ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರದಂಥ ಮನುಷ್ಯರಿಗೆ ಜಾಣ ನಗರಗಳು

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ಇಂಗ್ಲಿಷಿನ ‘ಸ್ಮಾರ್ಟ್’ ಎಂಬ ಪದಕ್ಕೆ ಬಹಳಷ್ಟು ಅರ್ಥಗಳಿವೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ‘ಶಾಣ್ಯ’ (ಜಾಣ) ಎಂದರೆ ಅದು ಹೊಳೆಯಿಸಬಹುದಾದ ಎಲ್ಲಾ ಅರ್ಥಗಳೂ ಇಂಗ್ಲಿಷಿನ ಸ್ಮಾರ್ಟ್‌ಗೂ ಇದೆ. ಇದೇ ಕಾರಣದಿಂದ ರಾಜಕಾರಣಿಗಳು, ಬೃಹತ್ ಉದ್ಯಮಗಳು ಮತ್ತು ಅಧಿಕಾರಶಾಹಿ ಒಟ್ಟೊಟ್ಟಿಗೇ ‘ಸ್ಮಾರ್ಟ್ ಸಿಟಿ’ಯ ಜಪ ಮಾಡುವ ಈ ಹೊತ್ತಿನಲ್ಲಿ ನೆನಪಾಗುವುದು ‘ಆ್ಯಕ್ಟಿಂಗ್ ಸ್ಮಾರ್ಟ್’ ಎಂಬ ಪ್ರಯೋಗ. ಅಥವಾ ‘ಶಾಣ್ಯಾನಂಗ್ ಆಡ್ತಾನ’ ಎಂಬ ಹೇಳಿಕೆ.

ನರೇಂದ್ರ ಮೋದಿಯವರು ಪ್ರಧಾನಿ ಪದವಿಯನ್ನು ಅಲಂಕರಿಸಿದ ನಂತರ ‘ಸ್ಮಾರ್ಟ್’ ಎಂಬ ಪದಕ್ಕೆ ಅವರ ಸರ್ಕಾರದೊಳಗೆ ಬಹಳ ಮಹತ್ವ ಬಂದಿದೆ. ಇದೇನು ಹೊಸ ವಿಚಾರವಲ್ಲ. ಈ ಹಿಂದೆ ಇಂಥದ್ದೇ ಅನೇಕ ಪದಪುಂಜಗಳು ನಮ್ಮನ್ನು ಆಳಿವೆ. ಜವಹರಲಾಲ್ ನೆಹರೂ ಅವರ ಕಾಲದಲ್ಲಿ ‘ವೈಜ್ಞಾನಿಕ’ ಮತ್ತು ‘ಆಧುನಿಕ’ ಎಂಬ ಪದಗಳಿಗೆ ಇಂಥದ್ದೇ ಮಹತ್ವವಿತ್ತು. ಇಂದಿರಾಗಾಂಧಿಯವರ ಯುಗದಲ್ಲಿ ‘ಬಡತನ’ದ ಸುತ್ತ ಒಂದಷ್ಟು ಸರ್ಕಸ್ ನಡೆಯಿತು. ರಾಜೀವ್‌ಗಾಂಧಿ ಕಾಲಘಟ್ಟದಲ್ಲಿ ಈ ಸ್ಥಾನಕ್ಕೆ ‘ಎಲೆಕ್ಟ್ರಾನಿಕ್’ ಬಂತು. ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಎಂಬುದು ಕೇವಲ ಒಂದು ಅಕ್ಷರವಾಗಿ ಕೇವಲ ‘ಇ’ ಆಯಿತು. ಇದಕ್ಕೆ ಪೂರಕವಾದ ಪದಗಳನ್ನು ಜೋಡಿಸುವ ಕ್ರಿಯೆ ನಡೆಯಿತು. ಇದರಲ್ಲಿ ಅತ್ಯಂತ ಪ್ರಖ್ಯಾತವಾದುದು ‘ಇ–ಗವರ್ನೆನ್ಸ್’ ಅಥವಾ ಇ–ಆಡಳಿತ. ಮಧ್ಯೆ ‘ಟೆಲಿ’ ಮತ್ತು ‘ಮೊಬೈಲ್’ಗಳೂ ಬಂದು ಹೋದವು. ಇದು ಸ್ಮಾರ್ಟ್ ಫೋನುಗಳ ಕಾಲವಾಗಿರುವುದರಿಂದಲೋ ಏನೋ ಸರ್ಕಾರ ‘ಸ್ಮಾರ್ಟ್ ಸಿಟಿ’ ಅಥವಾ ಶಾಣ್ಯಾ ನಗರಗಳ ಪರಿಕಲ್ಪನೆಯನ್ನು ಮುಂದಿಡುತ್ತಿದೆ.

ಈ ವರ್ಷದ ಬಜೆಟ್‌ನಲ್ಲಿ ಅರುಣ್ ಜೇಟ್ಲಿ ಅವರು 100 ‘ಜಾಣ ನಗರ’ಗಳ ಘೋಷಣೆ ಮಾಡಿದರು. ಇವುಗಳಿಗೆ ಸುಮಾರು 7,060 ಕೋಟಿ ರೂಪಾಯಿಗಳನ್ನೂ ಮೀಸಲಿಟ್ಟಿದ್ದಾರೆ. ಅಂದರೆ ಪ್ರತೀ ನಗರಕ್ಕೆ ಸದ್ಯ ದೊರೆಯುವ ಕೇಂದ್ರದ ಅನುದಾನ ಸುಮಾರು 70 ಕೋಟಿಗಿಂತ ಸ್ವಲ್ಪ ಹೆಚ್ಚು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ದೊರೆಯಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಮೊದಲ ಹಂತದಲ್ಲಿ 20 ನಗರಗಳು ಮುಂದಿನ ಹಂತಗಳಲ್ಲಿ ಇನ್ನಷ್ಟನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬುದು ಸದ್ಯದ ಲೆಕ್ಕಾಚಾರ. ಸರ್ಕಾರ ನೂರು ಹೊಸ ನಗರಗಳನ್ನೇನೂ ನಿರ್ಮಿಸುವುದಿಲ್ಲ. ಈಗಿರುವ ನಗರಗಳನ್ನೇ ಸ್ಮಾರ್ಟ್ ಆಗಿಸುವುದು ಮತ್ತು ಹೊಸ ನಗರಗಳನ್ನು ಕಟ್ಟುವುದೆರಡೂ ಸರ್ಕಾರದ ಪರಿಗಣನೆಯಲ್ಲಿದೆ.

ಇಷ್ಟಕ್ಕೂ ಈ ‘ಜಾಣ ನಗರ’ಗಳು ಎಂದರೇನು? ಇದಕ್ಕೆ ಒಂದು ಸ್ಪಷ್ಟ ಉತ್ತರವನ್ನು ನೀಡುವುದು ಕಷ್ಟ. ಈ  ಪರಿಕಲ್ಪನೆಯ ಹಿಂದೆ ನಗರ ಯೋಜನೆಗಳ ತಜ್ಞರಿಗಿಂತ ಹೆಚ್ಚಾಗಿ ನಗರಗಳನ್ನು ನಿರ್ವಹಿಸಲು ಬೇಕಿರುವ ಮಾಹಿತಿ ತಂತ್ರಜ್ಞಾನಾಧಾರಿತ ಉಪಕರಣಗಳು ಮತ್ತು ತಂತ್ರಾಂಶಗಳನ್ನು ತಯಾರಿಸುವ ಕಂಪೆನಿಗಳಿವೆ. ಇದು ಜನ್ಮತಳೆದದ್ದೇ 90ರ ದಶಕದಲ್ಲಿ ಎಲ್ಲವನ್ನೂ ‘ಸ್ಮಾರ್ಟ್’ ಆಗಿಸಲು ಪ್ರಯತ್ನಿಸಿದ ಸಿಸ್ಕೊ, ಐಬಿಎಂ. ಸೀಮೆನ್ಸ್‌ನಂಥ ‘ಸ್ಮಾರ್ಟ್’ ವ್ಯಾಪಾರಿ ಸಂಸ್ಥೆಗಳಿಂದ. ‘ಸ್ಮಾರ್ಟ್ ಸಿಟೀಸ್’ ಎಂಬ ಪದಪುಂಜವನ್ನೇ 2011ರಲ್ಲಿ ಐಬಿಎಂ ಒಂದು ಟ್ರೇಡ್ ಮಾರ್ಕ್ ಆಗಿ ನೋಂದಾಯಿಸಿ ತನ್ನದಾಗಿಸಿಕೊಂಡಿದೆ.

ನಗರವೊಂದು ‘ಜಾಣ’ ವಿಶೇಷಣವನ್ನು ಅಂಟಿಸಿಕೊಳ್ಳುವುದಕ್ಕೆ ಅತ್ಯುನ್ನತ ದರ್ಜೆಯ ಮೂಲ ಸೌಕರ್ಯ ಮತ್ತು ತಂತ್ರಜ್ಞಾನಾಧಾರಿತ ಆಡಳಿತವಿರಬೇಕಾದುದು ಅನಿವಾರ್ಯ. ಉಳಿದೆಲ್ಲವನ್ನೂ ಅನುಕೂಲ ಸಿಂಧು ತತ್ವದಲ್ಲಿ ನಿರ್ವಚಿಸಿಕೊಳ್ಳಬಹುದು. ಕೇಂದ್ರ ಸರ್ಕಾರ ಪ್ರಕಟಿಸಿರುವ ಜಾಣ ನಗರಗಳ ಕುರಿತ ಪರಿಕಲ್ಪನಾ ಟಿಪ್ಪಣಿ (http://goo.gl/p0JZbf) ಹೇಳುವಂತೆ ‘ಇವು ಬಂಡವಾಳ, ವೃತ್ತಿಪರರು ಮತ್ತು ತಜ್ಞರನ್ನು ಆಕರ್ಷಿಸುವ ಸಾಮರ್ಥ್ಯವುಳ್ಳ ನಗರಗಳು. ಒಳ್ಳೆಯ ಗುಣಮಟ್ಟದ ಮೂಲ ಸೌಕರ್ಯ, ತಮ್ಮ ವೃತ್ತಿ ಅಥವಾ ಉದ್ಯಮವನ್ನು ದಕ್ಷತೆಯಿಂದ ನಡೆಸುವುದಕ್ಕೆ ಅನುಕೂಲವಾಗುವಂತೆ ಅಧಿಕಾರಶಾಹಿಯ ತೊಂದರೆಗಳಿಲ್ಲದ ಸರಳ ಮತ್ತು ಪಾರದರ್ಶಕವಾದ ಆನ್‌ಲೈನ್ ಮೂಲಕ ವಾಣಿಜ್ಯ ಮತ್ತು ಸಾರ್ವಜನಿಕ ಸೇವೆಗಳನ್ನು ಒದಗಿಸುವುದು ಪೌರ ಕೇಂದ್ರಿತ ಬಂಡವಾಳ ಸ್ನೇಹಿ ಸ್ಮಾರ್ಟ್ ಸಿಟಿಗಳ ಮುಖ್ಯ ಲಕ್ಷಣ’.

ಇಂಥಾ ಜಾಣ ನಗರಗಳನ್ನು ಏಕೆ ನಿರ್ಮಿಸಬೇಕು? ಭಾರತ ಬಹಳ ವೇಗವಾಗಿ ನಗರೀಕರಣಗೊಳ್ಳುತ್ತಿದೆ. 2030ರ ಹೊತ್ತಿಗೆ ಅರವತ್ತು ಕೋಟಿ ಜನರು ನಗರಗಳಲ್ಲಿ ಇರುತ್ತಾರೆ. ಇದಕ್ಕಾಗಿ ಏನನ್ನಾದರೂ ಮಾಡದೇ ಹೋದರೆ ಮುಂದೆ ಕಷ್ಟ ಎಂಬುದು ಸರ್ಕಾರದ ಉತ್ತರ. ಇದನ್ನು ಓದುವಾಗ ಇಂಥದ್ದೇ ಮಾತುಗಳನ್ನು ಬೇರೊಂದು ಸಂದರ್ಭದಲ್ಲಿ ಕೇಳಿದ್ದು ಅನೇಕರಿಗೆ ನೆನಪಾಗಬಹುದು. ಹೌದು, ನಾವೆಲ್ಲಾ ಪಠ್ಯ ಪುಸ್ತಕಗಳಲ್ಲಿ ಓದಿದ ವಾಕ್ಯವದು ‘ಭಾರತ ಹಳ್ಳಿಗಳ ದೇಶ’. ಸುಮಾರು ಅರವತ್ತು ವರ್ಷಗಳ ಕಾಲ ಇದನ್ನೇ ಪಠಿಸುತ್ತಿದ್ದ ಸರ್ಕಾರಗಳೆಲ್ಲವೂ ‘ಗ್ರಾಮೀಣಾಭಿವೃದ್ಧಿ’ಯನ್ನು ಮಾಡುತ್ತಲೇ ಬಂದಿದ್ದವು. ಈಗ ಅದನ್ನೇ ಸ್ವಲ್ಪ ಬದಲಾಯಿಸಿ ‘ಭಾರತ ನಗರಗಳ ದೇಶ’ವಾಗುತ್ತಿದೆ ಎಂದು ಹೇಳುತ್ತಿದ್ದೇವಷ್ಟೇ. ಒಂದು ಕಾಲದಲ್ಲಿ ‘ಗ್ರಾಮ ಸ್ವರಾಜ್ಯ’ದ ಮಂತ್ರ ಪಠಿಸುತ್ತಿದ್ದವರೀಗ ಸ್ಮಾರ್ಟ್ ಸಿಟಿ ಭಜನೆ ಆರಂಭಿಸಿದ್ದಾರೆ.

ಈ ವರ್ತನೆಗೆ ಕಳೆದ ಅರವತ್ತು ವರ್ಷಗಳ ಇತಿಹಾಸದಿಂದ ಇದಕ್ಕೆ ಅನೇಕ ಉದಾಹರಣೆಗಳನ್ನು ಹೆಕ್ಕಬಹುದು. ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ನೀಡಲು ಸಾಧ್ಯವಾಗದೇ ಇದ್ದರೆ ಖಾಸಗಿ ಶಾಲೆಗಳಲ್ಲಿ ಬಡವರಿಗೊಂದಷ್ಟು ಸೀಟು ಮೀಸಲಿಡುವುದು. ಬಡತನವನ್ನು ನಿವಾರಿಸಲು ಸಾಧ್ಯವಾಗದೇ ಇದ್ದರೆ ಬಡತನ ವ್ಯಾಖ್ಯೆಯನ್ನೇ ಬದಲಾಯಿಸುವುದು. ಈ ದೃಷ್ಟಿಯಲ್ಲಿ ‘ಸ್ಮಾರ್ಟ್ ಸಿಟಿ’ ಪರಿಕಲ್ಪನೆಯೂ ಇಂಥದ್ದೊಂದು ಜಾಣ ಹೆಜ್ಜೆಯೇ ಎಂಬ ಸಂಶಯ ಬರುತ್ತದೆ.

ಹಳ್ಳಿಗಳ ಅಭಿವೃದ್ಧಿಗೆ ಈ ತನಕ ನೀಡಿದ ಭರವಸೆಗಳನ್ನು ಸ್ವಲ್ಪ ಮಟ್ಟಿಗಾದರೂ ಈಡೇರಿಸಿದ್ದರೆ ಕನಿಷ್ಠ ಅಂಥದ್ದೊಂದು ಮನಸ್ಸು ಇದ್ದಿದ್ದರೆ ಇಂದು ನಗರೀಕರಣದ ಬಗ್ಗೆ ಆಡುತ್ತಿರುವ ಮಾತುಗಳಿಗೆ ಒಂದು ಅರ್ಥವಿರುತ್ತಿತ್ತು. ಆದರೆ ಈಗಿನ ಮಾತುಗಳು ಆರೂವರೆ ದಶಕಗಳ ಅವಧಿಯ ಸಾಮೂಹಿಕ ಪಾಪವನ್ನು ತೊಳೆಯುುದಕ್ಕೆ ತಂತ್ರಜ್ಞಾನ ಗಂಗೆಯನ್ನು ತಂದರೆ ಸಾಕು ಎಂಬಂತಿದೆ.

ನಗರಗಳನ್ನು ಸ್ಮಾರ್ಟ್ ಆಗಿಸುವುದಕ್ಕೆ ಬೇಕಿರುವ ತಂತ್ರಜ್ಞಾನವನ್ನು ಒದಗಿಸುವುದಕ್ಕೆ ಐಬಿಎಂ, ಸಿಸ್ಕೊ, ಸೀಮೆನ್ಸ್. ಹಿಟಾಚಿ, ಅಕ್ಸೆಂಚರ್, ಮೈಕ್ರೊಸಾಫ್ಟ್, ಗೂಗಲ್ ಹೀಗೆ ಹಲವರು ಸಿದ್ಧರಾಗಿ ನಿಂತಿದ್ದಾರೆ. ಆದರೆ ನಮ್ಮ ನಗರಗಳ ಸಮಸ್ಯೆ ಕೇವಲ ತಂತ್ರಜ್ಞಾನದಿಂದ ಬಗೆಹರಿಯುತ್ತದೆಯೇ? ಬೆಂಗಳೂರಿನ ಸುತ್ತಮುತ್ತ ಅತಿ ಹೆಚ್ಚು ಪ್ರಮಾಣದ ಭೂಕಬಳಿಕೆ ನಡೆದದ್ದೇ ಭೂದಾಖಲೆಗಳ ಕಂಪ್ಯೂಟರೀಕರಣದ ನಂತರ ಎಂಬುದು ವಾಸ್ತವ. ಬೆಂಗಳೂರಿನ ಕಸದ ನಿರ್ವಹಣೆ ಅತ್ಯಂತ ಸಂಕೀರ್ಣ ಸಮಸ್ಯೆಯಾಗಿ ಬದಲಾದದ್ದು ಕಸ ಸಂಸ್ಕರಣೆಗೆ ಬೇಕಿರುವ ಉನ್ನತ ತಂತ್ರಜ್ಞಾನದ ಅಭಿವೃದ್ಧಿಯಾದ ನಂತರ. ಬೆಂಗಳೂರಿನ ವಾಹನ ನಿಬಿಡ ರಸ್ತೆಗಳು, ಎಲ್ಲಾ ನಿಯಮಗಳನ್ನು ಉಲ್ಲಂಘಿಸಿರುವ ಕಟ್ಟಡಗಳು, ವಸೂಲಿಯಾಗದೆ ಉಳಿಯುವ ಆಸ್ತಿ ತೆರಿಗೆ, ಕೆಟ್ಟ ರಸ್ತೆಗಳು, ಕಳಪೆ ಕಾಮಗಾರಿ ಇವ್ಯಾವುದಕ್ಕೂ ತಂತ್ರಜ್ಞಾನವಿಲ್ಲದೇ ಇರುವುದು ಕಾರಣವಲ್ಲ. ಇವೆಲ್ಲದರ ಹಿಂದಿರುವುದು ಉತ್ತರದಾಯಿತ್ವವೇ ಇಲ್ಲದೇ ಇರುವ ವ್ಯವಸ್ಥೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೂ ಈ ಉತ್ತರದಾಯಿತ್ವವಿಲ್ಲದ ವ್ಯವಸ್ಥೆ ಮುಂದುವರಿಯುವಂತೆ ಕಾಣಿಸುತ್ತದೆ. ಸಂವಿಧಾನದ 73ನೇ ತಿದ್ದುಪಡಿ, ನಗರಗಳ ಆಡಳಿತದಲ್ಲಿ ಸ್ಥಳೀಯ ಸರ್ಕಾರದ ಪಾತ್ರವನ್ನು ಕಡ್ಡಾಯಗೊಳಿಸಿದೆ. ‘ಸ್ಮಾರ್ಟ್ ಸಿಟಿ’ಗಳ ಕುರಿತಂತೆ ಸರ್ಕಾರ ನೀಡಿರುವ ಪರಿಕಲ್ಪನಾ ಟಿಪ್ಪಣಿಯಲ್ಲಿ ಇವುಗಳ ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಕುರಿತ ಮಾತುಗಳಿವೆಯೇ ಹೊರತು ಸ್ಥಳೀಯ ಸರ್ಕಾರದ ಕುರಿತಂತೆ ಯಾವ ಮಾಹಿತಿಯೂ ಇಲ್ಲ.

ಇವು ಸಂವಿಧಾನದ ಪರಿಚ್ಛೇದ ‘243ಕ್ಯು’ ಪ್ರಕಾರ ರಾಜ್ಯಪಾಲರು ನಿರ್ದಿಷ್ಟ ಪ್ರದೇಶವನ್ನು ‘ಕೈಗಾರಿಕಾ ನಗರ’ ಎಂದು ಘೋಷಿಸಿದರೆ ಅಲ್ಲಿಗೊಂದು ಸ್ಥಳೀಯ ಸರ್ಕಾರದ ಅಗತ್ಯವಿಲ್ಲ. ಗುಜರಾತ್‌ನಲ್ಲಿ ಈಗಾಗಲೇ ಇದು ಕಾರ್ಯರೂಪಕ್ಕೆ ಬಂದಿದೆ. ಅಂದರೆ ಸರ್ಕಾರದ ‘ಜಾಣ ನಗರ’ಗಳು ಪ್ರಜಾಸತ್ತಾತ್ಮಕ ಉತ್ತರದಾಯಿತ್ವಕ್ಕೆ ಬದ್ಧವಾಗಿರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ರೂಪಿಸುತ್ತಿರುವ ಆಡಳಿತ ನೀತಿಗಳೆಲ್ಲವೂ ಮನುಷ್ಯರಿಗಿಂತ ಹೆಚ್ಚಾಗಿ ತಂತ್ರಜ್ಞಾನವನ್ನು ನಂಬುತ್ತಿರುವುದರಿಂದ ಇದು ಸಹಜವೂ ಹೌದು. ಈಗಾಗಲೇ ವಿಶೇಷ ಆರ್ಥಿಕ ವಲಯಗಳಲ್ಲಿ ಮನುಷ್ಯರೂ ಯಂತ್ರಗಳಾಗಿದ್ದಾರೆ. ಜಾಣ ನಗರಗಳ ನಿವಾಸಿಗಳೂ ಹೀಗೆ ಯಂತ್ರಗಳಾಗಿರಲಿ ಎಂಬುದು ಸ್ಮಾರ್ಟ್ ಆಗಿರುವ ನೀತಿ ನಿರೂಪಕರ ಆಶಯವೂ ಆಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT