಭಕ್ತಿಗೆ ಭಾಷಾಭಕ್ತಿ ಕುಂದಲ್ಲ. ಭಾಷೆ ವಿದ್ಯೆಯ, ಪ್ರೀತಿಯ ಸಾಧನ. ಆಯಾ ಪ್ರಾಂತದಲ್ಲಿ ಆಯಾ ನುಡಿಗಳ ಮೂಲಕವೇ ಸಿದ್ಧಿ ಸುಲಭ. ಅದೇ ಸೃಷ್ಟ್ಯಾತ್ಮಕ. ಕನ್ನಡ ಮಾಧ್ಯಮವೊಂದೇ ಸಾಧನ, ಕನ್ನಡ ನಾಡಿನಲ್ಲಿ. ಒಂದು ಭಾಷೆಯನ್ನು ಪ್ರೀತಿಸುವವರು ಇನ್ನೊಂದು ಭಾಷೆಯನ್ನು ದ್ವೇಷಿಸಲಾರರು. ಒಂದರ ಮನೆಯಲ್ಲಿ ಇನ್ನೊಂದರ ಯಾಜಮಾನ್ಯವನ್ನು ಸ್ಥಾಪಿಸಲು ತೊಡಗಿ ಮನೆಯವರನ್ನೇ ಮೂಲೆಗೊತ್ತಿದರೆ ಆಕ್ರೋಶವಾಗುವುದು ಸಹಜ. ಕನ್ನಡ ಪ್ರದೇಶಗಳಲ್ಲಿ ಈಗ ಆಗುತ್ತಿರುವುದು ಇದೇ. ಇದುವರೆಗೆ ಜನರಿಗೆ ಗೊತ್ತಿಲ್ಲದ ಭಾಷೆಯಲ್ಲಿ ಆಡಳಿತ ಕಾರ್ಯ, ನ್ಯಾಯ ನಿರ್ಣಯ, ಶಿಕ್ಷಣ ವ್ಯವಹಾರ ನಡೆದು ಈ ಜನರ ಬದುಕು ನೂರಾರು ವರ್ಷ ಬಂಜೆಯಾಯಿತು.

ವಿ.ಸೀತಾರಾಮಯ್ಯನವರ ಭಾಷಣದ ಕೊನೆಯ ಮಾತು ಮಾರ್ಮಿಕವಾಗಿದೆ. ಇಂದಿಗೂ ಅನ್ವಯಿಸುವಂತಿದೆ. ಈಗಲೂ ಆಡಳಿತ ಕಾರ್ಯ ಸಂಪೂರ್ಣವಾಗಿ ಕನ್ನಡದಲ್ಲಿ ಆಗುತ್ತಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯನವರ ಪತ್ರವನ್ನು ಧಿಕ್ಕರಿಸುವ ಕೌಶಿಕ್ ಮುಖರ್ಜಿಯಂಥ ಅಧಿಕಾರಿಗಳು ಈಗಲೂ ಇದ್ದಾರೆ. ಇಂಥವರನ್ನು ತಮಿಳುನಾಡಲ್ಲಿ ಇರಗೊಡುತ್ತಿದ್ದರೆ? ಕನ್ನಡದಲ್ಲಿ ತೀರ್ಪು ಬರೆಯುವ ಕೆಲವೇ ನ್ಯಾಯಾಧೀಶರನ್ನು ಹುಡುಕಿ ಬಹುಮಾನ ಕೊಡುತ್ತಿದ್ದೇವೆ. ಶಾಲೆ ನಡೆಸುವುದು ಬರೇ ಉದ್ಯಮವಾಗಿ ಕನ್ನಡಿಗರೇ ಇಂಗ್ಲಿಷ್ ಶಾಲೆ ನಡೆಸುತ್ತಿದ್ದೇವೆ. ಸುಪ್ರೀಂ ನ್ಯಾಯಾಲಯವನ್ನೂ ದಾರಿ ತಪ್ಪಿಸಲಾಗಿದ್ದು ಕೊನೆಯ ಭರವಸೆಯಿಂದ ಸಂಸತ್ತಿನತ್ತ ನೋಡುತ್ತಿದ್ದೇವೆ.

ಸರಳವಾಗಿ ಹೇಳಬೇಕೆಂದರೆ ನೂರು ವರ್ಷಗಳ ಹಿಂದೆ ಮೈಸೂರು ಮಹಾರಾಜರು ಪರಿಷತ್ತನ್ನು ಆರಂಭಿಸಿದಾಗ ಅಥವಾ ಐವತ್ತೊಂಬತ್ತು ವರ್ಷಗಳ ಹಿಂದೆ ಕರ್ನಾಟಕ ಏಕೀಕರಣಗೊಂಡಾಗ ಇದ್ದ ಕನ್ನಡದ ಪರಿಸ್ಥಿತಿ ಈಗಲೂ ಹಾಗೆಯೇ ಇದೆ. ನಮ್ಮ ಗಾಯಗಳು ಆರಲಿಲ್ಲ.  ನಮ್ಮ ನೋವುಗಳು ತೀರಲಿಲ್ಲ. ಸಾಧನೆಗಳಿದ್ದರೂ ನಾವು ಸ್ವಯಂಭೂ ಆಗಲಿಲ್ಲ. ಶಕ್ತಿ ಇದ್ದರೂ ಎದ್ದು ನಿಲ್ಲಲಿಲ್ಲ. ಒಬ್ಬರತ್ತ ಒಬ್ಬರು ಬೆರಳು ತೋರಿಸುತ್ತಾ ಕಾಲಹರಣ ಮಾಡುತ್ತಿದ್ದೇವೆ. ಕನ್ನಡಿಗರ ಸಾಕ್ಷಿಪ್ರಜ್ಞೆಯೇ ಮುಚ್ಚುತ್ತಿರುವ ಸಂಕೇತವಾಗಿ ಕನ್ನಡ ಶಾಲೆಗಳು ಸಾವಕಾಶವಾಗಿ ಮುಚ್ಚಿಹೋಗುತ್ತಿವೆ. ಸಮ್ಮೇಳನದ ಸಂಭ್ರಮದಲ್ಲಿ ಭಾಗಿಯಾಗುತ್ತಲೇ ಈ ಸಂಕಟದ ಮಾತುಗಳನ್ನು ದಾಖಲಿಸುತ್ತಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT