ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಕಾಪಿಟ್ಟುಕೊಳ್ಳಬಯಸುವ ಬಿಂಬಗಳು...

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ
ಇದು ಏನನ್ನು ಹೇಳುತ್ತಿರಬಹುದು? ಮಾತು ಸೋತ ಭಾರತದ ಕಥೆಯನ್ನೇ? ಇಲ್ಲಿ ಇನ್ನು ಸಂವಾದ ಸಾಧ್ಯವಿಲ್ಲ ಎಂಬ ದುರಂತವನ್ನೇ? ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಬಿಕ್ಕಟ್ಟುಗಳನ್ನೇ? ಸಾಹಿತ್ಯದ ವೇದಿಕೆಯಲ್ಲಿ ಹಿಂದೆ ಇಂಥ ಘಟನೆ ನಡೆದುದು ನನಗೆ ನೆನಪು ಇಲ್ಲ.ಸಭಿಕರೊಬ್ಬರು, ಉಪನ್ಯಾಸಕರೊಬ್ಬರಿಗೆ ಚಪ್ಪಲಿ ತೋರಿಸಿ ಬೆದರಿಕೆ ಹಾಕಿದ್ದು ಇದೇ ಮೊದಲು. ಇದೇ ಕೊನೆ ಎಂದು ಹೇಗೆ ಹೇಳುವುದು? ಹಾಗೆ ಹೆದರಿಕೆ ಹಾಕಿದವರೇನು ತಿಳಿವಳಿಕೆ ಇಲ್ಲದವರಲ್ಲ. ಸಾಕಷ್ಟು ವಯಸ್ಸಾದವರು ಮತ್ತು ಸಾಹಿತ್ಯದಲ್ಲಿ ಸಾಕಷ್ಟು ಆಸಕ್ತಿ, ಗತಿ ಇದ್ದವರು. ಅವರಿಗೆ ಪ್ರಮುಖವಾಗಿ ಬೆಂಬಲಕ್ಕೆ ನಿಂತವರು ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿ ಜ್ಞಾನಪೀಠವೊಂದನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಶಸ್ತಿಗಳನ್ನು ಪಡೆದವರು!
 
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮಂಜುನಾಥ ಅಜ್ಜಂಪುರ ಎಂಬುವರು ‘ಎಡ–ಬಲಗಳ ನಡುವೆ?’  ಗೋಷ್ಠಿಯಲ್ಲಿ ಭಾಗವಹಿಸಿ ‘ಆಸ್ತಿ ವಿವಾದಕ್ಕಾಗಿ ಪ್ರೊ.ಕಲಬುರ್ಗಿಯವರ  ಹತ್ಯೆ  ನಡೆಯಿತು’ ಎಂದು ಮಾಧ್ಯಮದಲ್ಲಿ ಬಂದ ವರದಿ ಉಲ್ಲೇಖಿಸಿ ಹೇಳಿದ್ದು ಕೆಲವರ ತೀವ್ರ ಆಕ್ರೋಶಕ್ಕೆ ತುತ್ತಾಯಿತು. ಅಜ್ಜಂಪುರ ಹಾಗೆ ಹೇಳಲು ಕಾರಣವಾದುದು ಒಂದು ಪತ್ರಿಕೆಯ ಒಳಪುಟದಲ್ಲಿ ಬಂದ ಒಂದು ಪುಟ್ಟ ವರದಿ. ಅದನ್ನು ಇದುವರೆಗೆ ತನಿಖಾಧಿಕಾರಿಗಳು ದೃಢಪಡಿಸಿಲ್ಲ. ಈ ವರದಿ ಬಂದ ಕೆಲವು ದಿನಗಳ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ‘ಕಲಬುರ್ಗಿ ಅವರ ಹತ್ಯೆಯ ತನಿಖೆ ರಾಜ್ಯದ ಇತಿಹಾಸದಲ್ಲಿ ಅತ್ಯಂತ ದೀರ್ಘವಾದ ಮತ್ತು ವಿವರವಾದ ತನಿಖೆ ಎನಿಸಲಿದೆ’ ಎಂದು ಮಾತ್ರ  ಹೇಳಿದರು.  ‘ತನಿಖೆ ಪೂರ್ಣಗೊಂಡಿದೆ ಹಾಗೂ ಆರೋಪಿಗಳು ಯಾರು ಎಂದು ತಿಳಿದಿದೆ’ ಎಂದೇನೂ ಅವರು ಹೇಳಿರಲಿಲ್ಲ.  ಪತ್ರಿಕೆಯಲ್ಲಿ ಆ ವರದಿ ಬಂದುದಕ್ಕೂ ಗೃಹಸಚಿವರು ಹೀಗೆ ಹೇಳಿದ್ದಕ್ಕೂ ಸಂಬಂಧ ಇರಬಹುದು ಅಥವಾ ಇರಲಿಕ್ಕಿಲ್ಲ. ಅಂದರೆ, ಅಜ್ಜಂಪುರ ಅವರು ಮಾತನಾಡುವಾಗ ಇನ್ನಷ್ಟು ಎಚ್ಚರ ವಹಿಸಬೇಕಿತ್ತು ಎಂದು ಕಾಣುತ್ತದೆ. ತಮ್ಮ ಮಾತಿನ ಪರಿಣಾಮ ಏನಾಗಬಹುದು ಎಂದು ಅವರು ಯೋಚಿಸಬೇಕಿತ್ತು. ಅದು ತಮ್ಮ ಅಭಿಪ್ರಾಯವಲ್ಲ ಎಂದು ಮುಂಚೆಯೇ ಸ್ಪಷ್ಟಪಡಿಸಿದ್ದರೆ ಇಷ್ಟು ರಾದ್ಧಾಂತ ಆಗುತ್ತಿರಲಿಲ್ಲ ಹಾಗೂ ಅವರು ಬೇಷರತ್‌ ಕ್ಷಮೆ ಕೇಳುವ ಪ್ರಸಂಗವೂ ಬರುತ್ತಿರಲಿಲ್ಲ.  ಅಜ್ಜಂಪುರ ಅಥವಾ ಇನ್ನಾರೋ, ‘ಕಲಬುರ್ಗಿ ಅವರ ಹತ್ಯೆ ಆಸ್ತಿ ವಿವಾದಕ್ಕಾಗಿ ನಡೆಯಿತು’ ಎಂದು ಹೇಳಿದರೆ ಅದೇನು ಅಂತಿಮ ಸತ್ಯವಾಗುವುದಿಲ್ಲ. ಆದರೆ, ಸಾಹಿತ್ಯ ಸಂಭ್ರಮದಲ್ಲಿ ವ್ಯಕ್ತವಾದ ಆಕ್ರೋಶ ನೋಡಿದರೆ ಕಲಬುರ್ಗಿ ಅವರ ಹತ್ಯೆಯನ್ನು ‘ಸಮಾಜದ ಒಂದು ವರ್ಗ’ ಹೇಗೆ ಪರಿಭಾವಿಸುತ್ತಿದೆ ಎಂಬ ಸೂಕ್ಷ್ಮ ಒಳನೋಟವೊಂದು ಸಿಗುತ್ತದೆ.
 
ಕಲಬುರ್ಗಿಯವರ ಹತ್ಯೆಯಾದಾಗ ಅದು ಕೇವಲ ಕರ್ನಾಟಕ ಮಟ್ಟದ ಸುದ್ದಿ ಮಾತ್ರ ಆಗಲಿಲ್ಲ. ಅದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಯಾಯಿತು. ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವವರಿಗೆ ಭಾರತದಲ್ಲಿ  ಗುಂಡೇಟಿನ ಉತ್ತರವೇ ಕಾದಿದೆ’ ಎಂದು ಅಂತರರಾಷ್ಟ್ರೀಯ ಮಟ್ಟದ ಅನೇಕ ಪತ್ರಿಕೆಗಳು ವರದಿ ಮಾಡಿದುವು.  ಅಂತರರಾಷ್ಟ್ರೀಯ ಸಾಹಿತಿಗಳ ಸಂಘಟನೆ (ಪೆನ್‌) ಕಲಬರ್ಗಿಯವರ ಹತ್ಯೆಯನ್ನು ಬಲವಾಗಿ ಖಂಡಿಸಿತು. ಕಲಬುರ್ಗಿಯವರ ಹತ್ಯೆ ಅಷ್ಟು ವ್ಯಾಪಕ ಪ್ರಚಾರ ಪಡೆಯಲು ಆಗಿನ ಕಾಲಮಾನವೂ ಹಾಗೇ ಇತ್ತು. ಪಾನ್ಸರೆ  ಮತ್ತು ಧಾಬೋಲ್ಕರ್‌ ಹತ್ಯೆಗಳು ಅಂತರರಾಷ್ಟ್ರೀಯ ಮಾಧ್ಯಮದ ಗಮನ ಸೆಳೆದುದು ಕೂಡ ಕಲಬುರ್ಗಿಯವರ ಕೊಲೆಯಾದ ನಂತರವೇ. ಅಂದರೆ, ‘ಕಲಬುರ್ಗಿಯವರ ಹತ್ಯೆ ಆಗಿರುವುದು ಅವರು ಬರೆದ ಲೇಖನಗಳಿಗಾಗಿ, ಅವರು ಮಾಡಿದ ಭಾಷಣಗಳಿಗಾಗಿ ಹಾಗೂ ಅವರನ್ನು ಕೊಂದವರು ಸನಾತನಿಗಳು’ ಎಂಬ ‘ಬಿಂಬ’ ಅನೇಕರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಕೊಂಡಿದೆ. ಈಗ ಕಲಬುರ್ಗಿಯವರು ಬರೀ ಕರ್ನಾಟಕದಲ್ಲಿ ಮಾತ್ರವಲ್ಲ, ಬರೀ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ರೂಪಕ ಎನಿಸಿದ್ದಾರೆ. ಅವರ ಘೋರ ಹತ್ಯೆಯಾದ ನಂತರ ಕಲಬುರ್ಗಿ ಎಂಬ ‘ರೂಪಕ’ ಬಹುದೊಡ್ಡ  ಬಿಂಬವಾಗಿ ಬೆಳೆದು ನಿಂತಿದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದಿಸುವ ಬಿಂಬ. ಆ ಬಿಂಬಕ್ಕೆ ಕೊಂಚ ಮುಕ್ಕಾದರೂ ಸಹಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಆಸ್ತಿ ವಿವಾದದಂಥ ಕ್ಷುಲ್ಲಕ ಕಾರಣಕ್ಕಾಗಿ ಅವರ ಕೊಲೆಯಾಯಿತು ಎಂದು ಹೇಳಿಬಿಟ್ಟರೆ ಕಲಬುರ್ಗಿಯವರ ಹತ್ಯೆಯ ನಂತರ ರೂಪಿತವಾಗಿರುವ ಅವರ ಬಹುದೊಡ್ಡ  ಪ್ರತಿಮೆ ಒಂದೇ ಸಾರಿ ಕುಸಿದು ಬೀಳುತ್ತದೆ. 
 
ಕಲಬುರ್ಗಿಯವರು ಈಗ ಹುತಾತ್ಮರು. ಏಕೆಂದರೆ, ‘ಅವರು ತಾವು ನಂಬಿದ್ದನ್ನು ಹೇಳಿದ್ದಕ್ಕಾಗಿ ಪ್ರಾಣ ತೆತ್ತವರು.’ ಆದರೆ,  ‘ಕುಟುಂಬ ಕಲಹಕ್ಕೆ ಅವರ ಕೊಲೆಯಾಯಿತು’ ಎಂದುಬಿಟ್ಟರೆ ಅವರೂ ನಮ್ಮ ನಿಮ್ಮ ಹಾಗೆಯೇ ಸಾಮಾನ್ಯರು ಆಗಿ ಬಿಡುತ್ತಾರೆ! ಹುಲು ಮಾನವರು ಎನಿಸುತ್ತಾರೆ. ಸಾಹಿತ್ಯ ಸಂಭ್ರಮದ ಸಭೆಯಲ್ಲಿ ಚಂದ್ರಶೇಖರ್‌ ಅವರು ಕೈಗೆ ಚಪ್ಪಲಿ ಏಕೆ ತೆಗೆದುಕೊಂಡರು ಎಂಬುದರ ಹಿನ್ನೆಲೆ ಇದು! ಭಾವಾವೇಶ ಎಂದರೆ ಇದೇ ಇರಬೇಕು. 
 
ಅವರ ಜೊತೆಗೆ ಲೇಖಕ ಕುಂ.ವೀರಭದ್ರಪ್ಪ ಬಂದು ಏಕೆ ನಿಂತರು? ಅವರು ಸಂಭ್ರಮದಲ್ಲಿ ಹಿಂದಿನ ದಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಬಿಕ್ಕಟ್ಟುಗಳ ಬಗೆಗೆ ಮಾತನಾಡಿದ್ದು ವಿಶೇಷವೇನೂ ಅಲ್ಲ. ಏಕೆಂದರೆ ಅವರು ಕಲಬುರ್ಗಿಯವರ ಹತ್ಯೆಯಾದ ದಿನದಿಂದಲೇ ಆ ಆತಂಕವನ್ನು ಸತತವಾಗಿ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಅವರೂ ಏಕೆ ಇನ್ನೊಬ್ಬರ ಅಭಿಪ್ರಾಯ ಕೇಳಲು ಸಿದ್ಧರಿರಲಿಲ್ಲ? ಚಂದ್ರಶೇಖರ ಪಾಟೀಲರು ತಮಗೆ ಬಂದಿದ್ದ ‘ಪಂಪ ಪ್ರಶಸ್ತಿ’ಯನ್ನು ಕಲಬುರ್ಗಿಯವರ ಹತ್ಯೆಯಾದ ಕೂಡಲೇ ಸರ್ಕಾರಕ್ಕೆ ವಾಪಸು ಕೊಟ್ಟರು. ‘ಕಲಬುರ್ಗಿ ಕೊಲೆ ತನಿಖೆ ತೀವ್ರಗೊಳಿಸಬೇಕು ಮತ್ತು ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು’ ಎಂದು ಅವರು ಆಗ್ರಹಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಚಂಪಾ ಅವರಿಗಿಂತ ಮೊದಲು ಯಾರೂ ಧ್ವನಿ ಎತ್ತುವುದು ಸಾಧ್ಯವಿರಲಿಲ್ಲ. ತುರ್ತುಸ್ಥಿತಿ ಕಾಲದಲ್ಲಿ ಇದೇ ಕಾರಣಕ್ಕಾಗಿ ಅವರು ಬಂಧಿತರಾಗಿದ್ದರು; ಮತ್ತು ಜೈಲಿನ ಒಳಗೂ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಕವಿತೆ ಬರೆದಿದ್ದರು. ಆ ಕವಿತೆಗಳ ಸಂಕಲನವೇ ‘ಗಾಂಧೀಸ್ಮರಣೆ’ ಎಂಬ ಸಂಕಲನ. ಚಂಪಾ ಅವರ ನಂತರ ಎರಡನೆಯವರಾಗಿ ಕುಂ.ವೀ, ತಮಗೆ ಬಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಸು ಕೊಟ್ಟರು. ತದನಂತರ ‘ಪ್ರಶಸ್ತಿ ವಾಪಸು’ ಎಂಬುದು ಒಂದು ಆಂದೋಲನವಾಗಿ ಬೆಳೆಯಿತು.  ಪ್ರಶಸ್ತಿ ವಾಪಸು ಮಾಡಿದ ಎಲ್ಲರೂ  ಕಲಬುರ್ಗಿಯವರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ದೊಡ್ಡ ಕುತ್ತು ಎಂದು ಭಾವಿಸಿದರು. ಮತ್ತು ತಮಗೂ ಆ ಭಯವಿದೆ, ಅಂಥ ಭಯದ ವಾತಾವರಣ ಪ್ರಜಾಪ್ರಭುತ್ವ ಇರುವ ಭಾರತದಲ್ಲಿ ಇರಬಾರದು ಎಂದು ಪ್ರಶಸ್ತಿ ವಾಪಸು ಮಾಡುವ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು. ಈಗಲೂ ಭಯಮುಕ್ತ ವಾತಾವರಣಕ್ಕೆ ಹಾರೈಸಿ, ಬಯಸಿ ಪ್ರಶಸ್ತಿ ವಾಪಸು ಮಾಡುವುದು ನಿಂತಿಲ್ಲ.
 
ಕಲಬುರ್ಗಿಯವರ ಹತ್ಯೆ ಆಸ್ತಿ ವಿವಾದಕ್ಕಾಗಿ ಆಯಿತು ಎಂದು ಹೇಳಿ ಬಿಟ್ಟರೆ ಅಥವಾ ಪೊಲೀಸ್‌ ತನಿಖೆ ಹಾಗೆ  ನಿರ್ಣಯಿಸಿದರೆ ಇಡೀ ಪ್ರಶಸ್ತಿ ವಾಪಸು ಆಂದೋಲನ ನಿರ್ಮಿಸಿರುವ ಒಂದು ಬಿಂಬಕ್ಕೆ ಏಟು ಬೀಳುತ್ತದೆ. ‘ಕಲಬುರ್ಗಿ ಹತ್ಯೆ ನೆಪವಾಗಿ ಇಟ್ಟುಕೊಂಡು ಎಡಪಂಥೀಯರು, ಹಿಂದೂ ವಿರೋಧಿಗಳು ಹುಟ್ಟು ಹಾಕಿದ ಹುಯಿಲು ಇದು. ನೋಡಿ, ಕಲಬುರ್ಗಿಯವರನ್ನು ಹತ್ಯೆ ಮಾಡಿದವರು ಅವರ ಕುಟುಂಬದವರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅವರ ಹತ್ಯೆ ನಡೆಯಿತು ಎಂಬುದೆಲ್ಲ ಬರೀ ಬೊಗಳೆ’ ಎಂಬ ಗುಲ್ಲು ಎದ್ದುಬಿಟ್ಟರೆ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿದ ಎಲ್ಲರಿಗೂ ‘ನಿಂತ ನೆಲ’ ಕುಸಿದು ಹೋಗುತ್ತದೆ. ಕುಂ.ವೀ ಅವರಿಗೂ ಇದು ಆಗುತ್ತದೆ ಎಂದು ಪ್ರತ್ಯೇಕವಾಗಿ ಹೇಳುವುದು ಪುನರುಕ್ತಿಯಾಗುತ್ತದೆ.
 
 ಮಂಜುನಾಥ ಅಜ್ಜಂಪುರ ಅವರು ಕಲಬುರ್ಗಿಯವರ ಹತ್ಯೆಗೆ ಕೌಟುಂಬಿಕ ವ್ಯಾಜ್ಯದ ಕೋನ ಕೊಡುವ ಹಿಂದಿನ ಉದ್ದೇಶ ಇದೇ ಆಗಿದ್ದರೂ ಇರಬಹುದು! ಆದರೆ, ಅವರಿಗೆ ಅದನ್ನು ಹೇಳಲು ಹಕ್ಕು ಇರಲಿಲ್ಲ ಎಂದು ವಾದಿಸುವುದು,  ಅವರು ಮಾತನಾಡದಂತೆ ನಿರ್ಬಂಧ ಹಾಕುವುದು ಮತ್ತು ಪ್ರಾಣ ಬೆದರಿಕೆ ಹಾಕುವುದು ಇನ್ನೊಂದು ಬಗೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆಯೇ ಆಗುತ್ತದೆ.
 
ಕಲಬುರ್ಗಿಯವರ ಹತ್ಯೆ 2015ರ ಆಗಸ್ಟ್‌ 30ರಂದು ಆಗಿರಬಹುದು. ಹಾಗೆ ನೋಡಿದರೆ 1989ರಲ್ಲಿಯೇ ಅವರನ್ನು ಅವರ ಸಮುದಾಯದವರೇ ಹತ್ಯೆ ಮಾಡಲು ಸಿದ್ಧರಾಗಿದ್ದರು. ಅವರಿಗೆ ಕಲಿಸಿದ ಗುರುಗಳೇ ‘ಕಲಬುರ್ಗಿಯ ರುಂಡವನ್ನು ತಂದು ನನ್ನ ಮುಂದೆ  ಇಡಿ’ ಎಂದು ಆದೇಶಿಸಿದ್ದರು. ಇನ್ನೊಬ್ಬರು, ‘ಕಲಬುರ್ಗಿಯನ್ನು ಮುಗಿಸಲು ಒಂದು ಲೀಟರ್‌  ಪೆಟ್ರೋಲ್‌ ಸಾಕು’ ಎಂದಿದ್ದರು. ಮತ್ತೊಬ್ಬರು ‘ಕಲಬುರ್ಗಿ ವಿರುದ್ಧ ಗಣಾಚಾರ ಮಾಡಲು ನಾನು ಸಿದ್ಧ’ ಎಂದಿದ್ದರು. ಗಣಾಚಾರ ಎಂದರೆ ಧರ್ಮಯುದ್ಧ ಎಂದು ಅರ್ಥ!
 
 ಚನ್ನಬಸವಣ್ಣನ ಹುಟ್ಟಿನ ಕುರಿತು ಕಲಬುರ್ಗಿ ಬರೆದ ಒಂದು ಲೇಖನ ಅದೇ ಆಗ ‘ಮಾರ್ಗ –1’  ಸಂಪುಟದಲ್ಲಿ ಪ್ರಕಟವಾಗಿತ್ತು. ಅದು ಲಿಂಗಾಯತ ಸಮುದಾಯದಲ್ಲಿ ಎಷ್ಟು ಆಕ್ರೋಶ  ಹುಟ್ಟು ಹಾಕಿತು ಎಂದರೆ ಕಲಬುರ್ಗಿಯವರು ‘ಶರಣಾಗುವ’ ವರೆಗೆ ಅದು ನಿಲ್ಲಲೇ ಇಲ್ಲ. ಅವರು ಆ ಲೇಖನವನ್ನು ವಾಪಸು ತೆಗೆದುಕೊಂಡರು. ಆ ಲೇಖನವನ್ನು ವಾಪಸು ತೆಗೆದುಕೊಂಡಿರುವುದರಿಂದ ನಾನು ಇಲ್ಲಿ ಆ ವಿವರಗಳನ್ನು ಬರೆಯುತ್ತಿಲ್ಲ. ಆದರೆ, ಆ ಲೇಖನ ಬಸವಣ್ಣನವರ ಸೋದರಿಯ ಬಿಂಬಕ್ಕೆ ಮುಕ್ಕು ತಂದಿತ್ತು.  ಶ್ರೇಣೀಕರಣದ ಜಾತಿ ವ್ಯವಸ್ಥೆಯ ಸಮಾಜದಲ್ಲಿ ಕೆಳಗಿನ ಕ್ರಮಣವನ್ನು ಸಹಿಸಿಕೊಳ್ಳುವುದು ಯಾವಾಗಲೂ ಕಷ್ಟ. ಬಸವಣ್ಣ ಅದನ್ನೇ ಮಾಡಲು ಹೋಗಿ ಕಷ್ಟಕ್ಕೆ ಸಿಲುಕಿದ. ಕಲಬುರ್ಗಿಯವರೂ ಅಂಥದೇ ಒಂದು ‘ಸಂಶೋಧನೆ’ ಮಾಡಿ ಕಷ್ಟಕ್ಕೆ ಸಿಲುಕಿಕೊಂಡಿದ್ದರು.
 
ಲೇಖಕ ಬಂಜಗೆರೆ ಜಯಪ್ರಕಾಶ್‌ ‘ಆನುದೇವಾ ಹೊರಗಣವನು’ ಕೃತಿ ಬರೆದು ಇದೇ ಸಮಸ್ಯೆಗೆ ಸಿಲುಕಿಕೊಂಡರು. ಮತ್ತು ಲಿಂಗಾಯತ ಸಮಾಜದ ತೀವ್ರ ಪ್ರತಿರೋಧ ಎದುರಿಸಲಾಗದೇ ತಮ್ಮ ಕೃತಿಯನ್ನು ತಾವೇ ವಾಪಸು ತೆಗೆದುಕೊಂಡರು. ಅವರೂ ಶ್ರೇಣೀಕರಣದ ಜಾತಿ ವ್ಯವಸ್ಥೆ ಇರುವ ಸಮಾಜದಲ್ಲಿ ‘ಕೆಳ ಕ್ರಮಣ’ದ ಕಥೆ ಹೇಳಿದ್ದರು. ಅವರ ಬಸವಣ್ಣನ  ಮೂಲ ಜಾತಿ ‘ಹೊರಗಿನದು’ ಎಂದಿದ್ದರು.  ಆ ಮೂಲಕ ಅವರೂ ಎಂಟು ನೂರು ವರ್ಷಗಳಿಂದ ಸಮಾಜದಲ್ಲಿ ಇದ್ದ ಬಹುದೊಡ್ಡ ಬಿಂಬಕ್ಕೆ ಮುಕ್ಕು ತಂದಿದ್ದರು. ಲಿಂಗಾಯತ ಸಮಾಜ ಅದನ್ನು ಸಹಿಸಿಕೊಳ್ಳಲಿಲ್ಲ. ‘ಬಸವಣ್ಣ ನಮ್ಮವನಲ್ಲ’ ಎಂದು ಒಪ್ಪಿಕೊಂಡು ಸುಮ್ಮನಿರಲು ಹೇಗೆ ಸಾಧ್ಯ? ಅದರ ಇದುವರೆಗಿನ ನಂಬಿಕೆಯ ಮತ್ತು ಒಟ್ಟು ಅಸ್ತಿತ್ವದ ಆಧಾರವೇ ಕುಸಿದು ಹೋದರೆ ಇಡೀ ಸಮುದಾಯ ಅತಂತ್ರವಾಗಿ ಬಿಡುತ್ತದೆ. 
 
ರಾಮಾಯಣ ಮಹಾಕಾವ್ಯ ಬರೆದ ಕವಿ ವಾಲ್ಮೀಕಿಯ ಹುಟ್ಟಿನ ವಿವಾದ ಇನ್ನೊಂದು ನೆಲೆಯದು. ಅದೂ ಈಚಿನ ಇತಿಹಾಸ. ವಿದ್ವಾಂಸ ಕೆ.ಎಸ್‌.ನಾರಾಯಣಾಚಾರ್ಯರು, ‘ವಾಲ್ಮೀಕಿ ಒಬ್ಬ ಬ್ರಾಹ್ಮಣ’ ಎಂದರು. ಅದು ಜಾತಿ ಶ್ರೇಣೀಕರಣ ವ್ಯವಸ್ಥೆಯಲ್ಲಿ ಮೇಲು ಚಲನೆಯ ‘ಸಂಶೋಧನೆ’ಯಾಗಿತ್ತು. ಆದರೆ, ರಾಜ್ಯದ ಕೆಲಭಾಗಗಳನ್ನಾದರೂ ಕೆಲವು ಕಾಲ ಆಳಿದ ಬೇಡ ಸಮುದಾಯಕ್ಕೆ ವಾಲ್ಮೀಕಿಯನ್ನು ಬ್ರಾಹ್ಮಣ ಸಮುದಾಯಕ್ಕೆ ಬಿಟ್ಟುಕೊಡುವುದು ತನ್ನ ಅಸ್ಮಿತೆಯನ್ನು ಬಿಟ್ಟುಕೊಡುವ ಬಿಕ್ಕಟ್ಟು ಆಗಿತ್ತು. ವಾಲ್ಮೀಕಿ ನಮ್ಮವ ಎಂಬ ಪ್ರತಿಮೆ  ಮುಕ್ಕಾಗುವುದನ್ನು ಬೇಡ ಸಮುದಾಯ ಸಹಿಸಲಿಲ್ಲ. ಮುಂದೆ ಏನಾಯಿತು ಎಂಬುದು ಈಗ ಇತಿಹಾಸ.
 
ನಾವು ನಮ್ಮ ಒಳಗೆ ಕಾಪಾಡಿಕೊಂಡು ಬಂದ ಪ್ರತಿಮೆಗಳು, ಬಿಂಬಗಳು ಹಾಗೆಯೇ ಇರಬೇಕು ಎಂದು ಬಯಸುತ್ತೇವೆ. ಆ ಬಿಂಬಕ್ಕೆ ಎಲ್ಲಿಯೋ ಮುಕ್ಕು ಆಗುತ್ತದೆ ಎಂದು ಅನಿಸಿದರೆ ಅದು ಸತ್ಯವಾಗಿದ್ದರೂ ಅದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಕಲಬುರ್ಗಿಯವರನ್ನು ಯಾರು ಹತ್ಯೆ ಮಾಡಿದರು ಎಂದು ಇದುವರೆಗೆ ಅಧಿಕೃತವಾಗಿ ತಿಳಿದಿಲ್ಲ. ಯಾವಾಗ ತಿಳಿಯುತ್ತದೆಯೋ ಎಂಬುದೂ ಗೊತ್ತಿಲ್ಲ. ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ನಡೆದ ಚಪ್ಪಲಿ ಪ್ರದರ್ಶನದ ಘಟನೆ ತನ್ನೊಳಗಿನ ಬಿಂಬ ಮುಕ್ಕಾದುದಕ್ಕೆ ವ್ಯಕ್ತವಾದ ಪ್ರತಿಭಟನೆಯಾಗಿರಬಹುದೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಇನ್ನೊಂದು ಬೆದರಿಕೆಯಾಗಿರಬಹುದೇ? ಮತ್ತು ಕಲಬುರ್ಗಿ ಹತ್ಯೆಯ ತನಿಖೆ ಹೇಗೆ ನಡೆಯಬೇಕು ಎಂದೂ ಅದು ಒತ್ತಾಯಿಸುತ್ತಿರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT