ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪೆಕರನಿಗೊಂದು ಟಿಕೆಟ್ ಕೊಡಿ

ಅಕ್ಷರ ಗಾತ್ರ

ಗರಿಗರಿಯಾಗಿ ಇಸ್ತ್ರಿ ಹಾಕಿದ ಜುಬ್ಬ ಧರಿಸಿ, ಅದಕ್ಕೆ ಮ್ಯಾಚಿಂಗ್ ಆಗುವ ಹಾಗೆ ಬಿಳೀ ಚಪ್ಪಲಿ ಹಾಕಿ­ಕೊಂಡು, ಕೈಯಲ್ಲಿ ಫೈಲೊಂದನ್ನು ಹಿಡಿದುಕೊಂಡು ಸರಸರನೆ ಬರುತ್ತಿದ್ದ ಪೆಕರನನ್ನು ಕಂಡು ಸ್ನೇಹಿತರಿಗೆ ಅಚ್ಚರಿಯೋ ಅಚ್ಚರಿ!

‘ಅಲ್ರೀ ಪೆಕರ ಅವರೇ, ನಿಮ್ಮನ್ನು ನೋಡಿದರೆ, ಲೋಕಸಭೆ ಚುನಾವಣೆಗೆ ನಿಲ್ಲುವ ಕ್ಯಾಂಡಿಡೇಟ್ ತರಹ ಕಾಣ್ತಾ ಇದ್ದೀರಿ. ಇದೇನಿದು ಹೊಸ ವೇಷ?’ ಎಂದು ಸ್ನೇಹಿತರು ಹಾಸ್ಯ ಮಾಡಿದರು.

‘ಕರೆಕ್ಟಾಗಿ ಹೇಳಿದ್ರಿ, ನಾನು ಕೆಲಸಕ್ಕೆ ರಾಜೀನಾಮೆ ನೀಡಿ, ಲೋಕಸಭೆ ಚುನಾವಣೆಗೆ ನಿಲ್ಲಬೇಕೂಂತ ತೀರ್ಮಾನ ಮಾಡಿದ್ದೀನಿ’ ಎಂದು ಪೆಕರ ಗಂಭೀರವಾಗಿ ಹೇಳಿದ. ಎಲ್ಲರೂ ಘೊಳ್ಳನೆ ನಕ್ಕರು. ಕೆಲವರು ಬಿದ್ದುಬಿದ್ದು ನಕ್ಕರು.

‘ಮಾತಿನ ಮರವೇರಿ ಮಳೂರು ಹೈದ ಕೂಡ್ಲೂರ್‌ಗೆ ಹೋದ ಎನ್ನುವಂತಾಯಿತು ನಿಮ್ಮ ಕತೆ. ಮೊನ್ನೆ ತಾನೇ ಪಾರ್ಲಿ­ಮೆಂಟ್ ಮುಂದೆ ಚಾಯ್‌ ದುಖಾನ್ ಓಪನ್ ಮಾಡ್ಕೊಂಡು ನಮೋ ಭಕ್ತರ ತರಹ ಮಾತನಾಡಿದ್ರಿ. ಇವತ್ತು ಎಲೆಕ್ಷನ್ ಕಣಕ್ಕೇ ಧುಮುಕಲು ಹೊರಟಿದ್ದೀರಿ, ಹುಷಾರ್, ಕಾಲುಗೀಲು ಮುರಿದುಕೊಂಡೀರಿ’ ಎಂದು ಸ್ನೇಹಿತರು ಎಚ್ಚರಿಸಿದರು.

‘ಇಲ್ಲಾ ಮಾರಾಯ, ಈ ಸಲ ಚುನಾವಣೆ ವಿಭಿನ್ನವಾಗಿ ನಡೀತಾ ಇದೆ. ‘ಕೈ’ಪಕ್ಷದಲ್ಲಿ ನಮ್ಮ ಯುವರಾಜರು ಆಂತರಿಕ ಚುನಾವಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡು­ತ್ತಾರಂತೆ. ಅವರು ಹಾಕಿರುವ ಕಂಡಿಷನ್‌ಗಳನ್ನೆಲ್ಲಾ ನೋಡಿ-­ದರೆ, ನನ್ನನ್ನು ಅವರು ಆಯ್ಕೆ ಮಾಡುವುದು ಖಂಡಿತ. ಅದಕ್ಕೇ ಅರ್ಜಿ ಹಾಕಲು ಹೊರಟಿದ್ದೀನಿ’ ಎಂದು ಪೆಕರ ಟಿಕೆಟ್ ಸಿಕ್ಕವನಂತೆಯೇ ಹೇಳಿದ.

‘ಏನು ಕಂಡಿಷನ್?! ನಿನಗೇ ಟಿಕೆಟ್ ಸಿಗುತ್ತೆ ಅಂತ ಹೇಗೆ ಖಚಿತವಾಗಿ ಹೇಳುತ್ತೀಯಾ?’ ಎಂದು ಸ್ನೇಹಿತರು ಆಶ್ಚರ್ಯಚಕಿತರಾಗಿ ಕಣ್ಣರಳಿಸಿ ಕೇಳಿದರು.

‘ಕೈ ಟಿಕೆಟ್ ಬೇಕಾದರೆ ಅನೇಕ ಬಾರಿ ಸೋತವರಾಗಿರ­ಬಾರದು. ಕ್ರಿಮಿನಲ್ ಹಿನ್ನೆಲೆ ಇರಬಾರದು. ಭ್ರಷ್ಟಾಚಾರದಲ್ಲಿ ನಿರತನಾಗಿದ್ದಿರಬಾರದು, ಹೊಡೆದಾಟ, ಮಾರಾಮಾರಿಗಳಲ್ಲಿ ಭಾಗ­ವಹಿಸಿದ್ದಿರಬಾರದು. ಸಮಾಜಸೇವೆ ಮಾಡಿದ ಹಿನ್ನೆಲೆ ಇರಬೇಕು. ಆಯಾ ಕ್ಷೇತ್ರದಲ್ಲಿ ಜನಸಂಪರ್ಕವಿರುವಂತಹ­ವ­ನಾಗಿರಬೇಕು. ಇಷ್ಟೆಲ್ಲಾ ಕಂಡಿಷನ್ ಹಾಕಿದರೆ, ಕೈ ಪಕ್ಷಕ್ಕೆ ಅಭ್ಯರ್ಥಿ ಯಾರು ಸಿಗುತ್ತಾರೆ? ಹಾಲಿ ಸದಸ್ಯರ ಅರ್ಜಿಗಳು ಈ ಕಾರಣಕ್ಕೆ ಅನರ್ಹಗೊಳ್ಳುತ್ತವೆ. ರಿಜೆಕ್ಟ್ ಆಗುವುದು ಗ್ಯಾರಂಟಿ. ಆದುದರಿಂದ ನನಗೆ ಟಿಕೆಟ್ ಗ್ಯಾರಂಟಿ’ -ಪೆಕರ ತನ್ನದೇ ಲೆಕ್ಕಾಚಾರ ಮುಂದಿಟ್ಟ.

‘ಪೆಕರ ಅವರೇ ನಿಮಗೆ ಇನ್ನೂ ವಾಸ್ತವಸ್ಥಿತಿ ಗೊತ್ತಿಲ್ಲ. ಕೈ ಪಕ್ಷದವರು ಈಗಾಗಲೇ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಕೈಯ್ಯಲ್ಲಿಡಿದುಕೊಂಡಿದ್ದಾರೆ. ಆಮ್‌ಆದ್ಮಿ­ವಾಲಾಗಳು ಎಸ್‌ಎಂಎಸ್ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿಕೊಂಡು ಹೈಫೈ ಆದರಂತೆ. ಅದಕ್ಕೆ ನಮ್ಮ ಯುವ­ರಾಜರೂ, ಲೇಟಾದ್ರೂ ಲೇಟೆಸ್ಟಾಗಿರಲಿ ಅಂತ ಆಂತರಿಕ ಚುನಾ­ವಣೆಗೆ ಆದೇಶ ಕೊಟ್ಟಿದ್ದಾರೆ. ಎಲ್ಲಾ ಬರೀ ನಾಟಕ ಮಾರಾಯ. ಆಂತರಿಕ ಚುನಾವಣೆಯಲ್ಲಿ ಎಲ್ಲ ಹಾಲಿ ಸಂಸ­ದರೂ ನಮ್ಮ ಮಗನಿಗೂ ಸೀಟು ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಮೊಯಿಲಿ ಸಾಹೇಬರಿಗೆ ಚಿಕ್ಕಬಳ್ಳಾಪುರವೇ ಬೇಕಂತೆ, ಕೊಸರಿಗೆ ಅವರ ಮಗನಿಗೆ ಮಂಗಳೂರು ಕ್ಷೇತ್ರ ಬೇಕಂತೆ, ಸಚಿವ ವಿಕ್ಟರಿ ಚಂದ್ರ ಅವರ ಮಗನಿಗೆ ತುಮಕೂರು ಕ್ಷೇತ್ರ ಕೊಡಬೇಕಂತೆ. ಶಾಸಕ ರಾಜಣ್ಣ ಅವರ ಮಗನಿಗೂ ಅದೇ ಕ್ಷೇತ್ರ ಬೇಕಂತೆ. ದೇಶಪಾಂಡೆ, ಮಾರ್ಗರೇಟರೂ ಪುತ್ರ ವ್ಯಾಮೋಹಿಗಳೇ, ಧರ್ಮರಾಯ ಸಿಂಗ್, ಖರ್ಗೇಜಿಗೂ ಪುತ್ರವ್ಯಾಮೋಹ ಬಿಟ್ಟಿಲ್ಲ. ವಯಸ್ಸಾದವರಿಗೂ ಮತ್ತೆಮತ್ತೆ ನಿಲ್ಲುವ ಚಪಲವಿದೆ. ಇಂತಹದ್ದರಲ್ಲಿ ನಿಮಗೆಲ್ಲಿ ಟಿಕೆಟ್ ಸಿಗುತ್ತೆ ಪೆಕರ ಅವರೇ, ಭ್ರಮೆ ಬಿಡಿ’ ಎಂದು ಸ್ನೇಹಿತರು ಪೆಕರನ ಭ್ರಮೆ ಬಿಡಿಸಲು ಮುಂದಾದರು.

ಮತ್ತೆ ಕಣಕ್ಕಿಳಿಯಲು ಎಂಪಿಗೆ ಇಷ್ಟ
ಹೈಕಮಾಂಡ್ ಅನುಮತಿ ಬಲು ಕಷ್ಟ
ನನಗಿಲ್ಲದಿದ್ದರೇನಂತೆ ಟಿಕೇಟು
ನನ್ನ ಮಗನಿಗಾದರೂ ಹಾಕಿ ರೈಟು

‘ಹೌದಲ್ಲಾ?!! ಕೈ ಪಕ್ಷದಲ್ಲಿ ತಂದೆ-ಮಕ್ಕಳಿಗೇ ಮೀಸಲಾದ ಕ್ಷೇತ್ರಗಳಂತೆ ಕಾಣುತ್ತವೆ. ಅವರೆಲ್ಲಾ ಆಯಾ ಕ್ಷೇತ್ರವನ್ನು ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದ್ದಾರೆ. ಹೀಗಾದರೆ ನಮ್ಮ ಯುವರಾಜರ ಯಂಗ್ ಇಂಡಿಯಾ ಕನಸು ಈಡೇರುವು­ದಾದರೂ ಹೇಗೆ? ಈ ಪಾರ್ಟಿ ಟಿಕೇಟೇ ಬೇಡ, ಈಗ ಏನ್ ಮಾಡ್ಲಿ? ಯಾವ ಪಕ್ಷಕ್ಕೆ ಹೋಗಲಿ? ಯಾವ ಕ್ಷೇತ್ರ ಹಿಡೀಲಿ’ ಎಂದು ಪೆಕರ ಪ್ರಶ್ನಿಸಿದ.

‘ನೋಡಯ್ಯ, ಪೆಕರ, ಆಸಾದಿಗ್ಯಾಕೆ ಆರಂಭ? ದಾಸಯ್ಯ­ನಿಗ್ಯಾಕೆ ದನಕರ? ಎನ್ನುವಂತೆ ನಿನಗೇಕೆ ಬೇಕಿತ್ತಯ್ಯ ಎಲೆಕ್ಷನ್ ಸಹವಾಸ? ಅದೆಲ್ಲಾ ಕೋಟಿಕೋಟಿ ಖರ್ಚು ಮಾಡುವ ಭ್ರಷ್ಟಾಚಾರಿಗಳಿಗಾಗಿ ಇರುವ ಜೂಜಾಟ. ನೀವು ಒಂದು ಕೆಲಸ ಮಾಡಿ. ಹಾಸನದಲ್ಲಿ ನಮ್ಮ ದೊಡ್ಡಗೌಡರ ಎದುರು ನಿಲ್ಲಲು ಯಾರೂ ಇಲ್ವಂತೆ. ಅದಕ್ಕೆ ಕಮಲಪಕ್ಷದವರು ಕುರುಡ ಸ್ವಾಮಿ ಒಬ್ಬರನ್ನು ಗೌಡರ ಎದುರಾಳಿ ಮಾಡಿ, ಚಾಲೆಂಜ್ ಮಾಡಲು ರೆಡಿಯಾಗ್ತಾ ಇದಾರಂತೆ, ನೀನೂ ಒಂದು ಸಲ ಟ್ರೈ ಮಾಡ­ಬಹುದು’ ಎಂದು ಸ್ನೇಹಿತರು ಒಂದು ದಾರಿ ತೋರಿದರು.

ಕ್ಷೇತ್ರದಿಂದ ಕ್ಷೇತ್ರಕ್ಕೆ ಅಲೆಯದಂತೆ
ಹೆಳವನ ಮಾಡಯ್ಯ ತಂದೆ
ಹಾಸನದಲ್ಲಿ ಸ್ಪರ್ಧೆಗಿಳಿಯಲು
ಎನ್ನ ಅಂಧಕನ ಮಾಡಯ್ಯ ತಂದೆ

‘ಇದೂ ಒಳ್ಳೆಯ ಐಡಿಯಾ! ಅಂಧರೊಬ್ಬರನ್ನು ಕಣಕ್ಕಿಳಿಸು­ವುದರಲ್ಲಿ ಅರ್ಥವಿದೆ. ಮತದಾರ ಕುರುಡುಕುರುಡಾಗಿ ಮತ ಚಲಾಯಿಸಬಾರದು ಎನ್ನುವ ಮೀನಿಂಗ್ ಇದರಲ್ಲಿದೆ. ಭೂಕ­ಬಳಿಕೆ­ಯಿಂದ ಹಿಡಿದು, ಹಲವಾರು ಕುಳವಾರುಗಳನ್ನು ಗುಳುಂ ಮಾಡಿರುವ ಭ್ರಷ್ಟಾಚಾರಿಗಳನ್ನು ನೋಡದೇ ಇರುವುದೇ ಕ್ಷೇಮ ಎನ್ನುವ ಅರ್ಥವಿದೆ. ಕಣ್ಣಿದ್ದೂ ಕುರುಡಾಗಿರುವುದಕ್ಕಿಂತ, ಕಣ್ಣಿಲ್ಲದವರೇ ಚುನಾವಣಾ ಕಣಕ್ಕಿಳಿಯುವುದು ಎಲ್ಲ ಸಮಸ್ಯೆಗೆ ಪರಿಹಾರ ಎನ್ನುವ ಅರ್ಥಕೊಡುತ್ತದೆ’.- ಪೆಕರ ಅಂಧ­ರೊಬ್ಬರನ್ನು ದೊಡ್ಡಗೌಡರ ವಿರುದ್ಧ ನಿಲ್ಲಿಸುವುದರ ಬಗ್ಗೆ ವ್ಯಾಖ್ಯಾನ ಕೊಡಲಾರಂಭಿಸಿದ.

‘ಸಾಕು ನಿಲ್ಲಿಸಪ್ಪ ನಿನ್ನ ಕವಿಪುರಾಣ. ಹಾಸನದಲ್ಲಿ ಕ್ಯಾಂಡಿಡೇಟ್ ಆಗುವ ಕನಸು ಕಾಣುವುದು ಬೇಡ. ಹಾಸನ­ದಲ್ಲಿ ದೊಡ್ಡಗೌಡರ ವಿರುದ್ಧ ಕ್ಯಾಂಡಿಡೇಟ್ ಹಾಕುವುದು ಬೇಡ, ಬೆಂಗಳೂರು ಸೆಂಟ್ರಲ್‌ನಲ್ಲಿ ನನ್ನ ವಿರುದ್ಧವೂ ಯಾರೂ ನಿಲ್ಲುವುದು ಬೇಡ, ನಾವಿಬ್ಬರೂ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಸೀನಿಯರ್! ಇದೇ ನಮ್ಮ ಕೊನೆಯ ಚುನಾವಣೆ, (ಹೀಗೇ ಇಪ್ಪತ್ತು ವರ್ಷದಿಂದ ಹೇಳುತ್ತಲೇ ಇದ್ದಾರೆ!) ನಾವಿ­ಬ್ಬರೂ ಎದು­ರಾಳಿಯೇ ಇಲ್ಲದೆ, ಪಾರ್ಲಿಮೆಂಟಿಗೆ ಹೋಗಿ ‘ದೇಶಶೇವೆ’ ಮಾಡುತ್ತೇವೆ ಅಂತ ನಮ್ಮ ಷರೀಫ್ ಸಾಹೇಬರು ದೆಹಲಿ ಮೇಡಂಗೆ ಹೇಳಿದ್ದಾರೆ. ಇದೂ ಗೊತ್ತಿಲ್ಲವೇ?’- ಎಂದು ಸ್ನೇಹಿತರು ನೆನಪಿಸಿದರು.

‘ಬಹಳ ಒಳ್ಳೆಯ ಐಡಿಯಾ, ದೊಡ್ಡಗೌಡರ ವಿರುದ್ಧ ಯಾರೂ ನಿಲ್ಲಬಾರದು, ಅವರ ಸೊಸೆಯ ವಿರುದ್ಧ ಯಾರೂ ನಿಲ್ಲಬಾರದು. ನಿಲೇಕಣಿ ವಿರುದ್ಧವೂ ಯಾರೂ ನಿಲ್ಲಬಾರದು. ಪೆಕರನ ವಿರುದ್ಧವೂ ಯಾರೂ ನಿಲ್ಲಬಾರದು. ಎಲ್ಲೂ ಯಾರೂ ನಿಲ್ಲದಿದ್ದರೆ, ಚುನಾವಣೆ ಎಷ್ಟು ಚೆನ್ನ ಅಲ್ಲವೇ?’ ಪೆಕರ ಕನಸು ಕಾಣತೊಡಗಿದ.

‘ಸಾಕಪ್ಪಾ ಪೆಕರ, ತಿರುಕನ ಕನಸು ಕಾಣಬೇಡ. ಎಂತೆಂಥ ದೇವರಿಗೇ ಅಂತರಾಟ, ಕಾಲುಮುರುಕ ದೇವರಿಗೆ ಕೈಲಾಸವೇ? ನಿನಗೆ ಈಗ ಉಳಿದಿರುವುದೊಂದೇ ಕ್ಷೇತ್ರ. ಸೀದಾ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೋಗು, ಅಲ್ಲಿ ‘ಸಂಘಜೀವಿಗಳು’ ನಿನ್ನನ್ನು ಲೈಕ್ ಮಾಡಿದಂತೆ ಕಾಣುತ್ತಿದೆ’ ಎಂದು ಸ್ನೇಹಿತರು ಪೆಕರನಿಗೆ ಸಲಹೆ ಕೊಟ್ಟರು.

‘ಬೇಡಪ್ಪಾ ಬೇಡ. ನಗುವಾನಂದಗೌಡರೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬೇಡ, ಬೆಂಗಳೂರು ಉತ್ತರವೇ ಇರಲಿ ಎಂದು ಅಶೋಕ ಚಕ್ರವರ್ತಿಯ ತರಹ ಓಡಿಬಂದಿದ್ದಾರೆ. ಅಲ್ಲಿ ಜೀವರಾಜರೂ, ಡಾಡಿವಾಲಾ ರವಿರಾಜರೂ ಎಲ್ಲರ ಮೇಲೆ ಕತ್ತಿ ಬೀಸುತ್ತಿದ್ದಾರೆ. ಎಲ್ಲಾ ಪಾರ್ಟಿಯಲ್ಲೂ ಸೀನಿಯರ್‌ಗಳೇ ಟಿಕೆಟಿಗಾಗಿ ನಾಯಿಪಾಡು ಪಡುತ್ತಿರುವಾಗ ನಾನ್ಯಾವ ಲೆಕ್ಕ?! ನನಗೆ ಟಿಕೇಟೂ ಬೇಡ, ರಾಜಕೀಯವೂ ಬೇಡ. ರಾಜಕೀಯ ಖಡ್ಗಕ್ಕಿಂತ ನನ್ನ ಪೆನ್ನೇ ಬಹಳ ಹರಿತ’ ಎಂದು ಪೆಕರ ಘೋಷಿಸಿದ. ಚಪ್ಪಾಳೆ ತಟ್ಟುವ ಮೂಲಕ ಎಲ್ಲರೂ ಪೆಕರನ ನಿರ್ಧಾರವನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT