ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ವೇಗದಲ್ಲಿ ಸಂಚಾರಕ್ಕೆ ನಾಳಿನ ನಾಗರಿಕ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಮೊನ್ನೆ ಒಂದು ವಿಶಿಷ್ಟ ವಿಜ್ಞಾನ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಸುಮಾರು 130 ಪುಟಗಳ, ಹನ್ನೊಂದು ಚಿತ್ರಗಳಿರುವ ಮಾಮೂಲು ಗ್ರಂಥದ `ಡಿಎನ್‌ಎ ಆವೃತ್ತಿ~ ಅದಾಗಿತ್ತು. ಅದನ್ನು ರೂಪಿಸಿದವರು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಜೀವವಿಜ್ಞಾನಿಗಳಾದ ಜಾರ್ಜ್ ಚರ್ಚ್ ಮತ್ತು ಶ್ರೀರಾಮ್ ಕೊಸೂರಿ.ಈ ಹೊಸ ಗ್ರಂಥದ ಹೆಸರು `ರೀಜೆನೆಸಿಸ್~ (ಅಂದರೆ ಮರು ಸೃಷ್ಟಿ ಅಥವಾ ಹೊಸ ಉತ್ಪತ್ತಿ). ಪ್ರಕೃತಿಯ ಹೊಸ ಸೃಷ್ಟಿಯ ಬಗೆಗಿನ ಕೃತಿ ಅದು.

ಸಾಮಾನ್ಯವಾಗಿ ಬಿಡುಗಡೆಯ ಸಂದರ್ಭದಲ್ಲಿ ಒಂದು ಕೃತಿಯ ಎಲ್ಲ ಪ್ರತಿಗಳೂ ಸಿದ್ಧವಾಗಿರುವುದಿಲ್ಲ. ಈಚೆಗೆ ಪಿ. ಸಾಯಿನಾಥರ `ಬರ ಅಂದ್ರೆ ಎಲ್ಲರಿಗೂ ಇಷ್ಟ~ ಗ್ರಂಥದ ಕನ್ನಡ ಆವೃತ್ತಿಯ ಬಿಡುಗಡೆಯ ವೇಳೆಗೆ ಒಂದು ಪ್ರತಿಯೂ ಕೈಗೆ ಬಂದಿರಲಿಲ್ಲ! ಆದರೆ ಈ ಹಾರ್ವರ್ಡ್ ಗ್ರಂಥದ ಎಲ್ಲ 70 ಶತಕೋಟಿ ಪ್ರತಿಗಳು ಅಂದರೆ ಏಳು ಸಾವಿರ ಕೋಟಿ ಪ್ರತಿಗಳು ಬಿಡುಗಡೆಗೆ ಸಜ್ಜಾಗಿದ್ದವು. ಇದುವರೆಗೆ ಪ್ರಪಂಚದಲ್ಲಿ ಬೈಬಲ್‌ನ ಪ್ರತಿಗಳೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬ ದಾಖಲೆ ಇತ್ತು. ಅದನ್ನು ಬಿಟ್ಟರೆ ಚಾರ್ಲ್ಸ್ ಡಿಕನ್ಸ್‌ನ `ಟೇಲ್ ಆಫ್ ಟು ಸಿಟೀಸ್~ ಗ್ರಂಥದ 20 ಕೋಟಿ ಪ್ರತಿಗಳು ಮುದ್ರಿತವಾಗಿದ್ದವು. ಅದನ್ನು ಬಿಟ್ಟರೆ ಮೂರನೆಯ ಶ್ರೇಯಾಂಕ, ನಾಲ್ಕನೆಯ, ಐದನೆಯ..
ಹೀಗೆ ಇಪ್ಪತ್ತು ಅತ್ಯಂತ ಜನಪ್ರಿಯ ಪುಸ್ತಕಗಳ ಎಲ್ಲ ಆವೃತಿಗಳ, ಒಟ್ಟೂ  ಸುಮಾರು ಎರಡು ಸಾವಿರ ಕೋಟಿ ಪ್ರತಿಗಳು ಭೂಮಿಯ ಮೇಲೆ ಇರಬಹುದೆಂದು ಅಂದಾಜು ಮಾಡಲಾಗಿದೆ. ಈಗಿನ `ರೀಜೆನೆಸಿಸ್~ ಕೃತಿಯ ಪ್ರತಿಗಳ ಸಂಖ್ಯೆ ಅವೆಲ್ಲಕ್ಕಿಂತ ಮೂರು ಪಟ್ಟು ಹೆಚ್ಚು!ಆದರೆ ಓದಿದವರು, ಓದಬಲ್ಲವರು ಮಾತ್ರ ಬೆರಳೆಣಿಕೆಷ್ಟು ಜನ.

ಕಾರಣವಿಷ್ಟೆ: ಅದು ಮಾಮೂಲು ಅರ್ಥದಲ್ಲಿ ಮುದ್ರಣವಾಗಿಲ್ಲ; ಅದು ಕಂಪ್ಯೂಟರಿನಲ್ಲಿ ಇಲ್ಲ; ಅಂತರ್ಜಾಲದ `ಕ್ಲೌಡ್~ನಲ್ಲಿ ಇಲ್ಲ; ಪೆನ್ ಡ್ರೈವ್‌ನಲ್ಲಿಲ್ಲ, ಸಿಡಿ-ಡಿವಿಡಿ ರೂಪದಲ್ಲಿಲ್ಲ, ಅಥವಾ ಬ್ಲೂರೇ ಡಿಸ್ಕ್‌ನಲ್ಲಿ ಇಲ್ಲ. ಬದಲಿಗೆ ಅದು `ಡಿಎನ್‌ಎ~ ರೂಪದಲ್ಲಿದೆ.
ಹಾಗೆಂದರೆ ಏನೆಂಬುದಕ್ಕೆ ತುಸು ದೀರ್ಘ ಪೀಠಿಕೆ ಹಾಕಬೇಕಾಗಿದೆ, ಕ್ಷಮಿಸಿ. `ಡಿಎನ್‌ಎ~ ಎಂದರೆ ಎಲ್ಲ ಜೀವಿಗಳ ಪ್ರತಿಯೊಂದು ಜೀವಕೋಶದಲ್ಲೂ ಸುರುಳಿಯಾಗಿ ಕೂತಿರುವ ವರ್ಣತಂತು. ಅದು ತಿರುಚಿ ಇಟ್ಟ ರೈಲು ಹಳಿಗಳ ನಡುವಣ ಹಲಗೆಗಳ ಹಾಗೆ ಕಾಣುತ್ತದೆ. ಆದರೆ ಎ-ಸಿ-ಟಿ-ಜಿ ಎಂಬ ನಾಲ್ಕೇ ನಾಲ್ಕು ತಳಪಟ್ಟಿಗಳಿವೆ.

ಕಂಪ್ಯೂಟರ್‌ನಲ್ಲಿ ಕೇವಲ  0  ಮತ್ತು  1  ಎಂಬ ಎರಡೇ ಚಿಹ್ನೆಗಳು ಬೇರೆ ಬೇರೆ ಕ್ರಮದಲ್ಲಿ ಜೋಡಣೆಗೊಂಡು ಇಂದಿನ ವಿರಾಟ್ ಮಾಹಿತಿ ಕ್ರಾಂತಿಯ ರೂವಾರಿಗಳಾದ ಹಾಗೆ, ಎ-ಜಿ-ಟಿ-ಸಿ ಎಂಬ ನಾಲ್ಕು ಅಕ್ಷರಗಳೇ ಬೇರೆ ಬೇರೆ ಕ್ರಮದಲ್ಲಿ ಜೋಡಣೆಗೊಂಡು ಪದಗಳಾಗಿ, ವಾಕ್ಯಗಳಾಗಿ, ಪುಟಗಳಾಗಿ ತಮಗೆ ತಾವೇ ಡುಪ್ಲಿಕೇಟ್, ಟ್ರಿಪ್ಲಿಕೇಟ್ ಆಗುತ್ತ, ಜೀವಕೋಶದ ವಿಶಿಷ್ಟ ಗುಣಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತ ಇಡೀ ಜಗತ್ತಿನ ಜೀವ ಕ್ರಾಂತಿಯ ರೂವಾರಿಗಳಾಗಿವೆ. ಡಿಎನ್‌ಎ ಎಂದರೆ ಉದ್ದನ್ನ ರೈಲು ಮಾರ್ಗ ಎಂದು ಊಹಿಸಿದರೆ ಅಲ್ಲಲ್ಲಿ ಬರುವ ನಿಲ್ದಾಣಗಳಿಗೆ  ಜೀನ್  ಅಥವಾ ಗುಣಾಣು ಎನ್ನುತ್ತಾರೆ. ಒಂದೊಂದು ಜೀನ್‌ನಲ್ಲಿ ಲಕ್ಷಾಂತರ ತಳಪಟ್ಟಿಗಳಿರುತ್ತವೆ. ಈ ಜೀನ್‌ಗಳೇ ಜೀವಿಗಳ ಗುಣ ಲಕ್ಷಣಗಳ ಕೋಶಾಗಾರಗಳು. ಸೊಳ್ಳೆಯ ಜೀವಕೋಶದಲ್ಲಿ ಸುಮಾರು 20 ಸಾವಿರ ಗುಣಾಣುಗಳಿದ್ದರೆ, ನಮ್ಮ ದೇಹದಲ್ಲಿ 30 ಸಾವಿರ, ಭತ್ತದ ಮೊಳಕೆಯ ಜೀವಕೋಶದಲ್ಲಿ 50 ಸಾವಿರ ಗುಣಾಣುಗಳಿವೆ. ಮನುಷ್ಯನ ಕರುಳಿನಲ್ಲಿ  ವಾಸಿಸುವ ಇ-ಕೊಲೈ ಎಂಬ ಏಕಾಣುಜೀವಿಯಲ್ಲಿ 4,370 ಗುಣಾಣುಗಳಿವೆ. ಜನನೇಂದ್ರಿಯದಲ್ಲಿ  ವಾಸಿಸುವ  `ಮೈಕೊಪ್ಲಾಸ್ಮಾ ಜೆನಿಟಾಲಿಯಾ~ ಹೆಸರಿನ ಸರಳಾತಿಸರ ಏಕಾಣು ಜೀವಿಯ ದೇಹದಲ್ಲಿ 435 ಗುಣಾಣುಗಳಿದ್ದು, ಅವುಗಳನ್ನು ನಿರೂಪಿಸುವ ಐದು ಲಕ್ಷ ತಳಪಟ್ಟಿಗಳಿವೆ.

ಹೀಗೆ ಸೂಕ್ಷ್ಮಾಸೂಕ್ಷ್ಮ ಗುಣಾಣುಗಳನ್ನು ಹಾಗೂ ಅವುಗಳಲ್ಲಿನ ಎ-ಜಿ-ಟಿ-ಸಿ ಪಾವಟಿಗೆಗಳ ಕ್ರಮವನ್ನು ಗುರುತಿಸುವ, ಎಣಿಸುವ, ಪ್ರತ್ಯೇಕಿಸುವ, ಮರುಜೋಡಣೆ ಮಾಡುವ ನಿಟ್ಟಿನಲ್ಲಿ ಜೀವವಿಜ್ಞಾನ ಬಲುದೂರ ಸಾಗಿ ಬಂದಿದೆ. ನಮ್ಮ ಹರ್‌ಗೋಬಿಂದ್ ಖುರಾನಾ ಸೇರಿದಂತೆ 30ಕ್ಕೂ ಹೆಚ್ಚು ವಿಜ್ಞಾನಿಗಳು ಈ ಸಾಧನೆಗೆಂದೇ ನೊಬೆಲ್ ಪ್ರಶಸ್ತಿ ಗಳಿಸಿದ್ದಾರೆ.

ಮನುಷ್ಯನ ಗುಣಾಣುಗಳನ್ನೆಲ್ಲ ಗುರುತಿಸಿ ನಕ್ಷೆ ತಯಾರಿಸಲೆಂದು ಹದಿನೈದು ದೇಶಗಳು ಒಂದಾಗಿ 1995ರಲ್ಲಿ ಮಹಾಮೋಜಣಿ ಕೆಲಸ ಆರಂಭಿಸಿದಾಗ ಕ್ರೇಗ್ ವೆಂಟರ್ ಎಂಬ ಕ್ರೇಝಿ ವಿಜ್ಞಾನಿಯೊಬ್ಬ ಅದೇ ಕೆಲಸವನ್ನು ಪಿಸಿಆರ್ ಎಂಬ ಸಾಲು ಸಾಲು ಯಂತ್ರಗಳ ಮೂಲಕ ಸಾಧಿಸಿ ತೋರಿಸಿದ. ಈಚಿನ ವರ್ಷಗಳಲ್ಲಿ ಜೆನೆಟಿಕ್ ಎಂಜಿನಿಯರಿಂಗ್ ತಜ್ಞರು ಅನೇಕ ಬಗೆಯ ಸಸ್ಯಗಳ, ಕೀಟಗಳ, ಸ್ತನಿಗಳ ಗುಣಾಣು ನಕ್ಷೆ ತಯಾರಿಸಿದ್ದಾರೆ. ಕ್ರೇಗ್ ವೆಂಟರ್‌ನ ಕಂಪನಿಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ತಂಡ ಅಂಥ ಒಂದೊಂದು ಜೀನ್‌ನ ಎ-ಟಿ-ಜಿ-ಸಿ ಅಕ್ಷರಗಳನ್ನೇ ಕಂಪ್ಯೂಟರ್ ಸಂಜ್ಞೆಯಾಗಿ ಪರಿವರ್ತಿಸಿತು.

ಕಂಪ್ಯೂಟರಿನ ಆದೇಶದ ಪ್ರಕಾರ ಆ ಅಕ್ಷರಗಳನ್ನು ಪ್ರತಿನಿಧಿಸುವ ರಸಾಯನ ಕಣಗಳನ್ನು ವಿವಿಧ ಬಗೆಯ ತಳಪಟ್ಟಿಗಳನ್ನಾಗಿ ಜೋಡಿಸಬಲ್ಲ ಯಂತ್ರಗಳೂ ಬಂದವು. ಐದು ಲಕ್ಷ ತಳಪಟ್ಟಿಗಳಿರುವ ಮೈಕೊಪ್ಲಾಸ್ಮಾ ಜೆನಿಟಾಲಿಯವನ್ನು ವೆಂಟರ್ ವಿಜ್ಞಾನಿಗಳು 2008ರಲ್ಲಿ ಇಡಿಯಾಗಿ ಕಂಪ್ಯೂಟರ್ ನೆರವಿನಿಂದಲೇ ಮರುಸೃಷ್ಟಿ ಮಾಡಿದರು. ಈ ಜೀವಿಗೆ ತನ್ನನ್ನು ತಾನೇ ಇಬ್ಭಾಗಿಸಿ ಸಂಖ್ಯಾವರ್ಧನೆ ಮಾಡಿಕೊಳ್ಳುವ ಶಕ್ತಿ ಕೂಡ ಬಂದಿತ್ತು.

ಮುಂದೆ ಎರಡೇ ವರ್ಷಗಳಲ್ಲಿ ಇನ್ನೊಂದು ಕ್ರಾಂತಿಕಾರಿ ಕೆಲಸವನ್ನು ಕ್ರೇಗ್ ಕಂಪನಿ ಮಾಡಿ ತೋರಿಸಿತು. ನಿಸರ್ಗದ ಜೀವಿಯೊಂದನ್ನು ನಕಲು ಮಾಡುವ ಬದಲು ಈ ಬಾರಿ ತಾನೇ ಒಂದು ಹೊಸ ಜೀವಿಯನ್ನು ಸೃಷ್ಟಿಸಿತು. ಕಂಪ್ಯೂಟರ್ ನೆರವಿನಿಂದ ಎಲ್ಲ ತಳಪಟ್ಟಿಗಳನ್ನೂ ವ್ಯವಸ್ಥಿತ ಕ್ರಮದಲ್ಲಿ ಜೋಡಿಸಿ ಹೊಸ ಗುಣಾಣುಗಳನ್ನು ತಾನೇ ಸೃಷ್ಟಿ ಮಾಡಿತು. ಅವನ್ನೆಲ್ಲ  ಡಿಎನ್‌ಎ ವಂಶವಾಹಿ ತಳಿಸೂತ್ರದಂತೆ ನೇಯ್ಗೆ ಮಾಡಿತು. ಅದನ್ನು ಯೀಸ್ಟ್ ಎಂಬ ಏಕಾಣುಜೀವಿಯ ಖಾಲಿ ಜೀವಕೋಶದಲ್ಲಿ  ಸೇರಿಸಿತು. ಸದರಿ ಹೊಸ ಜೀವಿ ತನ್ನನ್ನು ತಾನೇ ಇಬ್ಭಾಗಿಸಿ ಮರುಸಸೃಷ್ಟಿ ಮಾಡಿಕೊಳ್ಳುತ್ತದೆಂದು ಖಾತ್ರಿಯಾದಾಗ ಅದಕ್ಕೆ  ಸಿಂಥಿಯಾ  (synthia)ಎಂದು ಹೆಸರಿಟ್ಟರು. ಸಿಂಥೆಟಿಕ್ (ಕೃತಕ) ಎಂಬ ಇಂಗ್ಲಿಷ್ ಪದದ ತದ್ಭವ ಇದು. ದಿನದೊಪ್ಪತ್ತಿನಲ್ಲಿ ಕೋಟಿ ಸಂಖ್ಯೆಯಲ್ಲಿ ಇವು ತಾವಾಗಿ ಇಬ್ಭಾಗಗೊಳ್ಳುತ್ತವೆಂಬುದು ಗೊತ್ತಾಗಿ ಜಗತ್ತೇ ಚಕಿತಗೊಂಡಿತು. ಜೀವವಿಕಾಸದ ಮಹಾ ಮೈಲುಗಲ್ಲು ಎಂದು ಅದನ್ನು ಕೆಲವರು ಬಣ್ಣಿಸಿದರೆ ಇನ್ನು ಕೆಲವರು  `ಇದೇನಪ್ಪಾ ಬಂತು ಕೇಡು!~ ಎಂದು ಭಯಗೊಂಡರು. ಮನುಷ್ಯನೇ ಸೃಷ್ಟಿಕರ್ತನ ಕೆಲಸವನ್ನು ಕೈಗೆತ್ತಿಕೊಂಡು ರೂಪಿಸಿದ ಹೊಸ ಜೀವಿ ಅದು. ಅದರಲ್ಲಿರುವ ಡಿಎನ್‌ಎಯನ್ನು `ವಂಶವಾಹಿ~ ಎಂದು ಕರೆಯುವುದೇ ತಪ್ಪಾಗುತ್ತದೆ. ಏಕೆಂದರೆ ಅದು ಯಾವುದೇ ಪೂರ್ವಜರ ವಂಶಗುಣವನ್ನು ಪಡೆದಿಲ್ಲ. ಅದರ ಪೂರ್ವಜ ಒಂದು ಕಂಪ್ಯೂಟರ್ ಯಂತ್ರ ಅಷ್ಟೆ.

ಈಗ ಇದೀಗ ಲೋಕಾರ್ಪಣೆಗೊಂಡ ಹೊಸ `ಪುಸ್ತಕ~ಕ್ಕೆ ಬರೋಣ. ಕಂಪ್ಯೂಟರ್‌ನಲ್ಲಿ 0 ಮತ್ತು 1 ಅಂಕಿಗಳನ್ನು ಬಳಸಿ ವಾಕ್ಯಗಳನ್ನು, ಚಿತ್ರಗಳನ್ನು, ಸಂಗೀತವನ್ನು ನಿರೂಪಿಸುವ ಹಾಗೆಯೇ ಡಿಎನ್‌ಎಯ ಎ-ಸಿ-ಜಿ-ಟಿ ತಳಪಟ್ಟಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ(ಜಿ-ಟಿ= 0 ಮತ್ತು ಎ-ಸಿ=1) ಸಂಕೇತಾಕ್ಷರಗಳನ್ನು ಸಿದ್ಧಪಡಿಸಿದರು. ಕಂಪ್ಯೂಟರ್‌ನ ಡಿಜಿಟಲ್ ಸಂಕೇತಗಳ ರೂಪದಲ್ಲಿದ್ದ `ರೀಜೆನೆಸಿಸ್~ ಪುಸ್ತಕದ ವಾಕ್ಯಗಳು ಚಿತ್ರಗಳೆಲ್ಲ ವರ್ಣತಂತುವಿನ ತಳಪಟ್ಟಿಗಳಾಗಿ ಪರಿವರ್ತನೆಗೊಂಡವು. ಅದನ್ನು ಮತ್ತೆ ಕಂಪ್ಯೂಟರ್ ಭಾಷೆಗೆ ಪರಿವರ್ತಿಸಬಲ್ಲ ಕಾರ್ಯಸೂಚಿಯನ್ನೂ ತಳಪಟ್ಟಿಗಳಾಗಿ ಜೋಡಿಸಲಾಯಿತು. ಇಡೀ ಪುಸ್ತಕವೇ ಒಂದು ಜೀವಕೋಶದೊಳಗಿನ `ಡಿಎನ್‌ಎ~ ಸುರುಳಿಯಾಗಿ ಕೂತಿತು. ಕ್ಷಣಕ್ಕೊಮ್ಮೆ ತನಗೆ ತಾನೇ ತದ್ರೂಪಿನ ಇಬ್ಭಾಗವಾಗುತ್ತ ನೋಡ ನೋಡುತ್ತ 70 ಶತಕೋಟಿ ಪ್ರತಿಗಳು ಸಿದ್ಧವಾದವು.

ಎರಡು ವರ್ಷಗಳ ಹಿಂದೆ ರೂಪುಗೊಂಡ  ಸಿಂಥಿಯಾ ಜೀವಿಯ ಡಿಎನ್‌ಎ ತಳಪಟ್ಟಿಗಳಲ್ಲಿನ ಎ-ಜಿ-ಟಿ-ಸಿ ಸಂಕೇತಗಳನ್ನು ಬಿಡಿಸಿದರೆ ಈ ಜೀವಿಯ ಸೃಷ್ಟಿಗೆ ಕಾರಣರಾದ 40 ಚಿಲ್ಲರೆ ವಿಜ್ಞಾನಿಗಳ ಹೆಸರೂ ಕಾಣುತ್ತದೆ. ಅಷ್ಟೇ ಅಲ್ಲ, ಖ್ಯಾತ ಚಿಂತಕರೆನಿಸಿದ ರಿಚರ್ಡ್ ಫೇಯ್ನಮನ್, ಒಪ್ಪೆನ್ ಹೀಮರ್, ಜೇಮ್ಸ ಜಾಯ್ಸ ಅವರ ಅಮರ ವಾಣಿಗಳನ್ನೂ ಡಿಎನ್‌ಎಯಲ್ಲಿ ಸೇರಿಸಲಾಗಿದೆ. ಹಾಗಿರುವಾಗ  `ರೀಜೆನೆಸಿಸ್~ ಕೃತಿಯ ವಿಶೇಷವಾದರೂ ಏನು? ಹಿಂದಿನ ಒಂದು ಪುಟದ ಬದಲು ಇಡೀ ಪುಸ್ತಕ ಅಷ್ಟೇ ತಾನೆ?

ಅಮೆರಿಕದ ಮಾಧ್ಯಮಗಳಲ್ಲಿ ಮೊನ್ನೆ ಡಿಎನ್‌ಎ ಕೃತಿಯ ಬಿಡುಗಡೆಯ ವರದಿ ಬರುತ್ತಲೇ `ಪ್ರಜಾವಾಣಿ~ಯ ಈ ಅಂಕಣಕ್ಕೆಂದೇ ಹಾರ್ವರ್ಡ್‌ನ ಶ್ರೀರಾಮ್ ಕೊಸೂರಿ ಅವರಿಗೆ ಈ ಪ್ರಶ್ನೆ ಹಾಕಲಾಗಿತ್ತು. ಶ್ರೀರಾಮ್ ಹೇಳುವುದೇನೆಂದರೆ, ಮಾಹಿತಿ ಶೇಖರಣೆಯ ಕೆಲಸಕ್ಕೆ ಈಗ ಬಳಸುತ್ತಿರುವ ಎಲ್ಲ ತಂತ್ರಗಳಿಗಿಂತ ಇದು ಪರಮ ಶ್ರೇಷ್ಠ. ಏಕೆಂದರೆ ಮಾಹಿತಿಗಳನ್ನು ಮೂರು ಆಯಾಮಗಳಲ್ಲಿ  ಸಂಗ್ರಹಿಸಬಹುದು. ಇಡೀ ಅಂತರಜಾಲದಲ್ಲಿ ಇಂದು ಅಡಗಿರುವ ಎಲ್ಲ ಮಾಹಿತಿಗಳನ್ನೂ ಒಂದು ಹೆಬ್ಬೆರಳು ಗಾತ್ರದ ಶೀಶೆಯಲ್ಲಿ  ಇಡಬಹುದು. ಅದಕ್ಕಿಂತ ಹೆಚ್ಚಿನ ವಿಶೇಷ ಏನೆಂದರೆ ಜೀವಿಗಳ ಶರೀರದಲ್ಲೇ ಕತೆ ಕಾದಂಬರಿಯನ್ನು ಸೇರ್ಪಡೆ ಮಾಡಲು ಸಾಧ್ಯವಿದೆ. ಜೀವಿಯೇ ಸತ್ತು ಹೋದರೂ ಮುಂದಿನ ಪೀಳಿಗೆಯಲ್ಲಿ ಅದು ಸೇರಿಕೊಳ್ಳುತ್ತದೆ. ಲಕ್ಷಾಂತರ ವರ್ಷಗಳ ಹಿಂದಿನ ಜೀವಿಗಳ ಪಳೆಯುಳಿಕೆಗಳ ಡಿಎನ್‌ಎಯನ್ನು ಓದಲು ಇಂದು ಸಾಧ್ಯವಿದೆ ತಾನೇ? ಅದೂ ಅಲ್ಲದೆ, ಮಾಹಿತಿ ಸಂಗ್ರಹದ ಜಾಗ ಚಿಕ್ಕದಾಗುತ್ತ ಹೋದಂತೆ, ಶಕ್ತಿಯ ಬಳಕೆಯೂ ಅನಂತಾಲ್ಪವಾಗುತ್ತದೆ. ಒಂದು ಗ್ರಾಂನಷ್ಟು ಡಿಎನ್‌ಎಯಲ್ಲಿ 455 ಶತಕೋಟಿ ಗಿಗಾಬೈಟ್ ಮಾಹಿತಿಯನ್ನು ಶೇಖರಿಸಬಹುದು. ನಾಲ್ಕು ಗ್ರಾಂನಲ್ಲಿ ಭೂಮಿಯ ಮೇಲಿನ ಒಂದು ವರ್ಷದ ಎಲ್ಲ ಬಗೆಯ ಸಿನಿಮಾ, ಪುಸ್ತಕ, ಕಡತ ದಾಖಲೆಗಳನ್ನೆಲ್ಲ ಕೂಡಿಡಬಹುದು.

ಅದು ಅದ್ಭುತ ದಾಖಲೆಯೇ ಹೌದು. ಆದರೆ ಅದಕ್ಕಿಂತ ವಿಶೇಷ ಏನು ಗೊತ್ತೆ? ಅಕ್ಷರಗಳನ್ನು, ಚಿತ್ರಗಳನ್ನು, ಹಾಡುಗಳೇ ಮುಂತಾದ ಮಾಹಿತಿಗಳನ್ನು ಡಿಜಿಟಲ್ ಸಂಜ್ಞಾರೂಪದಲ್ಲಿ ಪರಿವರ್ತಿಸಿ ಜೀವಂತ ಡಿಎನ್‌ಎಯಲ್ಲಿ ಸೇರಿಸುವ ಹಾಗೆ, ಜೀವಿಯ ಡಿಎನ್‌ಎಯ ಒಳಗಿರುವ ಮಾಹಿತಿಗಳನ್ನೂ ಡಿಜಿಟಲ್ ಸಂಜ್ಞೆಗಳನ್ನಾಗಿ ಪರಿವರ್ತಿಸಬಹುದು. ತೈಲದಿಂದ ಪ್ಲಾಸ್ಟಿಕ್ ವಸ್ತುವನ್ನು ತಯಾರಿಸಿ, ಪ್ಲಾಸ್ಟಿಕ್‌ನಿಂದ ತೈಲವನ್ನು ಪಡೆಯಲು ಸಾಧ್ಯವಿರುವ ಹಾಗೆ, ಇಂಥ ಪರಸ್ಪರ ಪರಿವರ್ತನೆ ಈಗ ಸಾಧ್ಯವೆನಿಸಿದೆ. ಅದರ ಅರ್ಥ ಏನೆಂದರೆ ಒಂದು ಜೀವಂತ ವೈರಸ್‌ನಲ್ಲಿರುವ ಗುಣಾಣುಗಳ ನಕ್ಷೆಯನ್ನು ಫೋನ್ ಮೂಲಕ ಎಲ್ಲಿಂದ ಎಲ್ಲಿಗಾದರೂ ರವಾನಿಸಬಹುದು.

ಭಯವೋ ಭರವಸೆಯೊ ನೀವೇ ನಿರ್ಧರಿಸಿ. ಇನ್ನು ಚಂದ್ರನಲ್ಲಿ ಅಥವಾ ಮಂಗಳ ಗ್ರಹದಲ್ಲಿ ಒಂದು ಯಂತ್ರವನ್ನು ಸ್ಥಾಪಿಸಿ ಅಲ್ಲಿಗೆ ಸಿಗ್ನಲ್ ಮೂಲಕವೇ ಒಂದು ಜೀವಿಯ ತಳಿಸೂತ್ರವನ್ನು ಬೆಳಕಿನ ವೇಗದಲ್ಲಿ ಕಳುಹಿಸಬಹುದು. ಅಲ್ಲಿ ಆ ಜೀವಿಯನ್ನು ಮತ್ತೆ ಸೃಷ್ಟಿ ಮಾಡಬಹುದು.

 `ಛೇ ಇದೆಲ್ಲ ಆಗಹೋಗದ ಮಾತು~ ಎಂದು ಸದ್ಯಕ್ಕೇನೊ ನಾವು ಮೂಗು ಮುರಿಯಬಹುದು. ಮೂಗಿನ ಹೊರಳೆಯ ಒಂದು ಕೂದಲನ್ನು ಎಳೆದಾಗ ಅದರೊಂದಿಗೆ ನೂರಾರು ಜೀವಕೋಶಗಳು ಕಿತ್ತು ಬರುತ್ತವಲ್ಲ; ಆ ಒಂದೊಂದು ಜೀವಕೋಶದಲ್ಲಿ ಅವಿತಿರುವ 30 ಸಾವಿರ ತಳಿಸೂತ್ರಗಳನ್ನುಬಿಚ್ಚಿ ಮನುಷ್ಯನ ಚರಿತ್ರೆಯನ್ನು ಓದುವ ಸಾಮರ್ಥ್ಯ ಮನುಷ್ಯನಿಗೆ ಬಂದಿದೆ.  `ಬರಲಿದೆ~ ಎಂದು ಇಪ್ಪತ್ತು ವರ್ಷಗಳ ಹಿಂದೆ ಹೇಳಿದಾಗಲೂ ಜನರು ಮೂಗು ಮುರಿದಿದ್ದರು.

(ನಿಮ್ಮ ಅಭಿಪ್ರಾಯ ತಿಳಿಸಿ: editpagefeedback@prajavani.co.in)


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT