ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಾಜ್‌ ಷರೀಫ್‌ ರಾವಣನಲ್ಲ...

Last Updated 8 ಅಕ್ಟೋಬರ್ 2016, 19:45 IST
ಅಕ್ಷರ ಗಾತ್ರ

ಭಾರತದ ಸೇನೆಯು ಪಾಕಿಸ್ತಾನದ ಗಡಿಯಲ್ಲಿ ನಿಯಂತ್ರಣ ರೇಖೆಗುಂಟ (ಎಲ್‌ಒಸಿ)  ಉಗ್ರರ ಅಡಗುತಾಣ ಧ್ವಂಸ ಮಾಡಲು ‘ನಿರ್ದಿಷ್ಟ ದಾಳಿ’ ನಡೆಸಿರುವುದು, ಚಿತ್ರ ಕಲಾವಿದರು ತಮ್ಮ ಕಲ್ಪನೆ ಹರಿಬಿಡಲು ವಿಶಾಲವಾದ ಚೌಕಟ್ಟು  ಒದಗಿಸಿದೆ. ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಇರುವ ಬಿಜೆಪಿ ಮತ್ತು ಶಿವಸೇನೆಗಳ ಭಿತ್ತಿಪತ್ರಗಳಲ್ಲಿ, ಅದರಲ್ಲೂ ವಿಶೇಷವಾಗಿ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಇರುವ ಉತ್ತರ ಪ್ರದೇಶದಲ್ಲಿ ಚಿತ್ರ ಕಲಾವಿದರಿಗೆ ಕೈತುಂಬ ಕೆಲಸ ಸಿಕ್ಕಿದೆ.

ಕಲಾವಿದರ ಕಲ್ಪನೆಯಲ್ಲಿ ರೂಪುಗೊಂಡ ಚಿತ್ರಗಳಿಗೆ ರಾಮಾಯಣದ ಪ್ರಮುಖ ಪಾತ್ರಧಾರಿಗಳೇ ಮುಖ್ಯ ಪ್ರೇರಣೆಯಾಗಿರುವುದು ಗಮನ ಸೆಳೆಯುತ್ತಿದೆ.  ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ರಾಮಲೀಲಾ ಸಪ್ತಾಹದಲ್ಲಿ ಈ ಹೋಲಿಕೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಂದೂಕಿನ ಟ್ರಿಗರ್‌ ಎಳೆಯುವ ಸನ್ನದ್ಧ ಸ್ಥಿತಿಯಲ್ಲಿ ಇರುವ ಅಥವಾ  ಬಿಲ್ಲು ಬಾಣ ಹಿಡಿದ ರಾಮನಂತೆ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಹತ್ತು ತಲೆಯ ರಾವಣನಂತೆ ದುಷ್ಟನ ಪಾತ್ರದಲ್ಲಿ ಚಿತ್ರಿಸಲಾಗಿದೆ. ಜನನಾಯಕರ ಬೆಂಬಲಿಗರು ತಮ್ಮ ನೆಚ್ಚಿನ ಮುಖಂಡರಿಗೆ ತಮ್ಮಿಷ್ಟದಂತೆ ಬಿರುದು ಬಾವಲಿ ನೀಡಿ ತಮ್ಮ ಆರಾಧ್ಯ ದೈವವನ್ನು ಮೂರ್ತರೂಪದಲ್ಲಿ  ಕಾಣಲು ಹಂಬಲಿಸುತ್ತಾರೆ.

‘ಭಕ್ತರ ಭಾವಬಿಂಬದಲ್ಲಿ ರೂಪುಗೊಂಡ ಬಗೆಯಲ್ಲಿಯೇ ದೇವರ ಚಿತ್ರ ರೂಪುಗೊಳ್ಳುತ್ತದೆ’ ಎಂದು ತತ್ವಜ್ಞಾನಿ ಗೋಸ್ವಾಮಿ ತುಳಸಿದಾಸ್‌ ಅವರು ಈ ಹಿಂದೆಯೇ ಬರೆದಿದ್ದಾರೆ.

ಸದ್ಯದ ಸಂದರ್ಭದಲ್ಲಿಯೂ ಅದನ್ನೇ ಕಾಣುತ್ತಿದ್ದೇವೆ. ಇಂತಹ ಹೋಲಿಕೆಗಳು ಅದೆಷ್ಟರ ಮಟ್ಟಿಗೆ ಸರಿ ಎನ್ನುವುದು ನನ್ನ  ಪ್ರಶ್ನೆಯಾಗಿದೆ. ನವಾಜ್‌ ಷರೀಫ್‌ ಅವರನ್ನು ದುಷ್ಟರ ದೊರೆ ಎಂಬಂತೆ ಚಿತ್ರಿಸುವುದು ಅಥವಾ ಪಾಕಿಸ್ತಾನವನ್ನು ಪ್ರಾಚೀನ ಲಂಕಾದಂತೆ ರಾಕ್ಷಸರ ಸಾಮ್ರಾಜ್ಯ ಎಂಬಂತೆ ಬಿಂಬಿಸುವುದು/ಹೋಲಿಕೆ ಮಾಡುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವುದು ನನ್ನ ವಾದವಾಗಿದೆ. ವಾಸ್ತವ ಸಂಗತಿ ಆಧರಿಸಿಯೇ ನಿರ್ಧಾರಕ್ಕೆ ಬರಬೇಕು ಎನ್ನುವುದು ನನ್ನ ನಿಲುವು.


ರಾವಣನು ಅವನ ಸಾಮ್ರಾಜ್ಯದ ಪ್ರಶ್ನಾತೀತ ಸರ್ವಾಧಿಕಾರಿಯಾಗಿದ್ದ. ಆತ ತನ್ನ ಸೇನೆಯ ಮಹಾ ದಂಡನಾಯಕನೂ ಆಗಿದ್ದ. ಜತೆಗೆ ಹೋರಾಟದ ಅಗ್ರೇಸರನೂ ಆಗಿದ್ದ. ಆದರೆ, ನವಾಜ್‌ ಷರೀಫ್‌ ಅವರಿಗೆ ಇಂತಹ ಯಾವುದೇ ಗುಣವಿಶೇಷಗಳೇ ಇಲ್ಲ. ತುಳಸಿದಾಸ್‌ ಅವರು ಹೇಳಿರುವಂತೆ, ‘ಭಕ್ತರು ತಮ್ಮ ಭಾವನೆಗಳಲ್ಲಿ ಅರಳುವ ಚಿತ್ರಪಟದಂತೆಯೇ ದೇವರನ್ನು ಕಾಣುತ್ತಾರೆ’ ಎಂಬಂತೆ ರಾಕ್ಷಸರು ಮತ್ತು  ರಾಕ್ಷಸರ ದೊರೆಗಳಿಗೂ ಈ ಮಾತು ಅನ್ವಯಿಸುತ್ತದೆ. 

ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಿ ಬಗ್ಗೆ ಈಗಾಗಲೇ ತಮ್ಮ  ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ‘ಭಯೋತ್ಪಾದಕರು ಬರೆದುಕೊಟ್ಟ ಭಾಷಣವನ್ನು ಓದುವವರು’ ಎಂದೇ ನವಾಜ್‌ ಅವರನ್ನು ಮೋದಿ ಬಣ್ಣಿಸಿದ್ದಾರೆ. ನ್ಯಾಷನಲ್‌ ಅಸೆಂಬ್ಲಿಯಲ್ಲಿ ನವಾಜ್‌ ಮಾಡಿದ ಭಾಷಣ ಸೇರಿದಂತೆ ಅನೇಕ ಹೇಳಿಕೆಗಳು ಅವರನ್ನು ಭಾರತೀಯರ ದೃಷ್ಟಿಯಲ್ಲಿ ಇನ್ನಷ್ಟು ದುಷ್ಟ ವ್ಯಕ್ತಿಯಂತೆ  ಬಿಂಬಿಸಿವೆ. 

ಇಮ್ರಾನ್‌ ಖಾನ್‌ ಅವರ ಸಲಹೆಗೆ ಪಾಕಿಸ್ತಾನ ಸೇನೆಯು ಒಂದು ವೇಳೆ  ಕಿವಿಗೊಟ್ಟಿದ್ದರೆ, ಇಷ್ಟೊತ್ತಿಗಾಗಲೇ ನವಾಜ್‌ ಷರೀಫ್‌ ಅವರನ್ನು ಪದಚ್ಯುತಿಗೊಳಿಸಿ ಇಮ್ರಾನ್‌ ಅವರನ್ನೇ ಪ್ರಧಾನಿ ಹುದ್ದೆಯಲ್ಲಿ ಪ್ರತಿಷ್ಠಾಪಿಸಬೇಕಾಗಿತ್ತು.

ದಿವಂಗತ ಬೆನಜೀರ್‌ ಭುಟ್ಟೊ ಅವರ ಮಗ ಬಿಲಾವಲ್‌ ಭುಟ್ಟೊ ಅವರು ಪಾಕ್  ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆದ ಚುನಾವಣೆಗಳಲ್ಲಿ ಮಾಡಿದ ಭಾಷಣಗಳನ್ನು  ಗಮನಿಸಿದರೆ, ಅವರು ತಮ್ಮ ತಾತ ಜುಲ್ಫಿಕರ್‌ ಅಲಿ ಭುಟ್ಟೊ ಮತ್ತು ತಾಯಿ ಬೆನಜೀರ್‌ ಭುಟ್ಟೊ ಅವರಂತೆ ಭಾರತದ ವಿರುದ್ಧ  ಸಾವಿರ ವರ್ಷಗಳ ಯುದ್ಧ ನಡೆಸುವುದಾಗಿ ಬೆದರಿಕೆಯನ್ನೇನೂ  ಒಡ್ಡಿರಲಿಲ್ಲ.  ಆದರೆ, ಭಾರತದ ವಿರುದ್ಧ ಸಮರ ನಡೆಸುವ ಬಗ್ಗೆ ಕೀರಲು ದನಿಯಲ್ಲಿ ಮಾತನಾಡಿದ್ದಾರೆ.

1990ರಲ್ಲಿ ಎರಡೂ ದೇಶಗಳ ಮಧ್ಯೆ ಯುದ್ಧದಂತಹ ಪರಿಸ್ಥಿತಿ ಉದ್ಭವಿಸಿತ್ತು. ಆ ಸಂದರ್ಭದಲ್ಲಿ ಪಾಕಿಸ್ತಾನವು ಮೊದಲ ಬಾರಿಗೆ ಭಾರತದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸುವ ಬೆದರಿಕೆ ಒಡ್ಡಿತ್ತು.  ಬೆನಜೀರ್‌ ಭುಟ್ಟೊ ಅವರು ಮುಜಫರ್‌ಬಾದ್‌ನಲ್ಲಿ ಮಾಡಿದ ಭಾಷಣದಲ್ಲಿ ಜಮ್ಮು ಕಾಶ್ಮೀರದ ಅಂದಿನ ಗವರ್ನರ್‌  ಜಗಮೋಹನ್ ಅವರನ್ನು ತುಂಡು ತುಂಡು ಮಾಡಿ ಕತ್ತರಿಸಲಾಗುವುದು ಎಂದು  ಕಿಡಿ ಕಾರಿದ್ದರು.

ಜಿಯಾ ಉಲ್‌ ಹಕ್‌ ಅವರ ನಂತರ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರಳಿದ ನಂತರವೂ ಭಾರತದ ಜತೆ ರಣೋತ್ಸಾಹದಿಂದ ಇರುವವರನ್ನೇ ಮುಖಂಡರನ್ನಾಗಿ ಆಯ್ಕೆ ಮಾಡುತ್ತಾ ಬರಲಾಗಿದೆ.

ಇದಕ್ಕೂ ಮೊದಲಿನ ಪ್ರಧಾನಿಗಳು ಭಾರತದ ಜತೆ ಸ್ನೇಹ ಭಾವದಿಂದಲೇ ಇರುತ್ತಿದ್ದರು.  ಒಂದಲ್ಲ ಒಂದು ಕಾರಣಕ್ಕೆ ಭಾರತಕ್ಕೆ ಭೇಟಿ ನೀಡುತ್ತಿದ್ದರು. 1988ರ ಡಿಸೆಂಬರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಬೆನಜೀರ್‌– ರಾಜೀವ್‌ ಗಾಂಧಿ ಶೃಂಗ ಸಮ್ಮೇಳನ, 1999ರಲ್ಲಿ ನಡೆದ ಅಟಲ್‌ ಬಿಹಾರಿ ವಾಜಪೇಯಿ ಅವರ ಬಸ್‌ ಯಾತ್ರೆ,

ನವಾಜ್‌ ಷರೀಫ್‌ ಜತೆಗಿನ ಲಾಹೋರ್‌ ಘೋಷಣೆ, ಭಾರತದ ಜತೆಗಿನ ಸಂಬಂಧ ಸುಧಾರಣೆಯ ಸಂಕೇತವಾಗಿ ಬೆನಜೀರ್‌ ಅವರು ಅಧಿಕಾರಕ್ಕೆ ಮರಳಿದ್ದು, ಮುಂಬೈ ಮೇಲಿನ ಭಯೋತ್ಪಾದಕರ ದಾಳಿ (26/11) ನಂತರ ಐಎಸ್‌ಐ ಮುಖ್ಯಸ್ಥನನ್ನು  ಭಾರತದ ಭೇಟಿಗೆ ಕಳುಹಿಸಿದ್ದ ಆಸಿಫ್‌ ಜರ್ದಾರಿ ಅವರ ಔದಾರ್ಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮೇಜರ್‌ ಜನರಲ್‌ ಮೆಹಮೂದ್‌ ದುರಾನಿ ಅವರು, ಮುಂಬೈ ಮೇಲೆ ದಾಳಿ ನಡೆಸಿದವರು ಪಾಕಿಸ್ತಾನೀಯರು ಎಂದು ಒಪ್ಪಿಕೊಂಡ ಎದೆಗಾರಿಕೆ ಮುಂತಾದವುಗಳಿಗೆ ಪಾಕಿಸ್ತಾನದಲ್ಲಿ ತೀವ್ರ ಪರಿಣಾಮಗಳು ಕಂಡು ಬಂದಿದ್ದವು.

1990ರಲ್ಲಿ ಬೆನಜೀರ್‌ ಅವರನ್ನು ಪದಚ್ಯುತಿಗೊಳಿಸಲಾಗಿತ್ತು. 1999ರಲ್ಲಿ ನವಾಜ್‌ ಅವರನ್ನು ಪದಚ್ಯುತಿಗೊಳಿಸಿ ಜೈಲಿಗೆ ಕಳುಹಿಸಿ, ದೇಶದಿಂದಲೇ ಓಡಿಸಲಾಗಿತ್ತು. 2007ರಲ್ಲಿ ಬೆನಜೀರ್‌ ಅವರನ್ನು ಹತ್ಯೆ ಮಾಡಲಾಗಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ದುರಾನಿ ಅವರನ್ನು ವಜಾ ಮಾಡಿದ್ದರೆ, ಜರ್ದಾರಿ ಅವರನ್ನು ಮೂಲೆಗುಂಪು ಮಾಡಲಾಗಿತ್ತು.

ತಮ್ಮ  ಹುಟ್ಟುಹಬ್ಬದ ದಿನ ಮೋದಿ ಅವರಿಗೆ ಆತಿಥ್ಯ ನೀಡಿದ್ದಕ್ಕೆ ನವಾಜ್‌ ಷರೀಫ್‌ ಅವರ ಮೇಲೆ ಇಂತಹದ್ದೇ ಗಂಡಾಂತರ ಎರಗುವ ಸಾಧ್ಯತೆ ಬಗ್ಗೆ ಊಹಿಸಲಾಗಿತ್ತು.ನಂತರದ ದಿನಗಳಲ್ಲಿ ಗುರುದಾಸ್‌ಪುರ, ಪಠಾಣ್‌ಕೋಟ್‌  ಮೇಲೆ ದಾಳಿಗಳು ನಡೆದಿವೆ. ನವಾಜ್‌  ಅವರು ಜೈಷ್‌ ಸಂಘಟನೆ ವಿರುದ್ಧ ಕ್ರಮ ಕೈಗೊಂಡು ವಿಚಾರಣೆಗೆ ಆದೇಶಿಸುತ್ತಿದ್ದಂತೆ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳು ತಮ್ಮ ಆಟಕ್ಕೆ ಚಾಲನೆ ನೀಡಿದರು.

ನವಾಜ್‌ ಷರೀಫ್‌ ಅವರು ಸಂಪೂರ್ಣ ಬಹುಮತ ಹೊಂದಿರುವುದು, ಸರ್ವಾಧಿಕಾರಿ ಮುಷರಫ್‌ ವಿರುದ್ಧದ ಪ್ರಚಾರ, ಆಸಿಫ್‌ ಅಲಿ ಜರ್ದಾರಿ ಜತೆಗಿನ ಸೌಹಾರ್ದ ಸಂಬಂಧ ಮುಂತಾದವು  ಚುನಾಯಿತ ಸರ್ಕಾರವು ತನ್ನ ಅವಧಿ ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚಿಸಿವೆ. 

ನವಾಜ್‌ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿದರೆ ಪಾಕಿಸ್ತಾನದ ಇತಿಹಾಸದಲ್ಲಿಯೇ ಅದೊಂದು ದಾಖಲೆಯಾಗಲಿದೆ. ದೇಶದ ರಾಜಕೀಯ  ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರಲು ಮತ್ತು ಭಾರತದ ಜತೆ ಸಂಬಂಧ ಸುಧಾರಣೆಗೆ ತಮಗೆ ಜನಾದೇಶ ದೊರೆತಿದೆ ಎಂದೇ ನವಾಜ್‌ ಭಾವಿಸಿದ್ದಾರೆ.

ಈ ಉದ್ದೇಶ ಸಾಧನೆಗೆ ಅವರು ಮೊದಲು ದೇಶದ ಸೇನೆಯನ್ನು ಹದ್ದುಬಸ್ತಿನಲ್ಲಿ ಇಡಬೇಕಾಗಿದೆ. ನವಾಜ್‌ ಮತ್ತು ಅವರ ಕಿರಿಯ ಸೋದರ ಷಹಬಾಜ್‌ ಅವರು ಚುನಾವಣಾ ಭಾಷಣಗಳಲ್ಲಿ  ಭಾರತ ಅಥವಾ ಕಾಶ್ಮೀರದ ವಿರುದ್ಧ  ದ್ವೇಷದ ಮಾತು ಆಡದೆ, ಉದ್ಯೋಗ ಅವಕಾಶ ಸೃಷ್ಟಿಸುವ, ಆರ್ಥಿಕ ಬೆಳವಣಿಗೆ, ವಿದ್ಯುತ್‌ ಪೂರೈಕೆ  ಮತ್ತು ನಗರವಾಸಿಗಳ ಬದುಕು ಸಹ್ಯಗೊಳಿಸುವ ಭರವಸೆ ನೀಡಿ ಜನಬೆಂಬಲ ಪಡೆದಿದ್ದಾರೆ. 

ತಮಗೆ ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅವರು 1965 ಮತ್ತು 1971ರ ಯುದ್ಧದಲ್ಲಿ ಶೌರ್ಯ ಮೆರೆದ ಸೇನಾ ಕುಟುಂಬಕ್ಕೆ ಸೇರಿರುವ  ರಹೀಲ್‌ ಷರೀಫ್‌ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಅದೇ ಉತ್ಸಾಹದಲ್ಲಿ ಅವರು ಮುಷರಫ್‌ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ವಿಚಾರಣೆಗೆ ಗುರಿಪಡಿಸಿದರು.

ಪರ್ವೇಜ್‌ ಮುಷರಫ್‌ ಅವರಿಗೆ ಸದ್ಯಕ್ಕೆ ಫೇಸ್‌ಬುಕ್‌ ಹಿಂಬಾಲಕರು ಬಿಟ್ಟರೆ  ಪಾಕಿಸ್ತಾನದ ಜನರಲ್ಲಿ ಮತ್ತು ಸೇನೆಯಲ್ಲಿ ಅಭಿಮಾನಿಗಳು ಕಡಿಮೆಯಾಗಿದ್ದಾರೆ. ಸಾಂಸ್ಥಿಕ ನೆಲೆಗಟ್ಟಿನಲ್ಲಿ ಸೇನೆಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. 

ಅದು ತನ್ನ ಅವಕಾಶಕ್ಕಾಗಿ ಎದುರು ನೋಡುತ್ತಲೇ ಇದೆ. ಸೇನೆ ಒಳಗಿನ ಒತ್ತಡದ ಕಾರಣಕ್ಕಾಗಿಯೇ ಮುಷರಫ್‌ ಅವರು ಸುರಕ್ಷಿತವಾಗಿ ದೇಶ ಬಿಟ್ಟು ತೆರಳಲು ಸಾಧ್ಯವಾಯಿತು. ಮುಷರಫ್‌ ಅವರು ಈಗ  ಹಣ ಪಡೆದು ಉಪನ್ಯಾಸ ನೀಡುವ  ಮತ್ತು ಟಿ.ವಿ. ಸಂದರ್ಶನ ಕಾರ್ಯಕ್ರಮಗಳಂತಹ ಲಾಭದಾಯಕವಾದ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ.

ಸೇನೆಯಲ್ಲಿನ  ನವಾಜ್‌ ಷರೀಫ್‌ ವಿರೋಧಿಗಳು ತಮ್ಮ ಉದ್ದೇಶ ಸಾಧನೆಗೆ ಇನ್ನೂ ಎರಡು ಬಗೆಯಲ್ಲಿ ಸಂಚು ನಡೆಸಿದ್ದರು. ಕೆನಡಾ ಮೂಲದ ಪಾಕಿಸ್ತಾನದ ಧರ್ಮಗುರು ತಹಿರ್‌ ಉಲ್‌ ಖಾದ್ರಿ ಮತ್ತು ಇಮ್ರಾನ್‌ ಖಾನ್‌ ಅವರ ಬೆಂಬಲಿಗರ ಮೂಲಕ ಇಸ್ಲಾಮಾಬಾದ್‌ಗೆ ಮುತ್ತಿಗೆ ಹಾಕಿಸಿದ್ದರು. ಸೇನೆ ಮಧ್ಯಪ್ರವೇಶಿಸಿ ಮುತ್ತಿಗೆ ತೆರವುಗೊಳಿಸಲು ಮನವಿ ಮಾಡಿಕೊಂಡ ನಂತರವೇ ಈ ಇಬ್ಬರೂ ಮುಖಂಡರು ಪ್ರತಿಭಟನೆ ಕೈಬಿಟ್ಟಿದ್ದರು.

ಈ ಬೆಳವಣಿಗೆಗಳಲ್ಲಿ, ನವಾಜ್‌ ಷರೀಫ್‌ ಅವರನ್ನು ಕಡೆಗಣಿಸಿರುವುದಕ್ಕೆ ಅವರ ಬಳಿ ಅಧಿಕಾರ ಇಲ್ಲದಿರುವುದೇ ಮುಖ್ಯ ಕಾರಣವಾಗಿತ್ತು. ಅಂತಹುದೇ ಗೊಂದಲದ ದಿನಗಳಲ್ಲಿ ಪೆಶಾವರದಲ್ಲಿ ಸೇನಾ ಅಧಿಕಾರಿಗಳ ಮಕ್ಕಳನ್ನು ಉಗ್ರರು ನಿರ್ದಯವಾಗಿ ಕೊಂದು ಹಾಕಿದ್ದರು.

ಇದಕ್ಕೆ ಪ್ರತಿಯಾಗಿ ಸೇನಾ ಮುಖ್ಯಸ್ಥ ರಹೀಲ್‌ ಅವರು ಉಗ್ರರ ದಮನಕ್ಕೆ ಕೈಗೊಂಡ ಕ್ರಮಗಳಿಗೆ ಸರ್ವತ್ರ ಬೆಂಬಲ ವ್ಯಕ್ತವಾಗಿತ್ತು. ಈ ವಿಷಯದಲ್ಲಿ ಚುನಾಯಿತ ಸರ್ಕಾರ ಯಾವುದೇ ಪ್ರಮುಖ ಪಾತ್ರ ನಿರ್ವಹಿಸದಿರುವುದಕ್ಕೆ ಯಾರೊಬ್ಬರೂ ದೂರಲಿಲ್ಲ. ಮೊಹಾಜಿರ್‌ ಕ್ವಾಮಿ ಮೂವ್‌ಮೆಂಟ್‌ನ (ಎಂಕ್ಯುಎಂ) ಅಲ್ತಾಫ್‌ ಹುಸೇನ್‌ ಮತ್ತು ಕರಾಚಿಯಲ್ಲಿನ ಆತನ ಸಶಸ್ತ್ರ ಮಾಫಿಯಾ ವಿರುದ್ಧ ಸೇನೆ ಮುಗಿಬಿದ್ದ ವಿಷಯದಲ್ಲಿಯೂ ಸರ್ಕಾರವನ್ನು ಕತ್ತಲಲ್ಲಿ ಇಡಲಾಗಿತ್ತು.

ನವಾಜ್‌ ಷರೀಫ್‌ ಅವರು ಪ್ರಧಾನಿಯಾಗಿರುವುದು ಇದು ಮೂರನೇ ಬಾರಿಯಾಗಿದೆ. ಈ ಮೊದಲಿನ ಅವರ ಎರಡೂ ಅವಧಿಗಳನ್ನು ಸೇನೆಯೇ  ಮೊಟಕುಗೊಳಿಸಿತ್ತು.ಮೂರನೇ ಬಾರಿಯ ಅಧಿಕಾರಾವಧಿಯಲ್ಲಿ ಅವರು ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರದ ರೆಕ್ಕೆಪುಕ್ಕ ಕತ್ತರಿಸಿಕೊಂಡಿರುವ ನವಾಜ್‌ ನಾಮಕಾವಾಸ್ತೆಯ ಪ್ರಧಾನಿಯಾಗಿದ್ದಾರೆ. ಪ್ರಧಾನಿಯ ನಿಜವಾದ ಅಧಿಕಾರ ಸೇನೆಯ ಬಳಿಯಲ್ಲಿ ಇದೆ.

1985ರಿಂದೀಚೆಗೆ ಅವರ ರಾಜಕೀಯ ನಡೆಯನ್ನು ಗಮನಿಸುತ್ತಿರುವ ಮತ್ತು 1989ರಿಂದ ಈಚೆಗೆ ಅವರನ್ನು ಚೆನ್ನಾಗಿ ತಿಳಿದುಕೊಂಡಿರುವ ನನಗೆ, ಸೇನೆಯ ಎದುರು ಮಂಡಿಯೂರಿ ಕುಳಿತುಕೊಳ್ಳುವ ಯಾತನೆ ಮತ್ತು ಅವಮಾನವನ್ನು ಅವರು ಇನ್ನಷ್ಟು ಕಾಲ ಸಹಿಸಿಕೊಳ್ಳಲಿಕ್ಕಿಲ್ಲ ಎಂದು ಭಾಸವಾಗುತ್ತಿದೆ.

‘ಡಾನ್‌’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಿರಿಲ್‌ ಅಲ್ಮೆಡಾ ಅವರ ಲೇಖನದಲ್ಲಿ ಷರೀಫ್‌ ಸೋದರರು ಸೇನೆ ಜತೆಗೆ ಹೊಂದಿರುವ ಸಂಬಂಧದ ಬಗ್ಗೆ ಬೆಳಕು ಚೆಲ್ಲಲಾಗಿದೆ. ವಿಶ್ವ ಸಮುದಾಯದಲ್ಲಿ ಪಾಕಿಸ್ತಾನವು ಏಕಾಂಗಿಯಾಗುವುದನ್ನು  ತಪ್ಪಿಸದಿದ್ದರೆ  ದೇಶಕ್ಕೆ ಅಪಾಯ ಕಾದಿರುವುದನ್ನು ಅವರು ಸೇನೆಯ ಗಮನಕ್ಕೆ ತಂದಿದ್ದಾರೆ ಎಂದು ಲೇಖನದಲ್ಲಿ ವಿವರಿಸಲಾಗಿದೆ. ಚೀನಾ ದೇಶವೊಂದೇ ಈಗ ಪಾಕಿಸ್ತಾನದ ಬೆನ್ನಿಗೆ ನಿಂತಿದೆ. ಸುನ್ನಿ ಮುಸ್ಲಿಂ ದೇಶಗಳೂ ಪಾಕಿಸ್ತಾನದ ಬಗ್ಗೆ ರೋಸಿ ಹೋಗಿವೆ.  

ಭಾರತದ ವಿಮಾನವನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡ ಪ್ರಯಾಣಿಕರ ಬದಲಿಗೆ ಉಗ್ರ ಮಸೂದ್‌ನನ್ನು ಭಾರತ ಬಿಡುಗಡೆ ಮಾಡಿತ್ತು. ಮಸೂದ್‌ ಬಿಡುಗಡೆ ಕಟ್ಟುಕತೆ ಎಂದು ಭಾರತ ಅಧಿಕೃತವಾಗಿ ನಿರಾಕರಿಸುತ್ತಲೇ ಬಂದಿದೆ.  ಇದನ್ನು ವರದಿ ಮಾಡಿದ ವರದಿಗಾರ ಮತ್ತು ಪತ್ರಿಕೆ ವಿಶ್ವಾಸಾರ್ಹತೆಗೆ ಪಾತ್ರವಾಗಿದ್ದರೂ  ಅದೊಂದು ಅರ್ಧ ಸತ್ಯ ಎಂದೇ ಸರ್ಕಾರ ಹೇಳುತ್ತಾ ಬಂದಿದೆ.

ನವಾಜ್  ಷರೀಫ್‌ ಅವರನ್ನು 1993 ಮತ್ತು 1999ರಲ್ಲಿ ಸುಲಭವಾಗಿ ಅಧಿಕಾರದಿಂದ ಪದಚ್ಯುತಿಗೊಳಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ (2016–17) ಸೇನಾ ಕ್ರಾಂತಿ ನಡೆಯುವ ಸಾಧ್ಯತೆ ಇದ್ದರೂ ಬಹುಶಃ ಅಂತಹದ್ದೇನೂ ನಡೆಯಲಿಕ್ಕಿಲ್ಲ. ಹಾಗೊಂದು ವೇಳೆ ಸೇನಾ ಕ್ರಾಂತಿ ನಡೆದಿದ್ದೇ ಆದರೆ, ಜಾಗತಿಕ ಸಮುದಾಯದಲ್ಲಿ ಪಾಕಿಸ್ತಾನವು ಸಂಪೂರ್ಣವಾಗಿ ಏಕಾಂಗಿಯಾಗಲಿದೆ.

ಅಸ್ಥಿರತೆ ಉಲ್ಬಣಗೊಂಡು, ಅರಬ್‌ ದೇಶಗಳೂ ಸೇರಿದಂತೆ ಇಡೀ ವಿಶ್ವಕ್ಕೆ ಹೊಸ ಬೆದರಿಕೆ ಒಡ್ಡಲಿದೆ.  ಪಾಕಿಸ್ತಾನವು ಇನ್ನೊಂದು ‘ಐಎಸ್‌’ ವಲಯವಾಗಿ ರೂಪುಗೊಂಡು ಭಾರತ ಉಪಖಂಡವು ಅಣ್ವಸ್ತ್ರಗಳ ಬಳಕೆಯ ತಾಣವಾಗುವ ಅಪಾಯ ಎದುರಾಗಲಿದೆ.

ಈ ಕಾರಣಕ್ಕೆ ನವಾಜ್‌ ಅವರು ಸೇನಾ ಮುಖ್ಯಸ್ಥ ಜನರಲ್‌ ರಹೀಲ್‌ ಷರೀಫ್‌ ಅವರು ಸೇವಾ ನಿವೃತ್ತರಾಗುವವರೆಗೆ ಕೈಕಟ್ಟಿಕೊಂಡು ಕುಳಿತುಕೊಳ್ಳುವ ಸಾಧ್ಯತೆ ಇದೆ. ಸೇನೆಯ ಮೇಲೆ ಪ್ರಭಾವ ಹೊಂದಿರುವ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳೂ ನವಾಜ್‌ ಬೆಂಬಲಕ್ಕೆ ನಿಲ್ಲಲಿವೆ.

1993ರಲ್ಲಿ ಅಧ್ಯಕ್ಷ ಗುಲಾಂ ಇಶಾಕ್‌ ಖಾನ್‌ ಅವರು ಸೇನೆಯ ಬೆಂಬಲ ಪಡೆದು  ತಮ್ಮನ್ನು ಪದಚ್ಯುತಿಗೊಳಿಸಿದಾಗ ನವಾಜ್‌, ‘ಇದು ಎಂತಹ ವ್ಯವಸ್ಥೆ’ ಎಂದು  ಅಲವತ್ತುಕೊಂಡಿದ್ದರು.

ಎರಡನೇ ಅವಧಿಯಲ್ಲಿ ಇಂತಹ ಬಿಕ್ಕಟ್ಟು ಎದುರಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಆದರೂ, ಕಾರ್ಗಿಲ್‌ ಯುದ್ಧದ ಸುಳಿಯಲ್ಲಿ ಸಿಲುಕಿ, ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು ಮತ್ತು ವಿದೇಶಕ್ಕೆ ಪಲಾಯನ ಮಾಡಬೇಕಾಯಿತು. ಅಧಿಕಾರದಲ್ಲಿದ್ದರೂ ತಮ್ಮ  ಸ್ಥಾನಮಾನಕ್ಕಾಗಿಯೇ ಹೋರಾಡುವ  ದುರ್ಬಲ ನಾಯಕನಂತೆ ನವಾಜ್‌ ಕಂಡು ಬರುತ್ತಾರೆ. ಸಮರ್ಥ ರಾವಣ ಅಥವಾ ರಾಕ್ಷಸರ ದೊರೆಗಿಂತ ಅವರು ಸಾಕಷ್ಟು ದೂರದಲ್ಲಿಯೂ ಇದ್ದಾರೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT