ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನವಾಸಿ, ಕಲ್ಯಾಣ, ಪೆರುಗ್ವೆ

Last Updated 22 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಹಸಿವಿರದ, ಸಂಘರ್ಷವಿರದ, ದುಃಖವಿರದ, ಸಮಾನತೆ, ಸಹಬಾಳುವೆಯ ರಾಜ್ಯದ ಕನಸು ಮನುಷ್ಯನಷ್ಟೇ ಹಳೆಯದು.

ಭಾಷೆಯ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬರುವಂಥದ್ದು. ಪಂಪ ಬಣ್ಣಿಸಿರುವ ಬನವಾಸಿ ಮತ್ತು ಉತ್ತಮ ಭೋಗಭೂಮಿ ಅಂಥ ಕನಸು; ಕುಮಾರವ್ಯಾಸ ವಿದುರ ನೀತಿ, ನಾರದ ನೀತಿಗಳ ಮುಖಾಂತರ ಆದರ್ಶರಾಜ್ಯದ ಚಿತ್ರ ಕಟ್ಟಿದ.
 
ಪ್ಲಾಟೋನ ರಿಪಬ್ಲಿಕ್, ಗ್ರೀಕ್ ಲೇಖಕ ಹೆಸಾಯಿಡ್, ವರ್ಜಿಲ್, ಎಚ್.ಜಿ. ವೆಲ್ಸ್, ಆದರ್ಶರಾಜ್ಯಗಳ ಕಲ್ಪನೆಯದೇ ಪ್ರತ್ಯೇಕ ಸಾಹಿತ್ಯ ಪ್ರಕಾರವಾಗುವಷ್ಟು ಬರವಣಿಗೆ ಇದೆ.
 
ಆದರ್ಶರಾಜ್ಯವನ್ನು ಕಿಂಚಿತ್ತಾದರೂ ನಿಜಮಾಡಿಕೊಳ್ಳಲು ಯತ್ನಿಸಿದ್ದು 12ನೆಯ ಶತಮಾನದ ಕರ್ನಾಟಕದ ಕಲ್ಯಾಣ. ಆದರೆ ಯಾವುದೂ ಒಮ್ಮೆ ಮಾತ್ರ ಸಂಭವಿಸುವುದಿಲ್ಲ ಅನ್ನುವುದಕ್ಕೆ ನನಗೆ ಸಿಕ್ಕ ಉದಾಹರಣೆ ಪೆರುಗ್ವೆಯಲ್ಲಿ ಜೆಸೂಯಿಟ್ಟರು ಮಾಡಿದ ಸಾಹಸದ್ದು. ಕಲ್ಯಾಣ ಮತ್ತು ಪೆರುಗ್ವೆಯ ಸಾಹಸಗಳೆರಡೂ ಭಾಷೆಗೆ ಸಂಬಂಧಿಸಿದ್ದು ಅನ್ನುವುದು ಇನ್ನೊಂದು ಕುತೂಹಲ.

ಲಾ ಪ್ಲಾಟಾ ಎಂಬುದು ಸ್ಪಾನಿಶ್ ಭಾಷೆಯ ಹೆಸರು. ಆ ಪ್ರದೇಶವನ್ನು ಪತ್ತೆ ಹಚ್ಚಿದ್ದು 1515ರಲ್ಲಿ. ಅದು ಅರ್ಜೆಂಟೀನಾ, ಬ್ರೆಜಿಲ್ ಮತ್ತು ಬೊಲಿವಿಯಾಗಳಿಗೆ ಒತ್ತಿಕೊಂಡಿರುವ ನಾಡು. ಈಗಿನ ಹೆಸರು ಪೆರುಗ್ವೆ.

ಅಲ್ಲಿನ ಭಾಷೆಯನ್ನಾಡುತಿದ್ದ ಸ್ಥಳೀಯ ಗ್ವರಾನಿ ಭಾಷೆಯನ್ನಾಡುತಿದ್ದ ನೆಲದ ಮಕ್ಕಳ ನುಡಿಯಲ್ಲಿ `ವೈವಿಧ್ಯದ ನಾಡು~ ಅನ್ನುವ ಅರ್ಥವಿತ್ತು. ಕಂಡುಹಿಡಿದವನು ಸ್ಪೇನಿನ ಜುಆನ್ ಡಿ ಸೋಲಿಸ್.

1590ರ ಹೊತ್ತಿಗೆ ಅಲ್ಲಿ ಸ್ಪೇನಿನ ವಸಾಹತು ಸ್ಥಾಪನೆಯಾಗಿತ್ತು. ಹತ್ತು ನಗರಗಳು ನಲವತ್ತು ಕಾಲೊನಿಗಳು ತಲೆ ಎತ್ತಿದ್ದವು. ಸ್ಥಳೀಯರನ್ನು ನಿಷ್ಕರುಣೆಯಿಂದ ಹೆದರಿಸಿ, ಬೆದರಿಸಿ, ದಾಳಿನಡೆಸಿ, ಕೊಂದು, ಸ್ಪೇನಿನ ಆಳ್ವಿಕೆಗೆ ಒಳಪಡಿಸಿದ್ದರು. ಅವರೆಲ್ಲ ಬಿಳಿಯರ ಗುಲಾಮರೋ ಜೀತದಾಳುಗಳೋ ಆಗಿದ್ದರು.

ಸ್ಪೇನಿನ ರಾಜರು ಸ್ಥಳೀಯರನ್ನು ಕಾಪಾಡುವುದಕ್ಕೆಂದು ಅವರದ್ದೇ ಪ್ರತ್ಯೇಕ `ರಿಡಕ್ಷನ್~ (ವಸತಿ)ಗಳನ್ನು ಸ್ಥಾಪಿಸಿದರು. ಸ್ಪೇನಿನ ಅರಸ `ಕತ್ತಿಯ ಬಲದಿಂದಲ್ಲ, ದೈವೀ ಶಬ್ದದ ಬಲದಿಂದ~ ಸ್ಥಳೀಯರನ್ನು ಪರಿವರ್ತಿಸಿ ಎಂದು ಕರೆನೀಡಿದ. ಆಗ ಜೆಸೂಯಿಟ್‌ಗಳ ಒಂದು ತಂಡ ಅಲ್ಲಿಗೆ ಬಂದಿಳಿಯಿತು.

ಜೆಸೂಯಿಟ್ ಅನ್ನುವುದು ಒಂದು ಪಂಥ. ಸ್ಪೇನಿನ ಇಗ್ನಾಶಿಯಸ್ ಲಯೋಲಾ ಅದನ್ನು 1514ರಲ್ಲಿ ಸ್ಥಾಪಿಸಿದ.
 
ಶಿಕ್ಷಣ, ಸಂಸ್ಕೃತಿಗಳ ವಿಷಯದಲ್ಲಿ ಜಗತ್ತಿನಾದ್ಯಂತ ಈ ಪಂಥದವರು ಮಾಡಿದ ಕೆಲಸ ದೊಡ್ಡದು. ಚೀನಾದ ಭಾಷೆಯ ಅಧ್ಯಯನದಲ್ಲೂ, ಮಲೇರಿಯ ರೋಗಕ್ಕೆ ಔಷಧವಾಗಿ ಬಳಕೆಯಾಗುತಿದ್ದ ಪೆರುವಿನ ಮರದ ತೊಗಟೆಯನ್ನು ಯೂರೋಪಿಗೆ ಕಳಿಸಿ ಅದೇ ಮುಂದೆ ಕ್ವಿನೈನ್ ಆಗಿ ಜನರ ಪ್ರಾಣ ಉಳಿಸಿದ್ದರಲ್ಲೂ ಹೊಸ ಜಗತ್ತಿನ ದುರ್ಗಮ ಪ್ರದೇಶಗಳಿಗೆ ತೆರಳಿ ಸ್ಥಳೀಯ ಭಾಷೆಗಳ ವ್ಯಾಕರಣ, ನಿಘಂಟುಗಳನ್ನು ರಚಿಸಿ, ಆಯಾ ಪ್ರದೇಶಗಳ ಒಳನಾಡಿನ ಅಪಾಯಕಾರೀ ಪ್ರದೇಶಗಳ ಅನ್ವೇಷಣೆಯಲ್ಲಿ ತೊಡಗಿ ಭೂಗೋಳಶಾಸ್ತ್ರದ ಬೆಳವಣಿಗೆಯಾಗುವಲ್ಲೂ ಜೆಸೂಯಿಟ್ಟರ ಪಾತ್ರವಿದೆ.

ಪೆರುಗ್ವೆಯಲ್ಲಿ ಅವರು ಕಟ್ಟಿದ ಆದರ್ಶ ರಾಜ್ಯ ಇವತ್ತಿಗೂ ಕುತೂಹಲ ಕೆರಳಿಸುವಂತಿದೆ. ಸ್ಥಳೀಕ ಜನರು ಸ್ಪೇನಿನ, ಡಚ್ಚರ, ಪೋರ್ಚುಗೀಸರ ದಾಳಿಗೆ, ಬಿಳಿಯರ ಆಕ್ರಮಣಕ್ಕೆ, ಗುಲಾಮ ವ್ಯಾಪಾರಿಗಳ ಕ್ರೌರ್ಯಕ್ಕೆ ತುತ್ತಾಗಿದ್ದರು.
 
ಜೆಸೂಯಿಟ್ಟರು ಉರುಗ್ವೆ ನದಿಯ ಅಂಚಿನ ಹುಲ್ಲುಗಾವಲು ಮತ್ತು ಕಾಡುಗಳಲ್ಲಿ, ಬಿಳಿಯರು ಕಾಲಿಡಲು ಅಂಜುತಿದ್ದ ಜಲಪಾತಗಳ ಮೇಲುಭಾಗದಲ್ಲಿ, ಕ್ರಿಶ್ಚಿಯನ್ನರಾದ ಸ್ಥಳೀಕರ ವಸತಿಗಳನ್ನು ವ್ಯವಸ್ಥೆಗೊಳಿಸಿದರು.
 
ಸ್ಪೇನಿನ ಅರಸ ಮೂರನೆಯ ಫಿಲಿಪ್‌ನ ಮನ ಒಲಿಸಿದರು. ಜೆಸೂಯಿಟ್ಟರು ಮತ್ತು ಕಾಲೊನಿಯ ಗೌರ್ನರ್ ಹೊರತುಪಡಿಸಿ ಬೇರೆ ಯಾವ ಬಿಳಿಯರಿಗೂ ಅಲ್ಲಿ ಪ್ರವೇಶವಿಲ್ಲ ಎಂಬ ಆಜ್ಞೆ ಮಾಡಿಸಿದರು.

ಮಿಕ್ಕ ಧರ್ಮಪ್ರಚಾರಕರು ಮಾಡುವಂತೆ ಅವರು ಸ್ಥಳೀಯರಿಗೆ ತಮ್ಮ ಭಾಷೆ ಅಥವ ಪೋರ್ಚುಗೀಸ್ ಕಲಿಸುವ ಬದಲಾಗಿ ತಾವೇ ಅವರ ಭಾಷೆಯನ್ನು ಕಲಿತರು; ಕಾಲೊನಿಸ್ಟರೊಡನೆ ಯಾವ ಸಂಪರ್ಕವೂ ಸ್ಥಳೀಯರಿಗೆ ಏರ್ಪಡದಂತೆ ನೋಡಿಕೊಂಡರು. ದಾನ, ಮಾನವೀಯತೆ, ಸಂಗೀತ ಅವರು ಬಳಸಿದ ಉಪಕರಣಗಳು.
 
ಯೂರೋಪಿನ ಎಲ್ಲ ಪ್ರಮುಖ ವಾದ್ಯಗಳನ್ನೂ ನುಡಿಸಬಲ್ಲ, ಇಟಲಿಯ ಒಪೆರಾಗಳೂ ಸೇರಿದಂತೆ ವೈವಿಧ್ಯಮಯ ರಚನೆಗಳನ್ನು ಪ್ರಸ್ತುತಪಡಿಸಬಲ್ಲ ಆರ್ಕೆಸ್ಟ್ರಾಗಳನ್ನು ರೂಪಿಸಿದರು; ಸ್ಥಳೀಯರು ಕೂಡ ಸಮೂಹ ಗಾಯನದಲ್ಲಿ ಪರಿಣಿತರಾದರು.

ಸ್ಥಳೀಯರು ಹಡಗುಗಳಲ್ಲಿ ಅಥವ ಹೊಲಗಳಲ್ಲಿ ತಮ್ಮ ಕೆಲಸಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ ಅವರ ಜೊತೆಯಲ್ಲಿ ಸಂಗೀತಗಾರರ ಗುಂಪೊಂದು ಇರುತಿತ್ತು. ಹಾಡು, ನರ್ತನ ಮತ್ತು ಕ್ರೀಡಾ ಸ್ಪರ್ಧೆಗಳೊಡನೆ ಕ್ರಿಶ್ಚಿಯನ್ ಹಬ್ಬಗಳ ಆಚರಣೆ ನಡೆಯುತಿತ್ತು. ಜೆಸೂಯಿಟ್ ಫಾದರ್‌ಗಳು ಕಾಮಿಡಿಗಳನ್ನು ರಚಿಸುತಿದ್ದರು, ಜನ ಅದನ್ನು ಕಲಿತು ಅಭಿನಯಿಸುತಿದ್ದರು.

ಆರ್ಥಿಕತೆ ಮತ್ತು ಆಡಳಿತ ಸಂಪೂರ್ಣವಾಗಿ ಜೆಸೂಯಿಟ್‌ಗಳ ನಿಯಂತ್ರಣದಲ್ಲಿತ್ತು. ಸಂಕೀರ್ಣವಾದ ಕೈಗಡಿಯಾರ, ಸೂಕ್ಷ್ಮವಾದ ಕುಸುರಿ, ಸಂಗೀತವಾದ್ಯ ಮೊದಲಾದ ಎಲ್ಲ ಯೂರೋಪಿಯನ್ ವಸ್ತುಗಳ ಮಾದರಿಯನ್ನು ಅನುಸರಿಸಿ ನಕಲುಗಳನ್ನು ತಯಾರು ಮಾಡುವ ಕೌಶಲ ಸ್ಥಳೀಯರಿಗೆ ಸಿದ್ಧಿಸಿತ್ತು. ದುಡಿಮೆ ಎಲ್ಲರಿಗೂ ಕಡ್ಡಾಯವಾಗಿತ್ತು; ಯುವಕರು ತಮ್ಮ ಇಷ್ಟದ ಕಸುಬನ್ನು ಆಯ್ದುಕೊಳ್ಳುವ ಅವಕಾಶವಿತ್ತು; ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಿಡುವು ಇರುತಿತ್ತು.

ಪ್ರತಿದಿನದ ದುಡಿಮೆಯ ಅವಧಿ ಎಂಟು ಗಂಟೆಗಳ ಅವಧಿಯದಾಗಿತ್ತು. ಭೂಮಿಯ ಸ್ವಲ್ಪ ಭಾಗ ಖಾಸಗಿಯವರಿಗೆ ಸೇರಿದ್ದರೂ ಬಹಳಷ್ಟು ಜಮೀನು ಸಮುದಾಯದ ಆಸ್ತಿಯಾಗಿತ್ತು.
 
ಉತ್ಪತ್ತಿಯನ್ನು ಸರ್ಕಾರಕ್ಕೆ ಒಪ್ಪಿಸಲಾಗುತಿತ್ತು; ಸ್ವಲ್ಪ ಭಾಗವನ್ನು ಬಿತ್ತನೆಗೆ ಅಥವ ಸಂಕಷ್ಟಕಾಲಕ್ಕೆಂದು ಕಾದಿಡುತಿದ್ದರು; ಇನ್ನು ಸ್ವಲ್ಪ ಭಾಗ ಸ್ಪೇನಿನ ಅರಸನಿಗೆ ತಲೆಗಂದಾಯ ಕಟ್ಟಲು ವ್ಯಯವಾಗುತಿತ್ತು; ಮಿಕ್ಕದ್ದನ್ನೆಲ್ಲ ಅಲ್ಲಿದ್ದ ಇಪ್ಪತ್ತು ಸಾವಿರ ಕುಟುಂಬಗಳಿಗೆ, ಆಯಾ ಕುಟುಂಬದ ಅಗತ್ಯಕ್ಕೆ ಅನುಸಾರವಾಗಿ ಹಂಚಲಾಗುತಿತ್ತು.
 
ನಿರ್ದೇಶಕರು, ಉಸ್ತುವಾರಿಯವರು, ವೈದ್ಯರು, ಅಧ್ಯಾಪಕರು ಮತ್ತು ಪಾದ್ರಿಗಳಾಗಿ ದುಡಿಯುತಿದ್ದ 150 ಜೆಸೂಯಿಟ್‌ಗಳ ಸಲುವಾಗಿ ಇನ್ನೊಂದು ಭಾಗ ವ್ಯಯವಾಗುತಿತ್ತು.
 
ಜೆಸೂಯಿಟ್‌ರ ಸಲಹೆಯ ಮೇರೆಗೇ ರಾಜಾಜ್ಞೆಯೊಂದು ಜಾರಿಗೆ ಬಂದಿತ್ತು; ಅದರ ಪ್ರಕಾರ ಯಾರೂ ಆರ್ಥಿಕತೆಯಿಂದ ದೊರೆತ ಲಾಭವನ್ನು ಹಂಚಿಕೊಳ್ಳುವಂತಿರಲಿಲ್ಲ; ಸ್ಥಳೀಯ ಮುಖ್ಯಾಧಿಕಾರಿಗೆ ಕಾಲ ಕಾಲಕ್ಕೆ ಲೆಕ್ಕಾಚಾರ ಒಪ್ಪಿಸಬೇಕಾಗಿತ್ತು.
 
ಸ್ಥಳೀಯ ನ್ಯಾಯಾಧೀಶರು ಮತ್ತು ಪೋಲೀಸರು ಕಾನೂನು ವ್ಯವಸ್ಥೆಯನ್ನು ನೋಡಿಕೊಳ್ಳುತಿದ್ದರು. ಛಡಿಯೇಟು, ಸೆರೆವಾಸ ಮತ್ತು ಗಡೀಪಾರಿನ ಶಿಕ್ಷೆಗಳಿದ್ದವು, ಮರಣದಂಡನೆ ಇರಲಿಲ್ಲ. ಪ್ರತಿಯೊಂದು ಜನವಸತಿಗೂ ಅದರದ್ದೇ ಆಸ್ಪತ್ರೆ, ಕಾಲೇಜು, ಚರ್ಚು ಮತ್ತು ಮಕ್ಕಳ ಹಾಗೂ ದುರ್ಬಲರ ಆಶ್ರಯತಾಣಗಳು ಇದ್ದವು.
 
ಸ್ಥಳೀಯರಿಗೆ ಜೀವ ಪೋಷಣೆ, ಸುಭದ್ರತೆ, ಶಾಂತಿ, ಸಾಂಸ್ಕೃತಿಕ ಬದುಕು ದೊರೆತಿತ್ತು; ಅದಕ್ಕೆ ಪ್ರತಿಯಾಗಿ ಅವರು ಕ್ರಿಶ್ಚಿಯನ್ ಧರ್ಮ ಮತ್ತು ಶಿಸ್ತನ್ನು ಪಾಲಿಸಬೇಕಾಗಿತ್ತು. ಈ ಪ್ರಯೋಗವನ್ನು ಧರ್ಮನಿಷ್ಠ ಕಮ್ಯುನಿಸಂ ಎಂದು ಗುರುತಿಸಿದ್ದಾರೆ; ವಾಲ್ಟೇರ್ ಪೆರುಗ್ವೆಯ ಈ ಪ್ರಯೋಗವನ್ನು ಮನುಕುಲದ ವಿಜಯ ಎಂದು ಕೊಂಡಾಡಿದ್ದಾನೆ.

ಇಂಥ ಶ್ಲಾಘನೀಯ ಕಲ್ಪನೆ ಜೆಸೂಯಿಟ್ಟರಿಗೆ ಬಂದದ್ದು ಎಲ್ಲಿಂದ? ಬಹುಶಃ ಮೂರ್‌ನ `ಉಟೋಪಿಯಾ~ (1516) ಕೃತಿಯಿಂದ ಸ್ವಲ್ಪ, ರೂಸೋನ ಸೋಶಿಯಲ್ ಕಾಂಟ್ರಾಕ್ಟ್ ಪುಸ್ತಕದಿಂದ ಅನ್ನುವುದು ವಿದ್ವಾಂಸರ ಅಭಿಪ್ರಾಯ. ಜೊತೆಗೆ ಮನುಷ್ಯನ ಮಿತಿಗಳನ್ನು ಬಲ್ಲ ಜೆಸೂಯಿಟ್ ನೈತಿಕತೆಯೂ ಕಾರಣ, ಅರಸ ಫಿಲಿಪ್‌ನ ಸಹಕಾರವೂ ಇತ್ತು ಅನ್ನುತ್ತಾರೆ.

ಹೊರಗಿನ ಮನುಷ್ಯಕುಲವನ್ನು ಪೂರಾ ಹೊರಗಿಡಲು ಆಗದಿದ್ದುದರಿಂದಲೇ ಈ ಪ್ರಯೋಗ ನಾಶವಾಯಿತು. ಜೆಸೂಯಿಟ್ಟರು ವ್ಯಾಪಾರ ವಾಣಿಜ್ಯದಲ್ಲಿ ತೊಡಗಿದ್ದಾರೆಂದು ಸ್ಪೇನಿನ ವ್ಯಾಪಾರಸ್ಥರು ದೂರಿದರು; ಮನುಷ್ಯರನ್ನು, ಸಂಪನ್ಮೂಲಗಳನ್ನು ಶೋಷಿಸಲು ಅತ್ಯಂತ ಅನುಕೂಲಕರವಾದ ಪ್ರದೇಶದಿಂದ ತಮ್ಮನ್ನು ಹೊರಗಿಟ್ಟಿರುವುದಕ್ಕಾಗಿ ಸ್ಪೇನಿನ ಕಾಲೊನಿಸ್ಟರು ಮುನಿದರು.
 
ಗುಲಾಮರಿಗಾಗಿ ಬೇಟೆಯಲ್ಲಿ ತೊಡಗಿದ್ದ ಗುಂಪುಗಳು ಜೆಸೂಯಿಟ್ ವಸತಿಗಳ ಮೇಲೆ ಮತ್ತೆ ಮತ್ತೆ ದಾಳಿಮಾಡುತಿದ್ದವು. ಫ್ರಾನ್ಸ್, ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿದ್ದ ಇತರ ಜೆಸೂಯಿಟ್ಟರು ರಾಜಕೀಯ ಹುನ್ನಾರ ನಡೆಸುತಿದ್ದರು; ಮುಕ್ತ ಆಲೋಚನೆಯ ಪಂಥ, ಕ್ಲೆರ್ಜಿಯ ವಿರುದ್ಧವಾಗಿ ಪ್ರಬಲಿಸುತಿದ್ದ ಮನೋಧರ್ಮ ಇವೆಲ್ಲ ಸೇರಿ ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಎಲ್ಲ ದೇಶಗಳಲ್ಲೂ ಜೆಸೂಯಿಟ್ ಸಂಘಟನೆಗಳು ಬಹಿಷ್ಕಾರಕ್ಕೆ ಗುರಿಯಾಗಿದ್ದವು.
 
ಪೋರ್ಚುಗೀಸರಿಗೂ ಸ್ಪೇನಿನವರಿಗೂ 1750ರಲ್ಲಿ ಒಂದು ಒಪ್ಪಂದವಾಯಿತು. ಅದರ ಪ್ರಕಾರ ಮೂವತ್ತು ಸಾವಿರ ಸ್ಥಳೀಯ ಇಂಡಿಯನ್ ಜನಸಂಖ್ಯೆಯ ಏಳು ಜೆಸೂಯಿಟ್ ವಸತಿಗಳು ಪೋರ್ಚುಗಲ್‌ನ ವಶಕ್ಕೆ ಬಂದವು.
 
ಜೆಸೂಯಿಟ್‌ರ ವಶದಲ್ಲಿದ್ದ ಭೂಮಿಯಲ್ಲಿ ಹೇರಳವಾದ ಚಿನ್ನವಿದೆ, ಅದನ್ನು ಜೆಸೂಯಿಟ್ಟರು ಬಚ್ಚಿಟ್ಟುಕೊಂಡಿದ್ದಾರೆ ಅನ್ನುವ ಗಾಳಿ ಸುದ್ದಿ ಹರಡಿತು.

ಜೆಸೂಯಿಟ್ಟರು ತಮ್ಮ ಏಳು ಜನವಸತಿಗಳನ್ನು ಮೂವತ್ತು ದಿನಗಳೊಳಗೆ ಖಾಲಿಮಾಡಬೇಕೆಂದು ಪೋರ್ಚುಗೀಸ್ ಅಧಿಕಾರಿಗಳು ಆಜ್ಞೆ ಮಾಡಿದರು. ಒಬ್ಬನ ಹೊರತಾಗಿ ಮಿಕ್ಕ ಜೆಸೂಯಿಟ್‌ಗಳು ಶರಣಾಗತಿಯನ್ನು ಪ್ರತಿಪಾದಿಸಿದರು; ಇಂಡಿಯನ್ನರು ಹೋರಾಡಲು ಬಯಸಿದರು; ಐದು ವರ್ಷಗಳ ಕಾಲ ಪೋರ್ಚುಗೀಸರ ದಾಳಿಯನ್ನು ಯಶಸ್ವಿಯಾಗಿ ತಡೆದರು.
 
1755ರಲ್ಲಿ ಪೋರ್ಚುಗೀಸರು ದೊಡ್ಡ ದೊಡ್ಡ ತೋಪುಗಳನ್ನು ತಂದು ನೂರಾರು ಇಂಡಿಯನ್ನರ ಕಗ್ಗೊಲೆ ನಡೆಸಿದರು. ಉಳಿದವರು ಕಾಡುಗಳೊಳಕ್ಕೆ ಪಲಾಯನ ಮಾಡಿದರು, ಅಥವಾ ಶರಣಾದರು. ಜೆಸೂಯಿಟ್ ಸಂಘದ ಹಿರಿಯರು ಅಲ್ಲಿನ ಜೆಸೂಯಿಟ್ಟರೆಲ್ಲ ಯೂರೋಪಿಗೆ ಹಿಂದಿರುಗಬೇಕೆಂದು ಆಜ್ಞೆಮಾಡಿದರು.
 
ಮಹಾಪ್ರಯೋಗ ಕೊನೆಗಂಡಿತು. ಈ ವಸ್ತುವನ್ನು ಇಟ್ಟುಕೊಂಡು 1986ರಲ್ಲಿ ರೊಲಾಂಡ್ ಜೋಫ್ ದಿ ಮಿಶನ್ ಎಂಬ ಪ್ರಸಿದ್ಧ ಚಲನಚಿತ್ರ ನಿರ್ಮಿಸಿದ್ದಾನೆ. ಪೆರುಗ್ವೆಯ ಪ್ರಯೋಗ ಕುರಿತು ಹೆಚ್ಚಿನ ಮಾಹಿತಿಗೆhttp://www.newadvent.org/cathen/12688b.htm ಜಾಲತಾಣ ನೋಡಿ. 

ಜೆಸೂಯಿಟ್‌ರ ಈ ಪ್ರಯೋಗ ಕನ್ನಡ ನಾಡಿನಲ್ಲಿ 12ನೆಯ ಶತಮಾನದಲ್ಲಿ ನಡೆದ ಪ್ರಯೋಗದಷ್ಟೆ ಮಹತ್ವದ್ದು. ಇಲ್ಲಿ ಬಿಜ್ಜಳ ಇದ್ದ ಹಾಗೆ ಅಲ್ಲಿ ಫಿಲಿಪ್ ಇದ್ದ; ಇಲ್ಲಿ ಧರ್ಮಕ್ಕೆ ಸ್ಥಳೀಯ ಭಾಷೆಯನ್ನು ಬಳಸಿದ ಹಾಗೆ ಅಲ್ಲೂ ಜೆಸೂಯಿಟ್ಟರು ಸ್ಥಳೀಯ ಭಾಷೆ ಕಲಿತು ಕೆಲಸಮಾಡಿದರು; ಇಲ್ಲಿ ಕಾಯಕಕ್ಕೆ ಮಹತ್ವ ಸಂದ ಹಾಗೆ ಅಲ್ಲೂ ದುಡಿಮೆ ಕಡ್ಡಾಯವಾಗಿತ್ತು.ಅಲ್ಲಿನ ಖಾಸಗಿ ಒಡೆತನವಿರದ ಸಮಾನತೆ ಇಲ್ಲಿನ ಶರಣರ ದಾಸೋಹ ಕಲ್ಪನೆ; ಅವರಿಗೆ ಸ್ಫೂರ್ತಿ ನೀಡಿದ್ದು ಮೂರ್ ಮತ್ತು ರೂಸೋನ ಪುಸ್ತಕ ಮತ್ತು ಅವರೇ ರೂಪಿಸಿಕೊಂಡ ಧಾರ್ಮಿಕತೆಯ ವ್ಯಾಖ್ಯಾನ. ಇಲ್ಲಿ ಶರಣರ ಕ್ರಾಂತಿಯ ನಂತರ ಅವರ ವಚನ ನಾಡಿನಲ್ಲಿ ಮುಂದೆ ನಡೆದ ಸಮಾನತೆಯ ಹೋರಾಟಗಳಿಗೆ ಸ್ಫೂರ್ತಿ ನೀಡಿತು.

ಆದರ್ಶರಾಜ್ಯ ನಿಜವಾಗುವುದು ಅಸಾಧ್ಯವೇ? ಎಲ್ಲ ರಾಜಕೀಯ ಆದರ್ಶಗಳೂ ಕೆಲವೇ ದಶಕಗಳಲ್ಲೋ ಶತಮಾನದ ಅವಧಿಯಲ್ಲೋ ಕುಸಿದದ್ದು ಕಾಣುತ್ತೇವೆ.

ಪಂಪನ ಬನವಾಸಿಯ ವರ್ಣನೆ ಮುಗಿಯುತಿದ್ದಂತೆ ಅರಿಕೇಸರಿಯು ಒಂದೇ ಬಾಣದಲ್ಲಿ ಬನವಾಸಿಯನ್ನು ತನ್ನದಾಗಿಸಿಕೊಂಡ ವಾಸ್ತವ ಎದುರಾಗುತ್ತದೆ. ಶರಣ ಸಮೂಹ, ಪೆರುಗ್ವೆಯ ಪ್ರಯೋಗ ಇವು ಕೂಡ ಹೊರಲೋಕದ ಒತ್ತಡವನ್ನು ತಡೆಯಲಾಗಲಿಲ್ಲ.

ಮೂರ್‌ನ ಉಟೋಪಿಯ ಎಂಬ ಪದ `ಎಲ್ಲೂ ಇರದ ನಾಡು~ ಮತ್ತು `ಒಳ್ಳೆಯ ನಾಡು~ ಎಂಬ ಎರಡೂ ಅರ್ಥಗಳನ್ನು ಹೊಂದಿದೆ. ಆದರ್ಶ ರಾಜ್ಯದ ಕಲ್ಪನೆಗಳು ಕೇವಲ ಧಾರ್ಮಿಕ ಕಲ್ಪನೆಗಳೋ, ಉತ್ತಮಭೋಗಭೂಮಿ ಮತ್ತು ಈಡನ್ ತೋಟದ ಹಾಗೆ?

ಅಥವ ಅವನ್ನು ನಿಜಮಾಡಿಕೊಳ್ಳುವಂತೆ ಒತ್ತಾಯಿಸುವ ಪ್ರಚೋದಕಗಳೋ? ಮನುಷ್ಯ ಮನಸ್ಸು ಭಾಷೆಯಲ್ಲಿ ಕಲ್ಪಿಸಿಕೊಂಡ ಕನಸುಗಳೋ? ಸಮಾನತೆ, ಸಹಬಾಳುವೆ, ಸಮಪಾಲು, ಸಮ ಗೌರವ, ಮಾನವೀಯ ಆಳ್ವಿಕೆ ಇವು ಎಲ್ಲ ಆದರ್ಶರಾಜ್ಯಗಳ ತಿರುಳು.
 
ಅಸಮಾನತೆಯ ಲಾಭದ ಸುಖದ ರುಚಿಹತ್ತಿದ ಮನಸಿಗೆ ಲಾಭವಿಲ್ಲದ ಸಮಾನತೆಯ ಸಂತೋಷವನ್ನು ಅನುಭವಿಸಲು ಆಗುವುದೇ ಇಲ್ಲವೋ? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT