ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ?

Last Updated 22 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಇದೇ ತಿಂಗಳ 11ನೇ ತಾರೀಕಿನಂದು ಇಡೀ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಯ್ತು. ಇನ್ನು ಮುಂದೆ ಪ್ರತಿ ವರ್ಷವೂ ಈ ದಿನವನ್ನು (ಅಕ್ಟೋಬರ್ 11) ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವೆಂದು ಆಚರಿಸಲಾಗುತ್ತದೆ ಎಂದು ವಿಶ್ವಸಂಸ್ಥೆ ಘೋಷಿಸಿದೆ.
 
ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರಗಳು ಮತ್ತು ನಾಗರಿಕ ಸಂಸ್ಥೆಗಳು ಶ್ರಮಿಸಬೇಕೆಂದು ಕರೆ ನೀಡಿರುವ ವಿಶ್ವಸಂಸ್ಥೆ, ಅವರ ಶಿಕ್ಷಣದತ್ತ ವಿಶೇಷ ಗಮನವನ್ನು ಹರಿಸಬೇಕೆಂಬ ಸಂದೇಶವನ್ನೂ ಸಾರಿದೆ.

ಇಂದಿಗೂ ಜಗತ್ತಿನಾದ್ಯಂತ 700 ಲಕ್ಷ ಹೆಣ್ಣು ಮಕ್ಕಳು 18ನೇ ವಯಸ್ಸನ್ನು ತಲುಪುವ ಮುನ್ನವೇ ವಿವಾಹವಾಗುತ್ತಿದ್ದಾರೆ. ಅಪ್ರಾಪ್ತ ಮಯಸ್ಕರ ವಿವಾಹಗಳನ್ನು ತಡೆಗಟ್ಟಿ ಅವರನ್ನು ಶಾಲೆಗಳಲ್ಲಿ ಉಳಿಸಿಕೊಳ್ಳಬೇಕಾದ್ದು ನಮ್ಮ ಆದ್ಯತೆಯಾಗಬೇಕು, ಈ ನಿಟ್ಟಿನಲ್ಲಿ ಬಾಲ್ಯ ವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವ ದೇಶಗಳು ಚುರುಕಾಗಬೇಕಾಗಿದೆ ಎಂಬುದು ವಿಶ್ವಸಂಸ್ಥೆಯ ಆಶಯ.

ಇಂಥ ದೇಶಗಳ ಸಾಲಿಗೆ ಭಾರತವೂ ಸೇರಿದೆ. ವಿಶ್ವಸಂಸ್ಥೆಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿರುವ ಇತರ ದೇಶಗಳೆಂದರೆ ಯೆಮೆನ್, ಇಥಿಯೋಪಿಯ, ನೈಜರ್, ಗ್ವಾಟೆಮಾಲ ಮತ್ತು ಜಾಂಬಿಯಾ.

ಹೆಣ್ಣು ಮಕ್ಕಳ ಹಕ್ಕುಗಳತ್ತ ಜಗತ್ತಿನ ಗಮನ ಸೆಳೆಯಲು ಮತ್ತೊಂದು  ದಿನಾಚರಣೆಯ ಘೋಷಣೆಯಾದದ್ದು ಸರಿಯೇ. ಆದರೆ ಎರಡೇ ದಿನಗಳ ಹಿಂದೆ, ಎಂದರೆ ಅಕ್ಟೋಬರ್ 9ರಂದು ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮಿಂಗೋರಾ ಎಂಬ ಪಟ್ಟಣದಲ್ಲಿ ಹೆಣ್ಣು ಮಕ್ಕಳ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಲಾಲಾ ಎಂಬ 15 ವರ್ಷ ವಯಸ್ಸಿನ ಹೆಣ್ಣು ಮಗಳ ಮೇಲೆ ತಾಲಿಬಾನ್ ಗುಂಡಿನ ದಾಳಿ ನಡೆದಿರುವುದು, ಹೆಣ್ಣು ಮಕ್ಕಳ ಹಕ್ಕುಗಳ ಘೋಷಣೆಗೂ ಆಚರಣೆಗೂ ನಡುವೆ ಇರುವ ಅಂತರವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ದಮನ ಮಾಡುತ್ತಿರುವ ತಾಲಿಬಾನಿ ಶಕ್ತಿಗಳ ವಿರುದ್ಧ ಧ್ವನಿಯೆತ್ತಿದ ಮಲಾಲಾಳನ್ನು ಕೊಲ್ಲವ ಉದ್ದೇಶದಿಂದಲೇ ಮೂಲಭೂತವಾದಿ ಮನಸ್ಸುಗಳು ನಡೆಸಿದ ಈ ಹಲ್ಲೆಯಲ್ಲಿ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು ಆಶ್ಚರ್ಯವೇ. ತೀವ್ರವಾಗಿ ಗಾಯಗೊಂಡಿರುವ ಮಲಾಲಾ ಇಂಗ್ಲೆಂಡಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಮೇಲೆ ನಡೆದ ಆಕ್ರಮಣಕ್ಕೆ ವಿಶ್ವದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಆದರೂ ತಮ್ಮ ಮೂಲಭೂತ ಹಕ್ಕುಗಳ ದಮನವಾದಾಗ ಧ್ವನಿ ಎತ್ತುವಂಥ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಇಂದಿಗೂ ಎದುರಿಸಬಹುದಾದಂಥ ಪ್ರತಿರೋಧ ಹಾಗೂ ಅವರನ್ನು ಸುತ್ತುವರೆದಿರುವ ಅಪಾಯಕ್ಕೆ ಮಲಾಲಾ ಪ್ರಕರಣ ಸಾಕ್ಷಿಯಾಗಿದೆ.
ಅತ್ಯಂತ ಸಣ್ಣ ಮಯಸ್ಸಿನಲ್ಲೇ ಮಲಾಲಾ ಪ್ರತಿಗಾಮಿ ಪ್ರವೃತ್ತಿಗಳನ್ನು ವಿರೋಧಿಸುವ ಸಾಹಸವನ್ನು ಪ್ರದರ್ಶಿಸಿ ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೊಡ್ಡ ಹೋರಾಟವನ್ನೇ ಪ್ರಾರಂಭಿಸಿದ್ದಕ್ಕೆ ಒಂದು ಇತಿಹಾಸವೇ ಇದೆ.

ಇಡೀ ಸ್ವಾತ್ ಕಣಿವೆಯನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ತಾಲಿಬಾನ್, ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಿ, ಅನೇಕ ಶಾಲಾ ಕಟ್ಟಡಗಳನ್ನು ನೆಲಸಮ ಮಾಡಿದೆ. ತನ್ನಂಥ ಸಾವಿರಾರು ಹೆಣ್ಣು ಮಕ್ಕಳ ಬದುಕು ಕತ್ತಲೆಯ ಕೂಪಕ್ಕೆ ಜಾರುತ್ತಿರುವುದನ್ನು ಸಹಿಸದ ಮಲಾಲಾ ತಂದೆಯ ಬೆಂಬಲದೊಂದಿಗೆ ಸ್ವಾತ್ ಪ್ರದೇಶದಲ್ಲಿ ತಾಲಿಬಾನ್ ವಿರುದ್ಧ ಒಂದು ಸಮರವನ್ನೇ ಸಾರಿದ್ದಳು.

ಮಾಧ್ಯಮಗಳು ಮತ್ತು ಸಾರ್ವಜನಿಕ ವೇದಿಕೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿದ ಮಲಾಲಾ ಸಹಜವಾಗಿಯೇ ತಾಲಿಬಾನ್‌ನ ಕೋಪಕ್ಕೆ ಆಹಾರವಾದಳು. ಪಾಶ್ಚಿಮಾತ್ಯ ಮೌಲ್ಯಾಚರಣೆಗಳಿಗೆ ಬೆಂಬಲ ನೀಡುವುದರ ಮೂಲಕ ಆಕೆ ಧಾರ್ಮಿಕ ಅಪಚಾರವೆಸಗುತ್ತಿದ್ದಾಳೆ, ಆದ್ದರಿಂದ ಅವಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲೇಬೇಕು ಎಂಬುದು ತಾಲಿಬಾನ್ ನಾಯಕರ ವಾದ.
 
ಮಲಾಲಾ ಶಾಲೆಯಿಂದ ಮರಳುತ್ತಿದ್ದ ವಾಹನವನ್ನು ತಡೆಗಟ್ಟಿ ಆಕೆಯ ಮೇಲೆ ಗುಂಡುಗಳನ್ನು ಹಾರಿಸಿದ ತಾಲಿಬಾನ್ ತೀವ್ರಗಾಮಿಗಳು, ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಡುವ ಮಾತು ಹಾಗಿರಲಿ, ಅವಳಿಗೆ ತಕ್ಕ ಶಾಸ್ತಿಯಾಯಿತು ಎಂದು ತಮ್ಮ ಅಮಾನವೀಯ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೇನೋ ಮಲಾಲಾ ಸುರಕ್ಷಿತ ವಲಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ ಹೊರ ದೇಶವೊಂದರಲ್ಲಿ ಎಷ್ಟು ದಿನ ಆಕೆಯಾಗಲಿ, ಆಕೆಯ ಕುಟುಂಬವಾಗಲಿ ಮುಂದುವರೆಯಲು ಸಾಧ್ಯ? ತಾಲಿಬಾನ್ ಹಾಗೂ ಇತರ ಪ್ರತಿಗಾಮಿ ಶಕ್ತಿಗಳನ್ನು ಪ್ರಶ್ನಿಸುವಂಥ ಹೆಣ್ಣು ಮಕ್ಕಳು ಅವರ ಜೀವತ್ಯಾಗ ಮಾಡಬೇಕು, ಇಲ್ಲವೇ ದೇಶಾಂತರ ಹೋಗಬೇಕು. ತಮ್ಮ ತಾಯಿನಾಡಿನಲ್ಲಿಯೇ ಇದ್ದು ಮಾನವ ಹಕ್ಕುಗಳ ಹೋರಾಟವನ್ನು ನಡೆಸಬೇಕೆಂದರೆ ಭೂಗತವಾಗಬೇಕು.

ಇಂತಹ ಅಮಾನವೀಯ ಪರಿಸ್ಥಿತಿಗಳಲ್ಲಿ ಜೀವನವನ್ನು ಸವೆಸುತ್ತಿರುವ ಹೆಣ್ಣು ಮಕ್ಕಳ ಬದುಕಿನ ಬವಣೆಗಳ ಬಗ್ಗೆ ಮಾನವ ಹಕ್ಕುಗಳ ವಲಯದಲ್ಲಿ ಎಷ್ಟು ಚರ್ಚೆ ನಡೆಯುತ್ತಿದೆ ಎಂಬ ಪ್ರಶ್ನೆಯನ್ನು ನಾವು ಈಗಲಾದರೂ ಕೇಳಬೇಕಾಗಿದೆ.

ಇದೇ ತಾಲಿಬಾನ್ ಮತ್ತು ಈ ಸಂಘಟನೆಯ ಪ್ರೇರಿತ ಪ್ರಗತಿ ವಿರೋಧಿ ಪ್ರವೃತ್ತಿಗಳ ವಿರುದ್ಧ ತನ್ನ ಎಂಟನೇ ವಯಸ್ಸಿನಿಂದಲೇ ಸಂಘರ್ಷವನ್ನು ನಡೆಸುತ್ತಿರುವ 34 ವರ್ಷದ ಆಫ್ಘಾನಿಸ್ತಾನದ ದಿಟ್ಟ ಮಹಿಳೆ ಮಲಲಾಯ್ ಜೋಲಾ ಕೂಡ ನಿರಂತರವಾಗಿ ಅಪಾಯದ ವಲಯದಲ್ಲಿ ಬದುಕುತ್ತಿರುವಂಥ ಮತ್ತೋರ್ವ  ಸ್ತ್ರೀ ಶಕ್ತಿ .

ಹೊರನೋಟಕ್ಕೆ ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಅಸ್ತಿತ್ವದಲ್ಲಿರುವಂತೆ ಜಗತ್ತಿಗೆ ಭಾಸವಾದರೂ ವಾಸ್ತವದಲ್ಲಿ ಅಲ್ಲಿ ಇಂದಿಗೂ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ನಡೆಯುತ್ತಿದೆ ಎಂದು ಬಹಿರಂಗ ಹೇಳಿಕೆ ನೀಡುವುದರ ಮೂಲಕ ಜೋಯ, ತಾಲಿಬಾನಿನ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ತನ್ನನ್ನು ಸುತ್ತುವರೆದಿದ್ದ ಅಪಾಯವನ್ನು ಲೆಕ್ಕಿಸದೆ ಸಂಸತ್ತಿನ ಚುನಾವಣೆಗಳಿಗೆ ಸ್ಪರ್ಧಿಸಿದ ಆಕೆ ಅಪಾರ ಜನಬೆಂಬಲದಿಂದ ಚುನಾಯಿತಳಾದದ್ದು ಆಕೆಯ ಹೋರಾಟ ಜನಪರವಾದದ್ದು ಎಂಬುದಕ್ಕೆ ಸಾಕ್ಷಿಯಾಯಿತು. ಸಂಸತ್ತಿನ ಒಳಗೆ ಆಕೆ ನಡೆಸಿದ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾಗದ ಪ್ರತಿಗಾಮಿ ರಾಜಕೀಯ ಶಕ್ತಿಗಳು, ಜೋಯಾಳ ಮೇಲೆ ಸಂಸತ್ತಿನ ಒಳಗೇ ಹಲ್ಲೆ ನಡೆಸಿದ್ದು, ಆಕೆಗೆ ಬಹಿಷ್ಕಾರ ಹಾಕಿದ್ದು ಇಂದು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿರುವಂಥ ಸತ್ಯಗಳು.

ತನ್ನ ಮೇಲೆ ನಡೆದ ಆಕ್ರಮಣದಿಂದ ಎದೆಗುಂದದ ಮಲಾಯ್ ಜೋಯಾ ವಿವಿಧ ದೇಶಗಳಲ್ಲಿ ಸಂಚರಿಸಿ ತನ್ನ ದಿಟ್ಟ ಬರಹಗಳು ಮತ್ತು ಭಾಷಣಗಳ ಮೂಲಕ ತಾನು ನಡೆಸುತ್ತಿರುವ ಸಮಾನತಾ ಹೋರಾಟಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ, ಮೆಚ್ಚುಗೆ ಮತ್ತು ಬೆಂಬಲಗಳನ್ನು ಪಡೆದಿದ್ದಾಳೆ.

ಜೋಯಾ ತಾಲಿಬಾನಿ ಸಂಸ್ಕೃತಿಯ ವಿರುದ್ಧವಷ್ಟೇ ದನಿ ಎತ್ತಿಲ್ಲ, ಆಘ್ವಾನಿಸ್ತಾನದ ಅಂತಃಸತ್ವಕ್ಕೆ ತೀವ್ರವಾಗಿ ಘಾಸಿಯನ್ನುಂಟುಮಾಡುತ್ತಿರುವ ಅಮೆರಿಕ ಮತ್ತು ಇತರ ದೇಶಗಳಿಗೂ ಮುಜುಗರವಾಗುವಂಥ ಪ್ರಶ್ನೆಗಳನ್ನು ಧೈರ್ಯದಿಂದ ಎತ್ತಿದ್ದಾಳೆ. ಇತೀಚೆಗಷ್ಟೇ ಆಫ್ಘಾನಿಸ್ತಾನಕ್ಕೆ ಮರಳಿರುವ ಜೋಯಾಳ ಮೇಲೆ ಹಲ್ಲೆ ನಡೆಸಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಲೇ ಇವೆ.

ದಮನ ನೀತಿಗಳನ್ನು ಪ್ರಶ್ನಿಸಿ-ಪ್ರತಿಭಟಿಸುವ ಹೆಣ್ಣು ಧ್ವನಿಗಳು ಯಾವ ದೇಶದಲ್ಲೇ ಇರಲಿ, ಅವುಗಳನ್ನು ಹತ್ತಿಕ್ಕಲು ವ್ಯವಸ್ಥಿತವಾದ ಪ್ರಯತ್ನ ನಡೆಯುತ್ತಲೇ ಬಂದಿವೆ. ಮಲಾಲ ಅಥವಾ ಜೋಯಾರಿಗೆ ದೊರೆತ ಗೋಚರತೆಯಾಗಲಿ, ಬೆಂಬಲವಾಗಲಿ ಎಲ್ಲರಿಗೂ ಸಿಗುವುದಿಲ್ಲ.

ತಾವು ಪ್ರತಿಗಾಮಿ ಶಕ್ತಿಗಳ ಕಣ್ಣಿಗೆ ಬಿದ್ದಿದ್ದೇವೆ ಎಂದು ತಿಳಿದ ಮೇಲೆ ಆ ಪ್ರತಿಕೂಲ ವಾತಾವರಣದಿಂದ ತಪ್ಪಿಸಿಕೊಂಡು ಹೋಗಲು ಎಷ್ಟು ಮಂದಿಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ನಾವು ಎತ್ತಿದಾಗ ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ತೊಡಗುವವರಿಗಿಂತ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುವವರೇ ಹೆಚ್ಚು. ಇದಕ್ಕೆ ನಮ್ಮ ದೇಶದಲ್ಲೇ ಅವ್ಯಾಹತವಾಗಿ ನಡೆಯುತ್ತಿರುವ ಖಾಪ್ ಪ್ರೇರಿತ ದೌರ್ಜನ್ಯಗಳಿಗಿಂತ ಮತ್ತೊಂದು ಉದಾಹರಣೆ ಬೇಕೆ?

ಹರಿಯಾಣ ರಾಜ್ಯದ ಖಾಪ್‌ಗಳು ತಾಲಿಬಾನ್‌ನ ಮತ್ತೊಂದು ಮುಖವಷ್ಟೆ. ಇತ್ತೀಚೆಗಷ್ಟೇ ಆ ರಾಜ್ಯದಲ್ಲಿ 16 ವರ್ಷದ ದಲಿತ ಹೆಣ್ಣು ಮಗಳೊಬ್ಬಳ ಮೇಲೆ ಎಂಟು ಜನ ಪುರುಷರು ಅಮಾನವೀಯ ರೀತಿಯಲ್ಲಿ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಅದನ್ನು ಖಂಡಿಸಿ, ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುವುದನ್ನು ಬಿಟ್ಟು, ಖಾಪ್ ಪಂಚಾಯಿತಿಗಳು ಅಷ್ಟೇ ಅಮಾನವೀಯ ರೀತಿಯಲ್ಲಿ ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿವೆ.

ಹೆಣ್ಣು ಮಕ್ಕಳು ಅತ್ಯಾಚಾರದಿಂದ ತಪ್ಪಿಸಿಕೊಳ್ಳಬೇಕಾದರೆ ಸಣ್ಣ ವಯಸ್ಸಿನಲ್ಲಿಯೇ ವಿವಾಹವಾಗುವುದು ಒಳಿತು, ಆದ್ದರಿಂದ ಹಿಂದೂ ವಿವಾಹ ಕಾಯಿದೆಗೇ ತಿದ್ದುಪಡಿ ತಂದು ಕನಿಷ್ಟ ವಯೋಮಿತಿಯನ್ನು 16ಕ್ಕೆ ಇಳಿಸಬೇಕು ಎಂಬ ಬೇಡಿಕೆಯನ್ನು ಖಾಪ್‌ಗಳ ಮುಖಂಡರು ಇಟ್ಟಿದ್ದಾರೆ!

ವಿವಾಹವಾಗಿ ಹೆಣ್ಣು ಮಕ್ಕಳು ಮನೆಯೊಳಗಿದ್ದು ಬಿಟ್ಟರೆ ಅವರು ಸುರಕ್ಷಿತರಾಗಿರುತ್ತಾರೆ ಎಂಬ ವಾದ ಎಷ್ಟು ಹುಸಿಯಾದದ್ದು ಎಂಬುದು ನಮಗೆ ತಿಳಿದಿಲ್ಲವೇ? ಹರಿಯಾಣದಲ್ಲಿ ವಿವಾಹಿತ ಮಹಿಳೆಯರ ಮೇಲೆಯೇ ಸಾಮೂಹಿಕ ಅತ್ಯಾಚಾರ ಪದೇ ಪದೇ ನಡೆಯುತ್ತಿದ್ದು ಹೆಣ್ಣು ಮಕ್ಕಳು ವಿವಾಹವಾದರೆ ಸುರಕ್ಷಿತವಾಗಿರಬಹುದು ಎಂಬ ಖಾಪ್‌ನ ಅಭಿಪ್ರಾಯಕ್ಕೆ ಏನಾದರೂ ಅರ್ಥವಿದೆಯೇ?

ಕಳೆದ 40 ದಿನಗಳಲ್ಲಿ 18 ಅತ್ಯಾಚಾರದ ಪ್ರಕರಣಗಳು ನಡೆದಿರುವುದು ಖಾಪ್‌ನಂಥ ಮೂಲಭೂತವಾದಿ ವ್ಯವಸ್ಥೆ ಎಷ್ಟರ ಮಟ್ಟಿಗೆ ಇಂಥ ಗಂಭೀರ ವಿಷಯಗಳ ಬಗ್ಗೆ ಅಸಡ್ಡೆ ತಳೆದಿದೆ ಎಂಬುದನ್ನು ತೋರಿಸುತ್ತದೆ. ದುರಂತವೆಂದರೆ ಹರಿಯಾಣ ಸರ್ಕಾರದ ಅನೇಕ ಮಂತ್ರಿಗಳು ಹಾಗೂ ಜನ ಪ್ರತಿನಿಧಿಗಳೂ ಕೂಡ ಖಾಪ್ ಪಂಚಾಯಿತಿಗಳ ಆದೇಶಗಳಿಗೆ ಆಜ್ಞಾಧಾರಕರಂತೆ ನಡೆದುಕೊಳ್ಳುತ್ತಿರುವುದು.

ತಾಲಿಬಾನ್ ಮಾದರಿಯ ಸಂಸ್ಕೃತಿಯನ್ನು ಉತ್ತರಪ್ರದೇಶದ ಖಾಪ್ ಪಂಚಾಯಿತಿಗಳೂ ಪ್ರತಿಪಾದಿಸುತ್ತಿರುವುದು ಮೂರು ತಿಂಗಳ ಹಿಂದಷ್ಟೇ ಬಯಲಿಗೆ ಬಂದಿದೆ. ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ತ್ರೀಯರು ಸೂರ್ಯಾಸ್ತಮವಾದ ಮೇಲೆ ಏಕಾಂಗಿಯಾಗಿ ಮನೆಯಿಂದ ಹೊರಗೆ ಹೋಗಬಾರದು, ಹೆಣ್ಣು-ಗಂಡುಗಳು ಪ್ರೇಮ ವಿವಾಹಗಳು ಮತ್ತು ಅಂತರ್-ಜಾತಿ ವಿವಾಹಗಳನ್ನು ಮಾಡಿಕೊಳ್ಳಬಾರದು, ಮೊಬೈಲ್ ದೂರವಾಣಿಗಳನ್ನು ಬಳಸಬಾರದು, ಜೀನ್ಸ್ ಪ್ಯಾಂಟುಗಳನ್ನು ಧರಿಸಬಾರದು-ಇವೇ ಮುಂತಾದ ಅಸಂಬದ್ಧ ಆಜ್ಞೆಗಳನ್ನು ಹೊರಡಿಸಿರುವ ಖಾಪ್ ಪಂಚಾಯಿತಿಗಳು, ಅನೇಕ ಗ್ರಾಮಗಳಲ್ಲಿ ಭಯಗ್ರಸ್ಥ ವಾತಾವರಣವನ್ನು ನಿರ್ಮಾಣ ಮಾಡಿವೆ.
 
ಸರ್ಕಾರದ ವಲಯದಿಂದಾಗಲಿ, ನಾಗರಿಕ ಸಂಸ್ಥೆಗಳಿಂದಾಗಲಿ ಗಟ್ಟಿಯಾದ ಪ್ರತಿಭಟನೆಗಳು, ಕ್ರಮಗಳು ಇದುವರೆಗೂ ಮೂಡಿಬರದಿರುವುದರಿಂದ ಇಲ್ಲಿ  ಖಾಪ್‌ಗಳದ್ದೇ ದರ್ಬಾರು ನಡೆಯುತ್ತಿದೆ.

ತಾಲಿಬಾನ್ ಆಗಲಿ ಖಾಪ್ ಆಗಲಿ ಊಳಿಗಮಾನ್ಯ ಪರಂಪರೆಯ ದ್ಯೋತಕಗಳು. ಇಂಥ ವ್ಯವಸ್ಥೆಗಳ ಕೈಗೆ ಸಮಾಜ ಸಿಲುಕಿಹಾಕಿಕೊಂಡಾಗ ಅತಿ ಹೆಚ್ಚಿನ ಸಂಕಟವನ್ನು ಅನುಭವಿಸುವವರು ಮಹಿಳೆಯರು ಮತ್ತು ಹೆಣ್ಣು ಮಕ್ಕಳು. ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ಅಟ್ಟಹಾಸ ಪರಮಾವಧಿಯನ್ನು ತಲುಪಿದ ಕಾಲದಲ್ಲಿ ಅನಾರೋಗ್ಯ ಪೀಡಿತರಾದ ಸಾವಿರಾರು ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ವೈದ್ಯಕೀಯ ನೆರವನ್ನು ಪಡೆಯಲು ಮನೆಯಿಂದ ಹೊರಹೋಗಲಾರದೆ, ತಮ್ಮ ಮನೆಗಳಲ್ಲೇ ಪ್ರಾಣತೆತ್ತರು.

ಹೆಣ್ಣಿನ ಮುಖ ಹೊರಗೆ ಕಂಡಾಕ್ಷಣ ಅವಳಿಗೆ ಚಿತ್ರ ಹಿಂಸೆ ನೀಡುತ್ತಿದ್ದುದರಿಂದ ತಮ್ಮ ಮನೆಯಲ್ಲಿಯೇ ಕೈದಿಗಳಾದ ಮಹಿಳೆಯರಲ್ಲಿ ಸತ್ತವರೆಷ್ಟೋ, ಬದುಕಿದವರೆಷ್ಟೋ ತಿಳಿಯದು. ಖಾಪ್ ಪಂಚಾಯಿತಿಗಳ ನಡವಳಿಕೆಯೂ ಹೆಚ್ಚು ಕಡಿಮೆ ಇದೇ ಧಾಟಿಯಲ್ಲಿರುವುದು ಹೆಣ್ಣನ್ನು ದಮನ ಮಾಡುವ ಹಿಂಸಾ ಪ್ರವೃತ್ತಿಗಳು ಯಾವುದೇ ಒಂದು ದೇಶಕ್ಕಾಗಲಿ, ಧರ್ಮಕ್ಕಾಗಲಿ, ವರ್ಗಕ್ಕಾಗಲಿ ಸೀಮಿತವಾಗಿಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ.

ಪಾಕಿಸ್ತಾನ, ಆಘ್ಫಾನಿಸ್ತಾನ ಮತ್ತು ಭಾರತ-ಈ ಮೂರು ದೇಶಗಳಲ್ಲಿರುವುದೂ ಪ್ರಜಾಸತ್ತಾತ್ಮಕ ಸರ್ಕಾರಗಳೇ. ಆದರೆ ತಾಲಿಬಾನ್ ಮತ್ತು ಖಾಪ್‌ಗಳಂಥ ಸಂಘಟನೆಗಳು ಇಷ್ಟೊಂದು ನಿರ್ಭಯವಾಗಿ ನ್ಯಾಯಬಾಹಿರ ಚಟವಟಿಕೆಗಳಲ್ಲಿ ತೊಡಗುತ್ತಿದ್ದರೂ ಅವುಗಳನ್ನು ಹೊಸಕಿ ಹಾಕಲು ಹಿಂದೇಟು ಹಾಕುತ್ತಿರುವುದೇತಕ್ಕೆ?

ಈ ಪ್ರಶ್ನೆಗೆ ಉತ್ತರಗಳನ್ನು ಹುಡುಕುತ್ತಾ ಹೊರಟಾಗ ನಮ್ಮ ಮುಂದೆ ತೆರೆದುಕೊಳ್ಳುವುದು ಸ್ವಾರ್ಥ ರಾಜಕಾರಣ, ಪುರುಷ ಪ್ರಧಾನ ಮನಸ್ಸುಗಳು ಹಾಗೂ ಭ್ರಷ್ಟ ಅಧಿಕಾರ ವಲಯಗಳು. ಎಚ್ಚೆತ್ತ ನಾಗರಿಕ ಸಮಾಜವೊಂದೇ ಇಂಥ ವ್ಯವಸ್ಥೆಗಳಿಗೆ ಪಾಠ ಕಲಿಸುವ ಶಕ್ತಿಯನ್ನು ಹೊಂದಿರುವುದು. ಆದ್ದರಿಂದ ಈ ವಲಯ ಈಗಲಾದರೂ ಜಾಗೃತವಾಗಲೇಬೇಕು.

ನಿಮ್ಮ ಅನಿಸಿಕೆ ತಿಳಿಸಿ: (editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT