ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಬಲ ಪ್ರದರ್ಶನ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಆರ್ಡರ್ಲಿಗಳ ದುರ್ಬಳಕೆ ಹಾಗೂ ಕಾನ್‌ಸ್ಟೇಬಲ್‌ಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಕುರಿತು ನಾನು ಬರೆಯಲು ಪ್ರಾರಂಭಿಸಿದಾಗಿನಿಂದ ಅನೇಕ ಪೊಲೀಸರೇ ನನಗೆ ಫೋನ್ ಮಾಡಿದ್ದಾರೆ.

ಒಬ್ಬರಂತೂ `ನೀವು ಐದಾರು ಆರ್ಡರ್ಲಿಗಳನ್ನು ಇಟ್ಟುಕೊಂಡಿರುತ್ತಾರೆ ಎಂದಿದ್ದೀರಿ.ಆದರೆ, ಹದಿಮೂರು ಹದಿನೈದು ಆರ್ಡರ್ಲಿಗಳನ್ನು ಇಟ್ಟುಕೊಂಡಿರುವವರಿದ್ದಾರೆ~ ಎಂದು ತಾವು ಕಂಡಿದ್ದನ್ನು ನನ್ನೊಂದಿಗೆ ಹಂಚಿಕೊಂಡರು.

ಇನ್ನೊಬ್ಬರು ಇಲಾಖೆ ವಾಹನಗಳ ದುರ್ಬಳಕೆಗೆ ಕಡಿವಾಣವೇ ಇಲ್ಲವೇ ಎಂಬ ಪ್ರಶ್ನೆ ಮುಂದಿಟ್ಟರು. ನಿಜ, ಯಾವ ಸರ್ಕಾರವೂ ಇಲಾಖೆಯ ವಾಹನಗಳ ದುರ್ಬಳಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿಲ್ಲ.

ನನ್ನ ಅನುಭವದ ಪ್ರಕಾರ ರೈತ ಚಳವಳಿ ತೀವ್ರವಾಗಿದ್ದಾಗ ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಸರ್ಕಾರಿ ಅಧಿಕಾರಿಗಳ ವಾಹನ ದುರ್ಬಳಕೆ ಕಡಿಮೆ ಯಾಗಿತ್ತು. ಪೊಲೀಸ್, ಕೃಷಿ, ಕಂದಾಯ, ನೀರಾವರಿ ಇಲಾಖೆಯ ಅಧಿಕಾರಿಗಳು ರೈತರ ಅನುಮತಿ ಇಲ್ಲದೆ ಹಳ್ಳಿಗಳಿಗೆ ಭೇಟಿ ನೀಡುವುದೇ ಆಗ ಕಷ್ಟವಿತ್ತು.
 
ನಂಜುಂಡಸ್ವಾಮಿ, ಕಡಿದಾಳ್ ಶಾಮಣ್ಣ ಮೊದಲಾದವರು ಚಳವಳಿಯಲ್ಲಿ ಸಕ್ರಿಯವಾಗಿದ್ದ ಕಾಲವದು. ಆಗ ಆ ಚಳವಳಿಕಾರರು ಒಂದು ಕಣ್ಣಿಟ್ಟಿರುತ್ತಾರೆ ಎಂದು ಹೆದರಿ ಹಲವು ಇಲಾಖೆಗಳ ಅಧಿಕಾರಿಗಳು ತಮ್ಮ ವಾಹನಗಳನ್ನು ಖಾಸಗಿ ಕೆಲಸಗಳಿಗೆ ಬಳಸುತ್ತಿರಲಿಲ್ಲ.
 
ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಅಧಿಕಾರಿಗಳ ಪತ್ನಿಯರನ್ನು, ಮಕ್ಕಳನ್ನು ತಮ್ಮಿಷ್ಟದ ಕ್ಲಬ್ಬುಗಳಿಗೆ ತಲುಪಿಸಲು ಕೂಡ ಇಲಾಖೆಯ ವಾಹನಗಳು ಬಳಕೆಯಾಗುತ್ತಿರುವ ಉದಾಹರಣೆಗಳಿವೆ.

ಅವಮಾನದ ಪರಿಧಿಯು ಪ್ರಸ್ತಾಪಿಸಿದಷ್ಟೂ ದೊಡ್ಡದಾಗುತ್ತಾ ಹೋಗುತ್ತದೆ. ಮೊನ್ನೆ ಎಎಸ್‌ಐ ಒಬ್ಬರು ಫೋನ್ ಮಾಡಿ ತಮ್ಮ ಅಳಲು ತೋಡಿ ಕೊಂಡರು. ಅವರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯರಾದ ಅಧಿಕಾರಿ ಎಲ್ಲರೆದುರು ತಮ್ಮನ್ನು ಅಗೌರವದಿಂದ ಮಾತನಾಡಿ ಸುವುದನ್ನು ಕೇಳಿಕೇಳಿ ಅವರು ರೋಸಿಹೋಗಿದ್ದರು.

`ನನ್ನ ಮೊಮ್ಮಗನ ವಯಸ್ಸಿನ ಅಧಿಕಾರಿಗಳು ಎಲ್ಲರ ಎದುರು ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಆಗುವ ಅವಮಾನ ಅಷ್ಟಿಷ್ಟಲ್ಲ~ ಎಂದು ಇನ್ನೊಬ್ಬರು ಅಲವತ್ತುಕೊಂಡರು. ಯಾವುದೋ ಮೆರವಣಿಗೆ ನಡೆಯುವ ಕಾರಣ ಟ್ರಾಫಿಕ್ ಜಾಮ್ ಆಗುತ್ತದೆ ಎಂದಿಟ್ಟುಕೊಳ್ಳೋಣ.

ಆಗ ವೈರ್‌ಲೆಸ್ ಮೂಲಕ ಟ್ರಾಫಿಕ್ ಕಾನ್‌ಸ್ಟೇಬಲ್ ಅಧಿಕಾರಿಗೆ ವಸ್ತುಸ್ಥಿತಿಯನ್ನು ತಿಳಿಸುವುದು ರೂಢಿ. `ಆದಷ್ಟು ಸಂಭಾಳಿಸುತ್ತಿರಿ. ನಾವೆಲ್ಲಾ ಹೊರಟು ಬರುತ್ತೇವೆ. ಪರಿಸ್ಥಿತಿಯನ್ನು ಕಂಟ್ರೋಲ್ ಮಾಡೋಣ~ ಎಂದು ಅಧಿಕಾರಿ ಹೇಳಿದರೆ, ಅದು ಸರಿಯಾದ ನಡೆವಳಿಕೆ.

ಕೆಲವು ಅಧಿಕಾರಿಗಳು ಹಾಗೆ ಮಾಡುವುದಿಲ್ಲ. ಅವಾಚ್ಯ ಶಬ್ದಗಳಿಂದ ಟ್ರಾಫಿಕ್ ಕಾನ್‌ಸ್ಟೇಬಲ್‌ಗೋ ಹೆಡ್ ಕಾನ್‌ಸ್ಟೇಬಲ್‌ಗೋ ಬಯ್ಯುತ್ತಾರೆ. ಅವರ ಆ ಬಯ್ಗುಳದ ಮಾತುಗಳು ಆ ಇಡೀ ವಿಭಾಗದ ಸಮಸ್ತ ವೈರ್‌ಲೆಸ್‌ಗಳಲ್ಲಿ ಅನುರಣಿಸುತ್ತವೆ.

ಏನಿಲ್ಲವೆಂದರೂ ಐನೂರರಿಂದ ಆರುನೂರು ಜನ ಸಿಬ್ಬಂದಿ ಅಧಿಕಾರಿ ಯಾವ ವಿಭಾಗದ ಯಾರನ್ನು ಯಾವ್ಯಾವ ರೀತಿ ಬಯ್ದರು ಎಂಬುದನ್ನು ಆಲಿಸುತ್ತಾರೆ. ಅವರಲ್ಲಿ ಅನೇಕರು ಮರುದಿನ ಆ `ಬಡಪಾಯಿ~ಯನ್ನು ಗೇಲಿ ಮಾಡುತ್ತಾರೆ.
 
`ಅದೇನಯ್ಯಾ ನಾಯಿ ಅನ್ನಿಸಿಕೊಂಡೆ, ಕತ್ತೆ ಅನ್ನಿಸಿಕೊಂಡೆ, ದನ ಕಾಯೋಕೆ ಲಾಯಕ್ಕು ಎಂದೂ ಬಯ್ದರಲ್ಲ~ ಎಂದೆಲ್ಲಾ ಸಹೋದ್ಯೋಗಿಗಳು ಮೂದಲಿ ಸಿದಾಗ ಕಾನ್‌ಸ್ಟೇಬಲ್‌ಗಳು ಇನ್ನಷ್ಟು ಕುಗ್ಗಿ ಹೋಗುತ್ತಾರೆ.

ಕಾನ್‌ಸ್ಟೇಬಲ್‌ಗಳಿಗೆ ರಕ್ತದೊತ್ತಡ, ಮಧುಮೇಹ ಮೊದಲಾದ ಆರೋಗ್ಯದ ಸಮಸ್ಯೆಗಳು ಉಲ್ಬಣಿಸುವು ದರಲ್ಲಿ ಅಧಿಕಾರಿಗಳ ಅತಿ ನಿಂದನೆಯ ಪಾಲೂ ಇದೆ. ಇಂಥ ಧೋರಣೆಯನ್ನು ಪ್ರತಿಭಟಿಸಿದ ಕಾನ್‌ಸ್ಟೇಬಲ್‌ಗಳೂ ಉಂಟು. ಕೆಲವರು ತಮ್ಮ ಪ್ರತಿಭಟನೆಗೆ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಕೆಲಸವನ್ನೇ ಬಿಟ್ಟಿರುವ ವಿರಳವಾದ ಉದಾಹರಣೆಗಳಿವೆ.
 
ಒಗ್ಗಿಕೊಂಡು, ಕಷ್ಟಗಳನ್ನೇ ನುಂಗಿಕೊಂಡು ಕೆಲಸ ಮಾಡುವವರ ನಡುವೆ ಪ್ರತಿಭಟಿಸುವವರು ಎದ್ದು ಕಾಣುವುದೇ ಇಲ್ಲ ಅಥವಾ ಅವರ ಪ್ರತಿಭಟನೆಯನ್ನೇ ಉದ್ಧಟತನ ಎಂದು ಭಾವಿಸುವ ಪ್ರಸಂಗಗಳು ಸೃಷ್ಟಿಯಾಗುತ್ತವೆ.

* * *
ದೆಹಲಿಯಲ್ಲಿ ಇತ್ತೀಚೆಗೆ ಬಾಬಾ ರಾಮ್‌ದೇವ್ ನಿರಶನ ಕೂತಾಗ ಆದ ಪೊಲೀಸ್ ವೈಫಲ್ಯ ಕಣ್ಣೆದುರಲ್ಲಿದೆ. ಅಣ್ಣಾ ಹಜಾರೆಯವರಿಗೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ನಿರಾಕರಿಸಿದ್ದೂ ಸರಿಯಲ್ಲ. ಅದು ದುಡುಕಿನ ಕ್ರಮವಷ್ಟೆ. ಶಾಂತಿಯುತ ಪ್ರತಿಭಟನೆಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ.
 
ಒಂದು ವೇಳೆ ಪ್ರತಿಭಟನೆ ಪ್ರಕೋಪಕ್ಕೆ ತಲುಪಿ, ಗಲಭೆ ಏನಾದರೂ ಸಂಭವಿಸಿದರಲ್ಲಿ ಅದಕ್ಕೆ ಸಂಘಟನಕಾರರೇ ಹೊಣೆಯಾಗುತ್ತಾರೆ. ಅನುಮತಿ ಕೊಡದೆ ಆಮೇಲೆ ಮುಖಭಂಗ ಅನುಭವಿಸುವುದಕ್ಕಿಂತ ಸೂಕ್ತ ಭದ್ರತೆಯೊಂದಿಗೆ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುವುದೇ ಸರಿಯಾದ ತೀರ್ಮಾನ.

ಎಷ್ಟೋ ಸಭೆ-ಸಮಾರಂಭಗಳಿಗೆ ಅನುಮತಿ ನೀಡಿ, ನಿರೀಕ್ಷೆಗಿಂತ ಹೆಚ್ಚು ಜನ ಜಮಾಯಿಸಿದಾಗ ಉದ್ಭವವಾಗುವ ಸವಾಲನ್ನು ಪೊಲೀಸರು ಎದುರಿಸಿರುವ ಹಲವಾರು ಉದಾಹರಣೆಗಳಿವೆ. ಹೀಗಿರುವಾಗ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ಕೊಡದೆ, ಆಮೇಲೆ ಮುಖಭಂಗ ಅನುಭವಿಸಿದ್ದು ಸರ್ಕಾರದ ದುಡುಕಿನ ನಿರ್ಧಾರದ ಫಲ.

ಹಿಂದೆ ಮರಿಸ್ವಾಮಿಯವರು ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದಾಗ ಅಮೆರಿಕದ ಬೆನ್ನಿಹಿನ್ ಎಂಬ ವಿವಾದಾತ್ಮಕ ಮತಪ್ರಚಾರಕರು ಬಂದಿದ್ದರು. ಜಕ್ಕೂರು ವಿಮಾನ ನಿಲ್ದಾಣದಲ್ಲಿ ಅವರು ಕಾರ್ಯಕ್ರಮ ನಡೆಸಲು ಸರ್ಕಾರ ಅನುಮತಿ ಕೊಟ್ಟಿತು.

ಬೆನ್ನಿಹಿನ್ ಕಾರ್ಯಕ್ರಮವು ಮತಾಂತರಕ್ಕೆ ಕುಮ್ಮಕ್ಕು ಕೊಡುತ್ತದೆಂದು ಬಜರಂಗದಳ, ಹಿಂದೂ ಮಹಾ ಪರಿಷತ್, ಭಾರತೀಯ ಜನತಾ ಪಾರ್ಟಿ ಸೇರಿದಂತೆ ಕೆಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು.

ಅನುಮತಿ ನೀಡಿದ್ದ ಕಾರಣ ಸರ್ಕಾರವು ಅದನ್ನು ಹಿಂದಕ್ಕೆ ಪಡೆಯುವಂತಿರಲಿಲ್ಲ. ಹಾಗಾಗಿ ನನ್ನ ಸೇವಾವಧಿ ಯಲ್ಲೇ ನಾನು ಕಂಡರಿಯದ ರೀತಿಯಲ್ಲಿ ಬಂದೋ ಬಸ್ತ್ ಮಾಡಲಾಯಿತು. ಧಾರ್ಮಿಕ ಆಚರಣೆಗೆಂದು ಅನುಮತಿ ಪಡೆದಿದ್ದ ಕಾರಣ ಅದು ಸಂವಿಧಾನಾತ್ಮಕ ಹಕ್ಕಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಸಾವಿರಾರು ಪೊಲೀಸರನ್ನು ಸಂಘಟಿಸಿದರು. ಬೆನ್ನಿಹಿನ್ ಸ್ಪರ್ಶದಿಂದಲೇ ರೋಗ ಗುಣಪಡಿಸುತ್ತಾರೆ ಎಂದು ನಂಬಿ ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಬಂದರು.
 
ಕೆಲವು ಸಣ್ಣಪುಟ್ಟ ತಳ್ಳಾಟ ಹೊರತು ಪಡಿಸಿದರೆ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಯಾಕೆಂದರೆ, ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರಿತುಕೊಂಡು ಅಗತ್ಯವಿದ್ದಷ್ಟು ಪೊಲೀಸ್ ಪಡೆಗಳನ್ನು ಅಲ್ಲಿ ನಿಯೋಜಿಸಲಾಗಿತ್ತು.

ಈ ಘಟನೆ ನಡೆದನಂತರ ವಿಶ್ವ ಹಿಂದೂ ಪರಿಷತ್‌ನ ಪ್ರವೀಣ್‌ಕುಮಾರ್ ತೊಗಾಡಿಯಾ ಭಾಷಣವು ನಿಗದಿಯಾಯಿತು. ಅಲಸೂರಿನ ಆರ್‌ಬಿಎನ್‌ಎಂಎಸ್ ಕಾಲೇಜಿನ ಮೈದಾನದಲ್ಲಿ ಭಾಷಣ ನಡೆಯುವುದೆಂದು ತೀರ್ಮಾನವಾಯಿತು. ಸಂಘಟಕರು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.
 
ಅಧಿಕಾರರೂಢ ಪಕ್ಷದ ಭಟ್ಟಂಗಿಗಳಂತಿದ್ದ ಕೆಲವು ಅಧಿಕಾರಿಗಳು ತೊಗಾಡಿಯಾ ಪ್ರಚೋದನಕಾರಿ ಭಾಷಣ ಮಾಡುತ್ತಾ ರಾದ್ದರಿಂದ ಅನುಮತಿ ಕೊಡಬೇಡಿ ಎಂದು ಪೊಲೀಸ್ ಕಮಿಷನರ್‌ಗೆ ಹೇಳಿದರು. ಅಷ್ಟೇ ಅಲ್ಲದೆ, ತೊಗಾಡಿಯಾ ಬಂದಾಕ್ಷಣ ಅವರನ್ನು ವಿಮಾನ ನಿಲ್ದಾಣದಲ್ಲೇ ದಸ್ತಗಿರಿ ಮಾಡಿ ಎಂದೂ ಸೂಚಿಸಿದರು.

ಅಧಿಕಾರಸ್ಥರಿಗೆ ಸಲಾಮು ಹೊಡೆಯುವ ಜಾಯಮಾನದ ಕಮಿಷನರ್ ಆಗಿದ್ದರೆ ಆ ಸೂಚನೆಯನ್ನೇ ಆದೇಶವೆಂಬಂತೆ ಪಾಲಿಸಿಬಿಡುತ್ತಿದ್ದರು. ಕಮಿಷನರ್ ಮರಿಸ್ವಾಮಿ ಆ ಪೈಕಿ ಅಲ್ಲ. ಅವರು ತೊಗಾಡಿಯಾ ಭೇಟಿಯ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಆ ಚರ್ಚೆಯಲ್ಲಿ ನಾನೂ ಪಾಲ್ಗೊಂಡಿದ್ದೆ.

ಕಾರ್ಯಕ್ರಮ ನಡೆಸಲು ಅನುಮತಿ ಕೊಡದಿದ್ದರೆ ಗಲಾಟೆಯಾಗುವ ಸಂಭವವಿತ್ತು. ತೊಗಾಡಿಯಾ ಅವರನ್ನು ಬಂಧಿಸಿದರೂ ಗಲಭೆಕೋರರು ಬೀದಿಗಿಳಿಯುತ್ತಿದ್ದರು. ಹೀಗಾಗಿ ಕಾರ್ಯಕ್ರಮಕ್ಕೆ ಅನುಮತಿ ಕೊಡದಿದ್ದರೆ ತಪ್ಪಾಗುತ್ತದೆ ಎಂಬ ತೀರ್ಮಾನಕ್ಕೆ ಮರಿಸ್ವಾಮಿಯವರು ಬಂದರು.

ಭಾಷಣದಲ್ಲಿ ಯಾವುದೇ ಪ್ರಚೋದನಕಾರಿ ಅಂಶ ಇರಕೂಡದು ಎಂಬ ಷರತ್ತಿನ ಮೇಲೆ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟರು. ಕಾರ್ಯಕ್ರಮ ನಿಗದಿಯಾದ ಸ್ಥಳದಲ್ಲಿ ಕೋಮು ಪ್ರಕ್ಷುಬ್ಧ ಪ್ರದೇಶವಿತ್ತು.

ಕೆಳ ಮಧ್ಯಮವರ್ಗದ ಜನರೇ ಹೆಚ್ಚಾಗಿದ್ದರು. ಭಾಷೆ ವಿಷಯದಲ್ಲಿ ಅತಿ ಸೂಕ್ಷ್ಮ ಪ್ರದೇಶ. ಮರಿಸ್ವಾಮಿಯವರು ಇದನ್ನು ಅರಿತು ಪೊಲೀಸ್ ಬಲ ಪ್ರದರ್ಶನ ಮಾಡಲು ನಿರ್ಧರಿಸಿದರು.

ಕಾಡುಗೊಂಡನಹಳ್ಳಿಯಿಂದ ಅಲಸೂರುವರೆಗೆ, ಅಲಸೂರಿನಿಂದ ಸಿಟಿ ಮಾರ್ಕೆಟ್‌ವರೆಗೆ, ಸಿಟಿ ಮಾರ್ಕೆಟ್‌ನಿಂದ ಜೆ.ಸಿ.ನಗರದವರೆಗಿನ ಪ್ರದೇಶಗಳನ್ನು ಗುರುತಿಸಿ ದೊಡ್ಡ ಪೊಲೀಸ್ ಬಲ ಪ್ರದರ್ಶನ ಮಾಡಿದರು.
 
ಇದನ್ನು `ರೂಟ್ ಮಾರ್ಚ್~ ಅಥವಾ `ಫ್ಲಾಗ್ ಮಾರ್ಚ್~ ಎಂದು ಕರೆಯುತ್ತೇವೆ. ಪಥ ಸಂಚಲನ ನಡೆಸಲು 20 ಸಾವಿರ ಪೊಲೀಸರನ್ನು ಗುರುತಿಸಿದರು. ಕೋರ್ಟ್- ಸಮನ್ಸ್ ಡ್ಯೂಟಿಯಲ್ಲಿದ್ದವರು ಹಾಗೂ ಆರ್ಡರ್ಲಿಗಳನ್ನು ಕೂಡ ಕರೆಸಿದರು.
 
ಕೆಲವು ಸಿಬ್ಬಂದಿ ಸಮವಸ್ತ್ರ ಧರಿಸದೇ ಕೆಲಸ ಮಾಡುವುದರಲ್ಲೇ ನಿಸ್ಸೀಮರಿರುತ್ತಾರೆ. ಅಂಥವರೂ ಸಮವಸ್ತ್ರ ತೊಡುವ ಅನಿವಾರ್ಯತೆ ಎದುರಾಯಿತು. ಅವರು `ಫ್ಯಾನ್ಸಿ ಡ್ರೆಸ್ ಪೊಲೀಸರಂತೆ~ ಕಾಣುತ್ತಿದ್ದರು.

ಕಾಡುಗೊಂಡನಹಳ್ಳಿ, ಅಲಸೂರು, ಜೆ.ಸಿ.ನಗರ ಹಾಗೂ ಸಿಟಿ ಮಾರ್ಕೆಟ್‌ನಿಂದ ಪಥಸಂಚಲನ ನಡೆಯಿತು. ಅಶ್ವಾರೂಢ ತಂಡಗಳು, ಬ್ಯಾಂಡ್‌ಸೆಟ್ ಎಲ್ಲವೂ ಇದ್ದವು. ಬೆಂಗಳೂರು ನಗರದ ರಿಸರ್ವ್ ಪಡೆ ಕೂಡ ಸೇರಿತ್ತು. ಎಲ್ಲಾ ತಂಡಗಳು ಶಿಸ್ತುಬದ್ಧವಾಗಿ ಪಥಸಂಚಲನ ನಡೆಸುತ್ತಾ ಶಿವಾಜಿನಗರದ ಮೈದಾನಕ್ಕೆ ಏಕಕಾಲಕ್ಕೆ ಬಂದವು.
 
ಅಲಸೂರು, ಶಿವಾಜಿನಗರದ ಸೂಕ್ಷ್ಮ ಪ್ರದೇಶಗಳ ಜನ ಇಷ್ಟೊಂದು ಪೊಲೀಸರನ್ನು ಒಂದೇ ಕಡೆ ನೋಡಿ ಚಕಿತಗೊಂಡರು. `ಇವರೆಲ್ಲಾ ಯಾಕೆ ಒಂದೆಡೆ ಸೇರುತ್ತಿದ್ದಾರೆ?~ ಎಂದು ಮಾತನಾಡಿಕೊಂಡರು. ದುಷ್ಕರ್ಮಿ ಗಳಿಗೂ ಪೊಲೀಸರ ಬಲದ ಪರಿಚಯವಾಯಿತು.

ಕಾರ್ಯಕ್ರಮ ನಡೆಯುವ ದಿನ ಟ್ರಾಫಿಕ್ ವ್ಯವಸ್ಥೆಯನ್ನೂ ಸಮರ್ಪಕವಾಗಿ ಮಾಡಲಾಯಿತು. ಆದರೆ, ಮೈಕ್ ಹಾಕಲು ಅನುಮತಿ ಕೊಟ್ಟಿದ್ದರು. ಶಿವಾಜಿನಗರ ಸರ್ಕಲ್‌ವರೆಗೆ ಮೈಕ್ ಕಟ್ಟಿದ್ದರು.

ಅಂದರೆ, ಸುಮಾರು ಎರಡು ಕಿ.ಮೀ. ದೂರದವರೆಗೆ ತೊಗಾಡಿಯಾ ಭಾಷಣ ಕೇಳಿಸಬೇಕೆಂಬುದು ಸಂಘಟಕರ ಉದ್ದೇಶ ವಾಗಿತ್ತು. ಅಷ್ಟು ದೂರಕ್ಕೆ ಮೈಕ್ ಹಾಕಲು ಬಿಟ್ಟಿದ್ದು ಗುಪ್ತಚರ ಇಲಾಖೆಯ ವೈಫಲ್ಯ. 

ಕಮಿಷನರ್ ಮರಿಸ್ವಾಮಿ, ಅಡಿಷನಲ್ ಕಮಿಷನರ್ ಚಂದ್ರಶೇಖರ್, ಜಂಟಿ ಆಯುಕ್ತ ಅಲೋಕ್‌ಮೋಹನ್ ಯೋಜನಾಬದ್ಧ ರೀತಿಯಲ್ಲಿ ತಂಡಗಳನ್ನು ನಿಯೋಜಿಸಿದ್ದರು.

ಶಿವಾಜಿ ನಗರದಲ್ಲಿ ಎಲ್ಲಿ ಮೈಕ್ ಇತ್ತೋ ಅಲ್ಲೇ ಒಂದು ಪಡೆ ನಿಯೋಜಿತವಾಗಿತ್ತು.
ತೊಗಾಡಿಯಾ ಭಾಷಣ ಕೇಳಲು ಆ ಚಿಕ್ಕ ಮೈದಾನ ಹಾಗೂ ಅದರ ಸುತ್ತಮುತ್ತ ಸುಮಾರು 40 ಸಾವಿರ ಜನ ಜಮಾಯಿಸಿದ್ದರು. ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಯಾವುದೇ ರೀತಿಯ ಗಲಭೆ ಸಂಭವಿಸಲಿಲ್ಲ.

ಪೊಲೀಸ್ ವ್ಯವಸ್ಥೆ ಸರಿಯಾಗಿದ್ದಲ್ಲಿ ದೊಡ್ಡ ಪ್ರತಿಭಟನೆ, ಸಮಾರಂಭ, ಕಾರ್ಯಕ್ರಮಗಳನ್ನೂ ಹೇಗೆ ನಿಭಾಯಿಸ ಬಹುದು ಎಂಬುದಕ್ಕೆ ಈ ಎರಡು ಘಟನೆಗಳೇ ಉದಾಹರಣೆ.

ಮುಂದಿನ ವಾರ: ಇನ್ನಷ್ಟು ಪ್ರತಿಭಟನೆಗಳು ಹಾಗೂ ಪೊಲೀಸರ ಸಮಯಪ್ರಜ್ಞೆ
ಶಿವರಾಂ ಅವರ ಮೊಬೈಲ್ ನಂಬರ್: 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT