ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ ಕುಸಿಯೆ ಮಣ್ಣೇ ಇಹುದು ಮಂಕುತಿಮ್ಮ!

Last Updated 13 ಜುಲೈ 2016, 19:30 IST
ಅಕ್ಷರ ಗಾತ್ರ

ಶಹೀನ ಮನೆ ಸೇರಿದಳು. ಇತ್ತ ಸರಳಾ, ಸೂಸನ್, ಚಿತ್ರಾ ಮತ್ತು ವಿಜಿ ಟ್ಯಾಕ್ಸಿ ಮಾಡಿಕೊಂಡು ಶಹೀನಳನ್ನು ಮನೆಗೆ ಬಿಟ್ಟು ಬಂದು ಅಲ್ಲಿನ ತನಕ ಆದ ಖರ್ಚು ಲೆಕ್ಕ ಹಾಕಿದರು. ಹತ್ತಿರತ್ತಿರ ಇಪ್ಪತ್ತೈದು ಸಾವಿರ ಖರ್ಚಾಗಿತ್ತು. ಮೂರ್ನಾಲ್ಕು ಸಾವಿರದ ಸಂಬಳವೇ ದೊಡ್ಡ ಮೊತ್ತ ಎನ್ನುವ ಕಾಲದಲ್ಲಿ ಇಷ್ಟು ಖರ್ಚು ಸುಧಾರಿಸಿಕೊಳ್ಳಲು ಕಷ್ಟವೇ.
ಏಕೆಂದರೆ ಆ ದುಡ್ಡು ಕಟ್ಟಲು ತಂತಮ್ಮ ಆಫೀಸುಗಳಿಂದ ಎಲ್ಲರೂ ನಾಲ್ಕೈದು ಸಾವಿರ ಅಡ್ವಾನ್ಸ್ ತೆಗೆದುಕೊಂಡಿದ್ದರು.

ಆಸ್ಪತ್ರೆಯ ಬಿಲ್ಲು, ಟ್ಯಾಕ್ಸಿ ಬಾಡಿಗೆ, ವಾರದ ಕಾಲ ಆಸ್ಪತ್ರೆಗೆ ಓಡಾಡಿದ ಖರ್ಚು ಮತ್ತು ಮನೆಗೆ ಬಿಡುವಾಗ ಶಹೀನಾಗೆ ಒಂದು ತಿಂಗಳಿಗೆ ಆಗುವಷ್ಟು ಔಷಧಿಯನ್ನೂ ಕೊಂಡಿದ್ದರು. ಶಹೀನಳ ಮನೆಯಲ್ಲಿ ಅವಳ ಅಪ್ಪನ ಅವತಾರವನ್ನು ನೋಡುವವರೆಗೆ ಅವನು ಇಷ್ಟು ನೀಚ ಇರಬಹುದು ಎನ್ನುವ ಕಲ್ಪನೆ ಕೂಡ ಇರಲಿಲ್ಲ. ನೋಡಿದ ಮೇಲೆ ತಿಂಗಳಿಗಾಗುವಷ್ಟು ಔಷಧಿ ತೆಗೆದುಕೊಂಡು ಹೋದದ್ದು ಒಳ್ಳೆಯದೇ ಆಯಿತು ಎನ್ನಿಸಿತು.

‘ಆದರೆ, ನಾವು ಕೊಟ್ಟಿರೋ ಔಷಧಿ ಒಂದೇ ತಿಂಗಳಿಗೆ... ಆಮೇಲೆ ಅವರಪ್ಪ ನಿಮ್ಹಾನ್ಸಿಗೆ ಕರ್ಕೊಂಡು ಬಂದು ಅವಳನ್ನ ತೋರಿಸದೇ ಹೋದರೆ?’
ಕಗ್ಗತ್ತಲ ರಾತ್ರಿ, ಕರೆಂಟಿಲ್ಲ. ಮೋಡ ಸೀಳಿ ನೀರು ಧಾರಾಕಾರ ಸುರಿದು ಭೂಮಿಯನ್ನು ತೋಯಿಸುತ್ತಿರುವಾಗ ಚಿತ್ರಾ ಸರಳಾರನ್ನು ಕೇಳಿದಳು. ಸೂಸನ್ ತಕ್ಷಣ ‘ಹಾಂ! ನನಗೂ ಹಂಗೇ ಅನ್ನಿಸಿತ್ತು... ನಾನೇ ಕೇಳ್ಬೇಕಂತ ಇದ್ದೆ...’ ಅಂದ ಮರುಕ್ಷಣವೇ ವಿಜಿ ‘ಸ್ವಲ್ಪ ಬೇರೆಯೋರಿಗೂ ಮಾತಾಡಕ್ಕೆ ಚಾನ್ಸ್ ಕೊಡು’ ಅಂದಳು. ಸೂಸನ್ ಎಲ್ಲರನ್ನೂ ದುರುಗುಟ್ಟಿ ನೋಡಿ ಸುಮ್ಮನಾದಳು.

ಕ್ಯಾಂಡಲ್ ಬೆಳಕಿನಲ್ಲಿ ಸರಳಾ ಲೆಕ್ಕ ಬರೆಯುತ್ತಿದ್ದವರು ನಿಡಿದಾದ ಉಸಿರು ತೆಗೆದು ಸುಮ್ಮನಾದರು. ‘ಶಹೀನ ವಿಚಾರ ಇನ್ನು ಬೇಡ. ನಮ್ಮ ಕೈಲಾದದ್ದು ನಾವು ಮಾಡಿ ಆಯಿತು. ಈಗ ಈ ತಿಂಗಳ ಬಾಡಿಗೆ ಕೊಡಕ್ಕೆ ದುಡ್ಡು ಹೊಂದಿಸೋದು ಹೇಗೆ ಅಂತ ಯೋಚಿಸಿ. ಮುಂದಿನ ತಿಂಗಳ ಖರ್ಚಿಗೂ ದುಡ್ಡಿಲ್ಲ ನಮ್ಮ ಹತ್ತಿರ...’ ಅಂತ ಭವಿಷ್ಯ ಕಾಲದಿಂದ ವರ್ತಮಾನಕ್ಕೆ ಕಣ್ಣೆಂಬ ಕ್ಯಾಮೆರಾ ತಿರುಗಿಸಿದರು. ಎಲ್ಲರ ಮನಸ್ಸೆಂಬ ಮನಸ್ಸೂ ‘ಹೌದಲ್ಲಾ’ ಅಂತ ಲೊಕೇಶನ್ ಶಿಫ್ಟ್‌ ಮಾಡಿತು.

ಫೋನಿನಲ್ಲಿ ಮಾತಾಡಿದ ನಿಸ್ಸಹಾಯಕ ಅಪ್ಪ ಸುಲೇಮಾನ್‌ಗೂ ತನ್ನ ಮನೆಯಲ್ಲಿ ಕಂಡ ಅವಿವೇಕಿ ದುರುಳ ಸುಲೇಮಾನ್‌ಗೂ ಅಂತರ ಎಷ್ಟೆಂದರೆ ಹೇಗೆ ಹೇಳೋದು? ಕಾವ್ಯಮಯವಾದ ಭಾಷೆಯಲ್ಲಿ ಹೇಳಿದರೆ ಅವನ ದುರುಳತನಕ್ಕೂ ಒಂದು ರೊಮಾಂಟಿಕ್ ಆಯಾಮ ದೊರಕಿ ‘ಅಯ್ಯೋ ಪಾಪ ಬಿಡ್ರೀ, ಪರಿಸ್ಥಿತಿ ಹೀಗಿರುವಾಗ ಅವನು ದುರುಳನಾಗದೆ ಇನ್ನೇನಾಗಲು ಸಾಧ್ಯ?’ ಅಂತ ಸಮರ್ಥಿಸಿಕೊಳ್ಳಬಹುದಾದ ಸಾಧ್ಯತೆಗಳಿರುವುದರಿಂದ ಅವನ ಪೂರ್ವಾಪರ ಪರಿಶೀಲನೆ ಬೇಡ.

‘ದುಡ್ಡು ಕೊಡ್ತೀನಮ್ಮ, ಶಹೀನ ಹತ್ತಿರವೂ ದುಡ್ಡಿದೆ’ ಅಂತ ಸುಲೇಮಾನ್ ಹೇಳಿದ್ದನಲ್ಲಾ? ಅದು ಒಂದು ರೀತಿಯ ಭರವಸೆಯಾಗಿ ಕಾಣಿಸಿತ್ತು ಅಂದರೆ ಸುಳ್ಳಲ್ಲ. ಇದ್ದ ನಾಲ್ವರಲ್ಲಿ ಯಾರೂ ಲಕ್ಷಾಧೀಶರಲ್ಲ ಅಥವಾ ಯಾರಿಗೂ ಮನೆಯವರಿಂದ ಹಣ ಬರುತ್ತಿರಲಿಲ್ಲ. ಇದ್ದುದರಲ್ಲಿ ಬಹಳ ದೊಡ್ಡ ಸಂಬಳ ಅಂತ ಬರುತ್ತಾ ಇದ್ದುದು ಚಿತ್ರಾಗೆ ಮಾತ್ರ.

ಆದರೆ ಅವಳು ಅದನ್ನು ಮೂವತ್ತೆಂಟು ಸೇವಿಂಗ್ಸ್ ಸ್ಕೀಮುಗಳಿಗೆ ಹಾಕುವ ವ್ಯವಸ್ಥೆ ಮಾಡಿಕೊಂಡಿರಲಾಗಿ ಕೈಗೆ ಸಿಗುತ್ತಾ ಇದ್ದುದು ಚಿಲ್ಲರೆ ಕಾಸು ಮಾತ್ರ. ಹೊಟ್ಟೆಗೆ ಬಟ್ಟೆಗೆ ಆಗುವಷ್ಟು ಮಿಕ್ಕಿದರೆ ಬಸ್ಸಿನಲ್ಲಿ ನೇತಾಡಿಕೊಂಡು ಹೋಗುವುದನ್ನು ಬಿಟ್ಟು ವಾರದಲ್ಲಿ ಒಂದೇ ಒಂದು ದಿನ ಆಟೊದಲ್ಲಿ ಹೋಗುವ ಲಕ್ಷುರಿ ಇರುತ್ತಿತ್ತು.

ಅಲ್ಲದೆ ಇತ್ತೀಚೆಗೆ ಅವರಣ್ಣ ಡ್ರಗ್ಸ್ ಸೇವಿಸಿ ಸಿಕ್ಕಾಕಿಕೊಂಡು ಬದುಕುವುದೇ ಕಷ್ಟವಾಗಿ ಬಾಂಬೆಯಲ್ಲೆಲ್ಲೋ ಆಸ್ಪತ್ರೆ ಸೇರಿ ನಂತರ ರಿಹ್ಯಾಬಿಲಿಟೇಷನ್ ಸೆಂಟರಿನಲ್ಲಿ ದಾಖಲಾಗಿ ಬದುಕನ್ನು ಮರಳಿ ಪಡೆಯುವ ಯತ್ನದಲ್ಲಿದ್ದ. ಆ ಪ್ರಸಂಗದಲ್ಲಿ ಚಿತ್ರಾಳ ಅಪ್ಪ ಅಮ್ಮ ಅವರಲ್ಲಿ ಹುಟ್ಟಿದ್ದ ಸಿಟ್ಟು, ಅಭದ್ರತಾ ಭಾವವನ್ನೆಲ್ಲಾ ಇವಳ ಕಡೆ ತಿರುಗಿಸಿದ್ದಕ್ಕೆ ಈ ಪರಿಸ್ಥಿತಿಯಿಂದ ತಪ್ಪಿಸಿಕೊಂಡರೆ ಸಾಕಪ್ಪಾ ಎನ್ನಿಸಿ ಇದ್ದಬದ್ದ ಖರ್ಚನ್ನೆಲ್ಲಾ ಕಡಿಮೆ ಮಾಡಿಕೊಂಡು ಎಲ್ಲಾ ಹಣವನ್ನೂ ಅವರಿಗೇ ವರ್ಗಾಯಿಸಿ ಸುಮ್ಮನಾಗಿದ್ದಳು. ಹಾಗಾಗಿ ಹೆಚ್ಚು ದುಡ್ಡು ಅವಳ ಬಳಿಯೂ ಇರಲಿಲ್ಲ.

ವಿಜಿಗೆ ಬರುತ್ತಾ ಇದ್ದುದೇ ಐದು ಸಾವಿರವೋ ಏನೋ. ಅದರಲ್ಲಿ ಅರ್ಧ ದುಡ್ಡು ಪೀಜಿಯ ಬಾಡಿಗೆ, ಒಂದು ಹೊತ್ತಿನ ಊಟಕ್ಕೇ ಹೋಗುತ್ತಿತ್ತು. ಇನ್ನೊಂದು ಹೊತ್ತಿನ ಊಟವೋ ತಿಂಡಿಯೋ ಆಗಿ ಕೈಗೆ ಮಿಗುತ್ತಿದ್ದುದು ಐನೂರು ರೂಪಾಯಿ ಮಾತ್ರ. ಇನ್ನು ಸೂಸನ್ ಅಂತೂ ಸೇವಿಂಗ್ಸು ಮಾಡಲು ಹೋಗಿ ಕಾಸು ಕಳೆದುಕೊಂಡ ಕಥೆಯಂತೂ ಯಾರಿಗೂ ಬ್ಯಾಡ.

ಸರಳಾಗೆ ಕ್ಲರ್ಕ್ ಸಂಬಳ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಬರೀ ಮಾನವೀಯತೆಯ ನೆಲೆಯ ಮೇಲೆ ಸಿಕ್ಕಾಪಟ್ಟೆ ಖರ್ಚು ಬಂದರೆ ಸಹಿಸಿಕೊಳ್ಳುವ ಚೈತನ್ಯ ಯಾರಲ್ಲಿ ಇತ್ತು? ಆದರೆ ಹಾಗಂತ ಶಹೀನಳನ್ನು ಹಾಗೇ ಬಿಟ್ಟುಬಿಡುವಷ್ಟು ಅಮಾನವೀಯರೂ ಅಲ್ಲ. ಎಲ್ಲರೂ ತಮ್ಮ ಕೈಲಾದಷ್ಟು ದುಡ್ಡು ಹಾಕಿ ಆಸ್ಪತ್ರೆ ಬಿಲ್ಲು ಕಟ್ಟಿ ಪರಿಸ್ಥಿತಿ ನಿಭಾಯಿಸಿದ್ದರು.
‘ಈಗ ಸುಲೇಮಾನ್ ದುಡ್ಡು ಕೊಡಲ್ಲ. ಏನ್ ಮಾಡೋದು ಮುಂದೆ?’ ಲೆಕ್ಕ ಮುಗಿಸುತ್ತಾ ಸರಳಾ ಕೇಳಿದರು. ಸೂಸನ್ ಎಂದಿನಂತೆ ತನ್ನ ಆಶಾವಾದಿತನದಲ್ಲಿ ‘ಅದ್ಯಾಕೆ ಕೊಡಲ್ಲ? ಕೊಡ್ತೀನಿ ಅಂತ ಹೇಳಿದ್ದನಲ್ವಾ?’ ಅಂತ ಕೇಳಿದಳು.

‘ಥತ್! ನೀನು ಸ್ವಲ್ಪ ಸುಮ್ಮನಿರಮ್ಮ. ನಿನಗೆ ವಿವರಣೆ ಕೊಡೋ ಬದಲು ಬ್ಯಾರೆ ಪ್ಲಾನ್ ಮಾಡೋದು ಒಳ್ಳೇದು’ ಎಂದು ಚಿತ್ರಾ ಕಿರಿಕಿರಿಯಾದಳು. ವಿಜಿ ಸೂಸಿಯ ಮಾತುಗಳಿಂದ ಪ್ರಭಾವಿತಳಾಗಿದ್ದಳೋ ಅಥವಾ ತನ್ನ ದುಡಿಮೆಯ ಕಾಸು ಅಷ್ಟು ಅಪ್ಯಾಯಮಾನವಾಗಿ ಕಂಡಿತ್ತೋ ತಿಳಿಯದು. ‘ಒಂದ್ ಸಾರಿ ಕೇಳೋಣ ಸರಳಕ್ಕಾ... ಕೊಟ್ರೂ ಕೊಡ್ತಾನೇನೋ...’ ಅಂತ ಮೆಲ್ಲಗೆ ಹೇಳಿದಳು.

ಸರಳಾ ವಿಜಿಯನ್ನು ನೋಡಿ ನಕ್ಕುಬಿಟ್ಟರು. ‘ಪೆದ್ದಿ ಕಣೇ ನೀನು. ಮಗಳನ್ನೇ ಚೆನ್ನಾಗಿ ನಡೆಸಿಕೊಳ್ಳದೋನು ಅಧೆಂಗೆ ನಮ್ ದುಡ್ಡು ಕೊಡ್ತಾನೆ? ಅದರ ಬದಲು ಸುಮ್ಮನೆ ಬೇರೆ ದಾರಿ ನೋಡಿಕೊಳ್ಳೋದು ಒಳ್ಳೇದು. ಊರಲ್ಲಿ ಅವನು ಮೋಸಗಾರ ಅಂತಲೇ ಹೆಸ್ರಿದೆ. ಅವನ ಹತ್ರ ದುಡ್ಡು ಕೊಡು ಅಂತ ಕೇಳೋದಕ್ಕಿಂತಾ ನಾವೇ ಅಡ್ಜಸ್ಟ್ ಮಾಡ್ಕೊಳೋದು ವಾಸಿ.’

‘ದುಡ್ಡು ಹೋಯ್ತು ಅಂತ್ಲೇನಾ?’ ಅಧೀರಳಾಗುತ್ತಾ ವಿಜಿ ಇನ್ನೊಮ್ಮೆ ಕೇಳಿದಳು. ‘ಹೋಯ್ತು ಅಂದ್ರೆ ಹೋಯ್ತು. ಆ ದುಡ್ಡು ಈ ಕೆಲಸಕ್ಕೇ ಉಪಯೋಗ ಆಗಬೇಕಂತ ಇದ್ದಿದ್ದರೆ ಅದನ್ನು ಯಾರ ಕೈಲಿ ತಪ್ಪಿಸಕ್ಕೆ ಆಗುತ್ತೆ?’ ಹೋದ ದುಡ್ಡಿಗೆ ಉತ್ತರವನ್ನು ಸರಳಾ ಆಧ್ಯಾತ್ಮದಲ್ಲಿ ಹುಡುಕುತ್ತಿದ್ದರು. ‘ಶಹೀನ ಬ್ಯಾಂಕ್ ಅಕೌಂಟ್ ಈ ಏರಿಯಾದಲ್ಲೇ ಇತ್ತಲ್ವಾ?’ ‘ಇದೆ. ಆದರೆ ಸೈನ್ ಮಾಡೋರು ಯಾರು?’ ವಿಜಿ ಪ್ರಶ್ನೆಗೆ ಸರಳಾ ಉತ್ತರ.

ಹೀಗೇ ಮಾತಿಗೆ ಮಾತು ಬೆಳೆದು ಉತ್ತರ ಕತ್ತಲೆಯಿಂದ ಬೆಳಕಿನತ್ತ ಹೊರಟಾಗ ಮತ್ತೆ ಮೊದಲಿನ ಆವರ್ತಕ್ಕೇ ಬಂದು ನಿಂತಿತ್ತು. ಸುಲೇಮಾನನನ್ನು ಯಾವ ಕಾರಣಕ್ಕೂ ದುಡ್ಡು ಕೇಳಬಾರದು.

‘ಯಾಕೆ ಕೇಳಬಾರದು ಅಂತ ನನಗೆ ಇನ್ನೂ ಕನ್ವಿನ್ಸ್ ಆಗ್ತಾ ಇಲ್ಲ’ ಸೂಸನ್ ಒತ್ತಿ ಹೇಳಿದಳು. ‘ಮೊದಲಿಗೆ ಅವನ ಹತ್ತಿರ ಮಾತಾಡೋಕೆ ನಮಗ್ಯಾರಿಗೂ ಮನಸ್ಸಿಲ್ಲ. ಫೋನಿನಲ್ಲಿ ಧಮಕಿ ಹಾಕಿದರೆ ಏನೂ ಉಪಯೋಗ ಇಲ್ಲ. ಅವನು ಕೇಳಿಸಿಕೊಂಡು ಸುಮ್ಮನಾಗುತ್ತಾನಷ್ಟೇ...’ ಸರಳಾ ಮಾತು ಇನ್ನೂ ಮುಗಿದಿರಲಿಲ್ಲ, ಆಗಲೇ ವಿಜಿಗೆ ಹೊಸ ಐಡಿಯಾ ಹೊಳೀತು.

‘ಇನ್‌ಸ್ಪೆಕ್ಟರ್ ಹೆಲ್ಪ್ ತಗೊಂಡ್ರೆ ಹೆಂಗಿರುತ್ತೆ?’ ಸರಳಾಗೆ ರುಮ್ಮನೆ ಕೋಪ ಬಂತು. ‘ನೀವೆಲ್ಲ ಏನಂದುಕೊಂಡಿದ್ದೀರೋ ಗೊತ್ತಿಲ್ಲ. ಬೇಕಾದ್ರೆ ಕೇಳ್ಕೊಳಿ. ಮಾಡೋ ಕೆಲಸ ಮಾಡೋದು ಬಿಟ್ಟು ಇನ್‌ಸ್ಪೆಕ್ಟರ್ ನಮ್ಮ ದುಡ್ಡು ಕೊಡಿಸ್ತಾ ಕೂತ್ಕೋತಾರಾ? ಈಗ ನಾವು ರಿಕ್ವೆಸ್ಟ್ ಮಾಡಿದೀವಿ ಅಂತ ಸುಲೇಮಾನನಿಗೆ ಸರಿಯಾಗಿ ಒಂದು ಮಾತು ಹೇಳಿದಾರೆ.

ನಾಳೆ ನಮ್ ದುಡ್ಡು ಕೊಡ್ಸಿ ಸಾರ್ ಅಂತ ಹೋಗಿ ನಿಂತ್ರೆ ಏನಾಗುತ್ತೆ ಹೇಳು? ಮೊದಲಿಗೆ ನಮ್ಮ ಬಗ್ಗೆ ಇರೋ ಒಂದು ಒಳ್ಳೆಯ ಭಾವನೆ ಹೋಗುತ್ತೆ. ಎರಡನೇದು ಸುಲೇಮಾನ್ ಇವರೆಲ್ಲಾ ದುಡ್ಡಿಗೆ ಅಂತ ನನ್ನ ಮಗಳನ್ನು ಹುಚ್ಚಿ ಮಾಡಿದಾರೆ ಅಂತ ನಮ್ಮ ಮೇಲೆ ಹೇಳಿದರೂ ಹೇಳಬಹುದು. ನಮ್ಮ ಮಾತು ಬಿಡು, ಇದೆಲ್ಲಾ ಆದ ಮೇಲೆ ಶಹೀನ ಇದ್ದೂ ಸತ್ತ ಹಾಗೆ... ಅವಳ ಬಗ್ಗೆ ಯಾರೂ ಕಾಳಜಿ ವಹಿಸಲ್ಲ. ನಾವು ಅಲ್ಲಿಗೆ ಹೋಗಿ ಏನೇನನ್ನ ಭದ್ರ ಮಾಡಿ ಬಂದೆವೋ ಅದೆಲ್ಲಾ ನಮ್ಮ ಮೇಲೇ ಕುಸಿದು ಬೀಳುತ್ತೆ... ಯೋಚನೆ ಮಾಡಿ, ನಾನಂತೂ ನನ್ನ ಪಾಲಿನ ದುಡ್ಡು ಕೇಳಲ್ಲ’ ಅಂತ ಒಂದೇ ಉಸಿರಿನಲ್ಲಿ ಹೇಳಿದರು.

ಸರಳಾ ಹಾಗೆ ಎಂದೂ ಮಾತಾಡಿರಲಿಲ್ಲ. ತಮ್ಮ ಜೀವನದ ಬಗ್ಗೆ ಹೇಳುವಾಗಲೂ ಇಷ್ಟು ಉದ್ವೇಗಕ್ಕೆ ಒಳಗಾಗಿರಲಿಲ್ಲ. ‘ಕಾಮ್ ಡೌನ್ ಪ್ಲೀಸ್ ಬರೀ ದುಡ್ಡಿನ ವಿಷಯಕ್ಕೆ ಯಾಕಿಷ್ಟು ತಲೆ ಕೆಡಿಸಿಕೊಳ್ತಿದೀರ ಸರಳಕ್ಕಾ?’ ಚಿತ್ರಾ ಅಚ್ಚರಿಯಿಂದ ಕೇಳಿದಳು.

‘ನಾನೂ ಅದನ್ನೇ ಹೇಳ್ತಿರೋದು. ಬರೀ ದುಡ್ಡಿನ ವಿಷಯಕ್ಕೆ ಯಾಕಿಷ್ಟು ಉಪಾಯಗಳನ್ನು ಹುಡುಕ್ತಿದೀರಾ? ನಾವು ಖರ್ಚು ಮಾಡಿದ್ದು ಯಾರಿಗೆ? ನಮ್ಮ ನಡುವೆ ಇದ್ದ ಒಬ್ಬಳು ಹುಡುಗಿಯ ಟ್ರೀಟ್‍ಮೆಂಟಿಗೆ... ಯಾವುದೋ ಮೋಸಕ್ಕೋ ಅಥವಾ ಮಜಾಕ್ಕೋ ಅಲ್ಲವಲ್ಲಾ? ಪ್ಲೀಸ್... ಒಂದು ಒಳ್ಳೆಯ ಕಾರಣಕ್ಕೆ ಉಪಯೋಗ ಆಗಿದೆ ಆ ದುಡ್ಡು. ಇಷ್ಟು ಸಿಂಪಲ್ ಆದ ವಿಷಯ ಯಾಕೆ ಅರ್ಥ ಆಗ್ತಾ ಇಲ್ಲ ನಿಮಗೆ?’ ಸರಳಾ ತಲೆ ಕೊಡವಿಕೊಳ್ಳುತ್ತಾ ಕೇಳಿದರು.


ಕ್ಯಾಂಡಲ್ಲಿನ ಬೆಳಕಿನಲ್ಲಿ ಸರಳಾ ಮೂಗು ಚೂಪಾಗಿ ಬೆಂಕಿ ಹತ್ತಿಕೊಂಡಂತೆ ಹೊಳೆಯುತ್ತಿತ್ತು. ಏರುತ್ತಿದ್ದ ಸಿಟ್ಟಿನಿಂದ ಬೆಳ್ಳನೆ ಉರಿಯ ಪುಟ್ಟ ತುಂಡೊಂದು ಅವರ ಮೂಗಿನ ಮೇಲೆ ಕೂತು ಆಗಾಗ ಆಕಾರ ಬದಲಾಯಿಸುತ್ತಿರುವಂತೆ ಕಾಣಿಸುತ್ತಿತ್ತು. ಸಖತ್ ಚಂದ ಕಾಣಿಸ್ತಾ ಇದ್ರು!

‘ಆಯ್ತು ಸರಳಕ್ಕಾ ನೀವ್ ಹೇಳಿದಂಗೇ ಆಗಲಿ. ಆದರೆ ಆ ಸುಲೇಮಾನ್‌ಗೆ ಲಾಭ ಆಗುತ್ತೆ ಅಂತ ಅಂದುಕೊಂಡ್ವಿ ನಾವು...’ ವಿಜಿ ನಿಧಾನವಾಗಿ ಹೇಳಿದಳು.
‘ವಿಜೂ... ನಾವು ಸಹಾಯ ಮಾಡಿರೋದು ಶಹೀನಾಗೆ... ಸುಲೇಮಾನ್ ಮೇಲೆ ಕತ್ತಿ ಮಸೀತಾ ಇದ್ದೀವಿ ಅಂದುಕೊಳ್ತಿದೀರಿ, ಅದು ತಪ್ಪು. ಈಗ ದುಡ್ಡು ಕೇಳಕ್ಕೆ ಹೋದ್ರೆ ಇಲ್ಲ ಸಲ್ಲದ್ದು ಮಾತಾಡ್ತಾನೆ ಅವನು. ಕೇಳಿಸಿಕೊಳ್ಳಕ್ಕೆ ಆಗುತ್ತಾ? ಈ ವಿಷಯಕ್ಕೆ ಅಂತ್ಲೇ ಕೋಲಾರಕ್ಕೆ ಮತ್ತೆ ಹೋಗಬೇಕು.

ನಮಗೆ ಯಾರ ಬೆಂಬಲ ಇದೆ ಅಲ್ಲಿ? ಸ್ವಲ್ಪ ಯೋಚಿಸಿ ನೋಡಿ, ನಾವು ಖರ್ಚು ಮಾಡಿರೋದು ನಿಜವೇ ಇರಬಹುದು. ಆದ್ರೆ ನಮ್ಮನ್ನ ನಂಬೋವ್ರು ಯಾರಿದಾರೆ ಅಲ್ಲಿ? ಶಹೀನಗೆ ಅವನು ಮಸೀದಿಲಿ ಧೂಪ ಹಾಕಿಸ್ತಿದ್ದಾಗಲೂ ವಿರೋಧಿಸದಷ್ಟು ಮುಗ್ಧ ಜನ ಅವರು. ನಾವು ಅಲ್ಲಿಗೆ ದುಡ್ಡು ಕೇಳಕ್ಕೆ ಹೋದರೆ ಹೊರಗೆ ಬರೋದು ಕಷ್ಟ ಆಗುತ್ತೆ...’

ಹೊರಗೆ ಧೋ ಅಂತ ಸುರಿಯುತ್ತಾ ಇದ್ದ ಮಳೆಯ ರಭಸ ಕಡಿಮೆಯಾಗುತ್ತಾ ಬಂದಿತ್ತು. ಮಳೆ ಕಡಿಮೆಯಾದ ಕೂಡಲೆ ಗಾಳಿ ಬೀಸಲು ಶುರುವಾಗಿ ಒಳಗೆ ಹಿತವಾದ ಚಳಿ ಆವರಿಸುತ್ತಿತ್ತು. ‘ಓಹ್! ಇದೆಲ್ಲಾ ಹೊಳೀಲೇ ಇಲ್ಲ ನಮಗೆ...’ ನಿಧಾನವಾಗಿ ವಿಜಿ ಹೇಳಿದಳು.

‘ಆಯಿತು ಬಿಡಿ ಸರಳಕ್ಕಾ, ದುಡ್ಡು ನಮ್ಮ ಹತ್ತಿರ ಇರಲೇ ಇಲ್ಲ ಅಂದುಕೊಳ್ಳೋಣ... ಅಲ್ಲಿಗೆ ಎಲ್ಲಾ ಸರಿಯಾಗುತ್ತೆ...’ ಎಂದು ವಿಜಿ ಪರಿಹಾರ ಮಾರ್ಗ ಸೂಚಿಸುತ್ತಿರುವಾಗ ಸೂಸನ್ ಥಟ್ಟಂತ ‘ಈ ತಿಂಗಳ ಬಾಡಿಗೆ ಹೇಗೆ ಕಟ್ಟೋದು? ಕಷ್ಟ ಆಗುತ್ತಲ್ವಾ? ಆಫೀಸಲ್ಲಿ ಈಗಲೇ ಅಡ್ವಾನ್ಸ್ ಕೊಟ್ಟ ದುಡ್ಡು ಮುರಿಯೋಕೆ ಶುರು ಮಾಡ್ತಾರೆ. ಸಂಬಳ ಕೂಡ ಪೂರ್ತಿ ಬರಲ್ಲ...’ ಎಂದು ಕೇಳಿದಳು.

‘ಅದ್ಯಾಕೆ ಕಷ್ಟ ಆಗುತ್ತೆ? ಓನರಿಗೆ ಒಂದೆರಡು ತಿಂಗಳು ಸ್ವಲ್ಪ ಕಡಿಮೆ ಕೊಡ್ತೀವಿ ಅಡ್ಜಸ್ಟ್ ಮಾಡ್ಕೊಳಿ ಅಂತ ಹೇಳಿದ್ರಾಯ್ತು... ಅವರಿಗೆ ಹೇಗೂ ವಿಷಯ ಗೊತ್ತಲ್ಲ? ನಾವು ಮಾಡಿದ ಕೆಲಸದಿಂದ ಅವರಿಗೂ ಹೆಲ್ಪ್ ಆಗಿದೆಯಲ್ಲ?’ ಅಂದರು ಸರಳಾ.


ಪೂರ್ತಿ ಮಳೆ ನಿಂತ ಹಾಗಿತ್ತು. ಸೋಮಾರಿ ಕಪ್ಪು ಎಮ್ಮೆ ಆಕಳಿಸುತ್ತಾ ಬಂದು ಧೊಪ್ ಅಂತ ಬಿದ್ದುಕೊಂಡಂತೆ ಕಾಣಿಸುತ್ತಿತ್ತು ಆಕಾಶ. ಚಲನೆಯೂ ಇಲ್ಲ, ಚಿತ್ರವೂ ಇಲ್ಲ. ಕೆಳಗೆ ಮರದ ಎಲೆಗಳು ಬೀದಿ ದೀಪದ ಬೆಳಕಿನಲ್ಲಿ ನಾಣ್ಯಗಳಂತೆ ಫಳ ಫಳ ಹೊಳೆಯುತ್ತಿದ್ದವು.

ಅರೆ! ಹೊರಗೆ ಕರೆಂಟಿದೆ. ಮನೆಯೊಳಗೆ ಏಕಿಲ್ಲ? ಅಂತ ನಾಲ್ವರೂ ಒಮ್ಮೆಲೆ ಯೋಚಿಸಿದರು ಅಂತ ಕಾಣಿಸುತ್ತೆ. ಓನರಮ್ಮನ ಮನೆಯಲ್ಲೂ ಯಾವ ದೀಪವೂ ಉರಿಯುತ್ತಿರಲಿಲ್ಲ. ಎಲ್ಲರೂ ಬೇಗ ಮಲಗಿದ ಹಾಗಿತ್ತು.


ಮಾರನೇ ದಿನ ಎಲ್ಲರೂ ಎದ್ದು ಆಫೀಸಿಗೆ ಹೋದರು. ಕರೆಂಟು ಇನ್ನೂ ಬಂದಿರಲಿಲ್ಲ. ಬಿಸಿ ನೀರಿಲ್ಲ. ತಿಂಡಿ ಕೂಡ ಸುಮಾರಾಗಿತ್ತು. ಓನರಮ್ಮ ಕಾಣಿಸದಿದ್ದುದು ವಿಚಿತ್ರವಾಗಿತ್ತು. ಹೀಗೇ ಎರಡು ದಿನ ಕಳೆದ ಮೇಲೆ ಮೂರನೇ ದಿನವೂ ಕರೆಂಟಿಲ್ಲದಾಗ ತಲೆ ಕೆಟ್ಟು ಬೇರೆ ಹುಡುಗಿಯರೊಡಗೂಡಿ ಓನರಮ್ಮನ ಮನೆಗೆ ಲಗ್ಗೆ ಹಾಕಿದರು. ಓನರಮ್ಮ ಇರಲಿಲ್ಲ. ಅವರ ಮಗಳು ಬಾಗಿಲು ತೆರೆದು ಬಹಳ ಅಹಂಕಾರದಿಂದ ಮಾತನಾಡಿದಳು.

ಅವಳ ಮಾತಿನ ತಾತ್ಪರ್ಯ: ‘ಅಮ್ಮ ಮನೇಲಿಲ್ಲ. ಯಾವಾಗ ಬರ್ತಾರೋ ಗೊತ್ತಿಲ್ಲ. ಪೀಜಿ ಕ್ಲೋಸ್ ಮಾಡಬೇಕು ಅಂತ ಇದೀವಿ. ಆದ್ದರಿಂದ ಎಲ್ಲರೂ ಈ ತಿಂಗಳ ಬಾಡಿಗೆ ಕೊಟ್ಟು ಮನೆ ಖಾಲಿ ಮಾಡಿ’. ದುಸರಾ ಮಾತಿಲ್ಲ ಕತೆಯಿಲ್ಲ.

ತೀರಾ ಕ್ರಾಸ್ ಕ್ವೆಷ್ಚನ್ ಮಾಡಿ ಕೇಳಿದ್ದಕ್ಕೆ ಮತ್ತೆ ಗಿಣಿಯಂತೆ ಉಲಿಯಿತು ಆ ಬಾಲೆ. ‘ಉಳಿದವರು ಬೇಕಾದರೆ ಇರಬಹುದು. ವಿಜಿ, ಸರ್ಲಾ (ಬೆಂಗಳೂರು ಹುಡುಗಿಯ ಇಂಗ್ಲಿಷ್ ಮಮತೆಯ ಬಾಯಲ್ಲಿ ‘ಸರಳಾ’ ’ಸರ್ಲಾ’ ಆಗಿದ್ದರು) ಸೂಸಿ ಆಂಡ್ ಚಿತ್ರಾ ಖಾಲಿ ಮಾಡಲೇಬೇಕು. ಅವರಿರೋವರೆಗೂ ಕರೆಂಟು ರಿಪೇರಿ ಮಾಡಿಸಲ್ಲ.’

ಇವರು ನಾಲ್ಕು ಜನರನ್ನು ಬಿಟ್ಟರೆ ಇನ್ನೂ ಇಬ್ಬರು ಹುಡುಗಿಯರು ಪೀಜಿಯಲ್ಲಿ ಇದ್ದರು. ಮತ್ತೆ ಮೂರು ಜನ ಬರುವವರಿದ್ದಾರೆ ಅಂತ ಓನರಮ್ಮ ಮಾತಾಡಿದ್ದು ಸೂಸನ್ ಕೇಳಿಸಿಕೊಂಡಿದ್ದಳು. ಅವರು ಬಂದರೆ ಜಾಗ ಸಾಕಾಗಲ್ಲವಲ್ಲ ಅಂತ ಯೋಚಿಸುತ್ತಾ, ಯಾರಿಗೆ ಏನಾದರೆ ತನಗೇನು? ತನ್ನ ಜಾಗ ತನಗಿದ್ದರೆ ಸಾಕು ಎಂದುಕೊಂಡಿದ್ದಳು.
ಆದರೆ ಹೀಗೆ ತಮ್ಮೆಲ್ಲರ ಜಾಗ ಖಾಲಿಯಾಗುವುದಕ್ಕೆ ಮುನ್ನವೇ ಯಾರೋ ಬಂದು ಕೂರುತ್ತಾರೆ ಅಂತ ಯಾರೂ ಯೋಚಿಸಿರಲಿಲ್ಲ ಮತ್ತು ಹಾಗೆ ಮಾಡುವ ವಿಚಾರ ತನ್ನ ಮನಸ್ಸಿನಲ್ಲಿದೆ ಎನ್ನುವುದನ್ನು ಓನರ್ ಅಪ್ಪಿ ತಪ್ಪಿ ಕೂಡ ತೋರಿಸಿಕೊಂಡಿರಲಿಲ್ಲ.


ಒಬ್ಬ ಚಾಣಾಕ್ಷ ಬ್ಯಾಟ್ಸ್‌ಮನ್ ಇಂದ ಮಾತ್ರ ಸಾಧ್ಯವಿರುವ ಈ ಸ್ಟ್ರೋಕ್ ಅನ್ನು ಓನರಮ್ಮ ಬಹಳ ಚೆನ್ನಾಗಿ ಆಡಿದ್ದಳು. ತೂರಿ ಬಂದ ಬಾಲಿಗೆ ಬರೀ ಬ್ಯಾಟನ್ನು ಆ್ಯಂಗಲ್ಲಿನಲ್ಲಿ ನಿಲ್ಲಿಸಿ ಬಾಲಿನ ಸ್ಪೀಡಿನಲ್ಲೇ ಅದು ಬೌಂಡರಿಯಿಂದ ಆಚೆ ಹೋಗುವ ಹಾಗೆ ಮಾಡಿದ್ದಳು. ಬದುಕು ಜಟಕಾ ಬಂಡಿ... ವಿಧಿಯದರ ಸಾಹೇಬ...ಕುದುರೆ ನೀ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT