ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ವಿಶ್ವವಿದ್ಯಾಲಯಗಳಿಗೆ ಏಕೆ ಗರ ಬಡಿದಿದೆ?

Last Updated 25 ಜೂನ್ 2017, 3:57 IST
ಅಕ್ಷರ ಗಾತ್ರ

ಇಲ್ಲಿ ಅಪನಂಬಿಕೆ ಇದೆ, ‘ಅವರೆಲ್ಲ ಸರಿಯಿಲ್ಲ, ಭ್ರಷ್ಟರು’ ಎಂಬ ಪೂರ್ವಗ್ರಹ ಇದೆ, ‘ನಾನು ಇದನ್ನು ಸರಿ ಮಾಡುವವ’ ಎಂಬ ಅಹಂಕಾರ ಇದೆ, ಏಕೆಂದರೆ ‘ಹಣ ಕೊಡುವ ನನಗೆ ನಿಮ್ಮನ್ನು ನಿಯಂತ್ರಿಸುವ ಎಲ್ಲ ಅಧಿಕಾರವೂ ಇದೆ’ ಎಂಬ ಪರಮದೌಷ್ಟ್ಯ ಇದೆ. ವಿಪರ್ಯಾಸ ಎಂದರೆ ಇದು ಸಂಪುಟ ಸಭೆಯಲ್ಲಿ ಯಾವ ಚರ್ಚೆಯೂ ಇಲ್ಲದೆ, ಭಿನ್ನಾಭಿಪ್ರಾಯವೂ ಇಲ್ಲದೆ ಹೊರಗೆ ಬರುತ್ತದೆ, ವಿಧಾನಸಭೆಯಲ್ಲಿ ಮಂಡಿತವಾಗುತ್ತದೆ; ಅಲ್ಲಿ ಹೆಚ್ಚು ಚರ್ಚೆಯಾಗದೆ ಅಂಗೀಕಾರವೂ ಆಗುತ್ತದೆ. ಅದೃಷ್ಟಕ್ಕೆ, ‘ಸಾಕಷ್ಟು ಮುಂಗಡವಾಗಿ ಮಂಡಿತವಾಗಿಲ್ಲ’ ಎಂಬ ಕಾರಣಕ್ಕಾಗಿ ವಿಧಾನಪರಿಷತ್ತಿನಲ್ಲಿ ಪಾಸಾಗುವುದಿಲ್ಲ. ಅಲ್ಲಿಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ತಕ್ಷಣಕ್ಕಾದರೂ ಬಚಾವು ಆಗುತ್ತಾರೆ.

ಉನ್ನತ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡ ಲಾಗಾಯ್ತಿ ನಿಂದ ರಾಜ್ಯದ ಎಲ್ಲ ಕುಲಪತಿಗಳನ್ನು ಚುಡಾಯಿಸುತ್ತಿದ್ದಾರೆ. ‘ಅವರೆಲ್ಲ ಭ್ರಷ್ಟರು’, ‘ದುಡ್ಡು ಹೊಡೆಯುವವರು’ ಎಂದು ಸಾರಾಸಗಟಾಗಿ ಆರೋಪ ಮಾಡುತ್ತಿದ್ದಾರೆ. ‘ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಐದು ನೂರು ಕೋಟಿ ರೂಪಾಯಿಗಿಂತ ಹೆಚ್ಚು ಅಕ್ರಮವಾಗಿದೆ, ಅದನ್ನು ಬಯಲಿಗೆ ಎಳೆಯುವೆ’ ಎಂದು ಅವಕಾಶ ಸಿಕ್ಕಾಗಲೆಲ್ಲ ಘೋಷಿಸುತ್ತಿದ್ದಾರೆ. ಅವರು ಯಾವಾಗ ಅದನ್ನೆಲ್ಲ ಬಯಲಿಗೆ ಎಳೆಯುತ್ತಾರೆ, ಯಾರ ಹೆಸರು ಹೊರಗೆ ಹಾಕುತ್ತಾರೆ ಎಂದು ನಾವೂ ಅನೇಕ ತಿಂಗಳಿನಿಂದ ಕಾಯುತ್ತ ಇದ್ದೇವೆ. ತನಿಖೆ ಮುಗಿಯಿತೋ, ತಪ್ಪು ಮಾಡಿದವರು ಯಾರಾದರೂ ಸಿಕ್ಕರೋ, ಸಿಗಲಿಲ್ಲವೋ ತಿಳಿಯಲಿಲ್ಲ. ಇದುವರೆಗೆ ವರದಿಯಂತೂ ಹೊರಗೆ ಬಂದಿಲ್ಲ. ಪತ್ರಕರ್ತರು ಹೀಗೆ ಯಾರದಾದರೂ, ‘ಹಗರಣ ಬಯಲಿಗೆ ಎಳೆಯುತ್ತೇವೆ’ ಎಂದು ಹೇಳುತ್ತಲೇ ಇದ್ದರೆ ಮತ್ತು ಅದನ್ನು ಬಯಲಿಗೆ ತರದೇ ಇದ್ದರೆ ಅವರನ್ನು ಖದೀಮರು ಮತ್ತು ಬ್ಲ್ಯಾಕ್‌ಮೇಲ್‌ ಮಾಡುವವರು ಎಂದು ಕರೆಯುತ್ತಿದ್ದೆವು. ಇದೇ ಮಾನದಂಡ ಸಚಿವರಿಗೂ ಅನ್ವಯವಾಗುತ್ತದೆ ಎಂದು ನಾನು ಹೇಳಲಾರೆ. ಅದನ್ನು ಜನರು ತೀರ್ಮಾನಿಸುತ್ತಾರೆ. ಆದರೆ, ಹಗರಣ ಹೊರಗೆ ಬರಲಿ, ಬರದೇ ಇರಲಿ ರಾಜ್ಯದಲ್ಲಿ ಎಲ್ಲ 22 ವಿಶ್ವವಿದ್ಯಾಲಯಗಳ ಕುಲಪತಿಗಳ ಮೇಲೆ ಸಂಶಯದ ತೂಗುಕತ್ತಿ ತೂಗಲು ತೊಡಗಿದೆ. ಅಂಥ ಕತ್ತಿಯನ್ನು ಉನ್ನತ ಶಿಕ್ಷಣ ಸಚಿವರೇ ತೂಗು ಬಿಡುತ್ತಿರುವುದನ್ನು ವಿಪರ್ಯಾಸ ಎನ್ನಬೇಕೇ ಅಥವಾ ದುರಂತ ಎನ್ನಬೇಕೇ ಅರ್ಥವಾಗುವುದಿಲ್ಲ.

ಉನ್ನತ ಶಿಕ್ಷಣ ಸಚಿವರ ಅಡಿಯಲ್ಲಿಯೇ ಈ ಎಲ್ಲ ವಿಶ್ವವಿದ್ಯಾಲಯಗಳು ಬರುತ್ತವೆ. ಅವರ ಇಲಾಖೆಯಿಂದಲೇ ಈ ಎಲ್ಲ ಕುಲಪತಿಗಳು ನೇಮಕ ಆಗಿದ್ದಾರೆ. ಕೆಲವರು ಮುಂಚೆ ಆಗಿರಬೇಕು, ಕೆಲವರು ಇವರ ಕಾಲದಲ್ಲಿ ಆಗಿರಬೇಕು. ಸರ್ಕಾರ ಎಂಬುದು ಯಾವಾಗಲೂ ನಿರಂತರವಾದುದು. ಅವರನ್ನು ನೇಮಕ ಮಾಡುವಾಗ ಯಾವ ಕಾರಣಕ್ಕಾಗಿ ನೇಮಕ ಮಾಡು ತ್ತಿದ್ದೇವೆ ಎಂಬುದು ಸರ್ಕಾರಕ್ಕೆ ಗೊತ್ತಿರಬೇಕಿತ್ತು. ಜಾತಿ ಕಾರಣ ಕ್ಕಾಗಿ ಅವರ ನೇಮಕ ಆಯಿತೇ, ಪ್ರತಿಭೆಯ ಕಾರಣಕ್ಕೆ ಆಯಿತೇ ಅಥವಾ ಅವರು ಯಾರಿಗಾದರೂ ಹಣ ಕೊಟ್ಟರು ಎಂದು ಆಯಿತೇ? ಅವರು ಹಣ ಕೊಟ್ಟು ನೇಮಕ ಆಗಿದ್ದರೆ ಯಾರಿಗೆ ಹಣ ಕೊಟ್ಟರು ಮತ್ತು ಯಾರು ಹಣ ತೆಗೆದುಕೊಂಡರು?

ಅವರಿಂದ ಹಣ ತೆಗೆದುಕೊಂಡು ನೇಮಕ ಮಾಡಿದ ಸರ್ಕಾರಕ್ಕೆ ಅವರು ಪ್ರಾಮಾಣಿಕರಾಗಿರಬೇಕು ಎಂದು ಬಯಸುವ ಯಾವ ಅಧಿಕಾರವೂ ಇಲ್ಲ. ‘ಅವರು ಭ್ರಷ್ಟರು’ ಎಂದು ದೂರುವ, ಆರೋಪಿಸುವ ನೈತಿಕತೆಯೂ ಇಲ್ಲ. ಈಗ ವಿಧಾನಸಭೆಯಲ್ಲಿ ಅಂಗೀಕರಿಸಿರುವ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಮಸೂದೆ–2017’ ಅನ್ನು ನೋಡಿದರೆ ಸರ್ಕಾರ ತನ್ನನ್ನು ತಾನು ‘ಪರಮ ಪವಿತ್ರ ಗೋವು’ ಎಂದು ಭಾವಿಸುತ್ತಿರುವಂತೆ ಭಾಸವಾಗುತ್ತದೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ಅಕ್ರಮಗಳಿಗೆ ತಾನು ಹೊಣೆಯಲ್ಲ ಎಂದೂ ಅದು ಹೇಳುತ್ತಿರುವಂತೆ ಕಾಣುತ್ತದೆ. ಆದರೆ, ರಾಜಭವನ ಮತ್ತು ವಿಧಾನಸೌಧ ಸೇರಿಕೊಂಡೇ ಹೇಗೆಲ್ಲ ಕುಲಪತಿಗಳ ನೇಮಕ ಮಾಡಿವೆ, ಹೇಗೆಲ್ಲ ಹುದ್ದೆಗಳನ್ನು ಹಂಚಿಕೊಂಡಿವೆ ಎಂಬುದು ಈಗ ಜನಜನಿತವಾಗಿದೆ. ಹಿಂದಿನ ರಾಜ್ಯಪಾಲರ ಕಾಲದಲ್ಲಿ ಇಡೀ ಉನ್ನತ ಶಿಕ್ಷಣ ಎಂಬುದು ಹೇಗೆ ಭ್ರಷ್ಟವಾಗಿ, ಕುಲಗೆಟ್ಟು ಹೋಯಿತು ಎಂಬುದೂ ಈಗ ರಹಸ್ಯವಾಗಿ ಉಳಿದಿಲ್ಲ.

ಕುಲಪತಿ ಹುದ್ದೆಯಲ್ಲಿ ಇದ್ದುಕೊಂಡು ಯಾರು ಅಕ್ರಮ ಮಾಡಿದ್ದಾರೆ ಎಂಬ ಕುರಿತು ಸರ್ಕಾರದ ಬಳಿ ದಾಖಲೆ ಇದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಯಾರೂ ಉನ್ನತ ಶಿಕ್ಷಣ ಸಚಿವರ ಅಥವಾ ಅವರ ಇಲಾಖೆಯ ‘ಪರಮ ಪ್ರಾಮಾಣಿಕ’ ಪ್ರಧಾನ ಕಾರ್ಯದರ್ಶಿಗಳ ಕೈ ಕಟ್ಟಿ ಹಾಕಿರಲಿಲ್ಲ. ಆಗಲೂ ಮತ್ತು ಈಗಲೂ ಕೈ ಕಟ್ಟಿಕೊಂಡು ಕುಳಿತಿರುವ ಉನ್ನತ ಶಿಕ್ಷಣ ಇಲಾಖೆ ಈಗ ಇದ್ದಕ್ಕಿದ್ದಂತೆ ಎಲ್ಲ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ಒಂದು ಆಕ್ರಮಣಕಾರಿ ಮಸೂದೆಯನ್ನು ತರಲು ಸಜ್ಜಾಗಿದೆ.

ಇವತ್ತಲ್ಲ ನಾಳೆ ಅದು ಪರಿಷತ್ತಿನಲ್ಲಿಯೂ ಅಂಗೀಕಾರ ವಾದರೆ, ಅದಕ್ಕೆ ರಾಜ್ಯಪಾಲರು ಯಾವುದೇ ಅಡ್ಡಿ ಮಾಡದೆ ಒಪ್ಪಿಗೆಯ ಮೊಹರು ಹಾಕಿದರೆ ಕುಲಪತಿಗಳ ನೇಮಕದ ಅಧಿಕಾರ ರಾಜ್ಯಪಾಲರ ಕೈ ತಪ್ಪಿ ರಾಜ್ಯ ಸರ್ಕಾರಕ್ಕೇ ಸಿಗಲಿದೆ, ವಿಶ್ವವಿದ್ಯಾಲಯಗಳ ಆವರಣದಲ್ಲಿ ಒಂದು ಕೋಟಿ ರೂಪಾಯಿ ಮೊತ್ತದ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ಅಧಿಕಾರ ಸರ್ಕಾರಕ್ಕೇ ಸಿಗಲಿದೆ, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡುವ ಅಧಿಕಾರವನ್ನೂ ಸರ್ಕಾರವೇ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ಅಂದರೆ, ವಿಶ್ವವಿದ್ಯಾಲಯಗಳಿಗೆ ತಾನು ನೇಮಿಸಿದ ಕುಲಪತಿಗಳ ಮೇಲೆ ಈ ಸರ್ಕಾರಕ್ಕೆ ನಂಬಿಕೆಯಿಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೇಂದ್ರೀಕೃತ ನೇಮಕ ಸಮಿತಿಯಲ್ಲಿ ಇಬ್ಬರು ನಿವೃತ್ತ ಕುಲಪತಿಗಳು ಇರುತ್ತಾರಂತೆ. ಆದರೆ, ಹಾಲಿ ಕುಲಪತಿಗಳ ಮೇಲೆ ನಂಬಿಕೆ ಇಲ್ಲದ ಸರ್ಕಾರ ನಿವೃತ್ತ ಕುಲಪತಿಗಳನ್ನು ಹೇಗೆ ನಂಬುತ್ತದೆ?

ಒಂದು ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕುಲಪತಿಗಳಿಗೆ ಅಧಿಕಾರ ಇಲ್ಲ ಎನ್ನುವ ಸರ್ಕಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಇದೇ ಅಧಿಕಾರ ಇದೆ ಎಂಬುದನ್ನು ಏಕೆ ಮರೆಯುತ್ತದೆ? ಅಂದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗಿಂತ ಕುಲಪತಿಗಳು ನಂಬಿಕೆಗೆ ಅನರ್ಹರು, ಕೀಳು ಎಂದು ಸರ್ಕಾರ ಭಾವಿಸುತ್ತದೆಯೇ?

ವಿಶ್ವವಿದ್ಯಾಲಯಗಳು ಎಂದರೆ ವಿಶ್ವದ ಎಲ್ಲ ವಿದ್ಯೆಯನ್ನು ಒಂದು ಕಡೆ ಕೊಡುವಂಥ ಸಂಸ್ಥೆಗಳು ಎಂದು ಅರ್ಥ. ಒಂದು ಕಾಲದಲ್ಲಿ ಎಂಥೆಂಥ ಕುಲಪತಿಗಳು ಇದ್ದರು ಎಂದು ನಾವು ಆಗಾಗ ಉದ್ಗಾರ ತೆಗೆಯುತ್ತೇವೆ. ಒಂದು ಕಾಲದಲ್ಲಿ ಎಂಥೆಂಥ ಶಿಕ್ಷಣ ಸಚಿವರು ಇದ್ದರು ಎಂದು ಉದ್ಗಾರ ತೆಗೆಯಲೂ ಅವಕಾಶ ಇದೆ. ಹಿಂದೆ ಬಹಳ ದೊಡ್ಡ ದೊಡ್ಡ ಪತ್ರಕರ್ತರು ಇದ್ದರು ಎಂದು ರಾಜಕಾರಣಿಗಳೂ ನಮ್ಮನ್ನು ಮೂದಲಿಸಬಹುದು! ಸಮಾಜವೇ ಹಾಗೆ. ಇದು ಅವನತಿಯ ಕಾಲ. ಮೌಲ್ಯಗಳು ಅಪರೂಪವಾಗು ತ್ತಿರುವ ಕಾಲ. ಆದರೆ, ಸರ್ಕಾರವೇ ಕುಳಿತುಕೊಂಡು ತಾನು ನೇಮಕ ಮಾಡುವ ಯಾರನ್ನೂ ನಂಬುವುದಿಲ್ಲ ಎಂದು ಹೇಳು ವುದು ಅತಿರೇಕ. ವಿಶ್ವವಿದ್ಯಾಲಯಗಳು ಕುಲಗೆಟ್ಟು ಹೋಗಿವೆ ನಿಜ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರರೇ ಇದ್ದಾರೆಯೇ? ಕುಲಪತಿಗಳು ಕೈಯಲ್ಲಿ ಹಣದ ಕಂತೆಗಳನ್ನು ಹಿಡಿದುಕೊಂಡು ವಿಧಾನಸೌಧಕ್ಕೆ ಬಂದು ಯಾರೋ ಅನಕ್ಷರಸ್ಥ ಉಪಕಾರ್ಯದರ್ಶಿ ಮುಂದೆ ನಿಂತು ತಮ್ಮ ಸಿಬ್ಬಂದಿಯ ಸಂಬಳವನ್ನು ಬಿಡುಗಡೆ ಮಾಡಿಸಿಕೊಂಡು ಹೋದ ನಿದರ್ಶನಗಳು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ಬಂದಿಲ್ಲವೇ? ಕುಲಪತಿಗಳ ಜೊತೆಗೆ ಈ ಅಧಿಕಾರಿಗಳು ಹೇಗೆ ಮಾತನಾಡುತ್ತಾರೆ ಎನ್ನುವುದಾದರೂ ಸಚಿವರಿಗೆ ಗೊತ್ತಿದೆಯೇ? ಹೋಗಿ ಬಂದಲ್ಲೆಲ್ಲ ‘ಕುಲಪತಿಗಳು ಭ್ರಷ್ಟರು’ ಎಂದು ಸಚಿವರೇ ಹೇಳಿದರೆ ಅಧಿಕಾರಿ ಗಳೇಕೆ ಅವರಿಗೆ ಮರ್ಯಾದೆ ಕೊಡುತ್ತಾರೆ?

ಈ ಕುಲಪತಿಗಳೂ ಬೆನ್ನೆಲುಬು ಇಲ್ಲದವರು, ಯಾರಾದರೂ ಒಬ್ಬರಾದರೂ ಸಚಿವರ ಮುಖಕ್ಕೆ ರಾಜೀನಾಮೆ ಎಸೆದು, ‘ನಿಮಗೆ ಒಳ್ಳೆಯದಾಗಲಿ’ ಎಂದು ಹೇಳುತ್ತಾರೆ ಎಂದು ನನಗೆ ಅನಿಸಿತ್ತು. ಅವರೂ, ಸಚಿವರು ಅಂದುಕೊಂಡಿರುವ ಭ್ರಷ್ಟ ನಾನಲ್ಲ. ತಾನಲ್ಲ ಎಂದು ಸುಮ್ಮನೆ ಇದ್ದಾರೋ ಏನೋ? ಅರ್ಥವಾಗುತ್ತಿಲ್ಲ. ನಮ್ಮ ಅಧ್ಯಾಪಕರು ತಾವು ಕುಲಪತಿ ಅಥವಾ ರಿಜಿಸ್ಟ್ರಾರ್‌ ಆಗಬೇಕು ಎಂದು ಯಾಕೆ ಇಷ್ಟು ಹಾತೊರೆಯುತ್ತಿದ್ದಾರೆ? ಒಬ್ಬ ಅಧ್ಯಾಪಕನಾಗಿ ತರಗತಿಯಲ್ಲಿ ಪಾಠ ಮಾಡುತ್ತ ಇರುವುದು, ತನಗೆ ಅನಿಸಿದ್ದನ್ನು ಹೇಳುತ್ತ, ಬರೆಯುತ್ತ ಇರುವುದು ಹೆಚ್ಚು ಘನತೆಯ ಕೆಲಸ ಎಂದು ಅವರಿಗೆ ಏಕೆ ತಿಳಿಯುತ್ತಿಲ್ಲ? ಗೂಟದ ಕಾರಿನ ಮೋಹಕ್ಕಾಗಿ ನಾವು ಸಚಿವರ ಬಳಿ ಹೋಗಿ ಬಾಲ ಅಲ್ಲಾಡಿಸಿ ಯಾವುದಾದರೂ ಹುದ್ದೆಯ ಕೃಪೆ ಕೇಳಿದರೆ ಆತ ಎಂಥ ಅಜ್ಞಾನಿಯಾಗಿದ್ದರೂ ತನಗೆ ಎಂಥ ಅಧಿಕಾರ ಇದೆಯಲ್ಲ ಎಂದು ಬೀಗುತ್ತಾನೆ. ಮತ್ತು ನಮ್ಮನ್ನು ತುಚ್ಛವಾಗಿ ಕಾಣುತ್ತಾನೆ. ವಿಧಾನಸೌಧ ಮತ್ತು ರಾಜಭವನದ ಸುತ್ತಮುತ್ತ ಹೀಗೆ ಬಾಲ ಅಲ್ಲಾಡಿಸುವವರು ಹೆಚ್ಚು ಆಗಿರು ವುದರಿಂದಲೇ ಸರ್ಕಾರದಲ್ಲಿ ಇದ್ದವರು ಅಹಂಕಾರಿಗಳು ಆಗು ತ್ತಾರೆ. ತಾನು ಸ್ವತಃ ನಿರಕ್ಷರಿಯಾದರೂ, ನೆಟ್ಟಗೆ ಒಂದು ವಾಕ್ಯ ಬರೆಯಲು ಬಾರದವನು ಆಗಿದ್ದರೂ ವಿಶ್ವವಿದ್ಯಾಲಯಕ್ಕೆ ಕುಲಪತಿ ಗಳನ್ನು ನೇಮಿಸುವ ಅಧಿಕಾರ ತನಗೆ ಇದೆ ಎಂದು ಅವರು ಉಬ್ಬತೊಡಗುತ್ತಾರೆ. ಇವರನ್ನು ನಿಯಂತ್ರಿಸುವ ಅಧಿಕಾರ ತನ್ನ ಬಳಿ ಇದೆ ಎಂದು ನಿರಂಕುಶರಾಗುತ್ತಾರೆ. ಈಗ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮಸೂದೆ ಅಂಥ ನಿರಂಕುಶ ಮನಃಸ್ಥಿತಿಯ ಒಂದು ಫಲ.

ಕುವೆಂಪು ಅವರು ವಿದ್ಯಾರ್ಥಿಗಳಿಗೆ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಹೇಳಿದ್ದರು. ಉನ್ನತ ಶಿಕ್ಷಣ ಸಚಿವರು ಆ ಭಾಷಣವನ್ನು ಓದಿದ್ದಾರೋ ಇಲ್ಲವೋ ತಿಳಿಯದು. ಮುಖ್ಯಮಂತ್ರಿಯವರು ಖಂಡಿತ ಓದಿರುತ್ತಾರೆ. ಅಥವಾ ಆ ಭಾಷಣ ಮಾಡಿದ ಪ್ರಭಾವವನ್ನು ಮತ್ತು ಹುಟ್ಟು ಹಾಕಿದ ವಿವಾದವನ್ನು ತಿಳಿದಿರುತ್ತಾರೆ. ವಿಶ್ವವಿದ್ಯಾಲಯಗಳು ಇಂಥ ನಿರಂಕುಶ ಮತಿಗಳನ್ನು ಹುಟ್ಟಿ ಹಾಕಬೇಕು. ಹಾಗೆಂದು ಕುವೆಂಪು ಹೇಳಿದ್ದರು, ಬಯಸಿದ್ದರು. ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರ ಹಾಕಲು ಹಿಡಿದಿರುವ ಅಂಕುಶಗಳನ್ನು ನೋಡಿದರೆ ಅವರು ಎಲ್ಲ ಭಿನ್ನಾಭಿಪ್ರಾಯವನ್ನು, ಚರ್ಚೆಯನ್ನು ಹೊಸಕಿ ಹಾಕುವಂತೆ ಕಾಣುತ್ತದೆ. ಕೇಂದ್ರೀಕೃತವಾದ ಯಾವ ವ್ಯವಸ್ಥೆಯಲ್ಲಿಯೂ ಭಿನ್ನಾಭಿಪ್ರಾಯಕ್ಕೆ ಅವಕಾಶ ಇರುವುದಿಲ್ಲ.

ಇದು ವಿಕೇಂದ್ರೀಕರಣದ ಕಾಲ. ಸ್ವಾಯತ್ತತೆಯ ಕಾಲ. ವೈವಿಧ್ಯಕ್ಕೆ ಅವಕಾಶ ಇರುವ ಕಾಲ. ಈ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂಥದು ಎಂಬ ನಂಬಿಕೆಯನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಹೊಂದಿದ್ದರು. ಕರ್ನಾಟಕದಲ್ಲಿ ಕಲಬುರ್ಗಿಯ ಸಂಸ್ಕೃತಿಯೇ ಬೇರೆ, ಮೈಸೂರಿನ ಸಂಸ್ಕೃತಿಯೇ ಬೇರೆ. ಅಲ್ಲಿನ ಊಟ, ಉಪಚಾರ, ಬಟ್ಟೆ, ಬರೆ, ಭಾಷೆ ಎಲ್ಲವೂ ಬೇರೆ ಬೇರೆ. ಹಾಗೆ ವೈವಿಧ್ಯಮಯವಾಗಿರುವ ಒಂದು ನಾಡಿನಲ್ಲಿ ಏಕರೂಪವಾದ ಒಂದು ಮಸೂದೆಯನ್ನು ಹೇಗೆ ತರಲು ಸಾಧ್ಯ ಎಂದಾದರೂ ಉನ್ನತ ಶಿಕ್ಷಣ ಸಚಿವರು ಯೋಚನೆ ಮಾಡಬೇಕಿತ್ತು. ಸಂಪುಟದಲ್ಲಿನ ವಿವೇಕಿಗಳು ಯೋಚಿಸಬೇಕಿತ್ತು. ಏಕರೂಪತೆ, ಗುಣಮಟ್ಟ ಮತ್ತು ಕೌಶಲ ಗಳನ್ನೂ ಏಕರೂಪವಾಗಿ ಹೆಚ್ಚಿಸುತ್ತದೆ ಎಂದು ನಂಬುವುದೇ ಒಂದು ಮಿಥ್ಯೆ.

ಸರ್ಕಾರದ ಉಕ್ಕಿನ ನಿಯಂತ್ರಣ ಇರುವ ಎಲ್ಲಿಯೂ ಸೃಜನ ಶೀಲವಾದುದು ನಿರ್ಮಾಣವಾಗಿಲ್ಲ. ನಿರ್ಮಾಣವಾಗುವುದಿಲ್ಲ. ಶಿಕ್ಷಣ ಕ್ಷೇತ್ರವನ್ನಾದರೂ ಅದು ತನ್ನ ಹಿಡಿತದಿಂದ ಮುಕ್ತವಾಗಿ ಇಡಬೇಕಿತ್ತು. ನಮ್ಮ ವಿಶ್ವವಿದ್ಯಾಲಯಗಳಿಗೆ ದೊಡ್ಡ ಇತಿಹಾಸ ವಿದೆ. ಇಲ್ಲಿ ಅತಿರಥರು ಮಹಾರಥರು ಪಾಠ ಮಾಡಿದರು. ಕುಲಪತಿಗಳು ಆಗಿದ್ದರು. ಇಡೀ ನಾಡಿಗೆ ಮಾರ್ಗದರ್ಶನ ಮಾಡು ವಂಥ ಚಿಂತಕರು ಇಲ್ಲಿ ಇದ್ದರು. ಆದರೂ ಜಾಗತಿಕವಾಗಿ ನೋಡಿ ದಾಗ ನಮ್ಮ ಒಂದು ವಿಶ್ವವಿದ್ಯಾಲಯವಾದರೂ ನೊಬೆಲ್‌ಗೆ ಅರ್ಹವಾದ ಒಬ್ಬ ವ್ಯಕ್ತಿಯನ್ನೂ ಹುಟ್ಟಿ ಹಾಕಲಿಲ್ಲ. ನಮ್ಮ ಮಕ್ಕಳು ಉನ್ನತ ಶಿಕ್ಷಣ ಎಂದರೆ ಈಗಲೂ ಅಮೆರಿಕ, ಇಂಗ್ಲೆಂಡ್‌, ಜರ್ಮನಿ ಎಂದು ಏಕೆ ಹೋಗುತ್ತಾರೆ? ಅವರು ವಿಧಿಸುವ ಲಕ್ಷಾಂತರ ರೂಪಾಯಿ ಶುಲ್ಕ ಕೊಡಲು ಏಕೆ ಸಿದ್ಧವಾಗುತ್ತಾರೆ?

ಉನ್ನತ ಶಿಕ್ಷಣ ಸಚಿವರು ಕುಲಪತಿಗಳಿಗೆ ಮೂಗುದಾರ ವನ್ನಾದರೂ ಹಾಕಲಿ, ಬೇಕಾದರೆ ಅವರನ್ನು ನೇಣಿಗಾದರೂ ಏರಿಸಲಿ. ಆದರೆ, ಅಲ್ಲಿ ಕಲಿಯುವ ಮಕ್ಕಳಿಗೆ ಎಷ್ಟು ಮಂದಿ ಶಿಕ್ಷಕರು ಬೇಕು ಮತ್ತು ಅಷ್ಟು ಶಿಕ್ಷಕರು ಅಲ್ಲಿ ಇದ್ದಾರೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಅವರದೇ ಕೆಲಸ ಅಲ್ಲವೇ? ನಮ್ಮ ವಿಶ್ವವಿದ್ಯಾಲಯಗಳು ವಿಧಿಸುವ ಶುಲ್ಕವನ್ನು ಮಕ್ಕಳು ಕೊಡು ತ್ತಿದ್ದಾರೆ, ಆದರೆ, ಅವರಿಗೆ ಕೊಡಬೇಕಾದ ಶಿಕ್ಷಣದ ಮಟ್ಟವನ್ನು ವಿಶ್ವವಿದ್ಯಾಲಯಗಳು ಕಾಯ್ದುಕೊಳ್ಳುತ್ತಿವೆಯೇ ಎಂದು ನೋಡಿ ಕೊಳ್ಳಬೇಕಾದವರೂ ಅವರೇ ಅಲ್ಲವೇ? ವಿಶ್ವವಿದ್ಯಾಲಯಗಳಲ್ಲಿ ಶೇಕಡ 44 ರಷ್ಟು ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ನಾವು ಎಂಥ ಉನ್ನತ ಶಿಕ್ಷಣ ಕೊಡಲು ಸಾಧ್ಯ? ಇಂದು ಎಂಎಸ್ಸಿ ಪಾಸು ಮಾಡಿದವರನ್ನು ನಾಳೆ ಅತಿಥಿ ಉಪನ್ಯಾಸಕ ಎಂದು ನೇಮಕ ಮಾಡಿ ಪಾಠ ಮಾಡಿಸುವ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ನಾವು ಹೇಳಲು ಆಗುತ್ತದೆಯೇ? ಹಾಗಾದರೆ ನಾಯಿಪಾಡು ಆಗಿರುವ ಉನ್ನತ ಶಿಕ್ಷಣದ ಅವಸ್ಥೆಗೆ ಯಾರು ಕಾರಣ? ಯಾರು ಹೊಣೆ? ಕುಲಪತಿಗಳೇ? ಅಥವಾ ‘ಎಲ್ಲವನ್ನೂ ನಾನು ನಿಯಂತ್ರಿಸುವೆ, ಸರಿ ಮಾಡುವೆ’ ಎಂದು ಹೊರಟಿರುವ ಸರ್ಕಾರವೇ?

ಎರಡು ವರ್ಷಗಳ ಹಿಂದೆ ಲಂಡನ್ನಿನ ಇಂಪೀರಿಯಲ್‌ ಕಾಲೇಜು ಮತ್ತು ಅದೇ ಊರಿನ ಕಿಂಗ್ಸ್‌ ಕಾಲೇಜಿಗೆ ಹೋಗಿದ್ದೆ. ಎರಡೂ ಕಾಲೇಜುಗಳಲ್ಲಿ ಕನಿಷ್ಠವೆಂದರೂ 20,000 ವಿದ್ಯಾರ್ಥಿ ಗಳು ಓದುತ್ತಾರೆ. ಅವು ಭವ್ಯ ಎನಿಸುವಂಥ ಕ್ಯಾಂಪಸ್ಸುಗಳು. ಎರಡೂ ಕಾಲೇಜುಗಳು ತಲಾ ಹತ್ತಕ್ಕಿಂತ ಹೆಚ್ಚು ನೊಬೆಲ್‌ ಪುರಸ್ಕೃತರನ್ನು ತಯಾರಿಸಿವೆ. ಅವರ ಭಾವಚಿತ್ರಗಳು ಕಾಲೇಜಿನ ಮೊಗಸಾಲೆಯಲ್ಲಿಯೇ ನಮ್ಮನ್ನು ಸ್ವಾಗತಿಸುತ್ತವೆ. ಪ್ರತಿ ಕಾಲೇಜಿನ ಲ್ಲಿಯೂ ಜಗತ್ತಿನ 150ಕ್ಕಿಂತ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಓದುತ್ತಾರೆ. ‘ಜಾಗತಿಕವಾಗಿ ಜನರ ಜೀವನ ಮತ್ತು ಪರಿಸರದ ಗುಣಮಟ್ಟವನ್ನು ಸುಧಾರಿಸುವುದು ಹೇಗೆ’ ಎಂಬ ಕಾರ್ಯತಂತ್ರ ರೂಪಿಸಲು ಇಂಪೀರಿಯಲ್‌ ಕಾಲೇಜು 2015–20ರ ಅವಧಿ ಯನ್ನು ಗೊತ್ತುಪಡಿಸಿಕೊಂಡಿದೆ. ಎಂಥ ಉದಾತ್ತ ಗುರಿ ಇದು! ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸ ಎಂದರೆ ಇದು; ಸಾಧಿಸಬೇಕಾದ ಮಟ್ಟ ಎಂದರೆ ಇದು. ಅಲ್ಲಿನ ಅಧ್ಯಾಪಕರ ಜೊತೆಗೆ ನಾವು ಸಂವಾದ ಮಾಡಿದಾಗ ಸಿಕ್ಕ ಒಳನೋಟಗಳು ಒಂದೆರಡಲ್ಲ. ಅವೆಲ್ಲ ನೂರಕ್ಕೆ ನೂರು ಸ್ವಾಯತ್ತ ಕಾಲೇಜುಗಳು. ಅವುಗಳಿಗೆ ಸ್ವಾಯತ್ತತೆ ಇದೆ ಎಂಬ ಕಾರಣಕ್ಕಾಗಿಯೇ ಅಲ್ಲಿ ಸೃಜನಶೀಲತೆ ಇದೆ, ಚಿಂತನಶೀಲತೆ ಇದೆ. ಇಡೀ ಮಾನವ ಜನಾಂಗಕ್ಕೆ ಏನಾದರೂ ಒಳಿತು ಮಾಡಬೇಕು ಎಂಬ ಹಂಬಲ ಇದೆ. ಮತ್ತು ಅದೇ ಕಾರಣಕ್ಕಾಗಿ ವಿಶ್ವದ ಹತ್ತು ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಇಂಪೀರಿಯಲ್‌ ಕಾಲೇಜಿಗೆ ಒಂದು ಸ್ಥಾನವಿದೆ. ಯಾವಾಗಲೂ ಶ್ರೇಷ್ಠತೆಯಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಇರುವ ಹಾರ್ವರ್ಡ್‌ ಮತ್ತು ಆಕ್ಸಫರ್ಡ್‌ ವಿಶ್ವವಿದ್ಯಾಲಯಗಳು ಇನ್ನೂ ಹೇಗಿರಬಹುದು? ಎಷ್ಟು ಉನ್ನತವಾಗಿ ಇರಬಹುದು?

ನಮ್ಮ ವಿಶ್ವವಿದ್ಯಾಲಯಗಳು ಜನಜೀವನದ ಗುಣಮಟ್ಟ ಮತ್ತು ಪರಿಸರದ ಗುಣಮಟ್ಟ ಸುಧಾರಿಸುವುದು ಹೇಗೆ ಎಂದು ಚಿಂತಿಸುವುದು ದೂರ ಉಳಿಯಿತು. ಅಲ್ಲಿ ಓದಿ ಹೊರಗೆ ಬಂದ ಒಬ್ಬ ವಿದ್ಯಾರ್ಥಿಗೆ ಒಂದು ಒಳ್ಳೆಯ ಕೆಲಸವಾದರೂ ಬೇಗ ಸಿಗುತ್ತದೆಯೇ? ನಲವತ್ತು ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿ ಪಡೆದ ನಾನೇ ನಾಲ್ಕು ವರ್ಷ ನೌಕರಿಗಾಗಿ ಅಲೆದಾಡಿದೆನೆಂದ ಮೇಲೆ ಈಗಿನ ಹುಡುಗ ಹುಡುಗಿಯರ ಪಾಡು ಏನು ಹೇಳುವುದು? ಹೊರಗೆ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವಾದರೂ ಹೇಗಿದೆ? ಅದಕ್ಕೆ ಯಾರು ಹೊಣೆ?

ಚಿಂತನಶೀಲತೆಯನ್ನು, ವಿದ್ವತ್ತನ್ನು, ವಾಗ್ವಾದಗಳನ್ನು, ಭಿನ್ನಾಭಿಪ್ರಾಯಗಳನ್ನು ಮತ್ತು ತಾತ್ವಿಕ ಸಂಘರ್ಷಗಳನ್ನು ಹುಟ್ಟು ಹಾಕುವ ತಾಣಗಳಾಗಿ ನಮ್ಮ ವಿಶ್ವವಿದ್ಯಾಲಯಗಳು ರೂಪು ಗೊಳ್ಳಬೇಕಿತ್ತು. ಹಾಗೆ ಆಗಲಿಲ್ಲ. ಅದಕ್ಕೆ ಸರ್ಕಾರದ ನಿರಂಕುಶ ಅಧಿಕಾರ ಕಾರಣವಾಗಿರಬಹುದು, ವಿಶ್ವವಿದ್ಯಾಲಯಗಳ ನೇಮಕ ದಲ್ಲಿ ಇರುವ ರಾಜಕೀಯ ಹಸ್ತಕ್ಷೇಪ ಕಾರಣ ಆಗಿರಬಹುದು, ಕೈ ತುಂಬ ಸಂಬಳ ಪಡೆಯುತ್ತಿರುವ ಅಧ್ಯಾಪಕರು ‘ನಮಗೇಕೆ ಇದೆಲ್ಲ ಉಸಾಬರಿ’ ಎಂದು ಸಂಭಾವಿತರು ಆಗಿರಬಹುದು ಅಥವಾ ಅವರು ಸರ್ಕಾರದಲ್ಲಿ ಇರುವವರ ಭಟ್ಟಂಗಿಗಳು, ಬಾಲಬಡುಕರು ಆಗಿರಬಹುದು.

ಇಲ್ಲವಾದರೆ ವೈಯಕ್ತಿಕವಾಗಿ ತಮ್ಮನ್ನು ಮಾತ್ರವಲ್ಲ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೇ ಮೂಗುದಾರ ಹಾಕಲು ಹೊರಟಿರುವ ಸರ್ಕಾರದ ವಿರುದ್ಧ ವಿಶ್ವವಿದ್ಯಾಲಯಗಳ ಆವರಣದಿಂದಲೇ ಏನಾದರೂ ಪ್ರತಿಭಟನೆಯ ಧ್ವನಿ ಕೇಳಿ ಬರಬೇಕಿತ್ತಲ್ಲ? ನಾಡಿನ ಒಟ್ಟು ಬೌದ್ಧಿಕತೆಯೇ ಈಗ ಒತ್ತೆಯಲ್ಲಿ ಇದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT