ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿರೋಧದ ವೇದಿಕೆಗಳು ಇಲ್ಲವಾದಾಗ...

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕನ್ಹಯ್ಯಾ  ಕುಮಾರ್ ಅವರು ದೇಶದ್ರೋಹದ ಕೃತ್ಯ ಎಸಗಿದ್ದಾರೆ ಎನ್ನಲು ಸಾಕ್ಷ್ಯಾಧಾರಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರಿಗೆ ಸಿಕ್ಕಿಲ್ಲ ಎಂದು ಈಚಿನ ವರದಿಗಳು ಹೇಳುತ್ತಿವೆ. ಕನ್ಹಯ್ಯಾ ಅವರು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ.

ಒಂದು ವರ್ಷದ ಹಿಂದೆ ಅವರು ದೇಶದಾದ್ಯಂತ ದ್ವೇಷಕ್ಕೆ ಗುರಿಯಾದರು. ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು. ಹಾಗೆ ನೋಡಿದರೆ, ‘ಭಾರತ ವಿರೋಧಿ ಘೋಷಣೆ’ ಎಂಬ ಪದಗುಚ್ಛ ಕನ್ಹಯ್ಯಾ ಹಾಗೂ ಅವರ ಪ್ರಕರಣದಿಂದಾಗಿ ಮುನ್ನೆಲೆಗೆ ಬಂತು.
ಆದರೆ, ಭಾರತ ವಿರೋಧಿ ಘೋಷಣೆ ಅಂದರೆ ನಿಜಕ್ಕೂ ಏನು ಎಂಬುದು ಬಹುತೇಕರಿಗೆ ತಿಳಿದಿಲ್ಲ. ‘ಆಜಾದಿ’ ‘ಸ್ವಾತಂತ್ರ್ಯ’ ಎಂಬ ಪದ ಹಲವು ಸ್ವರೂಪಗಳನ್ನು, ಅರ್ಥಗಳನ್ನು ಹೊಂದಬಹುದಾಗಿದ್ದರೂ, ‘ಕಾಶ್ಮೀರ್‌ ಮಾಂಗೆ ಆಜಾದಿ’ (ಕಾಶ್ಮೀರಕ್ಕೆ ಬೇಕು ಸ್ವಾತಂತ್ರ್ಯ) ಎಂಬ ಕೂಗು ಭಾರತ ವಿರೋಧಿ ಎಂದು ಭಾವಿಸಲಾಗಿದೆ.

ಈ ಘೋಷಣೆಯನ್ನು ನಾವು ‘ಭಾರತ ವಿರೋಧಿ’ ಎಂದು ಒಪ್ಪಿಕೊಂಡರೂ, ಅದು ರಾಷ್ಟ್ರದ್ರೋಹ ಆಗುವುದಿಲ್ಲ. ವ್ಯಕ್ತಿಯೊಬ್ಬ ಸ್ಪಷ್ಟವಾಗಿ ಹಿಂಸೆಗೆ ಕರೆ ನೀಡಿದರೆ ಮಾತ್ರ, ಆತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಜೆಎನ್‌ಯು ಘಟನೆಗೆ ಸಂಬಂಧಿಸಿದ ದೃಶ್ಯಾವಳಿಯಲ್ಲಿ ಕನ್ಹಯ್ಯಾ ಅವರ ಧ್ವನಿ ಕೇಳಿಸುವುದಿಲ್ಲ ಎಂದು ನಮಗೆ ಈಗ ಹೇಳಲಾಗುತ್ತಿದೆ. ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬಾರದಿತ್ತು, ಅವರನ್ನು ಬಂಧಿಸಿ ಜೈಲಿಗೆ ತಳ್ಳಬಾರದಿತ್ತು, ವಕೀಲರು ನ್ಯಾಯಾಲಯದ ಆವರಣದಲ್ಲಿ ಕನ್ಹಯ್ಯಾ ಮೇಲೆ ದಾಳಿ ನಡೆಸಿದ್ದು ಕ್ರಿಮಿನಲ್ ಅಪರಾಧ. ಜೆಎನ್‌ಯು ವಿಚಾರದಲ್ಲಿ ಟ್ವೀಟ್‌ ಮಾಡಿ, ಕಟು ಹೇಳಿಕೆ ನೀಡಿದ ಪ್ರಧಾನಿ ಹಾಗೂ ಸ್ಮೃತಿ ಇರಾನಿ ಅವರು ಕನ್ಹಯ್ಯಾ ಬಳಿ ಕ್ಷಮೆ ಯಾಚಿಸಬೇಕು.

ಜೈಲಿನಿಂದ ಬಿಡುಗಡೆಯಾದ ನಂತರ ಕನ್ಹಯ್ಯಾ ಒಂದು ಭಾಷಣ ಮಾಡಿದರು. ಅದು ಅದ್ಭುತವಾಗಿತ್ತು ಎಂದು ಹಲವರು ಹೇಳಿದರು. ಹಾಗೆ ಹೇಳಿದವರಲ್ಲಿ ನಾನೂ ಒಬ್ಬ. ಕನ್ಹಯ್ಯಾ ವಿರುದ್ಧ ಬೆರಳು ತೋರಿಸುವುದನ್ನು ಬಿಜೆಪಿ ನಿಲ್ಲಿಸಬೇಕು, ಬಿಜೆಪಿ ಪಾಲಿಗೆ ಕನ್ಹಯ್ಯಾ ಅಪಾಯಕಾರಿ ಆಗಬಲ್ಲರು ಎಂದು ನಾನು ಹೇಳಿದ್ದೆ. ಪ್ರಧಾನಿಯವರ ಸ್ವಪ್ರತಿಷ್ಠೆಯ, ತೋರಿಕೆಯ ಮಾತುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಹುಲ್ ಗಾಂಧಿ ಅವರಿಗೆ ಸಾಧ್ಯವಿಲ್ಲ. ಆದರೆ ಕನ್ಹಯ್ಯಾ ಆ ಕೆಲಸ ಮಾಡಬಲ್ಲರು. ಕನ್ಹಯ್ಯಾ ಅವರ ಮಾತಿನ ವೈಖರಿ ಹಾಗಿದೆ. ಕನ್ಹಯ್ಯಾ ಅವರು ಜೈಲಿನಿಂದ ಹೊರಬಂದ ನಂತರ ನಾನು ಅವರನ್ನು ಭೇಟಿಯಾಗಿದ್ದೆ. ಅವರ ಭಾಷಣದಲ್ಲಿ ಕಂಡ ವ್ಯಕ್ತಿತ್ವ ಆ ಭೇಟಿಯಲ್ಲೂ ಕಾಣಿಸಿತು. ಕನ್ಹಯ್ಯಾ ಅವರು ಗಂಭೀರ ಆಲೋಚನೆಗಳಿರುವ ಸಭ್ಯ ವ್ಯಕ್ತಿ. ತಮ್ಮ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಹೆಚ್ಚಾಗಿ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಲು ಬಯಸುತ್ತಾರೆ.

ಜೈಲಿನಿಂದ ಬಿಡುಗಡೆ ಆದ ನಂತರ ಬಿಜೆಪಿಯ ವಿದ್ಯಾರ್ಥಿ ವಿಭಾಗವು ಕನ್ಹಯ್ಯಾ ಅವರನ್ನು ನಿರ್ಲಕ್ಷಿಸಿದೆ. ಬಿಜೆಪಿ ಕೂಡ ಕನ್ಹಯ್ಯಾ ಅವರನ್ನು ಉದ್ದೇಶಿಸಿ ಮಾತನಾಡುತ್ತಿಲ್ಲ. ಆ ಮೂಲಕ ಮಾಧ್ಯಮಗಳ ಗಮನ ಅವರತ್ತ ಹರಿಯದಂತೆ ಪಕ್ಷ ಜಾಣ ನಡೆ ಅನುಸರಿಸುತ್ತಿದೆ. ಕನ್ಹಯ್ಯಾ ವಿರುದ್ಧ ಸಾಕ್ಷ್ಯಗಳಿಲ್ಲ ಎಂಬ ಸುದ್ದಿಯ ಸೋರಿಕೆಯ ಹಿಂದೆ, ಅವರ ವಿಚಾರವನ್ನು ಕೈಬಿಟ್ಟು ಮುನ್ನಡೆಯುವ ಆಲೋಚನೆ ಇದ್ದಿರಬಹುದು.

ಆದರೆ ಈಗ ‘ದೇಶವಿರೋಧಿ’ ವಿಚಾರ ವಿಶ್ವವಿದ್ಯಾಲಯಗಳಲ್ಲಿ ಮತ್ತೆ ತಲೆ ಎತ್ತಿದೆ. ಈ ಬಾರಿ ಬೇರೆ ಯುವಕರು ರಾಷ್ಟ್ರದ ಗಮನ ಸೆಳೆದಿದ್ದಾರೆ. ಹುತಾತ್ಮ ಯೋಧನ ಪುತ್ರಿ ಗುರ್‌ಮೆಹರ್‌ ಕೌರ್ ಅವರು ಯುದ್ಧದ ಬಗ್ಗೆ ನೀಡಿದ ಹೇಳಿಕೆ, ಅದಕ್ಕೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿದ ಪ್ರತಿಕ್ರಿಯೆ ದೇಶದ ಗಮನ ಸೆಳೆದಿವೆ. ದೇಶವಿರೋಧಿ ಎಂಬ ವಿಚಾರದ ಚರ್ಚೆಗೆ ಎರಡು ಬದಿಗಳು ಇವೆ ಎಂಬುದು ನಿಜ. ಆದರೆ ಒಂದು ಬದಿಯ ಗುಂಪು ಮಾತ್ರ ಹಿಂಸಾತ್ಮಕವಾಗಿದೆ, ಹಿಂಸೆಯ ಮಾರ್ಗವನ್ನು ಒಪ್ಪುತ್ತಿದೆ. ಅಂತಹ ನಿಲುವು ಇರುವುದು ಇಂದಿನ ಸರ್ಕಾರ ಹಾಗೂ ಅದರ ಜೊತೆ ಗುರುತಿಸಿಕೊಂಡಿರುವ ಎಬಿವಿಪಿಯಂತಹ ಗುಂಪುಗಳಲ್ಲಿ ಮಾತ್ರ.

ತಾವು ಮಾಡುವ ಕೆಲಸಗಳನ್ನು ಮಾಧ್ಯಮಗಳು, ಜನಸಾಮಾನ್ಯರು ತೃಣಮಾತ್ರವೂ ಇಷ್ಟಪಡುವುದಿಲ್ಲ ಎಂಬುದು ತಿಳಿದಿದ್ದರೂ ತೊಂದರೆಗೆ ಸಿಲುಕಿಕೊಳ್ಳಲು ವಿದ್ಯಾರ್ಥಿಗಳು ಏಕೆ ಸಿದ್ಧರಿರುತ್ತಾರೆ, ಏಕೆ ಹಿಂಸೆ ಎದುರಿಸುತ್ತಾರೆ ಎಂಬುದು ಈಗಿನ ಪ್ರಶ್ನೆ. ಇದಕ್ಕೆ ಕಾರಣವಿದೆ. ಹಿಂಸೆಯನ್ನು ಒಡಲೊಳಗೆ ಇಟ್ಟುಕೊಂಡಿರುವ ಬಹುಸಂಖ್ಯಾತವಾದವನ್ನು ಪ್ರತಿಪಾದಿಸುವ ಸಿದ್ಧಾಂತಕ್ಕೆ ಪ್ರತಿರೋಧ ಒಡ್ಡಲು ದೇಶದಲ್ಲಿ ವೇದಿಕೆಗಳು ಇಲ್ಲ.

ಕಟ್ಟರ್ ರಾಷ್ಟ್ರೀಯತೆಯ ಕಾರ್ಯಸೂಚಿಯನ್ನು ಬಿಜೆಪಿ ಮತ್ತು ಅದರ ಹಿಂದುತ್ವವಾದಿ ಗುಂಪುಗಳು ಮುಂದೊತ್ತುತ್ತಿವೆ. ರಾಷ್ಟ್ರಗೀತೆ, ಧ್ವಜ, ಕಾಶ್ಮೀರ, ಮಾವೊವಾದ ಅಥವಾ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ತಮಗೆ ಒಪ್ಪಿಗೆಯಾಗದ ಅಭಿಪ್ರಾಯಗಳನ್ನು ಈ ಗುಂಪುಗಳು ಸಹಿಸುವುದಿಲ್ಲ. ಇತರ ರಾಜಕೀಯ ಪಕ್ಷಗಳು ರಾಷ್ಟ್ರೀಯತೆಯ ಚರ್ಚೆಯಿಂದ ಪಲಾಯನಗೈದಿವೆ. ವೈಯಕ್ತಿಕ ಹಕ್ಕುಗಳು, ಮುಕ್ತ ಅಭಿವ್ಯಕ್ತಿ ಮತ್ತು ನಾಗರಿಕ ಹಕ್ಕುಗಳ ಪರವಾಗಿ ಮಾತನಾಡುವುದರಿಂದ ಚುನಾವಣೆಗಳಲ್ಲಿ ಹೆಚ್ಚಿನ ಲಾಭ ಸಿಗುವುದಿಲ್ಲ ಎಂದು ಕಾಂಗ್ರೆಸ್ ಭಾವಿಸಿದೆ.

ಜನರ ಭಾವನೆಗಳು ರಾಷ್ಟ್ರೀಯತೆಯ ಪರ ಇವೆ ಎಂದು ನ್ಯಾಯಾಲಯಗಳು ತೀರ್ಮಾನಿಸಿವೆ. ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ನುಡಿಸಬೇಕು ಎಂಬ ಈಚಿನ ಆದೇಶ ಇದನ್ನು ತೋರಿಸುತ್ತದೆ. ಮಾಧ್ಯಮ ಎಂಬುದು ಲಾಭ–ನಷ್ಟ ಉದ್ಯಮ. ಹಾಗಾಗಿ ಅವು ಬಹುಸಂಖ್ಯಾತ ಅಭಿಪ್ರಾಯಕ್ಕೆ ತಲೆಬಾಗಬೇಕು. ಪತ್ರಿಕೆಗಳು ಒಂದು ಹಂತದ ಮಟ್ಟಿಗೆ ತಮ್ಮ ಸಂಪಾದಕೀಯ ಪುಟಗಳಲ್ಲಿ ಭಿನ್ನ ಅಭಿಪ್ರಾಯಗಳಿಗೆ ಜಾಗ ಕೊಡಬಹುದು. ಆದರೆ ಇದು ಟಿ.ವಿ. ವಾಹಿನಿಗಳಿಗೆ ಸಾಧ್ಯವಿಲ್ಲ. ತಮ್ಮ ರೇಟಿಂಗ್‌ ಹೆಚ್ಚಿರಬೇಕು ಎಂದಾದರೆ ಸುದ್ದಿ ವಾಹಿನಿಗಳು ಬಹುಸಂಖ್ಯಾತರ ಜೊತೆ ಇರಬೇಕಾಗುತ್ತದೆ.

ಹಾಗಾಗಿ, ಪ್ರತಿರೋಧ ಹಾಗೂ ಅಭಿಪ್ರಾಯಭೇದ ದಾಖಲಿಸಲು ಇರುವ ಏಕೈಕ ವೇದಿಕೆ ವಿಶ್ವವಿದ್ಯಾಲಯ. ಹಾಗಾಗಿ, ಧೈರ್ಯಶಾಲಿಗಳಾದ ಕನ್ಹಯ್ಯಾ, ಉಮರ್ ಖಾಲಿದ್, ಗುರ್‌ಮೆಹರ್ ಕೌರ್‌, ಶೇಹ್ಲಾ ರಷೀದ್‌ ಅವರಂತಹ ವಿದ್ಯಾರ್ಥಿಗಳು ಹಿಂದುತ್ವದ ವಿರುದ್ಧ ವಿಶ್ವವಿದ್ಯಾಲಯಗಳಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ತಪ್ಪು ಮಾತು ಆಡುತ್ತಿಲ್ಲ. ಕಾಶ್ಮೀರಿಗಳ ಜೊತೆ ಸಂವಾದ ಆರಂಭಿಸುವುದರಲ್ಲಿ ತಪ್ಪೇನಿದೆ?  ನಾವು ನಮ್ಮ ಆದಿವಾಸಿಗಳನ್ನು ಮತ್ತು ದಲಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದರಲ್ಲಿ ಪ್ರಮಾದ ಏನಿದೆ?

ಈ ವಿಚಾರಗಳ ಬಗ್ಗೆ ನಾನು ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಂ.ಎಸ್. ಗಿಲ್ (ದೇಶದ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಪರಿಚಯಿಸಿ, ನಮ್ಮ ಚುನಾವಣಾ ಪ್ರಕ್ರಿಯೆಯನ್ನು ವಿಶ್ವದ ಅತ್ಯುತ್ತಮ ಪ್ರಕ್ರಿಯೆಗಳಲ್ಲಿ ಒಂದಾಗಿಸಿದವರು ಇವರು) ಅವರ ಜೊತೆ ಮಾತನಾಡುತ್ತಿದ್ದೆ. ಒಂದು ವಿಶ್ವವಿದ್ಯಾಲಯ ಮಹಾನ್ ಆಗುವುದು ಹೇಗೆ ಎಂದು ಪ್ರಶ್ನಿಸಿದೆ. ಕೇಂಬ್ರಿಜ್ ವಿಶ್ವವಿದ್ಯಾಲಯ ನೋಡಿರುವ ಅವರು, ‘ಮುಕ್ತ ಚಿಂತನೆಗೆ ಅವಕಾಶ ನೀಡುವುದು’ ಎಂದರು. ನಮ್ಮ ಧೈರ್ಯಶಾಲಿ ಯುವಕರು ಬಯಸುತ್ತಿರುವುದು ಈ ಹಕ್ಕನ್ನು. ಹಿಂದಿನ ವರ್ಷ ಕೂಡ ಅವರು ಕೇಳಿದ್ದು ಇದನ್ನೇ. ಆಗ ಅವರನ್ನು ನಿಂದಿಸಲಾಯಿತು. ಅವರ ಮೇಲೆ ಹಲ್ಲೆ ನಡೆಸಲಾಯಿತು. ತಾವೇ ಖಳನನ್ನಾಗಿ ಚಿತ್ರಿಸಿದ ವ್ಯಕ್ತಿಯು ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ ಎಂದು ಮೋದಿ ನೇತೃತ್ವದ ಸರ್ಕಾರದ ಪೊಲೀಸರು ಈಗ ಹೇಳುತ್ತಿದ್ದಾರೆ, ಅದು ಬೇರೆಯ ಸಂಗತಿ.

ಈಗ ‘ರಾಷ್ಟ್ರ ವಿರೋಧಿ’ಗಳ ವಿರುದ್ಧ ಇನ್ನೊಂದು ಸುತ್ತಿನ ದ್ವೇಷ ಕಾರುವಿಕೆ ಆರಂಭವಾದರೆ, ನಾವು ಅವರ ಬೆಂಬಲಕ್ಕೆ ನಿಲ್ಲಬೇಕು. ಅವರ ವಾದಗಳನ್ನು ನಾವು ಒಪ್ಪುತ್ತೇವೆಯೋ ಇಲ್ಲವೋ ಎಂಬುದು ಬೇರೆಯ ವಿಚಾರ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT