ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋ ನಿಗ್ರಹ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಾನವೀಯ ಮೌಲ್ಯಗಳಿಗೆ ಸಾಕಾರರೂಪವಾಗಿದ್ದವರು ಮಹಾತ್ಮ ಗಾಂಧಿ. ಧರ್ಮದಲ್ಲಿ ರಾಜಕೀಯವನ್ನು ಬೆರೆಸದೇ ರಾಜಕೀಯವನ್ನೇ ಧಾರ್ಮಿಕ ಕ್ರಿಯೆಯನ್ನಾಗಿ ಪರಿವರ್ತಿಸಲು ಸದಾ ಪ್ರಯತ್ನಿಸಿದವರು ಗಾಂಧೀಜಿ.
 
ಅವರ ಆತ್ಮಬಲ ಅಮೋಘವಾದದ್ದು. ಯಾರನ್ನು ದ್ವೇಷಿಸದೇ, ತಮ್ಮ ವೈರಿಗಳ ಮನಸ್ಸನ್ನೂ ಶುದ್ಧಗೊಳಿಸಲು ತಮ್ಮನ್ನು ತಾವೇ ದಂಡಿಸಿಕೊಳ್ಳುವ ಅವರ ಉಪವಾಸ ಸತ್ಯಾಗ್ರಹದ ವಿಧಾನ ಅನನ್ಯವಾದದ್ದು, ಅತ್ಯಂತ ವಿಶಿಷ್ಠವಾದದ್ದು.

ಒಂದು ಬಾರಿ ಗಾಂಧೀಜಿ ಅತ್ಯಂತ ದೀರ್ಘವಾದ ಇಪ್ಪತ್ತೊಂದು ದಿನಗಳ ಉಪವಾಸ ಪ್ರಾರಂಭಿಸಿದರು. ದೇಶದಲ್ಲಿ ಹಬ್ಬಿದ ಕೋಮುವಾದದ ದಳ್ಳುರಿ, ಹಿಂಸಾಚಾರ, ಅಸ್ಪಶ್ಯತೆ ಇವುಗಳ ವಿರುದ್ಧ ತಮ್ಮ ಆತ್ಮಶುದ್ಧಿಗಾಗಿ ಈ ಉಪವಾಸ. ಆಗ ಅವರೇನು ಚಿಕ್ಕ ವಯಸ್ಸಿನವರಾಗಿರಲಿಲ್ಲ.
 
ಗಾಂಧೀಜಿ ಉಪವಾಸ ಕೈಗೊಂಡರೆ ಇಡೀ ದೇಶದಲ್ಲಿ ಎಲ್ಲರ ಮನಸ್ಸು ಆ ಕಡೆಗೇ ಏಕಾಗ್ರವಾಗುತ್ತಿತ್ತು. ಎಲ್ಲರಿಗೂ ತಳಮಳ, ಆತಂಕ. ದಿನಕ್ಕೆ ಸಾವಿರಾರು ಪತ್ರಗಳು, ತಂತಿಗಳು ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಲು, ತಮ್ಮ ಸಹಕಾರವನ್ನು ತೋರಲು ಹರಿದು ಬರುತ್ತಿದ್ದವು.

ಹತ್ತು ದಿನಗಳ ಉಪವಾಸ ಮುಗಿದಿತ್ತು. ಗಾಂಧೀಜಿಯವರ ಆರೋಗ್ಯ ಒಮ್ಮೆಲೇ ಹದಗೆಟ್ಟಿತು. ದೇಹ ತುಂಬ ದುರ್ಬಲವಾಯಿತು. ನೀರು ಕುಡಿಯುವುದು, ಮಗ್ಗುಲಾಗುವುದೂ ಕಷ್ಟವಾಯಿತು.  ಹಿರಿಯ ನಾಯಕರಾದ ನೆಹರೂ, ಪಟೇಲ, ಕೃಪಲಾನಿಯವರೆಲ್ಲ ಆತಂಕದಿಂದ ಮಹಾತ್ಮರ ಬಳಿಗೆ ಹೋಗಿ ಉಪವಾಸವನ್ನು ನಿಲ್ಲಿಸುವಂತೆ ಕೇಳಿಕೊಂಡರು. ಗಾಂಧೀಜಿ ವಿನಯದಿಂದಲೇ ಅವರ ಮನವಿಯನ್ನು ನಿರಾಕರಿಸಿದರು.

ಮರುದಿನದಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು, ಕಣ್ಣು ತೆರೆಯುವುದೇ ಅಸಾಧ್ಯವೆನ್ನಿಸಿತು. ಅವರನ್ನು ನೋಡಿಕೊಳ್ಳುತ್ತಿದ್ದ ಡಾ. ಸುಶೀಲಾ ನಯ್ಯರ್ ಕೂಡ ಗಾಂಧೀಜಿ ತಕ್ಷಣ ಉಪವಾಸ ನಿಲ್ಲಿಸದಿದ್ದರೆ ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದುಬಿಟ್ಟರು.

ಈ ಸುದ್ದಿ ತಿಳಿದೊಡನೆ ಸಹಸ್ರಾರು ಜನ ಇವರ ವಸತಿಯ ಸುತ್ತಮುತ್ತ ನೆರೆದು ಉಪವಾಸವನ್ನು ನಿಲ್ಲಿಸಲು ಒತ್ತಾಯ ಹೇರತೊಡಗಿದರು. ಆಗ ಗಾಂಧೀಜಿ,  `ನಿಮಗೆ ಯಾವ ಚಿಂತೆಯೂ ಬೇಡ. ದಯವಿಟ್ಟು ಡಾ.ಅನ್ಸಾರಿಯವರನ್ನು ಕರೆಸಿ. ಅವರು ನನ್ನನ್ನು ಪರೀಕ್ಷಿಸಿ ನಾನು ಉಪವಾಸವನ್ನು ನಿಲ್ಲಿಸುವುದೇ ಸರಿ ಎಂದರೆ ಹಾಗೆಯೇ ಮಾಡುತ್ತೇನೆ~ ಎಂದರು.

ಡಾ.ಅನ್ಸಾರಿಯವರು ಖ್ಯಾತ ವೈದ್ಯರು, ಮೇಲಾಗಿ ಅತ್ಯಂತ ಪ್ರಾಮಾಣಿಕರು. ಅವರು ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಸತ್ಯವನ್ನೇ ಹೇಳುವವರು. ಅವರು ಗಾಂಧೀಜಿಯವರ ದೇಹಸ್ಥಿತಿಯನ್ನು ಪರೀಕ್ಷಿಸಿದರು. ನಂತರ, `ಬಾಪೂ ದೇಹ ವಯಸ್ಸಿಗೆ ಅನುಗುಣವಾಗಿ ಅಶಕ್ತವಾಗಿದೆ. ಆದರೆ ಪ್ರಾಣಕ್ಕೆ ಧಕ್ಕೆಯಾಗುವಂತಹ ಯಾವ ಪ್ರಸಂಗವೂ ಇಲ್ಲ~ ಎಂದರು. ಉಪವಾಸ ಮತ್ತೆ ಮುಂದುವರೆಯಿತು.

ಮೂರು ದಿನಗಳ ನಂತರ ಗಾಂಧೀಜಿ ಕುಸಿಯತೊಡಗಿದರು. ಮೂತ್ರಕೋಶಗಳು ಕಾರ್ಯ ನಿಲ್ಲಿಸಿದವು, ಹೃದಯಬಡಿತ ನಿಧಾನವಾಗತೊಡಗಿತು, ಕಣ್ಣುಗಳ ಸತ್ವ ಕುಂಠಿತವಾಗ ಹತ್ತಿತ್ತು.

ಡಾ. ಅನ್ಸಾರಿಯವರು ತಕ್ಷಣ ಉಪವಾಸವನ್ನು ನಿಲ್ಲಿಸುವಂತೆ ಗಾಂಧೀಜಿಗೆ ಸಲಹೆ ಮಾಡಿದರು. ಆಗ ಗಾಂಧೀಜಿ, `ಡಾಕ್ಟರ್, ನನಗೆ ಒಂದು ದಿನದ ಸಮಯ ಕೊಡಿ.  ನಾಳೆ ಮತ್ತೆ ಪರೀಕ್ಷೆ ಮಾಡಿ. ಆಗಲೂ ಗಂಡಾಂತರವಿದೆಯೆಂದು ನೀವು ಹೇಳಿದರೆ ಉಪವಾಸ ನಿಲ್ಲಿಸುತ್ತೇನೆ~ ಎಂದರು. ನಂತರ ಅವರು ತಮ್ಮ ಮನಸ್ಸನ್ನು ಏಕಾಗ್ರಗೊಳಿಸಿ, ಧ್ಯಾನದಲ್ಲಿ ತೊಡಗಿದರು, ಶಕ್ತಿಯನ್ನು ಕೇಂದ್ರೀಕರಿಸಿದರು. 

ಮರುದಿನ ಡಾ.ಅನ್ಸಾರಿ ಪರೀಕ್ಷೆ ಮಾಡಿದರೆ ಏನು ಅದ್ಭುತ! ನಿನ್ನೆ ಕಂಡ ಅನಾರೋಗ್ಯದ ಯಾವ ಲಕ್ಷಣಗಳೂ ಇರಲಿಲ್ಲ. ಗಾಂಧೀಜಿ ತಮ್ಮ ಗುರಿ ತಲುಪುವವರೆಗೂ ಉಪವಾಸ ಮುಂದುವರೆಸಿದರು.

ಇದು ಮನಸ್ಸಿನ ನಿಗ್ರಹದ ಫಲ. ಮನಸ್ಸು, ದೇಹಗಳಲ್ಲಿ ಪರಸ್ಪರ ಹೊಂದಾಣಿಕೆ ಇದೆ. ಅಲ್ಲದೇ ದೇಹದ ಕ್ರಿಯೆಗಳಲ್ಲಿ ಮನಸ್ಸಿನ ಪ್ರಭಾವ ತುಂಬ ಹೆಚ್ಚು. ಎಷ್ಟೋ ದೈಹಿಕ ಅಸ್ಪಸ್ಥತೆಗಳಿಗೆ ಮನಸ್ಸೇ ಕಾರಣ. ಅದನ್ನು ನಿಗ್ರಹಿಸಲು, ಹದಗೊಳಿಸಲು ಮಾಡಿದ ಸರ್ವಪ್ರಯತ್ನಗಳೂ ನಮಗೆ ಪ್ರಯೋಜನಕಾರಿಯಾಗುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT