ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ರಾಜಕೀಯ ಸಮೀಕರಣದ ವ್ಯಾಖ್ಯೆ

Last Updated 6 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಒಂದು ತಿಂಗಳಿನಿಂದೀಚೆಗೆ ಕರ್ನಾಟಕದ ರಾಜಕೀಯದಲ್ಲಿ ಹಲವಾರು ನಾಟಕೀಯ ತಿರುವುಗಳು ಕಂಡು ಬಂದವು. ರಾಜಕೀಯ ಚಟುವಟಿಕೆಗಳು ಅಸಾಮಾನ್ಯ ತಿರುವು,  ಅನಿರೀಕ್ಷಿತ ಕುಸಿತ ಮತ್ತು ಊಹೆಗೆ ನಿಲುಕದ ಜಿಗಿತ ಕಂಡವು. ತಮಿಳುನಾಡು ಬಯಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ  ಕಾವೇರಿ ನದಿಯಲ್ಲಿ ನಿರಂತರವಾಗಿ  ನೀರು ಹರಿದು ಹೋದಂತೆ ಕರ್ನಾಟಕದ ರಾಜಕೀಯ ಸೇತುವೆಯಡಿಯೂ ಗಮನಾರ್ಹ ಪ್ರಮಾಣದಲ್ಲಿಯೂ ನೀರು ಹರಿದು ಹೋಯಿತು. ಕಾವೇರಿ ಬಿಕ್ಕಟ್ಟು ರಾಜ್ಯದಲ್ಲಿ ಖಂಡಿತವಾಗಿಯೂ  ರಾಜಕೀಯವಾಗಿ ಗಮನಾರ್ಹವಾಗಿ ಪರಿಣಾಮ ಬೀರಿದೆ.

ನದಿ ನೀರು ಹಂಚಿಕೆ ವಿವಾದವು    ನ್ಯಾಯಾಂಗ ನಿರ್ವಹಿಸುವ ಪಾತ್ರದ ಬಗ್ಗೆ ಸಾಕಷ್ಟು ಗಮನ ಸೆಳೆಯುವುದರ ಜತೆಗೆ, ಅಂತರರಾಜ್ಯ ಮತ್ತು ಕೇಂದ್ರ ಹಾಗೂ ರಾಜ್ಯಗಳ ಬಾಂಧವ್ಯದ ಕುರಿತು ಹಲವಾರು ಪ್ರಶ್ನೆಗಳಿಗೂ ಎಡೆ ಮಾಡಿಕೊಟ್ಟಿತು.  ಈ ಎಲ್ಲ ಸಂಗತಿಗಳನ್ನು ವಿವರವಾಗಿ  ವಿಶ್ಲೇಷಿಸಬೇಕಾದ ಅಗತ್ಯವೂ ಇದೆ.

ಅಂತರರಾಜ್ಯ ಗಡಿ ವಿವಾದಗಳ ನಿರ್ವಹಣೆ  ಮತ್ತು ಬಗೆಹರಿಸುವುದರಲ್ಲಿ  ಕೇಂದ್ರ ಸರ್ಕಾರವು ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ದೇಶದ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು  ಕೇಂದ್ರ ಸರ್ಕಾರವು ಮಹತ್ವದ ಪಾತ್ರ ನಿರ್ವಹಿಸಿಲ್ಲ. ಅದರಲ್ಲೂ ವಿಶೇಷವಾಗಿ ನಾಲ್ಕು ದಶಕಗಳ ಅವಧಿಯಲ್ಲಿ  ಈ ನಿಟ್ಟಿನಲ್ಲಿ ಗಮನಾರ್ಹ ಕೊಡುಗೆಯನ್ನೂ ನೀಡಿಲ್ಲ.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರವೂ  ಉಭಯ ರಾಜ್ಯಗಳಲ್ಲಿ ಸೃಷ್ಟಿಯಾಗುವ ಉದ್ದಿಗ್ನತೆ ಶಮನಗೊಳಿಸಲು ಮತ್ತು ನೀರು ಹಂಚಿಕೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯ ಬಗೆಹರಿಸಲು ಕಾರ್ಯಸಾಧ್ಯವಾದ ವೇದಿಕೆಗಳಲ್ಲಿ   ಪ್ರಾಮಾಣಿಕ ಪ್ರಯತ್ನವನ್ನೇ  ಮಾಡಿಲ್ಲ. ಕೇಂದ್ರ ಸರ್ಕಾರವು ವಿವಾದ ಬಗೆಹರಿಸಲು ಬದ್ಧತೆಯನ್ನೂ ತೋರಿಲ್ಲ. ಸಂಘರ್ಷ ಮತ್ತು  ಪರ – ವಿರೋಧದ ಮಾತು ಕುದಿಯುವ ಹಂತಕ್ಕೆ ತಲುಪಲು ಅವಕಾಶ ಮಾಡಿಕೊಟ್ಟಿತ್ತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ  ಬೇರೆ, ಬೇರೆ ಪಕ್ಷಗಳು ವಿವಾದದಲ್ಲಿ ಮಧ್ಯ ಪ್ರವೇಶಿಸುವುದರಿಂದ ತಮಗೆ ಆಗುವ ರಾಜಕೀಯ ಲಾಭ ನಷ್ಟಗಳ ಬಗ್ಗೆಯೇ ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದವು.  ವೋಟ್‌ ಬ್ಯಾಂಕ್‌ ರಾಜಕೀಯ, ತೆರಬೇಕಾದ ರಾಜಕೀಯ ಬೆಲೆ, ಮಧ್ಯ ಪ್ರವೇಶಿಸಿದರೆ ಆಗುವ ರಾಜಕೀಯ ಲಾಭವನ್ನೇ ಎಣಿಕೆ ಹಾಕಿದವೇ ಹೊರತು  ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವನ್ನೇ ಮಾಡಲಿಲ್ಲ.

ಕೇಂದ್ರ  ಸರ್ಕಾರವು ಉದ್ದಕ್ಕೂ ತಳೆದ ಇಂತಹ ಉದಾಸೀನ ಧೋರಣೆ ಫಲವಾಗಿಯೇ ವಿವಾದ ದಿನದಿಂದ ದಿನಕ್ಕೆ ತೀಕ್ಷ್ಣಗೊಳ್ಳುತ್ತ, ಉಲ್ಬಣಗೊಳ್ಳುತ್ತಲೇ ಹೋಯಿತು. ಅಂತರರಾಜ್ಯ  ವಿವಾದಗಳು ಮುಖ್ಯವಾಗಿ ಹೆಚ್ಚು ಭಾವನಾತ್ಮಕವಾಗಿರುತ್ತವೆ.  ಹೀಗಾಗಿ ಸುದೀರ್ಘ ಸಂಧಾನ ಪ್ರಕ್ರಿಯೆ ಮತ್ತು ಸೌಹಾರ್ದಯುತ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವ ಅಗತ್ಯ ಇರುತ್ತದೆ.  ಕೇಂದ್ರ ಸರ್ಕಾರವು  ತನ್ನ  ಪ್ರಭಾವಶಾಲಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷಪಾತರಹಿತವಾಗಿ ವಿವಾದ ಇತ್ಯರ್ಥಪಡಿಸಲು ಮನಸ್ಸು ಮಾಡಬೇಕಿತ್ತು.

ಸಂಧಾನಕಾರನ ಮಹತ್ವದ ಪಾತ್ರ  ನಿರ್ವಹಿಸುವ ಬದಲಿಗೆ, ಕೇಂದ್ರ ಸರ್ಕಾರವು ದೀರ್ಘಾವಧಿಯಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದಾದ ಸದ್ಯಕ್ಕೆ ಸುಲಭ ಆಯ್ಕೆಯಾದ  ನ್ಯಾಯಾಂಗದ ಮಧ್ಯಪ್ರವೇಶಕ್ಕೆ  ಜೋತು ಬಿದ್ದಿತು. ಕೇಂದ್ರ ಸರ್ಕಾರ ಅನುಸರಿಸಿದ ಈ ವಿವಾದಾತ್ಮಕವಾದ ನಿಲುವೇ ಕಾವೇರಿ ವಿವಾದದ ಕೇಂದ್ರ ಬಿಂದು ಆಗಿದೆ.

ಸೂಕ್ಷ್ಮ ಸ್ವರೂಪದ ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ಬಗೆಹರಿಸಿಕೊಳ್ಳಲು ಎಂದೂ ಅವಕಾಶ ಮಾಡಿಕೊಡಲೇಬಾರದು. ತುಂಬ ಭಾವನಾತ್ಮಕವಾಗಿರುವ ಇಂತಹ ವಿವಾದವನ್ನು ಸೂಕ್ಷ್ಮ ರೀತಿಯಲ್ಲಿ ನಿಭಾಯಿಸಬೇಕು. ಸೌಹಾರ್ದಯುತ ಪರಿಸರದಲ್ಲಿ ನಿರಂತರ ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು.

ಕಾವೇರಿ ವಿವಾದ  ಬಗೆಹರಿಸಲು ಇಂತಹ ಪ್ರಯತ್ನವೇ ನಡೆಯದಿರುವುದು  ದುರದೃಷ್ಟಕರ ಸಂಗತಿಯಾಗಿದೆ. ವಿವಾದವು  ನ್ಯಾಯಾಂಗದ ಕಟ್ಟೆ ಏರುತ್ತಿದ್ದಂತೆ ಸಂಘರ್ಷಕ್ಕೆ ಕಾರಣವಾಗಿ  ಎರಡೂ ರಾಜ್ಯಗಳ ಜನರಲ್ಲಿ ಎದೆಯುರಿ ಹೆಚ್ಚಿಸಿತು. ಇಂತಹ ಭಾವನಾತ್ಮಕ ಸಿಕ್ಕುಗಳನ್ನು ಒಳಗೊಂಡಿರುವ ವಿವಾದಕ್ಕೆ ನ್ಯಾಯಾಂಗದ ಪರಿಹಾರವು  ಉಭಯ ಬಣಗಳಿಗೂ ತೃಪ್ತಿಯಾಗುವಂತಹ ಪರಿಹಾರ ಒದಗಿಸಿ ಕೊಡುವುದು ತುಂಬ ವಿರಳವಾಗಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯ ನೀಡುವ ತೀರ್ಪು ಒಂದು ಬಣಕ್ಕೆ ಮಾತ್ರ ತೃಪ್ತಿ ನೀಡುತ್ತದೆ. ಇದು ಅವರ ಪಾಲಿಗೆ  ಗೆಲುವಿನ ಸಂಭ್ರಮಕ್ಕೆ ಕಾರಣವಾಗುತ್ತದೆ. ಇನ್ನೊಂದು ಬಣವು ಸೋಲೊಪ್ಪಿಕೊಂಡು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

ತೀರ್ಪಿನಲ್ಲಿ ಮೇಲುಗೈ ಸಾಧಿಸಿದ ರಾಜ್ಯವು ಸಹಜವಾಗಿಯೇ  ಗೆಲುವಿನ ಸಂಭ್ರಮಾಚರಣೆ ಮಾಡುತ್ತದೆ. ಕೋರ್ಟ್‌ ದೃಷ್ಟಿಯಲ್ಲಿ ದೋಷಿ ಎಂದು ಗುರುತಿಸಿಕೊಳ್ಳುವ ರಾಜ್ಯವು  ಸ್ಥಳೀಯರಿಂದ ಕಟು ಟೀಕೆಗೆ ಗುರಿಯಾಗುತ್ತದೆ. ಜನರ ಭಾವನೆಗಳನ್ನು ತಣಿಸಲು ಅಲ್ಲಿನ ಸರ್ಕಾರವು ಹರಸಾಹಸ ಮಾಡಬೇಕಾಗುತ್ತದೆ. ನ್ಯಾಯಾಂಗವು ತನ್ನ ಮಿತಿಗಳಾಚೆ ತೀರ್ಪು ನೀಡಿದಾಗ ಉದ್ಭವಿಸುವ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎನ್ನುವುದರ ಬಗ್ಗೆ   ನಾಲ್ಕೈದು ವಾರಗಳಿಂದ ನಡೆದ ವಿದ್ಯಮಾನಗಳು  ಹೆಚ್ಚಿನ ಬೆಳಕು ಚೆಲ್ಲುತ್ತವೆ.

ಕಾರ್ಯಾಂಗವು ತನ್ನ ಅಧಿಕಾರ ಬಿಟ್ಟುಕೊಟ್ಟು ಹೊಣೆಗಾರಿಕೆಯಿಂದ ಜಾರಿಕೊಂಡಾಗ ನ್ಯಾಯಾಂಗವು ಖಂಡಿತವಾಗಿಯೂ ವಿವಾದ ಬಗೆಹರಿಸಲು ಮಧ್ಯಪ್ರವೇಶಿಸಬೇಕಾಗುತ್ತದೆ.  ನ್ಯಾಯಾಂಗದ ಅತ್ಯುತ್ಸಾಹಕ್ಕೆ ಹೇಗೆ ಮತ್ತು ಯಾವ ಪ್ರಮಾಣದಲ್ಲಿ ಕಡಿವಾಣ ಹಾಕಬೇಕು. ‘ಕಾವಲುಗಾರನನ್ನೇ’ ಯಾರು ಕಾಯಬೇಕು ಎನ್ನುವ ಪ್ರಮುಖ ಪ್ರಶ್ನೆಗಳೂ ಇಲ್ಲಿ ಎದುರಾಗುತ್ತವೆ.

ಅತ್ಯಂತ ಸೂಕ್ಷ್ಮ ಸ್ವರೂಪದ ಭಾವನಾತ್ಮಕವಾದ ಅಂತರರಾಜ್ಯ ವಿವಾದಗಳಿಗೆ ಕೇಂದ್ರ ಸರ್ಕಾರವು ತೋರಿಕೆಗೆ ಸ್ಪಂದಿಸುವುದರ ಬದಲಿಗೆ, ಅದನ್ನು  ನ್ಯಾಯೋಚಿತ ರೀತಿಯಲ್ಲಿ ಬಗೆಹರಿಸಲು ಮುಂದಾಗುವುದರ ಅಗತ್ಯದ ಬಗ್ಗೆ ಕಾವೇರಿ ವಿವಾದವು ಎಲ್ಲರ ಕಣ್ಣು ತೆರೆಸಿದೆ.

ತನ್ನ ಮಧ್ಯಪ್ರವೇಶಕ್ಕೆ ಸೀಮಿತ ಅವಕಾಶ ಇದ್ದ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರವು ಅಷ್ಟೇನೂ ಉತ್ಸುಕತೆ ತೋರಿಸಿಲ್ಲ.  ಭಾವನಾತ್ಮಕವಾಗಿ ತುಂಬ  ಸೂಕ್ಷ್ಮ ಸ್ವರೂಪದ ವಿವಾದಕ್ಕೆ ತ್ವರಿತ ಪರಿಹಾರ ಕಂಡುಕೊಳ್ಳುವ ಬದಲಿಗೆ ಅದನ್ನು ನಿರ್ಲಕ್ಷಿಸುವ, ಉದಾಸೀನ ಧೋರಣೆ ತಳೆಯುವ  ಮೂಲಕ  ದೀರ್ಘಾವಧಿಯಲ್ಲಿ ನಕಾರಾತ್ಮಕ ಪರಿಣಾಮ ಬೀರಲು ಅವಕಾಶ ಮಾಡಿಕೊಟ್ಟಿದೆ. ಕಾವೇರಿ ವಿವಾದವು ರಾಜ್ಯದ ರಾಜಕಾರಣದಲ್ಲೂ ಆಸಕ್ತಿ ಮೂಡಿಸುವ ರೀತಿಯಲ್ಲಿ ಮಿಂಚು ಹರಿಸಿದೆ. ಮೂರು ವರ್ಷಗಳ ಅಧಿಕಾರಾವಧಿ   ಅನುಭವಿಸಿರುವ   ಕಾಂಗ್ರೆಸ್‌ನ ಸಂತೃಪ್ತ ಭಾವ   ದಲ್ಲಿ ಹಠಾತ್ತಾಗಿ ಕಂಪನ ಉಂಟಾಗಿ ನಿದ್ದೆಯಿಂದ ಬಡಿದೆಬ್ಬಿಸಿದಂತೆ  ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಹಿಂಸಾಚಾರವನ್ನು ಪರಿಣಾಮಕಾರಿಯಾಗಿ  ನಿಯಂತ್ರಿಸುವಲ್ಲಿ ಸರ್ಕಾರ ವಿಫಲಗೊಂಡಿತ್ತು. ನಂತರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಮತ್ತು ಹಿಂಸಾಚಾರ ಮರುಕಳಿಸದಂತೆ ಮಾಡುವಲ್ಲಿ ಯಶಸ್ವಿಯಾದವು.  ರಾಜಕೀಯ ಎದುರಾಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ವಿವಾದದಲ್ಲಿ ಒಗ್ಗಟ್ಟು  ಪ್ರದರ್ಶಿಸುವಲ್ಲಿ ತೋರಿದ ಜಾಣ್ಮೆಯ ಹೆಗ್ಗಳಿಕೆ ಪಕ್ಷದ ಮುಖಂಡರಿಗೆ ಸಲ್ಲುತ್ತದೆ.
ಮುಖ್ಯಮಂತ್ರಿ ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಬಹಿಷ್ಕಾರ ಹಾಕುವ ಮೂಲಕ ಬಿಜೆಪಿಯು ಆರಂಭದಲ್ಲಿ ತಾನೇ ಹೆಣೆದ ಬಲೆಯೊಳಗೆ ಸಿಲುಕಿಕೊಂಡಿತ್ತು. ಆನಂತರ ತನ್ನ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡು ಸರ್ಕಾರದ ಬೆಂಬಲಕ್ಕೆ ನಿಂತು ವಿಧಾನಸಭೆಯಲ್ಲಿ ಸರ್ವಸಮ್ಮತದ ನಿರ್ಧಾರ ಕೈಗೊಳ್ಳುವುದಕ್ಕೆ ಸಹಕರಿಸಿತ್ತು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಹಳ ವರ್ಷಗಳ ನಂತರ ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ  ರಾಜಕೀಯ ಪಕ್ಷಗಳೆಲ್ಲ ಅಪರೂಪಕ್ಕೆ ಒಗ್ಗಟ್ಟು ಪ್ರದರ್ಶಿಸಿರುವುದು  ಕಂಡುಬಂದಿತು. ಈ ಬೆಳವಣಿಗೆಯು ದೀರ್ಘಾವಧಿಯಲ್ಲಿ ಬೀರಬಹುದಾದ ಪರಿಣಾಮಗಳನ್ನು ಕಾದು ನೋಡುವುದು ಕುತೂಹಲಕಾರಿ ಸಂಗತಿಯಾಗಿದೆ.

ಸದ್ಯಕ್ಕೆ ಕಾಂಗ್ರೆಸ್‌ ಪಕ್ಷದ ಒಳಗೆ  ನಾಯಕತ್ವ ಬದಲಾವಣೆ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವ ಸಾಧ್ಯತೆ  ದೂರವಾಗಿದೆ.  ರಾಜ್ಯಮಟ್ಟದಲ್ಲಿ ಪಕ್ಷದ ಮುಖಂಡರೆಲ್ಲ ಒಗ್ಗಟ್ಟು ಪ್ರದರ್ಶಿಸಿ, ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಲು ಕಾವೇರಿ ವಿವಾದ ಸುವರ್ಣ ಅವಕಾಶ  ಒದಗಿಸಿಕೊಟ್ಟಿದೆ. 2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಕಾರಣಕ್ಕೆ ಬಿಜೆಪಿಯು  ತನ್ನ ಕೇಂದ್ರೀಯ ನಾಯಕತ್ವದ ಮೇಲೆ ಹೆಚ್ಚಾಗಿ ಅವಲಂಬಿಸಿದೆ.

ರಾಜಕೀಯವಾಗಿ ಕೊಂಚ ಮಟ್ಟಿಗೆ ಕಳಾಹೀನಗೊಂಡಂತೆ ಕಾಣುತ್ತಿದ್ದ ಜೆಡಿಎಸ್‌ಗೆ,  ಪಕ್ಷದ ಮುಖಂಡ ಎಚ್‌.ಡಿ.  ದೇವೇಗೌಡ ಅವರು ತಳೆದ ಮುತ್ಸದ್ದಿತನದ ನಿಲುವಿನಿಂದಾಗಿ ಮರುಹುಟ್ಟು ಬಂದಂತಾಗಿ ರಾಜಕೀಯ ಮಹತ್ವ ಪ್ರಾಪ್ತವಾಗಿದೆ. ಕಾವೇರಿಯಂತಹ ಜನರ ಭಾವನೆಗಳನ್ನು ಉದ್ದೀಪಿಸುವ ವಿವಾದಗಳು ರಾಜಕೀಯ ಕಾರ್ಯತಂತ್ರ ಬದಲಿಸುತ್ತವೆ ಮತ್ತು ರಾಜಕೀಯ ಪಕ್ಷಗಳ ರಾಜಕೀಯ ಸಮೀಕರಣವನ್ನೇ ಮರು ವ್ಯಾಖ್ಯಾನ ಮಾಡುತ್ತವೆ ಎನ್ನುವುದು ನಿಜಕ್ಕೂ ಆಸಕ್ತಿಕರ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT