ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಗಳ ಬೆಸೆಯುತ್ತಾ... ಭಾವನೆಗಳ ಹೆಣೆಯುತ್ತಾ...

Last Updated 9 ಮೇ 2013, 19:59 IST
ಅಕ್ಷರ ಗಾತ್ರ

ದಾದಾಸಾಹೇಬ್ ಫಾಲ್ಕೆ 1913 ರಲ್ಲಿ `ರಾಜಾ ಹರಿಶ್ಚಂದ್ರ' ಎಂಬ ಪೂರ್ಣ ಪ್ರಮಾಣದ ಕಥಾಚಿತ್ರವನ್ನೇನೋ ನಿರ್ಮಿಸಿ, ಭಾರತದಲ್ಲೇ ಸಂಪೂರ್ಣ ಚಿತ್ರ ತಯಾರಿಕೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟರು.

ಮುಂದೆ?
ಫಾಲ್ಕೆ ಅವರ ಪ್ರಯತ್ನದಿಂದ ಸ್ಫೂರ್ತಿ ಪಡೆದವರು ಕೂಡ ಚಿತ್ರ ತಯಾರಿಕೆಯಲ್ಲಿ ತೊಡಗಿಕೊಂಡರು. 1912ರಿಂದ 1934ರವರೆಗೆ ಅಂದರೆ, ವಾಕ್ಚಿತ್ರ ಶಕೆ ಆರಂಭವಾಗುವವರೆಗೆ ಒಟ್ಟು 1279 ಮೂಕಿ ಚಿತ್ರಗಳು ತಯಾರಾಗಿವೆ. (ಕರ್ನಾಟಕದಲ್ಲಿ ತಯಾರಾದ ಚಿತ್ರಗಳ ಸಂಖ್ಯೆ 175). ಬಹುತೇಕ ಚಿತ್ರಗಳು ಪೌರಾಣಿಕ ಕಥೆಯನ್ನೇ ಒಳಗೊಂಡಿದ್ದವು. ಭಾರತದ ಪುರಾತನ ಸಂಸ್ಕೃತಿಯ ಬಗ್ಗೆ ಆಸಕ್ತಿ ಕುತೂಹಲ ಹುಟ್ಟಿಸುವ ಯತ್ನ ಈ ಹಂತದಲ್ಲಿ ನಡೆಯಿತು.

ಭಾರತೀಯ ಸಂತರನ್ನು ಅರಿಯುವ ವಿಚಾರದ ಚಿತ್ರಗಳು ಜನರನ್ನು ಸೆಳೆಯುತ್ತಿದ್ದವು. ಅಶೋಕ ಚಕ್ರವರ್ತಿ, ಚಂದ್ರಗುಪ್ತ, ಹರ್ಷವರ್ಧನ, ಮೊಘಲ್ ಸಾಮ್ರಾಜ್ಯದ ದೊರೆಗಳು ಹಾಗೂ ರಜಪೂತ ಸೈನಿಕರು, ಶಿವಾಜಿ ಮಹಾರಾಜರ ಪರಾಕ್ರಮ ಮೊದಲಾದ ವಸ್ತುಗಳು ಸಿನಿಮಾ ಆದವು. ಮಹಿಳೆಯರ ಪಾತ್ರ, ಅಸ್ಪೃಶ್ಯತೆ, ಹಿಂದೂ ಮುಸ್ಲಿಂ ಏಕತೆ ಉಳ್ಳ ವಸ್ತುಗಳು ನಿರಂತರವಾಗಿ ಮೂಡಿ ಬರಲಾರಂಭಿಸಿದ್ದು ಭಾರತೀಯ ಚಿತ್ರರಂಗದ ವೈಶಿಷ್ಟ್ಯವಾಗಿಯೇ ಕಂಡು ಬರುತ್ತದೆ.

ಮೂಕಿ ಚಿತ್ರಗಳು ಸಾಮಾನ್ಯವಾಗಿ ಸ್ಟಂಟ್ ಸಿನಿಮಾಗಳೇ ಆಗಿದ್ದವು ಎನ್ನುವ ಭಾವನೆ ಇದೆ. ಸಾಹಸ ತೋರಿಸುವ ಚಲನಚಿತ್ರಗಳಲ್ಲಿ ಕುಸ್ತಿಪಟುಗಳೇ ನಾಯಕರಾಗಿರುತ್ತಿದ್ದುದರಿಂದ, ಇಂತಹ ಭಾವನೆ ಮೂಡಿತ್ತು. ಆಂಗ್ಲ ಚಿತ್ರಗಳೇ ಹೆಚ್ಚಾಗಿ ತೆರೆ ಕಾಣುತ್ತಿದ್ದುದರಿಂದ, ಅಂತಹ ಚಿತ್ರಗಳು ಭಾರತೀಯ ಚಿತ್ರಗಳಿಗಿಂತ ತಾಂತ್ರಿಕವಾಗಿ ಆಕರ್ಷಕವಾಗಿರುತ್ತಿದ್ದುದರಿಂದ ಜನ ಅದರತ್ತ ನುಗ್ಗುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ನಮ್ಮವರೇ ನಡೆಸಿದ ಪ್ರಯತ್ನ ಭಾರತೀಯ ಚಿತ್ರರಂಗಕ್ಕೆ ಒಳ್ಳೆಯ ಬುನಾದಿಯನ್ನೇ ಹಾಕಿತು.

ಪಾಶ್ಚಾತ್ಯ ಚಿತ್ರಗಳಾದ ಫ್ಯಾಂಟಮ್, ಮಾಂಡ್ರೆಕ್, ಸೂಪರ್ ಮ್ಯಾನ್‌ಗಳಿಗೆ ಪರ್ಯಾಯವೋ ಎಂಬಂತೆ ದಾದಾ ಸಾಹೇಬ್ ಫಾಲ್ಕೆ ಅವರು `ಲಂಕಾದಹನ' (1917) ತಯಾರಿಸಿದರು. ಸೀತೆಯ ಪಾತ್ರವನ್ನು ಸಾಳುಂಕೆ ಎನ್ನುವ ಪುರುಷ ಕಲಾವಿದರೇ ವಹಿಸಿದ್ದರು. ಹನುಮಂತ ಲಂಕೆಯನ್ನು ಸುಟ್ಟ ಕತೆ ಯಾರು ಕೇಳಿಲ್ಲ. ಈ ಕತೆಯನ್ನು ತೆರೆಯ ಮೇಲೆ ಚಿತ್ರವತ್ತಾಗಿ ತಂದವರು ಫಾಲ್ಕೆ. ಬಾಲಕ್ಕೆ ಬೆಂಕಿ ಬಿದ್ದಾಗ ಹನುಮಂತ, ಬೆಳೆದು ಬೆಳೆದು, ಬೆಳೆದು ಆಕಾಶದೆತ್ತರಕ್ಕೆ ನಿಲ್ಲುವ ಪರಿಯನ್ನು ಫಾಲ್ಕೆ ಟ್ರಿಕ್ ಶಾಟ್‌ನಲ್ಲಿ ಮೂಡಿಸಿದ ರೀತಿ ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ನಿಲ್ಲಿಸುತ್ತಿತ್ತು.

ಫಾಲ್ಕೆ ಕಂಡುಕೊಂಡಿದ್ದ ಸ್ಪೆಷಲ್ ಎಫೆಕ್ಟ್‌ಗಳ ಬಗ್ಗೆ ಇಂಗ್ಲೆಂಡ್ ಹಾಗೂ ಫ್ರಾನ್ಸ್‌ನಲ್ಲಿ ನಿರ್ದೇಶಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ರಿಟನ್‌ನ ಖ್ಯಾತ ನಿರ್ಮಾಪಕ ಸಿಸಿಲ್ ಹೆಪ್‌ವರ್ಥ್, ಇಂಗ್ಲೆಂಡಿಗೆ ಬಂದು ತಮ್ಮ ಸಂಸ್ಥೆಗೆ ಚಿತ್ರ ತಯಾರಿಸಿ ಕೊಡುವಂತೆ ಫಾಲ್ಕೆಯವರನ್ನು ಆಹ್ವಾನಿಸಿದ್ದರು. ಅಪಾರ ದೇಶಭಕ್ತಿ ಹೊಂದಿದ್ದ ಫಾಲ್ಕೆ, ಭಾರತೀಯ ಚಿತ್ರರಂಗಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರು ಇಲ್ಲೇ ಉಳಿದರು. ಭಾರತೀಯ ಚಿತ್ರರಂಗವೂ ಉಳಿಯಿತು.

`ಲಂಕಾ ದಹನ'ದ ಮೂಲಕ ಫಾಲ್ಕೆ ಭಾರತೀಯ ಮನಸ್ಸುಗಳನ್ನು ಒಂದುಗೂಡಿಸಿದರು. `ರಾಮ'ನನ್ನು ನೋಡಲು ಜನ ದೂರದೂರದ ಊರಿನಿಂದ ಎತ್ತಿನಗಾಡಿಗಳಲ್ಲಿ ಮುಂಬೈನ ಗಿರ್‌ಗಾಂವ್‌ನಲ್ಲಿದ್ದ ವೆಸ್ಟ್‌ಎಂಡ್ ಸಿನಿಮಾ ಮಂದಿರಕ್ಕೆ ಆಗಮಿಸುತ್ತಿದ್ದರು. ಚಿತ್ರಮಂದಿರವಿದ್ದ ರಸ್ತೆ ತುಂಬ ಎತ್ತಿನ ಗಾಡಿಗಳನ್ನೆಲ್ಲಾ ನಿಲ್ಲಿಸಿ ಅಂದಿನ ದಿನಗಳಲ್ಲೇ ರಸ್ತೆ ಜಾಮ್.

ಅಂದಿನ ಶೋ ಮುಗಿಸಿ, ಮರು ದಿನವೂ ಮತ್ತೆ ರಾಮದರ್ಶನ ಪಡೆಯಲು ಜನ ರಾತ್ರಿಯೆಲ್ಲಾ ಅಲ್ಲೇ ಮಲಗುತ್ತಿದ್ದರಂತೆ. `ಲಂಕಾದಹನ ಎಷ್ಟೊಂದು ಅದ್ಭುತವಾದ ಚಿತ್ರವಾಗಿತ್ತು. ನಾನು ಅದರಿಂದ ಎಷ್ಟೊಂದು ಪ್ರಭಾವಿತನಾದೆ ಎಂದರೆ, ಅಮೆರಿಕ ಚಿತ್ರಗಳನ್ನು ನಾನು ನೋಡುವುದನ್ನೇ ಮರೆತೆ' ಎಂದು ಜೆ.ಟಿ.ಎಚ್. ವಾಡಿಯಾ ಹೇಳಿದ್ದಾರೆ. (ಫಾಲ್ಕೆ 95 ಕಥಾಚಿತ್ರಗಳನ್ನು ಮತ್ತು 26 ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ).

ಭಾರತೀಯ ಪೌರಾಣಿಕ, ಚಾರಿತ್ರಿಕ ಕತೆಗಳಿಗೆ ಸರಿಸಮಾನವಾದ ಕತೆ ಬೇರೆ ಇಲ್ಲ ಎನ್ನುವುದು 1917ರಲ್ಲೇ ರುಜುವಾತಾಗಿದೆ. ಸ್ಪೈಡರ್ ಮ್ಯಾನ್‌ಗಳು, ಐರನ್ ಮ್ಯಾನ್‌ಗಳು, ಹ್ಯಾರಿ ಪಾಟರ್‌ಗಳು, ಜೇಮ್ಸ ಬಾಂಡ್‌ಗಳು ಮಾತ್ರ ಹೀರೋ ಎಂದರೆ ಹೇಗೆ? ಸಿನಿಮಾ ಆರಂಭವಾಗಿ 100 ವರ್ಷಗಳ ನಂತರವೂ ನಾವು ಈಗ ಆಂಗ್ಲ ಚಿತ್ರಗಳಿಗೆ ಸರಿಸಾಟಿಯಾಗಿ ಹನುಮಾನ್, ರಾಮ, ಕೃಷ್ಣ, ಚೋಟಾ ಭೀಮ್ ಮೊದಲಾದವರನ್ನೆಲ್ಲಾ ನಾಯಕರನ್ನಾಗಿಸಿ ಚಿತ್ರ ತಯಾರಿಸಿ ಯಶಸ್ವಿ ಆಗುತ್ತಿದ್ದೇವೆ ಎನ್ನುವುದನ್ನು ಗಮನಿಸಿ. ಕಿರುತೆರೆ ಭಾರತದಲ್ಲಿ ಆರಂಭವಾದಾಗಲೂ ರಾಮಾಯಣ ಮಹಾಭಾರತಗಳೇ ಆರಂಭದಿನಗಳ ಆಕರ್ಷಣೆಯಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಿ.

1921ರವರೆಗೆ ಪೌರಾಣಿಕ ಚಿತ್ರಗಳ ಮೆರವಣಿಗೆ. 1921ರಲ್ಲಿ ಕೋಲ್ಕತ್ತಾದಲ್ಲಿ ಧೀರೇನ್ ಗಂಗೂಲಿ ಅವರು `ಬಿಲಾಯಿತ್ ಫಿರತ್' ಚಿತ್ರ ನಿರ್ಮಿಸಿದರು. ಭಾರತೀಯ ಚಿತ್ರರಂಗದ ಮೊದಲ ಸಾಮಾಜಿಕ ಲವ್ ಸ್ಟೋರಿ ಇದು. ಭಾರತದಲ್ಲಿ ಇಂದಿಗೂ ಸಾಮಾಜಿಕ ಚಿತ್ರ ಹಾಗೂ ಲವ್ ಸ್ಟೋರಿ ಇರುವ ಚಿತ್ರಗಳು ನವನವೀನವಾಗಿಯೇ ಕಂಗೊಳಿಸುತ್ತಿದ್ದರೆ, ಅದು ಕೋಲ್ಕೊತ್ತಾದಲ್ಲಿ ತಯಾರಾದ ಈ ಚಿತ್ರದ ಪರಂಪರೆಯ ಭಾಗವೇ ಎನ್ನಬಹುದು.

ಮೂಕಿ ಚಿತ್ರಗಳಾದರೂ ಪ್ರಭಾವ ಪರಿಣಾಮಕಾರಿಯಾಗಿರುತ್ತಿತ್ತು. ಕೋಹಿನೂರ್ ಸ್ಟುಡಿಯೋದಲ್ಲಿ ತಯಾರಾದ `ಭಕ್ತವಿದುರ' ಚಿತ್ರದಲ್ಲಿ ಸೇಥ್ ದ್ವಾರಕಾದಾಸ್ ನಾರಾಯಣದಾಸ್ ಸಂಪತ್ ವಿದುರನ ಪಾತ್ರದಲ್ಲಿದ್ದರು. ನೋಡಲು ಗಾಂಧೀಜಿ ಅವರಂತೆಯೇ ಇದ್ದ, ಗಾಂಧೀಜಿಯವರಿಂದ ಸ್ಫೂರ್ತಿ ಪಡೆದಿದ್ದ ಸಂಪತ್, ಮಹಾತ್ಮನನ್ನೇ ಹೋಲುತ್ತಿದ್ದರು. ರಾಜಕೀಯ ಕಾರಣಗಳಿಂದ ಸೆನ್ಸಾರ್ ಈ ಚಿತ್ರವನ್ನು ನಿಷೇಧಿಸಿತು.

ಚಿತ್ರವನ್ನು ನಿಷೇಧಿಸಿದ್ದೇ ಪ್ರೇಕ್ಷಕರಲ್ಲಿ ದೇಶಭಕ್ತಿ ಹೆಚ್ಚಲು ಕಾರಣವಾಯಿತು, ಚಲನಚಿತ್ರ ಸ್ವಾತಂತ್ರ್ಯಪೂರ್ವದಲ್ಲಿ ಜನರ ಭಾವನೆಗಳನ್ನು ಉದ್ದೀಪಿಸಿತಲ್ಲದೆ, ನಾವೆಲ್ಲಾ ಒಂದು ಎನ್ನುವ ಏಕಾಭಿಪ್ರಾಯದಲ್ಲಿ ಕಟ್ಟಿಹಾಕಿತು. ಸಂಪತ್ ಅವರು ನಿಷೇಧವನ್ನು ತೆರವುಗೊಳಿಸುವಲ್ಲಿ ಯಶಸ್ವಿಯೂ ಆದರು. ಸಿನಿಮಾ ಪ್ರದರ್ಶನವಾದಲ್ಲೆಲ್ಲಾ ಭರ್ಜರಿ ಯಶಸ್ಸು ಗಳಿಸಿತು. ಆರಂಭದ ದಶಕದ ಚಿತ್ರಗಳಿಗೆ ವಾಣಿಜ್ಯಾತ್ಮಕ ಸ್ಪರ್ಶ ನೀಡಿದವರಲ್ಲಿ ದ್ವಾರಕಾದಾಸ್ ನಾರಾಯಣದಾಸ್ ಸಂಪತ್ (1885-1958) ಪ್ರಮುಖರು. 1920ರಿಂದ 1929ರೊಳಗೆ ಅವರ ಕೋಹಿನೂರ್ ಫಿಲಂ ಕಂಪೆನಿ 98 ಕಥಾಚಿತ್ರಗಳನ್ನು ತಯಾರಿಸಿತು.

ಕೋಹಿನೂರ್ ಹಲವಾರು ನಟ ನಟಿಯರಿಗೆ ಬೆಳಕು ನೀಡಿದ ಕಂಪೆನಿ. ಸ್ಟಾರ್‌ಗಳಾದ ಸುಲೋಚನ, ಜುಬೇದ, ಫಾತಿಮಾ, ನಿರ್ದೇಶಕರುಗಳಾದ ಹೋಮಿ ಮಾಸ್ಟರ್, ಚಂದೂಲಾಲ್ ಷಾ, ನಂದಲಾಲ್ ಜಸವಂತೀಲಾಲ್, ವಿ.ಎಂ. ವ್ಯಾಸ್, ಮೋಹನ ಭವನಾನಿ ಮೊದಲಾದವರೆಲ್ಲಾ ಕೋಹಿನೂರ್ ಮೂಲಕವೇ ಬೆಳಕಿಗೆ ಬಂದರು. ದಾದರ್ ಮೈನ್ ರಸ್ತೆಯ ನಹಿಗಾಂವ್ ಕ್ರಾಸ್ ರಸ್ತೆಯಲ್ಲಿದ್ದ ಸ್ಟುಡಿಯೋ ಚಟುವಟಿಕೆಯ ಕೇಂದ್ರವಾಗಿತ್ತು.

ಮುಂಬೈಯನ್ನೇ ಭಾರತೀಯ ಚಿತ್ರ ತಯಾರಿಕೆಯ ಕೇಂದ್ರವನ್ನಾಗಿ ಮಾಡಲು ಶ್ರಮಿಸಿದ ದ್ವಾರಕಾದಾಸ್ ಅವರನ್ನು ಮುಂಬೈ ಚಿತ್ರರಂಗದ ಪಿತಾಮಹ ಎಂದು ಕರೆಯುತ್ತಾರೆ. (ಕನ್ನಡ ಚಿತ್ರರಂಗ ಆರಂಭದ ದಿನಗಳಲ್ಲಿ ಮದ್ರಾಸಿನಲ್ಲಿತ್ತು. ಮೈಸೂರಿನಲ್ಲಿ ಕನ್ನಡ ಚಿತ್ರರಂಗವನ್ನು ನೆಲೆಯೂರುವಂತೆ ಮಾಡಬೇಕೆಂದು ಶಂಕರ್‌ಸಿಂಗ್ ಭಾರೀ ಪ್ರಯತ್ನವನ್ನೇ ಮಾಡಿದರು. ಅದು ಏಕವ್ಯಕ್ತಿ ಯತ್ನವಾಗಿಯೇ ಉಳಿಯಿತು).

`ಸೈರೇಂದ್ರಿ' ಎಂಬ ಚಿತ್ರವನ್ನು ಬಾಬುರಾವ್ ಪೆಯಿಂಟರ್ ನಿರ್ಮಿಸಿದಾಗ, ಸಂಪತ್ ಅವರಿಗಾದ ಗತಿಯೇ ಈ ಚಿತ್ರಕ್ಕೂ ಆಯಿತು. ಕೆ.ಪಿ. ಖಾಡಿಲ್ಕರ್ ಅವರ `ಕೀಚಕ ವಧ' ಮರಾಠಿ ನಾಟಕವನ್ನಾಧರಿಸಿದ ಈ ಚಿತ್ರದಲ್ಲಿ ಸೈರೇಂದ್ರಿಯ ಮಾನಭಂಗಕ್ಕೆ ಯತ್ನಿಸಿದ ಕೀಚಕನನ್ನು ಭೀಮ ಕೊಲ್ಲುವ ಕತೆ ಇದೆ. ಖಾಡಿಲ್ಕರ್ ಅವರ ನಾಟಕ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾದ ರಚನೆ ಆಗಿದ್ದುದರಿಂದ ಕೀಚಕ ಅಂದಿನ ವೈಸ್‌ರಾಯ್ ಲಾರ್ಡ್ ಕರ್ಜನ್ ಅವರನ್ನು ಹೋಲುತ್ತಿದ್ದ. ಅಲ್ಲದೆ ಕರ್ಜನ್ನನ ವೈಖರಿಯ ಟೀಕೆ ಅಲ್ಲಿತ್ತು.

ಕೀಚಕನಲ್ಲಿ ವೈಸರಾಯ್‌ನನ್ನು ಕಂಡ ಬ್ರಿಟಿಷ್ ಸರ್ಕಾರ ಚಿತ್ರವನ್ನು ನಿಷೇಧಿಸಿತು. ನಿಷೇಧದ ಭೀತಿಯಿಂದಲೇ ನಾಟಕವನ್ನು ಸಿನಿಮಾ ರೂಪಕ್ಕಿಳಿಸುವಾಗ ಚಿತ್ರದ ಹೆಸರನ್ನು `ಸೈರೇಂದ್ರಿ' ಎಂದು ಬದಲಿಸಲಾಗಿತ್ತು. ಈ ಚಲನಚಿತ್ರವನ್ನೂ ಬ್ರಿಟಿಷರು ನಿಷೇಧಿಸಿದಾಗ, ಚಿತ್ರವನ್ನು ಪೂನಾದಲ್ಲಿ ಬಿಡುಗಡೆ ಮಾಡಲಾಯಿತು. ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಈ ಚಿತ್ರವನ್ನು ವೀಕ್ಷಿಸಿ, ಬಾಬುರಾವ್ ಪೆಯಿಂಟರ್ ಅವರನ್ನು ಸನ್ಮಾನಿಸಿದರಂತೆ.

ಬಾಬುರಾವ್ ಪೆಯಿಂಟರ್ ನಿರ್ದೇಶಿಸಿದ 20 ಚಿತ್ರಗಳಲ್ಲಿ ಟ್ರಿಕ್ ಶಾಟ್‌ಗಳ ದೃಷ್ಟಿಯಿಂದ `ವತ್ಸಲ ಹರಣ' ಮುಖ್ಯವಾದುದು. `ಸಾವ್ಕಾರಿ ಪಾಶ' (1925) ಸಮಕಾಲೀನ ವಸ್ತುವನ್ನು ಒಳಗೊಂಡಿತ್ತು. ಗ್ರಾಮೀಣ ಭಾಗದಲ್ಲಿ ಬಡರೈತರಿಗೆ ಸಾಲ ನೀಡಿ, ಅವರ ಜೀವನವನ್ನೇ ಬರ್ಬರ ಮಾಡುವ ಸಾಹುಕಾರರ ರಕ್ತ ಪಿಪಾಸುತನವನ್ನು ಬಾಬುರಾವ್ ಪೆಯಿಂಟರ್ ಹೇಳಿದ್ದರು. ಈ ಚಿತ್ರವನ್ನು ನಂತರದ ದಿನದಲ್ಲಿ ವಾಕ್ಚಿತ್ರವಾಗಿಯೂ ಬಾಬುರಾವ್ ನಿರ್ಮಿಸಿದ್ದರು.

ಜುಂಜುರಾವ್ ಪವಾರ್ ರೈತನಾಗಿ, ರೈತನ ಮಗನಾಗಿ ವಿ. ಶಾಂತಾರಾಂ ಅಭಿನಯಿಸಿದ್ದರು. ದುರ್ಗಾಕೋಟೆ, ಬಾಲಗಂಧರ್ವ, ಹಂಸವಾಡೇಕರ್ ಮೊದಲಾದವರೆಲ್ಲಾ ಬಾಬುರಾವ್ ಮೂಲಕವೇ ತೆರೆಗೆ ಬಂದರು. ಇದೇ ಕಾಲದಲ್ಲಿ ವಾಮನ ಶ್ರೀಧರ ಆಪ್ಟೆ, ಬೋಗಿಲಾಲ್ ಕೆ.ಎಂ. ದವೆ, ಮಣೆಕ್‌ಲಾಲ್ ಬಿ. ಪಟೇಲ್, ಅರ್ದೇಶಿರ್ ಎಂ. ಇರಾನಿ, ಚಂದೂಲಾಲ್ ಜೆ ಶಾ, ಹರಿಭಾಯ್ ಆರ್. ದೇಸಾಯಿ, ಎನ್.ಡಿ. ಸರ್‌ಪೋತದಾರ್, ಪಾಂಡುರಂಗ ಎಸ್. ತಲಗೇರಿ, ಎಸ್.ಎನ್. ಪಾಟಣಕರ್, ಧೀರೇನ್‌ಗಂಗೂಲಿ, ನಿರಂಜನಪಾಲ್, ದೇಬಕಿಬೋಸ್, ಹೀರಾಲಾಲ್ ಸೇನ್, ಜೇಮ್‌ಷೆಡ್‌ಜೀ ಫ್ರೇಂಜಿಮದನ್, ಆನಂದಿಬೋಸ್ ಹೀರಾಲಾಲ್‌ಸೇನ್, ರುಸ್ತುಂಜೀ ದೋತಿವಾಲ ಅವರುಗಳ ಕೊಡುಗೆಯನ್ನೂ ಮರೆಯುವಂತಿಲ್ಲ.

ಕೋಹಿನೂರ್ ಸ್ಟುಡಿಯೋವನ್ನು ಮೂಕಿ ಚಿತ್ರಯುಗದ ಅತಿದೊಡ್ಡ, ಪ್ರತಿಷ್ಠಿತ ಸ್ಟುಡಿಯೋ ಎಂದೇ ಕರೆಯಲಾಗುತ್ತದೆ. ಹಾಲಿವುಡ್ ಶೈಲಿಯಲ್ಲಿ ಭಾರತೀಯ ಚಿತ್ರ ತಯಾರಿಕೆಯ ಕೇಂದ್ರವನ್ನಾಗಿ ಮಾಡುವ ಉದ್ದೇಶ ಕೋಹಿನೂರ್‌ಗಿತ್ತು. ಅದುವರೆಗೆ ಫಾಲ್ಕೆ ಅವರು, ತಮ್ಮದೇ ಷೆಡ್‌ನಲ್ಲಿ ಸ್ಥಾಪಿಸಿದ್ದ ಸ್ಟುಡಿಯೋವೇ ಅತಿದೊಡ್ಡ ಚಿತ್ರ ತಯಾರಿಕಾ ತಾಣವೆನಿಸಿತ್ತು. ಕೋಹಿನೂರ್ ಕಂಪೆನಿಯ ಮೂಲಕ ತಾರೆಯಾಗುವುದೆಂದರೆ ಅಂದಿನ ದಿನದಲ್ಲಿ ಪ್ರತಿಷ್ಠೆಯ ವಿಷಯ.

ಕಾಂಜೀಭಾಯ್ ರಾಥೋಡ್, ಹೋಮಿ ಮಾಸ್ಟರ್, (ಮೂಕಿ ಯುಗದ ಸೂಪರ್‌ಸ್ಟಾರ್) ಮೋಹನ್ ಭವನಾನಿ, ಚಂದೂಲಾಲ್ ಷಾ, ಎನ್.ಜಿ. ದಿವಾರೆ ಮತ್ತು ಆರ್.ಎಸ್. ಚೌಧುರಿ ಈ ಸಂಸ್ಥೆಯಲ್ಲಿದ್ದರು. ನಟಿಯರಾದ ಸುಲೋಚನ, ಜುಬೇದಾ, ಗೋಹರ್‌ಬಾನು ಇಲ್ಲೇ ಗುರುತಿಸಿಕೊಂಡಿದ್ದರು. ನಟರಾದ ಗಣಪತರಾವ್ ಬಾಕ್ರೆ, ಖಲೀಲ್, ರಾಜಾಸ್ಯಾಂಡೋ ಇಲ್ಲಿದ್ದರು. ಕೋಹಿನೂರ್ ಮುಂಬೈನಲ್ಲಿದ್ದರೆ, ಬೆಂಗಳೂರಿನಲ್ಲಿ ಸೂರ್ಯ ಫಿಲಂ ಕಂಪೆನಿ 38 ಮೂಕಿ ಚಿತ್ರಗಳನ್ನು ತಯಾರಿಸಿತ್ತು. ಕೋಲ್ಕತ್ತಾದಲ್ಲಿ ಮದನ್ ಥಿಯೇಟರ್ಸ್, ನಾಸಿಕದಲ್ಲಿ ಹಿಂದೂಸ್ತಾನ್ ಫಿಲಂ ಕಂಪೆನಿ ಸಕ್ರಿಯವಾಗಿತ್ತು.

`ಸಾವ್ಕಾರಿ ಪಾಶ' (1925) ಚಿತ್ರದಲ್ಲಿ ಫ್ಲ್ಯಾಷ್‌ಬ್ಯಾಕ್ ತಂತ್ರವನ್ನು ಬಳಸಿದ್ದ ಬಾಬುರಾವ್ ಪೆಯಿಂಟರ್, ಅದನ್ನು ಮೊದಲಬಾರಿಗೆ ತಂತ್ರವಾಗಿ ರೂಪಿಸಿದರು. ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡ ರೈತ, ಸಾಯುವ ಮುನ್ನ ಸಾಲ ನೀಡುವ ಜಮೀನ್ದಾರರ ಬೋನಿನೊಳಗೆ ಸಿಕ್ಕಿಹಾಕಿಕೊಳ್ಳಬೇಡ ಎಂದು ಹೇಳಿ ಕೊನೆಯುಸಿರೆಳೆಯುವ ದೃಶ್ಯ ಹೃದಯಂಗಮವಾಗಿತ್ತು. ವಾಸ್ತವಿಕ ನೆಲೆಯಲ್ಲಿ ಚಿತ್ರೀಕರಣಗೊಂಡ `ಸಾವ್ಕಾರಿ ಪಾಶ' ಆರಂಭ ಕಾಲದ ಕಲಾತ್ಮಕ ಚಿತ್ರವಾಗಿ ಪರಿಗಣಿಸಲ್ಪಟ್ಟಿದೆ.

ಸಾಲದ ಪಾಶದಲ್ಲಿ ಸಿಲುಕಬೇಡ ಎಂದು ಸಿನಿಮಾದಲ್ಲಿ ಹೇಳಿದ ಚಿತ್ರರಂಗದ ಆರಂಭಿಕ ದಿನಗಳ ಸಾಹಸಿ ಬಾಬುರಾವ್ ಪೆಯಿಂಟರ್, ಮೃತರಾಗುವಾಗ ಸಾಲದಲ್ಲಿ ಸಿಲುಕಿಕೊಂಡಿದ್ದರು. ಸತ್ತನಂತರ ಅವರ ಮನೆ ಹರಾಜಿಗೆ ಬಂದಿತ್ತು. ಭಾರತೀಯ ಚಿತ್ರರಂಗದ ಪಿತಾಮಹ ಫಾಲ್ಕೆಯವರ ಸ್ಥಿತಿಯೂ ಇದೇ ರೀತಿ ಇತ್ತು ಎನ್ನುವುದೇ ತೆರೆಯ ಮರೆಯ ದುರಂತ ಕತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT