ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೇ ಸಿನಿಮಾ ಏಕೆ ಬೇಡ?

Last Updated 10 ಜನವರಿ 2013, 19:59 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ನೀಡುವ ಸಹಾಯ ಧನವನ್ನು ನೇರವಾಗಿ ಫಲಾನುಭವಿಗಳ ಕೈಗೇ ಕೊಡುವ `ನೇರ ನಗದು ಪಾವತಿ' ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಸಾರ್ವಜನಿಕರ ದುಡ್ಡು ಮಧ್ಯವರ್ತಿಗಳ ಪಾಲಾಗಬಾರದು ಎಂಬುದೇ ಈ ಯೋಜನೆಯ ಉದ್ದೇಶ, ಕೆಲವು ಕಂಪೆನಿಗಳು ತಮ್ಮ ಉತ್ಪಾದಕ ವಸ್ತುಗಳಾದ ಸೋಪು, ಪೌಡರ್, ಸೌಂದರ್ಯವರ್ಧಕ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ನೇರವಾಗಿ ಗ್ರಾಹಕನಿಗೇ ತಲುಪಿಸುವ ಜಾಲವೊಂದನ್ನು ಸೃಷ್ಟಿಸಿಕೊಂಡಿವೆ. ದಲ್ಲಾಳಿಗಳ ಕೈ ಸೇರುವ ಇಲ್ಲವೇ ಅಂಗಡಿಯವನ ಕೈಗೆ ಸಿಕ್ಕು ಅನವಶ್ಯಕ ಬೆಲೆ ಏರಿಸಿಕೊಳ್ಳುವ ಕಮಿಷನ್ ಹಣ, ಗ್ರಾಹಕನಿಗೇ ಸೇರಲಿ ಎಂಬುದೇ ಈ ವ್ಯಾಪಾರದ ಸೂತ್ರ. ಇಂತಹವುಗಳನ್ನ್ಲ್ಲೆಲಾ ನೇರವಾಗಿ ಗ್ರಾಹಕನಿಗೇ ತಲುಪಿಸುವ ವ್ಯವಸ್ಥೆ ಇರುವಾಗ ಚಲನಚಿತ್ರಗಳನ್ನು ನೇರವಾಗಿ ಪ್ರೇಕ್ಷಕನ ಮನೆಗೇ ತಲುಪಿಸುವ ವ್ಯವಸ್ಥೆ ಏಕಿರಬಾರದು?

ಇಂತಹ ಆಲೋಚನೆ ಬಂದಿರುವುದು ನಟ ಕಮಲಹಾಸನ್‌ಗೆ. 95 ಕೋಟಿ ರೂಪಾಯಿ ವೆಚ್ಚದಲ್ಲಿ ಅವರೇ ನಿರ್ದೇಶಿಸಿ, ನಟಿಸಿ ತಯಾರಿಸಿರುವ `ವಿಶ್ವರೂಪಂ' ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ 12 ಗಂಟೆ ಮುನ್ನವೇ ಪ್ರೇಕ್ಷಕನ ಮನೆಗೇ ತಲುಪಿಸುವ ಯೋಜನೆಯೊಂದನ್ನು ಅವರು ಜಾರಿಗೊಳಿಸಲು ಮುಂದಾಗಿದ್ದಾರೆ. ಇಂತಹ ಪ್ರಯೋಗ ದೇಶದಲ್ಲೇ ಇದೇ ಮೊದಲು. ಇಂತಹ ಕ್ರಾಂತಿಕಾರಿ ಆಲೋಚನೆ ಹಾಗೂ ದಿಟ್ಟ ನಿರ್ಧಾರದ ಮೂಲಕ ಕಮಲಹಾಸನ್, ಸಾಂಪ್ರದಾಯಕ ಶೈಲಿಗೇ ಜೋತುಬಿದ್ದಿರುವ  ವಿತರಕರ ಹಾಗೂ ಪ್ರದರ್ಶಕರ ವಲಯದ `ಗರ್ವಭಂಗ'ಕ್ಕೆ ಮುಂದಾಗಿದ್ದಾರೆ.

ಈ ಬೆಳವಣಿಗೆಯಿಂದ ಪ್ರದರ್ಶಕ ಮತ್ತು ವಿತರಕರು ತಲ್ಲಣಗೊಂಡಿದ್ದು, ಬುಡಕ್ಕೇ ಕೊಡಲಿ ಪೆಟ್ಟು ಬೀಳುವ ಸಂಭವವನ್ನು ತಪ್ಪಿಸಲು ಚಳವಳಿಗೆ ಮುಂದಾದರು. ವಿದ್ಯುತ್ ಸ್ಥಗಿತಗೊಳಿಸಿ ಚಿತ್ರವನ್ನು ಯಾರೂ ನೋಡದಂತೆ ಮಾಡುವ ಬೆದರಿಕೆ ಹಾಕಿದರು.ತಮ್ಮ ಹೊಸ ಯೋಜನೆಯನ್ನು ಜಾರಿಗೆ ತರುವುದಾಗಿ ಪಣತೊಟ್ಟಿರುವ ಕಮಲಹಾಸನ್ ಸರ್ಕಾರದ ಮೊರೆ ಹೋದರು. ಕೊನೆಗೂ ಪ್ರದರ್ಶಕರ ಲಾಬಿ ಇಂತಹ ಒಂದು ಕ್ರಾಂತಿಕಾರಿ ಯೋಜನೆಗೆ `ತಡೆ' ತರಲು ಯಶಸ್ವಿ ಆಗಿದ್ದಾರೆ. ವಿಶ್ವರೂಪಂ ಡಿಟಿಎಚ್ ಮೂಲಕ ಪ್ರಸಾರವಾಗುವುದನ್ನು ಮುಂದೂಡಲಾಗಿದೆ. ಮೊದಲು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿ, ಮುಂದೆ ಡಿಟಿಎಚ್ ವಿಚಾರ ನೋಡೋಣ ಎಂದು ತಮಿಳುನಾಡು ಚಿತ್ರಮಂದಿರ ಮಾಲೀಕರ ಸಂಘ, ನಿರ್ಮಾಪಕರ ಸಂಘ ಕಮಲಹಾಸನ್ ಅವರ ಹೊಸ ಆಲೋಚನೆಗೆ ತಣ್ಣಿರು ಎರಚಿದೆ.

ಇಂತಹ ಒಂದು ಪ್ರಯೋಗಕ್ಕೆ ಬೆಂಬಲವಾಗಿ ನಿಂತಿರುವ ಏರ್ ಟೆಲ್ `ವಿಶ್ವರೂಪಂ'ನ ತಮಿಳು, ತೆಲುಗು ಹಾಗೂ ಹಿಂದಿ ಭಾಷಾ ಆವೃತ್ತಿಗಳನ್ನು ಡಿಟಿಎಚ್ ಸೇವೆಗಾಗಿ 40 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿಸಿದೆ, ಏರ್‌ಟೆಲ್‌ಗೆ ಈಗ 7.5 ದಶಲಕ್ಷ ಚಂದಾದಾರರಿದ್ದಾರೆ. `ವಿಶ್ವರೂಪಂ' ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದಕ್ಕೆ ಮುನ್ನವೇ ಚಿತ್ರದ ಮುನ್‌ಪ್ರದರ್ಶನ ನೋಡಬಯಸುವ ಚಂದಾದಾರರು ತಲಾ ಒಂದು ಸಾವಿರ ರೂಪಾಯಿ ನೀಡಿದರೆ, ಅವರು ಮನೆಯಲ್ಲೇ ಕುಳಿತು ಸಕುಟುಂಬ ಪರಿವಾರ ಸಮೇತ `ವಿಶ್ವರೂಪ' ದರ್ಶನ ಮಾಡಬಹುದು. ಚಿತ್ರಮಂದಿರದಲ್ಲಿ ಇಂದು ಈ ಚಿತ್ರ ತೆರೆ ಕಾಣುತ್ತಿದೆ. ಡಿಟಿಎಚ್‌ನಲ್ಲಿ ಪ್ರೇಕ್ಷಕರಿಗೆ (ಗುರುವಾರ)ವೇ ಚಿತ್ರ ವೀಕ್ಷಿಸುವ ಏರ್ಪಾಡಾಗಿತ್ತು.

ಗುರುವಾರ ರಾತ್ರಿ 9 ರಿಂದ 11 ಗಂಟೆಯವರೆಗೆ `ವಿಶ್ವರೂಪಂ' ಪ್ರಸಾರಕ್ಕೆ ಏರ್‌ಟೆಲ್ ಅಣಿ ಮಾಡಿತ್ತು. ಗುರುವಾರ ರಾತ್ರಿ ಈ ಬೆಳವಣಿಗೆ ನಡೆದಿದ್ದರೆ, ಅದು ಚಿತ್ರರಂಗದ ಸಿದ್ಧಪದ್ಧತಿಯನ್ನು ಅಲ್ಲೋಲಕಲ್ಲೋಲ ಮಾಡುವ ಬೆಳವಣಿಗೆಯಾಗುತ್ತಿತ್ತು. ಸಾಮಾನ್ಯವಾಗಿ ಏಕದಿನ ಕ್ರಿಕೆಟ್, ಟ್ವೆಂಟಿ-20 ಕ್ರಿಕೆಟ್ ನಡೆಯುವಾಗ ಬಾರ್‌ಗಳಲ್ಲಿ, ದೊಡ್ಡ ದೊಡ್ಡ ಹೋಟೆಲುಗಳಲ್ಲಿ ವಿಶಾಲ ಪರದೆಯನ್ನು ಅಳವಡಿಸಿ ಗುಂಡಿನ ಟೇಬಲ್ ಬಳಿ ಕುಳಿತೇ ನೋಡಿ ಆನಂದಿಸುವ ವ್ಯವಸ್ಥೆ ಮಾಡುತ್ತಾರೆ. `ವಿಶ್ವರೂಪಂ' ಚಿತ್ರದ ಆರಂಭಿಕ ಡಿಟಿಎಚ್ ಪ್ರಸಾರ ಯೋಜನೆಯನ್ನು ತಮಿಳುನಾಡಿನ ಬಹುತೇಕ ಹೋಟೆಲ್‌ಗಳು ಕ್ರಿಕೆಟ್ ಪಂದ್ಯದ ರೀತಿಯಲ್ಲೇ ಸದುಪಯೋಗ ಮಾಡಿಕೊಂಡು ಬುಕ್ಕಿಂಗ್ ಆರಂಭಿಸಿದ್ದವು. ಹೋಟೆಲುಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಪ್ರವೇಶ ಶುಲ್ಕ, ಜೊತೆಗೆ ಊಟ, ಪಾನೀಯ ಸರಬರಾಜು ಹೀಗೆ ವ್ಯವಹಾರ ಜೋರಾಗಿಯೇ ನಡೆದಿತ್ತು. ಚಿತ್ರಮಂದಿರದಲ್ಲಿ ಬಿಡುಗಡೆ ಮುನ್ನವೇ ಒಂದು ಚಿತ್ರ ನೇರವಾಗಿ ಮನೆಯೊಳಗೇ ಇರುವ ಟಿವಿಯಲ್ಲಿ ಬರಲಾರಂಭಿಸಿದರೆ ಚಿತ್ರರಂಗದ ಇಡೀ ಚಿತ್ರಣವೇ ಬದಲಾಗಬಹುದೇ? ಅಂತಹ ಒಂದು ಪ್ರಯೋಗದ ಬಾಗಿಲನ್ನು ಕಮಲಹಾಸನ್ ತೆರೆದು ಬಿಟ್ಟಿದ್ದಾರೆ.

ಕಮಲಹಾಸನ್ ಅವರ ಹೊಸ ಚಿಂತನೆಯ ವಿರುದ್ಧ ಪ್ರದರ್ಶಕರು ಹಾಗೂ ವಿತರಕರು ಏಕೆ ಒಂದೇ ಸಮನೆ ಬೊಬ್ಬೆ ಹೊಡೆಯುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಎಲ್ಲ ನಿರ್ಮಾಪಕರೂ ಇನ್ನು ಮುಂದೆ ತಾವು ತಯಾರಿಸುವ ಹೊಸ ಚಿತ್ರಗಳನ್ನು ಡಿಟಿಎಚ್ ಮೂಲಕ ಪ್ರೇಕ್ಷಕರ ಮನೆಗೇ ನೇರವಾಗಿ ತಲುಪಿಸಿಬಿಟ್ಟರೆ, ಜನ ಚಿತ್ರ ಮಂದಿರಕ್ಕೆ ಬರುವುದಿಲ್ಲ ಎಂದು ಪ್ರದರ್ಶಕರು ಆತಂಕಗೊಂಡಿದ್ದಾರಂತೆ. ಈ ವಾದವನ್ನು ಕೇಳಿ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ. ಜನ ಇರಲಿ, ಚಿತ್ರ ನಿರ್ಮಾಪಕರು ಕೂಡ ಚಿತ್ರಮಂದಿರದತ್ತ ಬರುವಂತಹ ಸನ್ನಿವೇಶ ಈಗ ಇದೆಯೇ? ಒಂದು ಚಿತ್ರ ನಿರ್ಮಾಣ ಕಾರ್ಯವೆಂದರೆ ಅದರಲ್ಲಿ ನಿರ್ಮಾಪಕನ ಜೊತೆ ವಿತರಕರು, ಪ್ರದರ್ಶಕರು ಕೂಡ ಕೈ ಜೋಡಿಸುತ್ತಿದ್ದ ಕಾಲವೊಂದಿತ್ತು.

ಪ್ರಸ್ತುತ ಪರಿಸ್ಥಿತಿಯಲ್ಲಿ ಸಿನಿಮಾ ರಂಗಕ್ಕೂ ವಿತರಕರಿಗೂ, ಚಿತ್ರಮಂದಿರದ ಮಾಲೀಕರಿಗೂ ಸಂಬಂಧವೇ ಇಲ್ಲ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಚಿತ್ರ ನಿರ್ಮಾಣದಲ್ಲಿ ಚಿತ್ರ ಮಂದಿರದ ಮಾಲೀಕರ ಒಳಗೊಳ್ಳುವಿಕೆಯೇ ಇರುವುದಿಲ್ಲ. ಬಾಡಿಗೆಯ ಮೇಲಷ್ಟೇ ಅವರ ಕಣ್ಣು. ಇಂತಹ ಪರಿಸ್ಥಿತಿಯಲ್ಲಿ ನಿರ್ಮಾಪಕನೊಬ್ಬ ತನ್ನ ತಯಾರಿಕೆಯನ್ನು ನೇರವಾಗಿ ಪ್ರೇಕ್ಷಕರ ಮನೆಗೇ ತಲುಪಿಸಿ ವ್ಯವಹರಿಸಿದರೆ, ಚಿತ್ರಮಂದಿರದವರೇಕೆ ಹೊಯ್‌ಕೈ ಮಾಡಬೇಕು? ಹಾಗೆ ನೋಡಿದರೆ ಚಿತ್ರ ಮಂದಿರದವರು ಲಾಭ ಬಂದಾಗ ಮಾತ್ರ ಹೀರೋಗಳಾಗುತ್ತಿದ್ದಾರೆ. ನಿರ್ಮಾಪಕನಿಗೆ ನಷ್ಟವಾದರೆ ಅವರನ್ನು ಮತ್ತಷ್ಟು ಹಿಂಡಿ ಹಿಪ್ಪೆ ಮಾಡುತ್ತಾರೆ. ಕನ್ನಡ ನಿರ್ಮಾಪಕರಂತೂ ತಮ್ಮ ಚಿತ್ರಪ್ರದರ್ಶನಕ್ಕಾಗಿ, ಚಿತ್ರಮಂದಿರಗಳ ಮಾಲೀಕರುಗಳನ್ನು ಬೇಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಅಲ್ಲದೆ ಚಿತ್ರಮಂದಿರಗಳ ಬಾಡಿಗೆ ದರ ದುಬಾರಿ. ಅದರಲ್ಲೂ ಅರ್ಧ `ಬಿಳಿ', ಅರ್ಧ `ಕಪ್ಪು'. ಇವೆಲ್ಲವನ್ನು ನಿರ್ಮಾಪಕ ಸರಿದೂಗಿಸಿಕೊಂಡೇ ಹೋಗಬೇಕು. ಸಿನಿಮಾ ಬೆಳೆದ ಹಾಗೆ ವಿತರಣಾ ವ್ಯವಸ್ಥೆ ಹಾಗೂ ಪ್ರದರ್ಶನ ವ್ಯವಸ್ಥೆ ಕುಸಿದು ಹೋಗಿರುವುದರಿಂದ ನಿರ್ಮಾಪಕರು ತಮ್ಮ ಚಲನ ಚಿತ್ರವನ್ನು ಹೊಸ ತಂತ್ರಜ್ಞಾನದ ಮೂಲಕ ಜನರಿಗೆ ತಲುಪಿಸಿದರೆ ಅದು ಸ್ವಾಗತಾರ್ಹ ವಿಷಯವೇ. ಇದರಿಂದ ನಿರ್ಮಾಪಕನ ಸಂಕಷ್ಟ ಅರ್ಧಕ್ಕರ್ಧ ಪರಿಹಾರವಾದಂತಾಗುತ್ತದೆ. ಅಲ್ಲದೆ ಕಾಲ ಬದಲಾದಂತೆ, ತಂತ್ರಜ್ಞಾನದ ಬೆಳವಣಿಗೆಯಾದಂತೆ ನಾವೂ ಅದಕ್ಕೆ ಹೊಂದಿಕೊಳ್ಳಬೇಕೇ ಹೊರತು, ಅದನ್ನು ವಿರೋಧಿಸುವುದು ಮೂರ್ಖತನವಾಗುತ್ತದೆ. ಟಿವಿ ಚಾನಲ್‌ಗಳು ಆರಂಭವಾದಾಗಲೂ ಇದೇ ರೀತಿಯ ಆತಂಕ ಚಿತ್ರವಲಯದಿಂದಲೇ ಕೇಳಿ ಬಂದಿತ್ತು. ಟಿವಿಗಳಲ್ಲಿ ಚಲನಚಿತ್ರ ಪ್ರಸಾರಕ್ಕೆ ನಿಷೇಧ ಹೇರಬೇಕು ಜನ ಚಿತ್ರಮಂದಿರಕ್ಕೆ ಬರುವುದಿಲ್ಲ ಎನ್ನುವ ವಾದವನ್ನು ಚಿತ್ರರಂಗದವರೇ ಮಂಡಿಸಿದ್ದರು. ಈಗ ಸತತ 24 ಗಂಟೆ ಚಲನಚಿತ್ರವನ್ನೇ ಪ್ರಸಾರ ಮಾಡುವ ಚಾನಲ್‌ಗಳಿವೆ.

ಚಿತ್ರರಂಗವೇನೂ ಮುಳುಗಿ ಹೋಗಿಲ್ಲ. ಡಿವಿಡಿಗಳು ಬಂದಿವೆ. ನೂರಾರು ಸಿನಿಮಾಗಳನ್ನು ಡಿವಿಡಿ ಮೂಲಕ ಮನೆಯಲ್ಲೇ ನೋಡುವ ವ್ಯವಸ್ಥೆಗೂ ಜನ ಹೊಂದಿಕೊಂಡಿದ್ದಾರೆ. ಮುಂದೆ ಮೊಬೈಲ್‌ನಲ್ಲಿ ನೇರವಾಗಿ ಸಿನಿಮಾ ನೋಡಬಹುದು. ಜನ ಬದಲಾಗುತ್ತಿದ್ದಾರೆ. ಚಿತ್ರಮಂದಿರದವರು ಬದಲಾಗುತ್ತಿಲ್ಲ. `ವಿಶ್ವರೂಪಂ' ಡಿಟಿಎಚ್‌ನಲ್ಲಿ ಪ್ರಸಾರವಾದರೆ, ಚಿತ್ರಮಂದಿರಗಳತ್ತ ಜನ ಬರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸುವವರು, ಚಿತ್ರಮಂದಿರಗಳು ಒಂದಾದ ಮೇಲೆ ಒಂದರಂತೆ ಬಂದ್ ಆಗುತ್ತಿರುವುದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಈಗಾಗಲೇ ನೂರಾರು ಚಿತ್ರಮಂದಿರಗಳು ಬಂದ್ ಆಗಿ ಮಾಲ್‌ಗಳಾಗಿ ಪರಿವರ್ತನೆಯಾಗಿವೆ. ಟಿವಿ ಬಿಟ್ಟು ಮನೆಯಿಂದ ಹೊರಬರಲು ಬಹಳಷ್ಟು ಜನರಿಗೆ ಕಷ್ಟವಾಗುತ್ತಿದೆ.

ಹೀಗಾಗಿ ಜನ ಕುಳಿತಿರುವಲ್ಲೇ ಸಿನಿಮಾ ತೆಗೆದುಕೊಂಡು ಹೋಗುವ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಪರ್ಯಾಯ. ಜನಪ್ರಿಯ ನಟರ ಸಿನಿಮಾಗಳು ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ಮೊದಲನೆಯ ದಿನ ಟಿಕೆಟ್ ದರವನ್ನು ಯದ್ವಾತದ್ವಾ ಏರಿಸುವ ಅವಕಾಶವಿದೆ. ಇದೂ ಒಂದು ರೀತಿಯಲ್ಲಿ ಪ್ರೇಕ್ಷಕನ ಸುಲಿಗೆ. ಮಾಲ್‌ಗಳಲ್ಲಿರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ದಿನಕ್ಕೊಂದು ರೀತಿಯ ಟಿಕೆಟ್ ದರ ಇಟ್ಟಿಕೊಂಡು ಪ್ರೇಕ್ಷಕನ ಜೇಬಿಗೆ ಕತ್ತರಿ ಹಾಕುತ್ತಿವೆ. ಇಂತಹ ಸಮಯದಲ್ಲಿ ಸಾವಿರ ರೂಪಾಯಿ ಕೊಟ್ಟು ತಮ್ಮ ಮೆಚ್ಚಿನ ನಟ, ನಟಿಯ, ನಿರ್ದೇಶಕನ ಚಲನಚಿತ್ರವನ್ನು ಮನೆಯಲ್ಲೇ ಕುಳಿತು ಸಕುಟುಂಬ ಪರಿವಾರ ಸಮೇತ ನೋಡುವುದೇ ಪ್ರೇಕ್ಷಕನಿಗೆ ಹೆಚ್ಚು ಲಾಭವಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT