ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಹೊಣೆಯೂ ಜನತಂತ್ರ ಬಲವರ್ಧನೆಯೂ

Last Updated 26 ಜೂನ್ 2017, 20:17 IST
ಅಕ್ಷರ ಗಾತ್ರ

ರಾಷ್ಟ್ರದ ಮೇಲೆ ಹೇರಲಾದ  ತುರ್ತು ಪರಿಸ್ಥಿತಿಗೆ ಮೊನ್ನೆ ಜೂನ್ 25ಕ್ಕೆ  42 ವರ್ಷಗಳಾದವು.  ತುರ್ತು ಪರಿಸ್ಥಿತಿಯ  ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರ ಅನುಭವಿಸಿದ  ಸೆನ್ಸಾರ್‌ಶಿಪ್ ಅನ್ನು ಮರೆಯುವುದು ಸಾಧ್ಯವಿಲ್ಲ. ಸೆನ್ಸಾರ್ ಆದ ಸುದ್ದಿಗಳಿಂದ ಒಳ್ಳೆಯದಷ್ಟೇ ಜನರಿಗೆ ತಿಳಿದಿದೆ ಎಂದು ನಂಬಿಕೊಂಡಿದ್ದ ಇಂದಿರಾ ಗಾಂಧಿಯವರು 1977ರಲ್ಲಿ ಚುನಾವಣೆ  ಘೋಷಿಸಿ ಸ್‍ಪರ್ಧಿಸಿದಾಗ ಇಂದಿರಾ ಗಾಂಧಿ ವಿರುದ್ಧ ಜನ ಮತ ಹಾಕಿದರು.

ಬಲಾತ್ಕಾರದ ಸಂತಾನಶಕ್ತಿ ಹರಣ, ಕೊಳೆಗೇರಿ ನಿರ್ಮೂಲನ ಸೇರಿದಂತೆ ತುರ್ತು ಪರಿಸ್ಥಿತಿ ದಿನಗಳಲ್ಲಿ ಬಡವರು ಅನುಭವಿಸಿದ ದಮನದ ನಿಜ ಚಿತ್ರಗಳು ಬಯಲಾದದ್ದು ಮಾಧ್ಯಮ ಸೆನ್ಸಾರ್‌ಶಿಪ್ ರದ್ದಾದ ನಂತರ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಇದೇ  ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಳೆದ ವಾರ ಪತ್ರಕರ್ತರಿಗೆ ಹೇಳಿದ ಕಿವಿಮಾತು ಧ್ವನಿಸುವುದಾದರೂ ಏನನ್ನು? ಪತ್ರಕರ್ತರು ‘ಸುಂದರವಾದ ಭಾಷೆ’ ಬಳಸಬೇಕು.  ಕೆಲವೊಮ್ಮೆ ಅಹಿತಕರ ಸತ್ಯ ಹೇಳುವುದನ್ನೂ ಬಿಡಬೇಕು ಎಂಬುದು  ಸುಮಿತ್ರಾ ಮಹಾಜನ್ ಅವರ ಸಲಹೆ.

ನಯವಾದ ಭಾಷೆಯ ಮೂಲಕ ಬಹಳಷ್ಟು ಸಂಗತಿಗಳನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯವಿದೆ ಎಂದಿದ್ದಾರೆ ಅವರು.  ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಅಪ್ರಿಯಂ ಸತ್ಯಂ’(ಸತ್ಯವನ್ನೇ ಹೇಳಬೇಕು, ಪ್ರಿಯವಾದುದನ್ನೇ ಹೇಳಬೇಕು. ಅಪ್ರಿಯ ಸತ್ಯವನ್ನು ಹೇಳಬಾರದು) ಎಂಬಂಥ  ಸಂಸ್ಕೃತ ಶ್ಲೋಕದಲ್ಲಿರುವ ತತ್ವದ ಪಾಠವನ್ನು ಅವರು ಹೇಳಿದ್ದಾರೆ.

ಇನ್ನು ವಸ್ತುನಿಷ್ಠತೆ ಪಾಲಿಸುವ ವಿಚಾರದಲ್ಲಿ  ನಮ್ಮ ಪುರಾಣದ ನಾರದ ಮುನಿಯಿಂದ ಕಲಿಯುವುದು ಬಹಳ ಇದೆ ಎಂದು ಸಲಹೆಯನ್ನೂ ನೀಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ವರದಿಗಳನ್ನು ಮಾಡಬೇಕು ಎಂದೂ ಸುಮಿತ್ರಾ ಮಹಾಜನ್ ಹೇಳುತ್ತಾರೆ. ಆದರೆ, ಒಳ್ಳೆಯದನ್ನೇ ವರದಿ ಮಾಡುವುದರಿಂದ ಸರ್ಕಾರಕ್ಕೆ ಒಳ್ಳೆಯದಾಗುವುದೆ?  ಅದರಿಂದ  ಮುಂದಿನ ಚುನಾವಣೆಯಲ್ಲಿ  ಆಡಳಿತ ಪಕ್ಷಕ್ಕೆ ಅನುಕೂಲವಾಗುತ್ತದೆಯೆ? ಎಂಬುದು ಪ್ರಶ್ನೆ. ಅದು ಮಿಥ್ಯೆ ಎಂಬುದಕ್ಕೆ 1977ರ ಚುನಾವಣೆಯೇ ಉದಾಹರಣೆ.

ಕಾದಂಬರಿಕಾರ ಜಾರ್ಜ್ ಆರ್‍ವೆಲ್ ಹೇಳಿದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ‘ಮುದ್ರಣವಾಗಬಾರದು ಎಂದು ಯಾರೋ  ಬಯಸಿದ್ದನ್ನು ಮುದ್ರಿಸುವುದೇ ಪತ್ರಿಕೋದ್ಯಮ. ಉಳಿದದ್ದೆಲ್ಲವೂ  ಸಾರ್ವಜನಿಕ ಸಂಪರ್ಕ ( ಪಬ್ಲಿಕ್ ರಿಲೇಷನ್ಸ್)’. ಈಗ ಈ ಮಾತು ಹೆಚ್ಚು ಪ್ರಸ್ತುತ. ಪತ್ರಿಕೋದ್ಯಮಕ್ಕೂ ಸಾರ್ವಜನಿಕ ಸಂಪರ್ಕಕ್ಕೂ ಇರುವ ವ್ಯತ್ಯಾಸವನ್ನು ಅರಿಯುವುದು ಮುಖ್ಯ.  ಆದರೆ ಪತ್ರಿಕೋದ್ಯಮದ ಬಗ್ಗೆ ರಾಜಕಾರಣಿಗಳ ನಿರೀಕ್ಷೆಯೇ ಬೇರೆ ಎಂಬುದು ಪದೇ ಪದೇ ವ್ಯಕ್ತವಾಗುತ್ತಲೇ ಇದೆ.

ಸವಿಯಾದದ್ದನ್ನಷ್ಟೇ ವರದಿ ಮಾಡದ  ಮಾಧ್ಯಮದವರನ್ನು ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಅವರು  ‘ಪ್ರೆಸ್ಟಿಟ್ಯೂಟ್ಸ್’ ಎಂದು ಜರೆದಿದ್ದರು. ಎಲ್ಲಾ ರಾಜಕೀಯ ಪಕ್ಷಗಳ ಬಹುತೇಕ ರಾಜಕಾರಣಿಗಳಲ್ಲಿ ಮಾಧ್ಯಮದ ಬಗ್ಗೆ ಇಂತಹ ಅಸಹನೆ ಇದ್ದೇ ಇರುತ್ತದೆ.

ನಮ್ಮದೇ  ರಾಜ್ಯದ ಎರಡು ಟ್ಯಾಬ್ಲಾಯ್ಡ್  ಪತ್ರಿಕೆಗಳ ಸಂಪಾದಕರಿಗೆ ಒಂದು ವರ್ಷ ಜೈಲು ಹಾಗೂ ₹ 10,000 ದಂಡ ವಿಧಿಸುವ ಹಕ್ಕುಬಾಧ್ಯತೆಗಳ ಸಮಿತಿ ಶಿಫಾರಸಿಗೆ ರಾಜ್ಯ ವಿಧಾನಸಭೆ ಅನುಮೋದನೆ ನೀಡಿದಂತಹ  ಬೆಳವಣಿಗೆಯೂ ಇದಕ್ಕೆ ಸಾಕ್ಷಿ.

ಮಾಧ್ಯಮಗಳು ಮುಕ್ತವಾಗಿ ಭೀತಿಯಿಲ್ಲದೆ ವರದಿಗಾರಿಕೆ ಮಾಡಬೇಕು ಎಂದು ಕಳೆದ ವರ್ಷ (2016) ರಾಮ್‌ನಾಥ್ ಗೊಯೆಂಕಾ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ‘ಸರ್ಕಾರದಿಂದ ಬರುವ ಟೀಕೆ ಪತ್ರಕರ್ತರಿಗೆ ಗೌರವದ ಪದಕ’ ಎಂದು ಅದೇ ಸಭೆಯಲ್ಲಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆ ಸಂಪಾದಕ ರಾಜ್ ಕಮಲ್ ಝಾ ಹೇಳಿದ್ದರು.

ಆದರೆ, ಯುಪಿಎ ಆಡಳಿತ ಅವಧಿಯಲ್ಲಿ ರಾಜಕೀಯ ಲಾಬಿಯಲ್ಲಿ ಭಾಗಿಯಾಗಿದ್ದ  ಪ್ರಮುಖ ಪತ್ರಕರ್ತರ ಹೆಸರುಗಳನ್ನು ಹೊರಗೆಡಹಿದ ರಾಡಿಯಾ ಟೇಪ್ಸ್ ಹಗರಣ ಭಾರತೀಯ ಪತ್ರಿಕೋದ್ಯಮ ಇತಿಹಾಸದಲ್ಲಿ ನಿರಾಶಾದಾಯಕ ಅಧ್ಯಾಯ. ನಂತರ ಎನ್‌ಡಿಎ ಸರ್ಕಾರದ ಆಡಳಿತ ಅವಧಿಯಲ್ಲಿ  ಮಾಧ್ಯಮ ಸ್ವಾತಂತ್ರ್ಯದ ಪರವಾದ ಕಾಳಜಿಗಿಂತ ರಾಷ್ಟ್ರೀಯತಾವಾದದ ಪರವಾದ ವಾಗ್ವಾದಗಳು ಮೇಲುಗೈ ಪಡೆಯುತ್ತಿರುವುದನ್ನು ಕಾಣುತ್ತಿದ್ದೇವೆ.

ಈ ಮಧ್ಯೆ, 1998ರಲ್ಲಿ ಜನ್ಮ ತಾಳಿದ ಗೂಗಲ್ ಹಾಗೂ 2004ರಲ್ಲಿ ರೂಪುಗೊಂಡ ಫೇಸ್ ಬುಕ್, ಸುದ್ದಿ ಜಾಲದಲ್ಲಿ ಹೊಸದೊಂದು   ಪರಿಸರಕ್ಕೆ ನಾಂದಿ ಹಾಡಿದೆ. 2006ರಲ್ಲಿ ಟ್ವಿಟರ್ ಬಂತು. 140 ಅಕ್ಷರಗಳಿಗೆ ಇಲ್ಲಿ ಸಂದೇಶ ಸೀಮಿತ. ಡಿಜಿಟಲ್ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳು  ಮಾಧ್ಯಮ ಲೋಕದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿರುವ ಕಾಲ ಇದು.

ಶೀಘ್ರವಾಗಿ ಮಾಹಿತಿಯನ್ನು ಅಸಂಖ್ಯ ಜನರಿಗೆ ಪ್ರಸಾರ ಮಾಡುವ ಸಾಮರ್ಥ್ಯ  ಸಾಮಾಜಿಕ ಮಾಧ್ಯಮಗಳಿಗಿವೆ. ಇದು ಬೀರಬಹುದಾದ ಪರಿಣಾಮ ದೊಡ್ಡದು. ಟ್ವಿಟರ್, ಫೇಸ್ ಬುಕ್, ವಾಟ್ಸ್‌ಆ್ಯಪ್ ಹಾಗೂ ಇನ್ನೂ ಅನೇಕ ಅಷ್ಟೇನೂ ಹೆಚ್ಚು ಪರಿಚಿತವಿಲ್ಲದ ಅಸಂಖ್ಯ ಸಾಮಾಜಿಕ ಮಾಧ್ಯಮ ವೇದಿಕೆಗಳು ಮಾಧ್ಯಮ ಸಂಗಮದ (ಮೀಡಿಯಾ ಕನ್‌ವರ್ಜೆನ್ಸ್) ಈ ದಿನಮಾನಗಳಲ್ಲಿ ಮಾಹಿತಿಗಳ ಮೂಲಗಳಾಗಿವೆ.

ಇತ್ತೀಚೆಗೆ ರಾಜಸ್ತಾನದ ಆಳ್ವಾರ್‌ನ ಪೆಹ್ಲು ಖಾನ್  ಮೇಲೆ ಗೋರಕ್ಷಕರು ಆಕ್ರಮಣ ನಡೆಸಿ ಹತ್ಯೆ ಮಾಡಿದ ವಿಡಿಯೊ ದೃಶ್ಯಾವಳಿ ಮೊದಲು ಸುದ್ದಿ ಮಾಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ. ಇಂತಹ ಸಾಕ್ಷ್ಯಗಳು ಲಭ್ಯವಿರದಿದ್ದಲ್ಲಿ ಈ ಘಟನೆಗಳು ಸಾರ್ವಜನಿಕ  ವಲಯದಿಂದಲೇ ಮರೆಯಾಗಿಬಿಡುವ ಸಾಧ್ಯತೆ ಇರುತ್ತಿತ್ತು.

ಏಕೆಂದರೆ ಇಂತಹದ್ದು ಸಂಭವಿಸಿಯೇ ಇಲ್ಲ ಎಂಬುದನ್ನು ಪ್ರತಿಪಾದಿಸುವುದೇ ರಾಜಕೀಯ ಪಕ್ಷಗಳಿಗೆ ಬೇಕಾಗಿರುತ್ತದೆ.  ‘ಅಂತಹ ಘಟನೆ ನಡೆದೇ ಇರಲಿಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಅವರು ರಾಜ್ಯಸಭೆಯಲ್ಲಿ ಹೇಳಿಯೂಬಿಟ್ಟರು. ಆದರೆ, ‘ಇದು ನಡೆಯಲಿಲ್ಲ ಎಂದು ನಕ್ವಿ ಹೇಳುತ್ತಾರೆ’ ಎಂಬ ದೊಡ್ಡ ಶೀರ್ಷಿಕೆ ಅಡಿ  ಮೊದಲ ಪುಟದಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವಿಡಿಯೊ ಚಿತ್ರಗಳನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್ ’ ಪತ್ರಿಕೆ  ಪ್ರಕಟಿಸಿತು. ಆಗ, ‘ಈ ಘಟನೆ ಸಂಬಂಧದಲ್ಲಿ ನ್ಯಾಯ ಒದಗಿಸಲಾಗುವುದು’ ಎಂದು ಹೇಳುವುದು ರಾಜಸ್ತಾನ ಮುಖ್ಯಮಂತ್ರಿಗೆ ಅನಿವಾರ್ಯವಾಯಿತು ಎಂದರೆ ಅದರ ಯಶಸ್ಸು ಸಾಮಾಜಿಕ ಮಾಧ್ಯಮಗಳಿಗೆ ಸಲ್ಲಬೇಕು.

ಹೈಟಿಯಲ್ಲಿ 1.60 ಲಕ್ಷ ಜನರ ಸಾವಿಗೆ ಕಾರಣವಾದ 2010ರ ಭಾರಿ ಭೂಕಂಪದ ಸಂದರ್ಭದಲ್ಲಿ  ಮಾಹಿತಿ ಕೊರತೆಯನ್ನು  ಟ್ವಿಟರ್‌ನಿಂದ ತುಂಬಲು ಸಾಧ್ಯವಾಗಿತ್ತು.  ಏಕೆಂದರೆ ತೊಂದರೆಗೊಳಗಾದ ಪ್ರದೇಶದಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಹೆಚ್ಚಿರಲಿಲ್ಲ. ಈ ಪ್ರಕ್ರಿಯೆಗೆ ‘ಟ್ವಿಟರ್ ಎಫೆಕ್ಟ್’ ಎಂದು ಹೆಸರಾಯಿತು.

ತುರ್ತು ಪರಿಸ್ಥಿತಿ ಅಥವಾ ವಿಪತ್ತು ಸಂದರ್ಭಗಳಲ್ಲಿ ಘಟನಾಸ್ಥಳದ ಮಾಹಿತಿ ಹಂಚಿಕೆ, ರಕ್ಷಣಾ ಕಾರ್ಯಾಚರಣೆಗಳಿಗೆ ನೆರವು ಒದಗಿಸುತ್ತದೆ.  2008ರ ನವೆಂಬರ್ 26ರಂದು  ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ತತ್‌ಕ್ಷಣದ ಬೆಳವಣಿಗೆಗಳನ್ನು ಟ್ವಿಟರ್ ಬಳಕೆದಾರರು ಟ್ವೀಟ್‌ಗಳಲ್ಲಿ ರವಾನಿಸಿದ್ದರು. ಪ್ರತಿ 5 ಸೆಕೆಂಡ್‌ಗಳಿಗೆ 70 ಟ್ವೀಟ್‌ಗಳು ರವಾನೆಯಾಗಿದ್ದವು ಎಂಬುದು ಒಂದು ಅಂದಾಜು.

ಇಂತಹ ಸಾಮಾಜಿಕ ಮಾಧ್ಯಮ ಕ್ರಾಂತಿ ಜಾಗತಿಕವಾಗಿ ಮಾಹಿತಿ ಪ್ರಸಾರದ ವಿನ್ಯಾಸವನ್ನೇ ಬದಲಿಸಿದೆ. ಪ್ರಜೆಗಳು ಹಾಗೂ ಸರ್ಕಾರದ ಮಧ್ಯದ ಬಾಂಧವ್ಯವನ್ನು ಬದಲಿಸಿದೆ. ಸ್ಥಳೀಯ ವಿಚಾರಗಳು ಜಾಗತಿಕ ಕಾಳಜಿಯ ವಿಚಾರಗಳಾಗಿ ಪರಿವರ್ತಿತವಾಗುವುದಕ್ಕೆ ಅವಕಾಶವಾಗುತ್ತಿದೆ.  ಸುದ್ದಿಯನ್ನೀಗ ವರದಿಗಾರ ಮಾತ್ರ ಸಂಗ್ರಹಿಸುವುದಿಲ್ಲ. ಸುದ್ದಿ ಗ್ರಾಹಕರಾಗಿದ್ದ ಜನರೂ ಇಂದು ಸುದ್ದಿ ಪ್ರಸಾರಕರಾಗುತ್ತಿದ್ದಾರೆ.

ಪಾರಂಪರಿಕ ಮಾಧ್ಯಮದಲ್ಲಿ ಸುದ್ದಿ ಹಾಗೂ ಸುದ್ದಿ ವರ್ತುಲವನ್ನು ನಿರ್ಧರಿಸುವವರು ಶ್ರೇಣೀಕೃತ ವ್ಯವಸ್ಥೆಯಲ್ಲಿನ ಸುದ್ದಿ ಕಾವಲುಗಾರರಾಗಿರುತ್ತಿದ್ದರು. ಈ ಪಾರಂಪರಿಕ ದೃಷ್ಟಿಕೋನವನ್ನು ಸಾಮಾಜಿಕ ಮಾಧ್ಯಮಗಳು ಪ್ರಶ್ನಿಸುತ್ತಿವೆ. ಆದರೆ ಇಲ್ಲೊಂದು ಸಮಸ್ಯೆಯೂ ಇದೆ.

ವೃತ್ತಿಪರ ಸುದ್ದಿ ಸಂಗ್ರಹದಲ್ಲಿರುವ ಉತ್ತರದಾಯಿತ್ವ ಇಲ್ಲಿರುವುದು ಸಾಧ್ಯವಿಲ್ಲ.  ಹಲವು ಮಾಹಿತಿಗಳು ತಪ್ಪು ವರದಿಗಳೂ ಆಗಿರಬಹುದು. ಇದು  ಉದ್ದೇಶಪೂರ್ವಕವಾಗಿರಬಹುದು ಅಥವಾ ಆಗಿರದೆಯೂ ಇರಬಹುದು. ಆದರೆ ಸುದ್ದಿ ವರ್ತುಲದೊಳಗೆ ಇವು ಸೇರಿಕೊಂಡು ಬಿಡುತ್ತವೆ ಎಂಬುದು ಆತಂಕಕಾರಿ ಸಂಗತಿಯೂ ಆಗುತ್ತದೆ. 

‘ಕಲ್ಲು ತೂರುವವನನ್ನು ಸೇನೆಯ ಜೀಪಿನ ಮುಂಭಾಗಕ್ಕೆ ಕಟ್ಟುವ ಬದಲಿಗೆ ಅರುಂಧತಿ ರಾಯ್‌ ಅವರನ್ನು ಕಟ್ಟಿ!’ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಸಂಸದ ಪರೇಶ್ ರಾವಲ್ ಇತ್ತೀಚೆಗೆ  ಹೊಸ ವಿವಾದ ಹುಟ್ಟು ಹಾಕಿದ್ದನ್ನು ಸ್ಮರಿಸಿಕೊಳ್ಳಬಹುದು. ಪರೇಶ್ ರಾವಲ್ ಅವರ ಈ ಟ್ವೀಟ್‌ಗೆ ಕಾರಣವಾದದ್ದು ಕಾಶ್ಮೀರ ಹಾಗೂ ಭಾರತೀಯ ಸೇನೆ ಕುರಿತಂತೆ ಲೇಖಕಿ ಅರುಂಧತಿ ರಾಯ್ ಸಂದರ್ಶನವೊಂದರಲ್ಲಿ ನೀಡದ್ದರೆನ್ನಲಾದ ಹೇಳಿಕೆ.

ಅಂತರ್ಜಾಲದಲ್ಲಿ ಹರಿದಾಡಿದ ಈ ಕಲ್ಪಿತ ಸಂದರ್ಶನವನ್ನು  ಭಾರತದ ನೀತಿಗಳನ್ನು ವಿರೋಧಿಸುವುದಕ್ಕಾಗಿ ಪಾಕಿಸ್ತಾನದಲ್ಲಿ ಬಳಸಿಕೊಳ್ಳಲಾಯಿತು. ಹಾಗೆಯೇ ಮೋದಿಯವರನ್ನು ವಿಮರ್ಶಿಸುವವರ ವಿರುದ್ಧ ಅಸ್ತ್ರವನ್ನಾಗಿ ಭಾರತದಲ್ಲಿ ಹಿಂದುತ್ವ ಪರ ಸಮೂಹ ಮಾಧ್ಯಮಗಳು ಈ ಸುಳ್ಳುಸುದ್ದಿಯನ್ನು ಬಳಸಿಕೊಂಡವು.

ವಿಶ್ವಾಸಾರ್ಹ ಸುದ್ದಿ ಸಂಗ್ರಹದಲ್ಲಿ ಹೆಚ್ಚಿನ ಪಾತ್ರ ಇರದ ಪಾತ್ರಧಾರಿಗಳು ಮಾಧ್ಯಮ ನಿರೂಪಣೆ ಅಥವಾ ಸಂವಾದದ ರೂಪುರೇಷೆಗಳನ್ನು ನಿರ್ಧರಿಸಲು ಅವಕಾಶ ಮಾಡಿಕೊಡುವಂತಹ ಇಂತಹ ಬೆಳವಣಿಗೆಗಳು ಸೃಷ್ಟಿಸಬಹುದಾದ ಅನಾಹುತ ದೊಡ್ಡದು. ಇಂತಹ ಮಾಹಿತಿ ಸ್ಫೋಟದ ಸರಿ ತಪ್ಪುಗಳನ್ನು ಪರಿಶೀಲಿಸುವುದೇ  ಪತ್ರಿಕೋದ್ಯಮದ ಇಂದಿನ ದೊಡ್ಡ ಸವಾಲು.

ಜಾಹೀರಾತುದಾರರಿಗೆ ಆಕರ್ಷಕವಾಗುವಂಥ ಸ್ಟೋರಿಗಳಿಗೆ ಪ್ರಾಮುಖ್ಯ ನೀಡುವ ‘ಕ್ಲಿಕ್ ಬೇಟ್’ಗಳ ಮೂಲಕ ಕ್ಷುಲ್ಲಕೀಕರಣ, ವಾಣಿಜ್ಯೀಕರಣದ ಆಯಾಮಗಳೂ ಸಾಮಾಜಿಕ ಮಾಧ್ಯಮಗಳಲ್ಲಿವೆ.

ಘಟನೆ ನಡೆಯುತ್ತಿದ್ದ ಹಾಗೆಯೇ 140 ಅಕ್ಷರಗಳಲ್ಲಿ ಬರುವ ಹೊಸ ಸುದ್ದಿಗಳಿಂದ  ಸಾಮಾಜಿಕ ವಾಸ್ತವಗಳನ್ನು  ಪರಿಪೂರ್ಣವಾಗಿ ಅರಿತುಕೊಳ್ಳಲು ಸಹಾಯಕವಾಗದು. ಬಹಳಷ್ಟು ಸಂದರ್ಭದಲ್ಲಿ  ಅಭಿಪ್ರಾಯಗಳನ್ನು ಧ್ರುವೀಕರಿಸಲು ಹಾಗೂ ಸಾಮಾಜಿಕ ವೈಷಮ್ಯ ಸೃಷ್ಟಿಸಲೂ  ದುರ್ಬಳಕೆಯಾಗುತ್ತಿರುವುದನ್ನು ಇಂದು ನಾವು ಕಾಣುತ್ತಿದ್ದೇವೆ. ನಂತರ ನಡೆಯುವ ಸಾರ್ವಜನಿಕ ವಾಗ್ವಾದದ ಒರಟುತನ, ಹಿಂಸಾತ್ಮಕತೆ  ಆತಂಕಕಾರಿಯಾದುದು. ಪ್ರಚೋದನಾತ್ಮಕ ಹ್ಯಾಷ್‌ಟ್ಯಾಗ್‌ಗಳನ್ನು ಪ್ರಜ್ಞಾಪೂರ್ವಕವಾಗಿ ಬಳಸಲಾಗುತ್ತದೆ.

ಅದು ದಿನದ ವಾಗ್ವಾದದ ಕೇಂದ್ರ ಬಿಂದುವಾಗಬೇಕೆಂಬ ಉದ್ದೇಶ ಇರುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರಮಣಕಾರಿ ಕಾರ್ಖಾನೆಯೇ ಎದ್ದುನಿಲ್ಲುತ್ತದೆ. ಈ ಆಕ್ರೋಶದ ಬೆಂಕಿಗೆ ಟೆಲಿವಿಷನ್ ಸುದ್ದಿಗಳು ದನಿಯಾಗುತ್ತವೆ. ಬೆಂಗಳೂರಿನಲ್ಲಿ ಸಿಡಿಎಲ್ ಸಂಸ್ಥೆ ಹಾಗೂ ನವದೆಹಲಿಯ ನ್ಯಾಷನಲ್ ಫೌಂಡೇಷನ್ ಫಾರ್ ಇಂಡಿಯಾ ಸಹಭಾಗಿತ್ವದಲ್ಲಿ ಕಳೆದ ವಾರ ಆಯೋಜಿಸಿದ್ದ ‘ಸೋಷಿಯಲ್ ಮೀಡಿಯಾ ಇನ್ ನ್ಯೂಸ್‌ರೂಮ್ಸ್’ ವಿಚಾರ ಸಂಕಿರಣದಲ್ಲಿ ಸಾಮಾಜಿಕ ಮಾಧ್ಯಮಗಳ ಕುರಿತಾದ ಈ ಎಲ್ಲಾ ಆಯಾಮಗಳೂ ಚರ್ಚೆಗೆ ಒಳಗಾದವು.

ಜುಲೈ 1ರಂದು ಪತ್ರಿಕಾ ದಿನ ಆಚರಣೆಗೆ ರಾಜ್ಯ ಸಜ್ಜಾಗುತ್ತಿದೆ. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ 1843ರ ಜುಲೈ 1ರಂದು ಪ್ರಕಟಣೆ ಆರಂಭಿಸಿತು. ಇದರ ಸ್ಮರಣಾರ್ಥ ನಡೆಯುವ ಆಚರಣೆ ಇದು. ಈ ಸಂದರ್ಭದಲ್ಲಿ ನಾವು ಆಲೋಚನೆ ಮಾಡಬೇಕಾದ ಸಂಗತಿಗಳಿವೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2017ರ ಪ್ರಕಾರ, 180 ರಾಷ್ಟ್ರಗಳ ಪೈಕಿ ಭಾರತ 136ರ ಕೆಳಗಿನ ಸ್ಥಾನದಲ್ಲಿದೆ.

ಇದು  ಭರವಸೆ ಹುಟ್ಟಿಸುವ ಸಮಾಚಾರವಲ್ಲ. ಮಾಧ್ಯಮಗಳ ನಿಯಂತ್ರಣ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಂತಹದ್ದು ಎಂಬುದನ್ನು ನಮ್ಮನ್ನು ಆಳುವವರು ಅರಿಯಬೇಕು. ಜೊತೆಗೆ ಅಧಿಕಾರದಲ್ಲಿರುವವರನ್ನು ಉತ್ತರದಾಯಿಗಳಾಗಿಸುವ ನಿರಂತರ ‘ಕಾವಲುನಾಯಿ’ಗಳಾಗಿ ಮಾಧ್ಯಮ ಕಾರ್ಯ ನಿರ್ವಹಿಸಬೇಕಿದೆ.

ಕಪ್ಪು-ಬಿಳುಪು ಎಂಬ ಎರಡು ಧ್ರುವಗಳಲ್ಲಿ ವಿಚಾರ ಮಂಡನೆಗಳು, ವಾಗ್ವಾದಗಳು ಸಿಲುಕಿಕೊಳ್ಳಬಾರದು. ಬಹುನೆಲೆಗಳಲ್ಲಿ ನಡೆಯುವ ವಾಗ್ವಾದಗಳು ಹೊಸಬೆಳಕು ನೀಡುತ್ತವೆ. ಪ್ರಜಾಪ್ರಭುತ್ವದ ಬಲವರ್ಧನೆಗೆ ಇಂತಹ ವಾಗ್ವಾದಗಳನ್ನು ಕಟ್ಟಿಕೊಡುವುದು ಮಾಧ್ಯಮಗಳ ಹೊಣೆಗಾರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT