ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ

Last Updated 21 ಡಿಸೆಂಬರ್ 2016, 3:49 IST
ಅಕ್ಷರ ಗಾತ್ರ

ಇನ್ನು ಹತ್ತು ದಿನಗಳಲ್ಲಿ  ಹಳೆಯ ನೋಟುಗಳನ್ನು ಬದಲಾಯಿಸುವುದಕ್ಕೆ ಸರ್ಕಾರ ನೀಡಿದ ಗಡುವು ಮುಗಿಯುತ್ತದೆ. ಕಪ್ಪು ಹಣವನ್ನು ಇಲ್ಲವಾಗಿಸುವ ಘೋಷಣೆ ಸ್ವತಃ ಪ್ರಧಾನ ಮಂತ್ರಿಯವರಿಗೇ ಮರೆತು ಹೋಗಿದೆ. ಸದ್ಯದ ಘೋಷಣೆ ‘ನಗದು ರಹಿತ ಆರ್ಥಿಕತೆ’. ಭಾರತದಲ್ಲಿ ನೋಟು ರದ್ದತಿಯ ಪ್ರಕಟಣೆ ಹೊರಬೀಳುವುದಕ್ಕೆ ಹಲವು ತಿಂಗಳುಗಳ ಹಿಂದೆ ಸ್ವಿಟ್ಜರ್ಲೆಂಡ್ ಸರ್ಕಾರವೂ ನೋಟುಗಳಿಗೆ ಸಂಬಂಧಿಸಿ­ದಂತೆ ಒಂದು ಸ್ಪಷ್ಟನೆ ನೀಡಿತ್ತು.

ನೆರೆಯ ಸ್ವೀಡನ್, ಡೆನ್ಮಾರ್ಕ್ ಗಳು ತಮ್ಮ ಆರ್ಥಿಕತೆಗಳಲ್ಲಿ ನಗದನ್ನು ಪೂರ್ಣವಾಗಿ ಇಲ್ಲವಾಗಿಸುವ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿ­ಕೊಳ್ಳುತ್ತಿ­ದ್ದಾಗ ಹೊರಬಂದ ಸ್ಪಷ್ಟನೆ ಇದು. ಸ್ವಿಟ್ಜರ್ಲೆಂಡ್ ಸರ್ಕಾರ ನೋಟುಗಳನ್ನು ಮತ್ತು ನಾಣ್ಯಗಳನ್ನು ಪೂರ್ಣವಾಗಿ ಉಳಿಸಿಕೊಳ್ಳುವ ಭರವಸೆ ನೀಡುವುದರ ಜೊತೆಗೆ ಹೊಸ 1000 ಫ್ರಾಂಕ್‌ಗಳ ನೋಟುಗಳ ಬಳಕೆಯನ್ನು ಮುಂದು­ವರಿಸುವುದಾಗಿ ಹೇಳಿತು. ಈ ನೋಟಿನ ಮೌಲ್ಯ 66,030 ರೂಪಾಯಿಗಳು.

ಭಾರತದಂಥ ದೇಶಗಳಿಗೆ ಹೋಲಿಸಿದರೆ ಸ್ವಿಟ್ಜರ್ಲೆಂಡ್‌ಗೆ ನಗದು ರಹಿತ ಆರ್ಥಿಕತೆಯನ್ನು ಕಾರ್ಯರೂಪಕ್ಕೆ ತರುವುದು ಬಹಳ ಸುಲಭ. ತನ್ನನ್ನು ಸುತ್ತುವರಿದಿರುವ ಯೂರೋಪ್ ಒಕ್ಕೂಟದ ದೇಶಗಳೆಲ್ಲವೂ ನಗದು ರಹಿತ ಆರ್ಥಿಕತೆಯ ಕಡೆಗೆ ಸಾಗುತ್ತಿದ್ದರೂ ಸ್ವಿಟ್ಜರ್ಲೆಂಡ್ ಮಾತ್ರ ಇದರಿಂದ ದೂರ ನಿಲ್ಲುವ ನಿರ್ಧಾರವನ್ನು ಕೈಗೊಂಡು ಅದಕ್ಕೆ ಬದ್ಧವಾಗಿಯೇ ನಿಂತದ್ದು ಯೂರೋಪ್ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಅಸಮಾಧಾನವನ್ನೂ ತಂದಿತು. ಅಷ್ಟೇಕೆ ಸ್ವತಃ ದೊಡ್ಡಣ್ಣ ಅಮೆರಿಕವೇ ಒಂದು ಸಾವಿರ ಫ್ರಾಂಕ್ ಗಳ ನೋಟುಗಳು ಅಪರಾಧ ಜಗತ್ತಿಗೆ ಅನುಕೂಲ ಕಲ್ಪಿಸುವ ಕಾರಣಕ್ಕಾಗಿ ಹಿಂತೆಗೆದುಕೊಳ್ಳಬೇಕು ಎಂದು ಒತ್ತಡ ಹೇರಿದರೂ ಸ್ವಿಟ್ಜರ್ಲೆಂಡ್ ಸರ್ಕಾರ ಮಾತ್ರ ತನ್ನ ನಿರ್ಧಾರಕ್ಕೆ ಬದ್ಧವಾಗಿ ಉಳಿಯಿತು.

ಸ್ವಿಟ್ಜರ್ಲೆಂಡ್ ಇಂಥದ್ದೊಂದು ತೀರ್ಮಾನಕ್ಕೆ ಜೋತು ಬಿದ್ದದ್ದರ ಹಿಂದೆ ಇರುವುದು ಸ್ವಿಸ್ ನಾಗರಿಕರು ಬಯಸುವ ಖಾಸಗಿತನ. ವ್ಯಕ್ತಿಯ ಖಾಸಗಿ ಬದುಕಿನೊಳಕ್ಕೆ ಸರ್ಕಾರ ಇಣುಕಿ ನೋಡುವ ಅಗತ್ಯವಿಲ್ಲ ಎಂಬ ಅಲ್ಲಿನ ಪೌರರ ನಿಲುವಿನ ಹಿಂದೆ ಯೂರೋಪಿನ ದೇಶಗಳು ಇತ್ತೀಚಿನ ವರ್ಷಗಳಲ್ಲಿ ಎದು­ರಿಸಿದ ಆರ್ಥಿಕ ಮುಗ್ಗಟ್ಟು ಸಾಮಾನ್ಯರ ಮೇಲೆ ಬೀರಿದ ಪರಿಣಾಮ. ದೊಡ್ಡ ದೊಡ್ಡವರ ನಷ್ಟಗಳನ್ನು ಸರಿದೂಗಿಸಲು ಬ್ಯಾಂಕ್ ಖಾತೆಗಳಲ್ಲಿದ್ದ ಸಾಮಾನ್ಯರ ಹಣ ಬಳಕೆಯಾದದ್ದು ಎಲ್ಲವೂ ಇವೆ.  ಡಿಜಿಟಲ್ ಆರ್ಥಿಕತೆ, ನಗದು ರಹಿತ ಆರ್ಥಿಕತೆಯ ಕುರಿತ ಘೋಷಣೆಗಳನ್ನು, ಪೇಟಿಎಂ, ಫ್ರೀಚಾರ್ಜ್ ಗಳಿಂದ ಆರಂಭಿಸಿ ಯುಪಿಐ ತನಕದ ಎಲ್ಲಾ ಹಣಕಾಸು ತಂತ್ರಜ್ಞಾನ ಉದ್ಯಮಗಳು ನೀಡುತ್ತಿರುವ ಜಾಹೀರಾತುಗಳನ್ನು ನಾವೂ ಸ್ವಿಸ್ ಪೌರರಂತೆ   ಸಂಶಯದಿಂದ ನೋಡುವ ಅಗತ್ಯವಿಲ್ಲವೇ?

ನೋಟು ರದ್ದತಿಯ ನಂತರ ನಡೆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ­ದರೆ ಸರ್ಕಾರವನ್ನು ಸಂಶಯಿಸುವುದಕ್ಕೆ ಹೆಚ್ಚು ಹೆಚ್ಚು ಕಾರಣಗಳು ದೊರೆ­ಯುತ್ತವೆ.  ವ್ಯಕ್ತಿಯ ಖಾಸಗಿತನಕ್ಕೆ ಲಗ್ಗೆ ಹಾಕುವ ವಿಚಾರದಲ್ಲಿ ಯಾವ ಪಕ್ಷವೂ ಹಿಂದುಳಿಯುವುದಿಲ್ಲ. ಆದ್ದರಿಂದ ಇದನ್ನು ಯಾವು­ದಾದ­ರೊಂದು ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯ­ಕ್ರಮ­ವಾಗಿಯಷ್ಟೇ ನೋಡುವುದು ಅರ್ಥ­ಹೀನ. ಇದನ್ನು ವರ್ತಮಾನದ ಎಲ್ಲಾ ಪ್ರಭುತ್ವಗಳ ಅಭದ್ರತೆಯ ಮೂರ್ತ ಸ್ವರೂಪ ಎಂಬ ಅರ್ಥದಲ್ಲಿಯೇ ವಿಶ್ಲೇಷಿಸಬೇಕಾಗುತ್ತದೆ.

ನೋಟು ಮತ್ತು ನಾಣ್ಯದ ರೂಪ­ದಲ್ಲಿರುವ ಹಣಕ್ಕೂ ಬ್ಯಾಂಕ್ ಖಾತೆಗಳಲ್ಲಿ ಅಂಕಿಗಳ ಸ್ವರೂಪದಲ್ಲಿರುವ ಹಣಕ್ಕೂ ಪರಿಕಲ್ಪನಾತ್ಮಕವಾಗಿ ದೊಡ್ಡ ವ್ಯತ್ಯಾಸ­ವೇನೂ ಇಲ್ಲ. ಈ ಎರಡೂ ನಿಜದ ಮೌಲ್ಯಗಳಲ್ಲ.  ಸಾಂಸ್ಥಿಕ ಭರವಸೆ­ಯೊಂದರ ಮೂಲಕ ಹಣಕ್ಕೆ ಮೌಲ್ಯವನ್ನು ಆರೋಪಿಸಲಾಗುತ್ತದೆ.
ನೋಟು ಅಥವಾ ನಾಣ್ಯ ಯಾರ ಕೈಯಲ್ಲಿದೆಯೋ ಅದು ಅವರ ಸ್ವತ್ತಾಗಿರುತ್ತದೆ. ಆತ ಅಥವಾ ಆಕೆ ಅದನ್ನು ಯಾರಿಗೆ ಬೇಕಾದರೂ ಈ ಸ್ವತ್ತನ್ನು ಹಸ್ತಾಂತರಿಸಬಹುದು. ಇದಕ್ಕೆ ಯಾವ ಮಧ್ಯವರ್ತಿಯೂ ಬೇಕಾ­ಗುವುದಿಲ್ಲ. ಆದರೆ ಬ್ಯಾಂಕಿನ ಖಾತೆ­ಯಲ್ಲಿರುವ ಹಣವನ್ನು ಹೀಗೆ ಹಸ್ತಾಂತ­ರಿಸುವು­ದಕ್ಕೆ ಮಧ್ಯವರ್ತಿ ಬೇಕಾಗುತ್ತದೆ. ಈ ಕೆಲಸ ಮಾಡುವುದು ಹಣಕಾಸು ತಂತ್ರಜ್ಞಾನ ಎಂದು ಕರೆಯಲಾಗುವ ಆಧುನಿಕ ವ್ಯವಸ್ಥೆ. ಈ ತಂತ್ರಜ್ಞಾನವನ್ನು ನಿರ್ವಹಿಸುವ ಸಂಸ್ಥೆಗಳೆಲ್ಲವೂ ಹಣ ವಿನಿಮಯದ ಮಧ್ಯವರ್ತಿಗಳಾಗಿರುತ್ತವೆ.

ಈ ಮಧ್ಯವರ್ತಿಗಳ ಮೂಲಕ ವ್ಯವಹರಿಸುವುದರಿಂದ ದಾಖಲೆಗಳು ಸೃಷ್ಟಿಯಾಗುತ್ತವೆ. ಅದರಿಂದಾಗಿ ಯಾರೂ ತೆರಿಗೆಯನ್ನು ವಂಚಿಸಲು ಸಾಧ್ಯವಿಲ್ಲ. ಆದ್ದರಿಂದ ಆಡಳಿತಕ್ಕೆ ಅನುಕೂಲ­ವಾಗುತ್ತದೆ. ಕಪ್ಪು ಹಣದ ಸೃಷ್ಟಿ­ಯಾಗುವುದಿಲ್ಲ ಎಂಬುದು ನಗದು ರಹಿತ ವ್ಯವಹಾರದ ಪ್ರತಿಪಾದಕರ ವಾದ. ಇದು ಬಹುತೇಕ ನಿಜವೂ ಹೌದು. ವಿನಿ­ಮಯವನ್ನು ಸಾಧ್ಯ ಮಾಡುವ ಮಧ್ಯ­ವರ್ತಿ ಸಂಸ್ಥೆ ತನ್ನ ಸೇವೆಗಾಗಿ ಒಂದು ನಿರ್ದಿಷ್ಟ ಶುಲ್ಕವನ್ನು ಪಡೆಯುತ್ತದೆ.

ಈ ಹೊರೆಯನ್ನು ಮಾರಾಟಗಾರ ಸಹಜ­ವಾಗಿಯೇ ತನ್ನ ಗ್ರಾಹಕನಿಗೆ ವರ್ಗಾ­ಯಿಸು­ತ್ತಾನೆ. ಅಂದರೆ ಕರೆನ್ಸಿ ನೋಟು­ಗಳನ್ನು ನಿರ್ವಹಿಸುವುದಕ್ಕೆ ಸರ್ಕಾರಕ್ಕೆ ಆಗುತ್ತಿದ್ದ ವೆಚ್ಚವನ್ನು ಜನರು ನೇರವಾಗಿ ಭರಿಸುತ್ತಾರೆ. ಆದರೆ ಇದರ ಲಾಭವನ್ನು ಜನರು ಪಡೆಯುತ್ತಾರೆಯೇ? ನಗದು ರಹಿತ ವಹಿವಾಟಿಗೆ ಈ ತನಕ ಭಾರತ ಸರ್ಕಾರ ಘೋಷಿಸದಿರುವ ತೆರಿಗೆ ವಿನಾ­ಯಿತಿಗಳಂತೂ ಗ್ರಾಹಕರಿಗೆ ಆಗುವ ನಷ್ಟವನ್ನು ತುಂಬಿಸಿಕೊಡುವ ಪ್ರಮಾಣ­ದಲ್ಲಿ ಇಲ್ಲ.

ಇನ್ನು ಮಧ್ಯವರ್ತಿಗಳು ಸಂಗ್ರಹಿಸುವ ವೈಯಕ್ತಿಕ ಮಾಹಿತಿಯ ವಿಚಾರ ಬೇರೆಯೇ ಇದೆ. ಆನ್ ಲೈನ್ ಮಾರು­ಕಟ್ಟೆಗಳಿಂದ ಒಂದು ಉತ್ಪನ್ನ ಖರೀದಿಸಿ­ದರೆ ಅದಕ್ಕೆ ಸಂಬಂಧಿಸಿದ ನೂರೆಂಟು ಜಾಹೀರಾತುಗಳು ನಾವು ಸಂದರ್ಶಿಸುವ ಎಲ್ಲಾ ವೆಬ್‌ಸೈಟುಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ನಮ್ಮ ಬ್ಯಾಂಕ್‌ಗಳು ಮತ್ತು ಮೊಬೈಲ್ ವ್ಯಾಲೆಟ್‌ಗಳನ್ನು ನಿರ್ವಹಿಸುವ ಸಂಸ್ಥೆಗಳು ಹೀಗೆಯೇ ನಮ್ಮನ್ನು ಹಿಂಬಾಲಿಸುವುದಿಲ್ಲ ಎಂದು ನಂಬುವುದಕ್ಕೆ ಯಾವ ಕಾರಣವೂ ಇಲ್ಲ. ಏಕೆಂದರೆ ಇದನ್ನು ನಿರ್ಬಂಧಿಸುವ ಯಾವ ಕಾನೂನೂ ಸದ್ಯ ನಮ್ಮಲ್ಲಿ ಇಲ್ಲ.

ಟ್ರಾಯ್ ರೂಪಿಸಿರುವ 'ಡು ನಾಟ್ ಕಾಲ್ ರೆಜಿಸ್ಟ್ರಿ'ಯಲ್ಲಿ ಹೆಸರು ನೋಂದಾಯಿ­ಸಿದ ನಂತರವೂ ಟೆಲಿ­ಮಾರ್ಕೆಟಿಂಗ್ ಕರೆಗಳನ್ನು ಸ್ವೀಕರಿಸ­ಬೇಕಾದ ತೊಂದರೆ ಇರುವ ದೇಶ ನಮ್ಮದು. ವೈಯಕ್ತಿಕ ಮಾಹಿತಿಯ ರಕ್ಷಣೆಗೆ ಕಾನೂನೇ ಇಲ್ಲದಿರುವಾಗ ಅದನ್ನು ಈ ಸಂಸ್ಥೆಗಳು ಹೇಗೆ ಬಳಸಬಹುದು ಎಂಬು­ದನ್ನು ಊಹಿಸಿದರೇ ಭಯವಾಗುತ್ತದೆ. ಇದನ್ನೆಲ್ಲಾ ಸರಿಪಡಿಸುವುದಕ್ಕೆ ಸರ್ಕಾರ ಹೊಸ ನಿಯಮಗಳನ್ನು ತಕ್ಷಣಕ್ಕೇ ರೂಪಿಸುತ್ತದೆ ಎಂದು ನಂಬೋಣ. ಆದರೆ ಡಿಜಿಟಲ್ ಸ್ವರೂಪದಲ್ಲಿರುವ ನಮ್ಮ ಹಣಕ್ಕೆ ಯಾವ ಭದ್ರತೆ ಇದೆ?

ಪ್ರಮುಖ ಆ್ಯಂಟಿ ವೈರಸ್ ಉತ್ಪಾದಕ ಸಂಸ್ಥೆ ಕ್ಯಾಸ್ಪರಸ್ಕಿ ನಡೆಸಿದ ಅಧ್ಯಯನ ವರದಿ ಹೇಳುತ್ತಿರುವಂತೆ ನಮ್ಮ ಎಟಿಎಂಗಳೇ ಸುರಕ್ಷಿತವಲ್ಲ. ಇವು ಬಳಸುತ್ತಿರುವ ವಿಂಡೋಸ್ ಎಕ್ಸ್ ಪಿ ತಂತ್ರಾಂಶಕ್ಕೆ ಅದನ್ನು ತಯಾರಿಸಿರುವ ಮೈಕ್ರೋಸಾಫ್ಟ್ ಸಂಸ್ಥೆಯೇ ಬೆಂಬಲ ನಿಲ್ಲಿಸಿದೆ. ಆದರೂ ಎಟಿಎಂಗಳು ಅವನ್ನೇ ಬಳಸು­ತ್ತಿವೆ. ಇನ್ನು ಬ್ಯಾಂಕುಗಳು ಗ್ರಾಹಕರ ದತ್ತಾಂಶವನ್ನು ಸಂಗ್ರಹಿಸಿಟ್ಟಿ­ರುವ ತಂತ್ರಾಂಶಗಳ ಸ್ಥಿತಿ ಹೇಗಿದೆ. ಈ ವಿಷಯದಲ್ಲಿ ಹಣಕಾಸು ಸಚಿವಾಲಯ­ದಿಂದ ತೊಡಗಿ ಬ್ಯಾಂಕ್ ಆಡಳಿತ ಮಂಡಳಿಗಳ ತನಕ ಎಲ್ಲರೂ ಅನು­ಸರಿಸುತ್ತಿರುವುದು ಅಪಾರದರ್ಶಕ ನೀತಿ. 

ನೋಟು ರದ್ದತಿಯ ಘೋಷಣೆಗೆ ಕೆಲವೇ ತಿಂಗಳ ಹಿಂದೆ ಲಕ್ಷಾಂತರ ಡೆಬಿಟ್ ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು ಹೊಸ ಡೆಬಿಟ್ ಕಾರ್ಡ್ ಗಳನ್ನು ವಿತರಿಸಿದವು. ಮಾಹಿತಿ ಸೋರಿಕೆಯ ಹೇಗಾಯಿತು ಎಂದಾಗಲೀ ಮುಂದೆ ಅದು ಸಂಭವಿಸಿದೇ ಇರುವುದಕ್ಕೆ ಏನು ಮಾಡಲಾಯಿತು ಎಂಬುದರ ಕುರಿ­ತಾಗಲೀ ನಡೆಯಬೇಕಾಗಿದ್ದ ಚರ್ಚೆಗಳು ನಡೆಯಲೇ ಇಲ್ಲ. ನೋಟು ರದ್ದತಿಯ ಘೋಷಣೆಯ ಹಿಂದೆಯೇ ಪೇಟಿಎಂ ಎಂಬ ಸಂಸ್ಥೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವುದಕ್ಕೆ ಅನು­ಕೂಲವಾಗುವ ಸವಲತ್ತೊಂದನ್ನು ಪರಿ­ಚಯಿಸಿ ಕೆಲವೇ ದಿನಗಳಲ್ಲಿ ಹಿಂದಕ್ಕೆ ತೆಗೆದು­ಕೊಂಡಿತು. ಇದಕ್ಕೆ ಕಾರಣವಾ­ದದ್ದು ತಂತ್ರಾಂಶದಲ್ಲಿದ್ದ ಭದ್ರತಾ ಲೋಪ.

ಇವೆಲ್ಲಾ ಪರಿಹರಿಸಲು ಆಗದೇ ಇರುವಷ್ಟು ದೊಡ್ಡ ಸಮಸ್ಯೆಗಳಲ್ಲ. ಬದಲಾವಣೆಯೊಂದರ ಭಾಗ ಎಂದು ಸಮಾ­ಧಾನ ಪಟ್ಟುಕೊಳ್ಳಬಹುದು. ನೋಟು ಮತ್ತು ನಾಣ್ಯದ ರೂಪದಲ್ಲಿ ಹಣವಿದ್ದಾಗ ಅದರ ನಿರ್ವಹಣೆಗೊಂದು ವಿಕೇಂದ್ರೀಕೃತ ಸ್ವರೂಪವಿರುತ್ತದೆ. ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತ ಸಂಶಯ ಬಂದಾಕ್ಷಣ ಗ್ರಾಹಕರು ಏಕಾಏಕಿ ತಮ್ಮ ಹಣವನ್ನು ಹಿಂತೆಗೆ­ಯುತ್ತಾರೆ. ರನ್ ಆನ್ ಬ್ಯಾಂಕ್ ಎಂದು ಕರೆಯುವ ಈ ಪ್ರಕ್ರಿಯೆ ಬ್ಯಾಂಕುಗಳ ಉತ್ತರದಾಯಿತ್ವವನ್ನು ಖಾತರಿ ಪಡಿಸುತ್ತವೆ. ಒಂದು ವೇಳೆ ನಗದನ್ನು ಬಳ­ಸುವುದಕ್ಕೆ ಮಿತಿಯೊಂದನ್ನು ಹೇರಿ­ದರೆ ಈ ಸಾಧ್ಯತೆಯೇ ಇಲ್ಲವಾಗುತ್ತದೆ. ಅಷ್ಟೇ ಅಲ್ಲ ಬ್ಯಾಂಕುಗಳು ತಮ್ಮ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಜೂಜಿನಂಥ ವ್ಯವಹಾರಗಳಿಗೆ ಇಳಿದುಬಿಡುತ್ತವೆ. ಅಮೆರಿಕದ ಗೃಹಸಾಲದ ಸಮಸ್ಯೆ ಸೃಷ್ಟಿಯಾದದ್ದೇ ಹೀಗೆ.

ಇನ್ನು ಋಣಾತ್ಮಕ ಬಡ್ಡಿಯ ಸಾಧ್ಯತೆ ಮತ್ತೊಂದು. ಯೂರೋಪಿನ ಕೆಲ ದೇಶ­ಗಳು ಈ ಸಮಸ್ಯೆಯನ್ನು ಅನು­ಭವಿಸಿಬಿಟ್ಟಿವೆ. ಸ್ವಿಟ್ಜರ್ಲೆಂಡ್‌ನ ಪೌರರು ನಗದು ಆರ್ಥಿಕತೆಯನ್ನು ಬೆಂಬಲಿ­ಸುವುದರ ಹಿಂದೆ ಇದೊಂದು ಕಾರಣವೂ ಇತ್ತು. ದುಡಿಮೆಯ ಹಣವನ್ನು ಬ್ಯಾಂಕ್‌ನ ಹೊರತಾದ ಬೇರೆಲ್ಲೂ ಇಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಋಣಾತ್ಮಕ ಬಡ್ಡಿಯ ವ್ಯವಸ್ಥೆ ಬಂದರೆ ಜನರೇನು ಮಾಡಬೇಕು?

ಈ ಎಲ್ಲಾ ಸಂದರ್ಭಗಳಲ್ಲಿ ತೊಂದರೆ­ಯಾಗುವುದು ಕಾನೂನು ಬದ್ಧವಾಗಿ ಸಂಪಾದಿಸಿರುವವರಿಗೇ ಹೊರತು ಕಪ್ಪು ಹಣದ ಅಥವಾ ಅಕ್ರಮ ಸಂಪಾದನೆಯ ಮಾರ್ಗಗಳನ್ನು ಅವಲಂಬಿಸಿರು­ವವರಿಗಲ್ಲ. ಕಳೆದ ನಲವತ್ತು ದಿನಗಳಲ್ಲಿ ನಡೆದ ಬೆಳವಣಿಗೆಗಳೇ ಇದನ್ನು ಸಾಬೀತು ಮಾಡುತ್ತಿವೆ. ನ್ಯಾಯಬದ್ಧ ದುಡಿಮೆಯ ಹಣವನ್ನು ಜನರು ಪಡಿತರ ಸ್ವರೂಪದಲ್ಲಿ ಪಡೆಯುತ್ತಿದ್ದಾಗ ಕಪ್ಪು ಕುಳಗಳು ಕೋಟಿಗಳನ್ನು ಪರಿವರ್ತಿಸಿಕೊಂಡರು. ನಗದು ರಹಿತ ಆರ್ಥಿಕತೆಯಲ್ಲೂ ಇವರು ಹೀಗೆಯೇ ಇರುತ್ತಾರೆ. ಏಕೆಂದರೆ ಅವರಿಗೆ ನೋಟುಗಳು ಬೇಕಾಗಿಲ್ಲ. ಬಿಟ್ ಕಾಯ್ನ್ ನಂಥ ಯಾವ ಸರ್ಕಾರದ ನಿಯಂತ್ರಣಕ್ಕೂ ದೊರೆಯದ ಡಿಜಿಟಲ್ ಹಣದಿಂದ ಬೆಲೆಬಾಳುವ ಲೋಹಗಳ ತನಕದ ಅನೇಕ ಮಾರ್ಗಗಳು ಅವರಿಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT