ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಜಿಲೇಬಿ ಮತ್ತು ಕಪ್ಪೆ...

Last Updated 2 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಹುಸೇನ ತಂದುಕೊಟ್ಟ ಸಾಸಿವೆ ಕಾಳಿನಂಥ ಗಾಂಜಾ (ಭಂಗಿಯ ಅಣ್ತಮ್ಮ) ಸಾವಿಲ್ಲದ ಮನೆಯ ಬೋನದಂತಿತ್ತು. ಬೋನ ಅಂದರೆ ಅನ್ನ ಅಂತ ನಿಮಗೆ ಗೊತ್ತಲ್ಲ? ಆ ಕ್ಷುಲ್ಲಕ ಕಾಳಿನ ಶಕ್ತಿಯನ್ನು ಹುಟ್ಟಿದ ಮಗುವಿಗೆ ಹೋಲಿಸಬಹುದು. ನೋಡಲು ಸಣ್ಣದು... ಸ್ವಂತಕ್ಕೆ ಶಕ್ತಿಯಿಲ್ಲದ್ದು... ಆದರೆ ಅದಕ್ಕಿರುವ ತಾಕತ್ತು ಎಂಥದ್ದು ಎಂದು ಸ್ವ-ಅನುಭವವಾದ ಮೇಲೇ ತಿಳಿಯುವುದು.

ಹಾಗೇ ಈ ಗಾಂಜಾ ಸೊಪ್ಪು ಕೂಡ. ಅದು ಕೈಗೆ ಸಿಕ್ಕ ಕೂಡಲೇ ಒಂಥರಾ ಝುಮು ಝುಮು ಎನ್ನಲು ಶುರುವಾಗುತ್ತದೆ. ತನ್ನ ಕಡೆಯೇ ಗಮನ ಕೇಂದ್ರೀಕರಿಸುವಂತೆ ಮಾಡುತ್ತದೆ. ಒಂದರೆಕ್ಷಣ ಮರೆತರೂ ಕಣ್ಣ ಮುಂದೆ ಧುತ್ತೆಂದು ಬಂದು ನಿಂತು ಜವಾಬ್ದಾರಿ ನೆನಪಿಸುತ್ತದೆ. ಹುಸೇನ ಬಹಳ ಮುತುವರ್ಜಿಯಿಂದ ತಂದುಕೊಟ್ಟ ಗಾಂಜಾವನ್ನು ಜೋಪಾನವಾಗಿ ಕವಿತಾ ಪೇಪರಿನಲ್ಲಿ ಬಂಧಿಸಿ ಬ್ಯಾಗಿನಲ್ಲಿ ಇಟ್ಟುಕೊಂಡಳು.

ಜೊತೆಯಲ್ಲಿ ತಾನೂ ಬರುತ್ತೇನೆ ಅಂತ ಅಲವತ್ತುಕೊಳ್ಳುತ್ತಿದ್ದ ಹುಸೇನನಿಗೆ ಜೋರು ಮಾಡಿ ತಮ್ಮ ಜೊತೆಗೆ ಬರುವುದು ಬೇಡ ಅಂತ ಗಟ್ಟಿಯಾಗಿ ನಿಂತಳು. ಒಂದು ಪ್ಯಾಕ್ ಸಿಗರೇಟು, ಲೈಟರು, ಒಂದು ಬಾಟಲಿ ನೀರು, ಬ್ಯಾಗು, ಹೊದ್ದುಕೊಳ್ಳಲು ಶಾಲು– ಹೀಗೆ ಬೇಕಾದ ಸಾಮಗ್ರಿಗಳನ್ನು ಒಟ್ಟು ಮಾಡಿಕೊಂಡು ಕವಿತಾ, ವಿಜಿ ಹಂಪಿಯ ನೆಲದ ಮೇಲೆ ತಮ್ಮ ಕಾಲುಗಳನ್ನು ಊರುತ್ತಾ ನಡೆದರು.

ಹಂಪಿಯ ಕಲ್ಲುಗಳನ್ನು ಕಟೆದು ಕಲಾವಿದರು ಕಟ್ಟಿದ ಸಾಮ್ರಾಜ್ಯವೊಂದು ಎಲ್ಲರ ಕಣ್ಣಿಗೂ ಕಾಣಿಸುತ್ತದಲ್ಲ? ಅದು ಕಲಾತ್ಮಕತೆ ಹೊತ್ತಿರುವಂಥದ್ದು. ಆದರೆ ಅದಕ್ಕೆ ದೃಷ್ಟಿಬೊಟ್ಟಿನಂತೆ ಆಧುನಿಕ ಮೂರ್ಖತನವೊಂದು ಆ ದಿನಗಳಲ್ಲಿ ತೂಗುತ್ತಾ ನಿಂತಿತ್ತು. ಅದೇ ಹಂಪಿಯ ತೂಗು ಸೇತುವೆ. ಸಳಸಳನೆ ಹರಿದು ಹೋಗುತ್ತಿದ್ದ ತುಂಗಭದ್ರೆ ಹಂಪಿಯನ್ನು ದಡ ಮಾಡಿ ಆನೆಗೊಂದಿಯನ್ನು ದ್ವೀಪ ಮಾಡಿದ್ದಳು.

ತೂಗು ಸೇತುವೆಯೆಂಬ ಈ ಸಿಮೆಂಟಿನಿಂದ ನಿರ್ಮಿತವಾದ ಕರಿಬಟ್ಟಿನ ಬಗ್ಗೆ ತಮಾಷೆಯ ವಿಷಯವೆಂದರೆ ಕಾಲನ ಕಾಲಿಗೆ ಸಿಕ್ಕಿದ್ದರೂ ನಾಶವಾಗದಿದ್ದ ಊರುಗಳ ನಡುವೆ ಸಂಪರ್ಕ ಕಲ್ಪಿಸಲು ಅಂತ ಶುರುವಾದದ್ದು. ಆನೆಗೊಂದಿ ಎಂಬ ಪುಟ್ಟ ದ್ವೀಪದಂಥ ಊರಿಗೆ ಏನೇನೆಲ್ಲ ಹೆಗ್ಗಳಿಕೆ ಇದೆ ಎಂದು ತಿಳಿದರೆ ರೋಮಾಂಚನವಾಗುತ್ತದೆ.  ಹಂಪಿ ಆಯುಷ್ಯ ಶತಮಾನಗಳಾದರೆ, ಆನೆಗೊಂದಿ ಅದಕ್ಕಿಂತ ಬಹಳ ಹಳೆಯದು. ಆನೆಗೊಂದಿಯಲ್ಲಿ ಅರಸರು ಕಟ್ಟಿರುವ ಕೆಲವು ಕಟ್ಟಡಗಳು ಇನ್ನೂ ಇವೆ ಎಂದರೆ ಅವರ ದೂರದೃಷ್ಟಿ ನಿಜಕ್ಕೂ ಕಾಲಕ್ಕೆ ಸವಾಲಾಗಿ ನಿಂತ ಬಂಡೆಕಲ್ಲೇ ಸರಿ...

ಸಮಯದ ಹರಿವು ಮತ್ತು ಇತಿಹಾಸ ಈ ಎರಡನ್ನೂ ಅರೆದು ಕುಡಿದಿದ್ದ ಊರುಗಳು ತಮ್ಮ ಅಸ್ತಿತ್ವದಿಂದ ಗತಕಾಲಕ್ಕೆ ಚಿನ್ನದ ಲೇಪನವನ್ನೂ, ಭೂತಕ್ಕೆ ರಕ್ತವರ್ಣವನ್ನೂ, ಪ್ರಸ್ತುತಕ್ಕೆ ದೂಳನ್ನೂ, ಭವಿಷ್ಯಕ್ಕೆ ಕತ್ತಲನ್ನೂ ತುಂಬಿಸಿದಂತೆ ಕಾಣುತ್ತಿದ್ದವು.

ಎರಡೂ ಊರನ್ನೂ ಹೊಲಿಯುವ ಪ್ರಯತ್ನದಲ್ಲಿ ಸಿಮೆಂಟಿನ ಸೇತುವೆ ಆರಂಭವಾಗಿದ್ದ ದಿನಗಳಲ್ಲಿ ಯುನೆಸ್ಕೋ ಎಂಬ ಸಾಂಸ್ಕೃತಿಕ ಹಾಗೂ ವೈಜ್ಞಾನಿಕವಾಗಿ ಅತ್ಯಂತ ಮಹತ್ವವುಳ್ಳ ಸ್ಥಳಗಳ ರಕ್ಷಣೆಗಾಗಿ ಇರುವ ಅಂತರರಾಷ್ಟ್ರೀಯ ಸಂಸ್ಥೆ ಹಂಪಿಗೆ ಇರುವ ವಿಶ್ವ ಪಾರಂಪರಿಕ ಸ್ಥಳ ಎನ್ನುವ ವಿಷಯವನ್ನು ಎತ್ತಿ ಹಿಡಿದು ಸರ್ಕಾರವು ಯಾವ ಕಾರಣಕ್ಕೂ ಈ ಸೇತುವೆ ಕೆಲಸವನ್ನು ಮುಂದುವರೆಸಬಾರದು ಅಂತ ಶರಾ ಬರೆದುಬಿಟ್ಟಿತ್ತು.

ಸೇತುವೆ ಪೂರ್ಣವಾಗಿದ್ದರೆ ಎರಡೂ ಊರ ಜನಕ್ಕೆ ಸಹಾಯವಾಗುತ್ತಿತ್ತೇನೋ ಸರಿಯೇ. ಆದರೆ ಅದರಿಂದ ಹಂಪಿಯ ಒಟ್ಟಂದ ಮತ್ತು ಸಮಗ್ರ ನೋಟ ಕದಡಿಹೋಗುತ್ತದೆ ಮತ್ತು ಇದರಿಂದ ಉಳಿದ ಸ್ಮಾರಕಗಳ ರಕ್ಷಣಗೆ ಧಕ್ಕೆ ಬರುತ್ತದೆ ಎನ್ನುವುದು ಯುನೆಸ್ಕೋ ದೃಢ ನಿರ್ಧಾರವಾಗಿತ್ತು. ಹಾಗಾಗಿ ಕೋಟ್ಯಾನುಗಟ್ಟಲೆ ಹಣ ಸುರಿದು ‘ಯಾವನೇನ್ ಮಾಡ್ತನೆ’ ಎನ್ನುವ ಧೋರಣೆಯಲ್ಲಿ ಸರ್ಕಾರ ಶುರುಮಾಡಿದ ಈ ಬ್ರಿಜ್ಜು ಯುನೆಸ್ಕೋದ ಮಧ್ಯಸ್ಥಿಕೆ ಮತ್ತು ಮಾತಿನ ಪೆಟ್ಟು ತಿಂದ ಮೇಲೆ ಹಾಗೇ ನಿಂತು ಹೋಗಿತ್ತು.

ಎರಡೂ ಕಡೆಯಿಂದ ಅರ್ಧರ್ಧ ಕಟ್ಟಲಾದ ಸದರಿ ಸೇತುವೆ ಉಕ್ಕಿನ ಹಗ್ಗಗಳ ಸಹಾಯದಿಂದ ತೂಗುತ್ತಿತ್ತು. ದೂರದಿಂದ ನೋಡಿದರೆ ಸೇತುವೆಯೇ ಕುಡಿದು ಟೈಟಾಗಿ ತೂರಾಡುತ್ತಿದ್ದ ಹಾಗೆ ಕಾಣಿಸುತ್ತಿತ್ತು. ಆ ಸೇತುವೆ ಬಂಜೀ ಜಂಪಿಂಗಿಗೆ ಹೇಳಿ ಮಾಡಿಸಿದಂತಿತ್ತು. ಆದರೆ, ಕವಿತಾ ಮತ್ತು ವಿಜಿ ಎಂಬ ಇಬ್ಬರು ಮಿಕ್ಕಿ ಮೀರಿ ಹೋದ ಹುಡುಗಿಯರು ಅದನ್ನು ತಮ್ಮ ‘ಗಾಂಜಾ ಜಂಪಿಂಗ್’ ಗೆ ಸೂಕ್ತ ಸ್ಥಳ ಅಂತ ಆರಿಸಿಕೊಂಡು ಕತ್ತಲಾಗುವ ಸಮಯದಲ್ಲಿ ಅತ್ತ ಹೊರಟಿರಲಾಗಿ ಹುಣ್ಣಿಮೆ ರಾತ್ರಿಯ ಚಂದಿರ ಇವರನ್ನು ನೋಡಿ ಗಾಬರಿಯಾದನೋ, ಸಂತಸಗೊಂಡನೋ ತಿಳಿಯದಾಯಿತು.

ಸ್ನಿಗ್ಧತೆ ಅಂದರೆ ಏನು ಅಂತ ಅರ್ಥವಾಗಬೇಕಾದರೆ ಹಂಪಿಯನ್ನು ಬೆಳಗುವ ಹುಣ್ಣಿಮೆಯ ಚಂದಿರನನ್ನು ನೋಡಬೇಕು. ತಂಪಾದ ಸಮಯ... ಬಂಡೆಗಳು ರಣರಣ ಅನ್ನುದೆ ಬೆಚ್ಚಗೆ ಕೂತು ತಂಪು ಸೂಸುತ್ತಾ ಹಾದು ಹೋಗುವ ಬಾಂಧವರನ್ನೆಲ್ಲ ನೋಡಿ ನಗುತ್ತವೆ ಎನ್ನುವಂತೆ ತೋರುತ್ತದೆ. ಇಂತಿಪ್ಪ ಸಮಯದಲ್ಲಿ ಹೊರಟ ಇಬ್ಬರು ವೀರರಮಣಿಯರು ಈ ಕೋಟೆ ಕೊತ್ತಲಗಳ ಸಾಮ್ರಾಜ್ಯದಲ್ಲಿ ತಮ್ಮದೇ ಒಂದು ಅಸ್ತಿತ್ವವನ್ನು ಕೊಚ್ಚಿ ಕೊರೆದು ನೀರು ಹಾಕಿ ಬೆಳೆಸಲು ಉತ್ಸುಕರಾಗಿದ್ದರು.

‘ಹುಸೇನ ಬರೋದು ಯಾಕೆ ಬ್ಯಾಡ ಅಂದೆ?’ ಅಂತ ಕೇಳಿದಳು ವಿಜಿ. ‘ಅಲ್ಲ ಕಣೆ. ನಿನಗೆ ನನ್ನ ಮೇಲೆನೇ ಅನುಮಾನ ಇದೆ. ಇನ್ನು ಹುಸೇನ ಬಂದ್ರೆ ಸತ್ತೇ ಹೋಗ್ತೀಯಾ.ಸುಮ್ಮನೆ ಯಾಕೆ ಅವೆಲ್ಲ ಗೊತ್ತಿಲ್ಲದ ಊರಲ್ಲಿ?’ ಅಂದಳು ಕವಿತಾ.

ಹೀಗೇ ಬ್ಯಾಡವಾದ ಸಾವಿರ ವಿಷಯಗಳನ್ನು ಮಾತನಾಡುತ್ತಾ ಬ್ರಿಜ್ಜಿನ ಮೇಲೆ ಹೋಗಿ ಕೂತರು. ನೆಲಮಟ್ಟದಲ್ಲಿ ಸುತ್ತಲೂ ಬಂಡೆ ಕಲ್ಲುಗಳು, ಕೆಳಗೆ ಹರಿಯುವ ನದಿ. ಭೋರ್ ಅಂತ ಕಿವಿ ಸೀಳುತ್ತಾ ಸ್ಪರ್ಶ ಜ್ಞಾನವನ್ನೇ ಇಲ್ಲವಾಗಿಸುತ್ತಾ ಬೀಸುತ್ತಿರುವ ಗಾಳಿ. ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆದುಕೊಂಡರೂ ನೋವು, ಅವಮಾನ ಏನೂ ಗೊತ್ತಾಗದಂಥ ವಾತಾವರಣ.

ಗಾಳಿಗಿರುವ ತಾಕತ್ತು ತಿಳಿಯಬೇಕೆಂದರೆ ಸುಂಟರಗಾಳಿ ಅಥವಾ ಬಿರುಗಾಳಿಯೇ ಬೀಸಬೇಕಿಲ್ಲ. ಯಾವ ಆಧಾರವೂ ಇಲ್ಲದ ಜಾಗಕ್ಕೆ ಹೋಗಿ ಸುಮ್ಮನೆ ಗಾಳಿಗೆ ಮುಖಮಾಡಿ ನಿಂತರೆ ಸಾಕು. ಗಾಳಿಯ ವೇಗದಲ್ಲಿ ಸ್ವಲ್ಪವೇ ಹೆಚ್ಚಳವಾದರೂ ಸಾಕು ಈ ಯಕಶ್ಚಿತ್ ನಶ್ವರ ದೇಹವನ್ನು ಅವಿನಾಶಿಯಾದ ಆತ್ಮ ಬಿಟ್ಟು ಹೋಗುತ್ತಿರುವಂತೆ ಭಾಸವಾಗುತ್ತದೆ.

ಬ್ರಿಜ್ಜು ಅತ್ತಲಿಂದ ಅರ್ಧ, ಇತ್ತಲಿಂದ ಅರ್ಧ ಇತ್ತಲ್ಲ? ಹಾಗಾಗಿ ಜನ ಸಂಚಾರ ಇರಲಿಲ್ಲ. ಏನೋ ಸಂಜೆ ಟೈಮ್ ಪಾಸಿಗೆಂದು ಬಂದವರು ಅಲ್ಲಲ್ಲಿ ಓಡಾಡುತ್ತಿದ್ದರು. ಅಲ್ಲದೆ ಸಿಕ್ಕಾಪಟ್ಟೆ ಟೂರಿಸ್ಟುಗಳು ಬಂದು ಹೋಗುವ ಊರುಗಳಲ್ಲಿ ಲೋಕಲ್ ಅಲ್ಲದವರ ಬಗ್ಗೆ ಒಂಥರಾ ನಿರ್ಲಿಪ್ತತೆ ಇರುತ್ತದೆ. ‘ಏನಾರಾ ಮಾಡ್ಕಂಡ್ ಸಾಯ್ಲಿ’ ಅನ್ನೋ ಥರ.

ದೂರದಿಂದ ಬ್ರಿಜ್ಜು ಒಂಥರಾ ಅರೆಬರೆ ಜೋಕಿನ ಥರ ಕಾಣಿಸುತ್ತಿತ್ತು. ಎರಡೂ ಕಡೆಯಿಂದ ದೈತ್ಯಾಕಾರದ ಸಿಮೆಂಟು ಹಲಗೆ ಉದ್ದಕ್ಕೆ ಚಾಚಿಕೊಂಡು ಒಬ್ಬರನ್ನೊಬ್ಬರು ಸೋಕಲಾಗದ ಪ್ರೇಮಿಗಳ ಥರ ಅಲ್ಲಲ್ಲೇ ನಿಂತುಬಿಟ್ಟಿದ್ದವಷ್ಟೇ? ಆ ಹಲಗೆಗಳು ಕೊನೆಯಾದ ಪಾಯಿಂಟಿಗೆ ಹೋಗಿ ಬಗ್ಗಿ ನೋಡಿದರೆ ಪಾತಾಳದಲ್ಲಿ ಮುಗ್ಧವಾಗಿ ಹರಿಯುತ್ತಿರುವ ತುಂಗಭದ್ರೆ ಜೀವ ತೆಗೆದುಬಿಡುವ ಡಾಕಿನಿಯಂತೆ ಕಾಣಿಸುತ್ತಿದ್ದಳು.

ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಕವಿತಾ ಅಲ್ಲೆಲ್ಲೋ ಕೂತು ಜತನದಿಂದ ಗಾಳಿಗೆ ಅಡ್ಡವಾಗಿ ತನ್ನ ಮೈಯನ್ನು ಮರೆಯಾಗಿ ಹಿಡಿದು ಸಿಗರೇಟಿನೊಳಗಿನಿಂದ ತಂಬಾಕನ್ನು ಜೋಪಾನವಾಗಿ ತಟ್ಟಿ ತಟ್ಟಿ ತೆಗೆಯುತ್ತಾ ತೆಗೆದ ತಂಬಾಕು ಹಾರಿ ಹೋಗದಂತೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಳು. ಏಕೆಂದರೆ ಗಾಂಜಾ ಸೇದಲು ಸ್ವಲ್ಪ ತಂಬಾಕಿನ ಅವಶ್ಯಕತೆ ಇತ್ತು.

ಗಾಂಜಾವನ್ನೂ ತಂಬಾಕನ್ನೂ ಮಿಶ್ರ ಮಾಡಿ ಸ್ವಲ್ಪಸ್ವಲ್ಪವೇ ಮತ್ತೆ ಖಾಲಿಯಾಗಿದ್ದ ಸಿಗರೇಟಿನ ಕೊಳವೆಯೊಳಕ್ಕೆ ಗರಿಗರಿಯಾದ ಹೊಸಾ ಐದು ರೂಪಾಯಿ ನೋಟಿನ ಸಹಾಯದಿಂದ ತುಂಬಿಸುತ್ತಾ ಅತ್ತ ತಿರುಗಿ ನೋಡಿದರೆ ಎದೆ ಝಲ್ ಅನ್ನಿಸುವಂಥ ನೋಟ. ಮಂಗನಂತಾ ವಿಜಿ ಯಾವ ಮಾಯದಲ್ಲೋ ಕವಿತಾ ಪಕ್ಕದಲ್ಲಿ ಕೂತವಳು ಬ್ರಿಜ್ಜು ನದಿ ಮಧ್ಯದಲ್ಲಿ ಕೊನೆಯಾಗುವ ಜಾಗಕ್ಕೆ ಹೋಗಿಬಿಟ್ಟಿದ್ದಳು.

ಅಲ್ಲಿ ನಿಂತವಳಿಗೆ ವಾಪಸು ಬರಲೂ ತ್ರಾಣವಿಲ್ಲದಾಗಿತ್ತು. ಕುತೂಹಲಕ್ಕಂತ ಕೆಳಗೆ ನೋಡಿದರೆ ತಲೆ ತಿರುಗಿದಂತಾಗಿ, ಬಾಯಿ ಒಣಗಿಬಿಟ್ಟಿತ್ತು. ದೇವರು ದೆವ್ವ ಯಾವುದೂ ನೆನಪಾಗದಾಗಿ ಹೇಗೆ ಧೈರ್ಯ ಮಾಡಿಕೊಳ್ಳಬೇಕೆಂದರೂ ಆಸ್ಪದವಿಲ್ಲದಾಗಿ ಸುಮ್ಮನೆ ದಿಗ್ಮೂಢಳಾಗಿ ನಿಂತಿದ್ದಳು. ಸರಿಯಾದ ಸಮಯಕ್ಕೆ ಕವಿತಾ ನೋಡದೆ ಹೋಗಿದ್ದರೆ ವಿಜಿ ಒಣಗಿದ ಎಲೆ ಹಾಗೆ ಬಿದ್ದೇ ಹೋಗುತ್ತಿದ್ದಳೇನೋ... ಈ ಹುಡುಗಿಯಾದರೂ ಸಿಕ್ಕಾಪಟ್ಟೆ ಸಮಯಪ್ರಜ್ಞೆಯುಳ್ಳವಳು. ನೋಡಿದ ತಕ್ಷಣ ಓಡಿ ಹೋಗಲಿಲ್ಲ.

ತಂಬಾಕನ್ನೆಲ್ಲಾ ಜೋಪಾನವಾಗಿ ಪೇಪರಿನಲ್ಲಿ ಸುತ್ತಿಕೊಂಡು, ಅದನ್ನು ತನ್ನ ಬ್ಯಾಗಿಗೆ ಸೇರಿಸಿ, ತನ್ನ ಬ್ಯಾಗನ್ನು ಸೈಡಿಗೆ ಹಾಕಿಕೊಂಡು ಹೋಗಿ ಹಿಂದಿನಿಂದ ಮೆಲ್ಲಗೆ ವಿಜಿ ಕೈ ಹಿಡಿದು ವಾಪಸು ಕರೆತಂದಳು. ಅಂಥ ಬೀಸುವ ಗಾಳಿಯಲ್ಲೂ ವಿಜಿ ಬೆವರುತ್ತಿದ್ದಳು, ಜೀವಭಯ ಅಂದರೆ ಇದೇ ಇರಬೇಕು. ಇಬ್ಬರೂ ಮಾತನಾಡಲಿಲ್ಲ. ಸಾಮಾನ್ಯವಾಗಿ ಹೆದರಿಕೆ ಅನಾವರಣಗೊಂಡ ತೀವ್ರ ಕ್ಷಣಗಳಲ್ಲಿ ಮಾತಿಗೆ ಆಸ್ಪದವೇ ಇರುವುದಿಲ್ಲ.

ಆತ್ಮಗ್ಲಾನಿ ತುರೀಯಾವಸ್ಥೆಯಲ್ಲಿರುತ್ತದೆ. ಆಗ ಮಾತು ಸ್ವರ ಕಳೆದುಕೊಂಡ ಸಂಗೀತಗಾರನಂತೆ, ನಾಲಿಗೆ ಕಳೆದುಕೊಂಡ ವಾಚಾಳಿಯಂತೆ – ಬರೀ ಉಮ್ಮಳಿಸಿ ಬರುವ ಮೌನವೇ ಭಾರವಾಗಿ ಮಾತು ಅಪ್ರಸ್ತುತವಾಗುತ್ತದೆ. ಹೀಗೆ ಮತ್ತೆ ಬ್ರಿಜ್ಜಿನ ಮೇಲೇ ಒಂದು ಸೇಫಾದ ಸ್ಥಳದಲ್ಲಿ ಕೂರಲಾಗಿ ವಿಜಿ ಅತ್ತಿತ್ತ ನೋಡುತ್ತಾ ತನ್ನ ಹೆದರಿಕೆಯ ಪುಕ್ಕಗಳನ್ನು ಕತ್ತರಿಸಲು ಪ್ರಯತ್ನಿಸಿದಳು. ಮುಖಮೂತಿ ಒರೆಸಿಕೊಳ್ಳುತ್ತಾ ಪೆಚ್ಚುಪೆಚ್ಚಾಗಿ ಸ್ನೇಹಿತೆಯನ್ನು ನೋಡಿ ನಕ್ಕಳು.

ಕವಿತಾ ಗಾಂಜಾ ‘ಜಾಯಿಂಟ್’ ರೋಲ್ ಮಾಡುವುದರಲ್ಲಿ ನಿರತಳಾಗಿದ್ದಳು. ಗಾಂಜಾ ಜೊತೆ ಸ್ವಲ್ಪವೇ ತಂಬಾಕು ಮಿಕ್ಸ್ ಮಾಡಿ, ಚಿಕ್ಕ ಮಕ್ಕಳಿಗೆ ಊಟ ಮಾಡಿಸುವ ಹಾಗೆ ಪುಟಾಣಿ ತುತ್ತುಗಳನ್ನು ತುಂಬಿಸಿ ಸಿಗರೇಟಿನ ತುದಿಯನ್ನು ಕಿವಿ ಓಲೆ  ತಿರುಪನ್ನು ಭದ್ರ ಮಾಡುವ ಹಾಗೆ ತಿರುಚುವ ಹಂತದ ತನಕವೂ ಅದು ಬಹಳ ಏಕಾಗ್ರತೆಯನ್ನು ಬೇಡುವ ಕೆಲಸವೇ. ಸಿಗರೇಟು ಸುತ್ತಿದ ಪೇಪರು ಬೇಗ ಸುಟ್ಟು ಹೋಗುತ್ತದೆ ಅಂತ ಕೆಲವರು ಇದನ್ನು ನೂರು ರೂಪಾಯಿನ ಹೊಸಾ ಕರೆನ್ಸಿ ನೋಟಿನಲ್ಲಿ ಸುತ್ತಿ ಸೇದುತ್ತಾರೆ.

ಕಾರಣವಿಷ್ಟೆ. ಅದು ದಪ್ಪ ಪೇಪರು ಮತ್ತು ತಡೆತಡೆದು ಸೇದಿದರೂ ಬೇಗ ಕರಗದೆ ಗಾಂಜಾ ಬಾಳುತ್ತದೆ ಎನ್ನುವ ವ್ಯಾಮೋಹ. ಎಲ್ಲ ರೆಡಿ ಮಾಡಿಕೊಂಡು ಕವಿತಾ ಹರಸಾಹಸ ಮಾಡಿ ಸಿಗರೇಟು ಹಚ್ಚಿದಳು. ಒಂದು ಪುಟ್ಟ ದಂ ಎಳೆದುಕೊಂಡು ವಿಜಿ ಕಡೆ ನೋಡಿದಳು. ವಿಜಿ ಒಮ್ಮೆ ಸಿಗರೇಟನ್ನೂ ಮತ್ತೊಮ್ಮೆ ಸೇದುತ್ತಿರುವ ತನ್ನ ಸ್ನೇಹಿತೆಯನ್ನೂ ನೋಡಿದಳು.

ಇದ್ದಕ್ಕಿದ್ದಂತೆ ಶೈತಾನ ಮೈ ಹೊಕ್ಕ ಹಾಗೆ ಸಿಗರೇಟು ಬೇಕೆನ್ನುವಂತೆ ಕೈ ಚಾಚಿದಳು. ಕವಿತಾಗೆ ಒಂದು ನಿಮಿಷ ತಬ್ಬಿಬ್ಬಾಯಿತು. ಇವಳಿಗೆ ಅನುಭವ ಇದೆಯೋ ಇಲ್ಲವೋ.ಕೊಟ್ಟರೂ ಇವಳು ಎಷ್ಟು ಧಂ ಎಳೀತಾಳೆ ಅನ್ನುವುದನ್ನು ಹೇಗೆ ಕಂಟ್ರೋಲ್ ಮಾಡುವುದು ಇತ್ಯಾದಿ ವಿಷಯಗಳು ಬಗೆ ಹರಿಯದೆ ಸುಮ್ಮನೆ ನೋಡಿದಳು.

ಆದರೆ ವಿಜಿ ಅದ್ಯಾವುದಕ್ಕೂ ಕೇರ್ ಮಾಡುವ ಹಾಗೆ ಇರಲಿಲ್ಲ. ಚಾಚಿದ್ದ ಕೈಯನ್ನು ‘ಕೊಡು’ ಎನ್ನುವಂತೆ ಇನ್ನೂ ಮುಂದೆ ಮಾಡಿದಳು. ಅನುಮಾನದಲ್ಲೇ ಕವಿತಾ ಸಿಗರೇಟನ್ನು ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಯ ಟ್ವೆಂಟಿ-ಟ್ವೆಂಟಿ ಸರಕಾರ ಒಲ್ಲದ ಮನಸ್ಸಿನಿಂದ ಅಧಿಕಾರ ಹಸ್ತಾಂತರಿಸುವ ಹಾಗೆ ತನ್ನ ಕೈಯಿಂದ ಅವಳ ಕೈಗೆ ದಾಟಿಸಿದಳು. ಸಿಗರೇಟು ಕೈಗೆ ಬಂದದ್ದೇ ತಡ ಅವಸರದ ಒಸಗೆಗೆ ಕಾದಿದ್ದವರ ಹಾಗೆ ವಿಜಿ ಹಿಡಿದು ಧಂ ಎಳೆದೇಬಿಟ್ಟಳು. ಗಾಂಜಾ ತಂಬಾಕಿನಷ್ಟು ಘಾಟಿರುವುದಿಲ್ಲ. ಹಾಗಾಗಿ ಆಳಕ್ಕೆ ಧಂ ಎಳೆದರೂ ಕೆಮ್ಮು ಬರುವುದಿಲ್ಲ.

ಆದರೆ ಅನುಭವಿ ಗಾಂಜಾ-ಭಂಗಿ ಚಟಸ್ಕರು ಧಂ ಅನ್ನು ತಡೆತಡೆದು ಎಳೆದುಕೊಳ್ಳುವ ಕಲೆಯನ್ನು ಹದವಾಗಿ ಕಲಿತಿರುತ್ತಾರೆ. ಗಾಂಜಾ ಮೆಲ್ಲಮೆಲ್ಲಗೆ ತಮ್ಮ ಸಂವೇದನೆಗಳ ಮೇಲೆ, ಇಂದ್ರಿಯಗಳ ಮೇಲೆ ಹತೋಟಿ ಸಾಧಿಸುವುದು ಅವರ ಗಮನಕ್ಕೆ ಬರುತ್ತದೆ. ಆಗ ತಮ್ಮ ಕಲೆಯ ಅನಾವರಣ ಮಾಡುವುದಕ್ಕೋ ಅಥವಾ ಆ ಸಮಯದಲ್ಲಿ ಉಂಟಾಗುವ ಭ್ರಮೆಗಳನ್ನು ಪೋಷಿಸುವುದಕ್ಕೋ ಉಪಯೋಗಿಸಿಕೊಳ್ಳುತ್ತಾರೆ.

ಆದರೆ ವಿಜಿ ಆ ಥರದ ಅನುಭವಗಳಿಗೆ ಅವಕಾಶವನ್ನೇ ಕೊಡದೆ ಹೊಸದಾಗಿ ಕುಡಿಯುವುದನ್ನು ಕಲಿಯುವವರ ಧಾವಂತದಲ್ಲಿ ಆಳದ ಒಂದು ಧಂ ಎಳೆದದ್ದೇ ಅಲ್ಲದೆ ಅವಸರದಲ್ಲಿ ಇನ್ನೂ ಎರಡುಮೂರು ಧಂ ಎಳೆದು ಕವಿತಾ ಪಾಲಿಗೆ ತಲೆನೋವಾಗಿ ಬಿಟ್ಟಳು. ಕವಿತಾ ಸುಮ್ಮನೆ ಕೂತಳು. ಇನ್ನು ತಾನು ಧಂ ಎಳೆದರೆ ಇಬ್ಬರೂ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ ಅಂತ ಅನ್ನಿಸಿತು. ಹಾಗೇ ಇಪ್ಪತ್ತು ನಿಮಿಷ ಕಳೆಯಿತು. ಇಬ್ಬರಿಗೂ ಗಾಳಿಯ ಹೊಡೆತಕ್ಕೆ ಮೌನವೇ ಸಹ್ಯವಾಗಿತ್ತು.  ಕವಿತಾ ಮೆಲ್ಲಗೆ ಕೇಳಿದಳು. ‘ಈ ಮೊದಲು ಸಿಗರೇಟು ಸೇದಿದ್ಯಾ?’

ಐದು ನಿಮಿಷದ ನಂತರ ಉತ್ತರ ಬಂತು. ‘ಷೇದಿದ್ದೆ. ಆದರೆ ಇಷ್ಟಿಲ್ಲ..’ ಅಂತೇನೋ ತೊದಲಿದಳು ವಿಜಿ ಬಾಲೆ. ಓಹೋ... ಗಾಂಜಾ ಹೊಡೆತ ಆಗಲೇ ತನ್ನ ಕೆಲಸ ಶುರು ಮಾಡಿತ್ತು. ಕವಿ ಸುಮ್ಮನೆ ವಿಜಿ ಕೈ ಹಿಡಿದುಕೊಂಡು ನಡೆದಳು. ವಿಜಿಗೆ ಕಪ್ಪೆಗಳ ಭಯವಿತ್ತು. ದಾರಿಯಲ್ಲಿ ಹೋಗುತ್ತಾ ರಸ್ತೆ ಪಕ್ಕದ ಪುಟ್ಟ ಹೊಂಡವೊಂದರಲ್ಲಿ ಮಧ್ಯಮ ಗಾತ್ರದ ಕಪ್ಪೆಯೊಂದು ಕುಳಿತಿತ್ತು. ಅದನ್ನು ನೋಡಿ ವಿಜಿ ರಸ್ತೆಯ ಮೇಲೆ ಕೂತುಬಿಟ್ಟಳು.

‘ಈ ಕಪ್ಪಾ ಡೈನಾಸಾರ್ ಐತೆ... ಇಲ್ಲಿ ಬಂಡೆಕಲ್ ಕಪ್ಪಾ ಡೈನಾಸಾರು..’ ಕಣ್ಣು ನಾಲಿಗೆ ತೇಲುತ್ತಿದ್ದವು. ಕೈ ಬಿಗಿ ಕಳೆದುಕೊಳ್ಳುತ್ತಿತ್ತು. ಸಂಜೆ ಇಳಿಯುತ್ತಿತ್ತು. ಭ್ರಮೆ ಏರುತ್ತಿತ್ತು.

ಕವಿತಾ ನಗಲು ಶುರುಮಾಡಿದಳು. ವಿಜಿ ಕೂಡ ಅಲೆಅಲೆಯಾಗಿ ನಕ್ಕಳು. ಸಿಟ್ಟೇ ಇಲ್ಲದ ಜಗತ್ತದು. ಅತೀ ಸ್ಲೋ ಮೋಷನ್ನಿನಲ್ಲಿ ಎಲ್ಲವೂ ನಡೆಯುತ್ತಿತ್ತು. ವಿಜಿಗೆ ತಾನು ಮಂಜುಗಡ್ಡೆಯಿಂದ ಮಾಡಿದ ಹಡಗಿನಲ್ಲಿ ಬೆಂಕಿಯ ಸಮುದ್ರ ದಾಟಿ ಹೋಗುತ್ತಿದ್ದೇನೆ ಅನ್ನಿಸಿ ಸುಮ್ಮನೆ ಅತ್ತಿತ್ತ ನೋಡಿದಳು. ಹಡಗು ಬಿರುಗಾಳಿಗೆ ಸಿಕ್ಕಿ ಅಲ್ಲಾಡುತ್ತಿತ್ತು. ಆದರೆ ಐಸು ಮೈಯನ್ನು ತಂಪಾಗಿಸಿತ್ತು.

‘ನೀರು...’ ಎಂದಳು. ತಕ್ಷಣ ಕವಿತಾ ನೀರು ಕೊಟ್ಟರೂ ಜಾಸ್ತಿ ಕುಡಿಯಲು ಬಿಡಲಿಲ್ಲ. ಅದಾದ ಮೇಲೆ ಶುರುವಾಯಿತು ಹೊಸ ಕತೆ. ‘ಜಿಲೇಬಿ ಬೇಕು... ಜಿಲೇಬಿ... ಸೈನಾಸಾರು... ಜಿಲೇಬಿ...ಪ್ಲೀಸ್...ಜಿಲೇಬಿ...’ ಗಾಂಜಾ ಗಿರಾಕಿಯನ್ನು ಮೆಲ್ಲಗೆ ನಡೆಸಿಕೊಂಡು ರೂಮಿಗೆ ಬರುವ ಹೊತ್ತಿಗೆ ಸಾಕುಬೇಕಾಗಿ ಹೋಯಿತು ಕವಿತಾಗೆ. ಮಂಚದ ಮೇಲೆ ಹಾಕಿ ಉಸ್‌ ಅಂತ ತಾನೊಂದು ಜಾಯಿಂಟ್ ರೋಲ್ ಮಾಡಿಕೊಂಡು ಸ್ವಲ್ಪಸ್ವಲ್ಪವೇ ಸೇದಲು ಪ್ರಯತ್ನ ಪಟ್ಟರೂ ಯಾಕೋ ರಿಸ್ಕಿ ಅನ್ನಿಸಿ ಸುಮ್ಮನಾದಳು.

ರಾತ್ರಿಯೆಲ್ಲಾ ಜಾಗರಣೆ... ಜಿಲೇಬಿ... ಕಪ್ಪೆ... ಸೈನಾಸಾರು... ನೀರು... ಸೋಫಾ ಏನೇನೋ. ಇದ್ದಕ್ಕಿದ್ದ ಹಾಗೆ ನಗುವುದು, ಸುಮ್ಮನಾಗುವುದು ಎಲ್ಲ ನಡೆದಿತ್ತು. ಬೆಳಿಗ್ಗೆ ಎದ್ದಾಗ ಆಗಲೇ ಸೂರ್ಯ ಬಂಡೆಕಲ್ಲುಗಳನ್ನು ತನ್ನ ಪ್ರಖರ ರಶ್ಮಿಯಿಂದ ಬೇಯಿಸುತ್ತಿದ್ದ. ಕವಿತಾ ಹಲ್ಲುಜ್ಜಲು ಹೋಗಿ ಬಂದಾಗ ವಿಜಿ ಎದ್ದುಕೂತಿದ್ದಳು.

‘ಸೋ.. ಹೆಂಗಾಯ್ತು ನಿನ್ನ ಗಾಂಜಾ ಪ್ರೋಗ್ರಾಮು ನಿನ್ನೆ?’ ಅಂದಳು ವಿಜಿ. ‘ನನ್ನ ಪ್ರೋಗ್ರಾಮಾ?’ ಕವಿತಾ ಅಚ್ಚರಿಯಿಂದ ಕೇಳಿದಳು. ‘ಹೂಂ...’ ‘ಹಹ! ಗೆಸ್ಟ್ ಆರ್ಟಿಸ್ಟು ಎಲ್ಲಾ ಹಾಳ್ಮಾಡಿಬಿಟ್ರು...’ ‘ಯಾರೇ ಗೆಸ್ಟು? ನನಗಂತೂ ಎಷ್ಟು ನಿದ್ದೆ ಬಂದಿತ್ತೂಂದ್ರೆ ಏನೂ ನೆನಪಿಲ್ಲ...’‘ಒಳ್ಳೇದಾಯಿತು ಬಿಡು’ ಕವಿತಾ ತಲೆ ಚಚ್ಚಿಕೊಂಡು ಸ್ನಾನಕ್ಕೆ ಹೋಗಲು ಟವಲ್ ಹುಡುಕಿದಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT