ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಖಿಕ ಮತ್ತು ಮ್ಯಾಪ್ ಸಂಸ್ಕೃತಿಗಳ ನಡುವಣ ಭಾರತ

Last Updated 29 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನಾನು ಭಾರತದಿಂದ ಬಂದು ಎರಡು ವಾರಗಳಾಗುತ್ತಾ ಬಂತು. ಅಮೆರಿಕಾದ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಒಂದು ಚಾತುರ್ಮಾಸದ (ಸೆಮಿಸ್ಟರ್) ಅವಧಿಗೆ ಸಂದರ್ಶನ ಪ್ರಾಧ್ಯಾಪಕಿಯಾಗಿ ಬೋಧನೆ ಮಾಡಲು ನನಗೆ ಫುಲ್‌ಬ್ರೈಟ್ ಫೆಲೋಷಿಪ್ ದೊರೆತಿದ್ದರಿಂದ ನಾನಿಲ್ಲಿಗೆ ಬಂದಿರುವುದು.
 
ನಮ್ಮ ದೇಶದಿಂದ ಯಾವಾಗ ಹೊರಗೆ ಹೋದರೂ ನನ್ನ ಮೊದಲ ಹುಡುಕಾಟ ಆರಂಭವಾಗುವುದೇ ಭಾರತದ ಪ್ರತಿರೂಪಗಳಿಗೆ.
 
ಸಾವಿರಾರು ಮೈಲಿಗಳಾಚೆ ಚಿರಪರಿಚಿತವಾದ ಭಾಷೆಗಳು, ಭಾವನೆಗಳು ಅಥವಾ ಬರಹಗಳ ಅನುಭವ ನಮಗಾದಾಗ ಸಹಜವಾಗಿಯೇ ಮುದುಡಿದ ಮನಸ್ಸು ಅರಳಿದಂತಾಗುತ್ತದೆ. ಎಲ್ಲೋ ಒಂದೆಡೆ ಹೃದಯಕ್ಕೆ ಹಾಯೆನಿಸುತ್ತದೆ.

ಪಾಶ್ಚಿಮಾತ್ಯ ಪ್ರಪಂಚಕ್ಕೆ ಬಂದ ಅನೇಕ ಭಾರತೀಯರಿಗೆ ಕಸಿವಿಸಿಯುಂಟಾಗಲು ಒಂದು ಮುಖ್ಯ ಕಾರಣವೆಂದರೆ ಇಲ್ಲಿ ಮಾತಿಗಿಂತ `ಮ್ಯಾಪು~ಗಳು `ಮೇಲ್~ಗಳು ಹೆಚ್ಚು ಪ್ರಚಲಿತ. ನಾವು ಮಾತುಗಾರರ ಸಂಸ್ಕೃತಿಯಿಂದ ಬಂದವರು. ನಮಗೋ ಎಲ್ಲವನ್ನೂ `ಹೇಳಿ~ `ಕೇಳಿ~ ಅಥವಾ `ಹಂಚಿಕೊಂಡು~ ಅಭ್ಯಾಸ.
 
ಆದರೆ ಇಲ್ಲಿನ ರೀತಿ-ರಿವಾಜುಗಳೇ ಬೇರೆಯಾದ್ದರಿಂದ ನಮಗೆ ಒಂದು ಮಟ್ಟದಲ್ಲಿ ತೀರಾ ಯಾಂತ್ರಿಕ ಎನಿಸುವ ಕಂಪ್ಯೂಟರ್ ನಿಯಂತ್ರಿತ ಬದುಕು ಅಸಹಜ ಎಂಬ ಭಾವನೆಯನ್ನು ತರಿಸಿ ಬಿಡುತ್ತದೆ.
 
ಆದರೆ, ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲೇ ಆಗಿ ಹೋಗಿರುವ ಅನೇಕ ಬದಲಾವಣೆಗಳು ಹಾಗೂ ನಮ್ಮ ಜೀವನ ಶೈಲಿಗಳಲ್ಲೇ ನಾವು ಅಳವಡಿಸಿಕೊಂಡಿರುವ ಪಾಶ್ಚಿಮಾತ್ಯ ಶೈಲಿಯ ಮೌಲ್ಯಾಚರಣೆಗಳು, ಭಾರತೀಯರು ಎದುರಿಸುವ ಸಾಂಸ್ಕೃತಿಕ ಆಘಾತದ ಪ್ರಖರತೆಯನ್ನು ಎಷ್ಟೋ ಮಟ್ಟಿಗೆ ಕಡಿಮೆ ಮಾಡಿವೆ ಎನ್ನುವುದೂ ನಿಜ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದೀಚೆಗೆ ಆಗಿರುವ ಮಹತ್ತರ ಬದಲಾವಣೆಗಳ ಪ್ರಭಾವದಿಂದಾಗಿ ನಮ್ಮ ನಾಡಿನ ಎಲ್ಲ ಆಗುಹೋಗುಗಳ ಬಗ್ಗೆ ನಮ್ಮದೇ ಭಾಷೆಯ, ನಮ್ಮದೇ ಊರಿನ ವೃತ್ತ ಪತ್ರಿಕೆಗಳಿಂದ ಅಥವಾ ಟಿ.ವಿ. ವಾಹಿನಿಗಳಿಂದ ಇಲ್ಲಿ ಕುಳಿತೇ ತಿಳಿಯಲು ಅವಕಾಶವಿರುವುದರಿಂದ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಇಲ್ಲಿ ಬಂದ ಭಾರತೀಯರು ಅನುಭವಿಸಿದ `ಮಾನಸಿಕ ದೂರ~ ಈಗಿನ ಪರಿಸ್ಥಿತಿಯಲ್ಲಿ ಎಷ್ಟೋ ಮಟ್ಟಿಗೆ ಕಡಿಮೆಯಾಗಿದೆ.

ಇವೆಲ್ಲವೂ ನಮ್ಮ ಮಟ್ಟಿಗಾಯ್ತು. ಆದರೆ ನನ್ನನ್ನು ಕಾಡುವ ಪ್ರಶ್ನೆಯೇ ಬೇರೆ. ಅದೇನೆಂದರೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಭಾರತೀಯರಿರುವ ಅಮೆರಿಕಾ ದೇಶದಲ್ಲಿ ಭಾರತದ ಬಗೆಗಿನ ಆಸಕ್ತಿ ಎಷ್ಟಿದೆ ಹಾಗೂ ಈ ಆಸಕ್ತಿಯನ್ನು ಬೆಳೆಸಲು ಎಂಥ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು.
 
ಇದೇ ಪ್ರಶ್ನೆಯನ್ನು ಮನದಲ್ಲಿಟ್ಟುಕೊಂಡು ಅಯೋವಾ ವಿಶ್ವವಿದ್ಯಾನಿಲಯದಲ್ಲಿ ನನ್ನ ಹುಡುಕಾಟ ಆರಂಭಿಸಿದಾಗ, ಭಾರತದ ಬದುಕು, ಬರಹ, ಭಾಷೆಗಳ ಸುತ್ತ ಅಧ್ಯಯನ, ಬೋಧನೆ, ಸಂಶೋಧನೆ ಈ ವಿಶ್ವವಿದ್ಯಾನಿಲಯದಲ್ಲಿ ಸುಮಾರು ವರ್ಷಗಳಿಂದಲೂ ಕೆಲ ವಿಭಾಗಗಳಲ್ಲಿ ನಡೆಯುತ್ತಿವೆ ಎಂಬ ವಿಷಯ ನನ್ನ ಗಮನಕ್ಕೆ ಬಂತು.

ಸಹಜವಾಗಿಯೇ ಕೆರಳಿದ ನನ್ನ ಆಸಕ್ತಿಯ ಜಾಡನ್ನು ಹಿಡಿದು ಹೊರಟ ನನಗೆ ತಿಳಿದು ಬಂದದ್ದು ಈ ಚಾತುರ್ಮಾಸದಲ್ಲೇ ಭಾರತ ಕೇಂದ್ರಿತವಾದ ಸುಮಾರು ಹತ್ತು ಕೋರ್ಸುಗಳ ಬೋಧನೆ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದೆ ಎಂಬುದು.
ಇಲ್ಲಿನ ಕೆಲವು ಪ್ರಾಧ್ಯಾಪಕರು ಭಾರತದ ಸಾಹಿತ್ಯ, ಇತಿಹಾಸ, ಧರ್ಮ, ಭಾಷೆಗಳು-ಇವೇ ಮುಂತಾದ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆಯನ್ನು ನಡೆಸಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ ಎನ್ನುವುದು ಕೂಡ ಅಯೋವಾ ವಿಶ್ವವಿದ್ಯಾನಿಲಯದ ಒಂದು ವೈಶಿಷ್ಟ್ಯ.

ಅಮೆರಿಕಾ ದೇಶದ ಉನ್ನತ ಶಿಕ್ಷಣ ಇತಿಹಾಸದಲ್ಲಿ ಅಯೋವಾ ವಿಶ್ವವಿದ್ಯಾನಿಲಯಕ್ಕೆ ತನ್ನದೇ ಆದ ಸ್ಥಾನವಿದೆ. ದೇಶದ ಮಧ್ಯ ಪಶ್ಚಿಮದ ಅಯೋವಾ ನಗರದಲ್ಲಿರುವ ಈ ವಿಶ್ವವಿದ್ಯಾನಿಲಯಕ್ಕೆ 164 ವರ್ಷಗಳ ಇತಿಹಾಸವಿದೆ.
 
ಇಡೀ ದೇಶದಲ್ಲೇ ಮಹಿಳೆಯರು ಮತ್ತು ಪುರುಷರನ್ನು ಸಮಾನರೆಂದು ಪರಿಗಣಿಸಿ ಪ್ರವೇಶ ನೀಡಿದ ಪ್ರಥಮ ವಿಶ್ವವಿದ್ಯಾನಿಲಯ ಇದಾಗಿದೆ. ರಂಗಭೂಮಿ, ಬರಹ, ಸಂಗೀತ ಹಾಗೂ ಕಲೆ-ಈ ಕ್ಷೇತ್ರಗಳಲ್ಲಿ ಕೈಗೊಳ್ಳುವ ಕ್ರಿಯಾತ್ಮಕ ಅಧ್ಯಯನಗಳನ್ನು ಅತ್ಯುನ್ನತ ಪದವಿಗಳಿಗೆ ಯೋಗ್ಯವಾದ ಸಂಶೋಧನೆಗಳಿಗೆ ಸರಿಸಮಾನ ಎಂದು ಗುರುತಿಸಿ ಮಾನ್ಯತೆ ನೀಡಿದ ಅಮೆರಿಕಾದ ಪ್ರಥಮ ಉನ್ನತ ಶಿಕ್ಷಣ ಸಂಸ್ಥೆ ಅಯೋವಾ ವಿಶ್ವವಿದ್ಯಾನಿಲಯ.
 
ಜಗತ್ತಿನ ಪ್ರಥಮ ಶೈಕ್ಷಣಿಕ ಟೆಲಿವಿಷನ್ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಹೆಗ್ಗಳಿಕೆಯೂ ಈ ವಿಶ್ವವಿದ್ಯಾನಿಲಯಕ್ಕಿದೆ.

1900 ಎಕರೆ ಭೂ ಪ್ರದೇಶದಲ್ಲಿ ವ್ಯಾಪಿಸಿ 30,000 ವಿದ್ಯಾರ್ಥಿಗಳು, 1700 ಅಧ್ಯಾಪಕರು, 13,000 ಸಿಬ್ಬಂದಿ ವರ್ಗವನ್ನು ಹೊಂದಿ, 2.8 ಬಿಲಿಯನ್ ಡಾಲರ್‌ಗಳ ವಾರ್ಷಿಕ ಆಯವ್ಯಯದಲ್ಲಿ ಈ ವಿಶ್ವವಿದ್ಯಾನಿಲಯವನ್ನು ನಡೆಸಲಾಗುತ್ತಿದೆ.

`ಭಾರತ ದರ್ಶನ~ವನ್ನು ನೀಡುವ ಕೋರ್ಸುಗಳಲ್ಲಿ ವಿಶೇಷವಾಗಿ ನನ್ನ ಕಲ್ಪನೆಯನ್ನು ಸೆಳೆದ ಮೂರರ ಬಗ್ಗೆ ನಾನಿಲ್ಲಿ ಪ್ರಸ್ತಾಪಿಸಲಿಚ್ಛಿಸುತ್ತೇನೆ. ಅವುಗಳಲ್ಲಿ ಮೊದಲನೆಯದು ಏಷಿಯನ್ ಹ್ಯುಮ್ಯಾನಿಟಿಸ್: ಇಂಡಿಯಾ.

ಈ ತರಗತಿಗಳಲ್ಲಿ ವಿಶೇಷವಾಗಿ ಬಳಸುತ್ತಿರುವುದು ಕಥಾ ಮಾಧ್ಯಮವನ್ನು. ರಾಮಾಯಣ ಮತ್ತು ಮಹಾಭಾರತಗಳಿಂದ ಪ್ರಾರಂಭವಾಗಿ `ಬಾಲಿವುಡ್~ ಚಲನಚಿತ್ರಗಳವರೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತದೆ ಈ ಕೋರ್ಸು.

ಭಾರತೀಯ ಸಂಸ್ಕೃತಿಯ ವಿವಿಧ ಮುಖಗಳಾದ ಭಕ್ತಿ ಸಂಪ್ರದಾಯ, ಕುಟುಂಬ ಜೀವನ, ಜೀವನ ಮೌಲ್ಯಗಳು, ಲಿಂಗ ವ್ಯವಸ್ಥೆಯ ಸಂಬಂಧಗಳು, ರಾಜಕಾರಣ, ದೇಶ ಪ್ರೇಮ, ಪ್ರೀತಿ-ಇವೇ ಮುಂತಾದುವುಗಳ ಬಗ್ಗೆ ಕಥೆ,

ಕಾದಂಬರಿ ಅಥವಾ ಚಲನಚಿತ್ರಗಳ ಮೂಲಕ ಭಾರತದ ಪರಿಚಯವನ್ನು ನೀಡುವುದೇ ಅಲ್ಲದೆ ವಿದ್ಯಾರ್ಥಿಗಳನ್ನು ಚರ್ಚೆ, ಸಂಭಾಷಣೆ, ಓದು, ಬರಹಗಳಲ್ಲಿ ತೊಡಗಿಸಿ ಭಾರತದ ಬಗೆಗಿನ ಅವರ ಆಸಕ್ತಿಯನ್ನು ಕೆರಳಿಸುವುದು ಇದರ ವೈಶಿಷ್ಟ್ಯ.

ಪಾಶ್ಚಿಮಾತ್ಯ ದೇಶಗಳಲ್ಲಿ ಒಂದು ಗೋಚರ ವರ್ಗವಾಗಿ ಹೊರ ಹೊಮ್ಮುತ್ತಿರುವ `ಅನಿವಾಸಿ ಭಾರತೀಯರು~ ಹಾಗೂ ಅವರ ಬದುಕಿನಲ್ಲಿ ತಲೆದೋರುವ ದ್ವಂದ್ವಗಳು, ಜಾಗತೀಕರಣ ಹಾಗೂ ವಾಣಿಜ್ಯೀಕೃತ ಸಂಸ್ಕೃತಿಗಳಂಥ ವಿಚಾರಗಳನ್ನೂ ಅಧ್ಯಯನದ ವ್ಯಾಪ್ತಿಯಲ್ಲಿ ಸೇರಿಸಿಕೊಂಡು,
 
`ಭಾರತೀಯ ಸಂಪ್ರದಾಯದ ಆಧುನೀಕರಣ~ದಂಥ ಕ್ಲಿಷ್ಟ ಪರಿಕಲ್ಪನೆಯ ಪರಿಚಯವನ್ನೂ ವಿದ್ಯಾರ್ಥಿಗಳಿಗೆ ಮಾಡಿಕೊಡಲೆತ್ನಿಸುತ್ತಿರುವುದು ಇದರ ಹಿಂದಿರುವ ಅಧ್ಯಾಪಕರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಈ ಬಾರಿ ಅಯೋವಾದ ಭಾರತ ಕೇಂದ್ರಿತ ಕೋರ್ಸುಗಳ ಸಾಲಿಗೆ ಹೊಸದಾಗಿ ಸೇರುವುದು `ಇಂಡಿಯಾ ನೌ! ಫ್ರಮ್ ಬಾಲಿವುಡ್ ಟು ಗ್ಲೋಬಲ್ ಟೆರರ್~.  ಭಾರತೀಯಳಾದ ನನಗೆ ಈ ಶೀರ್ಷಿಕೆ ವಿಚಿತ್ರವೆನಿಸಿದರೂ ನಮ್ಮ ದೇಶದ ಸಮಕಾಲೀನ ಸ್ಥಿತಿಗತಿಗಳನ್ನು ಐತಿಹಾಸಿಕ ಚೌಕಟ್ಟಿನಲ್ಲಿ ನೋಡಲು ಯತ್ನಿಸುತ್ತಿರುವ ಈ ಕೋರ್ಸು ನನ್ನನ್ನು ಆಕರ್ಷಿಸಿತು.
 
ಭಾರತದ ಸ್ವಾತಂತ್ರ ಸಂಗ್ರಾಮದಿಂದ ಹಿಡಿದು ಮೂಲಭೂತವಾದದ ವರೆಗೆ ವಿವಿಧ ವಿಚಾರಗಳು ಈ ಕೋರ್ಸಿನ ಪಠ್ಯಕ್ರಮದಲ್ಲಿ ಸೇರಿವೆ. ಅವುಗಳಲ್ಲಿ ಪ್ರಮುಖವಾದವು ಭಾರತದಲ್ಲಿ ಚುನಾವಣೆಗಳು, ಜನಸಂಖ್ಯೆ, ಮಧ್ಯಮ ವರ್ಗ, ಗ್ರಾಮ-ನಗರಗಳ ಸಂಬಂಧಗಳು, ಬದಲಾಗುತ್ತಿರುವ ವಿವಾಹ ಕ್ರಮಗಳು ಹಾಗೂ ಸಂಬಂಧಗಳು, ಆರ್ಥಿಕ ಉದಾರೀಕರಣ ಹಾಗೂ ಅದು ತಂದಂಥ ಬದಲಾವಣೆಗಳು,

ಕ್ರಿಕೆಟ್ ವ್ಯಾಮೋಹ, ಬಾಲಿವುಡ್ ಚಲನಚಿತ್ರಗಳು ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತದ ಕಳಪೆ ಪ್ರದರ್ಶನ-ಹೀಗೆ ಒಂದು ವಿಷಯ ವೈವಿಧ್ಯ ಈ ಕೋರ್ಸಿನ ವಿದ್ಯಾರ್ಥಿಗಳ ಮುಂದೆ ತೆರೆದುಕೊಳ್ಳತ್ತಾ ಹೋಗುತ್ತದೆ.
 
ಇದರ ಪರಿಚಯಾತ್ಮಕ ನೋಟದಲ್ಲಿ ಭಾರತವನ್ನು ಕುರಿತ `ಅಜ್ಞಾನ~ವನ್ನು ದೂರ ಮಾಡಿ. ಭಾರತೀಯರ ಬಗೆಗಿನ `ಮಿಥ್ಯೆ~ಗಳನ್ನು ದೂರ ಸರಿಸಿ, ಬದಲಾಗುತ್ತಿರುವ ಜಾಗತಿಕ ಆರ್ಥಿಕ ಸಂದರ್ಭಗಳಲ್ಲಿ ಭಾರತದ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡುವುದೇ ಆಗಿದೆ ಎಂಬ ಸಂದೇಶ ಮೂಡಿ ಬಂದಿದೆ.

ವಿಶೇಷವಾಗಿ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರ ಸುತ್ತ ರಚಿತವಾಗಿರುವ ಮತ್ತೊಂದು ಕೋರ್ಸ್ ಎಂದರೆ ಬಾಲಿವುಡ್, `ಪರ್‌ದೇಸ್ ಅಂಡ್ ರಿಲಿಜನ್: ಹೌ ಇಂಡಿಯಾ ಕೇಮ್ ಟು ಅಮೆರಿಕಾ~.
 
ಅನಿವಾಸಿ ಭಾರತೀಯರು ಹಾಗೂ ಅವರ ದಿನನಿತ್ಯದ ಅನುಭವಗಳು, ಹೊರ ದೇಶದಲ್ಲಿದ್ದೂ ತಮ್ಮ `ಭಾರತೀಯತೆ~ಯನ್ನು ಉಳಿಸಿಕೊಳ್ಳಲು ಅವರು ಮಾಡುವ ಪ್ರಯತ್ನಗಳು, ತಾಯ್ನಾಡಿನ ಜೊತೆ ಅವರ ಸಂಬಂಧಗಳ ಸ್ವರೂಪ,

ಈ ದೇಶದ ಲೌಕಿಕ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದರೂ ಕುಟುಂಬ-ವಿವಾಹಗಳಂಥ ಸಾಂಪ್ರದಾಯಿಕ ಸಂಸ್ಥೆಗಳ ಮೂಲ ತತ್ವಗಳನ್ನು ಕಾಪಾಡಿಕೊಂಡು ಬರಲು ಅವರು ಮಾಡುವ `ಸಾಹಸ~ಗಳು ಹಾಗೂ ಬದಲಾಗುತ್ತಿರುವ ಭಾರತೀಯ ಮೂಲದ ವಲಸಿಗರ ಸಾಮಾಜಿಕ-ಆರ್ಥಿಕ ಚಿತ್ರಣ-ಈ ವಿಚಾರಗಳನ್ನು ಕುರಿತ ಚರ್ಚೆ, ಸಂಭಾಷಣೆ, ಹಿಂದಿ ಚಲನಚಿತ್ರ ವೀಕ್ಷಣೆ-ಇವು ಈ ಕೋರ್ಸಿನ ಅಧ್ಯಯನ ವಿಧಾನಗಳು.
 
ವಿಶೇಷವಾಗಿ ಮಹಿಳೆಯರ ಅನುಭವಗಳಿಗೆ ಆದ್ಯತೆಯನ್ನು ನೀಡುವ ಈ ಕೋರ್ಸಿನಲ್ಲಿ ವಿದೇಶವಾಸವನ್ನು ಲಿಂಗ ವ್ಯವಸ್ಥೆಯ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯವನ್ನು ಹೊರತಂದಿರುವುದು ಗಮನಾರ್ಹ. ಇತ್ತೀಚಿನ ದಿನಗಳಲ್ಲಿ ಅನಿವಾಸಿ ಭಾರತೀಯ ವಿವಾಹಗಳಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಇಂಥ ಚರ್ಚೆಗಳು ಮುಖ್ಯವೆನಿಸುತ್ತವೆ.

ಭಾರತೀಯ ಭಾಷೆ ಹಾಗೂ ಸಾಹಿತ್ಯವನ್ನು ಕುರಿತಂತೆಯೂ ಅನೇಕ ವರ್ಷಗಳಿಂದ ಅಯೋವಾ ವಿಶ್ವವಿದ್ಯಾನಿಲಯ ಆಸಕ್ತಿಯನ್ನು ವಹಿಸಿದೆ. ಭಾರತೀಯ ಉಪಖಂಡದಲ್ಲಿ ರಚಿತವಾಗಿರುವ ಇಂಗ್ಲಿಷ್ ಸಾಹಿತ್ಯವನ್ನು ಕುರಿತಂತೆ (ಪಾಕಿಸ್ತಾನ, ಬಾಂಗ್ಲಾದೇಶವೂ ಸೇರಿದಂತೆ) ಒಂದು ವಿಶಿಷ್ಟವಾದ ಕೋರ್ಸ್ ಅನ್ನು ಆಯೋಜಿಸಲಾಗಿದೆ.

`ಅಂತರರಾಷ್ಟ್ರೀಯ ಬರಹಗಾರರ ಕಾರ್ಯಕ್ರಮ~ ಎಂಬ ಯೋಜನೆಯ ಆಶ್ರಯದಲ್ಲಿ ಭಾರತದ ವಿವಿಧ ಭಾಷೆಗಳ ಅನೇಕ ಲೇಖಕರು ಕ್ರಿಯಾತ್ಮಕ ಬರವಣಿಗೆಯ ರೂಪುರೇಷೆಗಳ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ.
 
ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚಿನ ಸಂಖ್ಯೆಯ ಜನರು ಮಾತನಾಡುವ ಭಾಷೆ `ಹಿಂದಿ~ಯಲ್ಲಿ ಕೂಡ ಪ್ರಾರಂಭಿಕ ಹಂತದಿಂದ ಹಿಡಿದು ಮುಂದುವರೆದ ಹಂತದವರೆಗೂ ಶಿಕ್ಷಣ ನೀಡುವಂಥ ವ್ಯವಸ್ಥೆ ಈ ವಿಶ್ವವಿದ್ಯಾನಿಲಯದಲ್ಲಿದೆ.

ಕನ್ನಡ ಭಾಷೆ ಹಾಗೂ ಸಂಸ್ಕೃತಿ ಪೀಠ ಕೂಡ ಈ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿತವಾಗಿದ್ದು ಹಾಲಿ ಅದು ಕಾರ್ಯಪ್ರವೃತ್ತವಾಗಿಲ್ಲ. ಒಟ್ಟಿನಲ್ಲಿ ಭಾರತದ ಬಗೆಗಿನ ಆಸಕ್ತಿ ಇಲ್ಲಿ ಜೀವಂತವಾಗಿರುವುದಂತೂ ನಿಜ.

ಹೊರ ದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ನಮ್ಮ ದೇಶದ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜವನ್ನು ಕುರಿತಂತೆ ಅಧ್ಯಯನ-ಸಂಶೋಧನೆ ನಡೆಯುತ್ತಿರುವುದು ಸ್ವಾಗತಾರ್ಹವೇ ಸರಿ.
 
ಆದರೆ `ಭಾರತ~ ಎಂದಾಕ್ಷಣ ನನ್ನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೆಂದರೆ `ಯಾವ ಭಾರತ~ ಹಾಗೂ `ಯಾರ ಭಾರತ~ದ ಬಗ್ಗೆ ನಾವು ಮಾತನಾಡುತ್ತಿರುವುದು ಎಂಬುದು.
 
ಬಾಲಿವುಡ್ ಚಲನಚಿತ್ರಗಳು, ಪ್ರಶಸ್ತಿ ವಿಜೇತ ಲೇಖಕರ ಕೃತಿಗಳು, ಅಂತರರಾಷ್ಟ್ರೀಯ ಗೋಚರತೆಯನ್ನು ಪಡೆದಿರುವ ಆಯ್ದ ಬರಹಗಳು ಹಾಗೂ ಭಾಷಣಗಳು-ಇವುಗಳಲ್ಲಿ ಬಿಂಬಿತವಾಗದಂಥ ಭಾರತದ ಅನೇಕ ಚಿತ್ರಗಳೂ ಇವೆ.
 
ಅಂಥ ಚಿತ್ರಗಳಿಗೆ ಗೋಚರತೆ ಮೂಡಬೇಕಾದರೆ, ಭಾರತದ ನಿಜವಾದ ಅಂತಃಸತ್ವವನ್ನು ಅಮೆರಿಕಾದಲ್ಲಿ ಹೆಚ್ಚು ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾನಿಲಯಗಳಲ್ಲಿ ಹಿಡಿದಿಡಬೇಕಾದರೆ ಈ ದೇಶದಲ್ಲಿರುವ ಭಾರತೀಯರು ಆ ಪ್ರಯತ್ನದಲ್ಲಿ ಆಸಕ್ತಿ ವಹಿಸಬೇಕು, ಕೈ ಜೋಡಿಸಬೇಕು. 

  (ನಿಮ್ಮ ಅನಿಸಿಕೆಗಳನ್ನು ಕಳುಹಿಸಿ:  editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT