ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನ ಬಂಡಿ ಹಾಗೂ ಬುಲೆಟ್ ಟ್ರೇನು

Last Updated 20 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ತಮ್ಮ ಮಾಜಿ ರಾಜಧಾನಿ ಅಹಮದಾಬಾದು ಹಾಗೂ ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಡುವೆ ಶರವೇಗದ ಬುಲೆಟ್ ಟ್ರೇನೊಂದನ್ನು ಓಡಿಸಬೇಕೆಂಬುದು ಈ ದೇಶದ ಹಾಲಿ ಪ್ರಧಾನಿಯವರ ಕನಸು. ಹೇಗೆ, ಗತಿಸಿದ ಪ್ರಿಯಳಿಗಾಗಿ ಒಂದು ತಾಜಮಹಲನ್ನು ಕಟ್ಟಿಸಬೇಕೆಂಬುದು ಚಕ್ರವರ್ತಿ ಶಹಜಹಾನನ ಕನಸಾಗಿತ್ತೋ ಹಾಗೆಯೇ ನಮ್ಮ ಪ್ರಧಾನಿಯವರದ್ದು ಈ ಕನಸು. ಹೇಗೆ ತಾಜಮಹಲೆಂಬುದು ಅಂದಿನ ಬಡ ಭಾರತೀಯನಿಗೆ ದುಬಾರಿ ಕನಸಾಗಿತ್ತೋ ಹಾಗೆಯೇ ಇಂದಿನವನಿಗೆ ಬುಲೆಟ್ ಟ್ರೇನು ದುಬಾರಿ ಎಂಬುದು ಅನೇಕರ ಆಕ್ಷೇಪ.

ಆಕ್ಷೇಪಗಳೇನೇ ಇರಲಿ ಬುಲೆಟ್ ಟ್ರೇನಿನಷ್ಟೇ ವೇಗದಿಂದ ಮುಂದುವರಿಯುತ್ತಿರುವ ಮಾನ್ಯ ಪ್ರಧಾನಿಯವರಿಗೆ ಆಕ್ಷೇಪಗಳನ್ನು ಸಹಿಸುವ ವ್ಯವಧಾನವಿಲ್ಲ. ‘ಏಕೆ ಬೇಕಿದೆ ಬುಲೆಟ್ ಟ್ರೇನು, ಈ ದೇಶಕ್ಕೆ?’ ಎಂದು ಯಾರೋ ಇತ್ತೀಚೆಗೆ ಪ್ರಶ್ನೆ ಮಾಡಿದಾಗ, ‘ಮತ್ತೇನು, ಬುಲಕ್ ಕಾರ್ಟುಬೇಕಿತ್ತೆ ದೇಶಕ್ಕೆ?’ ಎಂದು, ಥಟ್ಟನೆ, ಮುಖ ಮುರಿದಂತೆ ಉತ್ತರ ಕೊಟ್ಟಿದ್ದಾರೆ ಅವರು. ಪ್ರಧಾನಿಯವರ ಮಾತಿನ ಚಾಕಚಕ್ಯತೆ ಮೆಚ್ಚುವಂತಹದ್ದೇ ಸರಿ. ಪ್ರಾಸಬದ್ಧ ಉತ್ತರವೊಂದು ಇಷ್ಟು ವೇಗದಲ್ಲಿ ಯಾರಿಗೆ ತಾನೆ ಹೊಳೆದೀತು ಹೇಳಿ.

ಆದರೆ ಪ್ರಾಸಬದ್ಧ ಉತ್ತರಗಳು ಜೇಡರ ಬಲೆಗಳಿದ್ದಂತೆ. ಉತ್ತರಿಸಿದವರನ್ನೇ ಸಿಕ್ಕಿಹಾಕಿಸಿ ಬಿಡುತ್ತವೆ ಪ್ರಾಸದ ಬಲೆಯಲ್ಲಿ. ಈಗಲೂ ಹಾಗೆಯೇ ಆಗಿದೆ. ಪ್ರಾಸದ ಭರದಲ್ಲಿ ಪ್ರಧಾನಿಯವರು ಭಾರತೀಯರ ಪಾರಂಪರಿಕ ವಾಹನವೊಂದನ್ನು ಜರೆದಿದ್ದಾರೆ, ಅದೂ ಬಸವನ ಬಂಡಿಯನ್ನು! ‘ಬಾಯಿತಪ್ಪಿ ನುಡಿದೆ, ಕ್ಷಮೆಯಿರಲಿ’ ಅಂದಿದ್ದರೆ ವಾಸಿಯಿತ್ತು. ಅನ್ನಲಿಲ್ಲ ಪ್ರಧಾನಿಯವರು.

ಯಂತ್ರನಾಗರೀಕತೆಯ ದೊಡ್ಡ ಸಂಕೇತ ಬುಲೆಟ್ ಟ್ರೇನು. ಬುಲಕ್ ಕಾರ್ಟು ಅರ್ಥಾತ್ ಬಸವನ ಬಂಡಿ ಅಥವಾ ಎತ್ತಿನ ಬಂಡಿ, ಭಾರತೀಯ ಪರಂಪರೆಯ ಒಂದು ಸಣ್ಣ ಸಂಕೇತ. ಬುಲೆಟ್‌ ಟ್ರೇನನ್ನು ಮೆಚ್ಚುವುದು ಹಾಗೂ ಬುಲಕ್ ಕಾರ್ಟನ್ನು ನಿಕೃಷ್ಟವಾಗಿ ಕಾಣುವುದೆಂದರೆ ಅದೊಂದು ಮನಸ್ಥಿತಿ, ಒಂದು ತಾತ್ವಿಕತೆ. ಭಾರತೀಯ ಜನತಾ
ಪಕ್ಷದ ಘೋಷಿತ ತಾತ್ವಿಕತೆಗೆ ವ್ಯತಿರಿಕ್ತವಾದದ್ದು ಅದು.

ಹಾಗೆ ನೋಡಿದರೆ, ಭಾರತೀಯ ಜನತಾ ಪಕ್ಷವೇ ಏಕೆ, ಕಾಂಗ್ರೆಸ್ ಪಕ್ಷ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಇತ್ಯಾದಿ ಎಲ್ಲ ಪಕ್ಷಗಳಿಗೂ ವ್ಯತಿರಿಕ್ತವಾದ ತಾತ್ವಿಕತೆಯಿದು, ಗ್ರಾಮೀಣ ಭಾರತವನ್ನು ಕಡೆಗಣಿಸಿ ಯಂತ್ರನಾಗರೀಕತೆಯ ಹಿಂದೆ ಓಡುವುದು. ಹೀಗೆ ಮಾಡಿದಾಗಲೆಲ್ಲ, ಮಾಡಿದವರೆಲ್ಲ ಅಧಿಕಾರ ಕಳೆದುಕೊಂಡಿದ್ದಾರೆ. ಏಕೆ ಗೊತ್ತೆ? ಹೀಗೆ ಮಾಡಿದಾಗಲೆಲ್ಲ ಬಡವನ ರೊಟ್ಟಿ ಮತ್ತಷ್ಟು ಚಿಕ್ಕದ್ದೂ ಮತ್ತಷ್ಟು ಒಣಕಲಾದದ್ದೂ ಆಗಿದೆ.

ಬುಲೆಟ್‍ ಟ್ರೇನಿನ ಓಟವನ್ನು ಮೊದಲು ಮಾಡಿದವರು ಕಾಂಗ್ರೆಸ್ಸಿಗರು. ಗಾಂಧೀಜಿಯವರ ಹೆಸರನ್ನಷ್ಟೇ ತಮ್ಮ ಹೆಸರಿಗೆ ಅಂಟಿಸಿಕೊಂಡು ಗಾಂಧೀಜಿಯವರ ಗ್ರಾಮಸ್ವರಾಜ್ಯ ಪರಿಕಲ್ಪನೆಯನ್ನು ಮರೆತು ಕುಳಿತುಕೊಂಡರು ಅವರು. ಹೀಗೆ ಮಾಡಿ ಸೋತು ನೆಲ ಕಚ್ಚಿದರು. ಇತ್ತ ಮಾರ್ಕ್ಸ್‌ವಾದಿಗಳು, ಪಶ್ಚಿಮ ಬಂಗಾಳದಲ್ಲಿ, ಟಾಟಾನ ಕಾರಿಗಾಗಿ ರೈತರ ಕೃಷಿಭೂಮಿಯನ್ನು ಮಾರಾಟ ಮಾಡಲು ಹೋಗಿ ಸೋತು ನೆಲ ಕಚ್ಚಿದರು. ಈಗ ನರೇಂದ್ರ ಮೋದಿಯವರು ಬಸವನ ಬಂಡಿಯನ್ನು ಕಡೆಗಣಿಸಿ ಬುಲೆಟ್ ಟ್ರೇನಿನ ಹಿಂದೆ ಓಡತೊಡಗಿದ್ದಾರೆ.

ಪ್ರಧಾನಿಯವರಿಗೆ, ಇತ್ತ, ಪರಂಪರೆಯ ವಾರಸುದಾರ ತಾನು ಎಂಬ ಹೆಮ್ಮೆಯೂ ಇದೆ. ಈ ವಿಪರ್ಯಾಸಕ್ಕೆ ಏನನ್ನುತ್ತೀರಿ? ಬಸವನ ಬಂಡಿಗಿಂತ ದೊಡ್ಡ ಪರಂಪರೆ ಬೇಕೆ ಭಾರತಕ್ಕೆ? ಸಿಂಧೂ ನದಿ ಬಯಲಿನ ಅತಿ ಪುರಾತನ ಪರಂಪರೆಯಲ್ಲಾಗಲೇ ಬಸವನ ಬಂಡಿ ಇತ್ತೆಂಬುದಕ್ಕೆ ಪುರಾವೆಯಾಗಿ ಮಣ್ಣಿನ ಬಸವನ ಆಟದ ಬಂಡಿ ಸಿಕ್ಕಿದೆ.

ಪ್ರಧಾನಿಯವರು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷದ ಸಮಸ್ಯೆಯೆಂದರೆ, ಅದು ಅಭಿಜಾತವನ್ನು ಮಾತ್ರವೇ ಪರಂಪರೆಯೆಂದು ಸ್ವೀಕರಿಸುತ್ತದೆ. ಒಂದೇ ಪ್ರಾಣಿಯನ್ನು, ಗೋವೆಂದು ಕರೆದಾಗ ಸ್ವೀಕರಿಸುತ್ತದೆ. ಎತ್ತೆಂದು ಕರೆದು ಬಂಡಿಯ ನೊಗಕ್ಕೆ ಬಿಗಿದಾಗ ಕಡೆಗಣಿಸುತ್ತದೆ. ಎತ್ತಿನ ಬಂಡಿ, ಕಾಯಕ ಚಳವಳಿ, ಜಾನಪದ ಇತ್ಯಾದಿಗಳನ್ನು ಪಕ್ಕಕ್ಕಿಟ್ಟು ಭವ್ಯ ಭಾರತ ಪರಂಪರೆಯೊಂದನ್ನು ಕಟ್ಟಲು ಹೊರಟಿದೆ ಈ ಪಕ್ಷ.

ಇದನ್ನು ನವ-ಅಭಿಜಾತ ಚಾಳಿ ಅಥವಾ ನಿಯೋ-ಕ್ಲಾಸಿಕಲ್ ಚಾಳಿ ಎಂದು ಪಾಶ್ಚಾತ್ಯ ವಿದ್ವಾಂಸರು ಕರೆಯತ್ತಾರೆ. ಕನ್ನಡಿಗರು ಸರಳವಾಗಿ ನವ–ಬ್ರಾಹ್ಮಣಿಕೆ ಎಂದು ಕರೆಯುತ್ತಾರೆ. ಈ ಚಾಳಿ, ಎಲ್ಲವನ್ನೂ ಶಿಷ್ಟವಾಗಿಸ ಹೊರಡುತ್ತದೆ. ಉದಾಹರಣೆಗೆ ಬಸವನನ್ನೇ ತೆಗೆದುಕೊಳ್ಳಿ. ಬಸವ, ಅರ್ಥಾತ್ ಎತ್ತು, ಶಿವನ ವಾಹನ. ಬಸವನ ಮಾನವ ರೂಪ ಬಸವಣ್ಣ. ಬಸವಣ್ಣನನ್ನು ತೆಗೆದು ಕುದುರೆಯ ಮೇಲೆ ಕೂರಿಸುತ್ತದೆ ನವ-ಅಭಿಜಾತ ಚಾಳಿ. ಕುದುರೆ ಒಂದು ವಿದೇಶಿ ವಾಹನ. ಅರಬರು ತಂದು ನಮಗೆ ಮಾರುತ್ತಿದ್ದ ಪ್ರಾಣಿ ಅದು. ಎಲ್ಲಿಯ ಬಸವ ಎಲ್ಲಿಯ ಕುದುರೆ? ಏಕೆ ಹೀಗೆ ಮಾಡುತ್ತೇವೆ ಗೊತ್ತೆ? ಬಸವಣ್ಣನನ್ನು ಮತ್ತೊಮ್ಮೆ ಬ್ರಾಹ್ಮಣನಾಗಿಸಬೇಕಿದೆ ನಮಗೆ. ಅಥವಾ ಕ್ಷತ್ರಿಯನನ್ನಾಗಿಸಬೇಕಿದೆ. ನಮ್ಮಯ ಬಸವಣ್ಣ, ನಮ್ಮಯ ಮಾರಮ್ಮ, ನಮ್ಮಯ ಮಂಟೇಸ್ವಾಮಿ ಎಲ್ಲರಿಗೂ ಇದೇ ಗತಿಯಾಗಿದೆ.

ನವ-ಅಭಿಜಾತಕ್ಕೆ ಪರಂಪರೆ ತಿಳಿಯದು. ಎತ್ತನ್ನು ಕುದುರೆಯ ಮೇಲೆ ಹತ್ತಿಸಿ ಟ್ರೇನು ಬಿಡುತ್ತದೆ ಅದು. ಬುಲೆಟ್ಟ್ರೇನು, ಸ್ಮಾರ್ಟ್‍ ಸಿಟಿ, ಮಾಲ್‌ಗಳು –ಬಂಡವಾಳಶಾಹಿ ಪದ್ಧತಿ ನವ-ಅಭಿಜಾತದ ನಿಜವಾದ ಆಸಕ್ತಿ ಕೇಂದ್ರಗಳು. ಪರಂಪರೆ ಎಂಬುದು ಅದಕ್ಕೆ ಜಗಳ ಮಾತ್ರ. ನಮ್ಮ ಪ್ರಧಾನಿಯವರು, ನವ-ಅಭಿಜಾತ, ಯಾನೆ ನವ-ಬ್ರಾಹ್ಮಣ ಸಂಸ್ಕೃತಿಯ ಅತ್ಯುತ್ತಮ ವಾರಸುದಾರರಾಗಿ ಕಾಣಿಸುತ್ತಾರೆ ನನಗೆ.

ಭಾರತದಲ್ಲಿ ಎತ್ತಿನ ಬಂಡಿಯೇ ಏಕೆ, ಹಲವು ಪ್ರಕಾರದ ಬಂಡಿಗಳು ಚಾಲ್ತಿಯಲ್ಲಿದ್ದವು. ಕತ್ತೆಯ ಬಂಡಿ, ಒಂಟೆಯ ಬಂಡಿ, ಅಷ್ಟೇ ಏಕೆ ಆನೆಯ ಬಂಡಿ ಕೂಡ. ಮೊನ್ನೆ ಮೊನ್ನೆ, ರಾಜಸ್ಥಾನದ ಒಂದು ಪುಟ್ಟ ಊರಿನಲ್ಲಿ ಅಲೆಯುತ್ತಿದ್ದಾಗ, ಪೇಟೆ ಬೀದಿಯ ತುಂಬ ಪುಟಪುಟನೆ ಓಡಾಡುತ್ತಿದ್ದ ಕತ್ತೆಯ ಪುಟ್ಟ ಬಂಡಿಗಳನ್ನು ಕಂಡೆ ನಾನು. ತರಕಾರಿ, ಗೋದಿ, ಸಕ್ಕರೆ, ಮರಳು, ಇಟ್ಟಿಗೆ ಇತ್ಯಾದಿ ದಿನಬಳಕೆಯ ವಸ್ತುಗಳನ್ನು ಚುರುಕಾಗಿ ಅತ್ತಿಂದಿತ್ತ ಸಾಗಿಸುತ್ತಿದ್ದ ತೆರೆದ ಬಂಡಿಗಳು ಅವು. ಮಜೂರಿ ಕಡಿಮೆ, ಉಪಯುಕ್ತತೆ ಹೆಚ್ಚು. ಲಾರಿಗಳು ಓಡಾಡಲಾಗದ, ಓಡಾಡಬಾರದ, ಹಳ್ಳಿರಸ್ತೆಗಳಲ್ಲಿ ಹಳ್ಳಿಬದುಕನ್ನು ಹೊತ್ತು ಸಾಗಿಸುತ್ತಿದ್ದವು ಅವು. ಕತ್ತೆ ಬಂಡಿ ಚಿಕ್ಕದೆನ್ನಿಸಿದಾಗ ಒಂಟೆಯ ಬಂಡಿ ಸಿದ್ಧವಿದ್ದವು ಅಲ್ಲಿ. ಒಂಟೆ ಬಂಡಿಯದ್ದು ರಾಜ ಗಾಂಭೀರ್ಯ. ಕತ್ತನ್ನು ಜೀಕಿಸುತ್ತ, ಭಾರದ ಬಂಡಿಯನ್ನು ಎಳೆಯುತ್ತ, ಗಾಂಭೀರ್ಯದಿಂದ ನಡೆಯುತ್ತಿದ್ದ ಆ ಒಂಟೆಗಳನ್ನು ನೋಡಲಿಕ್ಕೆ ಎರಡು ಕಣ್ಣು ಸಾಲದು.

ಸುಮಾರು ಮೂರು ದಶಕಗಳ ಹಿಂದೆ ಬೆಂಗಳೂರಿನ ಹೆಸರಾಂತ ಭಾರತೀಯ ನಿರ್ವಾಹಕ ಸಂಸ್ಥೆ, ಅರ್ಥಾತ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗೆ ಒಬ್ಬ ನಿರ್ದೇಶಕರಿದ್ದರು. ಎನ್. ಎಸ್. ರಾಮಸ್ವಾಮಿ ಅಂತ ಅವರ ಹೆಸರು. ರಾಮಸ್ವಾಮಿಯವರಿಗೆ ಎತ್ತಿನ ಬಂಡಿಗಳ ಬಗ್ಗೆ ಅಪಾರ ಪ್ರೀತಿ. ಪರ್ಯಾಯ ಉದ್ಯಮಶೀಲತೆಗೆ ಒಂದು ಸಮರ್ಥ ರೂಪಕ ಎತ್ತಿನ ಬಂಡಿ ಅನ್ನುತ್ತಿದ್ದರು ಅವರು.

ಅವರನ್ನು ಎಲ್ಲರೂ ಬುಲಕ್ ಕಾರ್ಟ್ ರಾಮಸ್ವಾಮಿ ಎಂದೇ ಕರೆಯುತ್ತಿದ್ದರು. ಹಾಗೆ ಕರೆಯುವಾಗ, ಕರೆಯುವವರಲ್ಲಿ ಕೊಂಚ ಅಪಹಾಸ್ಯವೂ ಇಣುಕುತ್ತಿತ್ತು ಎಂದು ನನ್ನ ಸಂದೇಹ. ಅದೇನೇ ಇರಲಿ ಇಂದು ರಾಮಸ್ವಾಮಿಯವರ ವಿಚಾರಗಳನ್ನು ಅಪಹಾಸ್ಯ ಮಾಡದೆ ಚರ್ಚಿಸಬೇಕಾದ ಗಂಭೀರ ಸಮಯ ಬಂದೊದಗಿದೆ. ಪೆಟ್ರೋಲು, ಡೀಸೆಲ್ಲು ಬರಿದಾಗ ತೊಡಗಿವೆ, ಬೆಲೆ ಗಗನಕ್ಕೇರುತ್ತಿದೆ. ಪರ್ಯಾಯ ಇಂಧನಗಳು ಮತ್ತೂ ದುಬಾರಿಯಾಗಿವೆ. ನಮಗಿಷ್ಟವಿರಲಿ ಇಲ್ಲದಿರಲಿ, ಎತ್ತಿನ, ಕತ್ತೆಯ, ಒಂಟೆಯ ಬಂಡಿಗಳನ್ನು ಹೊಗಳಬೇಕಾದ ಕಾಲ ಬರಲಿದೆ ಬೇಗ.

ಎತ್ತಿನ ಬಂಡಿಗಳ ಆರ್ಥಿಕತೆ ಹಾಗೂ ಅವುಗಳ ಔದ್ಯಮಿಕ ಮಹತ್ವದ ಬಗ್ಗೆ ರಾಮಸ್ವಾಮಿಗಳು ಸಾಕಷ್ಟು ಸಂಶೋಧನೆ ಮಾಡಿದ್ದರು. ಅವರ ಪ್ರಕಾರ, ಇತ್ತೀಚಿನ ದಿನಮಾನಗಳವರೆಗೆ, ಅಂದರೆ ಕಳೆದ ಶತಮಾನದ ಎಪ್ಪತ್ತರ ದಶಕದ ತುದಿಯವರೆಗೆ ಕೂಡ, ದೇಶದ ಸರಕು ಸಾಗಣೆಯ ಹೆಚ್ಚಿನ ಭಾರವನ್ನು ಎತ್ತಿನ ಬಂಡಿಗಳೇ ಹೊತ್ತಿದ್ದವಂತೆ. ರೈಲು, ವಿಮಾನ, ಲಾರಿ, ಕಾರು ಇತ್ಯಾದಿ ಎಲ್ಲಾ ಹೊಗೆಯುಗುಳುವ ದುಬಾರಿ ವಾಹನಗಳಿಗಿಂತ ಮಿಗಿಲಾಗಿ ಸರಕನ್ನು ಸಾಗಿಸುತ್ತಿದ್ದವಂತೆ ಸಹಜ ಎತ್ತಿನ ಬಂಡಿಗಳು.

ಬುಲೆಟ್ ಟ್ರೇನಿನ ಮೋಹವು ಮೋಹಿನಿಯಂತೆ ನಮ್ಮನ್ನು ಆವರಿಸಿದೆ. ನೀವೇ ಯೋಚಿಸಿ! ಹೊಟ್ಟೆಯೊಳಗೆ ಬೆಂಕಿ ಬೀಳಿಸಿಕೊಂಡು ಪೃಷ್ಠ ಭಾಗದಿಂದ ಹೊಗೆ ಉಗುಳುತ್ತ ಓಡುವ ವಾಹನವು ಎಂದಾದರು ಒಳಿತು ಮಾಡೀತೆ? ಬುಲಕ್ ಕಾರ್ಟನ್ನು ಬಯ್ದದ್ದಕ್ಕಾಗಿ ಪ್ರಧಾನಿಯವರು ಕ್ಷಮೆ ಯಾಚಿಸಬೇಕಿತ್ತು ಎಂದು ನಾನಂದದ್ದರ ಹಿಂದೆ ಈ ಎಲ್ಲ ವಿಚಾರಗಳೂ ಇವೆ. ಬುಲೆಟ್ ಟ್ರೇನಿನ ಮೋಹವು ಲಾಭಬಡುಕ ಅಂಬಾನಿ ಅದಾನಿಗಳಿಗೆ ಛಂದ. ದೇಶದ ಪ್ರಧಾನಿಗಲ್ಲ. ಪ್ರಧಾನಿಯವರು ಬಡಜನರ ಪ್ರತಿನಿಧಿ. ಇತ್ತೀಚಿಗಿನ ಹೆಚ್ಚಿನ ರಾಜಕಾರಣಿಗಳು ಈ ಪ್ರಾಥಮಿಕ ಸತ್ಯವನ್ನು ಮರೆತಿರುವಂತಿದೆ.

ಪ್ರಧಾನಿಯವರಿಗೆ ಕೆಲವು ಮೂಲಭೂತ ಜವಾಬ್ದಾರಿಗಳಿರುತ್ತವೆ. ಮೊದಲನೆಯದಾಗಿ ಅವರು, ಬಡವರ ಬೆಳೆಗಳೂ ಸೇರಿದಂತೆ ಎಲ್ಲ ಕೈ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಿಸಬೇಕಿದೆ. ಜೊತೆಗೆ, ಎಲ್ಲರಿಗೂ ಸಮಾನವಾದ, ಒಂದಿಷ್ಟು ಶಿಕ್ಷಣ ಒಂದಿಷ್ಟು ಆರೋಗ್ಯ ಕೊಡಿಸಬೇಕಿದೆ. ಹಾಗೂ, ಎಲ್ಲಕ್ಕಿಂತ ಮಿಗಿಲಾಗಿ, ಸಮಾನತೆಯ ಸಮಾಜ ನಿರ್ಮಿಸಬೇಕಿದೆ.

ಸಮಾನತೆ ಅಂದೆ. ಏನು ಹಾಗೆಂದರೆ? ಹಿಂದೂ ಕ್ರೈಸ್ತ ಮುಸಲ್ಮಾನರ ನಡುವೆ ಸಮಾನತೆ, ಗಂಡಸರು ಹಾಗೂ ಹೆಂಗಸರ ನಡುವೆ ಸಮಾನತೆ, ಸ್ಪೃಶ್ಯರು ಹಾಗೂ ಅಸ್ಪೃಶ್ಯರ ನಡುವೆ ಸಮಾನತೆ, ಕೈ–ಕೆಲಸ ಮಾಡುವವರು ಹಾಗೂ ತಲೆ–ಕೆಲಸ ಮಾಡುವವರ ನಡುವೆ ಸಮಾನತೆ ತರಬೇಕಿದೆ ಅವರು. ಇದು ಸರಳವಲ್ಲ. ಸಹಜವೂ ಅಲ್ಲ. ಆದರೆ ಇದು, ಯಾವುದೇ ಸಭ್ಯತೆಯೊಂದರ ಪ್ರಾಥಮಿಕ ಅಗತ್ಯ. ಸಮಾನತೆಯಿರದ ಸಮಾಜ ಅಸಭ್ಯ ಸಮಾಜ.

ನರೇಂದ್ರ ಮೋದಿಯವರು ಏಕಾಂಗಿಯಾಗಿ ಇದನ್ನು ಸಾಧಿಸಲಾರರು ಎಂಬ ಅರಿವಿದೆ ನನಗೆ. ರಾಹುಲ್ ಗಾಂಧಿಯವರು ಅಧಿಕಾರಕ್ಕೆ ಬಂದರೂ ಇದು ಸಾಧಿತವಾಗುವುದಿಲ್ಲ ಎಂಬ ಅರಿವು ಕೂಡಾ ಇದೆ ನನಗೆ. ಸಭ್ಯತೆಯೊಂದರ ನಿರ್ಮಾಣ ಸಣ್ಣ ವಿಷಯವಲ್ಲ. ಅಥವಾ ಕೇವಲ ರಾಜಕೀಯವಲ್ಲ ಸಭ್ಯತೆಯ ನಿರ್ಮಾಣ. ಎಲ್ಲರೂ ಒಗ್ಗೂಡಿ ಸಾಧಿಸಬೇಕಾದ ಪವಿತ್ರ ಸಂಗತಿಯದು. ಹೌದು, ಎಲ್ಲರೂ ಒಗ್ಗೂಡಿ ಸಾಧಿಸಬೇಕಾದ ದೇವರ ಸಂಗತಿಯದು!

ದುರಂತವೆಂದರೆ, ಇಂದಿನ ದಿನಮಾನಗಳಲ್ಲಿ ಹೊಗೆಯುಗುಳುತ್ತಿರುವುದು ಹಾಗೂ ಹೊಟ್ಟೆಯೊಳಗೆ ಕಿಚ್ಚು ಹಚ್ಚಿಕೊಂಡು ಓಡುತ್ತಿರುವುದು ಕೇವಲ ಯಂತ್ರಗಳಲ್ಲ. ಯಂತ್ರಗಳ ಚಾಳಿ ಕಲಿತಿರುವ ಮಾನವ ಹೀಗೆ ಮಾಡುತ್ತಿದ್ದಾನೆ. ಹುಚ್ಚು ನಾಯಿಯಂತೆ ಬೊಗಳುತ್ತ ಕಚ್ಚುತ್ತ ಬಾಯಿತುಂಬ ಜೊಲ್ಲು ಸುರಿಸುತ್ತ ಓಡುತ್ತಿದ್ದಾನೆ ಮಾನವ. ಮಾತ್ರವಲ್ಲ ಕಚ್ಚುವುದೇ ತನ್ನ ಪರಂಪರೆ ಎಂಬ ಭ್ರಮೆಯಲ್ಲಿದ್ದಾನೆ!’

ಜಗಳಗಂಟಿತನ ಪರಂಪರೆಯಲ್ಲ. ಒಮ್ಮತವನ್ನು ಮೂಡಿಸುವುದು ಪರಂಪರೆ. ಪ್ರಧಾನಿಗಳು ಪ್ರಯತ್ನಿಸಬೇಕಾದ ಪರಂಪರೆಯೆಂದರೆ ರಾಷ್ಟ್ರೀಯ ಒಮ್ಮತ ಮಾತ್ರ. ಬಸವನ ಬಂಡಿ ಹಾಗೂ ಬುಲೆಟ್‍ ಟ್ರೇನುಗಳ ನಡುವೆ ಬೇಗ ನಿಮ್ಮ ಆಯ್ಕೆ ಮಾಡಿಕೊಳ್ಳಿ ಎಂದು ಪ್ರಧಾನಿಗಳಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ ನಾನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT