ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ಬಿತ್ತುವ ಈ ಸಿನಿಮಾ ಜನ...

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಸಿನಿಮಾಕ್ಕೆ ನೂರು ತುಂಬಿತು. ಮುಂದಿನವಾರ ಚೆನ್ನೈನಲ್ಲಿ ಶತಮಾನೋತ್ಸವ ಸಮಾರಂಭ ಸಡಗರದಿಂದ ನೆರವೇರಲಿದೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೆಯ ರಾಷ್ಟ್ರ, ಅತಿ ಹೆಚ್ಚು ಚಿತ್ರಮಂದಿರಗಳನ್ನು ಹೊಂದಿರುವ ಹಾಗೂ ಪ್ರೇಕ್ಷಕರನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಇರುವ ನಮ್ಮ ದೇಶದಲ್ಲಿ ಸಿನಿಮಾ ಎಂಬುದು ಅರಿವಿನ ಆಗರವಾಗಿದೆಯೇ?

ಸಿನಿಮಾ ಹಾಗೂ ಕಿರುತೆರೆ ಮಾಧ್ಯಮ ಜನಸಾಮಾನ್ಯರನ್ನು ನೇರವಾಗಿ ತಟ್ಟುತ್ತಿದೆ. ಜನ ಅದರ ಪ್ರಭಾವಕ್ಕೆ ಒಳಗಾಗಿದ್ದರೂ ಯಾವುದೋ ಒಂದು ಕೊರತೆ ಜನಸಾಮಾನ್ಯರನ್ನು ಕಾಡುತ್ತಿದೆ. ಇದು ದೃಶ್ಯಮಾಧ್ಯಮದ ಲೋಪ. ಸಿನಿಮಾಕ್ಕಾಗಲಿ, ಕಿರುತೆರೆಗಾಗಲಿ ಸಾಮಾಜಿಕ ಜವಾಬ್ದದಾರಿಯೊಂದಿದೆ ಎಂಬುದನ್ನು ಧೈರ್ಯವಾಗಿ ಹೇಳಲು ಸಾಧ್ಯವೇ ಇಲ್ಲ.

ಜ್ಞಾನಪ್ರಸಾರಕ್ಕಾಗಿ ಬಳಕೆಯಾಗಬೇಕಾದ ಈ ಮಾಧ್ಯಮ ಅಜ್ಞಾನದ ಹಾದಿಯಲ್ಲಿ ಸಾಗುತ್ತಿದೆ. ಜನರಲ್ಲಿ ವಿಚಾರ ಪ್ರಚೋದನೆ ಮಾಡಬೇಕಾದ ಹೊಣೆಯನ್ನು ಮರೆತು ಕೀಳು ಅಭಿರುಚಿಯನ್ನು ಬೆಳೆಸುತ್ತಿವೆ. ರಾಷ್ಟ್ರದಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದರೋಡೆ, ಅನೈತಿಕ ವ್ಯವಹಾರ, ದೇಶದ್ರೋಹ, ಭಯೋತ್ಪಾದನೆ, ಮಾದಕ ದ್ರವ್ಯ ಸೇವನೆ ಚಟ, ಕೋಮುಗಲಭೆ ಹೀಗೆ ಪ್ರತಿಯೊಂದು ಅನೀತಿ ಕೃತ್ಯಗಳಿಗೆ ಒಂದಲ್ಲಾ ಒಂದು ಚಲನಚಿತ್ರ ಇಲ್ಲವೇ ಕಿರುತೆರೆಯ ಕಾರ್ಯಕ್ರಮ ಪ್ರೇರಣೆಯಾಗಿರುತ್ತದೆ ಎನ್ನುವ ಅಂಶವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಮಾಟ, ಮಂತ್ರ, ಅಂಧಶ್ರದ್ಧೆ, ಮೂಢನಂಬಿಕೆ ಮತ್ತಿತರ ಸಾಮಾಜಿಕ ಪಿಡುಗುಗಳ ವಿರುದ್ಧ ಕಾನೂನು ರೂಪಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ಜನರನ್ನು ಶೋಷಿಸಲು ಬಳಸುತ್ತಿರುವ ಮೂಢನಂಬಿಕೆಯ ಆಚರಣೆಗಳು, ಅಮಾನವೀಯ ಪದ್ಧತಿಗಳು ಹಾಗೂ ಮಾಟ ಮಂತ್ರಗಳನ್ನು ನಿಷೇಧಿಸುವ ಗುರಿ ಈ ಕಾನೂನಿಗಿದೆ.

ಅಂತಹ ಆಚರಣೆಗಳನ್ನು ನಡೆಸುವ ದೇವ ಮಾನವರಿಗೆ ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ. ಮಹಾರಾಷ್ಟ್ರ ಸರ್ಕಾರದ ಈ ಪ್ರಗತಿಪರ ಕಾನೂನಿನ ಜಾರಿಯಿಂದ ಸ್ಫೂರ್ತಿಪಡೆದ ಕರ್ನಾಟಕದ ಮುಖ್ಯಮಂತ್ರಿಗಳೂ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಭಾರತೀಯ ಚಿತ್ರರಂಗದ ಜನ್ಮಸ್ಥಳವಾದ ಮಹಾರಾಷ್ಟ್ರದಲ್ಲಿ ಈ ಕಾನೂನು ಮತ್ತಷ್ಟು ಸುಭದ್ರವಾಗಬೇಕಾದರೆ, ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ವಿಜೃಂಭಿಸುವ ಚಲನಚಿತ್ರಗಳ ಮೇಲೆ, ಕಿರುತೆರೆ ಕಾರ್ಯಕ್ರಮಗಳ ಮೇಲೆ ಕಠಿಣ ಸೆನ್ಸಾರ್ ಇರಬೇಕಾಗುತ್ತದೆ.

ವಿಕೃತ ಭಾವನೆಗಳನ್ನು ಉತ್ತೇಜಿಸುವ ಚಲನಚಿತ್ರಗಳನ್ನು ತಯಾರಿಸಿ ಇಡೀ ರಾಷ್ಟ್ರಕ್ಕೆ ಹಂಚುವ ಬಾಲಿವುಡ್‌ ಬುದ್ಧಿ ಕಲಿಯಬೇಕಿದೆ. ಎಲ್ಲ ಹಂತಗಳಲ್ಲೂ ವಿವೇಚನೆಯೇ ಇಲ್ಲದೆ, ದೃಶ್ಯ ಮಾಧ್ಯಮಗಳು ಪ್ರಚಾರ ನೀಡುವುದರಿಂದ (ಹಣಕ್ಕಾಗಿ) ಅಸಾರಾಂನಿಂದ ನಿತ್ಯಾನಂದನವರೆಗೆ ಆಷಾಢಭೂತಿಗಳ ಸಂಖ್ಯೆ ಬೆಳೆದಿದೆ. ಚಂದ್ರಸ್ವಾಮಿಯಿಂದ ಚಂದ್ರಶೇಖರಾನಂದ ಸ್ವಾಮೀಜಿಗಳವರೆಗೆ ವಿವಿಧ ‘ಅವತಾರ’ಗಳ ಸ್ವಾಮೀಜಿವಳು ನಾಯಿಕೊಡೆಗಳ ರೀತಿಯಲ್ಲಿ ಅವತರಿಸುತ್ತಿದ್ದಾರೆ. ಎಷ್ಟೋ ‘ಸ್ವಾಮೀಜಿ’ಗಳು ರಾತ್ರಿ 10ರ ನಂತರ ಕಿರುತೆರೆಯ ಮೇಲೆ ಕಾಣಿಸಿಕೊಂಡು ಕಾಮೋತ್ತೇಜಕ ಮಾತ್ರೆಗಳ ವ್ಯಾಪಾರ ಮಾಡುತ್ತಿರುವುದೂ ದೊಡ್ಡ ದುರಂತ.


ಕನ್ನಡ ಟಿ.ವಿ. ಚಾನೆಲ್‌ಗಳನ್ನೇ ಸ್ವಲ್ಪ ಅವಲೋಕಿಸಿ. ನಿತ್ಯ ಬೆಳಿಗ್ಗೆ ಹಲವಾರು ಗಂಟೆಗಳ ಕಾಲ ಜೋತಿಷಿಗಳು ನಿಮ್ಮೊಂದಿಗೆ ಸಂವಾದಿಸುತ್ತಾರೆ. ಇವನ್ನು ‘ಅತ್ಯಂತ’ ಜನಪ್ರಿಯ ಕಾರ್ಯಕ್ರಮ ಎಂದೇ ಟಿ.ವಿ. ಮಾಲಿಕರು ಹೇಳಿಕೊಳ್ಳುತ್ತಾರೆ. ಟಿ.ವಿ. ಚಾನೆಲ್‌ಗಳ ಸಂಖ್ಯೆಯೂ ಹೆಚ್ಚಾದಷ್ಟೂ ಭವಿಷ್ಯ ಹೇಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. (ಭವಿಷ್ಯಕಾರರೇ ವಾರಕ್ಕೆ ಲಕ್ಷಗಟ್ಟಲೆ ಶುಲ್ಕ ನೀಡಿ ಇಂಥ ವೇಳೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂಬುದು ಒಳಗುಟ್ಟು).

ತಮ್ಮ ಭವಿಷ್ಯವನ್ನೇ ಸರಿಯಾಗಿ ಅರಿಯದೆ, 50 ಲಕ್ಷ ರೂಪಾಯಿ ಬಹುಮಾನದ ಆಸೆಗೆ ‘ಬಿಗ್‌ಬಾಸ್‌’ ಕಾರ್ಯಕ್ರಮದಲ್ಲಿ ಸೇರಿಕೊಂಡು, ಆಭಾಸಗಳ ದರ್ಶನ ಮಾಡಿಸಿದ ಬ್ರಹ್ಮಾಂಡ ಜೋತಿಷಿಗಳ ಮಾತುಗಳನ್ನು ವೇದವಾಕ್ಯ ಎಂದು ನಂಬಲಾದೀತೇ? ಟಿ.ವಿ. ಚಾನೆಲ್‌ ಮಾಲೀಕರು ಹಾಗೂ ಭವಿಷ್ಯ ಹೇಳುವವರು ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ ಎನಿಸುವುದಿಲ್ಲವೇ? ಪೂಜೆ, ಹೋಮ, ಹವನ, ವಾಸ್ತು ಮೊದಲಾದವುಗಳನ್ನೆಲ್ಲ ನಿಷೇಧ ಮಾಡಬೇಕೆಂದು ಹೋರಾಟ ನಡೆದಷ್ಟೂ ಅವು ಮತ್ತಷ್ಟು ಹೆಚ್ಚುತ್ತಾ ಹೋಗುತ್ತಿದೆ.

ಟಿ.ವಿ. ಮಾಧ್ಯಮಗಳು ಮೂಢನಂಬಿಕೆಯನ್ನು ಹೋಗಲಾಡಿಸುವ ಕಡೆ ಮನಸ್ಸು ಹರಿಸದೆ, ಟಿಆರ್‌ಪಿ ಮೋಹಕ್ಕೆ ಒಳಗಾಗಿ, ಜನರನ್ನು ಶಿಲಾಯುಗದತ್ತ ಕರೆದೊಯ್ಯುತ್ತಿವೆ. ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಜಾಗದಲ್ಲಿ ಮೌಢ್ಯಗಳನ್ನು ಬಿತ್ತಲಾಗುತ್ತಿದೆ. ಎಂಟು ವರ್ಷದ ಹಿಂದೆ ಬ್ರಿಟನ್‌ ಚಾನಲ್‌ ಒಂದರಲ್ಲಿ ಬೆಳಗಿನ ವೇಳೆ ಜೋತಿಷ ಹೇಳುವ ಕಾರ್ಯಕ್ರಮ ಆರಂಭವಾಯಿತು. ಪಶ್ಚಿಮವಾಗಲಿ, ಪೂರ್ವವಾಗಲಿ ಜನರ ಮನೋಭಾವನೆ ಒಂದೇ ಅಲ್ಲವೇ? ಜನ ಅದರತ್ತ ಕುತೂಹಲ ಮೂಡಿಸಿಕೊಂಡರು. ಇದು ಸಮೂಹ ಸನ್ನಿಯಾಗುತ್ತದೆ ಎಂಬುದನ್ನು ಬೇಗ ಮನಗಂಡ ಸರ್ಕಾರ ಟಿ.ವಿ. ಚಾನೆಲ್‌ಗಳಲ್ಲಿ ಭವಿಷ್ಯ ಹೇಳುವ ಕಾರ್ಯಕ್ರಮವನ್ನು ನಿಷೇಧಿಸಿತು. ಕರ್ನಾಟಕದಲ್ಲಿ ಇಂತಹ ನಿಷೇಧ ಆದೇಶ ಹೊರಡಿಸಿದರೆ ಎಷ್ಟು ಚೆನ್ನ!

ಮೂಢನಂಬಿಕೆ, ಮಾಟ – ಮಂತ್ರ, ವಾಮಾಚಾರಗಳ ಮೂಲಕ ಮುಗ್ಧ ಜನರನ್ನು ವಂಚಿಸುವ ಕೃತ್ಯ ನಿಲ್ಲಬೇಕು ಎಂದು ನಮ್ಮ ಮುಖ್ಯಮಂತ್ರಿಗಳು ಹೇಳುವ ಸಮಯದಲ್ಲೇ ವಾಮಾಚಾರವನ್ನು ವಿಜೃಂಭಿಸುವ, ನರಬಲಿಯನ್ನು ರಾಜಾರೋಷವಾಗಿ ನಡೆಸುವ ‘ಜಯಮ್ಮನ ಮಗ’ ಕನ್ನಡ ಚಲನಚಿತ್ರ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಇಂತಹ ಅವೈಜ್ಞಾನಿಕ, ಬಾಲಿಶ ಕತೆಯೊಂದನ್ನು ಪ್ರೇಕ್ಷಕರ ಮುಂದೆ ತಂದಿಟ್ಟ ಚಿತ್ರತಂಡದ ಧೈರ್ಯವನ್ನು ಮೆಚ್ಚಬೇಕು. ಅಲ್ಲದೆ, ನರಬಲಿ ಇರುವ, ಹೆಜ್ಜೆಹೆಜ್ಜೆಗೂ ಜನರನ್ನು ಅಜ್ಞಾನದ ತುದಿಗೆ ತಳ್ಳುವ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿಯ ಬೇಜವಾಬ್ದಾರಿತನವನ್ನೂ ಖಂಡಿಸಬೇಕು.

ಮೂಢನಂಬಿಕೆಗಳನ್ನು ಪ್ರತಿಪಾದಿಸುವ ಚಿತ್ರಗಳಿಗೆ ಅನುಮತಿ ನೀಡಬಾರದು ಎಂಬ ನಿಯಮವನ್ನೇ ಮರೆತಿರುವ ಸೆನ್ಸಾರ್ ಮಂಡಳಿ, ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ‘ಈ ಚಿತ್ರವನ್ನು ವೀಕ್ಷಿಸುವಾಗ ಪ್ರೇಕ್ಷಕರ ಮೈಯಲ್ಲಿ ಯಾವುದಾದರೂ ಶಕ್ತಿ ಆವಾಹನೆಯಾಗಿ, ಅನಾಹುತ ಸಂಭವಿಸಿದರೆ ಅದಕ್ಕೆ ಚಿತ್ರತಂಡದವರು ಹೊಣೆಯಲ್ಲ’ ಎಂಬ ಬೋರ್ಡನ್ನು ‘ಜಯಮ್ಮನ ಮಗ’ ಚಿತ್ರ ಪ್ರದಶರ್ನವಾಗುತ್ತಿರುವ ಚಿತ್ರ ಮಂದಿರದ ಮುಂದೆ ಹಾಕಲಾಗಿದೆ. ಅಂದರೆ ಇದೊಂದು ಅನಾಹುತಕಾರಿ ಚಿತ್ರ ಎಂಬುದನ್ನು ಚಿತ್ರ ನಿರ್ಮಾಪಕರೇ ಒಪ್ಪಿಕೊಂಡಂತಾಗಿದೆ.

ಹಾಗಾದರೆ, ಇದರ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟವರು ಹೊಣೆಗಾರರಾಗುತ್ತಾರೆಯೇ? ಚಿತ್ರತಂಡದ ಈ ಸೂಚನೆ ಪ್ರಕಾರ ಚಿತ್ರ ಯಾವುದೇ ಅಡ್ಡ ಪರಿಣಾಮ ಬೀರಿದರೆ ಅದಕ್ಕೆ ಸೆನ್ಸಾರ್ ಮಂಡಳಿಯೇ ಕಾರಣ. ಚಲನಚಿತ್ರ ಪ್ರಶಸ್ತಿಗೆ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಸುವುದಾಗಿ ನ್ಯಾಯಾಲಯ ಎಚ್ಚರಿಸಿತ್ತು. ‘ಜಯಮ್ಮನ ಮಗ’ ಸೆನ್ಸಾರ್ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಸಿದರೆ, ಇಂತಹ ಮೂಢನಂಬಿಕೆ ಬಿತ್ತುವ ಚಲನ ಚಿತ್ರಗಳು ಹೇಗೆ ಸೆನ್ಸಾರ್ ನಿಂದ ನುಣುಚಿಕೊಂಡು ಹೊರಬರುತ್ತಿವೆ ಎನ್ನುವ ‘ಘೋರ’ ಸಂಗತಿಗಳು ಹೊರಬರಬಹುದು.

ಒಂದು ಕಾಲದಲ್ಲಿ ಜನಪದ ಕತೆ ಎನ್ನುವ ಹೆಸರಿನಲ್ಲಿ ಮಾಯ ಮಂತ್ರಗಳಿರುವ ಚಲನಚಿತ್ರಗಳು ತಯಾರಾಗುತ್ತಿದ್ದವು. ಸಿನಿಮಾ ಆರಂಭ ಕಾಲದಲ್ಲಿ ಟ್ರಿಕ್ ಶಾಟ್‌ಗಳು ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತಿದ್ದವು. ಥ್ರಿಲ್ ಗಾಗಿ ಇಂತಹ ಕತೆಗಳು ರಂಜನೀಯವಾಗಿ ಬರುತ್ತಿದ್ದವು. ನಾಗಕನ್ನಿಕಾ (1949) ಕತೆಯನ್ನೇ ನೋಡಿ– ಅತಿಮಾನುಷ ಶಕ್ತಿಗಳನ್ನು ಮಂತ್ರವಾದಿಯೊಬ್ಬ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಕತೆ. ‘ಜಾತಕ ಫಲ’ದಲ್ಲಿ (1953) ಸುಳ್ಳು ಜೋತಿಷದ ಪ್ರಭಾವವಿದ್ದರೆ, ‘ಆಷಾಢಭೂತಿ’ಯಲ್ಲಿ (1955) ಕಳ್ಳರಿಬ್ಬರು ಸ್ವಾಮೀಜಿಗಳ ವೇಷ ಧರಿಸಿ ಜನರಿಗೆ ಮೋಸ ಮಾಡುವ ತಂತ್ರಗಾರಿಕೆ ಬಯಲಾಗಿದೆ.

‘ಸ್ತ್ರೀ ರತ್ನ’ (1955) ಚಿತ್ರದಲ್ಲಿ ಸೊಸೆಯ ಮೇಲೆ ಅತ್ತೆಯೇ ಮಾಟ ಮಾಡಿಸುತ್ತಾಳೆ. ‘ರತ್ನಮಂಜರಿ’ (1962) ಯಲ್ಲೂ ಮಾಂತ್ರಿಕನದೇ ದರ್ಬಾರು. ‘ಸತಿಶಕ್ತಿ’ಯಲ್ಲಿ ಮಂತ್ರ ಶಕ್ತಿಯ ಪ್ರಭಾವ ಎಷ್ಟಿತ್ತೆಂದರೆ ಮಾಂತ್ರಿಕನೊಬ್ಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಎಪ್ಪತ್ತರ ದಶಕದಲ್ಲಿ ಸಾಮಾಜಿಕ ಚಿತ್ರಗಳ ಪ್ರಭಾವ ಹೆಚ್ಚಾಗಿ ಮಂತ್ರವಾದಿಗಳು ಮರೆಯಾದರೂ ಅದೊಂದು ತಾತ್ಕಾಲಿಕ ನಿಲುಗಡೆ ಮಾತ್ರ ಆಗಿತ್ತು.

ಹಾಲಿವುಡ್‌ನಲ್ಲೂ ಕೂಡ ಭೂತ, ಹಾರರ್‌ ಚಿತ್ರ ಪರಂಪರೆ ಇದೆ. ಇದನ್ನೊಂದು ಬಾಕ್ಸ್ ಆಫೀಸ್‌ ತಂತ್ರವನ್ನಾಗಿ ಎಲ್ಲರೂ ಪರಿಗಣಿಸುವುದರಿಂದ ಅದು ಬೀರುವ ಪರಿಣಾಮದತ್ತ ಎಲ್ಲರಿಗೂ ಅಸಡ್ಡೆ. ಹ್ಯಾರಿಪಾಟರ್‌ ಬೀರಿದ ಪ್ರಭಾವ ಗೊತ್ತೇ ಇದೆ. ಕನ್ನಡದಲ್ಲೂ ‘ಆಪ್ತಮಿತ್ರ’, ‘ಆಪ್ತರಕ್ಷಕ’, ‘ಕಲ್ಪನಾ’ ಹೀಗೆ ಮೂಢನಂಬಿಕೆಯನ್ನು ಪ್ರತಿಪಾದಿಸುವ ಚಿತ್ರಗಳು ಭಾರೀ ಯಶಸ್ಸಾಗಿವೆ.

ಅತ್ಯಂತ ಜನಪ್ರಿಯ ನಾಯಕನಟರೇ ಇಂತಹ ಚಿತ್ರಗಳಲ್ಲಿ ಅಭಿನಯಿಸುವುದರಿಂದ ಅದಕ್ಕೆ ಜನಪ್ರಿಯತೆಯ ತಾನಾಗೇ ಬರುತ್ತದೆ. ಆದರೆ ನಾಯಕ ನಟರು ಸಂಭಾವನೆಯ ಬೆನ್ನುಹತ್ತಿ, ತಾನು ಎಂತಹ ಪಾತ್ರವನ್ನು ವಹಿಸುತ್ತಿದ್ದೇನೆ, ಎಂತಹ ಜೀವನ ಮೌಲ್ಯವನ್ನು ಸಮಾಜಕ್ಕೆ ತೋರಿಸಿಕೊಡುತ್ತಿದ್ದೇನೆ ಎಂಬುದನ್ನು ಚಿಂತಿಸಬೇಕಲ್ಲವೇ? ಅಂತಹ ಚಿಂತನೆ ಅತ್ಯಂತ ಜನಪ್ರಿಯ ಮಾಧ್ಯಮವಾದ ಸಿನಿಮಾದಲ್ಲೂ ಆಗಬೇಕು. ಆಗ ದಾಬೋಳ್ಕರ್‌ ಅಂತಹ ವಿಚಾರವಾದಿಗಳ ಹೋರಾಟಕ್ಕೂ ಬಲ ಬರುತ್ತದೆ. ಮೌಢ್ಯ ನಿಷೇಧ ಕಾಯ್ದೆ ತರಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಂತನೆಗೂ ಶಕ್ತಿ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT