ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕ ಮಹಾಪ್ರಭುವಿಗೆ ನಮಸ್ಕಾರ

Last Updated 2 ಮೇ 2013, 19:59 IST
ಅಕ್ಷರ ಗಾತ್ರ

ಭಾರತೀಯ ಸಿನಿಮಾ ಎನ್ನುವುದು ಹಲವಾರು ಭಾಷೆಗಳ ಒಕ್ಕೂಟ. ಹಲವು ಭಾಷೆ, ವಿವಿಧ ಸಂಸ್ಕೃತಿ ಸಿನಿಮಾ ಮೂಲಕ ಪ್ರತಿಫಲನವಾಗುತ್ತಿದೆ. ನಮ್ಮ ಮೊದಲ ಹಂತದ ಎಲ್ಲ ವಾಕ್ಚಿತ್ರಗಳು ಬಾಗಿಲು ತೆರೆದು ಮೊದಲು ಧಾರೆ ಎರೆದದ್ದೇ ಉಪಸಂಸ್ಕೃತಿಯ ಕಥೆಗಳ ಮೂಲಕ (`ರಾಜಾ ಹರಿಶ್ಚಂದ್ರ', `ಸತಿ ಸುಲೋಚನ', `ಕಾಳಿದಾಸ', `ಭಕ್ತಪ್ರಹ್ಲಾದ', `ಜೋಯ್‌ಮತಿ').

ವಾಕ್ಚಿತ್ರದಲ್ಲಿ ಹಾಡು, ನೃತ್ಯ ಇವೆಲ್ಲಾ ಜನಪದ ಸಂಸ್ಕೃತಿಯ ಪರಂಪರೆಯ ಭಾಗವಾಗಿಯೇ ಕಾಣಿಸಿಕೊಂಡವು. ಹಿಂದಿಯಲ್ಲಿ ನೂರು ವರ್ಷಗಳ ಹಿಂದೆ ಮೊದಲ ಕಥಾಚಿತ್ರ ತಯಾರಿಕೆಯೊಂದಿಗೆ ಸಿನಿಮಾ ತಯಾರಿಕೆ ಆರಂಭವಾದರೂ ಬೇರೆ ಭಾಷೆಗಳ ಚಿತ್ರಗಳು ಕೆಲವೇ ತಿಂಗಳಲ್ಲಿ ಮುಖ್ಯವಾಹಿನಿಯೊಂದಿಗೆ ಸೇರಿಕೊಂಡವು. ವಾಕ್ಚಿತ್ರವೊಂದು ಮುಂಬೈನಲ್ಲಿ ತಯಾರಾಗಲಿ, ಕೋಲ್ಕತ್ತಾದಲ್ಲಿ ತಯಾರಾಗಲಿ, ಮದ್ರಾಸಿನಲ್ಲೇ ತಯಾರಾಗಲಿ ಏಕಸೂತ್ರವೊಂದನ್ನು ಹೊಂದಿದೆ ಎನ್ನುವುದೇ ಕುತೂಹಲಕಾರಿ ವಿಷಯ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ಭಾಷೆಗಳಲ್ಲಿ ವಾಕ್ಚಿತ್ರ ತಯಾರಾದರೂ ಅದರಲ್ಲಿ ಸಮಾನಚಿಂತನೆ ಇತ್ತು. ವಿವಿಧತೆಯಲ್ಲಿ ಏಕತೆ ಸಾಧಿಸಿದ, ಏಕರೂಪದ ಚಿಂತನೆಯನ್ನು ಪ್ರವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿನಿಮಾ ಒಂದು ರಾಷ್ಟ್ರದ ಕಲ್ಪನೆಯ ಒಳಗೆ ಪ್ರೇಕ್ಷಕರ ಮನೋಭಾವವನ್ನು ರೂಪಿಸಿತು. ನಂತರ ಸಿನಿಮಾ ಅಂತರಂಗ ಪ್ರವೇಶಿಸಿದ ಪ್ರೇಕ್ಷಕ ಸಿನಿಮಾ ನಡೆ ಹೇಗಿರಬೇಕೆಂದು ಮುನ್ನಡೆಸತೊಡಗಿದ. ಈ ರೀತಿಯ ಅನುಸಂಧಾನ ಭಾರತೀಯ ಸಿನಿಮಾದ ಹೆಗ್ಗಳಿಕೆ ಎನ್ನಬಹುದು. ಹೀಗಾಗಿ ಭಾರತೀಯ ಪ್ರೇಕ್ಷಕ ತನ್ನದಲ್ಲದ ಭಾಷೆಯ ಚಿತ್ರಗಳನ್ನೂ ನೋಡಿ ಅನುಭವಿಸಲು ಸಾಧ್ಯವಾಯಿತು. ವಿಶ್ವದಲ್ಲೇ ಅತಿ ಹೆಚ್ಚು ಚಿತ್ರಗಳು ಭಾರತದಲ್ಲಿ ತಯಾರಾಗುತ್ತವೆ ಎಂದರೆ, ಅದಕ್ಕೆ ಪ್ರೇಕ್ಷಕನ ಈ ಮನೋಭಾವವೇ ಕಾರಣ. ಭಾರತೀಯ ಚಲನಚಿತ್ರಕ್ಕೆ ಪ್ರೇಕ್ಷಕನೇ ಅತಿದೊಡ್ಡ ಶಕ್ತಿ. ಪ್ರೇಕ್ಷಕ ಮತ್ತು ಸಿನಿಮಾ ನಡುವೆ ಬೆಳೆದ ಸಂಬಂಧ ಕಳೆದ ನೂರು ವರ್ಷಗಳಲ್ಲಿ ಮತ್ತೂ ಮತ್ತೂ ನಿಕಟವಾಗಿದೆ.

ಭಾರತೀಯ ಸಿನಿಮಾಕ್ಕೆ ನೂರು ತುಂಬಿತು. ಇದು ನಿಜಕ್ಕೂ ಸಂಭ್ರಮದ ಸಂಗತಿ. ಬಡತನವೇ ಮೈವೆತ್ತಿದ್ದ, ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದ, ಬ್ರಿಟೀಷರ ಆಳ್ವಿಕೆಯಲ್ಲಿ ನಲುಗಿದ್ದ ಭಾರತದಲ್ಲೂ ಸಿನಿಮಾ ಕಣ್ಣುಬಿಡುವಂತಾಯಿತು. ತಳ ಊರುವಂತಾಯಿತು. 19ನೇ ಶತಮಾನದ ಕೊಡುಗೆ. ಭಾರತಕ್ಕೆ ಪುಳಕದ ಕ್ಷಣ. 118 ವರ್ಷಗಳ ಹಿಂದೆ (28ನೇ ಡಿಸೆಂಬರ್ 1895) ಪ್ಯಾರಿಸ್‌ನಲ್ಲಿ ಲೂಮಿಯೇರ್ ಸಹೋದರರು ಪ್ರಪ್ರಥಮವಾಗಿ ಸಿನಿಮಾಟೋಗ್ರಾಫ್ ಪ್ರದರ್ಶನ ಮಾಡಿದರು. ಒಂದು ಅದ್ಭುತ ಆವಿಷ್ಕಾರ ಅದು. ಅದು ವಿಶ್ವ ಸಿನಿಮಾದ ಹುಟ್ಟುಹಬ್ಬ. ಆ ಸಮಯದಲ್ಲಿ ಭಾರತ ತೀರಾ ಹಿಂದುಳಿದ ರಾಷ್ಟ್ರ. ಪ್ಯಾರಿಸ್ ಪ್ರದರ್ಶನದ ನಂತರದ ಮೂರೇ ತಿಂಗಳಲ್ಲಿ ಎಡಿಸನ್‌ನ ವಿಟಾಸ್ಕೋಪ್ ಅಮೆರಿಕದ ಪ್ರೇಕ್ಷಕರಿಗಾಗಿ ನ್ಯೂಯಾರ್ಕ್ ಸಿಟಿಯಲ್ಲಿ 23ನೇ ಏಪ್ರಿಲ್ 1896ರಲ್ಲಿ ಪ್ರದರ್ಶನ ಕಂಡಿತು.

ವಿದೇಶಗಳಲ್ಲಿ ಪ್ರೇಕ್ಷಕರ ಪುಳಕಕ್ಕೆ ಕಾರಣವಾದ ಈ ಆವಿಷ್ಕಾರ ಭಾರತಕ್ಕೆ ಬರಲು ಮೂರು ತಿಂಗಳುಗಳೇ ಬೇಕಾದವು. ಮುಂಬೈನ ಮ್ಯೂಸಿಯಂ ಪ್ರದೇಶದಲ್ಲಿರುವ ಪ್ರತಿಷ್ಠಿತ ವ್ಯಾಟ್ಸನ್ ಹೋಟೆಲ್‌ನಲ್ಲಿ, ಲೂಮಿಯೇರ್ ಸಹೋದರರ ಪರವಾಗಿ ಫ್ರಾನ್ಸ್‌ನಿಂದ ಆಗಮಿಸಿದ್ದ ಅವರ ಏಜೆಂಟರು ಪ್ರಪ್ರಥಮ ಪ್ರದರ್ಶನ ಏರ್ಪಡಿಸಿದರು. ಭಾರತದಲ್ಲಿ ಸಿನಿಮಾ ಮೊಳಕೆ ಹೊಡೆಯಲು ಆರಂಭಿಸಿದ್ದೇ ಹೀಗೆ. ವಿಜ್ಞಾನವಾಗಿ ಆವಿಷ್ಕಾರಗೊಂಡು, ಕಲೆಯಾಗಿ ರೂಪು ಪಡೆದು, ವಾಣಿಜ್ಯ ಉದ್ಯಮವಾಗಿ ನಿರ್ವಹಣೆಯಾಗುತ್ತಿರುವ ಸಿನಿಮಾ ಎಂಬ ಜಾದೂ ನೂರು ವರ್ಷದ ನಂತರವೂ ಆರಂಭದ ದಿನಗಳ ಪುಳಕವನ್ನೇ ಉಳಿಸಿಕೊಂಡಿದೆ.

ಸಿನಿಮಾಕ್ಕೆ ಮಾಂತ್ರಿಕ ಶಕ್ತಿಯೊಂದಿದೆ. ಜನಪದ ಕಣಜವಾದ ನಮ್ಮ ನೆಲದಲ್ಲಿ ಕತೆ ಹೇಳುವ, ಕತೆ ಕಟ್ಟುವ, ಹಾಡುವ, ಕುಣಿಯುವ ಮನೋಧರ್ಮವಿದೆ. ಭಾರತದ ಉದ್ದಗಲಕ್ಕೆ ಪ್ರವಹಿಸುತ್ತಿರುವ ಇಂತಹ ನಿಸ್ತಂತು ಪರಿಣತಮತಿ ಸಿನಿಮಾವನ್ನು ಜೀವಂತವಾಗಿಟ್ಟಿದೆ. ಮೂಕಿಯಿಂದ ಟಾಕಿ, ವಿಶಾಲ ಪರದೆ, ಡಿಜಿಟಲ್, ಸಿನೇರಮಾ, ಗ್ರಾಫಿಕ್ಸ್, ತ್ರೀ ಡಿ ಹೀಗೆ ನಾನಾ ಅವತಾರಗಳಲ್ಲಿ ಸಿನಿಮಾ ರೂಪಾಂತರ ತಾಳುತ್ತಿರುವುದು ಪ್ರೇಕ್ಷಕನ ಅಭಿರುಚಿಗೆ ಅನುಗುಣವಾಗಿಯೇ. ಚಿತ್ರಮಂದಿರಗಳ ಮಾರ್ಪಾಡು, ನಾಯಕ  ನಾಯಕಿಯರ ಕಲ್ಪನೆ, ಹಾಡಿನ ಸೊಗಸು ಮೊದಲಾದವೆಲ್ಲಾ ರೂಪುಗೊಂಡಿರುವುದೇ ಬದಲಾಗುತ್ತಿರುವ ಪ್ರೇಕ್ಷಕನ ಕಾಲದಿಂದ ಕಾಲಕ್ಕೆ ಬದಲಾಗುವ ಅಭಿರುಚಿಗೆ ಅನುಗುಣವಾಗಿ. ವ್ಯಾಟ್ಸನ್ ಹೋಟೆಲ್‌ನಲ್ಲಿ ಫ್ರಾನ್ಸ್‌ನಿಂದ ಬಂದ ಲೂಮಿಯೇರ್ ಸಹೋದರರು ಕಳುಹಿಸಿದ್ದ ಏಜೆಂಟರು ಮಾಡಿದ ಚಲನಚಿತ್ರ ಪ್ರದರ್ಶನ ಮೂಡಿಸಿದ ಸಂಚಲನ, ಇಡೀ ಆವಿಷ್ಕಾರಕ್ಕೆ ವಾಣಿಜ್ಯ ಸ್ವರೂಪವನ್ನು ತಂದುಕೊಟ್ಟಿತು. ಜನದಟ್ಟಣೆ ತಡೆಗೆ ನಾವೆಲ್ಟಿ ರಂಗಮಂದಿರದಲ್ಲಿಯೂ ಪ್ರದರ್ಶನ ಏರ್ಪಾಡು ಮಾಡಲಾಯಿತು. ಹನ್ನೆರೆಡು ಚಿತ್ರಪಟಗಳು ಜನರ ಆಕರ್ಷಣೆಗೆಂದೇ ಇದ್ದವು.

ಸಿನಿಮಾ ಪ್ರದರ್ಶನದಿಂದ ದುಡ್ಡು ಮಾಡಬೇಕೆಂಬ ತುಡಿತ ಚಲನಚಿತ್ರ ಪ್ರದರ್ಶನದ ಆರಂಭದ ದಿನಗಳಿಂದಲೇ ಆರಂಭವಾಗಿದೆ. ವ್ಯಾಟ್ಸನ್ ಹೋಟೆಲ್‌ನಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಒಂದು ರೂಪಾಯಿ ಪ್ರವೇಶ ದರ. ನಾವೆಲ್ಟಿ ರಂಗಮಂದಿರದಲ್ಲಿ ಎರಡು ರೂಪಾಯಿ. ಇದನ್ನು `ಡ್ರೆಸ್ ಸರ್ಕಲ್' ಎಂದು ಕರೆಯುತ್ತಿದ್ದರು. ಎರಡನೆ ದರ್ಜೆ ಟಿಕೆಟ್‌ಗೆ ಒಂದು ರೂಪಾಯಿ. ಕೊನೆಯ ಸೀಟುಗಳಿಗೆ ಎಂಟಾಣೆ. ಚಲನಚಿತ್ರವನ್ನು ಆಗ ಮುಂಭಾಗದ ಸೀಟುಗಳಲ್ಲಿ ಕುಳಿತು ನೋಡುವುದೇ ಪ್ರತಿಷ್ಠೆಯ ವಿಷಯವೆನಿಸಿತ್ತು. ಚಿತ್ರಮಂದಿರದ ಕೊನೆಯಲ್ಲಿ ಚಾಪೆಯ ಮೇಲೆ ಕುಳಿತು ನೋಡುವುದು ಬಡವರ ಹಣೆಬರಹ ಎನ್ನುವಂತಿತ್ತು. ಬ್ರಿಟೀಷರ ರಾಜ್ಯಭಾರದಲ್ಲಿ ಇದು ಸಹಜವಾದ ನಡವಳಿಕೆ ಎನ್ನುವಂತೆಯೇ ಇತ್ತು.

ಕಾಲಕ್ರಮೇಣ ಎಂಟಾಣೆ ಕೊಟ್ಟವರು ಮುಂದೆ ಕುಳಿತು ನೋಡುವ ರೀತಿನೀತಿ ರೂಪಿತವಾಯಿತು. ಈ ಮನರಂಜನೆ ಕೇವಲ ಆಂಗ್ಲಾಧಿಕಾರಿಗಳಿಗೆ ಮಾತ್ರ ಮೀಸಲು ಎಂಬ ಕಲ್ಪನೆಯ ಕಟ್ಟೆಯನ್ನು ಎಂಟಾಣೆ ಪ್ರೇಕ್ಷಕರು ನುಚ್ಚುನೂರು ಮಾಡಿದರು. ಚಲನಚಿತ್ರ ಸಮೂಹ ಮಾಧ್ಯಮ ಎಂಬುದು ರುಜುವಾಯಿತು. ಆರಂಭದ ಇಂತಹ ಪದ್ಧತಿಗಳು ಸಿನಿಮಾ ಹಂತಹಂತವಾಗಿ ಬೆಳೆದಂತೆಲ್ಲಾ ಪರಿವರ್ತನೆಯಾದವು. ಕಡೆಯ ಸೀಟ್‌ಗೆ ಸೀಮಿತವಾಗಿದ್ದ ಪ್ರೇಕ್ಷಕ ಮುಂದಿನ ಸಾಲಿಗೆ ಸ್ಥಳಾಂತರಗೊಂಡು `ಗಾಂಧೀ ಕ್ಲಾಸ್'ನ ಮಹಾಪ್ರಭು ಎನಿಸಿಕೊಂಡ. ಮಳೆಗಾಲ ಆರಂಭವಾದಾಗ ರೈತಾಪಿ ಜನ ಹೊಲ ಗದ್ದೆಗಳ ಕಡೆ ತೆರಳಿದರು. ಅವರವರ ಕೆಲಸ ಕಾರ್ಯದಲ್ಲಿ ನಿರತರಾದರು. ಆಗ ಜನರಿದ್ದೆಡೆಯೇ ಚಿತ್ರ ತೋರಿಸುವ `ಟೂರಿಂಗ್ ಟಾಕೀಸ್' ಕಲ್ಪನೆ ಹುಟ್ಟಿಕೊಂಡಿತು. ಟೆಂಟ್ ಸಿನಿಮಾ, ಟೂರಿಂಗ್ ಟಾಕೀಸ್ ಕಲ್ಪನೆಗಳು ಜನ್ಮ ತಾಳಿ, ಜನರಿದ್ದೆಡೆಯೇ ಹೋಗಿ ಚಲನಚಿತ್ರ ಪ್ರದರ್ಶಿಸುವ ವ್ಯವಸ್ಥೆಯಾಯಿತು. ಸಿನಿಮಾಗಾಗಿ ಜನ ಕಾಯುವುದು, ಜನರಿಗಾಗಿ ಸಿನಿಮಾದವರೂ ಎಲ್ಲ ಕಡೆ ಹೋಗುವುದು ಆರಂಭವಾಯಿತು. ಶ್ರೀಸಾಮಾನ್ಯನಿಗೆ ಸಿನಿಮಾ ಮನರಂಜನೆಯ ಪ್ರಮುಖ ಮಾಧ್ಯಮವಾಯಿತು. ಅವನ ಕನಸುಗಳಿಗೆ ಬಣ್ಣತುಂಬುವ ಕನಸಿನಲೋಕವಾಗಿ ಮಾರ್ಪಟ್ಟಿತು. ನೂರು ವರ್ಷಗಳ ಕಾಲವೂ ಪ್ರೇಕ್ಷಕ ಮಹಾಪ್ರಭು ಸಿನಿಮಾವನ್ನು ಈ ರೀತಿ ಕೈಹಿಡಿದಿರುವುದರಿಂದಲೇ ಚಲನ ಚಿತ್ರರಂಗ ಇಂದು ದೇಶದ ಅತಿ ದೊಡ್ಡ ಉದ್ಯಮಗಳ ಪೈಕಿ ಒಂದಾಗಿದೆ. ಅಂತಹ ಪ್ರೇಕ್ಷಕ ಮಹಾಪ್ರಭುವಿಗೆ ಚಲನ ಚಿತ್ರರಂಗದ ಶತಮಾನೋತ್ಸವ ಸಂದರ್ಭದಲ್ಲಿ ಒಂದು ನಮಸ್ಕಾರ.

ಬ್ರಿಟೀಷರು ಭಾರತಕ್ಕೆ ಮೊದಲು ಬಂದದ್ದೇ ವ್ಯಾಪಾರಕ್ಕೆ. ಹೀಗೆ ಬಂದವರು ದೇಶವನ್ನೇ ಆಕ್ರಮಿಸಿಕೊಂಡರು. ಲೂಮಿಯೇರ್ ಸಹೋದರರು ಕೂಡ ಚಲನಚಿತ್ರವೆಂಬ ಆವಿಷ್ಕಾರವನ್ನು ಪ್ರದರ್ಶನ ಮಾಡಿ ಸಾಧನೆ ಮೆರೆಯಬೇಕೆಂಬ ಪರಮೋದ್ದೇಶದಿಂದೇನೂ ಭಾರತಕ್ಕೆ ಬಂದು ವ್ಯಾಟ್ಸನ್ ಹೋಟೆಲಿನಲ್ಲಿ ಪ್ರದರ್ಶನ ಏರ್ಪಡಿಸಲಿಲ್ಲ. ಕ್ಯಾಮರಾ ಹಾಗೂ ಇತರ ಪೂರಕ ಸಲಕರಣೆಗಳ ಮಾರಾಟವೇ ಅವರ ಮುಖ್ಯ ಉದ್ದೇಶವಾಗಿತ್ತು. ಅತಿ ದೊಡ್ಡ ತೆರೆಯ ಮೇಲೆ ಜೀವಂತವಾಗಿ ವ್ಯಕ್ತಿಗಳ ಚಲನೆ, ನೆರಳು ಬೆಳಕಿನಾಟ ಮುಂಬೈ ಪ್ರೇಕ್ಷಕರನ್ನು ಸ್ಥಂಭೀಭೂತರನ್ನಾಗಿಸಿತ್ತು. ಸಮುದ್ರ ಸ್ನಾನ, ರೈಲಿನ ಆಗಮನ, ಗೋಡೆಯನ್ನು ಕೆಡಹುವುದು, ಕಾರ್ಖಾನೆಯಿಂದ ಕಾರ್ಮಿಕರು ಹೊರಬರುತ್ತಿರುವುದು ಇಂತಹ ಕಿರುಚಿತ್ರಗಳ ಪ್ರದರ್ಶನ ಕಂಡು ಜನ ನಿಬ್ಬೆರಗಾದರು. ಈ ಬೆರಗು, ಮುಂದೆ ಚಲನಚಿತ್ರ ತಯಾರಿಕೆಯ ಕೇಂದ್ರಕ್ಕೆ ಬುನಾದಿ ಹಾಕಿತು. ಕ್ಲಿಪ್ಟನ್, ಮೆಟ್ಜರ್ ಕಂಪೆನಿಗಳು ಕ್ಯಾಮರಾ ಪ್ರೊಜೆಕ್ಟರ್‌ಗಳನ್ನು ಭಾರತಕ್ಕೆ ತಂದವು.

ಕಿರುಚಿತ್ರ ತಯಾರಿಸಿದರೆ ಸಂಸ್ಕರಣ ಮತ್ತು ಪ್ರಿಂಟ್ ಉಚಿತ ಎಂಬ ಸೇವೆ ಒದಗಿಸಿದವು. ವಿದೇಶಿ ಕ್ಯಾಮರಾಮನ್‌ಗಳು ಭಾರತಕ್ಕೆ ಬಂದು ದೆಹಲಿ, ಲಖ್ನೊಗಳಲ್ಲಿನ ದೃಶ್ಯಾವಳಿಗಳನ್ನು ಸೆರೆಹಿಡಿದು ತೋರಿಸಲಾರಂಭಿಸಿದರು. ಈಗಾಗಲೇ ಕ್ಯಾಮರಾ ಮಾರಾಟದಲ್ಲಿ ಆಸಕ್ತಿ ತಳೆದಿದ್ದ ಸಾವೆದಾದ (ಎಚ್.ಎಸ್. ಬಟವಾಡೆಕರ್) ಇದರಿಂದ ಆಕರ್ಷಿತರಾದರು. ತಮ್ಮದೇ ಮೂವಿ ಕ್ಯಾಮರಾದಲ್ಲಿ ಇಬ್ಬರು ಕುಸ್ತಿ ಪಟುಗಳ ಕುಸ್ತಿ ಹಾಗೂ ಮನುಷ್ಯನೊಬ್ಬ ಕೋತಿಗೆ ತರಬೇತಿ ನೀಡುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿದರು. 1899ರಲ್ಲೇ ಸಾವೆದಾದ ಈ ಸಾಹಸ ಮಾಡಿ, ಮೊಟ್ಟ ಮೊದಲಿಗೆ ಚಲಿಸುವ ಕಿರುಚಿತ್ರವೊಂದನ್ನು ತಯಾರಿಸಿದ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು.

1903ರಲ್ಲಿ ದೆಹಲಿ ದರ್ಬಾರ್ ಚಿತ್ರೀಕರಿಸಿದರು. ಅದೇ ಕಾಲಕ್ಕೆ ಎಫ್.ಬಿ. ಥಾನೆವಾಲ ಹಾಗೂ ಕಲ್ಕತ್ತಾದಿಂದ ಹೀರಾಲಾಲ್ ಸೇನ್ ಸಿನಿಮಾ ತಯಾರಿಕೆಗೆ ಇಳಿದರು. ಕ್ರಮೇಣ ಕಥಾಚಿತ್ರಗಳು ಬೇರೆ ಬೇರೆ ದೇಶಗಳಲ್ಲಿ ತಯಾರಾಗಲಾರಂಭಿಸಿದವು. `ಲೈಫ್ ಆಫ್ ಕ್ರೈಸ್ಟ್', `ಟ್ರಿಪ್ ಟು ದಿ ಮೂನ್', ಎಡ್ವಿನ್ ಪೋರ್ಟರ್ಸ್‌ನ `ಗ್ರೇಟ್ ಟ್ರೈನ್ ರಾಬರಿ' ಮತ್ತು `ಅಂಕಲ್ ಟಾಮ್ಸ ಕ್ಯಾಬಿನ್' ಮೊದಲಾದ ಚಿತ್ರಗಳು 1901ರಿಂದ 1907ರ ಅವಧಿಯಲ್ಲಿ ಬಂದವು. `ಲೈಫ್ ಆಫ್ ಕ್ರೈಸ್ಟ್'ನಿಂದ ಸ್ಫೂರ್ತಿ ಪಡೆದಿದ್ದ ದಾದಾ ಸಾಹೇಬ್ ಫಾಲ್ಕೆ `ರಾಜಾ ಹರಿಶ್ಚಂದ್ರ' ಚಿತ್ರವನ್ನು 3ನೇ ಮೇ 1913ರಲ್ಲಿ ತಯಾರಿಸಿ ಬಿಡುಗಡೆ ಮಾಡುವುದರೊಂದಿಗೆ ಕಥಾಚಿತ್ರಗಳ ತಯಾರಿಕೆ ಭಾರತದಲ್ಲಿ ಖಾತೆ ತೆರೆಯಿತು. ಕೋಲ್ಕತ್ತಾದಲ್ಲಿ ಹೀರಾಲಾಲ್‌ಸೇನ್, ತಮಿಳುನಾಡಿನಲ್ಲಿ ಆರ್. ನಟರಾಜ ಮೊದಲಿಯಾರ್, ಸುಬ್ರಹ್ಮಣ್ಯಂ, ಎಸ್.ಎಸ್. ವಾಸನ್, ಆಂಧ್ರದಲ್ಲಿ ಬಿ.ಎನ್. ರೆಡ್ಡಿ, ಮುಂಬೈನಲ್ಲಿ ಹಿಮಾಂಶುರಾಯ್, ವಿ. ಶಾಂತಾರಾಂ, ರಾಜ್‌ಕಫೂರ್, ಮೃಣಾಲ್‌ಸೇನ್, ಶ್ಯಾಂ ಬೆನೆಗಲ್, ಮಣಿಕೌಲ್, ಕುಮಾರ್ ಸಹಾನಿ ಹೀಗೆ ಪರಂಪರೆ ಬೆಳೆಯುತ್ತದೆ. ಮಹಾರಾಷ್ಟ್ರದ ತೊಟ್ಟಿಲಿನಿಂದ ಭಾರತೀಯ ಸಿನಿಮಾ ಎದ್ದು ಬಂದದ್ದರಿಂದ ಮುಂಬೈ ಈಗ ಚಿತ್ರನಗರಿಯಾಗಿ ಬೆಳೆದಿದೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಗುಜರಾತಿ ಭಾಷೆಯ ಮೊದಲ ವಾಕ್ಚಿತ್ರಗಳು ಮಹರಾಷ್ಟ್ರದ ಕೊಲ್ಲಾಪುರದಲ್ಲೇ ತಯಾರಾದವು. ಈಗ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಸಿನಿಮಾ ಕೇಂದ್ರಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೆ ಚಲನ ಚಿತ್ರೋದ್ಯಮದ್ದು ಅಖಂಡ ಬೆಳವಣಿಗೆ. ಸಮಾಜ ಸುಧಾರಣೆ ಧೋರಣೆಯ ಬದ್ಧತೆ ಇರುವ ಚಿತ್ರ ನಿರ್ಮಾಪಕರು ಅಲ್ಲೊಬ್ಬರು ಇಲ್ಲೊಬ್ಬರು ಕಾಣಸಿಗುತ್ತಾರಾದರೂ, ಜನರನ್ನು ರಂಜಿಸುವುದೇ ಚಲನಚಿತ್ರಗಳ ಮುಖ್ಯ ಧ್ಯೇಯವಾಗಿದೆ.

1896ರಲ್ಲಿ ಜನರ ಮುಂದೆ ಪ್ರದರ್ಶಿಸಿದ ಚಿತ್ರವೊಂದರಲ್ಲಿ ರೈಲು ನಿಲ್ದಾಣಕ್ಕೆ ಬಂದು ನಿಲ್ಲುವ ಸನ್ನಿವೇಶವಿದೆ. ಪರದೆಯ ಮೇಲೆ ರೈಲು ಚಲಿಸಲಾರಂಭಿಸಿದಂತೆ, ಪ್ರೇಕ್ಷಕರು ಗಾಬರಿಯಾಗಿ ಎದ್ದು ಬಿದ್ದು ಓಡಲಾರಂಭಿಸಿದರಂತೆ. ರೈಲು ತಮ್ಮ ಮೇಲೇ ಬರುತ್ತಿದೆ ಎನ್ನುವ ಭ್ರಮೆಯನ್ನು ಸೃಷ್ಟಿಸುವಲ್ಲಿ ಚಲನಚಿತ್ರ ಯಶಸ್ವಿಯಾಯಿತು. ಇದು ಪ್ರೇಕ್ಷಕನಿಂದ ಚಲನಚಿತ್ರಕ್ಕೆ ದೊರೆತ ಸರ್ಟಿಫಿಕೆಟ್. 14ನೇ ಮಾರ್ಚ್ 1931ರಲ್ಲಿ ಭಾರತದ ಮೊಟ್ಟಮೊದಲ ಧ್ವನಿಚಿತ್ರ `ಆಲಂ ಆರ' ತೆರೆಕಂಡಿತು. ಮುಂಬೈನ ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಪ್ರದರ್ಶನ. ಕಿಕ್ಕಿರಿದ ಜನರಿಂದಾಗಿ ಗಲಭೆ. ಟಿಕೆಟಿಗಾಗಿ ಗಲಾಟೆ, ಜನರನ್ನು ಹತೋಟಿಗೆ ತರಲು ಸಶಸ್ತ್ರ ಪೊಲೀಸರೇ ಬರಬೇಕಾಯಿತು.

ಮಧುರವಾದ ಹಾಡುಗಳನ್ನು ಜನ ಗುನುಗಲಾರಂಭಿಸಿದರು. ಜನರ ಅಪೇಕ್ಷೆಗೆ ತಕ್ಕಂತೆ ಚಲನಚಿತ್ರಗಳಲ್ಲಿ ಹಾಡು ಮಾನ್ಯತೆ ಪಡೆಯಿತು. ಕನ್ನಡದ ಮೊದಲ ವಾಕ್ಚಿತ್ರ  `ಸತಿಸುಲೋಚನ' ಚಿತ್ರದಲ್ಲಿ ಸುಲೋಚನೆಯ ದುಃಖವನ್ನು ಕಂಡು ಜನರೂ ಅದರಲ್ಲಿ ಭಾಗಿಗಳಾಗಿ ಕಣ್ಣೀರು ಸುರಿಸಲಾರಂಭಿಸಿದರು. ಪ್ರೇಕ್ಷಕನ ಕಣ್ಣೀರಿಗೆ ಮನ್ನಣೆ ದೊರಕಿತು. `ಶೋಲೆ' ಅಂತಹ ಚಿತ್ರವನ್ನು ಐದು ವರ್ಷ ನೋಡಿದರು. ಅದೇ ತರಹದ ಚಿತ್ರಗಳ ತಯಾರಿಕೆಗೆ ನಾಂದಿಯಾಡಿದರು. `ಬಂಗಾರ ಮನುಷ್ಯ'ನನ್ನು ಎರಡು ವರ್ಷ ನೋಡಿದರು. ಕಾಲಕಾಲಕ್ಕೆ ಚಲನಚಿತ್ರಗಳ ಟ್ರೆಂಡ್ ಬದಲಾಯಿಸಲು ಪ್ರೇಕ್ಷಕನ ಈ ಮನೋಭಾವವೇ ಕಾರಣವಾಯಿತು.

ನೂರು ವರ್ಷಗಳ ಹಿಂದೆ ವಾಕ್ಚಿತ್ರ ಭಾರತದಲ್ಲಿ ಕಾಲೂರಿದಾಗ, ಭಾರತ ಬಡವರ ದೇಶ. ಶೇ 90ರಷ್ಟು ಬಡವರು, ಶೇ 55ರಷ್ಟು ಅನಕ್ಷರಸ್ಥರಿದ್ದ ದೇಶದಲ್ಲಿ ಸಿನಿಮಾ ಜನಸಾಮಾನ್ಯನ ಕನಸುಗಳಿಗೆ ಬಣ್ಣ ತುಂಬಲಾರಂಭಿಸಿತು. ನೂರು ವರ್ಷಗಳ ನಂತರ ಭಾರತ ಅತಿ ಹೆಚ್ಚು ಸಿನಿಮಾಗಳನ್ನು ತಯಾರಿಸುವ ಶ್ರೀಮಂತ ರಾಷ್ಟ್ರ.

ಪಿತಾಮಹನ ಮಾತು
“ರಾಜಾ ಹರಿಶ್ಚಂದ್ರ ಚಿತ್ರಕ್ಕಾಗಿ ನಾನೇ ಎಲ್ಲವನ್ನೂ ಮಾಡಬೇಕಾಗಿತ್ತು. ನಿರ್ಮಾಣ ಕಾರ್ಯದಲ್ಲಿ ಹಲವಾರು ತೊಂದರೆಗಳಿದ್ದವು. ಚಿತ್ರಕಥೆಯನ್ನು ನಾನೇ ಬರೆಯಬೇಕಾಗಿತ್ತು. ಪಾತ್ರಧಾರಿಗಳಿಗೆ ಅಭಿನಯವನ್ನು ನಾನೇ ಹೇಳಿಕೊಡಬೇಕಾಗಿತ್ತು. ಕ್ಯಾಮರಾವನ್ನೂ ನಾನೇ ನಿರ್ವಹಿಸಬೇಕಾಗಿತ್ತು. ಪ್ರದರ್ಶನಕ್ಕೂ ನಾನೇ ವ್ಯವಸ್ಥೆ ಮಾಡಬೇಕಾಗಿತ್ತು.

1911ರಲ್ಲಿ ಭಾರತದಲ್ಲಿ ಸಿನಿಮಾ ಉದ್ಯಮದ ಬಗ್ಗೆ ಯಾರೊಬ್ಬರಿಗೂ ಏನೂ ಗೊತ್ತಿರಲಿಲ್ಲ. ದಾದರ್ ಮೈನ್ ರೋಡಿನಲ್ಲಿ ಸ್ಟುಡಿಯೋ ಒಂದನ್ನು ಸ್ಥಾಪಿಸಿಕೊಂಡೆ. ಆರು ತಿಂಗಳಲ್ಲಿ ಚಲನಚಿತ್ರವನ್ನು ಪೂರ್ಣಗೊಳಿಸಿದೆ. ಎಲ್ಲವನ್ನೂ ಒಂದುಗೂಡಿಸಿ ಸಿನಿಮಾ ಮಾಡುವ ಮುನ್ನುಗ್ಗುವ ಪ್ರವೃತ್ತಿ ಹಾಗೂ ಧೈರ್ಯ ಇಲ್ಲದಿದ್ದರೆ ಭಾರತದಲ್ಲಿ 1913ರಲ್ಲಿ ಚಲನಚಿತ್ರರಂಗ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ”.
-ದಾದಾಸಾಹೇಬ್ ಫಾಲ್ಕೆ
(ಭಾರತ ಚಲನಚಿತ್ರರಂಗದ ಪಿತಾಮಹ ಎಂದೇ ಕರೆಯಲಾಗುವ ದಾದಾಸಾಹೇಬ್ ಫಾಲ್ಕೆ ಮೊದಲ ವಾಕ್ಚಿತ್ರ ತಯಾರಿಕೆಯ ಅನುಭವವನ್ನು 1939ರಲ್ಲಿ ಹೇಳಿಕೊಂಡಿರುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT