ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು, ದೆಹಲಿ, ನ್ಯೂಯಾರ್ಕ್ ಕಲಾಯಾನ

ಅಕ್ಷರ ಗಾತ್ರ

`ನಿನ್ನ ನಾಟ್ಯ, ಅಭಿನಯ ಅಡ್ಡಿಯಿಲ್ಲ. ಆದರೆ, ಮುಖವೇಕೋ ತುಂಬಿ ಬಂದಂತೆ ಕಾಣುವುದಿಲ್ಲ. ಕೆನ್ನೆಯ ಗುಳಿಗಳು ಎದ್ದು ಕಾಣಿಸುತ್ತವೆ' ಎಂದರು ಗುರುಗಳಾದ ಶಿವರಾಮ ಕಾರಂತರು. ನನಗೂ ಹೌದೆನ್ನಿಸಿತು. ಮೊದಲೇ ಬದುಕಿನಲ್ಲಿ ಬಸವಳಿದವನು. ಮುಖವಾಗಲಿ, ಶರೀರವಾಗಲಿ ತುಂಬಿ ತೋರುವುದಾದರೂ ಹೇಗೆ? ಗುರುಗಳೇ ಒಂದು ಪರಿಹಾರ ಸೂಚಿಸಿದರು. `ಮೀಸೆ ಇಟ್ಟು ನೋಡು, ಅಭಿಮನ್ಯುವೇನೂ ಬಾಲಕನಲ್ಲ. ಅಲ್ಲದೆ, ಯಕ್ಷಗಾನದಲ್ಲಿ ಮೀಸೆ ಗಾಂಭೀರ್ಯದ ಸಂಕೇತವೂ ಹೌದು'. ನನಗೂ ಹೌದೆನ್ನಿಸಿತು.

ದೆಹಲಿಯ ಪ್ರಗತಿ ಮೈದಾನದ ವೇದಿಕೆ ಹಿಂಭಾಗದಲ್ಲಿ ನಾವೆಲ್ಲ ಮುಖಕ್ಕೆ ಬಣ್ಣ ಹಚ್ಚಿ, ವೇಷಭೂಷಣ ತೊಡುತ್ತಿದ್ದಾಗ ಶಿವರಾಮ ಕಾರಂತರು ಬಂದರು. ಪ್ರೊ. ಕು.ಶಿ. ಹರಿದಾಸ ಭಟ್ಟರೂ, ಪ್ರೊ. ಹೆರಂಜೆ ಕೃಷ್ಣ ಭಟ್ಟರೂ ಇದ್ದರು. ಜೊತೆಗೆ ಮತ್ತೊಬ್ಬರಿದ್ದರು. ಅಸಾಧ್ಯ ಗಾಂಭೀರ್ಯದ ಆ ವ್ಯಕ್ತಿ ಎಚ್.ವೈ. ಶಾರದಾಪ್ರಸಾದರು! ಪ್ರಧಾನಿ ಇಂದಿರಾಗಾಂಧಿ ಅವರ ವೀಕ್ಷಣೆಗಾಗಿ ಶಿವರಾಮ ಕಾರಂತರ ನಿರ್ದೇಶನದ `ಅಭಿಮನ್ಯು ಕಾಳಗ' ಯಕ್ಷಗಾನ ಬ್ಯಾಲೆಯ ಸಂಯೋಜನೆಯ ಹೊಣೆ ಹೊತ್ತವರು ಶಾರದಾಪ್ರಸಾದರೆಂದೂ ಅವರು ಇಂದಿರಾಗಾಂಧಿ ಅವರ ಆಪ್ತಕಾರ್ಯದರ್ಶಿಗಳೆಂದೂ ನನಗೆ ತಿಳಿದದ್ದು ಆ ಬಳಿಕ. ನಾನು, ಮೀಸೆ ಧರಿಸಿ ಗುರುಗಳದೇ ಸಂಯೋಜನೆಯ ಆಹಾರ್ಯದೊಂದಿಗೆ ಸಿದ್ಧನಾಗಿದ್ದೆ. ಪ್ರದರ್ಶನ ಆರಂಭವಾಯಿತು. ಸಭೆಯಲ್ಲಿ ಘನ ವ್ಯಕ್ತಿಗಳು ಕುಳಿತು ಆಟ ನೋಡುತ್ತಿದ್ದಾರೆಂದು ಗೊತ್ತಿತ್ತು, ಯಾರೆಲ್ಲ ಇದ್ದಾರೆ ಎಂದು ಯೋಚನೆ ಮಾಡಲೇ ಇಲ್ಲ. ಸಂಪೂರ್ಣ ಮೈಮರೆತು ಪಾತ್ರ ಪ್ರವೇಶ ಮಾಡಿದೆ. ಸುಭದ್ರೆ-ಅಭಿಮನ್ಯು ಸಂವಾದ ಮುಗಿದು ಚಕ್ರವ್ಯೆಹ ಭೇದಿಸಲು ಹೊರಡುವ ಮುನ್ನ ಹತ್ತು ನಿಮಿಷದ ವಿರಾಮ ಕೊಟ್ಟರು. ನಾನು, ರಂಗಸ್ಥಳದಲ್ಲಿ ಸತತ ಕುಣಿದು ದಣಿದ ಕಾರಣದಿಂದ ಒಂದೆಡೆ ಹಾಗೇ ಒರಗಿ ಕುಳಿತಿದ್ದೆ. ಸರಸರನೆ ಹೆಜ್ಜೆಯಿಡುತ್ತ ಕಾರಂತರು ಚೌಕಿಗೆ ಬಂದರು. `

ಸುವರ್ಣ ಎಲ್ಲಿದ್ದಾನೆ?' ಎಂದು ಅವಸರದ ದನಿಯಲ್ಲಿ ಕೇಳಿದರು. ನಾನು ಕೈ ಊರಿ ಎದ್ದು ನಿಂತು ಅವರ ಬಳಿಗೆ ಮೆಲ್ಲನೆ ಹೋದೆ. `ಈ ಮೀಸೆ ಬೇಡ' ಎಂದವರೇ ನನ್ನ ಮುಖದಲ್ಲಿದ್ದ ಕ್ರೇಪರ್‌ನ ಮೀಸೆಯನ್ನು ಎಳೆದು ತೆಗೆದೇಬಿಟ್ಟರು. ಪ್ರಸಂಗದ ಪೂರ್ವಾರ್ಧದಲ್ಲಿ ಮೀಸೆ ಧರಿಸಿದ ಅಭಿಮನ್ಯು! ಉತ್ತರಾರ್ಧದಲ್ಲಿ ಮೀಸೆಯಿಲ್ಲದ ಅಭಿಮನ್ಯು! ನನಗೆ, ನನ್ನ ಜೊತೆಯಿದ್ದವರಿಗೆ ಮುಂದೇನು ಮಾಡುವುದೆಂಬ ಚಿಂತೆ. ಕಾರಂತರು ಈ ಬಗ್ಗೆಯೆಲ್ಲ ಯೋಚನೆ ಮಾಡಿದವರೇ ಅಲ್ಲ. ತನಗೆ ಸರಿಕಾಣದ್ದನ್ನು ಎಲ್ಲಿ, ಹೇಗೆ, ಯಾರು ಎಂಬ ಯೋಚನೆಯೇ ಮಾಡದೆ ಆಕ್ಷೇಪಿಸಿಯೇ ಬಿಡುವವರು. ಕಲಾವಿದರ ನಿರ್ವಹಣೆ ಸರಿಯಾಗದಿದ್ದರೆ ವೇದಿಕೆಯ ಮೇಲೆ ಹತ್ತಿ ಮುಮ್ಮೇಳದವರನ್ನೂ ಹಿಮ್ಮೇಳದವರನ್ನು ತಡೆದು ನಿಲ್ಲಿಸಿದ್ದನ್ನು ನಾನು ಎಷ್ಟೋ ಕಡೆ ಕಂಡಿದ್ದೇನೆ. ಇದು ದೆಹಲಿ, ಅದು ಇಟಲಿ ಎಂಬ ದಾಕ್ಷಿಣ್ಯವೇ ಇಲ್ಲ.

ಪ್ರದರ್ಶನದ ವಿರಾಮ ಭಾಗ ಸ್ವಲ್ಪ ದೀರ್ಘವಿದ್ದುದರಿಂದ ನನ್ನ ಅಭಿಮನ್ಯುವಿನ ಚಹರೆಯಲ್ಲಾದ ಬದಲಾವಣೆ ಅಭಾಸವಾಗಿ ತೋರಲಿಲ್ಲವೆಂದು ಕಾಣುತ್ತದೆ. ಆದರೆ, ದೆಹಲಿಯಿಂದ ಮರಳಿ ಬಂದ ಮೇಲೂ ಆ ವಿಚಾರ ಅವರ ಮನಸ್ಸಿನಲ್ಲಿ ಹಾಗೆಯೇ ಇತ್ತು. ಒಮ್ಮೆ ಅವರು ನನ್ನನ್ನು ಕರೆದು, `ನಿನ್ನ ಮುಖದ ಚಪ್ಪಟೆಯ ಭಾಗ ಮುಚ್ಚಿಹೋಗುವಂತೆ ಏನು ಮಾಡಬಹುದು?' ಎಂದು ಕೇಳಿದರು. ನಾನು ಸುಮ್ಮನಿದ್ದೆ. ಅವರೇ ಹೇಳಿದರು, `ಬಣ್ಣಗಾರಿಕೆಯಲ್ಲೇನಾದರೂ ಮಾಡಲು ಸಾಧ್ಯವೊ ನೋಡೋಣ. ನಾಡಿದ್ದು ನೀವು ಕೆಲವರು ಸಾಲಿಗ್ರಾಮದ ಮನೆಗೆ ಬನ್ನಿ. ಅಲ್ಲಿ ಬಣ್ಣ ಹಚ್ಚಿ ತೋರಿಸಿ'.

ನಾನೂ, ಕೆಲವು ಕಲಾವಿದರೂ ಸಾಲಿಗ್ರಾಮ `ಸುಹಾಸ'ದ ಮಹಡಿಯಲ್ಲಿ ಕುಳಿತು ಮುಖದಲ್ಲಿ ವರ್ಣಿಕೆ ಬರೆಯಲಾರಂಭಿಸಿದೆವು. ಅಲ್ಲಿಯೇ ಕುಳಿತಿದ್ದ ಕಾರಂತರು, `ಕೆನ್ನೆಯ ಮೇಲೆ ಕೊಂಚ ಹಳದಿ ಬಣ್ಣ ಹಚ್ಚು. ಚಪ್ಪಟೆಯ ಭಾಗ ಮಾಸಿದಂತೆ ಕಾಣಬಹುದು' ಎಂದರು. ನಾನು ಹಾಗೆಯೇ ಮಾಡಿದೆ. ಅಂಗೈಯಲ್ಲಿ ಹಳದಿಯನ್ನು ಕೊಂಚ ಬಿಳಿಯ ಬಣ್ಣದೊಂದಿಗೆ ಮಿಶ್ರ ಮಾಡಿ ಕೆನ್ನೆಯ ಮೇಲೆ ತಟ್ಟಲಾರಂಭಿಸಿದೆ. ಕಾರಂತರು ಹೇಳಿದ್ದು ನಿಜವೆನ್ನಿಸಿತು. ನನ್ನ ಮುಖ ತುಂಬಿಬಂದಂತೆ ತೋರುತ್ತಿತ್ತು. ಅವರಿಗೆ ವರ್ಣಸಂಯೋಜನೆಯಲ್ಲಿಯೂ ಆಳವಾದ ಅನುಭವವಿತ್ತು ಎಂಬುದಕ್ಕಿದು ನಿದರ್ಶನ.

ಅದೇ ವರ್ಷ, ಅಂದರೆ 1984. ವಿದ್ವಾಂಸ ಮತ್ತೂರು ಕೃಷ್ಣಮೂರ್ತಿಯವರು ಶಿವರಾಮ ಕಾರಂತರನ್ನು ಭೇಟಿಯಾಗಲು ಬಂದಿದ್ದರು. ಅದೇ ಸಂದರ್ಭದಲ್ಲಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಬ್ಯಾಲೆಯ ರಿಹರ್ಸಲ್ ನಡೆಯುತ್ತಿತ್ತು. `ನಮ್ಮ ಯಕ್ಷಗಾನ ಬ್ಯಾಲೆಯ ರಿಹರ್ಸಲ್ ನೋಡಿ' ಎಂದು ಶಿವರಾಮ ಕಾರಂತರು ಮತ್ತೂರು ಕೃಷ್ಣಮೂರ್ತಿಯವರನ್ನು ಯಕ್ಷಗಾನ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು.

ಮತ್ತೂರು ಕೃಷ್ಣಮೂರ್ತಿಯವರಿಗೆ ಬ್ಯಾಲೆಯ ಭಾವಾಭಿನಯ ಎಷ್ಟೊಂದು ತಟ್ಟಿತೆಂದರೆ ಕಲಾವಿದರು ಶೋಕಭಾವವನ್ನು ಪ್ರದರ್ಶಿಸುವಾಗ ಅವರ ಕಣ್ಣಲ್ಲಿ ನೀರು! `ನಿಮ್ಮ ತಂಡದವರೊಮ್ಮೆ ಲಂಡನ್‌ಗೆ ಹೊರಟುಬರುವಿರಾ?' ಎಂದು ಕೇಳಿದರು.

                                             .........................................

ನಾನು ಬಸ್ಸು ಹತ್ತಿ ಹೊರಟೇಬಿಟ್ಟೆ. 1978. ಆಗ ಬೆಂಗಳೂರಿಗೆ ಬಸ್ಸಿನಲ್ಲಿ ಇಪ್ಪತ್ತೊ ಮೂವತ್ತೊ ರೂಪಾಯಿ ಟಿಕೆಟ್. ಹಾಗೆ, ಹೋದವನು ಬೆಂಗಳೂರಿನಲ್ಲಿಯೇ ಮೂರು ವರ್ಷ ಇದ್ದೆ. ಅಲ್ಲೊಬ್ಬರು ಹಿರಿಯಮ್ಮನಂಥವರಿದ್ದರು. ಮೂವತ್ತು ವರ್ಷಗಳ ಹಿಂದೆಯೇ ಬೆಂಗಳೂರಿನ ಗಾಳಿಯಲ್ಲಿ ಯಕ್ಷಗಾನದ ಗಂಧ ಹರಡುವಲ್ಲಿ ಪರಿಶ್ರಮವಹಿಸಿದವರು. ಮಹಿಳಾ ತಂಡ ಕಟ್ಟಿ, ಕರ್ನಾಟಕದಲ್ಲಿಯೂ ಹೊರನಾಡಿನಲ್ಲಿಯೂ ಸಂಚಾರ ಮಾಡಿ, ಸಾಂಪ್ರದಾಯಿಕ ಮನಸ್ಸುಗಳಲ್ಲಿ ಸಂಚಲನ ಉಂಟುಮಾಡಿದವರು.

ಅವರು ಅಕ್ಕಣಿ ಅಮ್ಮನವರು.

ನನ್ನನ್ನು ಬೆಂಗಳೂರಿಗೆ ಕರೆದೊಯ್ದವರು ಗುಂಡ್ಮಿ ಸದಾನಂದ ಐತಾಳರು. ಯಕ್ಷಗಾನದ ಕುರಿತು ನಿರಂತರ ಅಧ್ಯಯನಶೀಲರಾಗಿರುವ ಗುಂಡ್ಮಿ ಸದಾನಂದ ಐತಾಳರು, `ಬೆಂಗಳೂರಿಗೆ ಬರುವಿರಾ? ಅಲ್ಲೊಂದು ಮಹಿಳಾ ತಂಡವಿದೆ. ಮೇಕಪ್, ಹಿಮ್ಮೇಳ, ಮುಮ್ಮೇಳ ಗೊತ್ತಿದ್ದವರು ಇದ್ದರೆ ಅನುಕೂಲ' ಎಂದು ಕೇಳಿದಾಗ ನಾನು ಇಲ್ಲವೆನ್ನುವೆನೆ? ಬೆಂಗಳೂರಿಗೆ ಹೋಗುವ ಅವಕಾಶವೆಂಬುದು ಒಂದು ಕಾರಣವಾದರೆ ಸ್ಥಿರವಾಗಿ ಪಗಾರ ಬರುವ ಉದ್ಯೋಗ ಸಿಕ್ಕಿದಂತಾಯಿತಲ್ಲ ಎಂದುಕೊಂಡು ಒಪ್ಪಿಯೇ ಬಿಟ್ಟೆ. ಜೊತೆಗೆ, ಚೆರ್ಕಾಡಿ ಮಂಜುನಾಥ ಪ್ರಭುಗಳೂ ಇದ್ದರು.

ಬೆಂಗಳೂರಿನ ರಾಮಕೃಷ್ಣ ಲಾಡ್ಜ್‌ನಲ್ಲಿ ನಮ್ಮ ಊಟ, ನಿದ್ದೆ. ಹಗಲಿಡೀ ತರಬೇತಿ, ಅಭ್ಯಾಸ. ಪ್ರದರ್ಶನವಿದ್ದರೆ ಚೌಕಿಯಲ್ಲಿ ಬಣ್ಣಗಾರಿಕೆ, ವೇಷಭೂಷಣವನ್ನು ಬೇಗಬೇಗನೆ ಮುಗಿಸಿ ಪ್ರದರ್ಶನಾರಂಭದಲ್ಲಿ ಚೆಂಡೆಯ ಮುಂದೆ ಸಿದ್ಧನಾಗುತ್ತಿದ್ದೆ. ಆ ತಂಡದ ಪ್ರದರ್ಶನಕ್ಕೆ ಎಲ್ಲೆಡೆ ಹೆಸರಿತ್ತು. `ಶಶಿಪ್ರಭಾ ಪರಿಣಯ'ದಂಥ ಪ್ರಸಂಗಗಳು. ಒಮ್ಮೆ ರಾಮಕೃಷ್ಣ ಲಾಡ್ಜ್‌ನ ಮೇಲ್ಮಹಡಿಯಲ್ಲಿ ನಮ್ಮದೊಂದು ಪ್ರಾತ್ಯಕ್ಷಿಕೆಯೂ ನಡೆದಿತ್ತು. ಗುಂಡ್ಮಿ ಸದಾನಂದ ಐತಾಳರ ಭಾಗವತಿಕೆ, ಮಂಜುನಾಥ ಪ್ರಭುಗಳ ಮದ್ದಲೆ ನುಡಿತಕ್ಕೆ ನನ್ನದು ಹೆಜ್ಜೆ, ನಾಟ್ಯ, ಅಭಿನಯ. ಅದೂ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಯಕ್ಷದೇಗುಲದ ಮೋಹನ್ ಹೊಳ್ಳರು ಮೆಚ್ಚಿ ಬೆಂಬಲಿಸಿದರು. ಅನೇಕರ ಗೆಳೆತನದ ಭಾಗ್ಯ ಲಭಿಸಿತು. ಇದೇ ಸಂದರ್ಭದಲ್ಲಿ ನನಗೆ ರಾಜಧಾನಿಗೆ ಬರುವ ಪ್ರವಾಸಿ ತಂಡಗಳ ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶವೂ ದೊರೆಯಿತು. ಹಾಗೊಮ್ಮೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕೀಚಕನ ಪಾತ್ರದೊಂದಿಗೆ ನಾನು `ವಲಲ'ನಾಗಿದ್ದೆ. ಅನೇಕ ಕಡೆಗಳಲ್ಲಿ ಗುಂಡ್ಮಿ ಕಾಳಿಂಗ ನಾವಡರಿಗೆ ಚೆಂಡೆ ಸಾಥಿಯಾಗಿದ್ದೆ.

ಯಾಕೋ, ಬೆಂಗಳೂರಿನ ಬದುಕು ಸಾಕು ಅಂತ ಕಂಡಿತು. ಊರಿಗೆ ಮರಳಿದೆ. ಯಥಾಪ್ರಕಾರ ಇಲ್ಲಿ ಹವ್ಯಾಸಿ ಕಲಾವಿದನಾಗಿ ಭಾಗವಹಿಸತೊಡಗಿದೆ. ಮತ್ತೆ, ಭಸ್ಮಾಸುರ, ಕೀಚಕ, ಕೌರವ. `ಗದಾಯುದ್ಧ' ಪ್ರಸಂಗದಲ್ಲಿ ನೀರಿನಲ್ಲಿ ಮುಳುಗಿರುವ ಕೌರವನನ್ನು ಭೀಮಸೇನ ಹಂಗಿಸುತ್ತಲೇ ಇದ್ದ, `ಕಳವಿನ ಜೂಜಾಡಿ, ನಮ್ಮನ್ನು ನಾಡಿನಿಂದ ಹೊರಗೋಡಿಸಿ, ಈಗ ನೀರಿನೊಳಗೆ ಅಡಗಿ ನಾಟಕ ಮಾಡುತ್ತೀಯಾ?'
                                             ........................................

ಹೌದು ನಾಟಕವೇ. `ಗದಾಯುದ್ಧ, ಯಕ್ಷಗಾನ ಎಲ್ಲ ಕಡೆ ನಡೆಯುತ್ತದೆ. ಎಲ್ಲರೂ ನೋಡಿದ್ದಾರೆ. ನಾವು ನಾಟಕವಾಡೋಣ' ಎಂದರು ನಮ್ಮ ತಂಡದವರು. ಸರಿ. ಭಾಸ್ಕರ ರಾವ್ ಅವರು ನಾಟಕ ಬರೆದರು. 1981-82ರ ಆಸುಪಾಸು. ನಾನು ದೆಹಲಿಯಲ್ಲಿ ಬಿ.ವಿ. ಕಾರಂತರ ಜೊತೆಗಿದ್ದು ಬಂದವನು. ಆಧುನಿಕ ನಾಟಕವನ್ನು ನೋಡಿದ ಅನುಭವವಿದ್ದುದರಿಂದ ನಾನೇ ನಾಟಕದ ನಿರ್ದೇಶನದ ಹೊಣೆಹೊತ್ತೆ.

ಅದು, ಉಡುಪಿ ಬಳಿಯ ಕೊಡವೂರಿನಲ್ಲಿ ಶಂಕರನಾರಾಯಣ ನಾಟಕ ಸಭಾ. ಸಹೃದಯಿಗಳಾದ ಕೊಡವೂರು ಕೃಷ್ಣಮೂರ್ತಿ ರಾಯರ ಮುತುವರ್ಜಿಯಲ್ಲಿ ಅದು ನಡೆಯುತ್ತಿತ್ತು. ಅವರಿಗೆ, ನಾಟ್ಯ, ನಾಟಕಗಳಂಥ ಪ್ರಕಾರಗಳಲ್ಲಿ ತುಂಬ ಅನುಭವ, ಆಸಕ್ತಿ. ನನಗೂ ಆ ತಂಡದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದರಿಂದಲೇ `ನಾನೂ ನಾಟಕದಲ್ಲಿಯೂ ಪಾತ್ರ ಮಾಡಿದ್ದೇನೆ' ಎಂದು ಹೇಳಿಕೊಳ್ಳಲು ಇಂದು ಸಾಧ್ಯವಾಗಿದೆ. `ಗದಾಯುದ್ಧ' ನಾಟಕವು ಸುಮಾರು ಹನ್ನೆರಡು ಪ್ರದರ್ಶನಗಳನ್ನು ಕಂಡಿದೆ ಎಂದು ನೆನಪು. ಹಿನ್ನೆಲೆ ಸಂಗೀತವಾಗಿ ಯಕ್ಷಗಾನದ ಹಿಮ್ಮೇಳವನ್ನು ಬಳಸಿಕೊಳ್ಳಲಾಗಿತ್ತು. ಆ ತಂಡದಲ್ಲಿ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದುದೇ ಅಧಿಕ. ತಂಡದಲ್ಲಿ ಹೆಚ್ಚಿನವರಿಗೆ ಯಕ್ಷಗಾನದ ಹಿನ್ನೆಲೆಯೂ ಇದ್ದುದರಿಂದ ಅಭಿನಯಕ್ಕೆ ಅನುಕೂಲವಾಗುತ್ತಿತ್ತು.

ಯಕ್ಷಗಾನದಲ್ಲಿ ಆಶು ಭಾಷಣಕ್ಕೆ, ಆಶು ಸಂಭಾಷಣಕ್ಕೆ ಅವಕಾಶವಿದೆ. ಆದರೆ, ನಾಟಕದಲ್ಲಿ ಕಂಠಪಾಠ ಮಾಡಿದ ಮಾತುಗಳನ್ನಷ್ಟೇ ಆಡಬೇಕು. ಅದಕ್ಕೆ ಬದ್ಧನಾಗದ ಪಾತ್ರಧಾರಿ ತನ್ನ ಪಾತ್ರವನ್ನು ಮಾತ್ರವಲ್ಲ, ಸಹಕಲಾವಿದರ ಪಾತ್ರಗಳನ್ನೂ ಹಾಳುಗೆಡವಿಬಿಡುತ್ತಾನೆ. ನನಗೆ ವೇಗವಾಗಿ ಓದಲು ಅಭ್ಯಾಸವಿಲ್ಲದ ಕಾರಣ, ಸಂಭಾಷಣೆಗಳನ್ನು ಅರ್ಥಮಾಡಿಕೊಂಡು ಕಂಠಸ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನಾಟಕರಂಗದಿಂದ ಮೆಲ್ಲನೆ ನಿರ್ಗಮಿಸಿದೆ.

ಕೆಲವೊಮ್ಮೆ ವೇದಿಕೆ ಸಿಕ್ಕುವುದಿಲ್ಲ. ಇನ್ನು ಕೆಲವೊಮ್ಮೆ ವೇದಿಕೆ ಸಿಕ್ಕಿದರೂ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.
                                              ... ......................................

`ಇಲ್ಲಿ ವೇದಿಕೆಯೇ ಇಲ್ಲವಲ್ಲ... ಸಭಾಂಗಣ ಚೆನ್ನಾಗಿದೆ. ಆದರೆ, ವೇದಿಕೆ ಇಲ್ಲದಿದ್ದರೆ ಎಲ್ಲಿ ಪ್ರದರ್ಶನ ನೀಡುವುದು?' ಎಂದೊಮ್ಮೆ ಯೋಚಿಸಿದೆ. ರಿಮೋಟ್ ಒತ್ತಿದರು. ವೇದಿಕೆ ಭರ್ರನೆ ಸರಿದು ಬಂದು ಮುಂದೆ ಬಂತು. ಏನು ಬೇಕು, ವೇದಿಕೆಯೊ, ಪರದೆಯೊ? ಎಲ್ಲವೂ ಸ್ವಿಚ್ ಒತ್ತಿದ ಕೂಡಲೇ ಸರ್ರನೆ, ಭರ್ರನೆ ಬರುತ್ತಿದ್ದವು. ಎಲ್ಲವನ್ನೂ ಡಿಜಿಟಲ್ ತಂತ್ರಜ್ಞಾನಕ್ಕೆ ಅಳವಡಿಸಿದ ಅಪೂರ್ವ ಸಭಾಂಗಣವದು.

ಹಾಂ! ನಾನು ಮಾತನಾಡುತ್ತಿರುವುದು ನ್ಯೂಯಾರ್ಕ್ `ಲಮಮಾ ಥಿಯೇಟರ್' ಬಗ್ಗೆ. ಬೆಂಗಳೂರಿನ `ಸೀತಾ' ಬಹುಕಲಾರೂಪಕದ ನಿರ್ದೇಶಕಿ ರಂಗತಜ್ಞೆ ಇಲೆನ್ ಸ್ಟಿವರ್ಟ್ ಅವರಿಗೆ ಭಿನ್ನವಾದ ಅನುಭವನ್ನು ಕೊಟ್ಟಿರಬೇಕು. ಅವರು, ತೆರಳುವ ಮುನ್ನ, `ಅಮೆರಿಕದಲ್ಲೇನಾದರೂ ಪ್ರದರ್ಶನ, ಪ್ರಯೋಗಗಳನ್ನು ನಡೆಸುವಿರಾದರೆ ಬರುತ್ತೀಯಲ್ಲ...' ಎಂದು ಹೇಳಿದ್ದರು. ಅದರಂತೆ, ಬೆಂಗಳೂರಿನ ಪ್ರದರ್ಶನವಾಗಿ ಆರು ತಿಂಗಳ ಬಳಿಕ ಇಲೆನ್ ಸ್ಟಿವರ್ಟ್‌ರ ಆಹ್ವಾನ ಬಂತು. ನನಗೆ ಇಂಗ್ಲಿಷ್ ಬಾರದ ತೊಡಕು ಇತ್ತಲ್ಲ, ಹಾಗೆ ಓರ್ವ ದುಭಾಷಿಯನ್ನು ಕರೆತರುವ ಅವಕಾಶವನ್ನೂ ನೀಡಿದ್ದರು. ನಾನೂ ಜಾನಪದ ತಜ್ಞರಾದ ಕೃಷ್ಣಯ್ಯನವರೂ ಸಂಪನ್ಮೂಲ ವ್ಯಕ್ತಿಗಳಾಗಿ ನ್ಯೂಯಾರ್ಕ್‌ನ ವಿಮಾನವೇರಿದೆವು.

ಅಲ್ಲಿ `ಗೀತೋಪದೇಶ'ದ ವಸ್ತುವನ್ನಾಧರಿಸಿದ ಒಂದು ರಂಗಪ್ರಯೋಗ. ಎಂಟು ದೇಶಗಳ ಕಲಾವಿದರು ಅದರಲ್ಲಿ ಭಾಗವಹಿಸಿದ್ದರು. ಹದಿನೆಂಟು ಸ್ತರದ ವೇದಿಕೆಗಳಲ್ಲಿ ಹದಿನೆಂಟು ದಿನಗಳ ಯುದ್ಧ ಪ್ರದರ್ಶನ. ನನ್ನದು ಅಪ್ಪಟ ಯಕ್ಷಗಾನದ ವೇಷಭೂಷಣದಲ್ಲಿ ಕೃಷ್ಣನ ಪಾತ್ರ. ಉಳಿದವರದ್ದು ಅವರವರ ದೇಸಿಕಲೆಗಳ ಆಹಾರ್ಯ. ಹೆಜ್ಜೆ ಮಾತ್ರ ಯಕ್ಷಗಾನದ್ದು. ನಾನೇ ಇಪ್ಪತ್ತು ದಿನಗಳ ಕಾಲ ಅವರಿಗೆ ಯಕ್ಷಗಾನ ಹೆಜ್ಜೆಗಳನ್ನು ಕಲಿಸಿದೆ. ಅವರಾದರೂ ಜಿಮ್ನ್ಯೋಸ್ಟಿಕ್, ಕುಸ್ತಿಗಳಂಥ ಪ್ರಕಾರಗಳಲ್ಲಿ ಪಳಗಿದವರು. ನಾನು ಹೇಳಿಕೊಟ್ಟ ಹೆಜ್ಜೆಗಳನ್ನು ಬಹುಬೇಗನೆ ಪದಗತ ಮಾಡಿಕೊಂಡರು. ಹಿನ್ನೆಲೆಗೆ ಅಮೆರಿಕದ ದೇಸಿಸಂಗೀತವಿತ್ತು. ಅದರ ಲಯಕ್ಕೆ ನಮ್ಮ ಹೆಜ್ಜೆಗಳನ್ನು ಹೊಂದಿಸಬೇಕಾಗಿತ್ತು.

ನೃತ್ಯ, ಸಂಗೀತದಂಥ ಅಭಿವ್ಯಕ್ತಿ ಪ್ರಕಾರಗಳು ಜಗತ್ತಿನ ವಿವಿಧೆಡೆ ವಿವಿಧ ರೀತಿಯಲ್ಲಿವೆ. ಆದರೆ, ಅವುಗಳ ಲಯ, ಭಾವ, ತಾಳಗಳಲ್ಲಿ ಸಾಕಷ್ಟು ಸಾಮ್ಯಗಳಿವೆ ಎಂಬುದನ್ನು ಅರಿವು ಮಾಡಿಕೊಟ್ಟ ಪ್ರವಾಸವಿದು. ಸ್ವೀಡನ್‌ನ ತರುಣಿಯೊಬ್ಬರ ನೃತ್ಯ ಶೈಲಿ ಹೇಗಿತ್ತೆಂದರೆ, ನಮ್ಮ ಕುಡುಬಿಯರ ಕುಣಿತದ ಹಾಗೆ, ಅಸ್ಸಾಮಿನಲ್ಲಿ ಹಿಂಗಡೆ ಅಂಗೈ ಚಲಿಸುತ್ತ ಕುಣಿಯುವ ಕುಣಿತವಿದೆಯಲ್ಲ, ಹಾಗೆ! ಅವಳು ಅಂದಿನ ರಂಗಪ್ರಯೋಗದಲ್ಲಿ ಅರ್ಜುನನಾಗಿ ಕಾಣಿಸಿದಳು. ನಾವೆಲ್ಲ ಶಾಸ್ತ್ರ ಪ್ರಕಾರ ಯಾವ ಸಂಜ್ಞೆಗಳನ್ನು ಮುದ್ರೆಗಳೆಂದು ಅಂಗೀಕರಿಸುತ್ತೇವೆಯೊ ಅಂಥ ಎಷ್ಟೋ ಸಂಕೇತಾಭಿನಯಗಳು ಅವರಲ್ಲಿಯೂ ಇದ್ದವು. ರಾಜತ್ವವನ್ನು ಸಂಕೇತಿಸಲು ಜಗತ್ತಿನ ಹೆಚ್ಚಿನ ಕಲಾಪ್ರಕಾರಗಳಲ್ಲಿ ಶಿಖರಮುದ್ರೆಯನ್ನೇ ಬಳಸುತ್ತಾರೆ. ಪ್ರತಿ ಕಲೆಯೂ ಬೇರೆ ಕಲೆಗಳ ಜೊತೆಗಿನ ಸಾಮ್ಯ ಮತ್ತು ಭಿನ್ನತೆಗಳ ನಡುವೆಯೇ ತನ್ನ ಅನನ್ಯತೆಯನ್ನು ಕಂಡುಕೊಳ್ಳಬೇಕು ಎಂಬ ಚಿಂತನೆ ಮೂಡಲು ಇಲ್ಲಿ ಪ್ರೇರಣೆ ಸಿಕ್ಕಿತು. ಯಕ್ಷಗಾನಕ್ಕೆ ಯಕ್ಷಗಾನದ್ದೇ ಆದ ಮುದ್ರೆಗಳನ್ನು ಮತ್ತು ದೇಸಿ ಶೈಲಿಯ ನವರಸಾಭಿನಯಗಳನ್ನು ರೂಪಿಸಲು ಪ್ರಯತ್ನಿಸಬಾರದೇಕೆ ಎಂಬುದನ್ನು ಗಾಢವಾಗಿ ಯೋಚಿಸಲಾರಂಭಿಸಿದೆ, ಶೋಧನೆಯಲ್ಲಿ ತೊಡಗಿದೆ.

ಅದಿರಲಿ, ಇಲೆನ್ ಸ್ಟಿವರ್ಟ್ ಅವರೇ ನಿರ್ದೇಶಿಸಿದ `ರಂಗಪ್ರಯೋಗ' ಮೂರು ದಿನಗಳ ಸತತ ಪ್ರದರ್ಶನ ಕಂಡಿತು. ಪ್ರತಿಬಾರಿಯೂ ಕಿಕ್ಕಿರಿದ ಸಭಾಂಗಣ. ಈ ಮಧ್ಯೆ `ಯಕ್ಷಗಾನ' ಎಂಬ ಶಬ್ದವನ್ನು ಕೇಳಿ, ನ್ಯೂಯಾರ್ಕ್‌ನಲ್ಲಿರುವ ಕರಾವಳಿ ಕರ್ನಾಟಕದ ಕೆಲವು ಮಂದಿ ನಾನಿದ್ದಲ್ಲಿಗೆ ಬಂದರು. ಹಾಗೆ, ಬಿಡುವಿನಲ್ಲಿ ಕೆಲವರಿಗೆ ಯಕ್ಷಗಾನ ಹೆಜ್ಜೆಗಳನ್ನು ಹೇಳಿಕೊಟ್ಟದ್ದೂ ಇದೆ. ಹಿರಿಯರಾದ ಇಲೆನ್ ಸ್ಟಿವರ್ಟ್ ಅವರಿಗೆ ನನ್ನ ಬಗ್ಗೆ ಮಗನಂಥ ಮಮತೆ ಹುಟ್ಟಿತ್ತು. ಅದಾಗಿ, ಒಂದು ವರ್ಷದಲ್ಲಿ ಅವರು ತೀರಿಕೊಂಡಿರಬೇಕು. ಅವರಿಲ್ಲವಾದ ಸುದ್ದಿ ನನ್ನ ಕಿವಿಗೆ ಬಿದ್ದಾಗ ತುಂಬ ಸಂಕಟವೆನಿಸಿತ್ತು.
                                   .............................................

ಸಂತೋಷವೆನಿಸುತ್ತಿತ್ತು ಆ ಕಾಯಕಗಳಲ್ಲಿ. ಶಿವರಾಮ ಕಾರಂತರ ಕಾರು ಎಂದಿಗೆ ಬರುತ್ತದೆ ಎಂಬುದನ್ನು ಕಾಯುವುದು, ಅದರ ಬಾಗಿಲು ತೆರೆದು ಮೆಲ್ಲನೆ ಕೈಹಿಡಿದು ಇಳಿಸುವುದು, ಅವರನ್ನು ಆದರಿಸುವುದು ಎಲ್ಲವೂ. `ಸಂಜೀವ' ಎಂದೋ `ಸುವರ್ಣ' ಎಂದೋ ಕರೆಯುವುದನ್ನು ಬಿಟ್ಟರೆ, `ನಿನ್ನ ಹಿನ್ನೆಲೆಯೇನು?' ಎಂಬುದನ್ನು ಕೇಳದೆ, ನನ್ನ ಪ್ರತಿಭೆಯನ್ನಷ್ಟೇ ಗುರುತಿಸಿ ಬರಸೆಳೆದುಕೊಂಡಿದ್ದರಿಂದ, `ಶರಣಾಗುವುದಿದ್ದರೆ ಇಂಥವರಿಗೇ ಶರಣಾಗಬೇಕು' ಎಂಬ ಗೌರವಭಾವ ನನ್ನಲ್ಲಿ ಮೂಡಿತ್ತು.

ಆಗ ಹಳೆಯ ಯಕ್ಷಗಾನ ಕೇಂದ್ರದ ಒಂದು ಪಾರ್ಶ್ವದಲ್ಲಿದ್ದ ಕಟ್ಟಡದಲ್ಲಿ ನಾನು ಸಂಸಾರದೊಂದಿಗೆ ವಾಸವಾಗಿದ್ದೆ. ಶಿವರಾಮ ಕಾರಂತರು ಆ ಮನೆಯೊಳಗೆ ಕಾಲಿಡುವಾಗಲೇ `ವೇದಾ, ಒಂದು ಕಾಫಿ ಮಾಡು' ಎಂದು ಮಗಳಿಗೆ ಹೇಳುವಂಥ ಸಲುಗೆಯಿಂದ ಹೇಳುತ್ತಿದ್ದರು. ಕಾಫಿ ಅವರಿಗೆ ಇಷ್ಟ.

ಅಂದಹಾಗೆ, ನಾನು ವೇದಾಳ ಬಗ್ಗೆ ಹೇಳಲಿಲ್ಲವಲ್ಲ! ಇವಳು ನನ್ನ ಹೆಂಡತಿ ವೇದಾವತಿ. ನಮ್ಮ ಮದುವೆಯದ್ದೊಂದು ಕಥೆ. 1986ರಲ್ಲಿ ನಿಶ್ಚಿತಾರ್ಥವಾಗಿತ್ತು. ಆದರೆ, ಎರಡು ವರ್ಷವಾದರೂ ಮದುವೆಗೆ ಕಾಲ ಕೂಡಿ ಬಂದಿರಲಿಲ್ಲ. ಮದುವೆಗಾಗಿ ಚಪ್ಪರ ಹಾಕಲು ಅನುಕೂಲತೆಗಳೂ ನನ್ನಲ್ಲಿರಲಿಲ್ಲ. ಒಮ್ಮೆ, ಹೀಗೇ ಚಿಂತಿಸುತ್ತ ಕುಳಿತಿದ್ದಾಗ, ಗುರುಗಳಾದ ಮಣೂರು ಮಹಾಬಲ ಕಾರಂತರು, `ಹೇಗೂ ಕಾರಂತರಲ್ಲಿ ಒಂದು ಮಾತು ಹೇಳಿ ನೋಡು' ಎಂದಿದ್ದರು. `ಸರಿ, ನೋಡೋಣ' ಅಂತ ನಾನು ಸಾಲಿಗ್ರಾಮಕ್ಕೆ ಬಂದು ಸುಹಾಸ ಮನೆಯ ಮುಂದೆ ನಿಂತಿದ್ದೆ.  1986 ದಶಂಬರದ ಆ ದಿನ ಶಿವರಾಮ ಕಾರಂತರ ಮನೆಯ ಬಾಗಿಲು ತಟ್ಟಿದ್ದೆ. ಕಾರಂತರು, `ಏನು ಬಂದಿ?' ಅಂತ ಕೇಳಿದರೆ, ಏನು ಹೇಳಬೇಕೆಂಬುದನ್ನೂ ಸರಿಯಾಗಿ ಯೋಚನೆ ಮಾಡಿರಲಿಲ್ಲ. ಬಾಗಿಲು ತೆರೆಯುವುದನ್ನೇ ಕಾಯುತ್ತ ನಿಂತೆ.
(ಸಶೇಷ)
ನಿರೂಪಣೆ: ಹರಿಣಿ


ಬೆಂಗಳೂರಿನಲ್ಲಿ `ಸೀತಾ' ರಂಗ ಪ್ರಯೋಗ ನಿರ್ದೇಶಿಸಿದ ನ್ಯೂಯಾರ್ಕ್‌ನ ರಂಗತಜ್ಞೆ ಇಲೆನ್ ಸ್ಟಿವರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT