ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ದ್ರೌಪದಿಯ ವ್ಯಕ್ತಿತ್ವವನ್ನು ತಿಳಿವಳಿಕೆಗೆ ತಂದುಕೊಳ್ಳುವುದೆಂದರೆ ಅದೊಂದು ಸವಾಲೇ ಸರಿ. ಸಣ್ಣಗೆ ಅಲುಗುತ್ತಿರುವ ನೀರಿನಲ್ಲಿ ಪ್ರತಿಬಿಂಬವನ್ನು ನೋಡುತ್ತ ಮೇಲಿರುವ ಬಿಂಬಕ್ಕೆ ಗುರಿಹಿಡಿದಂತೆ ಈ ಸವಾಲು.

ಸ್ವಯಂವರ ಸಭೆಯಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿದವರಿಗೆ – ಇದು ಪ್ರತಿಬಿಂಬದ ಮೂಲಕ ಬಿಂಬವನ್ನು ಗುರಿ ಹಿಡಿಯುವುದೇ – ದ್ರುಪದಕುಮಾರಿ ಕೃಷ್ಣೆ ಒಲಿಯುವಳೆನ್ನುವುದು ವಾಚ್ಯಾರ್ಥವನ್ನು ಮೀರಿದ ಗಹನತೆಯುಳ್ಳದ್ದಾಗಿ ಕೇಳಿಸುತ್ತದೆ.
 
ವ್ಯಾಸರು ತಮ್ಮ ಕಥನದಲ್ಲಿ ದ್ರೌಪದಿಯ ಕುರಿತು ಒದಗಿಸುವ ವಿವರಗಳು – ಪ್ರತಿಬಿಂಬಗಳಂತಿವೆ. ಅದರಲ್ಲೂ ಸಂಕೀರ್ಣ ಪ್ರತಿಬಿಂಬಗಳು, ಸರಳವಾಗಿಲ್ಲ.
ಅರ್ಜುನನಿಗೆ ಮಡದಿಯಾಗಬಲ್ಲ ಮಗಳನ್ನು ಪಡೆಯಬೇಕೆಂದು ಬಯಸಿದನಂತೆ ಪಾಂಚಾಲರ ದೊರೆ – ದ್ರುಪದ! ಅರ್ಜುನನೇ ದ್ರುಪದನನ್ನು ಕಾಳಗದಲ್ಲಿ ಸೋಲಿಸಿ ಹೆಡೆಮುರಿಗಟ್ಟಿ ತನ್ನ ಗುರು ದ್ರೋಣನ ಕಾಲ ಬಳಿ ಒಗೆದಿದ್ದ! ಈ ದ್ರುಪದ–ದ್ರೋಣರ ದ್ವೇಷ ಮಹಾಭಾರತಯುದ್ಧದ ಕಾರಣಬೀಜಗಳಲ್ಲಿ ಒಂದಾಗಿದೆ.
 
ಕುರುಗಳು ಮತ್ತು ಪಾಂಚಾಲರ ನಡುವಣ ಹಗೆ ಪುರಾತನದಿಂದ ಬಂದುದಾಗಿತ್ತು. ಪಾಂಚಾಲ ದ್ರುಪದ ತನ್ನನ್ನು ತಿರಸ್ಕರಿಸಿದ ಕಾರಣದಿಂದ ಅವನ ವಿರುದ್ಧ ಹಗೆ ಹೊತ್ತ ದ್ರೋಣ; ಕುರುಗಳ ಬಳಿ ಸೇರಿಕೊಂಡ.

ಭೀಷ್ಮನ ನೆರವಿನಿಂದ ಅಸ್ತ್ರವಿದ್ಯೆಯ ಗುರುಕುಲವನ್ನೇ ಕಟ್ಟಿದ. ಕ್ಷತ್ರಿಯರಿಂದಲೇ ಕ್ಷತ್ರಿಯರನ್ನು ಹಣಿಯಬೇಕೆಂದುಕೊಂಡು ಅರ್ಜುನನನ್ನು ಪ್ರಿಯಶಿಷ್ಯನನ್ನಾಗಿ ಸ್ವೀಕರಿಸಿ ಅದ್ಭುತವಾಗಿ ಬೆಳಸಿದ.
 
ಅರ್ಜುನನ ಮೂಲಕ ದ್ರುಪದನನ್ನು ಸೋಲಿನ ಆಳಕ್ಕೆ ತಳ್ಳಿದ. ತೀವ್ರವಾಗಿ ಅಪಮಾನಿತವಾದ ದ್ರುಪದನಿಗೆ ಪ್ರತೀಕಾರದ ಅರ್ಥ ಹೊಳೆಯಿತು! ಕ್ಷತ್ರವಿದ್ಯೆಯಿಂದಲೇ ಈ ಬ್ರಾಹ್ಮಣ ಕ್ಷತ್ರಿಯನಾದ ತನ್ನನ್ನು ಸೋಲಿಸಿದ.
 
ಬ್ರಾಹ್ಮಣರ ವಿದ್ಯೆಯಾದ ಯಜ್ಞಯಾಗಾದಿಗಳಿಂದಲೇ ಈ ಬ್ರಾಹ್ಮಣನನ್ನು ಕೆಡಹುವೆನೆಂದುಕೊಂಡು ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ಪಡೆಯುವ ಯಜ್ಞವನ್ನು ಸಂಕಲ್ಪಿಸಿದ. ಹಾಗೆಯೇ ಅರ್ಜುನನನ್ನು ದ್ರೋಣನಿಂದ ಬೇರ್ಪಡಿಸಿ ತನ್ನವನನ್ನಾಗಿಸುವ ಉಪಾಯಕ್ಕಾಗಿ ಮಗಳನ್ನೂ ಅದೇ ಯಜ್ಞದಿಂದ ಪಡೆಯಬೇಕು ಎಂದುಕೊಂಡ!
 
ಯಜ್ಞಸಂಸ್ಕೃತಿ ಯಾವ ಹಂತಕ್ಕೆ ಬಂದಿತ್ತು! ಬೇಕಾದುದೆಲ್ಲವನ್ನೂ ಪಡೆಯಬಲ್ಲ ಉಪಾಯವೊಂದಿದೆ ಎಂದು ತಿಳಿದರೆ(?), ಬದುಕಿನಲ್ಲಿ ನಿಜಕ್ಕೂ ಪಡೆಯಬೇಕಾದುದೇನು ಎಂಬುದನ್ನೇ ಮರೆಯುವ ಅಪಾಯ ಕೂಡ ಇದೆ.
 
ಇಂಥ ಯಜ್ಞಗಳೆಲ್ಲ ಒಂದು ವ್ಯುತ್ಕ್ರಮ ಎಂದು ಬಲ್ಲವರಿದ್ದರು. ಆದರೆ ಮರದಿಂದ ಬಿದ್ದ ಹಣ್ಣನ್ನು ಹಾಗೇ ಅಂದರೆ ಏನೂ ಶುಚಿಗೊಳಿಸದೆ ತಿಂದವನೊಬ್ಬನಿದ್ದ. ಅವನ ಹೆಸರು – ‘ಯಾಜಿ’. ಬಿದ್ದಹಣ್ಣನ್ನು ತಿನ್ನುವಲ್ಲಿ ತೋರಿದ ಇಷ್ಟು ಸಣ್ಣ ಆತುರ; ಇಷ್ಟು ಸಣ್ಣ ಆಸೆ; ಇಷ್ಟು ಸಣ್ಣ ಎಚ್ಚರಗೇಡಿತನ ಸಾಕು – ಈ ಆಸೆ ಎಷ್ಟು ದೊಡ್ಡದಾಗಿಯೂ ಬೆಳೆಯಬಹುದು! ಇಂಥ ಕೆಲವರು ಸೇರಿ ದ್ರುಪದನ ಯಜ್ಞವನ್ನು ಪೂರೈಸಿದರು.
 
ಹಾಗೆ ಹುಟ್ಟಿ ಬಂದವನು ಧೃಷ್ಟದ್ಯುಮ್ನ. ಅವನ ಒತ್ತಿನಲ್ಲಿ ದ್ರೌಪದೀ. ಕುರುವೃದ್ಧ ಭೀಷ್ಮನಿಗೆ ಮೃತ್ಯುವಾಗಬೇಕೆಂಬ ಆಸೆಹೊತ್ತ ಅಂಬೆಯೂ ದ್ರುಪದನ ಮನೆಯಲ್ಲೇ ಹುಟ್ಟಿದ್ದಳೆಂದು ನೆನೆದರೆ ಈ ಕುರು–ಪಾಂಚಾಲರ ಹಗೆತನ ಹೇಗೆ ಹೊತ್ತಿ ಉರಿಯುತ್ತಿತ್ತು ಎಂದು ತಿಳಿಯುತ್ತದೆ.
 
ಅಚ್ಚರಿ ಎಂದರೆ ಧೃಷ್ಟದ್ಯುಮ್ನ, ಕ್ಷತ್ರಿಯ ವಿದ್ಯೆಗಾಗಿ ದ್ರೋಣನನ್ನೇ ಆಶ್ರಯಿಸಿದ್ದ. ತನಗೆ ಮೃತ್ಯುವಾಗಬಲ್ಲನೆಂದು ತಿಳಿದಿದ್ದರೂ ದ್ರೋಣ, ಧೃಷ್ಟದ್ಯುಮ್ನನಿಗೆ – ದ್ರುಪದನ ಮಗನಿಗೆ – ವಿದ್ಯೆಯನ್ನು ನಿರಾಕರಿಸಲಿಲ್ಲ.  ಇದು ಧರ್ಮಸೂಕ್ಷ್ಮ! ಈ ಹಿನ್ನೆಲೆಯಲ್ಲಿ ನೋಡಿದರೆ ದ್ರೋಣ, ಒಂದರ್ಥದಲ್ಲಿ ತಾನು ಕಲಿಸಿದ ವಿದ್ಯೆಗೆ ತಾನೇ ಬಲಿಯಾದನೆನ್ನಬೇಕು. ಧೃಷ್ಟದ್ಯುಮ್ನನೊಂದು ನೆಪ.
 
ಯಜ್ಞವೆನ್ನುವುದು ಒಂದು ನೆಪ – ಅಷ್ಟೆ. ಆದರೆ, ಯಜ್ಞದಿಂದ ಮಕ್ಕಳನ್ನು ಪಡೆಯುವುದೆನ್ನುವ ಇಂಗಿತ, ಯಾವುದೋ–ಎಂಥದೋ ವಿಜ್ಞಾನ ಬೆಳೆಯುತ್ತಿದೆ, ಮಾನುಷಭಾವ ಅಳಿಸಿಹೋಗುತ್ತಿದೆ, ಇದು ಸ್ವ–ವಿನಾಶದ ಮುನ್ನುಡಿಯಾಗಬಹುದೆನ್ನುವ ಆತಂಕವನ್ನು, ಇದು ಭಾವ–ದಾರಿದ್ರ್ಯ ಎಂಬ ಅರಿವನ್ನು ಬಲ್ಲವರಲ್ಲಿ ಉಂಟುಮಾಡುತ್ತಿತ್ತು. ಪರಿತ್ಯಕ್ತ ಗರ್ಭದ ತುಣುಕುಗಳನ್ನು ತುಪ್ಪದ ಕೊಡಗಳಲ್ಲಿ ಅಕ್ಕರೆಯಿಂದ ಬೆಳೆಸುವುದೆಲ್ಲಿ! ಕೊಲ್ಲಬಲ್ಲ ಮಗನನ್ನು ಪಡೆಯಲೆಂದೇ ಯಜ್ಞ ಮಾಡುವುದೆಲ್ಲಿ!
 
ಕೃಷ್ಣೆ ಹುಟ್ಟಿಬಂದಳು. ದ್ರುಪದನ ಮಗಳಾಗಿ, ಧೃಷ್ಟದ್ಯುಮ್ನನ ತಂಗಿಯಾಗಿ. ಅರ್ಜುನನಿಗೆ ಮೀಸಲಾಗಿ, ಯಾಜ್ಞಸೇನಿಯಾಗಿ! ಕಪ್ಪು ಬಣ್ಣದ ಕಡು ಚೆಲುವೆ – ‘ಶ್ಯಾಮಾ’.

ತಾವರೆ ಎಸಳಿನಂಥ ಕಣ್ಣುಗಳು. ‘ಪದ್ಮಪಲಾಶಾಕ್ಷೀ’, ಕಪ್ಪು ಗುಂಗುರು ಕೂದಲ ರಾಶಿ ಹೊತ್ತವಳು. ‘ನೀಲಕುಂಚಿತ ಮೂರ್ಧಜಾ’. ದ್ರೌಪದಿಯ ಕೇಶರಾಶಿಯನ್ನು ಬಣ್ಣಿಸುವುದಕ್ಕೆ ಮರೆಯುವುದಿಲ್ಲ ವ್ಯಾಸರು! ಕೃಷ್ಣೆ ಹುಟ್ಟಿಬಂದಾಗ ಅಶರೀರವಾಣಿ ಆಗಿತ್ತಂತೆ.
 
‘ಸರ್ವಯೋಷಿದ್ವರಾ ಕೃಷ್ಣಾನಿನೀಷುಃ ಕ್ಷತ್ರಿಯಾನ್‌ ಕ್ಷಯಮ್‌’ – ‘ಸ್ತ್ರೀ ಜನರಲ್ಲೇ ಅತಿ ಶ್ರೇಷ್ಠಳಾದ ಪ್ರಾತಿನಿಧಿಕ ವ್ಯಕ್ತಿತ್ವದ ಈಕೆ ಕ್ಷತ್ರಿಯರನ್ನು ವಿನಾಶದತ್ತ ಒಯ್ಯುವಳು.’ ಇದು ಅಶರೀರವಾಣಿ! ಮಹಾಭಾರತದಲ್ಲೆಲ್ಲ ಮಾತಿನ ನೂರು ಬಗೆಗಳನ್ನು ವ್ಯಾಸರು ಬಳಸುವರು. ಅವೆಲ್ಲ ಸಾಲದೆಂಬಂತೆ ಈ ‘ಅಶರೀರವಾಣಿ’ ಎಂಬ ಭವಿಷ್ಯಸೂಚಕ ಮಾತಿನ ಬಗೆಯೂ ಬಂದಿದೆ. ಅಶರೀರವಾಣಿಗೆ ಹೇಗೆ ಸ್ಪಂದಿಸಬೇಕೆನ್ನುವುದೇ ಒಂದು ಕಲೆ.
 
ಕ್ಷತ್ರಿಯರು ತಮ್ಮ ಹುಟ್ಟಿನಿಂದಲೇ ಮಹಾಯುದ್ಧವೊಂದರಲ್ಲಿ ಪಾಲ್ಗೊಳ್ಳಲೆಂದೇ ಬದುಕುವವರು! ಆದುದರಿಂದ ಕ್ಷತ್ರವಿನಾಶವೆನ್ನುವುದು ಯುಗಧರ್ಮವೇ ಆದಂತಿದೆ. ಈ ಯುಗಧರ್ಮವು ಸಾಧಿತವಾಗುವುದರಲ್ಲಿ ಕೃಷ್ಣೆಯ ಪಾತ್ರವೂ ಮುಖ್ಯವಾದದ್ದೇ ಇರಬಹುದು.
 
ಇದು ದ್ವಾಪರದ ಇತಿಹಾಸದ ಗತಿ. ಆದರೆ ಈ ನಡೆಯ ಇರುಕಿನಲ್ಲಿ ಸಿಲುಕಿದ ದ್ರೌಪದಿ ಅನುಭವಿಸಿದ್ದೆಷ್ಟು! ಕೃಷ್ಣೆ ಅನುಭವಿಸಿದ್ದರಿಂದ ಇನ್ನಿಲ್ಲದಂತೆ ಗಾಸಿಪಟ್ಟುದರಿಂದ ಅದಕ್ಕೆ ಕಾರಣರಾದ ಕ್ಷತ್ರಿಯರು ನಾಶಯೋಗ್ಯರಾದರು. ಕೃಷ್ಣೆಗೆ ತಪ್ಪಿನಡೆಯದೆ ಇರುತ್ತಿದ್ದರೆ ಕ್ಷತ್ರಿಯನಾಶವಾಗುತ್ತಿರಲಿಲ್ಲ.
 
ಈ ಅರ್ಥದಲ್ಲಿ ದ್ರೌಪದಿ, ಎಲ್ಲ ಸ್ತ್ರೀಯರ ಪ್ರತಿನಿಧಿ, ‘ಸರ್ವಯೋಷಿದ್ವರಾ’. ಸ್ತ್ರೀಯರಲ್ಲೆಲ್ಲ ಶ್ರೇಷ್ಠವಾದವಳೆನ್ನುವ ಮಾತಿಗೆ ನಾನು ಹೀಗೆ ಅರ್ಥಮಾಡಬಯಸುವೆ. ವಿದ್ವಾಂಸರು ಮನ್ನಿಸಲಿ.

ಅಶರೀರವಾಣಿಯ ಅರ್ಥವೇನೆಂದರೆ – ವಿನಾಶದತ್ತ ನಡೆಯುತ್ತಿರುವ ಕ್ಷತ್ರಿಯ ಇತಿಹಾಸದ ದುರಂತ ಮಾಧ್ಯಮವಾಗಿ ಕೃಷ್ಣೆ ಬೆಳೆಯುವಳೆಂದು! ಈ ಇತಿಹಾಸ, ಕೃಷ್ಣೆಯನ್ನು ತನ್ನ ಪ್ರಯೋಗಕ್ಕೆ ಒಳಗು ಮಾಡುವುದೆಂದು. ಪ್ರಯೋಗಕ್ಕೆ ಒಳಗಾಗದೆ, ಒಡ್ಡಿಕೊಳ್ಳದೆ ವ್ಯಕ್ತಿತ್ತ್ವವೇ ಸಿದ್ಧಿಸುವುದಿಲ್ಲವೇನೋ.

ಈ ಅರ್ಥದಲ್ಲಿ, ದ್ರೌಪದಿ ಯಜ್ಞಕುಂಡದಲ್ಲಿ ಹುಟ್ಟಿಬಂದವಳೆನ್ನುವುದು, ಬೆಂಕಿಯ ಮಗಳೆನ್ನುವುದು ಬಹಳ ಧ್ವನಿಪೂರ್ಣವಾಗಿ ಕೇಳಿಸುವುದು. ಕೃಷ್ಣೆಗೆ ತಪ್ಪಿ ನಡೆಯದಿರಿ, ಕೆಂಡವನ್ನು ಉಡಿಯಲ್ಲಿ ಕಟ್ಟಿಕೊಳ್ಳದಿರಿ ಎನ್ನುವ ಸರಳವಾದ ಅರ್ಥ ಯಾರಿಗೂ ಕೇಳಿಸಿದಂತೆ ಇಲ್ಲ. ಗೀತೆಯಲ್ಲಿ ಕೃಷ್ಣನ ಮಾತೊಂದು ನೆನಪಾಗುವುದು.
 
‘ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್‌.’ ಅರ್ಜುನನಲ್ಲಿ ಕೃಷ್ಣ ಹೇಳಿದ್ದ – ನೀನು ನನಗೆ ಒಂದು ‘ನಿಮಿತ್ತ’ನಾಗು. ಕಾಲದ ಸಂಹಾರಕ ಶಕ್ತಿ ನನ್ನಲ್ಲಿ ಗರಿಗೆದರುತ್ತಿದೆ. ಅದಕ್ಕೊಂದು ‘ನಿಮಿತ್ತ’ ಬೇಕಾಗಿದೆ. ಆ ‘ನಿಮಿತ್ತ’ ನೀನಾಗು – ಎಂದು.
 
ದ್ರುಪದ, ಅರ್ಜುನನ ಮಡದಿಯಾಗುವ ಮಗಳನ್ನು ಪಡೆಯಬೇಕೆಂದು ಬಯಸಿದುದು, ಕೃಷ್ಣೆ ಹುಟ್ಟಿಬಂದುದು, ಆಗ ಅಶರೀರವಾಣಿಯಾದುದು ಕೃಷ್ಣನ ಮಾತಿಗೆ ಅನ್ಯೋನ್ಯವಾಗಿ ಹೊಂದಿಕೊಳ್ಳುತ್ತಿದೆ. ಅಶರೀರವಾಣಿಯ ಅರ್ಥವಾದುದು ಕೃಷ್ಣನೊಬ್ಬನಿಗೇ ಇರಬೇಕು! ಈ ನೆಲೆಯಲ್ಲಿ ದ್ರೌಪದಿಯ ಪಂಚ–ಪತಿತ್ತ್ವದ ಸಂದರ್ಭವನ್ನು ನೋಡಬೇಕು.
 
ಕೃಷ್ಣೆ ಬೆಳೆಯುತ್ತಿದ್ದಳು. ದ್ರುಪದ ಸ್ವಯಂವರದ ಸಿದ್ಧತೆ ಮಾಡಿದ. ಅವನಿಗೆ ವ್ಯಾಮಿಶ್ರಭಾವ ಕಾಡುತ್ತಿತ್ತು. ಅರಗಿನ ಮನೆಯಲ್ಲಿ ಪಾಂಡವರು ಸುಟ್ಟುರಿದು ಹೋದರೆಂದು ಕೇಳಿದ್ದ. ಆರು ಕರಕಲು ಶವಗಳು ಕೂಡ ನೋಡಸಿಕ್ಕಿವೆಯಂತೆ.
 
ಹಸ್ತಿನೆಯಲ್ಲಿ ಅಪರಕ್ರಿಯೆಗಳನ್ನು ಮಾಡಿದರಂತೆ. ಪಾಂಡುವಿನ ವಂಶವೇ ಮುಗಿದುಹೋಯಿತೆಂದು ಅಳಲಿದರಂತೆ. ಇರಬಹುದೇನೋ. ಆದರೆ ತನ್ನ ಮಗಳು ಕೃಷ್ಣೆ ಅರ್ಜುನನ ಮಡದಿಯಾಗಬೇಕಾದವಳು! ಈ ದ್ವಂದ್ವವನ್ನು ಹೊಂದಿಸುವುದು ಹೇಗೆ?
 
ಅದಕ್ಕಾಗಿ ಸ್ವಯಂವರದ ಜೊತೆಗೆ ಮತ್ಸ್ಯಯಂತ್ರದ ಭೇದನದ ಯೋಜನೆಯನ್ನು ಮಾಡಿದ. ಇದು ಅರ್ಜುನನಂಥ ಅಸಾಧಾರಣ ಬಿಲ್ಗಾರರಿಗೆ ಮಾತ್ರ ಸಾಧ್ಯವಾಗಬಹುದಾದ ಸಾಹಸವಾಗಿತ್ತು. ಮತ್ತು ಅರ್ಜುನ ಬದುಕಿದ್ದರೆ ಅವನನ್ನು ಹುಡುಕಿ ಹಿಡಿಯುವ ತಂತ್ರವೂ ಆಗಿತ್ತು.
 
ಕರ್ಣನಂಥವನು ಸ್ವಯಂವರ ಸಭೆಯಲ್ಲಿ ತನ್ನ ಕೌಶಲವನ್ನು ತೋರಿಸಲು ಎದ್ದುಬಂದಾಗ ತಾನು ಸೂತನನ್ನು ಮದುವೆಯಾಗಲೊಲ್ಲೆನೆಂದು ಹೇಳುವ ಸ್ವಾತಂತ್ರ್ಯವೂ ಕೃಷ್ಣೆಗೆ ಇತ್ತು.
 
ದ್ರುಪದನ ದೂರದ ನಿರೀಕ್ಷೆ ನಿಜವಾಯಿತು. ಬ್ರಾಹ್ಮಣ ವೇಷಾಂತರದಲ್ಲಿದ್ದ ಪಾಂಡವರು ಸ್ವಯಂವರ ಸಭೆಗೆ ಬಂದರು. ಕೃಷ್ಣ–ಬಲರಾಮರೂ ಇತರ ಯಾದವ ಪ್ರಮುಖರೊಡನೆ ಈ ಸಭೆಗೆ ಬಂದಿದ್ದರು. ಮಹಾಭಾರತದಲ್ಲಿ ಕೃಷ್ಣ ಮೊದಲು ಕಾಣಿಸಿಕೊಳ್ಳುವ ಸಂದರ್ಭವಿದು. ಪಾಂಡವರು, ದ್ರೌಪದಿ ಮತ್ತು ಕೃಷ್ಣ – ಈ ಮುಮ್ಮುಖದ ಸಂಬಂಧ ಇಲ್ಲಿಂದ ಬೆಳೆಯತೊಡಗುತ್ತದೆ. ಇದು ಅರ್ಥಪೂರ್ಣ.
 
ಅಶರೀರವಾಣಿಯೇ ದ್ರೌಪದೀ ಸ್ಚಯಂವರಕ್ಕೆ ಕೃಷ್ಣನಿಗೆ ಆಹ್ವಾನಕೊಟ್ಟಿರಬೇಕು! ತನ್ನ ಜೊತೆಗಿನ ಯಾದವ ವೀರರೊಡನೆ ಕೃಷ್ಣ ಹೇಳಿದ್ದ: ‘ಮತ್ಸ್ಯಯಂತ್ರದ ಗೊಡವೆಗೆ ಹೋಗದಿರಿ.

ಸಭೆಯಲ್ಲಿ ನಾವು ಬರಿಯ ಪ್ರೇಕ್ಷಕರಾಗಿ – ಅತಿಥಿಗಳಾಗಿ ಕೂರೋಣ.’ ಯಾವ ಕ್ಷತ್ರಿಯರಿಂದಲೂ ಮತ್ಸ್ಯಯಂತ್ರವನ್ನು ಭೇದಿಸಲಾಗದೆ ಇದ್ದಾಗ ಬ್ರಾಹ್ಮಣ ವೇಷಧಾರಿಯಾಗಿದ್ದ ಅರ್ಜುನ ಮೇಲೆದ್ದುದನ್ನು ಕಂಡು ಪುಲಕಿತನಾಗಿ ಕೃಷ್ಣ ತನ್ನ ಪಕ್ಕದಲ್ಲಿದ್ದ ಬಲಭದ್ರನೊಡನೆ ಹೇಳಿದ್ದ: ‘ಇವನಾರು ಬಲ್ಲೆಯಾ; ನಮ್ಮ ಅತ್ತೆ ಕುಂತಿಯ ಮಗ; ಪಾಂಡವ ಮಧ್ಯಮನಾದ ಅರ್ಜುನ.’
 
ಪಾಂಡವರ ಕಥೆ ಮುಗಿದಿತ್ತೆಂದೇ ಅದುವರೆಗೆ ತಿಳಿದಿದ್ದ ಬಲರಾಮ ಬೆರಗಾಗಿ ಕೃಷ್ಣನ ಮಾತನ್ನು ಸಂದೇಹಿಸಿದಾಗ, ತಾನು ವಸುದೇವನ ಮಗ ಕೃಷ್ಣ ಅಹುದಾದರೆ ಈತನರ್ಜುನ ಎಂದು ಒಳನೋಟದ ಮಾತನ್ನು, ತರ್ಕವನ್ನು ಮೀರಿದ ಮಾತನ್ನು ಕೃಷ್ಣ ಹೇಳಿದ್ದ. ತರ್ಕವನ್ನು ಮಿರಿದ ಮಾತುಗಳನ್ನಾಡುವುದು ಕೆಲವು ಸಂದರ್ಭಗಳಲ್ಲಿ ಕೃಷ್ಣನಿಗೆ ಇಷ್ಟ! ಅರ್ಜುನ ಮತ್ತು ದ್ರೌಪದಿ – ತನ್ನ ಈ ಎರಡು ನಿಮಿತ್ತಗಳು ಮದುವೆಯಾಗುವುದನ್ನು ನೋಡುವ ಸಂತಸಕ್ಕಾಗಿಯೇ ಕೃಷ್ಣ ಬಂದಿದ್ದ. ಮತ್ತು ಕೃಷ್ಣನು ಪ್ರಕಟವಾಗುವುದಕ್ಕೆ ಇದೇ ಸೂಕ್ತವಾದ ಸಂದರ್ಭವೆಂದು – ತನ್ನ ಇತಿಹಾಸ ಗ್ರಂಥದಲ್ಲಿ ಸರಿಯಾಗಿ ವ್ಯಾಸರು ಗ್ರಹಿಸಿದ್ದರು.
 
ಮತ್ಸ್ಯಯಂತ್ರವನ್ನು ಭೇದಿಸಿ ಕೃಷ್ಣೆಯನ್ನು ಗೆದ್ದವನು ಅರ್ಜುನನೆಂದು ತಿಳಿಯಲು ಸಭೆಗೆ ಸ್ವಲ್ಪ ಹೊತ್ತು ಹಿಡಿಯಿತು. ಸ್ವಯಂವರ ಸಭೆಯಲ್ಲಿ ಕಾಳಗವೇ ನಡೆದುಹೋಯಿತು. ಕ್ಷತ್ರಿಯರಲ್ಲಿ ಕಾಳಗ–ಕಲ್ಯಾಣ ಜೊತೆಗೇ ಇರುತ್ತವೆ. ಎದುರಿಸಿದವರನ್ನೆಲ್ಲ ಭೀಮಾರ್ಜುನರು ಸದೆದು, ಸದ್ಯೋವಧೂ ಕೃಷ್ಣೆಯೊಡನೆ ತಾವು ತಂಗಿದ್ದ ಕುಂಬಾರನ ಮನೆಗೆ ಪಾಂಡವರು ಬಂದರು. ದ್ರುಪದಾದಿಗಳಿಗೆ ಇವರು ಪಾಂಡವರೆಂದು ತಿಳಿದು ಎಲ್ಲ ಖಿನ್ನತೆ ಕಳೆದು ಉಲ್ಲಾಸದ ಕೋಡಿ ಹರಿಯಿತು.
 
ಎಲ್ಲ ನಿಜ. ಆದರೆ ಅನೂಹ್ಯವಾದುದೊಂದು ನಡೆಯಲಿತ್ತು. ದ್ರೌಪದಿಯನ್ನು ಗೆದ್ದವನು ಅರ್ಜುನ. ಅವನ ಮಡದಿಯಾಗಬೇಕು –ದ್ರೌಪದಿ. ಇದರಲ್ಲೇನು ವಿವಾದ? ಆದರೆ ಕುಂಬಾರನ ಮನೆಯಲ್ಲಿ ಸೇರಿದ್ದ ಎಲ್ಲರ ನಡುವೆ ಕುಳಿತಿದ್ದಾಗ ಪಾಂಡವರು ನಾಲ್ವರ ಕಣ್ಣೂ ದ್ರೌಪದಿಯ ಮೇಲೆ ತೀವ್ರವಾದ ಲಾಲಸೆಯಿಂದ ನೆಟ್ಟಿದ್ದವು ಎಂಬುದನ್ನು ಹಿರಿಯ ಧರ್ಮಜ ಗುರುತಿಸಿದ. ಸ್ವಯಂ ಧರ್ಮಜನೂ ನಿರ್ಲಿಪ್ತನಾಗಿರಲಿಲ್ಲ.
 
ತಾಯಿ ಕುಂತಿಯೂ ಇದನ್ನು ಗಮನಿಸಿದಳು. ಅನನ್ಯ ಸೂಕ್ಷ್ಮಜ್ಞೆಯಾದ ದ್ರೌಪದಿಗೂ ಈ ಅಂಶ ಮನವರಿಕೆಯಾಗುತ್ತಿತ್ತು; ಪ್ರಾಯಃ ಧರ್ಮಜನಿಗಿಂತಲೂ ಮೊದಲೇ. ಎಲ್ಲರ ಕಣ್ಣುಗಳೂ ದ್ರೌಪದಿಯ ಕಣ್ಣುಗಳನ್ನು ಸಂಧಿಸುತ್ತಿದ್ದುವು. ಎಲ್ಲವೂ ಎಲ್ಲರಿಗೂ ಒಳಗಿಂದಲೇ ತಿಳಿಯುತ್ತಿತ್ತು. ಒಳಗಿನ ಕೆಂಡದ ಬಿಸಿ ಎಲ್ಲೆಡೆ ನಿಧಾನ ಹರಡುತ್ತಿತ್ತು. ವ್ಯಾಸರು ಇದನ್ನು ಸ್ಪಷ್ಟಪಡಿಸುವರು. ಕುಂತಿಗೆ–ಧರ್ಮಜನಿಗೆ ಚಿಂತೆ ಕಾಡಿತು.

ಹೀಗಾದರೆ ತಮ್ಮ ಐಕಮತ್ಯದ ಗತಿ ಏನು? ಪಾಂಡವರ ಮುಂದಿನ ಬಾಳುವೆಗೇ ಅವರ ಐಕಮತ್ಯ ಅಗತ್ಯವಿತ್ತು. ಈಗ ತಾನೇ ಅರಗಿನಮನೆಯ ಬೆಂಕಿಯಿಂದ ಪಾರಾಗಿಬಂದಿದ್ದರು. ಹೆಜ್ಜೆಹೆಜ್ಜೆಗೆ ಅವರಿಗೆ ಅಪಾಯವಿತ್ತು. ಬಲವದ್ವಿರೋಧವಿತ್ತು. ಪಾಂಡವರ ಏಕತೆ ಒಡೆದುಹೋಗುವುದು ದೊಡ್ಡ ಅಪಾಯಕ್ಕೆ ಆಹ್ವಾನವಿತ್ತಂತೆ ಎನ್ನುವುದು ನಿಜವೂ ಆಗಿತ್ತು. ಈ ಎಲ್ಲವನ್ನೂ ಒಪ್ಪೋಣ.
 
ಆದರೆ ದ್ರೌಪದಿಯ ಕಾರಣದಿಂದ ಪಾಂಡವರ ಪ್ರವಾದದಂಥ ಒಗ್ಗಟ್ಟು ಒಡೆಯುವ ಸಂಭವವಿತ್ತೆನ್ನುವುದು, ಅದೂ ಇಂಥ ಅಪಾಯದ ಸೂಕ್ಷ್ಮ ಸನ್ನಿವೇಶದಲ್ಲಿಯೂ ಅದು ಒಡೆಯಬಹುದಿತ್ತೆನ್ನುವುದು ಪಾಂಡವರ ವ್ಯಕ್ತಿತ್ವಕ್ಕೆ ಯಾವ ರೀತಿಯಲ್ಲಿಯೂ ಶೋಭೆ ತರುವ ಮಾತಾಗಲಾರದು ನಿಜ. ಆದರೆ ಅದು ವಾಸ್ತವವಾಗಿತ್ತು. ಹಾಗಾದರೇನು ಮಾಡಬೇಕು? ದ್ರೌಪದಿ ಪಾಂಡವರೈವರ ಪತ್ನಿಯಾಗಬೇಕೇನು? ಸಹಜವಾಗಿ ದ್ರುಪದಾದಿಗಳಿಗೆ ಇದು ಸಮ್ಮತವಾಗಲಾರದು.
 
ಈ ಗಂಟನ್ನು ಬಿಡಿಸುವುದಕ್ಕೆ ಎಲ್ಲ ಜ್ಞಾನಿಗಳೂ ವಿಚಾರವಂತರೂ ಸೇರಿದರು. ಸ್ವಯಂ ವ್ಯಾಸ, ಕೃಷ್ಣ ಅಲ್ಲಿದ್ದರು. ಇವರೆಲ್ಲರೂ ಬಹು ಪತಿತ್ತ್ವದ ಸಂದರ್ಭವನ್ನು ಮಾನ್ಯ ಮಾಡಿದರು. ವ್ಯಾಸರು ಅನೇಕ ಉದಾಹರಣೆಗಳ ಮೂಲಕ ಹಿಂದಿನ ಬಹುಪತಿತ್ತ್ವದ ಸಂದರ್ಭಗಳನ್ನು ವಿವರಿಸಿದರು. ದ್ರೌಪದಿಯ ಗತಜನ್ಮದ ಸಂಗತಿಯನ್ನು ಉಲ್ಲೇಖಿಸಿದರು.
 
ಅಲ್ಲದೆ, ಪಾಂಡವರು ದೇವತೆಗಳ ಅಂಶದಿಂದ ಹುಟ್ಟಿಬಂದವರಾಗಿ, ಆಯಾ ದೇವತೆಗಳ ಸ್ತ್ರೀತತ್ತ್ವಗಳು ದ್ರೌಪದಿಯ ದೇಹದಲ್ಲಿ ಆವಿಷ್ಟವಾಗಿ ಒಂದೇ ಮೈಯಲ್ಲಿ ಐದು ದಾಂಪತ್ಯಗಳ ಸಂದರ್ಭ ಒದಗಿ ಬಂದಿರುವ ವಿಲಕ್ಷಣ ಆಧ್ಯಾತ್ಮಿಕ ಪ್ರಕರಣವಿದು ಎಂಬ ಉಲ್ಲೇಖವನ್ನೂ ಮಹಾಭಾರತ ಮಾಡುವುದು.
ಬಹಳ ವಿಚಾರಗಳನ್ನು ಮಾಡಿದ್ದಾರೆನ್ನುವುದು ನಿಜ. ನಾಗರಿಕತೆ ನಡೆದುಬಂದ ದಾರಿಯ ಚಿತ್ರವನ್ನು ನಿರುದ್ವಿಗ್ನವಾಗಿ ನೋಡಿದ್ದಾರೆನ್ನುವುದೂ ನಿಜ.
 
ಬಹುಪತ್ನೀತ್ವ ಸಮ್ಮತವಾಗುವುದಾದರೆ ಬಹುಪತಿತ್ತ್ವದ ನೆನಪೇಕೆ ಉದ್ವೇಗ ಕಾರಣವಾಗಬೇಕು ಎಂದು ಚಿಂತಿಸಿದ್ದಾರೆನ್ನುವುದೂ ನಿಜ. ಆದರೆ ದ್ರೌಪದಿಯೊಡನೆ ಅವಳ ಅಭಿಮತವನ್ನು ಯಾರೂ ಕೇಳಲಿಲ್ಲ ಎನ್ನುವುದೂ ಅಷ್ಟೇ ನಿಜ. ಅವಳ ಮುಂದೆಯೇ ಈ ಎಲ್ಲ ಮಾತುಕತೆಗಳೂ ನಡೆದುದು ಎನ್ನುವುದೂ ನಿಜ.

ಸೂತನನ್ನು ಮದುವೆಯಾಗಲಾರೆನೆಂದು ಸ್ವಯಂವರದ ಸಭೆಯಲ್ಲಿ ತಾನಾಗಿ ಹೇಳಿದವಳು – ಇಲ್ಲಿ ತನ್ನ ವಿರೋಧವನ್ನು ಸೂಚಿಸಲಿಲ್ಲ ಎನ್ನುವುದೂ ನಿಜ. ಆದರೂ ಅವಳ ಮನದಾಳದಲ್ಲಿ ಏನಿತ್ತು, ಅದು ಈ ಸಂದರ್ಭದಲ್ಲಿ ಯಾರಿಗೂ ತಿಳಿಯದೆಹೋಯಿತು! ಮತ್ಸ್ಯಯಂತ್ರವನ್ನು ಭೇದಿಸಬಹುದು. ಮನಸ್ಸನ್ನು ಭೇದಿಸುವುದು ಅಸಾಧ್ಯ. ಏಕೆಂದರೆ ಅದು ತಾನಾಗಿ ತೆರೆದುಕೊಳ್ಳಬೇಕು!
 
ಕೃಷ್ಣೆ ತನ್ನ ಬಗೆಗಿನ ಪಾಂಡವರ ಆಸಕ್ತಿಯನ್ನು ಅರ್ಥಮಾಡಿಕೊಂಡಳು. ಅವರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಂಡಳು. ಪಾಂಡವರನ್ನು ಒಟ್ಟಾಗಿ ಬಾಳಿಸುವ ಸಂಬಾಳಿಸುವ ಸಂಕಲ್ಪವನ್ನು ಕೃಷ್ಣೆ ಮಾಡಿದಳೆಂದು ಬೆರಗಿನಿಂದ, ಗೌರವದಿಂದ ನಾನು ಭಾವಿಸುವೆ.
 
ತನ್ನನ್ನು ಪಾಂಡವರಿಗಾಗಿ ಪಣ ಇಟ್ಟಳೆಂದು, ಪಾಂಡವರು ತನಗೆ ಸೋತರೆಂದು ಅರಿವಾಗಿ ತನಗೆ ಸೋತವರಿಗಾಗಿ ತನ್ನನ್ನು ಪಣ ಇಟ್ಟಳೆಂದು – ಮಹಾಭಾರತದ ಸಂದರ್ಭಗಳನ್ನು ನೆನೆಯುತ್ತ ನಾನು ಭಾವಿಸುವೆ.
 
ಸೂತನನ್ನು ಮದುವೆಯಾಗಲಾರೆನೆಂದು ದ್ರೌಪದಿ ದೃಢವಾಗಿ ನುಡಿದುದನ್ನು ಕೇಳಿ ಅವಳ ಕಂಠದಿಂದಲೇ ದ್ರೌಪದಿಯ ವ್ಯಕ್ತಿತ್ತ್ವ ಕರ್ಣನಿಗೆ ಅರ್ಥವಾಗಿತ್ತು. ದ್ರೌಪದಿ, ಪಾಂಡವರನ್ನು ಮದುವೆಯಾದಳೆಂದು ಕೇಳಿ, ಹಸ್ತಿನೆಯಲ್ಲಿ ದುರ್ಯೋಧನಾದಿಗಳು ಕಳವಳಗೊಂಡು, ಇದೇ ಕಾರಣವನ್ನು ಹಿಡಿದು ಪಾಂಡವರ ಒಗ್ಗಟ್ಟನ್ನು ಮುರಿಯಲಾದೀತೇ ಎಂದು ಯೋಚಿಸಿದ್ದರು.
 
ಕುಂತೀಪುತ್ರರಿಗೂ ಮಾದ್ರಿಯ ಮಕ್ಕಳಿಗೂ ವೈಮನಸ್ಸು ಉಂಟಾಗುವಂತೆ, ದ್ರುಪದನು ಪಾಂಡವರನ್ನು ಕೈಬಿಡುವಂತೆ, ಅಥವಾ ಪಾಂಚಾಲದಲ್ಲಿಯೇ ಪಾಂಡವರು ಇರುವಂತೆ, ಹಸ್ತಿನೆಗೆ ಬಾರದಂತೆ, ಪಾಂಚಾಲಿಯು ಪಾಂಡವರ ಕುರಿತು ವಿಮನಸ್ಕಳಾಗುವಂತೆ – ಪಂಚಪತಿತ್ತ್ವವನ್ನು ಕೆಡಿಸಬೇಕೆಂದುಕೊಂಡರು.
 
ಆಗ, ಈ ಆಲೋಚನೆಯೇ ಸರಿಯಲ್ಲ ಎಂದವನು ಕರ್ಣ! ‘ದುರ್ಯೋಧನ ತವ ಪ್ರಜ್ಞಾನ ಸಮ್ಸಗಿತಿ ಮೇ ಮತಿಃ’ – ಪಂಚ ಪತಿತ್ತ್ವದ ಕಾರಣವನ್ನಿಟ್ಟುಕೊಂಡು ಪಾಂಚಾಲಿಯ ಮನಸ್ಸನ್ನು ಕೆಡಿಸೋದು ಅಸಾಧ್ಯದ ಮಾತು ಎಂದ.
 
ಏಕೆಂದರೆ ಚಾಂಚಲ್ಯದ ನಡುವೆ ಸಮತೋಲನವನ್ನು ಸಾಧಿಸೋದು ಅವಳಿಗೆ ಗೊತ್ತು ಎಂದ. ಒಬ್ಬ ಗಂಡ – ಒಬ್ಬಳು ಹೆಂಡತಿಯಾದರೆ ಅಲ್ಲಿ ತಾದಾತ್ಮ್ಯದ ಸಾಧನೆ. ಪಂಚಪತಿತ್ತ್ವದಲ್ಲಿಯಾದರೋ ಸೂಕ್ಷ್ಮವಾದ ಸಮತೋಲನ! ದ್ರೌಪದಿ, ನೈಸರ್ಗಿಕ ಶಕ್ತಿಯಿಂದ ತುಂಬಿದವಳು.
 
ನಿಸರ್ಗದಲ್ಲಿ ಭೇದ ಎನ್ನುವುದು, ಚಂಚಲತೆ ಎನ್ನುವುದು, ವೈವಿಧ್ಯ ಎನ್ನುವುದು, ಬಹುತ್ತ್ವ ಎನ್ನುವುದು, ಒಂದು ಜೀವಂತವಾದ ಸಮತೋಲನವನ್ನು ಸಾಧಿಸುವ ಜೀವದ್ರವ್ಯವಾಗಿದೆ. ನಿಮಗಿದು ಅರ್ಥವೇ ಆಗಲಾರದು ಎಂದ.
 
ಕೃಷ್ಣೆ ಬೆಂಕಿಯ ಮಗಳು, ಬೆಂಕಿಯಂಥವಳು, ಆ ಬೆಂಕಿಯಲ್ಲಿ ಪಾಕವಾಗದ ಭಾವವೇ ಇಲ್ಲ. ಅನುಭವವೇ ಇಲ್ಲ ಎಂದ. ತನ್ನನ್ನು ನಿರಾಕರಿಸಿದ ಮಾತಿನಿಂದಲೂ ಮನುಷ್ಯಜೀವ enlighten ಆಗಬಹುದು! ಕರ್ಣ, ಈ ಭಾವವನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಬೇರೆ ಮಾತು.
 
ಪಾಂಡು–ಮಾದ್ರಿಯರ ದುರಂತದ ಸಂದರ್ಭದಲ್ಲಿ ‘ಪೃಥಿವೀ ಗತ ಯೌವನಾ’ ಎನ್ನುವ ಮಾತನ್ನು ವ್ಯಾಸ ಆಡಿದ್ದರು. ಈಗ ಕೃಷ್ಣೆಯ ಪಂಚಪತಿತ್ತ್ವದ ನೆಲೆಯಲ್ಲಿ ‘ಪೃಥಿವೀ ಸಂಪ್ರಾಪ್ತ ಯೌವನಾ’ ಎಂದು ತಮ್ಮಲ್ಲೇ ಹೇಳಿಕೊಂಡಿರಬೇಕು!
 
ದ್ರೌಪದಿ ಈ ಸಂದರ್ಭದಲ್ಲಿ ತನ್ನ ಮನಸ್ಸೇನಿತ್ತು ಎಂದು ಹೇಳಲಿಲ್ಲ ನಿಜ. ಆದರೆ ಅದನ್ನು ತಿಳಿಸದೆ ವ್ಯಾಸರಿಗೆ ನೆಮ್ಮದಿ ಇಲ್ಲ. ದ್ರೌಪದಿಯ ಮನಸ್ಸು ತಿಳಿದುಬರುವುದು ಮಹಾಭಾರತದ ಕೊಟ್ಟಕೊನೆಯಲ್ಲಿ. ಸ್ವರ್ಗಾರೋಹಣ ಪರ್ವದಲ್ಲಿ. ದ್ರೌಪದಿಯ ಕುರಿತು ಇನ್ನೂ ಒಂದು ಕಂತು ಬರೆಯುವೆನಾದರೂ, ಅವಳ ಮನದಾಳವೇನಿತ್ತೆನ್ನುವುದನ್ನು ಈಗಲೇ ತಿಳಿಸುವುದು ಉಚಿತವೆನಿಸುತ್ತದೆ.
 
ತಮ್ಮ ಜೀವಿತದ ಕೊನೆಯಲ್ಲಿ, ಸಂಬಂಧಿಗಳೆಲ್ಲ ಪ್ರೀತಿಪಾತ್ರರೆಲ್ಲ ಅಳಿದುಹೋದಮೇಲೆ, ಯಾದವರೂ ಕೃಷ್ಣನೂ ಈ ಲೋಕವನ್ನು ಬಿಟ್ಟಗಲಿದ ಮೇಲೆ, ಕೃಷ್ಣೆಯ ಸಮೇತ ಪಾಂಡವರು ಹಿಮಾಲಯದತ್ತಣಿಂದ ತಮ್ಮ ಕೊನೆಯ ಪಯಣವನ್ನು – ಮಹಾ ಪ್ರಸ್ಥಾನವನ್ನು – ತೊಡಗುವರು.

ಈ ಲೋಕದ ಬಾಳನ್ನು ಬಾಳಿದ ದೇಹವನ್ನು ಹಿಡಿದುಕೊಂಡೇ ಸ್ವರ್ಗಕ್ಕೆ ಹೆಜ್ಜೆ ಇಡುವರು. ಅದು ಆರೋಹಣ ಪರ್ವ. ಎಲ್ಲರೂ ಏರಬೇಕು. ಏರಲಾರದವರು ಕುಸಿಯುವರು. ಕುಸಿದವರ ಜೊತೆಗೆ ನಿಲ್ಲುವಂತಿಲ್ಲ. ತಮ್ಮ ಪಯಣವನ್ನು ತಾವೇ ಮುಂದುವರಿಸಬೇಕು. ಇದು ಒಬ್ಬರೇ ನಡೆಯುವ, ನಡೆಯಬೇಕಾದ ದಾರಿ. ಹೀಗೆ ಸಾಗುತ್ತಿರಲು – ಏರಲಾರದೆ ದ್ರೌಪದಿ, ಪಂಚವಲ್ಲಭೆ ಮೊದಲು ಕುಸಿಯುವಳು.
 
ಭೀಮ ತನ್ನ ಕೃಷ್ಣೆ ಕುಸಿದುದನ್ನು ನೋಡಿದ. ಇವಳೇಕೆ ಬಿದ್ದಳು ಎಂದು ತನ್ನ ಮುಂದೆ ಇದ್ದ ಧರ್ಮಜನನ್ನು ಕೇಳಿದ. ಇದನ್ನೆಲ್ಲ ನೋಡುತ್ತಿದ್ದ ಧರ್ಮಜ ಹೇಳಿದ: ‘ದ್ರೌಪದಿ ನಮ್ಮೆಲ್ಲರ ಮಡದಿ. ನಮ್ಮೈವರನ್ನೂ ಬಾಳಿಸಿದವಳು. ಎಲ್ಲ ನಿಜ. ಆದರೆ ಅವಳ ಮನದಾಳದಲ್ಲಿದ್ದುದು ಅರ್ಜುನ! ಮತ್ಸ್ಯಯಂತ್ರವನ್ನು ಭೇದಿಸಿ ಕೃಷ್ಣೆಯನ್ನು ಗೆದ್ದ ಅರ್ಜುನನಲ್ಲಿ ಅವಳಿಗೆ ಅಧಿಕವಾದ ಒಲವಿತ್ತು. ಈ ಕಾರಣದಿಂದ ಆ ಒಲವಿನ ಮನ ಒಲವಿನ ದೇಹವನ್ನು  ಹೊತ್ತು ಏರಲಾರದೆ ಹೋದಳು.’
 
ಆರೋಹಣದ ಸತ್ಯಕ್ಕಿಂತ, ಒಲವಿನ ಭಾರದಿಂದ ಕುಸಿದ ಈ ಸತ್ಯ ಕಡಿಮೆ ಬೆಳಕಿನದಲ್ಲ ಎಂದು ನನಗೆ ತೋರುವುದು. ಇರಾವತೀ ಕರ್ವೆಯವರು ತಮ್ಮ ‘ಯುಗಾಂತ್ಯ’ದಲ್ಲಿ ಈ ಸಂದರ್ಭವನ್ನು ವರ್ಣಿಸುತ್ತ, ದ್ರೌಪದಿಯ ಮನಸ್ಸಿನಲ್ಲಿದ್ದುದು ಅರ್ಜುನನಲ್ಲ – ಅದು ‘ಭೀಮಸೇನ’ ಎಂದು ಕೂಗಿ ಹೇಳುವರು!
ಅರ್ಜುನನ ಜಾಗದಲ್ಲಿ ಭೀಮನನ್ನು ಕಲ್ಪಿಸುವರು.
 
ದ್ರೌಪದಿ, ಪಂಚವಲ್ಲಭೆಯಾದುದರಿಂದ ಈ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಯಿತು. ಅರ್ಜುನನಲ್ಲ, ಭೀಮಸೇನ – ದ್ರೌಪದಿಯ ಪ್ರಿಯತಮನೆಂದು ಊಹಿಸುವ ಸ್ವಾತಂತ್ರ್ಯ! ಈ ಊಹೆ ಕಾಣಿಸುವ ಸತ್ಯವೊಂದು ಮಿಗಿಲಾದ ಸತ್ಯ.
 
ಕುಮಾರವ್ಯಾಸ, ‘ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?’ ಎಂದು ದ್ರೌಪದಿಯ ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ ಉದ್ಗರಿಸುತ್ತಾನೆ. ಪಂಚಪತಿತ್ತ್ವದ ಸಂದರ್ಭದಲ್ಲೂ ಈ ಮಾತನ್ನು ಅನ್ವಯ ಮಾಡಬಹುದೆನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT