ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿಮುಷ್ಟಿ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಿಮಾಲಯದ ತಪ್ಪಲಲ್ಲಿ ಇದ್ದದ್ದು ಆ ಹಳ್ಳಿ. ಅಲ್ಲಿ ಒಬ್ಬ ಯುವಕ ರೈತ. ಅವನ ಮದುವೆಯಾಗಿ ಎರಡು ವರ್ಷವಾಯಿತು. ಎರಡು ವರ್ಷ ಸರಿಸುಮಾರಾಗಿ ಸಂತೋಷವಾಗಿಯೇ ಕಳೆದರು ಎನ್ನಬಹುದು.

ಆದರೆ ಇತ್ತೀಚೆಗೆ ಇಬ್ಬರ ನಡುವೆ ಆಗಾಗ ಘರ್ಷಣೆಗಳು, ತಿಕ್ಕಾಟಗಳು ಬರುತ್ತಿದ್ದವು. ಆಕೆಗೆ ಬೇಜಾರಾದಾಗ ಗಂಟುಮುಖ ಹಾಕಿಕೊಂಡು ತವರಿಗೆ ಹೋಗಿಬಿಡುವಳು.

ಇನ್ನಾರು ತಿಂಗಳುಗಳಲ್ಲಿ ತರುಣನಿಗೆ ತುಂಬ ಕಷ್ಟವಾಗತೊಡಗಿತು. ತನ್ನ ಸ್ನೇಹಿತರ ಬಳಿ ತನ್ನ ಗೋಳು ಹೇಳಿಕೊಂಡ, `ನನ್ನ ಹೆಂಡತಿ ತುಂಬ ಒಳ್ಳೆಯವಳು ಆದರೆ ಕೋಪ ಜಾಸ್ತಿ. ಸಣ್ಣ ಸಣ್ಣ ವಿಷಯಕ್ಕೂ ಕೋಪಮಾಡಿಕೊಳ್ಳುತ್ತಾಳೆ~ ಎಂದು ಅಲವತ್ತುಗೊಂಡ.

`ಜಗಳಕ್ಕೆ ಸಾಮಾನ್ಯವಾಗಿ ಯಾವುದು ಕಾರಣ~ ಎಂದು ಸ್ನೇಹಿತರು ಕೇಳಿದರು. ಈತ ಇತ್ತೀಚಿಗೆ ನಡೆದ ಅನೇಕ ಜಗಳಗಳ ಸಂಗತಿಗಳನ್ನು ಅವರ ಮುಂದೆ ಬಿಚ್ಚಿಟ್ಟ.
 
ಅವರು ಅವನ್ನೆಲ್ಲ ವಿಶ್ಲೇಷಿಸಿದಾಗ ಹೊಳೆದದ್ದು ಇಷ್ಟೇ. ಇವನ ಹೆಂಡತಿ ಮಹಾ ಜಿಪುಣಿ, ಈತನಿಗೆ ಒಂದು ಕಾಸೂ ಕೊಡುತ್ತಿರಲಿಲ್ಲ. ಈತನೋ ಪೆದ್ದ ಹುಡುಗ.

ತಾನು ಸಂಪಾದಿಸಿದ್ದನ್ನೆಲ್ಲ ತಂದು, ಚೂರೂ ಬಿಡದೇ ಎಲ್ಲವನ್ನೂ ಆಕೆಯ ಕೈಯಲ್ಲಿ ಹಾಕಿ ಅವಳ ಮುದ್ದು ಮುಖ ನೋಡುತ್ತ ಕುಳಿತುಬಿಡುತ್ತಿದ್ದ.

ಖರ್ಚಿನ ಯಾವ ಮಾತನ್ನಾಡಿದರೂ, ದುಡ್ಡುಕೊಡುವ ಯಾವ ಪ್ರಸಂಗ ಬಂದರೂ ಆಕೆಗೆ ಕೋಪ ಬರುತ್ತಿತ್ತು. ಈ ಜಿಪುಣತನವನ್ನು ಬಿಡಿಸುವುದು ಹೇಗೆ ಎಂಬ ಚಿಂತೆ ಆತನನ್ನು ಕಾಡತೊಡಗಿತು.

ಅವನು ಸ್ವಲ್ಪ ಸಂಶೋಧನೆ ಮಾಡಿದ ಮೇಲೆ ತನ್ನ ಹೆಂಡತಿಯ ತವರುಮನೆಯಲ್ಲಿ ಎಲ್ಲರೂ ಒಬ್ಬ ಗುರುವನ್ನು ಅನುಸರಿಸುತ್ತಿದ್ದುದು ತಿಳಿಯಿತು. ಗುರು ಹೇಳಿದ ಯಾವ ಮಾತನ್ನೂ ಮನೆಯವರು ತೆಗೆದು ಹಾಕುತ್ತಿರಲಿಲ್ಲ, ಅದರಲ್ಲೂ ರೈತನ ಹೆಂಡತಿಗೆ ಗುರುವಿನ ಮಾತು ವೇದ ವಾಕ್ಯ.

ಇದನ್ನು ನೋಡಿ ಯುವಕ ಹೋಗಿ ಆ ಗುರುವನ್ನು ಭೇಟಿಯಾದ. ತನ್ನ ಗೋಳನ್ನು ತೋಡಿಕೊಂಡ, ಹೆಂಡತಿಯ ಜಿಪುಣತನವನ್ನು ಪರಿಹರಿಸುವ ಉಪಾಯವನ್ನು ಬೇಡಿದ. ಗುರು ಸಹಾಯ ಮಾಡುವುದಾಗಿ ಮಾತು ಕೊಟ್ಟ.

ಒಂದು ವಾರದ ನಂತರ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ಇದ್ದಾಗ ಗುರು ಇವರ ಮನೆಗೆ ಬಂದ. ರೈತ ಆಶ್ಚರ್ಯ ನಟಿಸಿದ. ಹೆಂಡತಿಗೆ ಭಾರೀ ಸಂತೋಷವಾಯಿತು.

ಯಾವ ಮುನ್ಸೂಚನೆಯನ್ನು ಕೊಡದೇ ಆಕಸ್ಮಿಕವಾಗಿ ತಮ್ಮ ಗುರು ಮನೆಗೆ ಬಂದದ್ದು ಸಂತೋಷಕ್ಕೆ ಕಾರಣ. ಸಂಭ್ರಮದಿಂದ ಅಡುಗೆ ಮಾಡಿದಳು. ಊಟವಾದ ಮೇಲೆ ಗುರು ಹೊರಟು ನಿಂತರು. ಅವರಿಗೆ ಗಂಡ-ಹೆಂಡತಿ ನಮಸ್ಕಾರ ಮಾಡಿದರು. 

`ಗುರುಗಳೇ ನಮ್ಮಿಬ್ಬರ ಜೀವನಕ್ಕೂ ಮಾರ್ಗದರ್ಶಿಯಾಗುವಂಥ ಉಪದೇಶ ಮಾಡಿ~ ಎಂದು ಕೇಳಿದಳು ಹೆಂಡತಿ. ಆಗ ಗುರುಗಳು ತಮ್ಮ ಎರಡೂ ಕೈಗಳನ್ನು ಮುಂದೆ ಚಾಚಿ ಮುಷ್ಟಿ ಮಾಡಿ ಸುಮ್ಮನೆ ನಿಂತುಬಿಟ್ಟರು.

`ಯಾಕೆ ಈ ಬಿಗಿಮುಷ್ಟಿ? ಏನು ಇದರ ಅರ್ಥ?~ ಎಂದು ಕೇಳಿದಳು ಹೆಂಡತಿ.
`ನನ್ನ ಮುಷ್ಟಿ ಹೀಗೆಯೇ ಸದಾಕಾಲ ಇರುವುದಾದರೆ ಎನು ಪ್ರಯೋಜನ?~ 
`ಹೀಗೆ ಮುಷ್ಟಿಯಾಗಿಯೇ ಉಳಿಯುವುದಾದರೆ ಕೈಯಿಂದ ಏನೂ ಪ್ರಯೋಜನವಿಲ್ಲ.

ಯಾವ ಕೆಲಸವನ್ನೂ ಮಾಡುವುದು ಅಸಾಧ್ಯ. ಅದೊಂದು ವಿಕಾರ~ ಎಂದಳಾಕೆ. ನಂತರ ಗುರು ತನ್ನ ಮುಷ್ಟಿಯನ್ನು ಬಿಚ್ಚಿ ಬೆರಳುಗಳನ್ನು ಅರಳಿಸಿ ಮುಂದೆ ಹಿಡಿದು, `ಈ ಬೆರಳುಗಳು ಹೀಗೆಯೇ ಸದಾ ಹರಡಿಕೊಂಡಿದ್ದರೆ ಏನು ಪ್ರಯೋಜನ~ ಎಂದು ಕೇಳಿದರು.

`ಆಗಲೂ ಕೈಯಿಂದ ಯಾವ ಪ್ರಯೋಜನವೂ ಇಲ್ಲ. ಅದು ಮತ್ತೊಂದು ವಿಕಾರ.~
`ಇದನ್ನು ನೀನು ಅರ್ಥಮಾಡಿಕೊಂಡರೆ ಸಾಕು ಚೆನ್ನಾಗಿ ಬದುಕುತ್ತೀ. ಸಂಸಾರ ಚೆನ್ನಾಗಿರುತ್ತದೆ~ ಎಂದು ಹೇಳಿ ಗುರುಗಳು ನಡೆದರು.

ಆ ಹುಡುಗಿ ಜಾಣೆ. ಗುರುಗಳ ಮಾತು ಅರ್ಥವಾಯಿತು. ನಂತರ ಆಕೆ ಅವಶ್ಯವಿದ್ದಷ್ಟು ಖರ್ಚುಮಾಡಿ, ಬೇಕಾದಾಗ ಕೊಟ್ಟು, ಉಳಿಸಿಕೊಳ್ಳುವಾಗ ಉಳಿಸಿಕೊಂಡು ಗಂಡನಿಗೆ ಸಮವರ್ತಿಯಾಗಿ ಬದುಕಿದಳು.

ಯಾವ ವಿಷಯದಲ್ಲೂ ಅತಿಯಾದ ಬಿಗಿಮುಷ್ಟಿಯೂ ಸರಿಯಲ್ಲ, ಅತಿಯಾದ, ಧಾರಾಳತನವೂ ಒಪ್ಪಿತವಲ್ಲ. ಕೊಡು-ಕೊಳ್ಳುವುದರ ನಡುವೆ ಹದವಾದ ಮೈತ್ರಿ ಇದ್ದಾಗ ಬದುಕು ಸುಸೂತ್ರವಾಗಿ ನಡೆಯುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT