ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಪ್ರೇಕ್ಷಕ; ಬದಲಾಗುತ್ತಿರುವ ಚಿತ್ರಮಂದಿರ

Last Updated 20 ಜೂನ್ 2013, 19:59 IST
ಅಕ್ಷರ ಗಾತ್ರ

ಒಂದು ಚಲನ ಚಿತ್ರದ ಯಶಸ್ಸಿಗೂ, ಚಿತ್ರಮಂದಿರಕ್ಕೂ ಸಂಬಂಧವಿದೆಯೇ? ಬದಲಾಗುತ್ತಿರುವ ಚಿತ್ರೋದ್ಯಮದ ಸ್ವರೂಪವನ್ನು ಗಮನಿಸಿದರೆ ಇಂತಹ ಯಾವುದೇ ಮಿಥ್ಯೆ ಈಗ ಅಸ್ತಿತ್ವದಲ್ಲಿಲ್ಲ. ಇಲ್ಲವೇ ಸಂಪೂರ್ಣ ಬದಲಾಗಿದೆ.

`ಮೈನಾ' ಎನ್ನುವ ಚಿತ್ರ ಬೆಂಗಳೂರಿನಲ್ಲಿ ಶತದಿನೋತ್ಸವವನ್ನು ಕಂಡಿತು. ಚಿತ್ರೋದ್ಯಮದ ಅರ್ಥಕೋಶದ ಪ್ರಕಾರ ಇದು ಭರ್ಜರಿ ಯಶಸ್ಸು ಪಡೆದ ಚಿತ್ರವೇ ಆಗಬೇಕಿತ್ತು. ಆದರೆ `ಮೈನಾ' ಚಿತ್ರದ ನಿರ್ಮಾಪಕರು ಹೇಳುವ ಪ್ರಕಾರ ಚಿತ್ರ ನೂರು ದಿನ ಪ್ರದರ್ಶನ ಕಂಡರೂ, ಲಾಭ ಬಂದಿಲ್ಲ. ಹಾಗಾದರೆ ಚಿತ್ರವೊಂದು ಶತದಿನೋತ್ಸವ ಆಚರಿಸುವುದು, ಇಪ್ಪತ್ತೈದು ವಾರಗಳ ಕಾಲ ನಡೆಯುವುದು ಕೇವಲ ಪ್ರಚಾರದ ಗಿಮಿಕ್ ಆಗಿದೆಯೇ? ಅಂತಹ ಒಂದು ಭ್ರಮೆ ಚಿತ್ರರಂಗದಲ್ಲಿ ಇನ್ನೂ ಇದೆ.

ಹಿಂದೆ ಪರಿಸ್ಥಿತಿ ಬೇರೆಯದೇ ಆಗಿತ್ತು. ಚಿತ್ರಮಂದಿರಕ್ಕೂ, ಚಿತ್ರದ ಯಶಸ್ಸಿಗೂ ಸಂಬಂಧವಿತ್ತು. `ಬಂಗಾರದ ಮನುಷ್ಯ' ಎರಡು ವರ್ಷ ಸತತ ಪ್ರದರ್ಶನಗೊಂಡಿತು. ಮುಂಬೈನಲ್ಲಿ `ಶೋಲೆ' ಐದು ವರ್ಷ ಸತತ ಪ್ರದರ್ಶನ ಕಂಡವು. `ಶಂಕರ್ ಗುರು', `ಸಂಪತ್ತಿಗೆ ಸವಾಲ್', `ಶ್ರೀಕೃಷ್ಣ ದೇವರಾಯ' ಮೊದಲಾದ ಚಿತ್ರಗಳು ಸಿಲ್ವರ್ ಜ್ಯೂಬಿಲಿ ಆಚರಿಸಿದ ಚಿತ್ರಗಳೆನಿಸಿದವು. `ಪ್ರೇಮಲೋಕ', `ಓಂ' ಮೊದಲಾದ ಚಿತ್ರಗಳೂ ನೂರಾರು ದಿನ ಪ್ರದರ್ಶನ ಕಂಡ ಚಿತ್ರಗಳೆನಿಸಿದವು.

ತೀರಾ ಇತ್ತೀಚೆಗೆ `ಮುಂಗಾರು ಮಳೆ'ಯ ದಾಖಲೆಯನ್ನೇ ನೋಡಿ. ಇಂತಹ ದಾಖಲೆ ಪ್ರದರ್ಶನ ಕಂಡು ಬಾಕ್ಸಾಫೀಸಿನ ಕೊಳ್ಳೆ ಹೊಡೆದ ಸಂಗತಿಗಳೆಲ್ಲಾ ಇತಿಹಾಸ ಸೇರಿವೆ. ಚಿತ್ರವೊಂದು ನೂರು ದಿನ ಸತತ ಪ್ರದರ್ಶನ ಕಂಡರೆ ಅಂತಹ ಚಿತ್ರ ಭಾರೀ ಯಶಸ್ವಿ ಚಿತ್ರವೆಂದೂ, ಅದರ ನಿರ್ದೇಶಕ ಯಶಸ್ವಿ ನಿರ್ದೇಶಕನೆಂದೂ ಮಾನದಂಡವೊಂದನ್ನು ಚಿತ್ರರಂಗ ಸ್ವಯಂ ಆಗಿ ರೂಪಿಸಿಕೊಂಡಿತ್ತು.

ಅಂತಹ ಚಿತ್ರ ರಾಜ್ಯದ ಬೇರೆ ಭಾಗಗಳಲ್ಲೂ ಯಶಸ್ವಿಯಾಗಿ ನಡೆಯಲು ಇದು ಪೂರಕವಾಗಿರುತ್ತದೆ ಎಂದೇ ಚಿತ್ರರಂಗದಲ್ಲಿ ಅಲಿಖಿತವಾದ ಒಂದು ನಂಬಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗ ನಂಬಿಕೊಂಡು ಬಂದ ಇಂತಹ ಎಲ್ಲ ಸಿದ್ಧಸೂತ್ರಗಳು, ಮಾರ್ಗದರ್ಶಕ ನಡೆಗಳು ಎಲ್ಲವೂ ಈಗ ತಿರುವು ಮುರುವಾಗಿದೆ.

ಭಾರತೀಯ ಚಿತ್ರರಂಗ ನೂರು ವರ್ಷ ದಾಟುತ್ತಿದೆ. ಈ ಹಾದಿಯಲ್ಲಿ ಚಿತ್ರರಂಗದ ಮಾರುಕಟ್ಟೆ ಎನಿಸಿದ ಚಿತ್ರಮಂದಿರಗಳ ಪಾತ್ರ ಕೂಡ ಬಹಳ ಮಹತ್ವದ್ದು ಎನ್ನುವುದನ್ನು ಮರೆಯಲಾಗದು. ಭಾರತೀಯ ಪ್ರೇಕ್ಷಕರನ್ನು ಸಮ್ಮೊಹಿನಿಯಂತೆ ಸೆಳೆದ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ನುಗ್ಗುತ್ತಿದ್ದುದರಿಂದ ಸಾವಿರ, ಸಾವಿರದೈನೂರು ಜನ ಕೂರಬಲ್ಲ ಚಿತ್ರಮಂದಿರಗಳ ಕಲ್ಪನೆ ಹುಟ್ಟಿಕೊಂಡಿತು.

ಆರಂಭದ ದಿನಗಳಿಂದಲೇ ಈ ಪರಿಕಲ್ಪನೆ ಚಿತ್ರರಂಗದಲ್ಲಿದೆ. ರಂಗಭೂಮಿಗೂ ಕೂಡ ಇಂತಹದೇ ಹಿನ್ನೆಲೆ ಇದೆ. ಆರಂಭದ ವಾರಗಳಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತಿದ್ದವು. ಆದರೂ ಜನ ಚಿತ್ರ ನೋಡಿಯೇ ತೀರಬೇಕೆನ್ನುವ ಹಟ ಹಿಡಿಯುತ್ತಿದ್ದರು. ಎಕ್ಸ್‌ಟ್ರಾ ಸೀಟುಗಳನ್ನು ಹಾಕಿ ಚಿತ್ರವನ್ನು ತೋರಿಸುತ್ತಿದ್ದ ದಿನಗಳು ಚಿತ್ರೋದ್ಯಮದ ಸುವರ್ಣ ಯುಗ.

ಬೆಂಗಳೂರಿನಲ್ಲಿ ಇತ್ತೀಚೆಗೆ `ಸಾಗರ್' ಚಿತ್ರಮಂದಿರ ಸ್ಥಗಿತ ಗೊಂಡಿತು. ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳು ಒಂದೊಂದೇ ಬಂದ್ ಆಗುತ್ತಿವೆ. ಬದಲಾವಣೆಯ ಬಿರುಗಾಳಿಯಲ್ಲಿ ಬಂದ್ ಆಗುತ್ತಿರುವ 68ನೇ ಚಿತ್ರ ಮಂದಿರ ಇದು. ರಾಜಧಾನಿ ಇದುವರೆಗೆ ಅತ್ಯಧಿಕ ಚಿತ್ರಮಂದಿರಗಳನ್ನು ಹೊಂದಿರುವ ನಗರವಾಗಿತ್ತು.

ಮೆಜೆಸ್ಟಿಕ್ ಪ್ರದೇಶದಲ್ಲಿ ಚಿತ್ರಮಂದಿರಗಳ ಸಾಲು ಸಾಲೇ ಇತ್ತು. ಆ ಪ್ರದೇಶದಲ್ಲೇ ಎಂಟು ಚಿತ್ರಮಂದಿರಗಳು ಬಂದ್ ಆಗಿವೆ. ಸಾಗರ್ ಚಿತ್ರಮಂದಿರದ ಮಾಲೀಕರು ಚಿತ್ರಮಂದಿರ ಬಂದ್ ಮಾಡುತ್ತಿರುವುದಕ್ಕೆ ನೀಡಿರುವ ಕಾರಣ ಇವತ್ತಿನ ಚಿತ್ರೋದ್ಯಮದ ಮೇಲೆ ಬೆಳಕು ಚೆಲ್ಲುತ್ತದೆ.

`ಸಾವಿರ ಸೀಟುಗಳಿರುವ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕೇವಲ 300 ಮಂದಿ. ಇನ್ನುಳಿದ 700 ಸೀಟುಗಳು ಖಾಲಿ ಇರುತ್ತವೆ'. ಚಿತ್ರ ಬಿಡುಗಡೆಯಾದ ಮೊದಲ ದಿನ ಹೌಸ್‌ಫುಲ್ ಆದರೆ ಅದು ಅದೃಷ್ಟ. ಹಾಗೆ ಹೌಸ್‌ಫುಲ್ ಮಾಡಿಸುವ ನಟರು ನಮ್ಮಲ್ಲಿ ಕಡಿಮೆಯಾಗಿರುವುದರಿಂದ ದೊಡ್ಡ ಚಿತ್ರಮಂದಿರಗಳೆಲ್ಲಾ ಬಿಕೋ ಎನ್ನುತ್ತವೆ.

ಹೀಗಾಗಿ ಇಂದಿನ ದಿನಕ್ಕೆ ಐನಾಕ್ಸ್, ಪಿ.ವಿ.ಆರ್.ನಂತಹ ಚಿಕ್ಕ ಚಿತ್ರಮಂದಿರಗಳೇ ಸೂಕ್ತ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. `ಸಾಗರ್' ಚಿತ್ರಮಂದಿರವನ್ನು ಮುಂದೆ `ಮಾಲ್' ಮಾಡುವ ಉದ್ದೇಶವಿದೆ. ಆಗ ಅದರಲ್ಲಿ ಮೂರು ಚಿಕ್ಕ ಚಿತ್ರಮಂದಿರಗಳಿರುತ್ತವೆ ಎಂದು ಅವರು ಹೇಳಿದ್ದಾರೆ. ಈ ಭಾಗ್ಯ `ಪಲ್ಲವಿ' ಚಿತ್ರಮಂದಿರಕ್ಕೆ ಸಿಗಲಿಲ್ಲ. ಅಲಂಕಾರ್, ಆದರ್ಶ, ಪ್ರಭಾತ್, ಗೀತಾ, ಸ್ವಸ್ತಿಕ್, ಸೆಂಟ್ರಲ್ ಚಿತ್ರಮಂದಿರಗಳಿಗೆ ಸಿಗಲಿಲ್ಲ.

ಚಿತ್ರಮಂದಿರಗಳು ನೆಲಸಮವಾಗುತ್ತಿವೆ, ಇದರಿಂದ `ಚಿತ್ರೋದ್ಯಮಕ್ಕೆ ಭಾರೀ ಹಿನ್ನಡೆಯಾಗುತ್ತಿದೆ ಎಂದು ಭಾವಿಸುವ ಒಂದು ವರ್ಗವಿದೆ. ಆದರೆ ಚಿತ್ರಮಂದಿರಕ್ಕೆ ಬಂದು ವೀಕ್ಷಿಸುವ ಪ್ರೇಕ್ಷಕರು ಬದಲಾಗಿದ್ದಾರೆ ಎನ್ನುವುದನ್ನು ಸಿನಿಮಾ ಮಂದಿ ಅಷ್ಟು ಸುಲಭವಾಗಿ ಒಪ್ಪುತ್ತಿಲ್ಲ. ಐನಾಕ್ಸ್, ಪಿ.ವಿ.ಆರ್. ಕಿರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಪ್ರೇಕ್ಷಕರ ವರ್ಗವೇ ಪ್ರತ್ಯೇಕ ವರ್ಗ.

ದೊಡ್ಡ ಚಿತ್ರಮಂದಿರಗಳಲ್ಲಿ ನೋಡುವ ಜನರೇ ಮತ್ತೊಂದು ವರ್ಗ ಎನ್ನುವ ವರ್ಗೀಕರಣ ಆರಂಭದ ದಿನಗಳಲ್ಲಿ ಇತ್ತು. ಏಕೆಂದರೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಸಂಸ್ಕೃತಿ ನಮ್ಮಲ್ಲಿ ಆರಂಭವಾದದ್ದು ಐದು ವರ್ಷಗಳ ಹಿಂದೆಯಷ್ಟೇ. ಉಪೇಂದ್ರ, ಶಿವರಾಜ್‌ಕುಮಾರ್ ಅವರುಗಳು ಅಭಿನಯಿಸಿದ ಚಿತ್ರವಾಗಲೀ, ರಜನೀಕಾಂತ್, ಸಲ್ಮಾನ್‌ಖಾನ್ ಅಭಿನಯದ ಚಿತ್ರಗಳಾಗಲೀ ಮಲ್ಟಿಫ್ಲೆಕ್ಸ್ ಸಂಸ್ಕೃತಿಗೆ ಒಗ್ಗುವುದಿಲ್ಲ ಎನ್ನುವುದು ಮೊದಲಿನಿಂದಲೂ ರೂಢಿಯಾಗಿ ಬಿಟ್ಟಿತ್ತು.

ಲೋ ಬಜೆಟ್‌ನ ಚಿತ್ರಗಳು, ಕಲಾತ್ಮಕ, ಪ್ರಶಸ್ತಿ ಪುರಸ್ಕೃತ ಚಿತ್ರಗಳು ಮಾತ್ರ ಐನಾಕ್ಸ್, ಪಿ.ವಿ.ಆರ್.ಗಳಿಗೆ ಲಾಯಖ್ ಎನ್ನುವ ಮನೋಭಾವವಿತ್ತು. ಆದರೆ, ಸಿನಿಮಾ ಎಷ್ಟು ಶೀಘ್ರಗತಿಯಲ್ಲಿ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ ಎಂದರೆ, ರಜನೀಕಾಂತ್ ಅಭಿನಯದ ಯಂದಿರನ್ (ರೋಬೋ), ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರಗಳು ಇಂತಹ ಎಲ್ಲ ಭಾವನೆಗಳನ್ನು ಬದಲಿಸಿವೆ.

ಇಂತಹ ಕಿರುಚಿತ್ರ ಮಂದಿರಗಳಲ್ಲೂ ಸೂಪರ್ ಸ್ಟಾರ್‌ಗಳ ಚಿತ್ರಗಳು ದಾಖಲೆ ಸೃಷ್ಟಿಸಬಲ್ಲವು, ಜನ ಇಲ್ಲೂ ಬಂದು ಸಿನಿಮಾ ನೋಡುವ ತವಕದಲ್ಲಿದ್ದಾರೆ ಎನ್ನುವ ಬೆಳವಣಿಗೆಯನ್ನು ಈ ಚಿತ್ರಗಳು ತೋರಿಸಿಕೊಟ್ಟವು. ಹೀಗಾಗಿ ದೇಶದಾದ್ಯಂತ ಎಲ್ಲ ಪ್ರಮುಖ ನಗರಗಳಲ್ಲಿ ಮಲ್ಟಿಫ್ಲೆಕ್ಸ್‌ಗಳು ಪ್ರಮುಖ ಮನರಂಜನಾ ಕೇಂದ್ರಗಳಾಗಿವೆ.

ಈ ಚಿತ್ರಮಂದಿರಗಳು ಇಂದು ಚಲನಚಿತ್ರದ ವಾಣಿಜ್ಯ ವಹಿವಾಟನ್ನೇ ಬದಲಿಸಿವೆ. ಚಿತ್ರವೊಂದು ಶತದಿನ, ಸಿಲ್ವರ್ ಜ್ಯೂಬಿಲಿಯಾದರೆ ಮಾತ್ರ ಅದು ಸೂಪರ್‌ಹಿಟ್ ಎನ್ನುವ ಭ್ರಮೆಯನ್ನು ತೊಲಗಿಸಿದ್ದೇ ಇಂತಹ ಚಿತ್ರಮಂದಿರ ಸಂಸ್ಕೃತಿ.

ಈ ಕಿರು ಚಿತ್ರಮಂದಿರಗಳಲ್ಲಿ ಪ್ರವೇಶ ದರ, ದೊಡ್ಡ ಚಿತ್ರ ಮಂದಿರಗಳ ಪ್ರವೇಶದರದ ನಾಲ್ಕು ಪಟ್ಟು ಇರುತ್ತದೆ. ಎರಡೇ ವಾರದಲ್ಲಿ ಬಂಡವಾಳವನ್ನು ವಾಪಸು ತರುವ ಈ ಚಿತ್ರಮಂದಿರಗಳು ಚಿತ್ರದ ಜಯಾಪಜಯವನ್ನು ಎರಡೇ ವಾರದಲ್ಲಿ ನಿರ್ಧರಿಸಿ ಬಿಡುತ್ತವೆ. ನೂರು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಭಾರೀ ಮಾರ್ಪಾಡೇ ಹೌದು. ಇಂತಹ ಚಿತ್ರ ಸಂಸ್ಕೃತಿ, ಭಾರತೀಯ ಪ್ರೇಕ್ಷಕರನ್ನು ಬದಲಿಸಿತು.

ಯುವಜನಾಂಗವನ್ನು ಹೆಚ್ಚು ಹೆಚ್ಚಾಗಿ ಚಿತ್ರಮಂದಿರಕ್ಕೆ ಸೆಳೆಯಿತು. ಅಲ್ಲದೆ ಚಿತ್ರಗಳ ಗುಣಮಟ್ಟವನ್ನೂ ಬದಲಿಸಲು ಪ್ರೇರಕವಾಯಿತು. ಸಾಮಾನ್ಯವಾಗಿ ಕೆಲವು ಚಿತ್ರ ವಿಮರ್ಶೆಗಳನ್ನು ಗಮನಿಸಿದರೆ, ಇದು ಬಾಲ್ಕನಿ ಪ್ರೇಕ್ಷಕರಿಗಾಗಿ ತೆಗೆದ ಚಿತ್ರ ಎಂದೋ, ಎಂಟಾಣೆ ಪ್ರೇಕ್ಷಕರನ್ನು ರಂಜಿಸುವ ಚಿತ್ರ ಎಂದೋ ಬರೆದಿರುವುದನ್ನು ಗಮನಿಸಿ. ಮಲ್ಲಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಅಂತಹ ಅಂತರ ದೂರವಾಗಿರುವುದು ಹೊಸ ಬೆಳವಣಿಗೆ.

ಕೊನೆಯ ಸಾಲಿನಿಂದ ಮೊದಲನೆಯ ಸಾಲಿನವರೆಗೆ ಪ್ರೇಕ್ಷಕರಲ್ಲಿ ಒಂದೇ ರೀತಿಯ ಸಮಾನ ಭಾವನೆಗಳು ಪ್ರವಹಿಸುತ್ತಿರುವಂತಹ ವಾತಾವರಣವನ್ನು ಮಲ್ಟಿಫ್ಲೆಕ್ಸ್‌ಗಳು ಸೃಷ್ಟಿ ಮಾಡಿವೆ. ಹೀಗಾಗಿ ಸಿನಿಮಾ ತಯಾರಿಕೆಯಲ್ಲಿ ಇದುವರೆಗೆ ನಡೆಯುತ್ತಿದ್ದ ವರ್ಗೀಕರಣ ತಂತ್ರಗಾರಿಕೆಯನ್ನು ಕೈಬಿಡುವುದು ಅನಿವಾರ್ಯ.
ಸಿನಿಮಾ ನಿರ್ಮಾಣಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಈಗಾಗಲೇ ಚಿತ್ರ ಮಂದಿರಗಳ ಸಂಖ್ಯೆ ಕಡಿಮೆಯೇ ಇದೆ.

ಬಡಾವಣೆಗಳಲ್ಲಿರುವ ಚಿತ್ರಮಂದಿರಗಳು ಬಂದ್ ಆಗುತ್ತಿವೆ. ಟಿ.ವಿ., ಹೋಂ ಟಿ.ವಿ., ಡಿ.ವಿ.ಡಿ.ಗಳು ದೊರಕಲಾರಂಭಿಸಿದ ಕೂಡಲೇ ಚಿತ್ರಮಂದಿರಗಳ ಬಗ್ಗೆ ಕೆಲವರಲ್ಲಿ ನಿರಾಸಕ್ತಿ ಮೂಡಲಾರಂಭಿಸಿದೆ. ಕನ್ನಡ ಚಿತ್ರಗಳಿಗೇ ಚಿತ್ರಮಂದಿರ ಸಿಗುತ್ತಿಲ್ಲ ಎನ್ನುವ ದೂರು ಹಳೆಯದು.

ಚಿತ್ರಮಂದಿರ ಸಿಗುವುದಿರಲಿ, ಚಿತ್ರಮಂದಿರಗಳೇ ನೆಲಸಮವಾಗುತ್ತಿರುವ ದಿನಗಳಲ್ಲಿ ನಾವಿದ್ದೇವೆ. ಅತಿ ದೊಡ್ಡ ವ್ಯವಹಾರವೊಂದರ ಮಾರುಕಟ್ಟೆಯೇ ಹೀಗೆ ಮೂರಾಬಟ್ಟೆಯಾಗಿರುವುದರಿಂದ  ಚಿತ್ರೋದ್ಯಮ ಕೂಡಾ ತನ್ನ ಮಾರುಕಟ್ಟೆ ತಂತ್ರಗಾರಿಕೆಯನ್ನು ಬದಲಿಸಿಕೊಳ್ಳುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT