ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕ್ತಿಯ ಬಲ

Last Updated 5 ಜನವರಿ 2015, 19:30 IST
ಅಕ್ಷರ ಗಾತ್ರ

ಗುಂಡಪ್ಪ ಬಡವನಾದರೂ ಮರ್ಯಾದಸ್ಥ, ಬುದ್ಧಿವಂತ. ಬಂದದ್ದರಲ್ಲೇ ತೃಪ್ತಿಪಟ್ಟುಕೊಂಡು ಬದುಕುವಂಥವ. ಅವನ ಹೆಂಡತಿ ಗುಂಡಕ್ಕನೂ ತುಂಬ ಮುಗ್ಧೆ.

ಒಂದು ಬಾರಿ ಗುಂಡಣ್ಣನಿಗೆ ವಿಪರೀತ ಕಾಯಿಲೆ ಬಂದಿತು. ಆತನಿಗೆ ಸುಮಾರು ಒಂದು ತಿಂಗಳು ಕೆಲಸಕ್ಕೇ ಹೋಗಲು ಆಗಲಿಲ್ಲ. ದಿನನಿತ್ಯ ದುಡಿದಾಗಲೇ ಬಡವರಿಗೆ ಎರಡು ಹೊತ್ತು ಹೊಟ್ಟೆ ತುಂಬುವುದು. ಈತ ಮಲಗಿದರೆ ಬದುಕು ಹೇಗೆ ನಡೆದೀತು? ಆಗ ತಾನು ಸಾಕಿಕೊಂಡಿದ್ದ ಎಮ್ಮೆಯನ್ನೇ ಮಾರಲು ತೀರ್ಮಾನಿಸಿದ. ಅದನ್ನು ಮಾರಿ ಬಂದ ಹಣದಲ್ಲಿ ಮೂರು-ನಾಲ್ಕು ತಿಂಗಳು ಜೀವನ ನಡೆಯುತ್ತದೆ. ಅಷ್ಟರಲ್ಲಿ ತನ್ನ ಆರೋಗ್ಯ ಸುಧಾರಿಸಿ ಕೆಲಸಕ್ಕೆ ಹೋಗಬಹುದು. ಮುಂದೆ ಅನುಕೂಲವಾದರೆ ಮತ್ತೊಂದು ಹಸುವನ್ನೋ ಎಮ್ಮೆಯನ್ನೋ ಕೊಳ್ಳಬಹುದೆಂದು ಲೆಕ್ಕ ಹಾಕಿದ. ಮರುದಿನ ಊರಿನಲ್ಲಿ ಜಾನುವಾರುಗಳ ಸಂತೆ. ಎಮ್ಮೆಯನ್ನು ಜಾತ್ರೆಗೆ ತೆಗೆದುಕೊಂಡು ಹೋಗಿ ಮಾರಿಕೊಂಡು ಬಾ ಎಂದು ಗುಂಡಕ್ಕನನ್ನು ಕಳುಹಿಸಿದ.

ಆಕೆ ಅದನ್ನು ಹೊಡೆದುಕೊಂಡು ಜಾತ್ರೆಗೆ ಹೋಗಿ ಮರಕ್ಕೆ ಕಟ್ಟಿ ಗಿರಾಕಿಗಳಿಗಾಗಿ ಕಾಯುತ್ತಿದ್ದಳು.  ಆಗ ಊರಿನಲ್ಲಿದ್ದ ಮೂರು ಉಡಾಳ ಹುಡುಗರು ಅದನ್ನು ಕಂಡು ಆಕೆ ತೂಕಡಿಸುತ್ತಿದ್ದಾಗ ಎಮ್ಮೆಯನ್ನು ಬಿಚ್ಚಿಕೊಂಡು ಹೊರಟು ಹೋದರು.  ಆಕೆಗೆ ಎಚ್ಚರವಾದ ಮೇಲೆ ಎಮ್ಮೆಯನ್ನು ಕಾಣದೆ ಹೋ ಎಂದು ಅಳತೊಡಗಿದಳು.  ಮತ್ತೆ ಈ ಕಳ್ಳರೇ ಬಂದು, ಗುಂಡಕ್ಕ ಈ ಜಾತ್ರೆಯಲ್ಲಿ ಏನೋ ಮಾಂತ್ರಿಕತೆ ಇದೆ. ಪ್ರಾಣಿಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ ಎಂದರು. ಪಾಪ! ಗುಂಡಕ್ಕ ಅಳುತ್ತ ಮನೆಗೆ ಬಂದು ಆದದ್ದನ್ನು ಗುಂಡಣ್ಣನಿಗೆ ತಿಳಿಸಿದಳು. ಆತನೂ ಕ್ಷಣಕಾಲ ಗಾಬರಿಯಾದ, ಕಂಗೆಟ್ಟ. ನಂತರ ಸ್ವಲ್ಪ ಆಳವಾಗಿ ಚಿಂತಿಸಿ ಇದರಲ್ಲೇನೋ ಮೋಸವಿದೆ ಮತ್ತು ಆ ಹುಡುಗರೇ ಮೋಸಗಾರರು ಎಂಬ ತೀರ್ಮಾನಕ್ಕೆ ಬಂದ.

ತಕ್ಷಣ ಮನೆಯಲ್ಲಿದ್ದ ಒಂದೆರಡು ವಸ್ತುಗಳನ್ನು ಮಾರಿ ಎರಡು ಮೊಲಗಳನ್ನು ಕೊಂಡು ತಂದ. ಒಂದನ್ನು ಮಂಚದ ಕೆಳಗೆ ಕಟ್ಟಿ ಇನ್ನೊಂದನ್ನು ಕೈಯಲ್ಲಿ ಹಿಡಿದು ಹೊರಗೆ ಹೋಗುವಾಗ ಹೆಂಡತಿಗೆ ಹೇಳಿದ, ಇವತ್ತು ಮನೆಯಲ್ಲಿ ಊಟಕ್ಕೆ ಪಾಯಸ, ಚಿತ್ರಾನ್ನ, ಆಂಬೊಡೆ ನಾಲ್ಕು ಜನರಿಗೆ ಆಗುವಷ್ಟು ಮಾಡು. ನಾನು ಮನೆಗೆ ಬಂದಾಗ ನನ್ನ ಜೊತೆಯಲ್ಲಿ ಇರುವವರಿಗೆ, ಮೊಲ ಹೇಳಿದಂತೆಯೇ ಮಾಡಿದೆ ಎನ್ನು. ಆಕೆ ಸರಿ ಎಂದಳು. ಗುಂಡಣ್ಣ ಮೊಲ ಹಿಡಿದು ಜಾತ್ರೆಗೆ ಬಂದ.  ಆ ಉಡಾಳರು ಈತನನ್ನು ನೋಡಿ,
ಏನು ಗುಂಡಣ್ಣ ಮೊಲ ತಂದಿದ್ದೀ ಮಾರಲು? ಪಾಪ! ನಿನ್ನ ಹೆಂಡತಿ ತಂದಿದ್ದ ಎಮ್ಮೆ ಮಾಯವಾಯಿತಲ್ಲ ಎಂದರು.

ಈತ ಜೋರಾಗಿ ನಕ್ಕು, ಎಮ್ಮೆ ಹೋದರೇನಂತೆ, ನನ್ನ ಪ್ರೀತಿಯ ಮೊಲ ಇದೆಯಲ್ಲ, ಇದಕ್ಕೆ ಕನಿಷ್ಠ ಐದು ಸಾವಿರ ರೂಪಾಯಿ ಸಿಕ್ಕುತ್ತದೆ ಎಂದ.  ಅವರು ಏನು ಮೊಲಕ್ಕೆ ಅಷ್ಟು ಹಣವೇ? ಎಂದು ಕೇಳಿದರು. ಗುಂಡಣ್ಣ ಹೇಳಿದ, ಇದು ಸಾಧಾರಣ ಮೊಲವಲ್ಲ. ನಾನು ಏನು ಹೇಳಿದರೂ ಅದಕ್ಕೆ ತಿಳಿಯುತ್ತದೆ. ಅಷ್ಟೇ ಅಲ್ಲ ಅದು ಯಾರನ್ನಾದರೂ ಒಪ್ಪಿಸಿ ಹೇಳಿದ ಕೆಲಸ ಮಾಡಿಕೊಂಡೇ ಬರುತ್ತದೆ. ಅವರು ಆಶ್ಚರ್ಯಪಡುತ್ತಿದ್ದಾಗಲೇ ಈಗ ನೋಡಿ ಎಂದು ಮೊಲದ ಕಿವಿಯಲ್ಲಿ ಹೇಳಿದ, ಮಗೂ ತಕ್ಷಣ ಮನೆಗೆ ಹೋಗಿ ಊಟಕ್ಕೆ ಪಾಯಸ, ಚಿತ್ರಾನ್ನ ಮತ್ತು ಅಂಬೊಡೆಯನ್ನು ನಾಲ್ಕು ಜನಕ್ಕೆ ಮಾಡುವಂತೆ ಗುಂಡಕ್ಕನಿಗೆ ಹೇಳು. ಮೊಲವನ್ನು ಕೆಳಗೆ ಬಿಟ್ಟ. ಅದು ಕುಣಿಯುತ್ತ ಹೋಯಿತು.

ನೀವೂ ಬನ್ನಿ ಮನೆಗೆ ಹೋಗಿ ಊಟ ಮಾಡೋಣ ಎಂದು ಕರೆದುಕೊಂಡು ಬಂದ.  ನಾಲ್ವರೂ ಮನೆಗೆ ಬರುವಷ್ಟರಲ್ಲಿ ಅಡಿಗೆಯಾಗಿತ್ತು. ಇದನ್ನೆಲ್ಲ ಏಕೆ ಮಾಡಿದೆ? ಎಂದು ಗುಂಡಣ್ಣ ಕೇಳಿದಾಗ ಆಕೆ ಮೊಲ ಬಂದು ಹೇಳಿತಲ್ಲ, ಅದಕ್ಕೇ ಮಾಡಿದೆ ಎಂದಾಗ ಮೂವರೂ ಕಳ್ಳರು ಬೆರಗಾದರು. ನೋಡಿದರೆ ಮಂಚದ ಕೆಳಗೆ ಅದೇ ಮೊಲ ಕುಳಿತಿದೆ! ಅವರು ಊಟ ಮಾಡಿ ಐದು ಸಾವಿರ ರೂಪಾಯಿ ಕೊಟ್ಟು ಮೊಲ ತೆಗೆದುಕೊಂಡು ಹೋದರು. ಹೋದವರೇ ಮೊಲದ ಕಿವಿಯಲ್ಲಿ, ಮಗೂ ನಮ್ಮ ಜಮೀನುದಾರರ ಮನೆಗೆ ಹೋಗಿ ನಮಗೆ ಇಪ್ಪತ್ತು ಸಾವಿರ ರೂಪಾಯಿ ತಕ್ಷಣ ಕೊಡುವಂತೆ ಒಪ್ಪಿಸು ಎಂದು ಹೇಳಿ ಬಿಟ್ಟರು. ಅದು ಕುಣಿಯುತ್ತ ಓಡಿತು. ಕಳ್ಳರು ಜಮೀನುದಾರನ ಮನೆಗೆ ಹೋಗಿ ಹಣ ಕೊಡು ಎಂದು ಅಬ್ಬರಿಸಿದರು.  ಆತ ತನ್ನ ಸೇವಕರಿಂದ ಇವರನ್ನು ಕಟ್ಟಿಸಿ, ಸರಿಯಾಗಿ ಹೊಡೆದು ಜೈಲಿಗೆ ಹಾಕಿಸಿದ.  ನಂತರ ಇವರು ತಪ್ಪೊಪ್ಪಿ ಕ್ಷಮೆ ಕೇಳಿ ಗುಂಡಣ್ಣನ ಎಮ್ಮೆಯನ್ನೂ ಮರಳಿ ಕೊಟ್ಟರು.

ಸಮಸ್ಯೆಯನ್ನು ಪರಿಹರಿಸಲು ಯಾವಾಗಲೂ ಶಕ್ತಿಯೇ ಸರಿಯಾದ ವಿಧಾನವಲ್ಲ. ಯುಕ್ತಿ ಸಾಧಿಸುವದನ್ನು ಅನೇಕ ಬಾರಿ ಶಕ್ತಿ ಸಾಧಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT