ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ: ಇನ್ನೆಷ್ಟು ದಿನ ಕಾಂಗ್ರೆಸ್, ಬಿಜೆಪಿ ನಾಟಕ?

Last Updated 29 ಡಿಸೆಂಬರ್ 2010, 10:15 IST
ಅಕ್ಷರ ಗಾತ್ರ

ದೇಶದ ರಾಜಕೀಯ ವಿದ್ಯಮಾನವು ನಿಂದನೆಯ ಸಾರ್ವಜನಿಕ ಚರ್ಚಾ ವಸ್ತುವಾಗುವಷ್ಟು ಕಳಂಕಗೊಂಡಿದೆ. ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳೇ ಇಂತಹ ಪರಿಸ್ಥಿತಿ ಉದ್ಭವಗೊಳ್ಳಲು ಕಾರಣ. ಪರಸ್ಪರ ಬೈಗುಳಗಳ ಮಳೆ ಸುರಿಸುವಷ್ಟು ಕೆಳಮಟ್ಟಿಗೆ ಇಳಿದಿರುವುದೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎರಡನೇ ತಲೆಮಾರಿನ ಮೊಬೈಲ್ ತರಂಗಾಂತರ (2ಜಿ) ಹಂಚಿಕೆಯ ಹಗರಣದ ತನಿಖೆಯನ್ನು ಜಂಟಿ ಸಂಸತ್ ಸಮಿತಿಯ (ಜೆಪಿಸಿ) ವಿಚಾರಣೆಗೆ ಒಳಪಡಿಸಬೇಕೆಂಬ ಬೇಡಿಕೆಗೆ ಒತ್ತಾಯಿಸಲು ಬಲಪಂಥೀಯ ಮತ್ತು ಎಡಪಂಥೀಯ ವಿಚಾರಧಾರೆಯ ಪಕ್ಷಗಳು ಒಗ್ಗಟ್ಟಾಗಿರುವುದು ಅಪರೂಪದ ಸಂಗತಿ. ಇದಕ್ಕೆ ಪ್ರತಿಯಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ  (ಪಿಎಸಿ) ವಿಚಾರಣೆಗೆ ಸೀಮಿತಗೊಳಿಸಲು ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪಟ್ಟು ಹಿಡಿದಿದೆ. ‘ಪಿಎಸಿ’ ಎದುರು ವಿಚಾರಣೆಗೆ ಹಾಜರಾಗಲು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಸ್ವತಃ ಮುಂದೆ ಬಂದಿರುವುದು ಈ ಬಿಕ್ಕಟ್ಟು ನಿವಾರಣೆಗೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ.

ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರ ಇದುವರೆಗೆ ಅನುಸರಿಸಿದ ಧೋರಣೆ ಮತ್ತು ಭವಿಷ್ಯದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಅಂತಿಮಗೊಳಿಸಲು ‘ಜೆಪಿಸಿ’ ತನಿಖೆ ಅಗತ್ಯ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಈ ಹಕ್ಕೊತ್ತಾಯ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಏನನ್ನೋ ಬಚ್ಚಿಡಲು ಹವಣಿಸುವಂತೆ ವರ್ತಿಸುತ್ತಿದೆ.

ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಸಮರವಂತೂ ಘೋಷಿಸಿದೆ. ಆರಂಭದಲ್ಲಿ ಭ್ರಷ್ಟಾಚಾರದ ಆರೋಪವು ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣಕ್ಕಷ್ಟೇ ಸೀಮಿತವಾಗಿತ್ತು. ‘2ಜಿ’ ತರಂಗಾಂತರ ಹಂಚಿಕೆ ಮೂಲಕ ಸರ್ಕಾರದ ಬೊಕ್ಕಸಕ್ಕೆ 1.75 ಲಕ್ಷ ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಮಹಾಲೇಖಪಾಲರು (ಸಿಎಜಿ)  ವರದಿ ಸಲ್ಲಿಸಿದ ನಂತರ, ಬಿಜೆಪಿಯ ಆರೋಪವು ‘2ಜಿ’ ಹಗರಣವನ್ನೂ ಒಳಗೊಂಡಿತು.

ಬಹುತೇಕ ಪ್ರತಿಪಕ್ಷಗಳು  ‘ಜೆಪಿಸಿ’ ತನಿಖೆ ನಡೆಸಲು ಒತ್ತಾಯಿಸುತ್ತಿದ್ದರೂ ಕಾಂಗ್ರೆಸ್ ಮಾತ್ರ ಬಿಜೆಪಿ ವಿರುದ್ಧವೇ ವಾಗ್ದಾಳಿ ಕೇಂದ್ರೀಕರಿಸಿ ಹಲವಾರು ಸಂಗತಿಗಳನ್ನು ಬಡಬಡಿಸಲು ಆರಂಭಿಸಿತು. ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಕೋಮುವಾದದ ಆರೋಪವನ್ನೂ ಮಾಡಿದರು. ಈ ಕಳಂಕವನ್ನು ಬಿಜೆಪಿ ಸುಲಭವಾಗಿ ನಿವಾರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಬೇರೆ ಮಾತು.ತನ್ನ ವಿರುದ್ಧದ ಆರೋಪಗಳಿಗೆ  ಪ್ರತಿಯಾಗಿ ಬಿಜೆಪಿಯು ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧದ ಹೋರಾಟ ತೀವ್ರಗೊಳಿಸಿತು.

ಅಷ್ಟೇ ಅಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ವಿವಾದದಲ್ಲಿ ಎಳೆದು ತಂದಿತು. ಹಗರಣದ ಬಗ್ಗೆ ಹೊಸ ವಿವರಗಳು ಹೊರ ಬರುತ್ತಿದ್ದಂತೆ ದೂರಸಂಪರ್ಕ ಸಚಿವ ಎ. ರಾಜಾ  ರಾಜೀನಾಮೆ ನೀಡುವಂತೆ ಮಾಡಲಾಯಿತು. ಇದು ಬಿಜೆಪಿಯ ಹೋರಾಟ ಇನ್ನಷ್ಟು ತೀವ್ರಗೊಳಿಸಲು ಕಾರಣವಾಯಿತು.

ಬಿಜೆಪಿಯು ಪ್ರಧಾನಿ ಅವರನ್ನೇ ಮುಖ್ಯ ಗುರಿಯಾಗಿರಿಸಿಕೊಂಡು ತನ್ನ ಹೋರಾಟದ ಕಾರ್ಯತಂತ್ರ ರೂಪಿಸಿದೆ.ಇದು ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆಯಲು ನೆರವಾಗಿರುವುದರಲ್ಲಿ ಸಂದೇಹವಿಲ್ಲ. ಆದರೆ, ಬಿಜೆಪಿಯು  ಸಂವಿಧಾನದ ಉನ್ನತ ಹುದ್ದೆಯಾಗಿರುವ ಪ್ರಧಾನಿ ಪಟ್ಟದ ಮೇಲೆಯೇ ದಾಳಿ ಕೇಂದ್ರೀಕರಿಸಿರುವುದು ಅಷ್ಟು ಸಮಂಜಸ ಎನಿಸಲಾರದು.ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಶ್ವಾಸಾರ್ಹತೆಯು ಸಂಶಯಾತೀತವಾಗಿರುವುದರಿಂದ  ಬಿಜೆಪಿಯು ಪ್ರಚಾರದ ಹುಚ್ಚಿಗೆ ಬೀಳದೆ, ಪ್ರಧಾನಿ ಅವರನ್ನು ಗೌರವಾದರಗಳಿಂದಲೇ ಕಾಣಬೇಕಾಗಿದೆ.

ಒಟ್ಟಾರೆ ಇಡೀ ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ರಾಜಕಾರಣಿಗಳೆಲ್ಲರೂ ಭ್ರಷ್ಟರಾಗಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ಭ್ರಷ್ಟರು ಯಾರು ಎಂಬುದು ಗೊತ್ತಿದ್ದೂ ಪ್ರಧಾನಿ ಮನಮೋಹನ್ ಸಿಂಗ್, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಅನಿಸಿಕೆಯೂ ಎಲ್ಲೆಡೆ ಕಂಡು ಬರುತ್ತಿದೆ. ಇಂತಹ ಭಾವನೆಯೂ ತಪ್ಪು. ಆದರೆ, ಮನಮೋಹನ್ ಸಿಂಗ್ ಅವರು ಜನಮಾನಸದಲ್ಲಿ ಮೂಡಿರುವ ಇಂತಹ ಅನುಮಾನ ದೂರ ಮಾಡಲು ಸೂಕ್ತ ಬಗೆಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.

ಈ ಮಧ್ಯೆ, ಕಾಂಗ್ರೆಸ್ ಪಕ್ಷವು ಜನರ ಗಮನವನ್ನು ಭ್ರಷ್ಟಾಚಾರದಿಂದ ಕೋಮುವಾದದತ್ತ ಸೆಳೆಯಲು ಪ್ರತಿ ತಂತ್ರ ರೂಪಿಸಿತು.ಮುಂಬೈ ಮೇಲಿನ ಭಯೋತ್ಪಾದಕರ (26/11) ದಾಳಿ ಸಂದರ್ಭದಲ್ಲಿ ಹತರಾದ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನೂ ವಿವಾದದಲ್ಲಿ ಎಳೆದು ತರಲಾಯಿತು.   ತಮಗೆ ಹಿಂದೂ ಉಗ್ರಗಾಮಿ ಸಂಘಟನೆಗಳಿಂದ ಜೀವ ಭಯ ಇದೆ ಇರುವುದನ್ನು ಕರ್ಕರೆ ಅವರು ಉಗ್ರನ ಗುಂಡಿಗೆ ಬಲಿಯಾಗುವ ಮುನ್ನ ತಮ್ಮ ಗಮನಕ್ಕೆ ತಂದಿದ್ದರು  ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿ ಮುಂಬೈ ದಾಳಿಗೆ ರಾಜಕೀಯ ಬಣ್ಣ ಬಳಿಯಲೂ ಯತ್ನಿಸಿದ್ದರು.

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ಕರ್ಕರೆ ಅವರು, ಈ ಘಟನೆಯಲ್ಲಿ ಹಿಂದು ಸಂಘಟನೆಗಳ ಕೈವಾಡ ಇರುವುದನ್ನು ಪತ್ತೆ ಹಚ್ಚಿದ್ದರು. ಆರೆಸ್ಸೆಸ್ ಇಂತಹ ಆರೋಪಗಳನ್ನು ಖಂಡಿಸಿದೆಯಾದರೂ, ದೇಶದಲ್ಲಿ ಹಿಂದೂ ಉಗ್ರಗಾಮಿಗಳ ಅಸ್ತಿತ್ವದ ಬಗ್ಗೆ ಸಂದೇಹವಂತೂ ಮೂಡಲು ಕಾರಣವಾಗಿದೆ.

ಉಗ್ರಗಾಮಿ ಸಂಘಟನೆ ಲಷ್ಕರ್ ಎ ತೊಯ್ಬಾಗೆ (ಎಲ್‌ಇಟಿ) ಪ್ರತಿಯಾಗಿ ಹಿಂದೂ ಮೂಲಭೂತವಾದಿ ಉಗ್ರಗಾಮಿ ಸಂಘಟನೆಗಳು ತಲೆ ಎತ್ತುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ಸಂಸತ್ ಸದಸ್ಯ ರಾಹುಲ್ ಗಾಂಧಿ, ಅಮೆರಿಕದ ರಾಯಭಾರಿ ತಿಮತಿ ಜೆ. ರೋಮರ್ಸ್ ಜತೆ ಮಾಹಿತಿ ಹಂಚಿಕೊಂಡಿರುವುದನ್ನು  ವಿಕಿಲೀಕ್ಸ್‌ನಿಂದ ಬಹಿರಂಗ ಪಡಿಸಿದೆ.

ದೇಶದ ಕೆಲ ಮುಸ್ಲಿಮರು  ‘ಎಲ್‌ಇಟಿ’ಗೆ ಬೆಂಬಲಿಸುವ ಅಪಾಯಕ್ಕಿಂತ, ಹಿಂದೂ ಮೂಲಭೂತವಾದಿಗಳು ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ ಎಂದೂ ರಾಹುಲ್ ಹೇಳಿದ್ದಾರೆ. ಇದರಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ‘ರಾಷ್ಟ್ರ ವಿರೋಧಿ’ ಎಂದೂ ಜರೆದಿದೆ.

ಹಿಂದೂ ಉಗ್ರಗಾಮಿಗಳು ಮತ್ತು ಆರೆಸ್ಸೆಸ್ ಮಧ್ಯೆ ಇರುವ ಸಂಬಂಧ ಪತ್ತೆ ಹಚ್ಚಬೇಕು ಎಂದು ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಪಕ್ಷದ ಪೂರ್ಣಾಧಿವೇಶನವು ಸರ್ಕಾರವನ್ನು ಒತ್ತಾಯಿಸಿದೆ. ‘ರಾಹುಲ್ ಗಾಂಧಿ ಅವರ ಮಾತುಗಳನ್ನು ಕೇಳುತ್ತಿದ್ದಂತೆ ತಮಗೆ ರಾಜೀವ್ ಗಾಂಧಿ ಅವರ ಧ್ವನಿ ಕೇಳಿದಂತೆ ಭಾಸವಾಗುವುದು’ ಎಂದು ಗೃಹ ಸಚಿವ ಪಿ. ಚಿದಂಬರಂ ಹೇಳಿರುವುದನ್ನು ಓದಿದಾಗ, ‘ಇದೊಂದು ಭಟ್ಟಂಗಿತನದ ಪರಮಾವಧಿ’ ಎಂದೇ ನನಗೆ ಅನಿಸಿತು. ಎರಡು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್‌ಗೆ ದುಡಿದಿರುವ ಹಿರಿಯ ಮುಖಂಡರಾಗಿರುವ ಚಿದಂಬರಂ ಇಂತಹ ಮುಖಸ್ತುತಿ ಮಾಡುವ ಅಗತ್ಯ ಏನೂ ಇದ್ದಿರಲಿಲ್ಲ. ಆದರೆ, ಪಕ್ಷದ ಮುಖಂಡತ್ವ ಬಹುಶಃ  ಇಂತಹದನ್ನು ನಿರೀಕ್ಷಿಸುತ್ತಿರಬೇಕು.

ಜವಾಹರಲಾಲ್ ನೆಹರೂ ಅವರು ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಹೊಗಳು ಭಟ್ಟರನ್ನು ಇಷ್ಟಪಡುತ್ತಿರಲಿಲ್ಲ ಎನ್ನುವುದನ್ನು ನಾನು ಚಿದಂಬರಂ ಅವರ ಗಮನಕ್ಕೆ ತರಲು ಬಯಸುತ್ತೇನೆ.ಕಾಂಗ್ರೆಸ್ ಮತ್ತು ಬಿಜೆಪಿ ಜನರ ಎದುರು ನಡೆಸುತ್ತಿರುವ ನಾಟಕ ಯಾವಾಗ ಕೊನೆಗೊಳ್ಳುವುದೆಂದು ಹೇಳುವುದು ಕಷ್ಟ. ಮೂರು ವರ್ಷಗಳ ನಂತರ ನಡೆಯಲಿರುವ  ಸಾರ್ವತ್ರಿಕ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳನ್ನು ಸೋಲಿಸಲು ಜನರು ಬಯಸಿರುವುದು ಮಾತ್ರ ನಿಜ.

ಜನಸಾಮಾನ್ಯರು ತೇಜೊವಧೆಗೆ ಗುರಿಯಾಗಿ ಇನ್ನಷ್ಟು ಕುಗ್ಗುವಂತೆ ಮಾಡುವ ಘಟನೆಗಳಂತೆ, ಸದ್ಯಕ್ಕೆ ಸುದ್ದಿ ಮಾಡುತ್ತಿರುವ ಭ್ರಷ್ಟಾಚಾರ ಪ್ರಕರಣಗಳು ವಿದೇಶಗಳಲ್ಲಿ ಭಾರತದ ಗೌರವಕ್ಕೆ ಚ್ಯುತಿ ತರಲಿವೆಯೇ ಅಥವಾ ಇಲ್ಲವೇ ಎನ್ನುವುದು ಇಲ್ಲಿ ಹೆಚ್ಚು ಪ್ರಸ್ತುತವಾಗಲಾರದು. ಚುನಾವಣೆಗಳು ಬರೀ ಶ್ರೀಮಂತರ ಆಟವಾಗಿ ಪರಿಣಮಿಸಿರುವಾಗ ಜನರು ಈ ಭ್ರಷ್ಟಾಚಾರ ಪ್ರಕರಣಗಳಿಗೆಲ್ಲ ಏನೆಂದು ಪ್ರತಿಕ್ರಿಯಿಸಲು ಸಾಧ್ಯ.

ಚುನಾವಣೆಯಲ್ಲಿ ಎಲ್ಲರಿಗೂ ಸ್ಪರ್ಧಿಸಲು ಅವಕಾಶ ಇರುವಂತೆ ಮಾಡಲು ಹಣಕ್ಕೆ ಹೆಚ್ಚು ಮಹತ್ವ ಇರದಂತಹ ಚುನಾವಣಾ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ಜಾರಿಗೆ ತರುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ಬೇಕಾಗಿಲ್ಲ. ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯೊಬ್ಬ 10 ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡಬೇಕಾಗಿದ್ದರೂ, ಆ ಎಲ್ಲ ವೆಚ್ಚ ಭರಿಸುವ ಸಾಮರ್ಥ್ಯ ತಮ್ಮ ಬಳಿ ಇದೆ ಎಂದು ಈ ಪಕ್ಷಗಳು ಭಾವಿಸಿವೆ. ಪ್ರಾಮಾಣಿಕ, ಅರ್ಹ ವ್ಯಕ್ತಿಯೊಬ್ಬ ಇಷ್ಟು ದೊಡ್ಡ ಮೊತ್ತವನ್ನು  ಭರಿಸುವುದಾದರೂ ಹೇಗೆ? ಆತ ಮೋಸ ವಂಚನೆಯ ಭಾಗವಾಗಿ ಚುನಾವಣೆ ಎದುರಿಸಬೇಕು ಇಲ್ಲವೇ ಸೋಲನ್ನು ಒಪ್ಪಿಕೊಳ್ಳಬೇಕು.

ರಾಜ್ಯಸಭೆಯದೂ ಇದೇ ಬಗೆಯ ಕತೆಯಾಗಿದೆ. ಸುಪ್ರೀಂ ಕೋರ್ಟ್‌ನ ಕೃಪೆಯಿಂದಾಗಿ ರಾಜ್ಯಸಭೆಯು ಈಗ ಮೋಸಗಾರರ, ಹಣದ ಥೈಲಿಯ ತಾಣವಾಗಿದೆ. ರಹಸ್ಯ ಮತದಾನ ರದ್ದುಪಡಿಸಿರುವುದನ್ನು ಸುಪ್ರೀಂ ಕೋರ್ಟ್‌ನ ತೀರ್ಪು ಎತ್ತಿ ಹಿಡಿದಿದೆ. ನೀವು ನಂಬಿ ಅಥವಾ ಬಿಡಿ, ಅದೊಂದು ಸರ್ವಸಮ್ಮತ ತೀರ್ಪು ಆಗಿತ್ತು! ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಅವರು ಕೂಡ ಐದು ಮಂದಿ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದರು.

ಇನ್ನೊಂದೆಡೆ, ಸಂಸದೀಯ ವ್ಯವಸ್ಥೆಯ ಭವಿಷ್ಯದ ಬಗ್ಗೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳು ಶಾಸನಸಭೆಗಳ ಪಾವಿತ್ರ್ಯಕ್ಕೆ ಭಂಗ ತರುತ್ತಿದ್ದಾರೆ. ಪ್ರತಿಪಕ್ಷಗಳು ಸಂಸತ್ ಕಲಾಪಕ್ಕೆ 3 ವಾರಗಳ ಕಾಲ ಅಡ್ಡಿಪಡಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಸದಸ್ಯರು ಎರಡು ವಾರ ಗಳ ಕಾಲ ಕಲಾಪಕ್ಕೆ ಅಡ್ಡಿಪಡಿಸಿದ ಖ್ಯಾತಿ ಹೊಂದಿದ್ದಾರೆ.

ಹಣದ ಲೆಕ್ಕಾಚಾರದ ಬದಲಿಗೆ ಜನಪರ ಕೆಲಸ, ವಿಶ್ವಾಸಾರ್ಹತೆ ಕಾರಣಕ್ಕೆ ರಾಜ್ಯ ವಿಧಾನಸಭೆ ಮತ್ತು ಸಂಸತ್‌ನಲ್ಲಿನ ಜನಪ್ರತಿನಿಧಿಗಳ ವರ್ತನೆ ಬಗ್ಗೆ ಜನರು ವಿಶ್ವಾಸ ಹೊಂದುವಂತಾದರೆ ಮಾತ್ರ ಇಂತಹ ಕಲಾಪ ಬಹಿಷ್ಕಾರವನ್ನು ಜನರು ಗಂಭೀರವಾಗಿ ಪರಿಗಣಿಸಿಯಾರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT