ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗಳಲ್ಲಿ ಪ್ರತಿರೋಧದ ಪುನರುತ್ಥಾನ

Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ಕಳೆದ ಶನಿವಾರ ವಿಶ್ವದಾದ್ಯಂತ ಹಲವು ನಗರಗಳಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಬೆಂಗಳೂರೂ ಸೇರಿದಂತೆ ರಾಷ್ಟ್ರದ 30 ನಗರಗಳಲ್ಲಿ ರಾತ್ರಿಯ ವೇಳೆ ಬೀದಿಗಿಳಿದ ಮಹಿಳೆಯರು,  ರಾತ್ರಿಯ ವೇಳೆಯೂ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿ ಸಂಚರಿಸಲು ಮಹಿಳೆಗೆ  ಇರಬೇಕಾದ ಹಕ್ಕಿನ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಇದರ ಜೊತೆಗೇ ವಿಶ್ವದ ಏಳು ಖಂಡಗಳಲ್ಲಿನ ವಿವಿಧ ರಾಷ್ಟ್ರಗಳ  ವಿವಿಧ ನಗರಗಳಲ್ಲಿ  ಸುಮಾರು 600 ಪ್ರತಿಭಟನಾ ಪ್ರದರ್ಶನಗಳೂ  ಅಂದು ನಡೆದಿವೆ.   ಅಷ್ಟೇ ಅಲ್ಲ, ಅಂಟಾರ್ಕ್ಟಿಕ ಯಾತ್ರೆಯಲ್ಲಿದ್ದ ವಿವಿಧ ರಾಷ್ಟ್ರಗಳ ದಿಟ್ಟ ಮಹಿಳೆಯರು ಕೂಡ ಹಡಗಿನಲ್ಲೇ ಪ್ರತಿಭಟನಾ ಸಮಾವೇಶ ನಡೆಸಿದ್ದಾರೆ.

ಆದರೆ ಈ ಪ್ರದರ್ಶನಗಳ ಉದ್ದೇಶ ಬೇರೆಯದು. ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ವಿರೋಧಿ ಪ್ರದರ್ಶನಗಳಿವು. ಈವರೆಗೆ  ಗಳಿಸಿಕೊಂಡುಬಂದ ಮಹಿಳೆಯರ ಹಕ್ಕುಗಳು ಟ್ರಂಪ್ ಅಧಿಕಾರದ ಅವಧಿಯಲ್ಲಿ  ಅಪಾಯಕ್ಕೆ ಸಿಲುಕಬಹುದಾದ ಸಾಧ್ಯತೆಗಳಿಗೆ ವ್ಯಕ್ತಪಡಿಸಲಾದ ಪ್ರತಿರೋಧವಿದು. ಟ್ರಂಪ್  ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಲಕ್ಷಾಂತರ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.  

ನೂತನ ಅಧ್ಯಕ್ಷರ ಪರವಾದ ಜಯಕಾರದ ಧ್ವನಿಗಳು ಅವರು ಅಧಿಕಾರ ವಹಿಸಿಕೊಂಡ ಶುಕ್ರವಾರದ ದಿನದಂದು   ಕೇಳಿಬಂದಂತೆಯೇ   ಇದಕ್ಕೆ ಉತ್ತರ ಎಂಬಂತೆ ಪ್ರತಿಭಟನಾ ಪ್ರದರ್ಶನಗಳು ಮರುದಿನದ ಶನಿವಾರವೇ   ನಡೆದಿವೆ. ಎಷ್ಟರಮಟ್ಟಿಗೆ ಅಮೆರಿಕ ವಿಭಜಿತಗೊಂಡಿದೆ ಎಂಬುದನ್ನು  ಈ ಬೆಳವಣಿಗೆಗಳು  ಮತ್ತೊಮ್ಮೆ  ಎತ್ತಿ ತೋರಿವೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರಾಂದೋಲನ ಸಂದರ್ಭದಲ್ಲೇ ವ್ಯಕ್ತವಾಗುತ್ತಿದ್ದ ಸಮಾನಾಂತರ ದೃಷ್ಟಿಕೋನಗಳು ಅಮೆರಿಕದ ವಿಭಜಿತ ಸಮಾಜವನ್ನು ಒಡೆದು ತೋರುತ್ತಲೇ ಇತ್ತು.  ಈಗ ಈ ಅಂತರ ಇನ್ನಷ್ಟು ದೊಡ್ಡದಾಗುತ್ತಲೇ ಇರುವಂತಿದೆ. ಜೊತೆಗೆ ಹಸಿ ಹಸಿ ಭಾವನೆಗಳು ಹಾಗೆಯೇ  ಉಳಿದುಕೊಂಡಂತಿವೆ.  ಚುನಾವಣೆ ಫಲಿತಾಂಶ ಪ್ರಕಟವಾದ ನಂತರ 10 ವಾರಗಳಲ್ಲಿ  ಅಧಿಕಾರ ಹಸ್ತಾಂತರಗೊಳ್ಳುವ ಅವಧಿಯಲ್ಲಿ  ಚುನಾಯಿತ ಟ್ರಂಪ್  ಭರವಸೆ ತುಂಬುವ  ಪ್ರಯತ್ನಗಳನ್ನು  ಮಾಡಲೂ ಇಲ್ಲ.  ಅಧ್ಯಕ್ಷರಾಗಿ ತಮ್ಮ ‘ಐತಿಹಾಸಿಕ’ ಆಯ್ಕೆ ಬಗ್ಗೆ ಕೊಚ್ಚಿಕೊಳ್ಳುವುದನ್ನು  ಮಾತ್ರ ಈಗಲೂ ಟ್ರಂಪ್  ಮುಂದುವರಿಸಿದ್ದಾರೆ.  ಹಾಗೆಯೇ  ಆಂತರಿಕ ಶತ್ರುಗಳ ಮೂದಲಿಕೆಗಳಿಗೆ ಅವರಿಂದೇನು ತಡೆ ಬಿದ್ದಿಲ್ಲ.  ‘ಮಾಧ್ಯಮಗಳು  ಅತ್ಯಂತ ಅಪ್ರಾಮಾಣಿಕ’ ಎಂಬಂತಹ ಆರೋಪವನ್ನು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಟ್ರಂಪ್  ಮಾಡಿದ್ದಾರೆ.

ಶನಿವಾರದ ಪ್ರತಿಭಟನೆಗಳನ್ನು ಕುರಿತಂತೆ ಟ್ವೀಟ್ ಮಾಡಿರುವ ಟ್ರಂಪ್, ‘ನಿನ್ನೆ ದಿನದ ಪ್ರತಿಭಟನೆಗಳನ್ನು ವೀಕ್ಷಿಸಿದೆ. ... ಈ ಜನ ಏಕೆ ಮತ ಹಾಕಲಿಲ್ಲ’ ಎಂದು ಆಕ್ರೋಶ ತೋರಿರುವ ಅವರು ನಂತರ, ಸಂಧಾನದ ಧ್ವನಿಯಲ್ಲಿ  ‘ಶಾಂತಿಯುತ ಪ್ರತಿಭಟನೆ  ಪ್ರಜಾಪ್ರಭುತ್ವದ ಸಂಕೇತ.  ಇದನ್ನು ನಾನು ಸದಾ ಒಪ್ಪದಿದ್ದರೂ  ತಮ್ಮ ಅಭಿಪ್ರಾಯಗಳನ್ನು ಧ್ವನಿಸುವ ಜನರ ಹಕ್ಕುಗಳನ್ನು ಗುರುತಿಸುತ್ತೇನೆ’ ಎಂದಿದ್ದಾರೆ.

ಹವಾಯಿಯ ಮಹಿಳೆಯೊಬ್ಬರ ಫೇಸ್ ಬುಕ್ ಪೋಸ್ಟ್, ಹೊಸ ಅಧ್ಯಕ್ಷರ ವಿರುದ್ಧ ಅಂತರರಾಷ್ಟ್ರೀಯ ಛೀಮಾರಿಯಾಗಿ ಪರಿವರ್ತಿತವಾದದ್ದು ಅಭೂತಪೂರ್ವ. ಅದಕ್ಕೊಂದು ಜನಪದ ಕಥೆಯೂ  ಈಗಾಗಲೇ ಹುಟ್ಟಿಕೊಂಡಿದೆ. ಚುನಾವಣೆಯಲ್ಕಿ  ಟ್ರಂಪ್ ಜಯಗಳಿಸಿದ ವಿಚಾರ ಪ್ರಕಟವಾದ ನಂತರ ಹವಾಯಿಯ ಅಜ್ಜಿ ಹಾಗೂ ನಿವೃತ್ತ ಅಟಾರ್ನಿ  ತೆರೆಸಾ ಷೂಕ್  ಅವರು, ಟ್ರಂಪ್ ಅಧಿಕಾರ ಸ್ವೀಕಾರದ ದಿನ ಪ್ರತಿಭಟನಾ ಪ್ರದರ್ಶನ ನಡೆಸಬೇಕೆಂಬ ಸಲಹೆಯನ್ನು ಫೇಸ್‌ಬುಕ್‌ನಲ್ಲಿ  ನೀಡಿ ನಿದ್ದೆ ಹೋದರಂತೆ. ನಿದ್ದೆಯಿಂದ ಎಚ್ಚೆತ್ತು ನೋಡಿದರೆ 10,000 ಮಂದಿ ಈ ಯೋಜನೆಗೆ ಒಪ್ಪಿಗೆ ಸೂಚಿಸಿಬಿಟ್ಟಿದ್ದರು. ಮತ್ತೊಬ್ಬ ಮಹಿಳೆ ಬಾಬ್ ಬ್ಲಾಂಡ್ ಅವರೂ ಫೇಸ್‌ಬುಕ್‌ನಲ್ಲಿ ಇಂತಹದೇ ಕರೆ ನೀಡಿದ್ದರು. ಇಂತಹದೇ ಪ್ರತಿಕ್ರಿಯೆ ಅಲ್ಲೂ ವ್ಯಕ್ತವಾಯಿತು. ಕರೆ ನೀಡಿದ ಈ ಇಬ್ಬರೂ ಬಿಳಿಯ ಮಹಿಳೆಯರು. 

ಆದರೆ  ಆಫ್ರಿಕನ್ ಅಮೆರಿಕನ್ನರು, ಮುಸ್ಲಿಮರು– ಹೀಗೆ ಎಲ್ಲರನ್ನೂ ಅವರು ತಲುಪಿದ್ದರು.  2011ರಲ್ಲಿ ಈಜಿಪ್ಟ್‌ನ ಕೈರೊ  ನಗರದ ತಾಹ್ರೀರ್ ಚೌಕದಲ್ಲಿ ಈಜಿಪ್ಟ್ ಕ್ರಾಂತಿಗೆ ಮುನ್ನುಡಿ ಬರೆದದ್ದೂ ಸಾಮಾಜಿಕ ಮಾಧ್ಯಮಗಳಲ್ಲಿ ನೀಡಲಾದ ಇಂತಹದೇ ಕರೆಗಳೇ.  ಈಗ ಮತ್ತೊಮ್ಮೆ ಹೆಪ್ಪುಗಟ್ಟಿದ ಜನರ ಭಾವನೆಗಳನ್ನು ಹೊರಹಾಕಲು ಇಲ್ಲಿಯೂ ನೆರವಿಗೆ ಬಂದಿದ್ದು ತಂತ್ರಜ್ಞಾನ ಎಂಬುದನ್ನು ಗಮನಿಸಬೇಕು.  

ಇಂದಿನ ಕಾಲ ವಿಭಿನ್ನವಾಗಿದೆ. ತಮ್ಮನ್ನು ಹಿಂದಕ್ಕೆ ಹಾಕಲು ಬಯಸುವ ಪುರುಷರ ವಿರುದ್ಧ ಬಂಡೇಳುವುದೂ ತಮ್ಮ ಹಕ್ಕು ಎಂದು ಇಂದಿನ ಮಹಿಳೆಯರು ಭಾವಿಸುತ್ತಾರೆ.  ‘ನಮ್ಮನ್ನು ಅಧೀನ ನೆಲೆಯಲ್ಲಿರಿಸಲು ಯತ್ನಿಸುವ ಪ್ರತೀ ಪುರುಷನನ್ನು ಟ್ರಂಪ್ ಪ್ರತಿನಿಧಿಸುತ್ತಾರೆ. ಮುಂದಿನ ನಾಲ್ಕು ವರ್ಷಗಳ ಕಾಲ ಪ್ರತಿದಿನ  ಅದನ್ನು ನೆನಪಿಸಲಾಗುತ್ತದೆ. ಆದರೆ ಅದೇ ನಮ್ಮ ಗುರಿಸಾಧನೆಗೆ  ನಮಗೆ ಪ್ರೇರಣೆ ನೀಡುವ ಅಂಶವಾಗಿರುತ್ತದೆ’ ಎಂಬುದು ಪ್ರತಿಭಟನಾಕಾರರೊಬ್ಬರ ಅಭಿಪ್ರಾಯವಾಗಿತ್ತು.

ಹಿರಿಯರು, ಕಿರಿಯರು, ಬಿಳಿಯರು, ಕರಿಯರು - ಹೀಗೆ ವೈವಿಧ್ಯಮಯ ಗುಂಪು ಮಹಿಳೆಯರ ಈ ಪ್ರತಿಭಟನಾ ಸಮಾವೇಶದಲ್ಲಿತ್ತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಾಕಷ್ಟು ಸಂಖ್ಯೆಯ ಪುರುಷರೂ ಪಾಲ್ಗೊಂಡಿದ್ದರು.  ನಿಜವಾದ ಪುರುಷರು ಹಾಗೂ ಒಳ್ಳೆಯ ಪುರುಷರು  ತಮ್ಮ ಸೋದರಿಯರು, ಪತ್ನಿಯರು, ಹೆಣ್ಣುಮಕ್ಕಳು ಹಾಗೂ ತಾಯಂದಿರ ಹಕ್ಕುಗಳಿಗೆ ಬೆಂಬಲವಾಗಿರುತ್ತಾರೆಂಬ ಫಲಕಗಳನ್ನು ಹಿಡಿದಿದ್ದರು. ಫಲಕಗಳಲ್ಲಿ ಹಾಗೂ ಕೂಗಿದ ಘೋಷವಾಕ್ಯಗಳಲ್ಲಿ ಟ್ರಂಪ್‌ ಅವರು ಬಳಸುವ  ತುಚ್ಛ ಭಾಷೆ ಹಾಗೂ ನಡವಳಿಕೆಗಳನ್ನು ಕುರಿತ ಟೀಕೆಗಳಿದ್ದವು.  ‘ಅಸ್ಮಿತೆಯನ್ನು  ಗೌರವಿಸಿ, ಪ್ರತಿರೋಧವನ್ನು ನಿರೀಕ್ಷಿಸಿ’ ಎಂಬಂಥ  ಎಚ್ಚರಿಕೆಯ ಸಂದೇಶಗಳೂ ಇದ್ದವು.

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್‌ರ  ಐತಿಹಾಸಿಕ  ಸ್ಪರ್ಧೆ, ಸೋಲಿನಲ್ಲಿ ಪರ್ಯವಸಾನವಾದ ನಂತರ ಅನುಭವಿಸಿದ ಹತಾಶೆ, ಒತ್ತಡಗಳನ್ನು ಹಂಚಿಕೊಳ್ಳಲು ಕಾತರರಾಗಿದ್ದ ಸಮಾನಮನಸ್ಕರಿಗೆ ಈ ಪ್ರತಿಭಟನಾ ಸಮಾವೇಶ  ಮುಲಾಮಿನಂತೆ ಕೆಲಸ ಮಾಡಿದೆ ಎನ್ನಬಹುದು.   ‘ನಮ್ಮ ದನಿ ಕೇಳಿಸಬೇಕೆಂಬುದು ನಮಗೆ ಮುಖ್ಯ’ ಎಂಬುದು ಪ್ರತಿಭಟನಾಕಾರರ ಆಶಯವಾಗಿತ್ತು. 

ಟ್ರಂಪ್ ಕಾರ್ಯಸೂಚಿಗೆ ಪ್ರತಿಭಟನೆ ಸೂಚಿಸಿ ಮಹಿಳಾ ಹಕ್ಕುಗಳು, ನಾಗರಿಕ ಹಕ್ಕುಗಳು ಹಾಗೂ ಮಾನವಹಕ್ಕುಗಳಿಗೆ ರಕ್ಷಣೆ ಸಿಗಬೇಕೆಂದು ಒತ್ತಾಯಿಸುವುದು  ಇದರ  ಉದ್ದೇಶ. ಈ ಪ್ರತಿಭಟನಾ ಪ್ರದರ್ಶನಗಳಲ್ಲಿ ವ್ಯಕ್ತವಾದ ಹೆಮ್ಮೆ, ಬಲ ಹಾಗೂ  ನಾಗರಿಕ ಪ್ರಜ್ಞೆ ಸಶಕ್ತವಾದದ್ದು. ಆದರೆ ಈ ಪ್ರತಿಭಟನಾ ಪ್ರದರ್ಶನ ಮತ್ತೊಂದು ದೊಡ್ಡ ಆಂದೋಲನವಾಗಿ ಪರಿವರ್ತಿತವಾಗುತ್ತದೆಯೆ? ಇಲ್ಲಿ ವ್ಯಕ್ತವಾದ ಶಕ್ತಿ, ಹುರುಪು, ಹೊಸ ಭರವಸೆಗೆ ಪೂರಕವಾಗುತ್ತದೆಯೆ? ರಾಜಕೀಯ ಶಕ್ತಿಯಾಗಿ ಬೆಳೆಯುತ್ತದೆಯೇ ಎಂಬುದು ಪ್ರಶ್ನೆ. ರಾಜಕೀಯ ಪ್ರವೇಶಕ್ಕೆ ಆಸಕ್ತಿ ಇರುವ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ ನಡೆಸುವ ಪ್ರಸ್ತಾವವಿಟ್ಟ ಗುಂಪುಗಳೂ ಪಾಲ್ಗೊಂಡಿದ್ದವು.  ಹೀಗಾಗಿ ಅನೇಕ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಕ್ಕೆ ಪ್ರೇರಣೆಯೂ ಒದಗಬಹುದೆಂಬ ಆಶಾವಾದವೂ ಮೂಡಿದೆ.

‘ಕೆಲವೊಮ್ಮೆ ನಮ್ಮ ನಂಬಿಕೆಗಳ ಪರವಾಗಿ ನಮ್ಮ  ಹಾಜರಿಯೂ ಅಗತ್ಯವಾಗುತ್ತದೆ. ಬರೀ ‘ಸೆಂಡ್’ ಒತ್ತಿ ಕುಳಿತುಕೊಳ್ಳುವುದಕ್ಕಾಗುವುದಿಲ್ಲ’ ಎಂಬುದು  ಸ್ತ್ರೀವಾದಿ ಲೇಖಕಿ ಗ್ಲೋರಿಯಾ ಸ್ಟೀನೆಮ್ ಅವರ ನುಡಿ.

ವಿಭಜನೆ, ಲಿಂಗ ತಾರತಮ್ಯ, ಜನಾಂಗೀಯ ವಾದಗಳನ್ನು ಪ್ರತಿಪಾದಿಸುತ್ತಲೇ  ಚುನಾವಣೆಯಲ್ಲಿ ಟ್ರಂಪ್ ಗೆದ್ದ ನಂತರ ‘ಆನ್‌ಲೈನ್‌’ನಲ್ಲಿ ಹೊರಹೊಮ್ಮಿದ ಭಾವನೆಗಳಿಗೆ ಕ್ರಿಯೆಯ  ರೂಪ ನೀಡಿ ಮಹಿಳೆಯರು ಬೀದಿಗಿಳಿದಿದ್ದು ರಾಜಕೀಯವಾಗಿ ಬೇರೆಯದೇ ಆಯಾಮ ನೀಡುವಂತಹದ್ದು.   ಟ್ರಂಪ್ ಅವರ ದ್ವೇಷದ, ಲಿಂಗ ತಾರತಮ್ಯದ ರಾಜಕಾರಣವನ್ನು ಮಾಮೂಲು ಎಂದು ಪರಿಭಾವಿಸಿ ವ್ಯವಸ್ಥೆಯ ಭಾಗವಾಗಿಸುವುದರ ವಿರುದ್ಧದ ಪ್ರತಿಭಟನೆ ಇದು.

ಅಧಿಕಾರ ಸ್ವೀಕರಿಸಿದ ತಕ್ಷಣವೇ ಈ ಮಟ್ಟದ  ಪ್ರತಿಭಟನಾ ರ್‍್ಯಾಲಿಗಳು ಬೇರೆ ಯಾವ ಅಧ್ಯಕ್ಷರ ವಿರುದ್ಧವೂ ನಡೆದಿರಲಿಲ್ಲ.  ಟ್ರಂಪ್ ವಿಶೇಷ ಅದು. ಇದು ಆಕ್ರೋಶದ ಪ್ರತಿಭಟನೆ ಆಗಿರಲಿಲ್ಲ ಎಂಬುದನ್ನೂ ಗಮನಿಸಬೇಕು.  ಲಕ್ಷಾಂತರ ಮಹಿಳೆಯರು ಬೀದಿಗಳಲ್ಲಿ ಹಾಡುತ್ತಾ, ನರ್ತಿಸುತ್ತಾ, ಘೋಷಣೆಗಳನ್ನು ಕೂಗುತ್ತಾ  ಸಂದೇಶಗಳನ್ನು ರವಾನಿಸಿದರು.  ಟ್ರಂಪ್ ವಿರೋಧಿ ಮಹಿಳಾ ಜಾಥಾಗೆ ಟ್ವಿಟರ್ ಮೂಲಕ ಬೆಂಬಲ ಸೂಚಿಸಿದವರಲ್ಲಿ ನಟಿ ಪ್ರಿಯಾಂಕಾ ಚೋಪ್ರ ಸಹ ಸೇರಿದ್ದಾರೆ,  ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾದ ಎಲ್ಲಾ ಐವರು ಭಾರತೀಯ ಅಮೆರಿಕನ್ನರೂ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವಾಷಿಂಗ್ಟನ್‌ನಲ್ಲಿ ಸೇರಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅನೇಕ ಡೆಮಾಕ್ರಟಿಕ್ ಸೆನೆಟರ್‌ಗಳ ಪೈಕಿ  ಮೊದಲ ಇಂಡಿಯನ್ ಅಮೆರಿಕನ್ ಸೆನೆಟರ್ ಕಮಲಾ ಹ್ಯಾರಿಸ್ ಸಹ ಇದ್ದರು. ಮಡೊನ್ನಾ, ಜೂಲಿಯಾ ರಾಬರ್ಟ್‍್ಸ, ಸ್ಕಾರ್ಲೆಟ್ ಜೊಹಾನ್ಸನ್, ಎಮ್ಮಾ ವ್ಯಾಟ್ಸನ್ ಮುಂತಾದ ಖ್ಯಾತನಾಮರೂ ಪಾಲ್ಗೊಂಡಿದ್ದರು.

‘ಮಹಿಳೆಯ ಹಕ್ಕುಗಳು ಮಾನವ ಹಕ್ಕುಗಳು’ ಎಂಬುದನ್ನು ಟ್ರಂಪ್ ಅವರಿಗೆ ಈ ಮಹಿಳೆಯರು ಮತ್ತೊಮ್ಮೆ ನೆನಪಿಸಿದ್ದಾರೆ.   ಸಂಪುಟಕ್ಕೆ ಹಾಗೂ ಆಂತರಿಕ ವಲಯಕ್ಕೆ ಕೆಲವೇ ಮಹಿಳೆಯರನ್ನ ನೇಮಕ ಮಾಡಿಕೊಂಡ ಅಧ್ಯಕ್ಷರ ವಿರುದ್ಧ ವ್ಯಕ್ತಪಡಿಸಲಾದ  ಸಂಘರ್ಷಾತ್ಮಕ ನಿಲುವು ಇದು. ಗರ್ಭಪಾತ ಹಕ್ಕುಗಳನ್ನು ವಿರೋಧಿಸುವಂತಹ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನು  ನಾಮಕರಣ ಮಾಡಲಾಗುವುದು ಎಂಬ  ಪ್ರತಿಜ್ಞೆಯನ್ನು  ಟ್ರಂಪ್ ಕೈಗೊಂಡಿದ್ದಾರೆ. ಹೀಗಾಗಿ ಗರ್ಭಪಾತದ ಹಕ್ಕು, ಆರೋಗ್ಯ ಪಾಲನೆ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಅಪಾಯಕ್ಕೆ ಸಿಲುಕುವ ಆತಂಕವೂ ಎದುರಾಗಿದೆ. 

ಜೊತೆಗೆ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾರ್ಯಕ್ರಮಗಳಿಗೆ ಹಣಕಾಸು ನೆರವು ತಗ್ಗಿಸುವ ಪರ ಒಲವನ್ನೂ ಟ್ರಂಪ್ ಹೊಂದಿದ್ದಾರೆ. ಕನಿಷ್ಠ ವೇತನ  ಹೆಚ್ಚಳಕ್ಕೂ ಅವರ  ವಿರೋಧವಿದೆ. ಹೀಗಿದ್ದೂ ಮಹಿಳೆಯರು ಒಂದಾಗಿ ಪ್ರತಿಭಟಿಸಲಿಲ್ಲ ಅಥವಾ ಒಂದು ಗುಂಪಾಗಿ ಮತ ಹಾಕಲಿಲ್ಲ ಎಂಬುದು ಮಾತ್ರ ವಿಪರ್ಯಾಸ.  ಸುಮಾರು ಶೇ 53ರಷ್ಟು ಬಿಳಿಯ ಮಹಿಳೆಯರು ಟ್ರಂಪ್ ಪರ ಮತ ಹಾಕಿದ್ದಾರೆ ಎಂಬುದನ್ನು ಮತಗಟ್ಟೆ ಸಮೀಕ್ಷೆ ವರದಿಗಳು ಹೇಳಿವೆ. ಮಹಿಳೆಯರ ಕುರಿತಾಗಿ ಟ್ರಂಪ್ ಅವರ ತುಚ್ಛ ಮಾತುಗಳೇನೂ ಇವರ ಮೇಲೆ ಪರಿಣಾಮ ಬೀರಿಲ್ಲ.

ಬದಲಾಗಿ   ರಾಷ್ಟ್ರದಲ್ಲಿ ಬದಲಾವಣೆ ತರಲು, ಒಳ್ಳೆಯ ವೇತನ ತರುವ ಉದ್ಯೋಗ ಸೃಷ್ಟಿಸಲು, ಅಮೆರಿಕದ ಗಡಿಗಳನ್ನು ರಕ್ಷಿಸುವ ಶಕ್ತಿ ಇರುವ ಸ್ವತಂತ್ರ ಮನೋಭಾವ, ವ್ಯವಹಾರ ಅನುಭವವನ್ನು ಹೊಂದಿದವರು ಟ್ರಂಪ್‌ ಎಂಬಂಥ ನಿರೀಕ್ಷೆ ಹೊಂದಿದ್ದಾರೆ.  ಹೀಗಾಗಿ ಈ ಪ್ರತಿಭಟನಾ ಪ್ರದರ್ಶನಗಳು ಎಲ್ಲಾ ಮಹಿಳೆಯರನ್ನೂ ಪ್ರತಿನಿಧಿಸುವುದಿಲ್ಲ ಎಂಬುದು ಸ್ಪಷ್ಟ.

1913ರಲ್ಲಿ  ವುಡ್ರೊ ವಿಲ್ಸನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಅಮೆರಿಕ ಮಹಿಳೆಯರ ಮತದಾನ ಹಕ್ಕಿಗೆ ಒತ್ತಾಯಿಸುವ  ಪ್ರತಿಭಟನೆ ತೀವ್ರವಾಗಿತ್ತು ಎಂಬುದನ್ನು ‘ದಿ ಹೈಯೆಸ್ಟ್ ಗ್ಲಾಸ್ ಸೀಲಿಂಗ್’ ಪುಸ್ತಕದ ಲೇಖಕಿ ಎಲೆನ್ ಫಿಟ್ಜ್ ಪ್ಯಾಟ್ರಿಕ್ ನೆನಪಿಸಿಕೊಂಡಿದ್ದಾರೆ. ಮಹಿಳೆಯರ ಮತದಾನದ ಹಕ್ಕಿಗಾಗಿ ಒತ್ತಾಯಿಸಿದ ಕಾರ್ಯಕರ್ತರು 1917ರಲ್ಲಿ ಶ್ವೇತಭವನದ ಹೊರಗೆ ಪಿಕೆಟಿಂಗ್ ಕೂಡ ನಡೆಸಿದ್ದರು. 

ಮತದಾನ ಹಕ್ಕಿಗಾಗಿ ಹೋರಾಡಿದ  ಅಲೈಸ್ ಪಾಲ್ ಇದರ ನೇತೃತ್ವ ವಹಿಸಿದ್ದರು. ‘ಬಾಯುಪಚಾರದ ಮಾತು ಬೇಡ ನಿರ್ದಿಷ್ಟ  ಕ್ರಮ ಬೇಕು’ ಎಂದು ಪಟ್ಟು ಹಿಡಿದು ಪ್ರತಿಭಟಿಸಿದ ಅನೇಕ ಮಹಿಳೆಯರು ಬಂಧನಕ್ಕೊಳಗಾಗಿದ್ದರು.  ಆ ನಂತರ ವುಡ್ರೊ ವಿಲ್ಸನ್ ಅವರೂ ಮಹಿಳಾ ಮತದಾನ ಹಕ್ಕುಗಳ ಪರವಾಗಿ  ಸಕ್ರಿಯವಾಗಿ ಕಾರ್ಯನಿರ್ವಹಿಸಿದರು. ಅಂತೂ ಕಡೆಗೆ ಹೋರಾಟ ಶುರುವಾದ ಏಳು ವರ್ಷಗಳ ನಂತರ 1920ರಲ್ಲಿ    ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತ್ತು.

ಹೀಗಾಗಿ, ಹೋರಾಟಗಳನ್ನು ಜಯಿಸಲಾಗಿದೆ ಎಂದು ಅಂದುಕೊಂಡಾಗಲೂ ಮಹಿಳೆಯರು ಮತ್ತೆ ಮತ್ತೆ ಹೊಸ ಗುಂಪುಗಳಾಗಿ ಸಮಾವೇಶಗೊಳ್ಳುತ್ತಲೇ ಇರಬೇಕು. ಇದೇನೂ ಹೊಸತಲ್ಲ. ಮಹಿಳೆ ಪರವಾದ ಹೋರಾಟಗಳನ್ನು  ನಿರಂತರವಾಗಿ ಗೆಲ್ಲುತ್ತಲೇ ಇರಬೇಕು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು:   ‘ದೃಢ ನಿರ್ಧಾರ ತಳೆದ ಜನರ ಕಾಲ್ನಡಿಗೆಯ ದನಿಗಿಂತ ಸಶಕ್ತವಾದ ಸಪ್ಪಳ  ಬೇರೆ ಇಲ್ಲ.’ ಈಗ ನೂರಾರು, ಸಾವಿರಾರು, ಲಕ್ಷಾಂತರ  ಮಹಿಳೆಯರ ಪುರುಷರ  ಕಾಲ್ನಡಿಗೆಯ ಶಬ್ದ, ಜನರ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ನೆನಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT