ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕ್ಸ್‌ವಾದದ ಸುತ್ತ ಒಂದು ಸುತ್ತು

Last Updated 18 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸೈಕಲ್ ಮೇಲೆ ಪುಸ್ತಕ ಹೇರಿಕೊಂಡು ಮನೆ ಮನೆಗೆ ಪುಸ್ತಕ ಮಾರಿದ ಗುಲ್ಬರ್ಗದ ಪ್ರಭಾಕರ ಕಾಂತಾ ಅವರು ಸತ್ತಾಗ ಅವರ ಮನೆಯವರ ನೆರವಿಗೆ ಬರಲು ಮಿತ್ರರು ನಿರ್ಧರಿ ಸಿದ್ದರು.  ಅವರು  ಸಂಗ್ರಹಿಸಿದ ಪುಸ್ತಕಗಳನ್ನು ಮಾರಾಟ ಮಾಡಲು ಆಗಸ್ಟ್ 15ರಂದು ಸಾಹಿತ್ಯ ಪರಿಷತ್ ಸಭಾಂಗಣದ ತುಂಬಾ ಹರಡ­ಲಾಗಿತ್ತು. ಕಾಂತಾ ಅವರ ಬಗ್ಗೆ ಯೋಚನೆಗಳು ಹರಿದವು. ಹೀಗೆ ಮನೆ---, ಮಠ ಬಿಟ್ಟು ಜನರಿಗೆ ವಿಚಾರ ಮುಟ್ಟಿಸಬೇಕೆಂಬ ಬದ್ಧತೆಯನ್ನು ಕಲಿಸಿದ್ದಾದರೂ ಯಾರು?

ಸಭೆ ಸಮಾರಂಭ­ಗಳು ನಡೆಯುವ ಜಾಗಗಳಲ್ಲಿ ವೈಚಾರಿಕ ಪುಸ್ತಕ­ಗಳನ್ನು ಮಾರುತ್ತಾ ಮಾತಿಲ್ಲದೆ ಮೌನವಾಗಿ ತನ್ನ ಪ್ರತಿಭಟನೆಯನ್ನು ಸೂಚಿಸುವ ಅಮೃತ್, ರೈತರ ಹೋರಾಟಕ್ಕಾಗಿ ಜೈಲುವಾಸ ಅನುಭವಿ­ಸುವ ಅನಸೂಯಮ್ಮ, ಹೆಣ್ಣುಮಕ್ಕಳ ಸಮಸ್ಯೆಗೆ ಟೊಂಕಕಟ್ಟಿ ನಿಲ್ಲುವ ನೀಲಾ, ದೇವದಾಸಿ ಹೆಣ್ಣುಮಕ್ಕಳ ಜೊತೆ ದುಡಿಯುವ ಭಾಗ್ಯಲಕ್ಷ್ಮಿ, ಪೌರ ಕಾರ್ಮಿಕರನ್ನು ಸಂಘಟಿಸುವ ದು.ಸರಸ್ವತಿ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಾವುದೋ ಕೂಗು ಇವರೆಲ್ಲ­ರನ್ನೂ   ಜನಮಾನಸದ ಸಂಕಟಗಳಿಗೆ ಮಿಡಿಯು ವಂತೆ ಮಾಡಿದೆ.

ಕಾವ್ಯವೆಂದರೆ ಕೋಗಿಲೆಯಂತೆ ಉಲಿ­ದಾಡದೆ, ‘ಇಕ್ರಲಾ ವದಿರ್ಲಾ’ ಎಂದು ಅಬ್ಬರಿಸಿದಾಗ,  ‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ, ನಮ್ಮವರೇ ಹದಹಾಕಿ ತಿವಿದರದು ಹೂವೆ’ ಎಂದು ಹೇಳುತ್ತಾ ಪಶ್ಚಿಮ ಘಟ್ಟಗಳಲ್ಲಿ ದನಿ ಮೊಳಗಿಸಿದಾಗ, ‘ಖಡ್ಗವಾಗಲಿ ಕಾವ್ಯ’ ಎಂದಾಗ, ‘ಬದುಕಿಗಾಗಿ ಕಲೆ’ ಎಂದು ಸಮು­ದಾಯ ಕಟ್ಟಿಕೊಂಡಾಗ, ಅಲೆಮಾರಿ­ಗಳಿಗೂ ಒಂದು ಸೂರು ಬೇಕೆಂದು ಬಯಸುವಾಗ ಆಳದಲ್ಲಿ ಚಿಂತನೆಯೊಂದು ಹರಿದಾಡಿದೆ.

ರಾಜ ಮಹಾರಾಜರ ಗುಣಗಾನವೇ ಚರಿತ್ರೆ­ಯಲ್ಲ,  ಪಂಪ–ರನ್ನರು ಮೆರೆದದ್ದು ಮಾತ್ರ ಕಾವ್ಯವಲ್ಲ, ಜನಪದರ ನಾಲಗೆಯಲ್ಲಿ ಕಾವ್ಯ­ವಿದೆಯೆಂದು ಕಿವಿಗೊಟ್ಟು ಆಲಿಸಿದ ವಿದ್ವಾಂಸ­ರನ್ನು ವಿಚಾರವೊಂದು ಕೈಹಿಡಿದು ಮುನ್ನಡೆ­ಸುತ್ತಿದೆ. ಸುಮಾರು 150 ವರ್ಷಗಳಿಂದ ತಿಳಿದೋ ತಿಳಿಯದೆಯೋ ಜಗತ್ತಿನಾದ್ಯಂತ ಜನ  ಮೆಚ್ಚಿದ ಅಥವಾ ವಿರೋಧಿಸಿದ ಸಿದ್ಧಾಂತವೇ ಮಾರ್ಕ್ಸ್‌ವಾದ. ಆ ವೇಳೆಗಾಗಲೇ ಅಸ್ತಿತ್ವದಲ್ಲಿದ್ದ ಸಮಾಜವಾದ­ವನ್ನು ಆದರ್ಶದ ನೆಲೆಯಲ್ಲಿ ಉಳಿಸದೇ ಅದನ್ನು ಉತ್ಕರ್ಷಕ್ಕೆ ತೆಗೆದುಕೊಂಡು ಹೋಗಲು ಮಾರ್ಕ್ಸ್‌ನಿಗೆ ಸಾಧ್ಯವಾಗಿತ್ತು. ಮಾರ್ಕ್ಸ್‌ನ ಚಿಂತನೆಗಳು ಜಗತ್ತಿನ ಚರಿತ್ರೆಯ ನೆಲೆಗಟ್ಟಿನ ಮೇಲೆ ಹುಟ್ಟಿದ್ದವು. ಕೈಗಾರಿಕಾ ಕ್ರಾಂತಿ ತಂದೊ ಡ್ಡಿದ ಸಾಮಾಜಿಕ ಪಲ್ಲಟಗಳು ಯೂರೋಪಿನ ಸಮಾಜದಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟು­ಹಾಕಿತ್ತು. 

ಆ ವೇಳೆಗಾಗಲೇ ಯೂರೋಪ್‌ನ ರಾಷ್ಟ್ರಗಳು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ­ದಲ್ಲಿ ವಸಾಹತುಗಳನ್ನು ಹೊಂದಿದ್ದವು.  ಅಲ್ಲಿಂದ ಬಂದ ಸಂಪತ್ತಿನಿಂದ ಮೆರೆಯುತ್ತಿದ್ದವು. ಆ ಪೈಪೋಟಿಯಿಂದ ಸದಾ ಜಗಳವಾಡುತ್ತಿದ್ದವು. ಸುಲಿಗೆಯೇ ಆದರ್ಶವಾಗಿದ್ದ ಕಾಲ ಅದಾಗಿತ್ತು. ಸಂಪತ್ತಿನ ಒಡೆತನಕ್ಕಾಗಿ ನಡೆಯುವ ಕಚ್ಚಾಟ, ಶೋಷಣೆ, ಅಸಮಾನ ಸಮಾಜ ಇದರ ವಿರುದ್ಧವಾಗಿ ಮಾರ್ಕ್ಸ್‌ನ ಚಿಂತನೆ ನಡೆದಿತ್ತು. ಶೋಷಿತರ ಪರವಾಗಿ ಆಲೋಚನೆ ಮತ್ತು ಹೋರಾಟಗಳೆರಡನ್ನೂ ಮಾರ್ಕ್ಸ್‌ ಮತ್ತು ಏಂಗಲ್ಸ್‌ ಕಟ್ಟತೊಡಗಿದ್ದರು. ಆಲೋಚನೆಯ ತೀವ್ರತೆ ರಾಷ್ಟ್ರಗಳ ಗಡಿಯನ್ನು ಮೀರಿ ಮನು­ಕುಲದ ಏಳಿಗೆಯನ್ನು ಕುರಿತು ಚಿಂತಿಸುವಂತೆ ಮಾಡಿತು. ‘ಜಗತ್ತಿನ ಕಾರ್ಮಿಕರೇ ಒಂದಾಗಿ’ ಎಂದಾಗ   ಧರ್ಮ, ಭಾಷೆ, ದೇವರು, ಎಲ್ಲಾ ಗಡಿಗಳನ್ನು ಮೀರಲು ಮಾರ್ಕ್ಸ್‌ಗೆ ಸಾಧ್ಯ­ವಾಗಿತ್ತು. ಮಾರ್ಕ್ಸ್‌ವಾದ ಬಹು ಬೇಗನೆ ರಾಜಕೀಯ ಚಿಂತನೆಯಾಗಿ ರೂಪಪಡೆಯಿತು. ವಸಾಹತುಗಳನ್ನು ಹೊಂದಿದ್ದ ರಾಷ್ಟ್ರಗಳು ಮಾರ್ಕ್ಸ್‌ವಾದದ ವಿರುದ್ಧ  ಕತ್ತಿ ಮಸೆಯ­ತೊಡಗಿದವು. ಹಾಗಾಗಿ ರಾಜಕೀಯ ವೇದಿಕೆ­ಯಾಗಿ ಮಾರ್ಕ್ಸ್‌ವಾದ ಭಾರತಕ್ಕೆ ಬಂದಾಗ ಬ್ರಿಟಿಷ್ ಸರ್ಕಾರ ಅದನ್ನು ತಹಬಂದಿಯಲ್ಲಿ ಇರಿಸಿತ್ತು.

ಆದರೆ ಯಾವುದೇ ಚಿಂತನೆಯನ್ನು ತಡೆಹಿಡಿ­ಯಲು ಸಾಧ್ಯವಾಗದು, ಅದು ಪರಿಮಳದಂತೆ ಹರಡುತ್ತದೆ ಎನ್ನುವುದಕ್ಕೆ ಮಾರ್ಕ್ಸ್‌ವಾದವೂ ಉತ್ತಮ ಸಾಕ್ಷಿ. ವಸಾಹತು ಹಿತಾಸಕ್ತಿಗೆ ಕೊಡಲಿಯಾಗಬಹುದೆಂಬ ಹೆದರಿಕೆಯಿಂದ ಬ್ರಿಟಿಷರು ತಡೆಗೋಡೆಯೊಡ್ಡುವ ನಿರಂತರ ಯತ್ನದಲ್ಲಿದ್ದರು. ಮಾನವೀಯವಾದ ಚಿಂತನೆ­ಗಳಿಗೆ ಪ್ರತಿರೋಧ ಈ ನಾಡಿನಲ್ಲಿ ಹೊಸದೇನೂ ಅಲ್ಲ. ಅಷ್ಟೊತ್ತಿಗಾಗಲೇ ಬುದ್ಧನ ವಿಚಾರಧಾರೆ­ಯನ್ನು ದೂರ ತಳ್ಳಲಾಗಿತ್ತು. ಅಂತಹದೇ ಮತ್ತೊಂದು ವಿಚಾರಧಾರೆ ಒಳಹೊಕ್ಕಾಗ ಸ್ಥಾಪಿತ ಮೌಲ್ಯಗಳಿಗೆ ಉಸಿರು ಕಟ್ಟಿದಂತಾಗಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ೧೯೨೦ರ ದಶಕದ ಹೊತ್ತಿಗೆ ಮಾರ್ಕ್ಸ್‌ವಾದ ರಾಜಕೀಯ ಪಕ್ಷವಾಗಿ ಭಾರತವನ್ನು ಪ್ರವೇಶಿಸುವ ಮುನ್ನಾ ಆದರ್ಶದ ಅದರ ಕಂಪು ಭಾರತವನ್ನು ತಲುಪಿತ್ತು. ಈ ಚಿಂತನೆ ಬಹುಶಃ  ಮಾರ್ಕ್ಸ್‌ನಷ್ಟೇ ಹಳೆಯದು.

ಏಕೆಂದರೆ ದಾದಾಭಾಯಿ ನವರೋಜಿಯವರು ಅವರ ಸಮಕಾಲೀನರಾಗಿದ್ದರು ಮತ್ತು ನೇರವಾಗಿ ಅವರೆಲ್ಲೂ ಮಾರ್ಕ್ಸ್‌ ಅಥವಾ ಏಂಗಲ್ಸರ ಹೆಸರನ್ನು ಹೇಳದಿದ್ದರೂ ಅವರು ಮಾರ್ಕ್ಸ್‌ವಾದಿಯೇ ಆಗಿದ್ದರು ಎನ್ನುವುದು ಅವರ ಬರಹಗಳಿಂದ ಸ್ಪಷ್ಟವಾಗುತ್ತದೆ. ೧೯೩೦ರ ಹೊತ್ತಿಗೆ ಜವಾಹರಲಾಲ್‌ ನೆಹರೂ, ಸುಭಾಷ್‌ ಚಂದ್ರ ಬೋಸ್‌ರಂತಹ ಕಟ್ಟಾ ಮಾರ್ಕ್ಸ್‌ವಾದಿ­ಗಳು  ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ಹುಟ್ಟುಹಾಕಿದ್ದು ಭಾರತದಲ್ಲಿ ಕಮ್ಯುನಿಸ್ಟರ ಹಿನ್ನಡೆಗೂ ಕಾರಣವಾಯಿತು.

ಭಾರತದಲ್ಲಿ ಶತಮಾನಗಳಿಂದ ಸಾಧಿಸಿದ್ದ ಹತ್ತಿ ಬಟ್ಟೆ ನೇಯ್ಗೆ ನಾಶವಾಗಿ ಕೈಗಾರಿಕಾ ಬೆಳವಣಿಗೆಗೇ ತೊಡಕಾಗಿದ್ದರಿಂದ ಕೈಗಾರಿಕಾ ಕ್ರಾಂತಿ ಭ್ರಮೆಯೇ ಆಗಿತ್ತು. ಆದ್ದರಿಂದ ಬಂಡ­ವಾಳಶಾಹಿ ವಿರುದ್ಧವಾದ ಕಾರ್ಮಿಕ ಹೋರಾಟ-­ಕ್ಕಿಂತ ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಹೋರಾ­ಟವೇ ಕಾಂಗ್ರೆಸ್‌ಗೆ  ಮುಳುವಾಗಿತ್್ತು. ಗಾಂಧಿ  ನೆಲೆಯ ಅಹಿಂಸಾ ಹೋರಾಟ ಶಸ್ತ್ರಸಜ್ಜಿತ ಹೋರಾಟಕ್ಕಿಂತ ಹೆಚ್ಚು ಪ್ರಸ್ತುತವಾ­ಗತೊಡ ಗಿತು. ಗಾಂಧಿ ಹೋರಾಟದ ಮಾರ್ಗಗ­ಳೆಲ್ಲವೂ ಮಾರ್ಕ್ಸ್‌ವಾದಕ್ಕೆ ವಿರುದ್ಧವೇ ಆಗಿದ್ದವು.

ಇನ್ನು ಅಂಬೇಡ್ಕರ್  ಅವರು ಮಾರ್ಕ್ಸ್‌ವಾದ­ವನ್ನು ನಂಬಿದ್ದರೂ ಮಾರ್ಕ್ಸ್‌ವಾದಿಗಳನ್ನು ನಂಬಲಿಲ್ಲ. ಜಾತಿ ನೆಲೆಯ ಪ್ರಶ್ನೆಗಳು ಆ ಕಾಲದ ಮಾರ್ಕ್ಸ್‌ವಾದಿಗಳ ಪ್ರಮುಖ ಪ್ರಶ್ನೆಯಾಗಿ­ರಲಿಲ್ಲ. ದಲಿತ ಸಮಸ್ಯೆಗಿಂತ ಅದನ್ನು ಕಾರ್ಮಿಕ ಸಮಸ್ಯೆಯಾಗಿ ನೋಡಿದ್ದರು. ಅದೇ ಅಂಬೇಡ್ಕರ್‌ ಅವರು ಕಾರ್ಮಿಕರನ್ನು ದಲಿತರಾಗಿ ಕಂಡರು. ಕಮ್ಯುನಿಸ್ಟರು ಬಳಸುತ್ತಿದ್ದ  ಬೂರ್ಜ್ವಾ,- ಪ್ರಾಲಿಟ­ರೇಟ್, ಫ್ಯೂಡಲಿಸಂ ಇಂತಹ ಅರ್ಥವಾಗದ ಪದಗಳ ಬಳಕೆ ಜನಸಾಮಾನ್ಯರಿಗೆ ಕಮ್ಯುನಿಸ್ಟ­ರಿಂದ ದೂರವೇ ಉಳಿಯುವಂತೆ ಮಾಡಿತು. ಆದರೂ ಭಾರತದ ಕಮ್ಯುನಿಸ್ಟ್ ಪಕ್ಷದ ಏಳು ಬೀಳನ್ನು ನೋಡಲು ಹೊರಟರೆ ಎಸ್.ಎ.­ಡಾಂಗೆ, ಎಂ.ಎನ್.ರಾಯ್, ನಂಬೂದರಿ­ಪಾಡ್, ಜ್ಯೋತಿ ಬಸು ಇವರನ್ನೆಲ್ಲಾ ನೆನೆಯ­ಬೇಕಾಗುತ್ತದೆ.

ಮಾರ್ಕ್ಸ್‌ವಾದ ಭಾರತದ ಬದುಕನ್ನು ರೂಪಿಸಿದೆ ಎಂದರೆ ಕೆಲವರು ಗುಮಾನಿಯಿಂದ ನೋಡಬಹುದು. ಆದರೆ ವೀರ ಸಾವರ್ಕರ್ ಅಂತಹವರು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಕೃತಿಯನ್ನು ಬರೆದಾಗ ಇಂತಹ ಆಲೋಚನೆ ಅದಕ್ಕೆ ಕಾರಣವಾಗಿತ್ತು. ಹೊರಗಿನ ಚಿಂತನೆಗಳಿಗೆ ಬಂಗಾಳದ ವಿದ್ವಾಂ ಸರು ಉಳಿದ ಪ್ರದೇಶಗಳಿಗಿಂತ  ಮೊದಲು ಸ್ಪಂದಿಸಿದ್ದಾರೆ. ಟ್ಯಾಗೋರರು ರಾಷ್ಟ್ರೀಯತೆ­ಯನ್ನು ಪ್ರಶ್ನಿಸುವಷ್ಟು ವಿಶಾಲ ದೃಷ್ಟಿಯನ್ನು ಬೆಳೆಸಿಕೊಂಡಿದ್ದರು. ಅದೇ ರೀತಿ ಹಿಂದಿ ಸಾಹಿತ್ಯದ ಪ್ರೇಮ್‌ಚಂದರಿಗೆ ಮಧ್ಯಕಾಲೀನ ಸಮಾಜದ ಮೌಲ್ಯಗಳನ್ನು ತಮ್ಮ ಕಥೆಗಳಲ್ಲಿ ಸೆರೆಹಿಡಿಯಲು ಸಾಧ್ಯವಾಗಿತ್ತು.

ಕನ್ನಡ ನಾಡಿಗೆ ಮಾರ್ಕ್ಸ್‌ವಾದ ಮುಂಬೈ ಕರ್ನಾಟಕ ಇಲ್ಲವೇ ಕೇರಳದ ಕಡೆಯಿಂದ ಪ್ರವೇಶವನ್ನು ಪಡೆದಿರಬೇಕು. ೧೯೩೦ರ ಆಸುಪಾಸಿನಲ್ಲೇ ಉತ್ತರ ಕರ್ನಾಟಕದಲ್ಲಿ ನೇಕಾರರ ಹೋರಾಟ, ಕೃಷಿ ಕೂಲಿಕಾರ್ಮಿಕರ ಹೋರಾಟ ನಡೆದದ್ದನ್ನು ಗಮನಿಸಲಾಗಿದೆ. ಕಿಸಾನ್ ಸಭಾದ ಭಾಗವಾಗಿ ರೈತ ಹೋರಾಟ­ಗಳು ಈ ಪ್ರದೇಶದಲ್ಲಿ ಆರಂಭವಾಗಿವೆ. ಉಪಾ­ಧ್ಯಾಯ ಸೋದರರು, ದಕ್ಷಿಣ ಕನ್ನಡದಲ್ಲಿ ಕಕ್ಕಿ ಲ್ಲಾಯ, ಸಿಂಪ್ಸನ್, ಕೆ.ಆರ್. ಶ್ರೀಯಾನ್‌­ರನ್ನು ನೆನೆಯಬೇಕಾಗುತ್ತದೆ. ಒಟ್ಟಾರೆ ಕರ್ನಾ­ಟಕದ ಎಡಪಂಥೀಯ ಕಾರ್ಮಿಕ ರೈತ ಹೋರಾಟ­ಗಳನ್ನು ಸಂಘಟಿಸುವಲ್ಲಿ ಎಂ.ಎಸ್‌.­ಕೃಷ್ಣನ್, ಸೂರ್ಯನಾರಾಯಣ ರಾವ್, ಎಂ.ಎಚ್‌.­ರಾಮರಾವ್ ಇವರ ಪಾತ್ರ ಬಹಳ ಮುಖ್ಯ. ಕೋಲಾರದ ಗಣಿಯಿಂದಾಗಿ ಆರಂಭದ ದಿನಗಳಿಂದ ಕಾರ್ಮಿಕ ಹೋರಾಟ ಅಲ್ಲಿ ಬೆಳೆದು ಬಂದಿದೆ. ಇಷ್ಟಾಗಿಯೂ ಕರ್ನಾಟಕದಲ್ಲಿ ಎಡ­ಪಂಥೀಯ ಹೋರಾಟ ಸಾಮಾಜಿಕ ಕಾಳಜಿಗಾಗಿ ಹೋರಾಡುವ ಚಳವಳಿಯ ರೂಪವನ್ನು ಪಡೆದಿ­ದೆಯೇ ಹೊರತು ರಾಜಕೀಯ ಪಕ್ಷವಾಗಿ ಚುನಾ­ವಣಾ ರಾಜಕೀಯಕ್ಕೆ ಸಿದ್ಧವಾಗಲಿಲ್ಲ.

ಆಗಾಗ್ಗೆ ತನ್ನ ಪ್ರಾತಿನಿಧ್ಯವನ್ನು ಪಡೆದಿದೆ­ಯಾದರೂ ತನ್ನ ಪ್ರಖರ ಸೈದ್ಧಾಂತಿಕ ಮಟ್ಟಕ್ಕೆ ತಕ್ಕುದಾಗಿ ಅದು ಎಂದೂ ಕಾಣಿಸಿಕೊಂಡಿಲ್ಲ. ಆದರೆ ಎಲ್ಲಾ ಎಡಪಂಥೀಯ ಹಾಗೂ ಪ್ರಗತಿಪರ ಹೋರಾಟ­ಗಳಿಗೆ ತಾಯಿಬೇರು ಮಾರ್ಕ್ಸ್‌ವಾದ­ವಾಗಿದೆ. ಅಂದರೆ ಎಲ್ಲರೂ ಮಾರ್ಕ್ಸ್‌ನ ವಿಚಾರಧಾರೆ­ಗಳನ್ನು ಓದಿ, ಜೀರ್ಣಿಸಿಕೊಂಡಿದ್ದಾರೆ ಎಂದಾ­ಗಲೀ, ಕಮ್ಯುನಿಸ್ಟ­ರಿಂದ ತರಬೇತಿ ಪಡೆದಿದ್ದಾರೆ ಎಂದಾಗಲೀ ಅರ್ಥವಲ್ಲ, ಅದು ಮೌಖಿಕ ವಾಗಿಯೂ ಪರಂಪರೆಯಾಗಿಯೂ ಹರಿದು­ಬಂದಿದೆ. ಎಷ್ಟೋ ಬಾರಿ ಶೋಷಣೆಯ ವಿರುದ್ಧ ನಿಲ್ಲಬೇಕೆಂಬ ಮೂಲ ಅರ್ಥ ಮಾತ್ರವೇ ಅವರಿಗೆ ತಿಳಿದಿರುತ್ತದೆ. ಈ ಶೋಷಣೆ ಯಾರಿಂದ ಹೇಗೆ ಆರಂಭವಾಯಿತೆಂಬುದನ್ನು ಅರಿಯುವಾಗ ಸೋಲುವ ಸಾಧ್ಯತೆಗಳೂ ಇರುತ್ತವೆ.
ನಲವತ್ತು ಐವತ್ತು ವರ್ಷಗಳ ಹಿಂದೆ ಬಗಲಲ್ಲಿ ಒಂದು ಚೀಲ ತಗುಲಿ  ಹಾಕಿಕೊಂಡು, ಗಡ್ಡಧಾರಿಯಾಗಿ ಇರುವ      ಯುವಕರನ್ನು ನೋಡಿದರೆ ಮಾರ್ಕ್ಸ್‌ವಾದಿಯೆಂದು ಗುರುತಿಸ ಲಾಗುತ್ತಿತ್ತು. ಅವರು ನಿರುದ್ಯೋಗಿಗಳಾಗಿದ್ದರೂ ಕ್ರಾಂತಿಯ ಕುರಿತು ಕನಸು ಕಾಣುತ್ತಿದ್ದರು.

ಈಗ  ನಿರುದ್ಯೋಗಿ ಯುವಕರಾಗಿದ್ದರೂ ಅವರು ಮಾರ್ಕ್ಸ್‌ವಾದಿಗಳಾಗಿಲ್ಲ.  ದಲಿತ ಚಳವಳಿ ಕರ್ನಾಟಕದಲ್ಲಿ ಆರಂಭಗೊಂಡಾಗ ನಾಯಕ­ರಲ್ಲಿ ಹಲವರು ವಿದ್ಯಾರ್ಥಿ ಚಳವಳಿಯಿಂದ ಬಂದವರಾಗಿದ್ದಾರೆ. ಅಂಬೇಡ್ಕರ್ ಚಿಂತನೆ­ಯನ್ನು ಗುರುತಿಸುವಷ್ಟೇ ಗುರುತರವಾಗಿ ಮಾರ್ಕ್ಸ್‌ನ ವಿಚಾರಗಳೂ ಕಾರಣವಾಗಿವೆ. ಕನ್ನಡ ಸಾಹಿತ್ಯದಲ್ಲಿ ನಿರಂಜನ ಮುಂತಾದ ಪ್ರಗತಿಶೀಲ ಲೇಖಕರು ಸಾಹಿತ್ಯದಲ್ಲಿ ಸಿದ್ಧಾಂತ­ವನ್ನು ಪ್ರಕಟವಾಗಿ ತರುವ ಪ್ರಯತ್ನ ಮಾಡಿ­ದರು. ನವ್ಯ ಕಾಲದ ಸಾಹಿತ್ಯದ ಮೇಲೆ ಸಮಾಜ­ವಾದದ ಪ್ರಭಾವ ಹೆಚ್ಚಾಗಿಯೇ ಕಾಣಬಂದರೂ ರೈತಹೋರಾಟವನ್ನು ಬೆಂಬಲಿಸಿದ ಕ್ರಮ ಮೆಚ್ಚುವಂತಹದೇ. ಲಂಕೇಶರು ಪತ್ರಿಕೆಯನ್ನೇ ಪ್ರತಿಭಟನಾ ಮಾಧ್ಯಮವಾಗಿ ರೂಪಿಸಿದರು.

ಇನ್ನು ಮಹಿಳಾ ಚಳವಳಿಗಳು,  ಆರಂಭದಲ್ಲಿ ಸುಧಾರಣಾ ಚಳವಳಿಗಳಾಗಿದ್ದವು. ಪುರುಷರ ಬೆಂಬಲದಲ್ಲಿ ನಡೆದಿವೆ. ಕಳೆದ ಐವತ್ತು ವರ್ಷಗಳಲ್ಲಿ ಮಹಿಳಾ ನಾಯಕತ್ವ ಪ್ರತಿಭಟ ನಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಗಮನಿಸಿದರೂ   ಸಮಾನ ಕೂಲಿಗಾಗಿ ಆರಂಭ ವಾದ ಮಹಿಳಾ ಚಳವಳಿ ಮಾರ್ಕ್ಸ್‌ವಾದದ ನೆಲೆಯಲ್ಲೇ ಹುಟ್ಟಿದ್ದೇ ಆಗಿದೆ. ಪಕ್ಷದ ಹಿಡಿತದಲ್ಲಿರಲಿ, ಎನ್‌ಜಿಒ ಆಗಿರಲಿ ಶೋಷಣೆಯ ವಿರುದ್ಧದ ‘ಕೆಂಪು’ ಹೋರಾಟವೇ ಆಗಿರುತ್ತದೆ.
ನಮ್ಮ ಸಾಂಪ್ರದಾಯಿಕ ಕುಟುಂಬದಿಂದ ಬರುವ ಹೆಣ್ಣು ಮಕ್ಕಳು ಹೋರಾಟದಂಥ ಪದಗಳಿಂದಲೂ ದೂರ ಉಳಿಯಲು ಬಯಸು­ತ್ತಾರೆ. ರಸ್ತೆಯಲ್ಲಿ ಮೆರವಣಿಗೆ ಹೋದರೆ ಅದನ್ನು ಅವಮಾನವೆಂದು ಭಾವಿಸುತ್ತಾರೆ, ಆ ಹೋರಾಟದಿಂದ ಸಿಗಬಹುದಾದ ಲಾಭವೆಲ್ಲವೂ ಅವರಿಗೆ ಬೇಕಾಗಿರುತ್ತದೆ, ಅವರು ಹೋರಾಟ­ದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ.

ಅವರು ಮಹಿಳೆ ಮೇಲಿನ ದೌರ್ಜನ್ಯಗಳಿಗೆ ಸ್ಪಂದಿಸದಿರಲೂ ಇದೇ ಕಾರಣವಾಗಿದೆ. ಮಹಿಳಾ ಹೋರಾಟದಲ್ಲಿ ತೊಡಗಿರುವ ಕೂಲಿ ಮಾಡುವ ಹೆಣ್ಣು ಮಕ್ಕಳು ದೃಢವಾಗಿ ಖಚಿತವಾಗಿ ಮಾತನಾಡಬಲ್ಲರು. ಹೆಣ್ಣು ಮಕ್ಕಳ ನಾಯಕತ್ವ ಬೇಕಾಗಿರುವ ಈ ಹೊತ್ತಿನಲ್ಲಿ. ಜನಪರವಾಗಿ ಯೋಚನೆ ಮಾಡುವ ಶಕ್ತಿಯನ್ನು ಮಾರ್ಕ್ಸ್‌ವಾದ ತಂದುಕೊಡಬಲ್ಲದು ಎಂದು ಹೇಳಲು ಕರ್ನಾಟಕದಲ್ಲಿ ಚಳವಳಿಯಲ್ಲಿ ಭಾಗಿ­ಯಾ­ಗಿರುವ ಹೆಣ್ಣುಮಕ್ಕಳನ್ನು ಗಮನಿಸಿದರೆ ಅರ್ಥವಾಗುತ್ತದೆ. ಓದು ಒಂದು ಹಂತಕ್ಕೆ ಹೆಣ್ಣನ್ನು ಸ್ವತಂತ್ರ ಆಲೋಚನೆಗೆ ಹಚ್ಚಬಹು­ದಾದರೂ ಚಳವಳಿ ಅವಳಲ್ಲಿ ನಾಯಕತ್ವದ ಗುಣವನ್ನು ತಂದುಕೊಡುತ್ತದೆ.

ಮಾರ್ಕ್ಸ್‌ವಾದವನ್ನು ತರಾಟೆಗೆ ತೆಗೆದು­ಕೊಳ್ಳುವ ಸಿದ್ಧಾಂತಗಳೂ ನಿರಂತರವಾಗಿ ಬರು­ತ್ತಲೇ ಇವೆಯಾದರೂ ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಕ್ಸ್‌ ಮತ್ತು ಏಂಗಲ್ಸರ ವಾದದ ಮುಂದುವರಿಕೆಯಾಗಿಯೇ ಕಾಣಿಸಿಕೊ­ಳ್ಳುತ್ತಿವೆ. ತಾನು ಭಿನ್ನವಾಗಿ ನಿಲ್ಲುತ್ತೇನೆಂದು ಭಾವಿಸಿದವರ ಬರವಣಿಗೆಗಳೂ ಮಾರ್ಕ್ಸ್‌­ವಾದದ ಉಪ ಉತ್ಪನ್ನಗಳೇ ಆಗಿವೆ. ಈ ಸಿದ್ಧಾಂತ­ವನ್ನು  ಅಸಹಜವೆಂದು ವಾದಿಸುತ್ತಾ ಧರ್ಮ, ದೇವರು, ಜಾತಿಯಲ್ಲಿ ತಮ್ಮ  ಆದರ್ಶವನ್ನು ಕಂಡವರೂ ತಮಗರಿವಿಲ್ಲದಂತೆ ನ್ಯಾಯ ಅನ್ಯಾಯಗಳ ಬಗೆಗೆ ಮಾತನಾಡುತ್ತಾ ಎಂದೋ ಎಲ್ಲೋ ಕಲಿತ ವಿಚಾರಗಳನ್ನು ಮುಂದಿಡುತ್ತಾರೆ.

ಈ ಆದರ್ಶ, ಸಾಹಿತ್ಯಕ್ಕೆ ಮಾತ್ರ ಮೀಸಲಾ­ಗದೆ  ಕಲೆಯಲ್ಲೂ ಹೆಚ್ಚು ಅರ್ಥವತ್ತಾಗಿಯೇ ಕಾಣಿಸಿ­ಕೊಂಡಿದೆ. ಅದರಲ್ಲೂ ಜಮೀನ್ದಾರಿ ವ್ಯವಸ್ಥೆ­ಯನ್ನು, ಶ್ರೀಮಂತಿಕೆಯ ಅಹಂನ್ನು ಒಡೆ ಯುವುದು ಭಾರತೀಯ ಚಲನ ಚಿತ್ರಗಳ ಪ್ರಮುಖ ವಿಷಯಗಳಾಗಿವೆ. ಕನ್ನಡದ ‘ಸಂಪತ್ತಿಗೆ ಸವಾಲ್‌’, ಹಿಂದಿಯ ‘ಮದರ್ ಇಂಡಿಯಾ’  ಸಿನಿಮಾಗಳು  ಜಮೀನ್ದಾರಿಕೆಯ ವಿರುದ್ಧದ ಪ್ರತಿಭಟನೆಗಳೇ ಆಗಿವೆ.

ಭಾರತದಲ್ಲಿ ಅಂತರ್ಗತವಾಗಿ ಬೌದ್ಧ ಧರ್ಮ ಬದುಕುಳಿದಿದ್ದರೆ ಅದರ ಮುಂದುವರಿಕೆಯಾಗಿ ಇಲ್ಲಿ ಮಾರ್ಕ್ಸ್‌ವಾದ ಸ್ವೀಕೃತವಾಗಿರುತ್ತಿತ್ತು. ಅದು  ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಆಗಿದೆ. ಈವ ರೆಗೆ ಸರ್ಕಾರ ತಂದ  ಸುಧಾರಣಾ ನೀತಿಗಳಲ್ಲಿ ಪ್ರಗತಿಪರವಾದ ಕಾನೂನುಗಳು ಜಾರಿಗೆ ಬಂದಿದ್ದರೆ ಅದಕ್ಕೆ ಮಾನವೀಯ ಸಿದ್ಧಾಂತದ ಬದ್ಧತೆ ಕಾರಣ. ಪ್ರಗತಿಪರ, ನಾಸ್ತಿಕ, ಸಂಪ್ರದಾಯ ವಿರೋಧಿಗಳೆಂಬ ಗುಮಾನಿಯನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ಗುರುತಿ­ಸಬೇಕಾಗಿದೆ. ಹುಸಿಮುನಿಸು­ ಬಿಟ್ಟು ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. 

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT