ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿ ಎಂಬ ಮೊಗ್ಗು ಅರಳಿತು ಹೀಗೆ...

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಕೆಲ ವಾರಗಳ ಹಿಂದೆ, ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಸೇರಿದ ಖಾಸಗಿ ಶಾಲೆಗಳ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡುವ ಆಹ್ವಾನ ನನಗೆ ಬಂದಿತ್ತು. ಅವರಲ್ಲಿ ಹಲವರು ಬೋಧನೆ ಮತ್ತು ಆಡಳಿತ ನಿರ್ವಹಣೆಯಲ್ಲಿ 25 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದರು. ಕೆಲವರಿಗೆ ತಮ್ಮ ಹುದ್ದೆಯ ಬಗ್ಗೆ ಗಾಢವಾದ ಆಸಕ್ತಿ ಇತ್ತು. ಕ್ರಮೇಣ ನಮ್ಮ ಮಾತುಕತೆ ಶಿಕ್ಷಣ ಹಕ್ಕು ಕಾಯ್ದೆಯತ್ತ ಹೊರಳಿತು. ಒಂದಷ್ಟು ಜನ ಕಾಯ್ದೆಯನ್ನು ಶ್ಲಾಘಿಸಿದರೆ, ಇನ್ನೊಂದಷ್ಟು ಮಂದಿ ಈ ಕಾಯ್ದೆಯಿಂದ ತಮ್ಮ ಮೇಲೆ ಮತ್ತಷ್ಟು ನಿಯಂತ್ರಣ ಸಾಧಿಸಲು ಸರ್ಕಾರಿ ಅಧಿಕಾರಿಗಳಿಗೆ ಅವಕಾಶ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಮತ್ತೆ ಕೆಲವರು ಇದೊಂದು ಅನಗತ್ಯವಾದ ಕಿರಿಕಿರಿಯಾಗಿದ್ದು, ಇದರಿಂದ ತಮ್ಮ ಮೇಲೆ ಹೆಚ್ಚುವರಿ ಆಡಳಿತಾತ್ಮಕ ಹೊಣೆ ಬಿದ್ದಿದೆ ಎಂದು ಪೇಚಾಡಿಕೊಂಡರು. ಆರ್‌ಟಿಇ ಮೀಸಲಾತಿಯಡಿ ಪ್ರವೇಶ ಪಡೆದ ಮಕ್ಕಳು ಇತರ ಮಕ್ಕಳನ್ನು ಸರಿಸಮನಾಗಿ ಎದುರಿಸಲಾರರು ಎಂಬ ಆಕ್ಷೇಪ ಸಹ ಕೆಲವರ ದನಿಯಲ್ಲಿತ್ತು. ಒಬ್ಬರಂತೂ, ಬಡವರಿಗೆ ಶಿಕ್ಷಣದ ಮಹತ್ವ ಮತ್ತು ಮೌಲ್ಯ ಎರಡೂ ತಿಳಿಯುವುದಿಲ್ಲ ಎಂದು ದೂರಿದರು. ಭವಿಷ್ಯದ ರೂವಾರಿಗಳನ್ನು ರೂಪಿಸುವ ಹೊಣೆಯನ್ನು ಸಮಾಜದಿಂದ ಪಡೆದುಕೊಂಡಿರುವ ಜನರಿಂದ ಇಂತಹ ಮಾತುಗಳನ್ನು ಕೇಳುವುದು ನಿಜಕ್ಕೂ ದುಃಖದ ಸಂಗತಿಯಾಗಿತ್ತು.

ಅವರಲ್ಲಿ ಹಲವರಿಗೆ ನಿಜವಾದ ಬಡತನದ ಬಗ್ಗೆಯಾಗಲೀ ಅಥವಾ ಬಡವರ ಬಗ್ಗೆಯಾಗಲೀ ತಿಳಿದೇ ಇರಲಿಲ್ಲ. ಅದಕ್ಕಿಂತ ಸಂಪೂರ್ಣ ಭಿನ್ನವಾದ ಪ್ರಪಂಚಕ್ಕೆ ಸೇರಿದ್ದ ಅವರು, ಬಡತನ ಮತ್ತು ಅದರ ಸಮಸ್ಯೆಗಳನ್ನು ಕೇವಲ ಪಠ್ಯಪುಸ್ತಕದ ಪುಟಗಳಿಂದಷ್ಟೇ ಅರಿತವರಂತೆ ಇದ್ದರು.

ಇವರಿಗೆಲ್ಲ ಏನು ಉತ್ತರ ಕೊಡಬೇಕೆಂದು ಯೋಚಿಸುತ್ತಿದ್ದಾಗ, ಸುಮಾರು 20 ವರ್ಷಗಳಿಗೂ ಹಿಂದೆ ನನಗಾದ ಅನುಭವವೊಂದು ನನ್ನ ಸ್ಮೃತಿಪಟಲದಲ್ಲಿ ಹಾದುಹೋಯಿತು. ಏಳೆಂಟು ವರ್ಷವಷ್ಟೇ ಆಗಿದ್ದ, ಸಂಕೋಚದ ಮುದ್ದೆಯಂತಿದ್ದ ಆ ಮೌನಗೌರಿಯನ್ನು 1990ರಲ್ಲಿ ಮೊದಲ ಬಾರಿ ನಾನು ಕಂಡಿದ್ದೆ. ಆಗಷ್ಟೇ ಎರಡು ಕೋಣೆಗಳ ಸಣ್ಣ ಶಾಲೆಯನ್ನು ನಾವು ಕಟ್ಟಿದ್ದೆವು. ಆ ಸಂದರ್ಭದಲ್ಲಿ, ತನ್ನ ಆದಿವಾಸಿ ಕಾಲೊನಿಯ ಸುತ್ತಮುತ್ತ ಅಡ್ಡಾಡಿಕೊಂಡು ಅವಳು ಕಾಲ ಕಳೆಯುತ್ತಿದ್ದಳು. ನಮ್ಮ ಹೊಸ ಶಾಲೆಗೆ ಈ ಪುಟ್ಟ ಹುಡುಗಿ ಮರಿಯ ಮನವೊಲಿಸಿ ಕರೆತರುವುದು ಸುಲಭದ ಕೆಲಸವೇನೂ ಆಗಿರಲಿಲ್ಲ. ನೀರಿನಿಂದ ಹೊರತೆಗೆದ ಮೀನಿನಂತೆ ಅವಳು ಶಾಲೆಗೆ ಬರಲಾರಂಭಿಸಿದಳು.

ನಂತರದ ದಿನಗಳಲ್ಲಿ ನನ್ನ ಕಚೇರಿಯೊಳಗೆ ಕುಳಿತು, ತನ್ನ ಬಗ್ಗೆ, ತನ್ನ ಮನೆಯವರು ಮತ್ತು ಒಡಹುಟ್ಟಿದವರ ಬಗ್ಗೆ, ಅದ್ಯಾವುದೂ ಅಲ್ಲದಿದ್ದರೆ ನನಗೆ ಯಾವುದರಲ್ಲಿ ಆಸಕ್ತಿ ಇರಬಹುದು ಎಂದು ಆಕೆಗೆ ಅನಿಸುವುದೋ ಅಂತಹ ವಿಷಯದ ಬಗ್ಗೆ ತೋಚಿದಂತೆ ಮಾತನಾಡುತ್ತಿದ್ದ ಅವಳನ್ನು ಈಗಲೂ ಹಲವು ಬಾರಿ ನಾನು ನೆನಪಿಸಿಕೊಳ್ಳುತ್ತೇನೆ. ತನ್ನ ನಗು ಮತ್ತು ಸಿಹಿ ಮಾತುಗಳಿಂದ ಯಾರನ್ನೇ ಆದರೂ ಸೆಳೆದುಬಿಡಬಲ್ಲ ಮುದ್ದು ಮಗು ಅವಳಾಗಿದ್ದಳು.

ಶೀಘ್ರದಲ್ಲೇ ಆದಿವಾಸಿ ಶಾಲೆ ಅಭಿವೃದ್ಧಿಯಾಗುತ್ತಾ ಬಂದು, ನಿತ್ಯ 100ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಬರಲಾರಂಭಿಸಿದ್ದರು. ಈ ಮುನ್ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಸುತ್ತಿದ್ದ ಮಮತಾ ಎಂಬ ಯುವತಿ ನಮ್ಮಲ್ಲಿಗೆ ಬಂದು ಸೇರಿ, ಶಾಲೆಯ ಮೇಲ್ವಿಚಾರಣೆಯ ಹೊಣೆ ಹೊತ್ತುಕೊಂಡರು. ಮಮತಾ ಅವರನ್ನೂ ಮೋಡಿ ಮಾಡಿದ ಮರಿ, ಕೆಲ ದಿನಗಳಲ್ಲೇ ಅವರ ಅಚ್ಚುಮೆಚ್ಚಿನ ಹುಡುಗಿಯಾದಳು. 1994 ಅಥವಾ 1995ರಲ್ಲಿ ಮರಿ 5 ಅಥವಾ 6ನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ಕಾಣುತ್ತದೆ. ಮೂರ್ನಾಲ್ಕು ದಿನಗಳಿಂದ ಅವಳು ಶಾಲೆಗೆ ಗೈರುಹಾಜರಾಗಿದ್ದಳು. ಇದರಿಂದ ಆತಂಕಕ್ಕೆ ಒಳಗಾದ ಮಮತಾ, ಈ ವಿಷಯವನ್ನು ನನ್ನ ಗಮನಕ್ಕೆ ತಂದರು. ಮರುದಿನವೇ ಅವಳ ಮನೆಗೆ ಹೋಗಿ ಅದಕ್ಕೆ ಕಾರಣ ಪತ್ತೆ ಹಚ್ಚಲು ನಾವು ನಿರ್ಧರಿಸಿದೆವು.

ಅದರಂತೆ ಮಾರನೇ ದಿನ ಅವಳ ಮನೆ ತಲುಪಿದಾಗ, ಹೊರಭಾಗದಲ್ಲಿ ಎಲ್ಲೂ ಮರಿಯ ಸುಳಿವಿರಲಿಲ್ಲ. ಬಳಿಕ ಸಿಕ್ಕ ಅವಳ ತಾಯಿ, ಮಮತಾ ಅವರ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದಳು. ಮರಿ ಋತುಮತಿಯಾಗಿದ್ದು ಆಕೆಯನ್ನು ಇನ್ನು ಮುಂದೆ ಶಾಲೆಗೆ ಕಳುಹಿಸದಿರಲು ಪೋಷಕರು ನಿರ್ಧರಿಸಿರುವುದಾಗಿ ನಂತರ ಮಮತಾ ನನಗೆ ತಿಳಿಸಿದರು. ಇದನ್ನು ಕೇಳಿ ನನಗೆ ನಿರಾಶೆ ಮತ್ತು ಕೋಪ ಎರಡೂ ಬಂತು. ಇನ್ನೂ ಅರಳದ ಆ ಮೊಗ್ಗನ್ನು ಅವರು ಹೇಗೆ ತಾನೇ ಹೊಸಕಿಹಾಕಲು ಸಾಧ್ಯ? ಆದಿವಾಸಿಗಳ ಬೆಳವಣಿಗೆಗೆ ಅಡ್ಡಗಾಲಾಗುತ್ತಿವೆ ಎಂದು ನಾನು ಭಾವಿಸಿದ್ದ ಅವರ ರೂಢಿಗತ ನಡವಳಿಕೆಗಳ ವಿಚಾರದಲ್ಲಿ ನಾನಾಗ ಒಂದಷ್ಟು ತಾಳ್ಮೆಯಿಂದ ವರ್ತಿಸಲೇಬೇಕಾಗಿದ್ದ ಕಾಲ ಅದಾಗಿತ್ತು.

ಸಮಾಜಕ್ಕೆ ಇನ್ನೂ ತೆರೆದುಕೊಳ್ಳದಿದ್ದ ಜೇನು ಕುರುಬ ಸಮುದಾಯ 50 ಸಾವಿರಕ್ಕೂ ಹೆಚ್ಚು ವರ್ಷಗಳ ಮಾನವ ಶಾಸ್ತ್ರದ ಇತಿಹಾಸವನ್ನೇ ಹೊಂದಿದೆ. ಬಹುತೇಕ ಬೇಟೆಯನ್ನೇ ಆಶ್ರಯಿಸಿದ್ದ ಈ ಸಮುದಾಯದವರ ಬದುಕು, ಅರಣ್ಯಗಳಿಂದ ಜೇನು ಸಂಗ್ರಹಿಸುವ ಕಾರ್ಯದಲ್ಲಿ ಕೇಂದ್ರೀಕೃತವಾಗಿತ್ತು. ಅವರ ಕಥೆಗಳು ಮತ್ತು ಜನಪದ ಸಂಸ್ಕೃತಿಯು ಜೇನು ಮತ್ತು ಜೇನುಹುಳಗಳ ಸುತ್ತಲೇ ಹೆಣೆದುಕೊಂಡಿತ್ತು.

ಸಮುದಾಯದ ಸಂಪ್ರದಾಯದ ಪ್ರಕಾರ, ಋತುಮತಿಯಾದ ಬಾಲಕಿಯನ್ನು ಸಣ್ಣ ತಡಿಕೆಯೊಳಗೆ ಇರಿಸಲಾಗುತ್ತಿತ್ತು. ಅದಕ್ಕೆ ಬಾಗಿಲಿನಂತಹ ಪುಟ್ಟದೊಂದು ದ್ವಾರ ಮತ್ತು ಕಿಟಕಿ ಇತ್ತು. ಎಲ್ಲಿಯವರೆಗೆ ಆಕೆ ಅಲ್ಲೇ ಇರಬೇಕು ಎಂದು ಆಕೆಯ ಪೋಷಕರು ಮತ್ತು ಸಮುದಾಯದ ಮುಖ್ಯಸ್ಥರು ನಿರ್ಧರಿಸುವರೋ ಅಲ್ಲಿಯವರೆಗೂ ಆಕೆಯ ವಾಸ ಅಲ್ಲೇ. ಪ್ರವೇಶ ದ್ವಾರದ ಮೂಲಕ ಅವಳಿಗೆ ಆಹಾರ ನೀಡಲಾಗುತ್ತಿತ್ತು. ಶೌಚಕಾರ್ಯ ಅಥವಾ ಇನ್ನೇನಾದರೂ ಅಗತ್ಯ ಕೆಲಸ ಇದ್ದಾಗಷ್ಟೇ ಆಕೆ ಹೊರಗೆ ಬರಬೇಕಾಗಿತ್ತು.

ಅದರಲ್ಲೂ, ತನ್ನನ್ನು ಯಾವ ಪುರುಷನೂ ನೋಡುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಕತ್ತಲೆಯಾದ ಬಳಿಕವಷ್ಟೇ ತಡಿಕೆಯಿಂದ ಹೊರಗೆ ಕಾಲಿಡಬೇಕಾಗಿತ್ತು. ಹೀಗೆ ಆಕೆಯ ತಡಿಕೆಯ ವಾಸದ ಅವಧಿ ಕೆಲವೇ ದಿನಗಳಿಂದ ಹಿಡಿದು ಕೆಲ ತಿಂಗಳುಗಳವರೆಗೂ ನಿಗದಿ ಆಗಬಹುದಾಗಿತ್ತು. ಹುಡುಗಿ ಸಿದ್ಧಳಾಗಿದ್ದಾಳೆ ಎಂದು ಪೋಷಕರಿಗೆ ಅನ್ನಿಸಿದ ಕೂಡಲೇ ಪುರುಷನೊಬ್ಬನಿಗೆ ಅವಳನ್ನು ತೋರಿಸುತ್ತಿದ್ದರು. ಅಲ್ಲಿಂದೀಚೆಗೆ ಅವನ ಪತ್ನಿಯಾಗಿ ಅವಳು ಬಾಳಬೇಕಾಗಿತ್ತು. ಅದೃಷ್ಟವಶಾತ್ ಇಂತಹ ನಡವಳಿಕೆ ಈಗ ಕ್ಷೀಣಿಸುತ್ತಿದ್ದು ಅತ್ಯಂತ ವಿರಳವಾಗಿ ಆಚರಣೆಯಲ್ಲಿದೆ.

ಮರಿಗೆ ಒದಗಿದ ಗತಿ ಕಂಡು ಕೋಪಗೊಂಡಿದ್ದ ಮಮತಾ, ಮುಖಂಡರೊಡನೆ ಮಾತನಾಡಿ ಇಂತಹ ಸಂಪ್ರದಾಯವನ್ನು ಮುರಿದು, ಹೇಗಾದರೂ ಮಾಡಿ ನಾನು ಮರಿಯನ್ನು ಶಾಲೆಗೆ ವಾಪಸ್ ಕರೆತರಬೇಕೆಂದು ಬಯಸಿದ್ದರು. ಅದರಂತೆ ನಾನು ಮಾಡಬೇಕೆಂದುಕೊಂಡಿದ್ದ ಕಾರ್ಯ ಮತ್ತು ಜೇನುಕುರುಬರ ಮುಖ್ಯಸ್ಥ ಮಾಸ್ತಿಯ ಬಗ್ಗೆ ನನಗಿದ್ದ ಗೌರವ ಎರಡರ ನಡುವೆ ನಾನು ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ಮುಖಂಡರೊಂದಿಗೆ ನಡೆಸಿದ ಕೆಲ ಹೊತ್ತಿನ ಚರ್ಚೆಯ ಬಳಿಕ ಅವರ ಮುಂದೆ ಮಮತಾ ಒಂದು ಆಹ್ವಾನ ಇಟ್ಟರು.

ಮರಿಯ ಪೋಷಕರು, ಮಾಸ್ತಿ ಹಾಗೂ ಇತರ ಆದಿವಾಸಿಗಳು ಅಲ್ಲಿ ನೆರೆದಿದ್ದರು. ಈ ವಿಷಯದಲ್ಲಿ ತನ್ನ ನಿಲುವೇನು ಎಂದು ಮರಿಯನ್ನೇ ನಾವು ನೇರವಾಗಿ ಕೇಳುವುದು, ಅವಳ ಮನಸ್ಸಿನಲ್ಲಿ ಏನಿದೆಯೋ ಅದರಂತೆ ನಡೆದುಕೊಳ್ಳುವುದು ಎಂಬ ಮಮತಾ ಅವರ ಸಲಹೆಗೆ ಎಲ್ಲರೂ ತಲೆಬಾಗಿದರು. ಈ ಮಾತು ಮಾಸ್ತಿ ಮತ್ತು ನನಗೂ ಒಪ್ಪಿಗೆಯಾಯಿತು.

ಅದರಂತೆ ತಡಿಕೆಯ ಬಳಿ ಬಂದು ಕೇಳಿದಾಗ, ತಾನು ಶಾಲೆಗೆ ತೆರಳುವುದಾಗಿ ಮರಿ ಒಳಗಿನಿಂದ ಕೂಗಿ ಹೇಳಿದಳು. ಆಗ ನಮಗಾದ ಹರ್ಷ ಹೇಳತೀರದಾಗಿತ್ತು. ಅಷ್ಟೇ ಅಲ್ಲ, ತಡಿಕೆಯಿಂದ ತೂರಿಬಂದ ಮರಿ, ಮಮತಾ ಅವರ ಕೈಹಿಡಿದು `ಬನ್ನಿ ಮೇಡಂ ಶಾಲೆಗೆ ವಾಪಸ್ ಹೋಗೋಣ' ಎಂದಳು. ಇಡೀ ಸಮುದಾಯ ಮತ್ತು ಸಾಂಪ್ರದಾಯಿಕ ಒತ್ತಡಗಳ ವಿರುದ್ಧ ಎದ್ದು ನಿಲ್ಲಲು ಅದೆಷ್ಟು ಧೈರ್ಯ ಬೇಕು ಎಂಬುದು, ಈ ಅಚ್ಚರಿದಾಯಕ ಸಮುದಾಯವನ್ನು ಹತ್ತಿರದಿಂದ ಬಲ್ಲವರು ಹಾಗೂ ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತಿರಲು ಸಾಧ್ಯ.

ಅದರಲ್ಲೂ ಕೇವಲ 12 ವರ್ಷದ ಹುಡುಗಿಯೊಬ್ಬಳು ಅಂತಹ ಕೆಲಸ ಮಾಡುವುದೆಂದರೆ? ತುಂಬಿ ತುಳುಕುವ ತರಗತಿಗಳಲ್ಲಿ ತಾವು ಪ್ರತಿನಿತ್ಯ ನೀಡುವ ಶಿಕ್ಷಣ, ತಮ್ಮ ಮಕ್ಕಳಲ್ಲಿ ಇಂತಹದ್ದೊಂದು ಧೀರ ನಡತೆ ಮತ್ತು ವಿವೇಕವನ್ನು ಮೂಡಿಸುತ್ತಿದೆ ಎಂದು ನಗರ ಪ್ರದೇಶದ ಯಾವುದಾದರೂ ಶಾಲೆ ಇಂದು ಎದೆತಟ್ಟಿ ಹೇಳಬಲ್ಲದೇ?

ಹಲವು ವರ್ಷಗಳ ಬಳಿಕ ಹೊಸಹಳ್ಳಿ ಕಾಲೊನಿಯ ಅದೇ ಮರಿಯನ್ನು ನಾನು ಆದಿವಾಸಿ ಮಹಿಳೆಯರ ಸ್ವಸಹಾಯ ಗುಂಪಿನಲ್ಲಿ ಕಂಡೆ. ತಮ್ಮ ತಮ್ಮ ಕಾಲೊನಿಗಳಲ್ಲಿ ಮಹತ್ವದ ಕ್ರಾಂತಿಗೆ ಕಾರಣರಾಗಿರುವ ಯುವ, ಶಿಕ್ಷಿತ ಮತ್ತು ಸ್ಫುಟವಾದ ವಾಕ್‌ಚಾತುರ್ಯ ಇರುವ ಆದಿವಾಸಿ ಮಹಿಳೆಯರನ್ನು ಒಟ್ಟಿಗೆ ಭೇಟಿ ಮಾಡುವುದೇ ಒಂದು ಆನಂದ.

ಸಾಮಾಜಿಕ ಮತ್ತು ಸಾಂಸ್ಕೃತಿಕ ನಡವಳಿಕೆಗಳಿಗೆ ಭಂಗ ತಾರದೆ ಬದಲಾವಣೆಗೆ ಪ್ರಯತ್ನಿಸುತ್ತಿರುವ ಅವರೆಲ್ಲರೂ ಎಲೆಮರೆಯ ನಾಯಕಿಯರೇ ಸರಿ. ನನ್ನನ್ನು ಕಂಡು ಸಂತಸಗೊಂಡ ಯುವತಿ ಮರಿ, ಸ್ವಸಹಾಯ ಗುಂಪು ರಚಿಸುವ ಕ್ರಾಂತಿಕಾರಿ ಸಾಹಸಕ್ಕೆ ಜೇನುಕುರುಬ ಮಹಿಳೆಯರನ್ನು ಒಗ್ಗೂಡಿಸುವಲ್ಲಿ ತಾನು ಪಟ್ಟ ಕಷ್ಟಗಳನ್ನು ನಿರರ್ಗಳವಾಗಿ ನನಗೆ ಒಪ್ಪಿಸಿದಳು. ತನಗಾಗಿ, ತನ್ನ ಕುಟುಂಬಕ್ಕಾಗಿ ಮತ್ತು ಸಮುದಾಯಕ್ಕಾಗಿ ಹಾಕಿಕೊಂಡಿರುವ ಯೋಜನೆಗಳನ್ನು ಸಹ ಅದೇ ಬಗೆಯ ಆತ್ಮವಿಶ್ವಾಸ ಮತ್ತು ಆಶಾವಾದದ ಬದ್ಧತೆಯಿಂದಲೇ ವಿವರಿಸಿದಳು.

ಶಾಲೆಯಲ್ಲಿನ ಕೆಲವೇ ವರ್ಷಗಳ ಕಲಿಕೆಯಿಂದ ಮರಿ ಮತ್ತು ಅವಳಂತಹ ಮಕ್ಕಳ ಮೇಲೆ ಇಷ್ಟೊಂದು ಪರಿಣಾಮ ಆಗುತ್ತದೆ ಎಂದಾದರೆ, 15- 20 ವರ್ಷಗಳ ಶಿಕ್ಷಣ ಇನ್ನೆಂತಹ ಪ್ರಭಾವವನ್ನು ಅವರ ಮೇಲೆ ಬೀರಬಹುದು ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಆರ್‌ಟಿಇ ಅಡಿ ಮರಿಯಂತಹ ಸಾವಿರಾರು ಮಂದಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ಅಂತಹದ್ದೊಂದು ಆಶಾದಾಯಕ ಬದಲಾವಣೆ ಆರಂಭವಾಗಲು ಸಾಧ್ಯ.

ಶಿಕ್ಷಣವು ಬಡವರು ಮತ್ತು ಬಡತನದ ಅಂಚಿನಲ್ಲಿ ಇರುವವರಲ್ಲಿ ಚಲನಶೀಲತೆ ಉಂಟು ಮಾಡುವಲ್ಲಿ ಹಾಗೂ ಅವರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಏಣಿಯಂತೆ ಕಾರ್ಯ ನಿರ್ವಹಿಸುವಲ್ಲಿ ನಿಶ್ಚಿತವಾಗಿಯೂ ಮಹತ್ವದ ಪಾತ್ರ ವಹಿಸುತ್ತದೆ. ಸಮಾನತೆ ಸೃಷ್ಟಿ ಮತ್ತು ಬಡವರಿಗೆ ನ್ಯಾಯ ಒದಗಿಸುವಲ್ಲೂ ಆರ್‌ಟಿಇ ಒಂದು ಪ್ರಮುಖ ಸಾಧನ. ಪ್ರವೇಶಾತಿಯಲ್ಲಿ ಬಡವರಿಗೆ ಶೇ 25ರಷ್ಟು ಸೀಟು ಮೀಸಲಿಡುವುದಷ್ಟೇ ತಮ್ಮ ಕರ್ತವ್ಯ ಎಂದುಕೊಳ್ಳದೆ, ವಿಶಾಲ ದೃಷ್ಟಿಕೋನದಿಂದ ಈ ಕಾಯ್ದೆಯನ್ನು ನೋಡುವ ಶಿಕ್ಷಕರು- ಆಡಳಿತಗಾರರ ತಂಡ ಇಂದು ನಮಗೆ ಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT