ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಸರದಾರರ ಸೋಲು ಗೆಲುವು

Last Updated 9 ನವೆಂಬರ್ 2015, 19:47 IST
ಅಕ್ಷರ ಗಾತ್ರ

ನಮ್ಮ ದೇಶದ ಹಿರಿಯ ರಾಜಕಾರಣಿ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇಬ್ಬರೂ ಮೊನ್ನೆ ನವೆಂಬರ್ 8ರ ಭಾನುವಾರ ಬೆಳಿಗ್ಗೆ ಅವರ ಮನೆಗೆ ಹೋದರು. ಹೂಗುಚ್ಛ ಕೊಟ್ಟು ಸಿಹಿ ಮಾತು ಆಡಿದರು. ಆದರೆ ಇನ್ನು ಕೆಲವೇ ಗಂಟೆಗಳಲ್ಲಿ ಅಡ್ವಾಣಿ ಅವರಿಗೆ ಜೀವನದ ಕಹಿ ನೆನಪಾಗಿ ಉಳಿದಿರುವ ಬಿಹಾರವೇ ಈ ಬಾರಿ ಹುಟ್ಟುಹಬ್ಬದ ಉಡುಗೊರೆ ಆಗಲಿದೆ ಎಂದು ಈ ನೇತಾರರಿಬ್ಬರೂ ಅಂದುಕೊಂಡಿರಲಿಲ್ಲ.

ಅಡ್ವಾಣಿ ಅವರು 1992ರಲ್ಲಿ ನಡೆಸಿದ ರಾಮನ ಹೆಸರಿನ ರಾಜಕೀಯ ‘ರಥಯಾತ್ರೆ’, ಯಶಸ್ಸಿನ ದಾರಿಯಲ್ಲಿ ಸಾಗುತ್ತಾ ಬಂದು ಬಿಹಾರದ ಗಡಿಯಲ್ಲಿ ನಿಂತಿತ್ತು. ಆದರೆ ಲಾಲುಪ್ರಸಾದ್ ಆ ರಥವನ್ನೂ ಅದರ ಸಾರಥಿಯನ್ನೂ ಬಿಹಾರದೊಳಗೇ ಬಿಡಲಿಲ್ಲ. ರಥಯಾತ್ರೆಗೆ ಲಾಲು ಹಾಕಿದ ಬ್ರೇಕ್‌ಗೆ ಸಿಕ್ಕ ಪ್ರಚಾರ, ಅಡ್ವಾಣಿ ಅವರ ಪಾಲಿಗೆ ನುಂಗಲಾರದ ಕಹಿ ಗುಳಿಗೆಯಾಗಿತ್ತು. ಅಡ್ವಾಣಿಯವರ ಹುಟ್ಟುಹಬ್ಬದ ದಿನ ಬಿಹಾರ ಕೊಟ್ಟ ಇನ್ನೊಂದು ಕಹಿ ಗುಳಿಗೆಯನ್ನು ಅವರೂ ಅವರ ಪಕ್ಷವೂ ನುಂಗಬೇಕಾಯಿತು. ಫಲಿತಾಂಶ ಪ್ರಕಟಣೆಗೆ ಮೊದಲೇ ತಾವು ಅಡ್ವಾಣಿಯವರ ಮನೆಗೆ ಹೋಗಿಬಂದಿದ್ದು ಒಳ್ಳೆಯದಾಯಿತು ಎಂದು ನೇತಾರರು ಅಂದುಕೊಂಡಿರಬೇಕು. 

ರಾಜಕೀಯ ಪಕ್ಷವೊಂದು ಲೋಕಸಭೆಗೆ ನಡೆಯುವ ಮಹಾಚುನಾವಣೆಯಲ್ಲಿ ಸಾಧಿಸುವ ದಿಗ್ವಿಜಯದ ಜೆರಾಕ್ಸ್ ಪ್ರತಿಗಳನ್ನು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ತೆಗೆಯಲು ಆಗುವುದಿಲ್ಲ. ಬಿಹಾರದಲ್ಲಿ ಹಾಗೆ ತೆಗೆಯಲಾಗಿದೆ ಎಂದು ಕೂಗಿ ಹೇಳಿದ ‘ಟುಡೇಸ್ ಚಾಣಕ್ಯ’ನ ರಾಜಕೀಯ ಅನರ್ಥಶಾಸ್ತ್ರ ಕುರಿತು ಹೆಚ್ಚು ಹೇಳುವುದೇನಿಲ್ಲ. ಚುನಾವಣೆ ಕಾರ್ಯತಂತ್ರಕ್ಕೆ ಹೆಸರಾದ ಬಿಜೆಪಿ, ದೆಹಲಿಯಲ್ಲಿ ಉಗ್ಗರಿಸಿ ಬಿದ್ದದ್ದಕ್ಕೂ ಬಿಹಾರದಲ್ಲಿ ಮುಗ್ಗರಿಸಿ ಬಿದ್ದದ್ದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದು ಮೊದಲಿಗೆ ಅನ್ನಿಸುತ್ತದೆ. ಆದರೆ ಬಿಹಾರ ಚುನಾವಣೆಯ ಫಲಿತಾಂಶ ಹಲವು ಹನ್ನೊಂದು ನೆಲೆಗಳಲ್ಲಿ ವಿಶೇಷ ವಿಶ್ಲೇಷಣೆ- ವ್ಯಾಖ್ಯಾನಗಳಿಗೆ ಒತ್ತಾಯಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಯಾವೊಂದು ರಾಜ್ಯದ ಚುನಾವಣೆಯೂ ಇದರಷ್ಟು ಮುಖ್ಯವೆನಿಸಿರಲಿಲ್ಲ; ಫಲಿತಾಂಶ ಬಂದ ಮೇಲಂತೂ ಬಿಹಾರ ಮತ್ತಷ್ಟು ಮುಖ್ಯವೆನಿಸಿದೆ. 

ಬಿಹಾರದ ವಿದ್ಯಾವಂತರು, ಮಧ್ಯಮ ವರ್ಗದವರು, ಶೇಕಡ ಆರರಷ್ಟು ಹೆಚ್ಚಾಗಿದ್ದ ಮಹಿಳೆಯರು ಮತ್ತು ಅರೆಸಾಕ್ಷರ ಮತದಾರರು ಬಿಜೆಪಿಯನ್ನು ಹೇಗೆ ಅರೆದರು ಎಂಬ ಬಗ್ಗೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೇಶದಾದ್ಯಂತ ಮಂಥನ ಶುರುವಾಗಿದೆ. ಅಭಿವೃದ್ಧಿಯ ಮಾನದಂಡಗಳಾದ ಪೌಷ್ಟಿಕತೆ ಮತ್ತು ಸಾಕ್ಷರತೆಯಲ್ಲಿ ಬಿಹಾರ ಇನ್ನೂ ಕೊಂಚ ಹಿಂದಿದ್ದರೂ ಶಕ್ತಿವಂತ ಮತ್ತು ಬುದ್ಧಿವಂತ ತಂತ್ರಗಾರರಿದ್ದ ಬಿಜೆಪಿಯನ್ನು ಅದು ಹೇಗೆ ಹಿಂದಕ್ಕೆ ನೂಕಿತು ಎಂಬ ಬಗ್ಗೆ ಇನ್ನೂ ಅನೇಕ ದಿನಗಳ ಕಾಲ ಚರ್ಚೆಯೂ ನಡೆಯಲಿದೆ.

ಮಾಧ್ಯಮಗಳಲ್ಲಿ ಶೀನಾ ಬೋರಾ ಕೊಲೆ ಕುರಿತು ಬೋರಾಗುವಷ್ಟು ನಡೆದ ಕೊರೆತ ಮರೆತುಹೋಗುವಂತೆ ಈಗ ಹೊಸ ಮಾತುಗಳು ಕೇಳಬಹುದು. ಏಕೆಂದರೆ, ಚುನಾವಣೆಗೆ ಪೂರ್ವ ಇದ್ದ ಮೇಲೆ ಉತ್ತರವೂ ಇರುತ್ತದಲ್ಲ? ಬಿಹಾರ ಚುನಾವಣೆಯಲ್ಲಿ ಗೆಲುವಿಗಾಗಿ ಏನೆಲ್ಲವನ್ನೂ ಕೂಡಿಸಿದ್ದರೂ ಸಿಕ್ಕಿದ್ದೆಲ್ಲವನ್ನೂ ಅದಕ್ಕೆ ಸೇರಿಸಿ ಗುಣಿಸಿದ್ದರೂ ಬಿಜೆಪಿ ತೀರಾ ಕಡಿಮೆ ಅಂಕಗಳನ್ನು ಪಡೆಯಿತು. ಅಮಿತ್ ಷಾ - ನರೇಂದ್ರ ಮೋದಿ ಎಂಬ ಮೋಡಿ ಜೋಡಿಯನ್ನು, ಲಾಲುಪ್ರಸಾದ್- ನಿತೀಶ್ ಕುಮಾರ್ ಎಂಬ ಕಿಲಾಡಿ ಜೋಡಿ ಚುನಾವಣೆಯಲ್ಲಿ ಕುಟ್ಟಿ ಕೆಡವಿದ್ದು ಹೇಗೆ? ಹೇಗೆ ಅನ್ನುವುದನ್ನು ಹಲವು ಬಗೆಯಲ್ಲಿ ಬಗೆದು ನೋಡಲಾಗುತ್ತಿದೆ. 

ಚುನಾವಣೆ ಸೋಲಿನ ಪೋಸ್ಟ್‌ಮಾರ್ಟಂ ಅನ್ನುವುದೇನಿದ್ದರೂ ಹಲವು ಕಾಯಿಲೆಗಳ ದುರ್ವಾಸನೆ ಒಮ್ಮೆಗೇ ಅನುಭವಿಸಿದಂತೆ. ಚುನಾವಣೆಗೆ ಮೊದಲು ಅಥವಾ ಅದು ನಡೆಯುವ ಸಂದರ್ಭಗಳಲ್ಲಿ ಈ ಕಾಯಿಲೆಗಳ ಲಕ್ಷಣಗಳು ಮತ್ತು ಕಾರಣಗಳು ಗೋಚರಿಸಿದ್ದರೂ ಅವುಗಳ ಬಗ್ಗೆ ಆಗ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಗುರಿ ಮುಖ್ಯವೇ ಹೊರತು ದಾರಿ ಅಲ್ಲ ಅನ್ನುವುದು ಎಲ್ಲ ರಾಜಕೀಯ ಪಕ್ಷಗಳ ಮೂಲ ಮಂತ್ರ. ಹಾಗೆಯೇ ಚುನಾವಣೆಯಲ್ಲಿ ಗೆಲುವು ಅನ್ನುವುದು ಒಂಬತ್ತು ತಿಂಗಳು ಹೊತ್ತು ಹೆತ್ತ ಕೂಸಿನ ಕಣ್ಣು ಮೂಗು ಬಣ್ಣಗಳನ್ನು ಮೆಚ್ಚುವ ಕೆಲಸ. ಅದಕ್ಕೆ ಹೆಸರು ಹುಡುಕಿ ಸಂಭ್ರಮಿಸುವ ಸಮಯ. ಕೂಸಿನ ಆರೋಗ್ಯದಲ್ಲಿ ಇರಬಹುದಾದ ಸಮಸ್ಯೆಗಳು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ ಅಥವಾ ಗಮನಿಸುವುದು ಮುಖ್ಯವಾಗುವುದಿಲ್ಲ. ಆದರೆ ಗೆಲುವು ಸೋಲು ಎರಡೂ ಸಂದರ್ಭಗಳಲ್ಲಿ ಎರಡೂ ಪಾಳೆಯಗಳಲ್ಲಿ ವಿಮರ್ಶೆ ಅತ್ಯಗತ್ಯವಾಗಿ ನಡೆಯುತ್ತದೆ.

ಬಿಜೆಪಿಯೊಳಗೆ ಆ ವಿಮರ್ಶೆ- ವಿಶ್ಲೇಷಣೆ ಒಂದು ರೀತಿಯಲ್ಲಿ ಚುನಾವಣೆಯೊಂದಿಗೇ ಆರಂಭವಾಗಿದೆ. ರಾಮನ ಪಕ್ಷದಲ್ಲಿ ವಿಧೇಯವಾಗಿ ಇರಬೇಕಾಗಿದ್ದ ಶತ್ರುಘ್ನ ಸಿನ್ಹ, ಚುನಾವಣೆ ಕಾಲದಲ್ಲಿ ರೆಬೆಲ್ ಸ್ಟಾರ್ ಆಗಿಬಿಟ್ಟರು; ಫಲಿತಾಂಶ ಪ್ರಕಟವಾದಾಗ ‘ಬಿಹಾರದಲ್ಲಿ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಿದೆ’ ಎಂದು ಅವರು ಹೇಳಿದ್ದು ‘ಪಕ್ಷದೊಳಗೆ ಪ್ರಜಾಪ್ರಭುತ್ವ ಸೋತಿದೆ’ ಎಂದು ಹೇಳಿದಂತೆ ಕೇಳಿಸಿತಲ್ಲವೇ? ಬಿಹಾರ ಮೂಲದ ಪ್ರಬಲ ರಾಜಕಾರಣಿ ಗಂಭೀರ ಮುಖದ ರವಿಶಂಕರ ಪ್ರಸಾದ್ ಎದುರಾಳಿಗಳನ್ನು ಮಾತಿನಲ್ಲಿ ಚಚ್ಚುವುದುಂಟು; ಅಂಥವರು ‘ಚುನಾವಣೆಯಲ್ಲಿ ನಾನು ರಾಜ್ಯದ ಮೂಲೆಮೂಲೆಗಳಲ್ಲಿ ಮೈಕ್ರೊ ಮ್ಯಾನೇಜ್‌ಮೆಂಟ್ ಮಾಡುತ್ತಿದ್ದೆ. ಹೀಗೇಕಾಯಿತು ಎನ್ನುವುದು ತಿಳಿಯುತ್ತಿಲ್ಲ’ ಎಂದು ಮೆಲ್ಲಗೆ ಮುಗುಳ್ನಗುತ್ತ ಅಲವತ್ತುಕೊಂಡರು.

ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರ ಸಭೆವರೆಗೆ ಎಲ್ಲವನ್ನೂ ದೆಹಲಿಯಿಂದ ಬಂದ ಬಾಹರಿಗಳೇ ಮ್ಯಾನೇಜ್ ಮಾಡಿ ಪಕ್ಷದಲ್ಲಿದ್ದ ಬಿಹಾರಿಗಳು ಮೂಲೆಗುಂಪಾದರು ಎಂದು ಅವರು ಹೇಳಿದಂತಾಯಿತೇ? ಟಿವಿ ಚರ್ಚೆಗೆ ಬಂದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳೊಬ್ಬರು ‘ಹಳ್ಳಿಗಳಲ್ಲಿ ಓಡಾಡುತ್ತಾ ದುಡಿದ ನಮ್ಮಂಥವರ ಕಷ್ಟ ಹವಾನಿಯಂತ್ರಿತ ಸ್ಟುಡಿಯೊದಲ್ಲಿ ಕುಳಿತ ನಿಮಗೇನು ಗೊತ್ತು’ ಎಂದು ಒಂದು ರಾಷ್ಟ್ರೀಯ ಚಾನೆಲ್‌ನ ಪ್ರಧಾನ ಸಂಪಾದಕರಿಗೆ ಚುಚ್ಚಿದರು; ಚುನಾವಣೆಗೆ ನಿಂತು ಸೋತವರ ಸಂಕಟ ಕುಂತು ವಿಶ್ಲೇಷಿಸುವವರಿಗೆ ಅರ್ಥವಾಗುವುದಿಲ್ಲ ಎಂದು ಅವರೂ ನಂಬಿರುವುದಿಲ್ಲ ಅಲ್ಲವೇ?

ಬಿಹಾರ ಚುನಾವಣೆಯ ಫಲಿತಾಂಶ ಪ್ರಕಟಣೆ ಆರಂಭವಾದ ಕ್ಷಣದಿಂದಲೇ ದೇಶದಾದ್ಯಂತ ವಿಶ್ಲೇಷಣೆ, ವಿಮರ್ಶೆ, ಆತ್ಮಾವಲೋಕನ, ಮೌಲ್ಯಮಾಪನ, ಪಾಠ ಪ್ರವಚನ ಎಲ್ಲ ಆರಂಭವಾಗಿವೆ. ಅವುಗಳನ್ನು ಪ್ರಕಟಿಸುವ ಪತ್ರಿಕೆಗಳು ಅಥವಾ ಪ್ರಸಾರ ಮಾಡುವ ಟಿವಿ ಚಾನೆಲ್‌ಗಳಲ್ಲಿ ಕಾಣುತ್ತಿರುವುದು ಅವುಗಳ ಪಕ್ಷಿನೋಟ ಮತ್ತು ಪಾರ್ಶ್ವನೋಟ ಮಾತ್ರ. ಆದರೆ, ಸಾಮಾನ್ಯ ಜನರ ಮಾತುಕತೆಯಲ್ಲೂ ಬಿಹಾರದ ಚುನಾವಣೆ ವಿಮರ್ಶೆಗೆ ಒಳಪಡುತ್ತಿದೆ. ಇದಕ್ಕೆ ಕಾರಣವಿಲ್ಲದಿಲ್ಲ. 2014ರ ಮಹಾಚುನಾವಣೆಯ ಫಲಿತಾಂಶದಿಂದ ದೇಶದಲ್ಲಿ ಬಹಳ ಸ್ಥಿತ್ಯಂತರಗಳಾಗಿವೆ. ಬಿಜೆಪಿ ಬಹುಮತ ಪಡೆದು ಕೇಂದ್ರದಲ್ಲಿ ಸರ್ಕಾರ ರಚಿಸಿದ ಮೇಲೆ, ಸಮಕಾಲೀನ ರಾಜಕೀಯ ಚಿಂತನೆಯನ್ನು ಮಾತ್ರವಲ್ಲ, ಸಾಮಾಜಿಕ ಚಿಂತನೆಯನ್ನೂ ಬದಲಾಯಿಸಲು ಹವಣಿಸುತ್ತಿದೆ ಎಂಬ ಆತಂಕ ತಲೆದೋರಿದೆ.

ತೆರೆಮರೆಯಲ್ಲಿ ಇದ್ದೇ ಇರುತ್ತಿದ್ದ ಅಸಹನೆ, ಅಸಹಿಷ್ಣುತೆ, ಮತಾಂಧತೆ, ಹುಸಿ ಧಾರ್ಮಿಕತೆ, ಕೇಸರೀಕರಣ, ಏಕರೂಪ ಚಿಂತನೆ ಇವೆಲ್ಲವೂ ಈಗ ಸಾರ್ವಜನಿಕ ಬದುಕಿನಲ್ಲಿ ಮಧ್ಯರಂಗಕ್ಕೆ ಬರುವ ಅಪಾಯ ಅನೇಕರಿಗೆ ಗೋಚರಿಸಿದೆ. ಆದರೆ ಬಿಹಾರ ಚುನಾವಣೆ ಸಮಯದ ಸುತ್ತಮುತ್ತ ಎಲ್ಲೋ ನಡೆದ ಘಟನೆಗಳು, ಯಾರೋ ಆಡಿದ ಮಾತುಗಳು ಬಿಜೆಪಿ ಪ್ರಣಾಳಿಕೆ ಹೇಳಿದ ಭರವಸೆಗಳನ್ನು ಅನುಮಾನಕ್ಕೆ ದೂಡಿವೆ. ಧರ್ಮ ಮತ್ತು ಜಾತಿಯನ್ನು ಎಂದಿನಂತೆ ಈ ಚುನಾವಣೆಯಲ್ಲೂ ಎಲ್ಲ ಪಕ್ಷಗಳೂ ಬಳಸಿಕೊಂಡಿವೆ. ಆದರೆ ಬಿಜೆಪಿಯ ವ್ಯಕ್ತ ಮತ್ತು ಅವ್ಯಕ್ತ ಆಶಯಗಳಿಗೆ ಬಿಹಾರ ಚುನಾವಣೆಯೇ ಪ್ರಯೋಗಶಾಲೆಯಾಗಿತ್ತು ಅನ್ನುವುದೇ ಅದರ ಪ್ರಾಮುಖ್ಯವನ್ನು ಹೆಚ್ಚಿಸಿದೆ.

ಬಿಜೆಪಿ ಅಲ್ಲಿ ಪರೀಕ್ಷೆಗಿಟ್ಟಿದ್ದು, ಪಣಕ್ಕಿಟ್ಟಿದ್ದು ಬರೀ ರಾಜಕೀಯ ಅಂಶಗಳನ್ನಲ್ಲ. ಆದ್ದರಿಂದಲೇ ಬಿಹಾರ ಎಂಬ ನೆಪದಲ್ಲಿ ಸಮಕಾಲೀನ ಬೆಳವಣಿಗೆಗಳ ಪರಾಮರ್ಶೆ ಅಗಾಧ ಪ್ರಮಾಣದಲ್ಲಿ, ಅನೇಕ ಆಯಾಮಗಳಲ್ಲಿ ನಡೆಯುತ್ತಿದೆ. ಯಾರು ಒಪ್ಪಲಿ ಬಿಡಲಿ, ಈಗಾಗಲೇ ಅದಕ್ಕೆ ಸಮಕಾಲೀನ ರಾಜಕೀಯ-ಸಾಮಾಜಿಕ ಸಂಕಥನದ ಸ್ವರೂಪ ಬಂದುಬಿಟ್ಟಿದೆ. ಹೀಗಾಗಿ ಪ್ರಾಚೀನ ಚರಿತ್ರೆಯಲ್ಲಿ ಮೆರೆದ ಬಿಹಾರ, ಹೊಸ ಕಾಲದ ಚರಿತ್ರೆಯಲ್ಲೂ ಮುಖ್ಯ ಸ್ಥಾನ ಪಡೆಯಲಿದೆ. 

ಬಿಹಾರ ಚುನಾವಣೆಯ ಫಲಿತಾಂಶ ಅನೇಕ ರಾಜಕೀಯ ಮತ್ತು ಸಾಮಾಜಿಕ ವಿಷಯಗಳಂತೆ ಹಲವು ವ್ಯಕ್ತಿಗಳನ್ನೂ ಕಟಕಟೆಗೆ ತಂದು ವಿಚಾರಣೆಯ ಬೆಳಕಿಗೆ ಒಡ್ಡಿದೆ. ವ್ಯಕ್ತಿಕೇಂದ್ರಿತ ರಾಜಕಾರಣ ನಮ್ಮ ದೇಶಕ್ಕೇನೂ ಹೊಸದಲ್ಲ. ‘ನೆಹರೂ ನಂತರ ಯಾರು?’, ‘ಇಂದಿರಾ ಆದ ಮೇಲೆ ಏನು ಗತಿ?’ ಇತ್ಯಾದಿ ಪ್ರಶ್ನೆಗಳು ನಮಗೆ ತುಂಬ ಪರಿಚಿತ. ಬೇರೆ ರಾಜ್ಯಗಳ ರಾಜಕೀಯ ರಂಗದಲ್ಲೂ ಅಮ್ಮಾ, ದೀದಿ, ದಾದಾ, ಭಾಯಿಜಾನ್, ಅಣ್ಣ ಇತ್ಯಾದಿ ಇದ್ದೇ ಇರುತ್ತಾರೆ. ಹೈಕಮಾಂಡ್ ಸಂಸ್ಕೃತಿಯಂತೂ ಈ ದೇಶದ ರಾಜಕಾರಣದ ಒಂದು ಭಾಗ. ಆದರೆ ‘ನಾನೇ ಬಿಜೆಪಿ, ಬಿಜೆಪಿಯೇ ನಾನು’ ಎನ್ನುವುದು ಇತ್ತೀಚಿನ ಬೆಳವಣಿಗೆ. ಹೀಗೆ ಹೇಳುವ ‘ಸ್ವಂತ ನಾನೇಶ್ವರ’ರು ಒಬ್ಬರಲ್ಲ, ಇಬ್ಬರುಂಟು. ಒಂದು ಸಾವಿರ ಜನ ಕೂಡ ಇಲ್ಲದ ನೂರಿನ್ನೂರು ಪ್ರಚಾರ ಸಭೆಗಳನ್ನು ಬಿಹಾರದ ಉದ್ದಗಲಕ್ಕೆ ಬಿಜೆಪಿ ಅಧ್ಯಕ್ಷರು ಅಮಿತೋತ್ಸಾಹದಲ್ಲಿ ನಡೆಸಿದರೂ ಜನರು ಮಾತ್ರ ರಾಕೆಟ್ ಹಾರಿಸಿದರು.

ಇನ್ನು ಪಕ್ಷದ ‘ಪೋಸ್ಟರ್ ಬಾಯ್’ ಎಂದು ಕರೆದರೆ ಯಾವತ್ತೂ ಬೇಸರ ಮಾಡಿಕೊಳ್ಳದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂವತ್ತು ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಿ ಕಿಕ್ಕಿರಿದು ತುಂಬಿದ್ದ ಜನರ ಚಪ್ಪಾಳೆ ಮಾತ್ರ ಪಡೆದರು. ಆದರೆ ಪ್ರಧಾನ ಮಂತ್ರಿಗಳು ಬಿಹಾರಕ್ಕಾಗಿ ಇಷ್ಟೊಂದು ಪುರಸೊತ್ತು ಮಾಡಿಕೊಂಡು ಬಂದರೂ ಒಂದು ಭಾಷಣ- ಎರಡು ಗೆಲುವು ಲೆಕ್ಕದಂತೆ ಅಲ್ಲಿನ ಜನ ಉಡುಗೊರೆ ಕೊಡಲಿಲ್ಲ. ಇನ್ನಾದರೂ ಅವರು, ತಾವೇ ತಲೆಗೇರಿಸಿಕೊಂಡಿರುವ ಅಹಂಕಾರದ ಕಿರೀಟವನ್ನು ಕೆಳಗೆ ತೆಗೆದಿಟ್ಟರೆ ಒಳ್ಳೆಯದು. 

ಚುನಾವಣೆಗಳಲ್ಲಿ ಜನ ಅನಿರೀಕ್ಷಿತವಾಗಿ ಕೆಲವರಿಗೆ ಅನುಗ್ರಹ ಮಾಡುವುದುಂಟು. ಗೆದ್ದ ಮೈತ್ರಿಕೂಟ ಕಟ್ಟಿದ ಮೇಸ್ತ್ರಿ ಎಂದು ಹೊಗಳಲಾದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತಕ್ಷಣ ಪ್ರಚಾರ ಭಾಷಣದ ರೀತಿಯಲ್ಲೇ ಎದುರಾಳಿಯನ್ನು ತೆಗಳಿದರು. ಆದರೆ ಒಬ್ಬ ನಾಯಕನನ್ನು ರೂಪಿಸುವುದು ಗೆಲುವುಗಳು, ನಿಲುವುಗಳು ಮಾತ್ರ ಎಂಬ ಸತ್ಯವನ್ನು ಅವರು ಮರೆಯಬಾರದು. ಒಂದಾನೊಂದು ಕಾಲದಲ್ಲಿ ತೃತೀಯ ರಂಗ ಎಂಬ ಮೈತ್ರಿಕೂಟವನ್ನು ಕಾಂಗ್ರೆಸ್‌ಗೆ ಎದುರಾಗಿ ಕಟ್ಟಲಾಗುತ್ತಿತ್ತು. ಇದೀಗ ಕಾಂಗ್ರೆಸ್ ನೇತೃತ್ವದಲ್ಲೇ ಸಮಾನ ಶತ್ರುವಿನ ವಿರುದ್ಧ ಕೂಟ ಸ್ಥಾಪನೆಯಾಗುವುದು ಅದರ ಸ್ಥಿತಿಯನ್ನೂ ಹೇಳುತ್ತದೆ! ಇದರಿಂದ ತೃತೀಯ ರಂಗದ ಕನಸೂ ಮತ್ತೆ ಚಿಗುರುತ್ತಿದೆಯಂತೆ. ಈ ಕನಸು ಬಿಹಾರದ ಬೇಲಿ ದಾಟಿದರೆ ಯಾರಿಗೆ ಅಪಾಯ ಎನ್ನುವುದು ರಾಹುಲ್‌ಗೆ ಗೊತ್ತಿರಬಹುದು.

ಅನೇಕ ಬಾರಿ ನಾವು ನೋಡಿರುವಂತೆ ‘ಪಂದ್ಯದ ವ್ಯಕ್ತಿ’ ಬೇರೆ, ತಂಡದ ಕ್ಯಾಪ್ಟನ್ ಬೇರೆ ಆಗಿರುತ್ತಾರೆ. ಸೋತವರ ಸಂಕಟಗಳಿರಲಿ, ಗೆದ್ದವರ ಸಂಕಷ್ಟಗಳನ್ನು ಕುರಿತೂ ಚರ್ಚೆ ಆರಂಭವಾಗಿದೆ. ನಿತೀಶ್ ಕುಮಾರ್ ಅವರಿಗೆ ಅಭಿನಂದನೆಯ ಜೊತೆ ‘ಆಲ್ ದ ಬೆಸ್ಟ್’ ಎಂದೂ ಹಾರೈಸುತ್ತಿದ್ದಾರೆ. ಮಹಾಕೂಟದ ಮೈತ್ರಿಯೂ ಲಾಲು ಪ್ರಸಾದ್ ಅವರಿಗೆ ರುಚಿಕರ ಮೇವು ಆಗಿಬಿಟ್ಟರೆ ಆಶ್ಚರ್ಯವಿಲ್ಲ. ವಂಶರಾಜಕಾರಣಕ್ಕೆ ಲಾಲು ಕೊಟ್ಟ ಹೊಸ ಕೊಡುಗೆಯಂತೂ ಎಲ್ಲರಿಗೆ ಗೊತ್ತಿದೆ. ರಾಜಕೀಯವೆಂಬ ಹಾಸಿಗೆಯಲ್ಲಿ ವಿಚಿತ್ರ ಶಯನೋತ್ಸವಗಳು ನಡೆದಿವೆ. ಆದರೆ ತೀರಾ ಪರಿಚಿತರಾದ ಲಾಲು ಜೊತೆ ಬಾಳುವ ಮಾತು ಬೇರೆ. 

ಬಿಹಾರ ಚುನಾವಣೆಯಲ್ಲಿ ಧರ್ಮ ಮತ್ತು ಜಾತಿಯನ್ನು ಬಿಜೆಪಿ ಬೇಕಾದಷ್ಟು ಬಳಸಿಕೊಂಡಿದೆ. ಕೊನೆಯ ಹಂತದಲ್ಲಿ ಗೋಮಾಂಸ ಸೇವನೆಯ ಜಾಹೀರಾತು ಹಾಕಿ ಚುನಾವಣೆಯ ಅಂಗಳಕ್ಕೆ ಹಸುವನ್ನು ತಂದು ಕಟ್ಟಿಹಾಕಿದೆ- ಲಾಲು ಅದರ ಹಾಲು ಕರೆದುಕೊಂಡರಷ್ಟೆ. ಆದರೆ ಬಿಹಾರ ಚುನಾವಣೆಯಲ್ಲಿ ಗೆಲುವು ಪಡೆದ ಪಕ್ಷಗಳೂ ಧರ್ಮ ಮತ್ತು ಜಾತಿ ಲೆಕ್ಕಾಚಾರ ಬಳಸಿಕೊಳ್ಳದೆ ಗೆದ್ದವೇ? ಅಭಿವೃದ್ಧಿ ಅಂದರೆ ಅದನ್ನು ಮೀರುವುದೇ ಅಲ್ಲವೇ ಎಂದು ಭಾರತೀಯ ಮತದಾರನೂ ದಿಗ್ಭ್ರಾಂತನಾಗಿ ಕಟಕಟೆಯಲ್ಲಿ ನಿಂತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT