ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಸತ್ತೆಯ ದೇಗುಲದಲ್ಲಿ ಕಳಂಕಿತರು ಬೇಡ

Last Updated 20 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸಂಸತ್ತು, ಪ್ರಜಾಸತ್ತಾತ್ಮಕ ವ್ಯವಸ್ಥೆಯ ದೇಗುಲವಿದ್ದಂತೆ. ಸಂಸದರು ಆ ದೇವಸ್ಥಾನದಲ್ಲಿ ಅರ್ಚಕರಿದ್ದಂತೆ. ಅರ್ಚಕರು ಪಾವಿತ್ರ್ಯದಿಂದಿದ್ದರೆ ಆ ಪೂಜಾಮಂದಿರವೂ ಪವಿತ್ರವಾಗಿರುತ್ತದೆ. ಸಂಸದರು ಕಳಂಕಿತರಾದರೆ ಆ `ದೇಗುಲ'ವೂ ಜನರ ಕಣ್ಣಿಗೆ ಕಳಾಹೀನವಾಗಿ ಕಾಣುತ್ತದೆ.

ಆಗ ಜನಸಾಮಾನ್ಯರು ಅಂತಹದ್ದೊಂದು ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ಇಂತಹ ಸಂದಿಗ್ಧವನ್ನು ಇವತ್ತು ನಮ್ಮ ಸಂಸತ್ತು ಎದುರಿಸುತ್ತಾ ಇದೆ. ಸಂಸತ್ತಿನಲ್ಲಿ ಹಿಂದಿದ್ದ ಆ ಹಿರಿಮೆ ಈಗ ಇಲ್ಲ. ಅದೇ `ದೇಗುಲ' ಹಿಂದೆ ಜನರ ನಂಬುಗೆಯ ಕೋಟೆಯಂತಿತ್ತು. ಆದರೆ ಇವತ್ತು ಅದು ನಗೆಪಾಟಲಿನ ವೇದಿಕೆಯಂತಿದೆ. ಇದಕ್ಕೆ ಹತ್ತು ಹಲವು ಕಾರಣಗಳಿವೆ.
 
ಅದೇನೇ ಇರಬಹುದು, ಇವತ್ತಿಗೂ ಈ ನಾಡಿನ `ಶಕ್ತಿ ಕೇಂದ್ರ' ಸಂಸತ್ತು ಎನ್ನುವುದು ಅಷ್ಟೇ ಸತ್ಯ. ಜನರಿಂದ ನೇರವಾಗಿ ಆಯ್ಕೆಯಾಗಿ ಬಂದ ಪ್ರತಿನಿಧಿಗಳಿರುವ ಲೋಕಸಭೆ ಅಥವಾ ಪರೋಕ್ಷವಾದ ಪ್ರವೇಶಾವಕಾಶ ಕಲ್ಪಿಸುವ ರಾಜ್ಯಸಭೆಗಳಲ್ಲಿಯೇ ಇವತ್ತು ಶಾಸನಗಳು ರೂಪುಗೊಳ್ಳುತ್ತವೆ. ಆದರೆ ಅನೇಕ ಜನಪ್ರತಿನಿಧಿಗಳು ಯಾವುದೇ ಮೌಲ್ಯಗಳಿಗೆ ಬದ್ಧರಾಗಿಲ್ಲದಿರುವುದರಿಂದ ಸಂಸತ್ತಿನ ಮಟ್ಟ ಕುಸಿದಿದೆಯೇನೋ ಎಂದೆನಿಸುತ್ತಿದೆ.

ಸುಮಾರು ಶೇಕಡಾ ಮೂವತ್ತರಷ್ಟು ಮಂದಿ ಸಂಸದರು ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ನ್ಯಾಯಾಲಯಕ್ಕೆ ಅಲೆಯುತ್ತಲೇ ಇದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಜನಸಾಮಾನ್ಯರಿಗೆ ಸಂತಸ ತರುವಂತಹ ಆದೇಶವೊಂದನ್ನು ನೀಡಿದೆ. ಇದು ಹಲವು ಸಂಸದರಿಗೆ ನುಂಗಲಾರದ ತುತ್ತಿನಂತಾಗಿದೆ.

ಸುಪ್ರೀಂ ಕೋರ್ಟ್ ದೇಶವನ್ನೇ ಸರಿದಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ತೀರ್ಪೊಂದನ್ನು ಹೇಳಿದೆ. ಈ ತೀರ್ಪಿನ ಪ್ರಕಾರ `ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಜನಪ್ರತಿನಿಧಿಯೊಬ್ಬರನ್ನು ಟ್ರಯಲ್ ಕೋರ್ಟ್‌ನಲ್ಲಿಯೇ ಅಪರಾಧಿ ಎಂದು ತೀರ್ಮಾನಿಸಿದರೆ, ಆ ಜನಪ್ರತಿನಿಧಿ ತನ್ನ ಶಾಸಕ ಅಥವಾ ಸಂಸದ ಸ್ಥಾನದಲ್ಲಿ ಮುಂದುವರಿಯಲು ಅನರ್ಹನಾಗುತ್ತಾನೆ. ತಕ್ಷಣ ಆತ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು'.

ಆದರೆ ಜನಪ್ರತಿನಿಧಿ ಕಾಯ್ದೆಯಲ್ಲಿರುವ ಕೆಲವು ಸಡಿಲ ಎಳೆಗಳನ್ನೇ ನೆಪ ಮಾಡಿಕೊಂಡು ಕೆಲವು `ಅಪರಾಧಿ'ಗಳು ಜನಪ್ರತಿನಿಧಿ ಸ್ಥಾನದಲ್ಲಿ ಮುಂದುವರಿಯುತ್ತಲೇ ಇರುತ್ತಾರೆ. ಒಂದು ಕೋರ್ಟ್‌ನಿಂದ ಇನ್ನೊಂದು ಕೋರ್ಟ್‌ಗೆ ಹೋಗುತ್ತಾ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಬಂದವರೇ ಹೆಚ್ಚು. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಆರೋಪಿಯಾಗಿರುವ ಮೇವು ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನೇ ಹಲವು ವರ್ಷಗಳ ಕಾಲ ನಡೆಸಲಾಯಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷಗಳಿಂದ ಟ್ರಯಲ್ ಕೋರ್ಟ್ ಹಂತದಲ್ಲಿಯೇ ವಿಚಾರಣೆ ನಡೆಯುತ್ತಿದೆ! ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಶಿಬು ಸೊರೆನ್ ಅವರು ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೂ ಏರಿದರು. ನ್ಯಾಯಾಲಯದ ಎದುರು ಎಂತಹ ಆರೋಪವೇ ಇರಲೀ, ವಿಧಾನಸಭೆಯ ಅಥವಾ ಸಂಸತ್ತಿನ ಸದಸ್ಯರಾದ ಮೇಲೆ ಸಂಬಂಧಪಟ್ಟವರನ್ನು ಏನೂ ಮಾಡುವಂತಿಲ್ಲ ಎಂಬ ಸ್ಥಿತಿಯೇ ಬಹುತೇಕ ಎದ್ದು ಕಂಡಿದೆ.

ರಾಜಕಾರಣಿಗಳಿಗೆ ಅಧಿಕಾರ ಒಂದಿದ್ದರೆ ಮುಗಿಯಿತು, ಏನು ಬೇಕಾದರೂ ನಡೆಯುತ್ತದೆ ಎಂಬ ಭಾವನೆ ಜನರಲ್ಲಿಯೂ ಮೂಡಿದಂತಿದೆ. ರಾಜಕಾರಣಿಗಳೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ನೈತಿಕತೆ ಬಗ್ಗೆ ಯಾವುದೇ ಅರಿವಿಲ್ಲದಂತೆ ಇದ್ದುಬಿಡುತ್ತಾರೆ. ಭಾರತದಲ್ಲಿರುವಂತೆಯೇ ಬ್ರಿಟನ್‌ನಲ್ಲಿಯೂ ಸಂಸತ್ತು ಇದೆ. ಅಲ್ಲಿನ ಮೇಲ್ಮನೆ ಅಂದರೆ ನಮ್ಮ ರಾಜ್ಯಸಭೆ ಇದ್ದಂತೆ. ಅದನ್ನು `ಹೌಸ್ ಆಫ್ ಲಾರ್ಡ್ಸ್' ಎಂದು ಕರೆಯುತ್ತಾರೆ.

ಅದರ ಸದಸ್ಯನೊಬ್ಬನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಂಬಂಧಪಟ್ಟ ಪ್ರಕರಣವೊಂದು ಸಾಬೀತಾದರೆ ಅಂತಹ ಸದಸ್ಯನನ್ನು ಮೇಲ್ಮನೆಯಿಂದ ಹೊರ ಕಳಿಸುವ ಹಕ್ಕು ಅಲ್ಲಿನ ಸದಸ್ಯರಿಗೆ ಇದೆ. ಅನಿವಾಸಿ ಭಾರತೀಯರೊಬ್ಬರು ಅಲ್ಲಿ ಮೇಲ್ಮನೆ ಸದಸ್ಯರಾಗಿದ್ದಾಗ ತಮ್ಮ ಖರ್ಚುವೆಚ್ಚಕ್ಕೆ ಸಂಬಂಧಿಸಿದಂತೆ ಸುಳ್ಳು ಲೆಕ್ಕ ನೀಡಿದ್ದು ಸಾಬೀತಾಗಿದ್ದರಿಂದ ಅವರನ್ನು ಮೇಲ್ಮನೆಯಿಂದ ಮೂರು ತಿಂಗಳ ಕಾಲ ಅಮಾನತಿನಲ್ಲಿ ಇರಿಸಲಾಗಿತ್ತು.

ಆದರೆ ಭಾರತದಲ್ಲಿ ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ಅಂತಹದ್ದೊಂದು ಮಹತ್ವದ ತೀರ್ಪಿನ ನಂತರವೂ `ಶಿಕ್ಷೆಗೆ ಒಳಗಾಗಿರುವ' ಕೆಲವು ಸಂಸದರು ಮತ್ತು ಶಾಸಕರು ತಮ್ಮ ಕೂದಲೂ ಕೊಂಕುವುದಿಲ್ಲ ಎಂಬಂತೆ ಓಡಾಡಿಕೊಂಡಿದ್ದಾರೆ. ಇತರ ಕೋರ್ಟ್‌ಗಳಲ್ಲಿ ಮೇಲ್ಮನವಿ ಸಲ್ಲಿಸಿ ಇಡೀ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಇದ್ದಾರೆ. ನಿಜವಾಗಿಯೂ ಅಂತಹವರು ನಾಚಿಕೊಳ್ಳಬೇಕಿತ್ತು.

ಆದರೆ ಸುಪ್ರೀಂ ಕೋರ್ಟ್‌ನ ಆ ತೀರ್ಪನ್ನೇ ಬದಿಗೆ ತಳ್ಳುವ ದಿಸೆಯಲ್ಲಿ ಪಕ್ಷಭೇದ ಮರೆತು ಜನಪ್ರತಿನಿಧಿಗಳೆಲ್ಲಾ ಒಗ್ಗೂಡಿ ಪ್ರಯತ್ನ ನಡೆಸುತ್ತಿದ್ದಾರೆ. ಕಾನೂನಿನ ಇಂತಹ ಕ್ರಮಗಳಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲೂ ಯೋಚನೆ ನಡೆಸಿದಂತಿದೆ. ಇವರ ನಡುವೆ ಕೆಲವು ಸಜ್ಜನ ರಾಜಕಾರಣಿಗಳಿದ್ದಾರೆ. ಇವರಿಗೆ ಇಂತಹ ಹುನ್ನಾರಗಳೆಲ್ಲವೂ ಗೊತ್ತಾಗುತ್ತದೆ. ಆದರೆ ತಾವಿರುವ ಪಕ್ಷಗಳ ಅಂತಹ ಸದಸ್ಯರ ವಿರುದ್ಧ ಮಾತನಾಡಲಾರದೇ ಅಂತಹವರೆಲ್ಲಾ ಅಸಹಾಯಕತೆಯಿಂದ ಸುಮ್ಮನಿದ್ದಾರೆ.

ಆದರೆ ಈ ದಿಸೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವುದನ್ನು ಈಗಾಗಲೇ ಹಲವು ಸಂಘ ಸಂಸ್ಥೆಗಳು ವಿರೋಧಿಸಿವೆ. ಜನಸಾಮಾನ್ಯರು ಸಹಜವಾಗಿಯೇ ಇಂತಹ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂತಹದ್ದೊಂದು ತಿದ್ದುಪಡಿ ಈ ದೇಶದ ಸಂಸದೀಯ ವ್ಯವಸ್ಥೆಯನ್ನು ಇನ್ನಷ್ಟೂ ಕಳಾಹೀನಗೊಳಿಸುತ್ತದೆ ಎಂಬ ಆತಂಕ ಪ್ರಜ್ಞಾವಂತರದ್ದಾಗಿದೆ. ಲೋಕಸಭಾ ಅಧಿವೇಶನಗಳಲ್ಲಿ ದಿನದ ಕಾರ್ಯಕಲಾಪವನ್ನು ಅನಗತ್ಯವಾಗಿ ಮುಂದಕ್ಕೆ ಹಾಕುತ್ತಿರುವುದನ್ನು ಕಂಡು ಜನ ರೋಸಿಹೋಗಿದ್ದಾರೆ.

ಸಂಸತ್ತು ಗದ್ದಲ, ಗೊಂದಲಗಳ ಆಗರವೆನಿಸತೊಡಗಿದೆ. ಸಂಸತ್ ನಡೆಯುವ ದಿನಗಳಲ್ಲಿ ಪ್ರತಿ ಗಂಟೆಗೂ ಸಹಸ್ರಾರು ರೂಪಾಯಿ ವೆಚ್ಚವಾಗುತ್ತದೆ. ಜನರ ತೆರಿಗೆ ಈ ರೀತಿ ಪೋಲಾಗಬಾರದು ಎಂದು ಯೋಚಿಸುತ್ತಾ, ಸಂಸದರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಆದರೆ ಪ್ರಸಕ್ತ ಪರಿಸ್ಥಿತಿಯನ್ನು ನೋಡಿದರೆ ಹಾಗೆನಿಸುವುದಿಲ್ಲ.

ಚರ್ಚೆಗೆ ಬರಬೇಕಿದ್ದ ಮಹತ್ವದ ಮಸೂದೆಗಳು ಕಡತಗಳ ಒಳಗೆ ಸೇರಿಹೋಗಿವೆ. ಸಂಸದರು ರಾಜಕಾರಣದಲ್ಲೇ ತಲ್ಲೆನರಾಗಿಬಿಟ್ಟಿದ್ದಾರೆ. ಜನರಿಗೆ ವ್ಯವಸ್ಥೆಯ ಬಗ್ಗೆ ಭ್ರಮನಿರಸನವಾಗಿದ್ದರಿಂದಲೇ ನೆರೆಯ ದೇಶಗಳಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯೂ ಹದಗೆಟ್ಟು ಹೋಯಿತು ಎಂಬ ಸಂಗತಿ ನಮ್ಮ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ಅರಿವಾಗುತ್ತಿಲ್ಲ ಎಂದೆನಿಸುತ್ತಿದೆ.

ಜನಪ್ರತಿನಿಧಿಗಳೂ ಒಂದು ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ಕಲಂ 14ರ ಪ್ರಕಾರ ಕಾನೂನಿನ ಮುಂದೆ ಸರ್ವರೂ ಸಮಾನರು. ಸುಪ್ರೀಂ ಕೋರ್ಟ್ ಕೂಡಾ ಈ ನೆಲೆಯಲ್ಲಿಯೇ ಯೋಚಿಸಿದೆ. ಇದರ ವಿರುದ್ಧ ಸಂಸದರು ಒಗ್ಗೂಡಿ ಧ್ವನಿ ಎತ್ತುವುದೆಂದರೇನು? ನ್ಯಾಯಾಲಯ ಒಬ್ಬ ವ್ಯಕ್ತಿ ಅಪರಾಧಿ ಎಂದು ತೀರ್ಪು ನೀಡಿದರೆ ಸಂವಿಧಾನದ ಪ್ರಕಾರ ಅಂತಹವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಪರಿಸ್ಥಿತಿ ಈ ರೀತಿ ಇರುವಾಗ ಸಂಸದ ಅಥವಾ ಶಾಸಕ ಅದಕ್ಕೂ ಭಿನ್ನವಾಗಿರಲು ಹೇಗೆ ಸಾಧ್ಯ? ಸಹಜವಾಗಿಯೇ ಇವರೂ ಅನರ್ಹಗೊಳ್ಳಬೇಕು ತಾನೇ? ಸಂವಿಧಾನದ ಈ ಅಂಶವನ್ನೇ ಆಧಾರವಾಗಿ ಇರಿಸಿಕೊಂಡು ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದೆ. ಲೋಕಸಭೆಯಲ್ಲಿ ಈ ಮೂಲ ಅಂಶಕ್ಕೆ ತಿದ್ದುಪಡಿ ತರುವ ಧೈರ್ಯ ಮಾಡಲಿಕ್ಕಿಲ್ಲ ಎಂದುಕೊಂಡಿದ್ದೇನೆ.

ವಾಸ್ತವದಲ್ಲಿ ನ್ಯಾಯಾಂಗ ಮತ್ತು ಲೋಕಸಭೆ ಈಗ ಸಮರಾಂಗಣದಲ್ಲಿರುವಂತಿವೆ. ಅದೃಷ್ಟವಶಾತ್ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಅವಕಾಶ ಸರ್ಕಾರಕ್ಕಿಲ್ಲ. ಅಂತಹ ಅವಕಾಶ ಬೇಕೆಂದು ಹಿಂದೆ ಸರ್ಕಾರ ಯತ್ನ ನಡೆಸಿದ್ದನ್ನೂ ಮರೆಯುವಂತಿಲ್ಲ. ಆದರೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ `ಕೊಲಿಜಿಯಮ್' ವ್ಯವಸ್ಥೆ ಮೂಲಕ ಇಂತಹ ನೇಮಕ ನಡೆಯುತ್ತದೆ. ಹೀಗಾಗಿ ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ.

ಹೈಕೋರ್ಟ್‌ನಲ್ಲಿ ಕೂಡಾ ನಾಲ್ವರು ಹಿರಿಯ ನ್ಯಾಯಾಧೀಶರ `ಕೊಲಿಜಿಯಮ್' ಚರ್ಚಿಸಿ ಯಾರನ್ನು ಯಾವ ಪೀಠಕ್ಕೆ ಏರಿಸಬೇಕೆಂಬ ಬಗ್ಗೆ ನಿರ್ಧರಿಸುತ್ತದೆ. ಇಂತಹ ನೇಮಕಗಳು ತಮ್ಮ ಮೂಗಿನ ನೇರಕ್ಕೆ ನಡೆಯದಿರುವುದರಿಂದ ಸರ್ಕಾರದ ಮಂದಿ ಕಿಡಿಕಿಡಿಯಾಗಿರುವುದಂತೂ ನಿಜ. ಸುಪ್ರೀಂ ಕೋರ್ಟ್ ಇದೀಗ ಮತ್ತೊಂದು ಪ್ರಕರಣದಲ್ಲಿ ಜನರ ನೆರವಿಗೆ ಬರುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳೂ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ ಇರಬೇಕೆಂಬುದನ್ನು ಸರ್ಕಾರವೇ ವಿರೋಧಿಸುತ್ತಿದ್ದು, ಇದಕ್ಕೂ ತಿದ್ದುಪಡಿ ತರಲು ಯತ್ನಿಸುತ್ತಿದೆ.

ರಾಜಕೀಯ ಪಕ್ಷಗಳ ಹಣದ ವಹಿವಾಟು ಪಾರದರ್ಶಕವಾಗಿರಬೇಕೆಂಬ ಅತ್ಯುತ್ತಮ ವಿಚಾರಕ್ಕೂ ಸರ್ಕಾರ ಅಡ್ಡಿಬರುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕರಾರುವಾಕ್ಕಾದ ನಿಲುವು ತಳೆಯಬಹುದು ಎಂದುಕೊಂಡಿದ್ದೇನೆ. ಹೌದು, ಅಂತಿಮವಾಗಿ ಜನಪ್ರತಿನಿಧಿಗಳ ನಿರ್ಧಾರವೇ ಮುಖ್ಯವಾಗುತ್ತದೆ. ಪ್ರಸಕ್ತ ಪ್ರಜಾಸತ್ತೆಯ ಪ್ರತಿ ಚಟುವಟಿಕೆಯೂ ರಾಜಕೀಯಕರಣಗೊಳ್ಳುತ್ತಿದ್ದು, ಇದಕ್ಕೆ ಪರಿಹಾರವಾದರೂ ಏನು ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಹೊರ ನೋಟಕ್ಕೆ ಸಂಸತ್ತು, ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲದಂತೆ ಕಂಡುಬರುತ್ತಿದೆಯಾದರೂ, ಆಳದಲ್ಲಿ ಅದೇ ರೀತಿ ಇದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ. ಇಂತಹ ಸಂದಿಗ್ಧದಲ್ಲಿ ಸಂಸದರು ಉನ್ನತ ಮಟ್ಟದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಸಂಸದೀಯ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ಗಟ್ಟಿಯಾದ ನಂಬಿಕೆ ಮೂಡಿಸುವಲ್ಲಿ ಸಂಸದರು ಉತ್ತಮ ಮೌಲ್ಯಗಳಿಗೆ ಸ್ಪಂದಿಸಬೇಕಿದೆ.

ನ್ಯಾಯಾಲಯ ಯಾವುದೇ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರೆ, ಅಂತಹ ಸಂಸದರು ಅಥವಾ ಶಾಸಕರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ. ಇದು ಪ್ರಜಾಸತ್ತೆಯ ಉಳಿವಿನ ದೃಷ್ಟಿಯಿಂದ ಅತ್ಯಂತ ಮಹತ್ವದ ನಿರ್ಧಾರ ಎನ್ನಬಹುದು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT