ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದ ನಾಯಿಗಳು ಮತ್ತು ಶಾಂತಿ ಮಂತ್ರ

Last Updated 5 ಆಗಸ್ಟ್ 2017, 20:17 IST
ಅಕ್ಷರ ಗಾತ್ರ

ಆರಂಭದಲ್ಲಿಯೇ ನಾನು ಓದುಗರ ಗಮನವನ್ನು ಬೇರೆಡೆ ಸೆಳೆಯುತ್ತಿರುವುದಕ್ಕೆ ಕ್ಷಮೆ ಕೋರುವೆ. ನನ್ನ ಕುಟುಂಬ ಮತ್ತು ನನ್ನನ್ನು ಬಲ್ಲವರಿಗೆ ನಾವು ಬೆಕ್ಕು ಮತ್ತು ನಾಯಿಗಳನ್ನು ಸಾಕುವ, ಅವುಗಳನ್ನು ಪ್ರೀತಿಸುವ ವಿಷಯ ಚೆನ್ನಾಗಿ ಗೊತ್ತು. ಹಲವಾರು ವರ್ಷಗಳಿಂದ ನಮ್ಮ ಕುಟುಂಬದ ಸದಸ್ಯರಾಗಿಯೇ ಬೆಳೆದು ಬಂದಿರುವ ಈ ಪ್ರಾಣಿಗಳಿಂದ ನಾವು ಬದುಕಿನ ಹಲವಾರು ಪಾಠಗಳನ್ನು ಕಲಿತಿದ್ದೇವೆ. ನನ್ನೆಲ್ಲ ರಾಜಕೀಯ ಅಂಕಣಗಳಲ್ಲಿ ಹಲವಾರು ಬಾರಿ ಆಸಕ್ತಿದಾಯಕ ಸಂಗತಿಗಳನ್ನು ಉಲ್ಲೇಖಿಸಲು, ಕೆಲ ಸಂಗತಿಗಳನ್ನು ಸ್ಪಷ್ಟಪಡಿಸಲು ಮತ್ತು ಹೋಲಿಕೆ ನೀಡಲೂ ಈ ಸಾಕುಪ್ರಾಣಿಗಳ ಜತೆಗಿನ ಒಡನಾಟದಿಂದ ಸಾಧ್ಯವಾಗಿದೆ.

ದಯವಿಟ್ಟು ಯಾರೊಬ್ಬರೂ ನನ್ನ ಮೂರು ಶ್ವಾನಗಳ ಕತೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಮನವರಿಕೆ ಮಾಡಿಕೊಡಲು ಇಷ್ಟೆಲ್ಲ ಸುದೀರ್ಘ ಪೀಠಿಕೆ ಹಾಕಬೇಕಾಯಿತು. ನನ್ನ ಪತ್ರಿಕಾ ವೃತ್ತಿ, ಸುದ್ದಿ ಮಾಧ್ಯಮ ಮತ್ತು ನರೇಂದ್ರ ಮೋದಿ ಸರ್ಕಾರಕ್ಕೆ ಎದುರಾಗಿರುವ ಮೊದಲ ಗಂಭೀರ ಸ್ವರೂಪದ ರಾಜತಾಂತ್ರಿಕ ಬಿಕ್ಕಟ್ಟಾಗಿರುವ ಸಿಕ್ಕಿಂ ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಗೂ ನಾಯಿಗಳ ವರ್ತನೆ ಕುರಿತ ದೃಷ್ಟಾಂತ ನೀಡಿರುವುದನ್ನು ಓದುಗರು ದಯವಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.

ಎಂಬತ್ತರ ದಶಕದ ಆರಂಭದಲ್ಲಿ ನಾವು ಶಿಲ್ಲಾಂಗ್‌ನಲ್ಲಿ ಆಸ್ಸಾಂ ಮಾದರಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದೆವು. ಪಕ್ಕದ ಪುಟ್ಟ ತೋಟದಲ್ಲಿ ಲ್ಹಾಸಾ ತಳಿಯ ಮೂರು ನಾಯಿಗಳು ನಮ್ಮ ಕುಟುಂಬದ ಸಾಕು ಪ್ರಾಣಿಗಳಾಗಿದ್ದವು. ತೋಟದ ಸುತ್ತಲೂ ಅಷ್ಟೇನೂ ಗಟ್ಟಿಮುಟ್ಟಾಗಿರದ ಬೇಲಿ ಇತ್ತು. ಬೇಲಿ ಹತ್ತಿರ ಮನುಷ್ಯ ಅಥವಾ ಇತರ ಪ್ರಾಣಿಗಳು ಸುಳಿದರೂ ಸಾಕು, ಅವರ ಮೇಲೆ ದಾಳಿ ಮಾಡಿದಂತೆ ಈ ಮೂರೂ ನಾಯಿಗಳು ವರ್ತಿಸುತ್ತಿದ್ದವು.

ಒಂದು ಮಧ್ಯಾಹ್ನ ನೆರೆಹೊರೆಯಲ್ಲಿನ ಕೋಳಿ ಸಾಕಾಣಿಕೆ ಕೇಂದ್ರದಿಂದ ಕೆಲ ಹುಂಜಗಳು ತಪ್ಪಿಸಿಕೊಂಡು ನಮ್ಮ ಮನೆಯ ಬೇಲಿಯತ್ತ ಬಂದಿದ್ದವು. ಅವುಗಳನ್ನು ಕಾಣುತ್ತಿದ್ದಂತೆ ರೋಷಾವೇಶ ಪ್ರದರ್ಶಿಸಿ ಆಕ್ರಮಣ ನಡೆಸಬೇಕಾಗಿದ್ದ ನಾಯಿಗಳು ಅವುಗಳ ಬಗ್ಗೆ ತುಂಬ ಉದಾಸೀನ ಧೋರಣೆ ಪ್ರದರ್ಶಿಸಿದ್ದು ಕಂಡು ನಮ್ಮ ಕುಟುಂಬದ ಸದಸ್ಯರಿಗೆಲ್ಲ ಅಚ್ಚರಿಯೋ ಅಚ್ಚರಿ. ಹಾದಿಹೋಕರನ್ನೂ ದುರುಗುಟ್ಟಿ ನೋಡುತ್ತಿದ್ದ ನಾಯಿಗಳು ಹುಂಜಗಳನ್ನು ಮಾತ್ರ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಈ ಮೊದಲು ಯಾವತ್ತೂ ನಾಯಿಗಳು ಈ ಬಗೆಯ ‘ದಾಳಿ’ ಕಂಡಿರಲಿಲ್ಲ. ಹುಂಜಗಳ ಮೇಲೆ ಎರಗಿ ಬೀಳಲು ನಾಯಿಗಳು ಹಿಂದೇಟು ಹಾಕಿದ್ದವು. ನಾಯಿಗಳ ಈ ಸ್ವಭಾವ ನಮ್ಮೆಲ್ಲರ ಗಮನ ಸೆಳೆದಿತ್ತು. ದಾಳಿ ಮಾಡಲು ನಾವು ಅವುಗಳನ್ನು ಸಾಕಷ್ಟು ಪ್ರಚೋದಿಸಿದರೂ ನಾಯಿಗಳು ಹುಂಜಗಳ ಅಸ್ತಿತ್ವವೇ ಇಲ್ಲದಂತೆ ವರ್ತಿಸಿದವು. ದಾಳಿಗೆ ತುದಿಗಾಲಲ್ಲಿ ನಿಲ್ಲಬೇಕಾಗಿದ್ದ ಈ ಸಾಕು ನಾಯಿಗಳು ಬದುಕಿ ಉಳಿಯುವ ಜಾಣ ಪ್ರಜ್ಞೆಯನ್ನು ಪ್ರದರ್ಶಿಸಿದ್ದವು.

ನಮ್ಮ ಕುಟುಂಬದ ಅನುಭವಕ್ಕೆ ಬಂದ ಶ್ವಾನಗಳ ವರ್ತನೆಯ ದೃಷ್ಟಾಂತ ಹೇಳುವ ಮೂಲಕ ನಾನು ನಿಮಗೆ ಕೆಲ ಸುಳಿವುಗಳನ್ನು ಆರಂಭದಲ್ಲಿಯೇ ನೀಡಿದ್ದೆ. ಒಂದು ವೇಳೆ ನಿಮಗೆ ಇದರಿಂದ ಯಾವುದೇ ಸುಳಿವು ಸಿಕ್ಕಿರದಿದ್ದರೆ ಅಥವಾ ಹಾಗೆ ನಟಿಸುತ್ತಿದ್ದರೆ, ನಮ್ಮ ಟೆಲಿವಿಷನ್‌ ಚಾನೆಲ್‌ಗಳಲ್ಲಿ ನಡೆಯುವ ಚರ್ಚಾಗೋಷ್ಠಿಗಳ ಉಪಯುಕ್ತತೆ ಬಗ್ಗೆ ಪರಾಮರ್ಶೆ ನಡೆಸಿ. ಪ್ರತಿದಿನ ಸಂಜೆ ಟೆಲಿವಿಷನ್‌ ಚಾನೆಲ್‌ಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುವ ತೀವ್ರ ರಾಷ್ಟ್ರೀಯತೆಯ ‘ನಕಲಿ ಶ್ಯಾಮ ಕಮಾಂಡೊ’ಗಳು ದೇಶದ ನಿಜವಾದ ಇಲ್ಲವೆ ಕಾಲ್ಪನಿಕ, ವಿದೇಶಿ ಅಥವಾ ಸ್ವದೇಶಿ ವೈರಿಯನ್ನು ಮಾತಿನಲ್ಲಿಯೇ ಸಂಹರಿಸುತ್ತಿರುತ್ತಾರೆ. ಗಾಳಿ ಬಂದಾಗ ತೂರಿಕೊಳ್ಳುವಂತೆ ಸಂದರ್ಭಕ್ಕೆ ತಕ್ಕಂತೆ ವೈರಿಗಳ ವಿರುದ್ಧ ಕೋಪತಾಪ ಪ್ರದರ್ಶಿಸುತ್ತಲೇ ಇರುತ್ತಾರೆ. ಅದನ್ನು ನೋಡಿದ ಮೇಲಾದರೂ, ದೋಕಲಾ ಪ್ರದೇಶದಲ್ಲಿನ ಚೀನಾ ಸೈನಿಕರ ಉಪಸ್ಥಿತಿಯನ್ನು ಬೇಲಿಯಾಚೆಗಿನ ಬೀಡಾಡಿ ಹುಂಜಗಳಂತೆ ಪರಿಗಣಿಸಿ. ಆದರೆ, ರಣೋತ್ಸಾಹಿಗಳು ಚೀನಾ ಸೈನಿಕರ ಹಾಜರಾತಿಯನ್ನು ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುವುದಿಲ್ಲ. ಆಕ್ರಮಣ ನಡೆಸಲು ಮುಂದೆ ಬಂದವರ ಎದುರು ಇವರೆಲ್ಲ ಹೇಡಿಯಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರೆ ಅದು ತಲೆಹರಟೆಯ ಧೋರಣೆಯಾಗಲಿದೆ. ಅವರು ಹಾಗೆ ಮಾಡಬೇಕೆಂದು ಕೆಲವರು ಅವರ ಮನವೊಲಿಸಿದಂತೆಯೂ ಕಾಣುತ್ತಿದೆ. ಇದೊಂದು ನಿಜಕ್ಕೂ ಗಂಭೀರ ಸ್ವರೂಪದ ರಾಜತಾಂತ್ರಿಕ ವಾದ ಎನ್ನುವುದು ಓದುಗರ ಗಮನದಲ್ಲಿ ಇರಲಿ. ಭಾರತೀಯರ ಇಂತಹ ವಿರೋಧಾಭಾಸ ಧೋರಣೆಯನ್ನು ಚೀನಿಯರು ಕುತೂಹಲದಿಂದ ಗಮನಿಸುತ್ತಿದ್ದಾರೆ.

ಪ್ರತಿ ದಿನ ಸಂಜೆ ಪಾಕಿಸ್ತಾನದ ವಿರುದ್ಧ ಮಾತಿನ ಸಮರ ಘೋಷಿಸುವ ರಣೋತ್ಸಾಹಿ ಭಾರತದ ಟೆಲಿವಿಷನ್‌ಗಳು, ಚೀನಾದ ಯುದ್ಧ ಸವಾಲು ಕಂಡು ಬರುವುದೇ ಇಲ್ಲ ಎಂಬಂತೆ ವರ್ತಿಸುತ್ತಿವೆ. ಇಂತಹ ನಿಲುವು ತೋರ್ಪಡಿಸುವಂತೆ ಸರ್ಕಾರವೇ ಅವುಗಳಿಗೆ ಸಲಹೆ ಅಥವಾ ನಿರ್ದೇಶನ ನೀಡಿರುವುದೇ ಎನ್ನುವ ಅನುಮಾನವೂ ಇಲ್ಲಿ ಕಾಡುತ್ತದೆ.

ಪುಟ್ಟ ರಾಷ್ಟ್ರ ಪಾಕಿಸ್ತಾನವನ್ನು ಹೀಗಳೆಯುತ್ತ ಸಂತಸಪಡುತ್ತಿದ್ದ ಟೆಲಿವಿಷನ್‌ ಮಾಧ್ಯಮ, ಬಲಿಷ್ಠ ವೈರಿ ಚೀನಾದ ಬಗ್ಗೆ ಮಾತ್ರ ಇನ್ನಿಲ್ಲದ ಸಬೂಬುಗಳ ಮೊರೆ ಹೋಗುತ್ತಿದೆ. ಇದನ್ನೆಲ್ಲ ನೋಡಿದರೆ, ಮಾಧ್ಯಮಗಳು ತಮ್ಮ ಮಾಮೂಲಿ ಧೋರಣೆ ಮೇಲೆ ಕಡಿವಾಣ ಹಾಕಿಕೊಂಡಂತೆ ಭಾಸವಾಗುತ್ತದೆ.

ಮಾಧ್ಯಮಗಳ ಮೇಲೆ ತಮ್ಮ ಸರ್ಕಾರ ಸಂಪೂರ್ಣ ನಿಯಂತ್ರಣ ಹೊಂದಿರುವಂತೆ, ಭಾರತ ಸರ್ಕಾರವೂ ತನ್ನ ಮಾಧ್ಯಮಗಳ ಮೇಲೆ ಹಿಡಿತ ಹೊಂದಿದೆ ಎಂದು ಚೀನಿಯರು ನಿರ್ಣಯಕ್ಕೆ ಬಂದರೆ, ಅದರಿಂದ ನಮ್ಮಂತಹ ಪತ್ರಕರ್ತರಿಗಷ್ಟೆ ಅಲ್ಲದೇ, ಭಾರತದ ರಾಷ್ಟ್ರೀಯ ಹಿತಾಸಕ್ತಿಗೂ ಧಕ್ಕೆ ಒದಗಲಿದೆ.

ಚೀನಾದಂತೆ, ಭಾರತ ಸರ್ಕಾರವೂ ಏನನ್ನು ಮಾತನಾಡಬೇಕು ಅಥವಾ ಮಾತನಾಡಬಾರದು ಎನ್ನುವ ಮನಸ್ಥಿತಿಯನ್ನು ‘ತನ್ನ’ ಮಾಧ್ಯಮಗಳ ಮೂಲಕವೇ ಬಹಿರಂಗಪಡಿಸಲು ಹೊರಟಿದೆ ಎನ್ನುವ ಭಾವನೆ ಮೂಡಿಸುತ್ತದೆ. ಪಾಕಿಸ್ತಾನವೂ ಸೇರಿದಂತೆ ಯಾವುದೇ ವೈರಿ ದೇಶದ ಬಗ್ಗೆ ದ್ವೇಷದ ಭಾವನೆ ತಳೆಯದಂತೆ ಮಾಧ್ಯಮಗಳಿಗೆ ಸರ್ಕಾರವು ತನಗೆ ಇಷ್ಟ ಬಂದಾಗಲ್ಲೆಲ್ಲ ನಿರ್ದೇಶನ ನೀಡುವ ಅಧಿಕಾರ ಹೊಂದಿರಲಿದೆ ಎನ್ನುವ ಭಾವನೆಗೆ ಈ ಬೆಳವಣಿಗೆಗಳು ಇಂಬು ನೀಡಲಿವೆ. ನಮ್ಮ ಮಾಧ್ಯಮಗಳ ಬಗ್ಗೆ ಚೀನಿಯರು ಹಗುರ ಧೋರಣೆ ತಳೆಯಲು ಈ ವಿದ್ಯಮಾನಗಳು ನೆರವಾಗಲಿವೆ.

ಭಾರತೀಯರಲ್ಲಿ ಚೀನಾದ ಬಗ್ಗೆ ಭಯದ ಭಾವನೆ ಮನೆಮಾಡಿದೆ. ಈ ಹೊಸ ಬೆದರಿಕೆ ಎದುರಿಸುವ ಬಗ್ಗೆ ಭಾರತ ಚಿಂತಿತಗೊಂಡಿದೆ. ಭಾರತೀಯರು ಜಗಳಗಂಟರು ಎನ್ನುವ ಭಾವನೆ ಮೂಡಿಸಬಾರದು ಎನ್ನುವ ಕಾರಣಕ್ಕೆ, ತಮ್ಮ ಬೇಟೆ ನಾಯಿಗಳು ಪೂರ್ವದತ್ತ ಮುಖಮಾಡಿ ಬೊಗಳಲೂ ಸರ್ಕಾರ ಅವಕಾಶ ನೀಡುತ್ತಿಲ್ಲ ಎನ್ನುವ ತೀರ್ಮಾನಕ್ಕೆ ಬರುವುದು ತುಂಬ ಅಪಾಯಕಾರಿಯಾದ ಬೆಳವಣಿಗೆಯಾಗಿರಲಿದೆ.

ಈ ಮಧ್ಯೆ, ಇದೇ ಹೊತ್ತಿನಲ್ಲಿ ಭಾರತವನ್ನು ಧ್ವಂಸ ಮಾಡುವ ಬಗ್ಗೆ ಬಾಯಿ ಬಡಿದುಕೊಳ್ಳುವ ಪಾಕಿಸ್ತಾನ, ನಮ್ಮದೇ ಆದ ಕಾಶ್ಮೀರಿಗರು, ಮೃತಪಟ್ಟ ಉಗ್ರಗಾಮಿ ಮತ್ತು ಬೊಫೋರ್ಸ್‌ ಹಗರಣದಲ್ಲಿ ತಳಕು ಹಾಕಿಕೊಂಡಿರುವ ರಾಜಕಾರಣಿಗಳು ಪ್ರಚಾರದ ಮುಂಚೂಣಿಯಲ್ಲಿ ಇದ್ದಾರೆ.

ನಮ್ಮ ಒಂದು ಟೆಲಿವಿಷನ್‌ ಚಾನೆಲ್‌, ದೋಕಲಾ ಬಿಕ್ಕಟ್ಟಿನ ಬಗ್ಗೆ ಚೀನಾದ ವಿರುದ್ಧ ತೀವ್ರ ಕೋಪತಾಪ ಪ್ರದರ್ಶಿಸುವ ಕಾರ್ಯಕ್ರಮ ಪ್ರಸಾರ ಮಾಡಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಧೋರಣೆ ಟೀಕಿಸಿದೆ. ಚೀನಾದ ದುರಾಕ್ರಮಣದ ಕುರಿತು ಈ ವಿದ್ಯಾರ್ಥಿ ಸಮೂಹ ಮೌನ ತಳೆದಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದೆ. ಕ್ಯಾಂಪಸ್‌ ಆವರಣದಲ್ಲಿ ಪ್ರತಿಭಟನೆಗಳು ನಡೆಯದಿರುವುದರ ಬಗ್ಗೆ ವರದಿ ಮಾಡಿರುವುದು ಚೀನಿಯರನ್ನು ರಂಜಿಸಿದಂತೆ ಕಾಣುತ್ತದೆ.

ಚೀನಿಯರಲ್ಲಿ ಸಾಕಷ್ಟು ಹಾಸ್ಯ ಪ್ರಜ್ಞೆ ಇರುವ ಬಗ್ಗೆ ನಮಗೆ ಅಷ್ಟೇನೂ ಮಾಹಿತಿ ಇಲ್ಲ. ಈ ಕಾರ್ಯಕ್ರಮ ನೋಡಿ ಅವರು ನಕ್ಕು ಪ್ರತಿಕ್ರಿಯಿಸಿದರೋ ಅಥವಾ ನಿಂದಿಸಿದರೋ ಎನ್ನುವುದೂ ಗೊತ್ತಾಗಿಲ್ಲ. ಆದರೆ, ಇನ್ನೊಂದು ಅರ್ಥದಲ್ಲಿ, ಇದು ಭಾರತವು ಚೀನಾದ ಬಗ್ಗೆ ಹೊಂದಿರುವ ಭಯದ ಭಾವನೆ ಬಗ್ಗೆ ತಪ್ಪು ಎಣಿಕೆಗೆ ಎಡೆಮಾಡಿಕೊಡಲಿದೆ.

ಭಾರತದ ಮಾಧ್ಯಮ ಲೋಕದ ಈ ಯಶಸ್ವಿ ಮತ್ತು ಪ್ರಭಾವಶಾಲಿ ಚಾನೆಲ್‌ಗಳು ವಿಶೇಷವಾಗಿ ಪಾಕಿಸ್ತಾನ ದಂತಹ ಇತರ ಬೆದರಿಕೆಗಳನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಅವುಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗಿಲ್ಲ. ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಪಕ್ಷದ ವಕ್ತಾರರು ಈ ಚಾನೆಲ್‌ಗಳು ಪಾಕಿಸ್ತಾನ– ಕಾಶ್ಮೀರ ಮತ್ತು ಮುಸ್ಲಿಮರ ವಿರುದ್ಧ ನಡೆಸುವ ವಾಗ್ದಾಳಿಯ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ.

ವಿಶ್ವ ಶಕ್ತಿಯಾಗಿ ಬೆಳೆಯುವ ಮನಸ್ಥಿತಿ ಭಾರತಕ್ಕೆ ಇಲ್ಲವೇ ಇಲ್ಲ. ತನಗಿಂದ ಕಡಿಮೆ ಸಾಮರ್ಥ್ಯದ ವೈರಿ ವಿರುದ್ಧ ಸಣ್ಣಪುಟ್ಟ ಜಗಳ ಕಾಯುವುದರಲ್ಲಿಯೇ ಭಾರತಕ್ಕೆ ಹೆಚ್ಚು ಆಸಕ್ತಿ ಇದೆ ಎಂದು ಚೀನಿಯರು ನಿರ್ಧಾರಕ್ಕೆ ಬರಲಿದ್ದಾರೆ. ಚೀನಾ ಹೀಗೆ ಪರಿಭಾವಿಸುವುದರಿಂದ ಭಾರತದ ರಾಜತಾಂತ್ರಿಕ ಧೋರಣೆ ಮತ್ತು ಅದರ ವರ್ಚಸ್ಸಿಗೆ ತೀವ್ರ ಧಕ್ಕೆ ಒದಗಲಿದೆ.

ಒಂದು ವೇಳೆ ನೀವು ಕುತೂಹಲದಿಂದ ಅಥವಾ ಕಾಲೇಜ್‌ ದಿನಗಳಲ್ಲಿನ ಕ್ರಾಂತಿಕಾರಿ ಧೋರಣೆಯ ಪ್ರಭಾವಕ್ಕೆ ಒಳಗಾಗಿ ಮಾವೊ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರೆ, ಮಾವೊ ಪಾಲಿಸಿಕೊಂಡು ಬಂದಿದ್ದ ‘ ಹೊಡಿ ಬಡಿ ಧೋರಣೆ ತಳೆದಿರುವಾಗಲೇ ಸಂಧಾನಕ್ಕೂ ಪ್ರಯತ್ನಿಸು’ ಸೂತ್ರವು ಗಮನ ಸೆಳೆದಿರುತ್ತದೆ. ಚೀನಿಯರು ದಶಕಗಳ ಕಾಲ ವಿದೇಶ ನೀತಿಯಲ್ಲಿ ಇದೇ ಸೂತ್ರವನ್ನೇ ಚಾಚೂ ತಪ್ಪದೇ ‍ಪಾಲಿಸಿಕೊಂಡು ಬಂದಿದ್ದಾರೆ.

ತಮ್ಮೆಲ್ಲ ಮಾತುಕತೆ ಮತ್ತು ಹೋರಾಟವನ್ನು ಅವರು ತಮ್ಮ ಸರ್ಕಾರದ ಸಂಪೂರ್ಣ ಹಿಡಿತದಲ್ಲಿ ಇರುವ ಮಾಧ್ಯಮಗಳ ಮೂಲಕವೇ ನಡೆಸುತ್ತ ಬಂದಿದ್ದಾರೆ. ಪೀಪಲ್ಸ್‌ ಡೇಲಿ, ಶಿನ್‌ಹುವಾ ಮತ್ತು ಈಗ ಗ್ಲೋಬಲ್‌ ಟೈಮ್ಸ್‌ ಪತ್ರಿಕೆಗಳ ಮೂಲಕವೇ ಚೀನಿಯರು ತಮ್ಮ ಮನೋಗತವನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ. ಆರ್ಥಿಕ ಸುಧಾರಣಾ ಕ್ರಮಗಳ ಮೂರು ದಶಕಗಳ ಹೊರತಾಗಿಯೂ ಅಲ್ಲಿನ ಸರ್ಕಾರ ಈ ಪತ್ರಿಕಾ ಮಾಧ್ಯಮದ ಮೂಲಕವೇ ಮಾತನಾಡುತ್ತಿರುವ ಬಗ್ಗೆ ಇಡೀ ವಿಶ್ವಕ್ಕೆ ಮನವರಿಕೆಯಾಗಿದೆ. ಈ ಬಗ್ಗೆ ಯಾರಿಗೂ ಅನುಮಾನಗಳಿಲ್ಲ.

ಹಾಂಕಾಂಗ್‌, ಬೀಜಿಂಗ್‌ ಮತ್ತು ವಿಶ್ವದ ಇತರ ಪ್ರಮುಖ ನಗರಗಳಲ್ಲಿ ಕುಳಿತು, ಚೀನಾದಲ್ಲಿನ ವಿದ್ಯಮಾನಗಳ ಬಗ್ಗೆ ವಿಶ್ಲೇಷಣೆ ನಡೆಸುವವರು ಚೀನಾದ ಆಧುನಿಕ ಇತಿಹಾಸದ ಕುರಿತು ಮಾಹಿತಿ ಸಂಗ್ರಹಿಸಲು, ಚೀನಾ ಸರ್ಕಾರದ ಮನದಿಂಗಿತ ತಿಳಿಯಲು ಈ ಪತ್ರಿಕೆಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ವ್ಯವಸ್ಥೆ ಮೇಲೆ ಸರ್ಕಾರದ ಸಂಪೂರ್ಣ ನಿಯಂತ್ರಣ ಇರುವ ಚೀನಾದಲ್ಲಿ ಹೊರಗಿನವರಿಗೆ ಈಗಲೂ ಖಚಿತ ಮಾಹಿತಿ ಸಿಗುತ್ತಿಲ್ಲ. ಪತ್ರಕರ್ತರು, ರಾಜತಾಂತ್ರಿಕರು, ಶಿಕ್ಷಣ ತಜ್ಞರು ಮತ್ತು ಬೇಹುಗಾರರು ಈಗಲೂ ಚೀನಾದಲ್ಲಿನ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆಯಲು ಈ ಪತ್ರಿಕೆಗಳನ್ನೇ ಅವಲಂಬಿಸುವ ಪರಿಸ್ಥಿತಿ ಇದೆ.

ನಮ್ಮ ಕೆಲ ವಿಶ್ಲೇಷಕರು ಪಾಕಿಸ್ತಾನದ ಬಗ್ಗೆ ಮತ್ತು ನಮ್ಮದೇ ಮುಸ್ಲಿಂ ನಾಗರಿಕರ ಬಗ್ಗೆ ದುರದೃಷ್ಟಕರ ರೀತಿಯಲ್ಲಿ ಮಾತನಾಡುವ ಬಗೆಯಲ್ಲಿಯೇ, ಚೀನಾದ ಮಾಧ್ಯಮಗಳೂ ಭಾರತದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿವೆ.

ಹೊಡಿ–ಬಡಿ ಕುರಿತ ಚೀನಾದ ಗಾದೆ ಮಾತನ್ನು ಸರ್ಕಾರದ ಅಧಿಕೃತ ಮಾಧ್ಯಮಗಳು ಜಾರಿಗೆ ತರುತ್ತಿವೆ. ಇನ್ನೊಂದೆಡೆ ನಮ್ಮ ಸರ್ಕಾರ ಇದೇ ನಾಣ್ಣುಡಿಯ ಇನ್ನೊಂದು ಮುಖವಾದ ‘ಚರ್ಚೆ – ಸಂಧಾನ’ ಬಗ್ಗೆ ಹೆಚ್ಚು ಆಶಾವಾದದಿಂದ ಒತ್ತಾಯ ಮಾಡುತ್ತಿದೆ.

‘ದೋಕಲಾದಿಂದ ಹಿಂದೆ ಸರಿಯಿರಿ ಇಲ್ಲವೆ ಯುದ್ಧ ಎದುರಿಸಿ’ ಎಂದು ಚೀನಾ ನಮ್ಮನ್ನು ಬೆದರಿಸುತ್ತಿದೆ. ನಾವು ಇದಕ್ಕೆ ಮಾತಿನಲ್ಲಿಯೂ ಎದುರುತ್ತರ ನೀಡುತ್ತಿಲ್ಲ. ಚೀನಾ ಸಂಧಾನಕ್ಕೆ ಬರುತ್ತದೆ ಎಂದೇ ನಂಬಿಕೊಂಡು ಕೂತಿದ್ದೇವೆ.

ಚೀನಿಯರ ವಿರುದ್ಧ ಚಾನೆಲ್‌ನ ಸ್ಟುಡಿಯೊಗಳ ಮೂಲಕವೇ ಮಾತಿನ ಸಮರ ನಡೆಸಲು ಭಾರತ ಸರ್ಕಾರವೂ ಸೂಚಿಸಬಹುದು ಎಂದು ಹೇಳುವುದು ನನ್ನ ಕೆಲಸವಲ್ಲ. ಸರ್ಕಾರ ಹೀಗೆ ಮಾಡದಿರುವುದರಲ್ಲಿಯೇ ಹೆಚ್ಚಿನ ಒಳಿತಿದೆ.

ಚೀನಾ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕದೆ, ಈ ಬಿಕ್ಕಟ್ಟಿಗೆ ಭಾರತ ಸರ್ಕಾರ ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದೇ ಸರಿಯಾದ ಮಾರ್ಗವಾಗಿದೆ. ಇಂತಹ ಶಾಂತಿ ಮಂತ್ರವನ್ನು ಇತರರ ಬಗ್ಗೆಯೂ ಅನುಸರಿಸುವಂತಹ ವಿವೇಕವನ್ನು ಭಾರತ ಪ್ರದರ್ಶಿಸಿದರೆ ಅದರಿಂದ ಹೆಚ್ಚಿನ ಒಳಿತೇ ಆಗಲಿದೆ.

ಚೀನಾದವರಿಗೂ ಯುದ್ಧ ಬೇಕಾಗಿಲ್ಲ. ಯುದ್ಧ ಭೂಮಿಯಲ್ಲಿ ಸದ್ಯಕ್ಕೆ 1962ರಲ್ಲಿ ಇರುವಂತಹ ಪರಿಸ್ಥಿತಿಯೂ ಇಲ್ಲ ಎನ್ನುವುದು ಅದಕ್ಕೆ ಮನವರಿಕೆಯಾಗಿದೆ. ಭಾರತ ತಿರುಗೇಟು ನೀಡಿದರೆ ಮುಜುಗರಕ್ಕೆ ಒಳಗಾಗಬೇಕಾದೀತು ಎನ್ನುವ ಆತಂಕ ಚೀನಾವನ್ನೂ ಕಾಡುತ್ತಿದೆ.

ಒಂದು ವೇಳೆ ಕಾಲುಕೆದರಿ ಜಗಳ ಆರಂಭಿಸಿದರೆ, ಆಸ್ಟ್ರೇಲಿಯಾದಿಂದ ಹಿಡಿದು ಜಪಾನ್‌ವರೆಗೆ ವಿವಿಧ ದೇಶಗಳು ದಿನಬೆಳಗಾಗುವುದರ ಒಳಗೆ ಒಂದಾಗಲಿವೆ ಎನ್ನುವ ಆತಂಕ ಚೀನಾಕ್ಕೆ ಇದೆ. ವಿಶ್ವದ ಶಕ್ತಿಶಾಲಿ ದೇಶವಾಗಲು ಹೊರಟಿರುವ ಚೀನಾಕ್ಕೆ ನೆರೆಹೊರೆಯಲ್ಲಿ ವೈರಿಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶವಂತೂ ಇಲ್ಲ.

ಚೀನಿಯರು ಭಾರತದ ಜತೆ ಒತ್ತಾಯದ ರಾಜತಾಂತ್ರಿಕ ಆಟ ಆಡುತ್ತಿದ್ದಾರೆ. ತಮ್ಮ ನಿಯಂತ್ರಣದಲ್ಲಿ ಇರುವ ಮಾಧ್ಯಮಗಳನ್ನು ಅವರು ಪ್ರಚೋದನೆಯ ಮತ್ತು ಉಲ್ಲಂಘನೆಯ ಸಾಧನವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ, ನಾವು ಕೂಡ ಕೋಪ– ತಾಪಗಳ ಮೂಲಕವೇ ಉತ್ತರ ನೀಡುವ ಅಗತ್ಯ ಇಲ್ಲ.

ಆದರೆ, ಚೀನಾದ ಈ ಸರ್ಕಾರಿ ನಿರ್ದೇಶನದ ಬೆದರಿಕೆಯ ಫಲವಾಗಿ ಅವರು ಬರುವ ನಿರ್ಧಾರ ಮಾತ್ರ ಭಾರತದ ಪಾಲಿಗೆ ಅಪಾಯಕಾರಿಯಾಗಿರುತ್ತದೆ. ಇದು ಡೋಕ್ಲಂ ಬಿಕ್ಕಟ್ಟಿಗೆ ಪರಸ್ಪರ ಒಪ್ಪಿಗೆಯಾದ ಶಾಂತಿಯುತ ಪರಿಹಾರ ಕಂಡುಕೊಳ್ಳುವುದಕ್ಕೂ ಅಡ್ಡಿಪಡಿಸಲಿದೆ ಎನ್ನುವುದನ್ನೂ‌‌ ನಾವು ಅರ್ಥೈಸಿಕೊಳ್ಳಬೇಕು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT