ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಅನ್ನ ಕಸಿಯುವ ದುರುಳರು

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ

ಬೆನ್ನಲ್ಲಿ ಆಕಸ್ಮಿಕವಾಗಿ ಚರ್ಮದ ಸಣ್ಣಗಂಟು ಕಂಡುಬಂದರೆ ಅದು ಬೇರೆಯವರ ಕಣ್ಣಿಗೆ ಬೀಳದಂತೆ ಮರೆಮಾಚಲು ನಾವು ಸಾಕಷ್ಟು ಪ್ರಯತ್ನ ಮಾಡುತ್ತೇವೆ. ಅದು ಹೆಚ್ಚು ಕಾಲ ಉಳಿದರೆ ಸಾಕಷ್ಟು ಇರುಸುಮುರುಸಿಗೂ ಒಳಗಾಗುತ್ತೇವೆ. ಒಂದು ವೇಳೆ ಮುಖದ ಮೇಲೆಯೇ ಚರ್ಮದ ಗಂಟು ಮೂಡಿದರೆ ಅದು ಹೆಚ್ಚಿನ  ಕಳವಳಕ್ಕೆ ಕಾರಣವಾಗುತ್ತದೆ.  ಅದನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ಮುಲಾಮುಗಳಿಗೆ ಮೊರೆ ಹೋಗುತ್ತೇವೆ. ಮಾತ್ರೆ ಸೇವಿಸುತ್ತೇವೆ. ಮುಖದ ಅಂದ ಕೆಡಿಸಿರುವ ಮೊಡವೆ ಅಥವಾ ಗಂಟಿನಿಂದಾಗಿ ಉಳಿದವರ ಕಣ್ಣಲ್ಲಿ ನಾವು ಹೇಗೆ ಕುರೂಪಿಯಾಗಿ ಕಾಣುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತೇವೆ. ಒಂದು ವೇಳೆ ದೇಹದ ತುಂಬೆಲ್ಲ ಚರ್ಮದ ಸಣ್ಣ ಸಣ್ಣ ಗಂಟುಗಳು ಕಾಣಿಸಿಕೊಂಡರೆ ವ್ಯಕ್ತಿ ಗಾಬರಿಯಾಗುತ್ತಾನೆ. ಇಂತಹ ಸಂದರ್ಭದಲ್ಲಿ ಸ್ಥೈರ್ಯ ಪ್ರದರ್ಶಿಸುವ ಅಗತ್ಯ ಇರುತ್ತದೆ. ಅದೇ ಕಾರಣಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ವೈದ್ಯರ ಹತ್ತಿರ ಧಾವಿಸುತ್ತೇವೆ.  ವೈದ್ಯರು ಕೆಲ ಪರೀಕ್ಷೆ ನಡೆಸಲು ಸೂಚಿಸುತ್ತಾರೆ. ಚರ್ಮದ ಗುಳ್ಳೆಗಳು ಅಲರ್ಜಿಯಿಂದ ಕಂಡು ಬಂದಿದ್ದರೆ ಸೂಕ್ತ ಔಷಧೋಪಚಾರದ ಮೂಲಕ ನಿರ್ಮೂಲನೆ ಮಾಡಿ ನೆಮ್ಮದಿ ಮೂಡಿಸುತ್ತಾರೆ. ಒಂದು ವೇಳೆ ಸೋಂಕಿನಿಂದ ಬಂದಿದ್ದರೆ ಅದಕ್ಕೂ ಪರಿಹಾರ ಹೇಳುತ್ತಾರೆ. ಕ್ಯಾನ್ಸರ್‌ ಅಥವಾ ಮಧುಮೇಹದ ಲಕ್ಷಣವಾಗಿದ್ದರೆ  ವ್ಯಕ್ತಿಯಲ್ಲಿ ಭೀತಿ ಮೂಡುತ್ತದೆ. ಆರಂಭದಲ್ಲಿಯೇ ಈ ಬಗ್ಗೆ ಗಮನ ನೀಡಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆ. ನಿಯಂತ್ರಣ ಮೀರಿದ್ದರೆ ಅನಿವಾರ್ಯ ಸಮಸ್ಯೆ ಎಂದು ಒಪ್ಪಿ ಜೀವನಶೈಲಿಯನ್ನೇ ಬದಲಿಸಿಕೊಳ್ಳಬೇಕು.

ವ್ಯಕ್ತಿಗೆ ಅನ್ವಯಿಸುವ ಈ ಮಾತನ್ನು ಈಗ ನಮ್ಮ ಸೇನಾಪಡೆಗಳಿಗೂ ಅನ್ವಯಿಸುವ ಕಾಲ ಬಂದಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರಿಗೆ ಕಳಪೆ ಆಹಾರ ಪೂರೈಸಲಾಗುತ್ತಿರುವ ಬಗ್ಗೆ ವಿಡಿಯೊ ಬಹಿರಂಗಗೊಂಡು ಸುದ್ದಿ ಮಾಡುತ್ತಿದೆ. ನಮ್ಮ ಅರೆಸೇನಾಪಡೆಗಳು,  ವ್ಯಕ್ತಿಯೊಬ್ಬನಲ್ಲಿ ಕಂಡು ಬರುವ ಚರ್ಮದ ಗಂಟುಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡ ಬಗೆಯಲ್ಲಿಯೇ ಅರೆ ಸೇನಾಪಡೆಗಳೂ ಅಂತಹದ್ದೇ ಚಿಕಿತ್ಸೆ ಇಲ್ಲವೆ ಆಮೂಲಾಗ್ರವಾಗಿ ಕಾರ್ಯವಿಧಾನವನ್ನೇ ಬದಲಿಸಿಕೊಳ್ಳುವ ಅನಿವಾರ್ಯವಾದ ಅಗತ್ಯ ಎದುರಾಗಿದೆ. ಸಶಸ್ತ್ರ ಪಡೆಗಳು ಅದರಲ್ಲೂ ವಿಶೇಷವಾಗಿ ಕೇಂದ್ರೀಯ ಅರೆ ಸೇನಾಪಡೆಗಳಲ್ಲಿ (ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ) ಇಂತಹದ್ದೇ ದೋಷಗಳು ಈಗ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿವೆ.

ಬಿಎಸ್‌ಎಫ್‌ ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿ ಬಿಡುಗಡೆ ಮಾಡಿರುವ ಎರಡು– ಮೂರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ದೇಶದಾದ್ಯಂತ ಗಮನ ಸೆಳೆದಿವೆ. ಈ ವಿವರ ಬಹಿರಂಗಗೊಳ್ಳುತ್ತಿದ್ದಂತೆ ಬಿಎಸ್‌ಎಫ್‌,  ಸಿಆರ್‌ಪಿಎಫ್‌ ಮುಖ್ಯಸ್ಥರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

ಸದ್ಯಕ್ಕೆ ಮುಖದ ಮೇಲಿನ ಗುಳ್ಳೆಗಳು ಎರಡಕ್ಕಷ್ಟೇ ಸೀಮಿತವಾಗಿಲ್ಲ. ಹೆಚ್ಚು ಗುಳ್ಳೆಗಳು ಕಾಣಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಶೀಘ್ರದಲ್ಲಿಯೇ ಇನ್ನಷ್ಟು ಕುರೂಪಗಳು ಬೆಳಕಿಗೆ ಬಂದರೂ ಬರಲಿವೆ. ಇಲ್ಲಿಯವರೆಗೆ ಇವುಗಳನ್ನು ಮುಚ್ಚಿಕೊಳ್ಳಲು ಸಾಕಷ್ಟು ಪರಿಶ್ರಮಪಡಲಾಗಿತ್ತು. ಈಗ ಅಂತಹ ಕಟ್ಟುನಿಟ್ಟಿನ ನಿಯಂತ್ರಣ ಮೀರಿ ಬಹಿರಂಗಗೊಂಡಿವೆ. ಸಶಸ್ತ್ರ ಪಡೆಗಳ ಯೋಧರಲ್ಲಿ ಮಡುಗಟ್ಟಿರುವ ಇಂತಹ ಆಕ್ರೋಶ ಪ್ರತಿಬಂಧಿಸಲು ಯತ್ನಿಸಿದರೆ ಅದು ಸಾಂಕ್ರಾಮಿಕವಾಗಿ ಎಲ್ಲೆಡೆ ಹರಡಿ ದೊಡ್ಡ ಅಪಾಯಕ್ಕೂ ಕಾರಣವಾಗಬಹುದು.

ಲೋಪಗಳನ್ನು ಬಹಿರಂಗಗೊಳಿಸಿದ ಯೋಧರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತಹ ಮೂರ್ಖತನದ ಆಲೋಚನೆ ಕೈಗೊಳ್ಳುವ ಮುನ್ನ, ಟಿ.ವಿ. ಚಾನೆಲ್‌ಗಳಲ್ಲಿ ಈ ಬಗ್ಗೆ ಮಾತನಾಡಿದ ಉನ್ನತ ಅಧಿಕಾರಿಗಳನ್ನು ಕರೆದು ಪ್ರಶ್ನಿಸಬೇಕಾಗಿದೆ. ಸೇನಾಪಡೆಗಳಲ್ಲಿನ ದೌರ್ಬಲ್ಯಗಳನ್ನು ಬಹಿರಂಗಪಡಿಸದಂತೆ ಜಾಣತನವಲ್ಲದ ಹಲವಾರು ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸುವುದರ ಜತೆಗೆ, ತಮ್ಮದೇ ಆದ ಪಡೆಗಳನ್ನು ಬಹಿರಂಗವಾಗಿ ಅಸಂಬದ್ಧ ರೀತಿಯಲ್ಲಿ ನಿಂದಿಸುವ ಮೇಲಧಿಕಾರಿಗಳ ವರ್ತನೆ ಎಷ್ಟರಮಟ್ಟಿಗೆ ಸರಿ ಎನ್ನುವ ಮಹತ್ವದ ಪ್ರಶ್ನೆಯೂ ಎದುರಾಗುತ್ತದೆ. ಎಲ್ಲಕ್ಕಿಂತ ಮಹತ್ವದ ಸಂಗತಿ ಎಂದರೆ, ಇಂತಹ ಹುಣ್ಣು ಅಥವಾ ವಿಡಿಯೊಗಳು ಬಹಿರಂಗಗೊಂಡಿರುವುದು ಇದೇ ಮೊದಲ ಸಲವಲ್ಲ. ಹಲವಾರು ವರ್ಷಗಳಿಂದ,  ಅದರಲ್ಲೂ ವಿಶೇಷವಾಗಿ ಕೇಂದ್ರೀಯ ಅರೆ ಸೇನಾಪಡೆಗಳು ಮಾವೊವಾದಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡ ನಂತರ ಇಂತಹ ದೂರುಗಳು ಕೇಳಿ ಬರುತ್ತಲೇ ಇವೆ. ಆದರೆ ತಕ್ಷಣಕ್ಕೆ ಅವುಗಳನ್ನು ಮುಚ್ಚಿ ಹಾಕಲಾಗುತ್ತಿದೆ. 

ಛತ್ತೀಸಗಡದಲ್ಲಿ ಮಾವೊವಾದಿಗಳ ವಿರುದ್ಧದ ಕಾರ್ಯಾಚರಣೆ ವೇಳೆಯಲ್ಲಿ ಅಧಿಕಾರಿ, ಡೆಪ್ಯುಟಿ ಕಮಾಂಡಂಟ್‌ ಸೇರಿದಂತೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಗಾಯಗೊಂಡು ರಕ್ತ ಸೋರುತ್ತಿದ್ದ ತೀವ್ರ ನೋವಿನ ಮಧ್ಯೆ ವೈದ್ಯಕೀಯ ನೆರವಿಗೆ ಮೊರೆ ಇಡುತ್ತಿದ್ದ ಮೂರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬಾರಿ ಹರಿದಾಡಿವೆ.

ನಮ್ಮ ಮಾಧ್ಯಮಗಳು ಇಂತಹ ದೃಶ್ಯಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಲು ಮನಸ್ಸು ಮಾಡಲಿಲ್ಲ. ಇಂತಹ ಘಟನೆಗಳು ನಮ್ಮ ಬೆನ್ನಲ್ಲಿ ಮೂಡಿರುವ ವ್ರಣಗಳಂತೆ ಸಾಕಷ್ಟು ಇರುಸುಮುರುಸು ತಂದೊಡ್ಡಿದ್ದರೂ ಅವುಗಳನ್ನು ಮುಚ್ಚಿಕೊಳ್ಳಲು ನಾವು ಹೆಣಗುತ್ತೇವೆ. ಆದರೆ, ಪಾಕಿಸ್ತಾನವು ಇದನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತದೆ. ಛತ್ತೀಸಗಡದ ಕಾರ್ಯಾಚರಣೆಯಲ್ಲಿ ತೀವ್ರ ಗಾಯಗೊಂಡಿದ್ದ ಡೆಪ್ಯುಟಿ ಕಮಾಂಡಂಟ್‌ ಅವರನ್ನು ಆಸ್ಪತ್ರೆಗೆ ತುರ್ತಾಗಿ ಸಾಗಿಸಲು ಆಂಬುಲೆನ್ಸ್‌ ಕೂಡ ಇರದೆ  ಬಸ್‌ನಲ್ಲಿ ಸಾಗಿಸಲಾಗಿತ್ತು. ಮಾರ್ಗಮಧ್ಯೆ ಅವರು ವೈದ್ಯರ ಸಹಾಯಕ್ಕೆ ಮೊರೆ ಇಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ವೈದ್ಯಕೀಯ ನೆರವು ಸಕಾಲಕ್ಕೆ ದೊರೆಯದ ಏಕೈಕ ಕಾರಣಕ್ಕೆ ಅವರು ಸಾವನ್ನಪ್ಪಬೇಕಾಯಿತು. ಅವರ ಇಬ್ಬರು ಮಕ್ಕಳು ಅನಾಥರಾದರು.

ಈ ದೃಶ್ಯ ಸೆರೆಹಿಡಿದು ಜಾಲತಾಣಗಳಲ್ಲಿ ಹರಿಬಿಟ್ಟ ಯೋಧನ ಕೃತ್ಯವೂ ಹಲವರ ಪಾಲಿಗೆ ಅಶಿಸ್ತಿನ ವರ್ತನೆ ಎಂದೇ ಕಂಡಿರಬಹುದು. ಅದಕ್ಕೆ ಯೋಧನಿಗೆ ಸೂಕ್ತ ಶಿಕ್ಷೆ ವಿಧಿಸಿರಲೂಬಹುದು. ವಿಡಿಯೊ ಬಹಿರಂಗಗೊಂಡ ನಂತರವೂ ವೈದ್ಯಕೀಯ ಸೌಲಭ್ಯ, ವೈದ್ಯರ ಲಭ್ಯತೆಯ ಪರಿಸ್ಥಿತಿ ಬದಲಾಗದಿರುವುದು ನಾಚಿಕೆಗೇಡಿನ ಸಂಗತಿ. ಸೈನಿಕರು ಹೋರಾಡುವಂತೆ ಸಿಆರ್‌ಪಿಎಫ್‌ ಯೋಧರೂ ಮಾರಣಾಂತಿಕ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಮಾವೊವಾದಿಗಳ ಪ್ರಭಾವ ಹೆಚ್ಚಿರುವ ಪ್ರದೇಶಗಳಲ್ಲಿ 10 ವರ್ಷಗಳ ಅವಧಿಯಲ್ಲಿ ಸಿಆರ್‌ಪಿಎಫ್‌ ಯೋಧರ ಸಾವು ನೋವಿನ ಸಂಖ್ಯೆ ಸೇನಾಪಡೆಗಳಿಗಿಂತ ಹೆಚ್ಚಿಗೆ ಇದೆ.
ಸೇನೆಯಲ್ಲಿ ಇರುವಂತೆ ಸಿಆರ್‌ಪಿಎಫ್‌ ಯೋಧರಿಗಾಗಿ ಸ್ಥಳದಲ್ಲಿಯೇ ತುರ್ತು  ವೈದ್ಯಕೀಯ ನೆರವನ್ನಾಗಲಿ ಮತ್ತು ಆಸ್ಪತ್ರೆ ಸೌಲಭ್ಯವನ್ನಾಗಲಿ ಒದಗಿಸಲಾಗುತ್ತಿಲ್ಲ.  ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ಸೌಲಭ್ಯಗಳೂ ಇಲ್ಲ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ಹೆಲಿಕಾಪ್ಟರ್‌ಗಳ ಸೇವೆ ಒದಗಿಸಲಾಗುತ್ತಿದೆ.

ಛತ್ತೀಸಗಡದಲ್ಲಿ ಮಾವೊವಾದಿಗಳ ದಾಳಿಗೆ ಗುರಿಯಾದ ಸಿಆರ್‌ಪಿಎಫ್‌ ಯೋಧರ ನೆರವಿಗೆ ಧಾವಿಸಿದ ವಾಯುಪಡೆಯ ಕಮಾಂಡೊಗಳಿದ್ದ ಹೆಲಿಕಾಪ್ಟರ್‌ಗಳು ಗುಂಡಿನ ದಾಳಿಗೆ ಒಳಗಾಗುವ ಭೀತಿಯಿಂದ ರಕ್ಷಣಾ ಕಾರ್ಯಾಚರಣೆಗೆ ಇಳಿಯದೆ ವಾಪಸ್‌ ಬಂದಿರುವುದನ್ನೂ ನಾವು ನೋಡಿದ್ದೇವೆ.
ಇಂತಹ ವೈಫಲ್ಯಗಳನ್ನು ಮುಚ್ಚಿಕೊಂಡು, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು  ತಕ್ಷಣಕ್ಕೆ ಏನೋ ಸಬೂಬು ಹೇಳಿ ನುಣುಚಿಕೊಳ್ಳುವ ಪ್ರಯತ್ನಗಳೂ ನಡೆಯುತ್ತವೆ. ಸಿಆರ್‌ಪಿಎಫ್‌ ಈ ಘಟನೆಯನ್ನು  ಮರೆತಿಲ್ಲ. ರಕ್ಷಣಾ ಕಾರ್ಯಾಚರಣೆಯಿಂದ ಹಿಂದೆ ಸರಿದ ಸೇನಾಪಡೆಗಳ ವರ್ತನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಅಂದಿನ ಭೂಸೇನೆ ಮತ್ತು ವಾಯುಪಡೆ ಮುಖ್ಯಸ್ಥರ ಕೆಟ್ಟ ಪ್ರತಿಕ್ರಿಯೆಯನ್ನೂ ಸಿಆರ್‌ಪಿಎಫ್‌ ಮರೆಯುವುದಿಲ್ಲ. ನಮ್ಮದೇ  ಜನರ ಹೋರಾಟದ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗದ ಸೇನಾಪಡೆಗಳ ವರ್ತನೆಯನ್ನು ನಾನು ಇಲ್ಲಿ ತುಂಬ ಎಚ್ಚರಿಕೆಯಿಂದ ಮತ್ತು ಉದ್ದೇಶಪೂರ್ವಕವಾಗಿ ‘ಕುರೂಪದ ವರ್ತನೆ’ ಎಂದೇ ಬಣ್ಣಿಸಿದ್ದೇನೆ. ಇದೊಂದು ಬಗೆಯಲ್ಲಿ ಸೇನಾಪಡೆಗಳ ಪುಕ್ಕಲು ವರ್ತನೆಗೂ ಕನ್ನಡಿ ಹಿಡಿಯುತ್ತದೆ. ‘ನಮ್ಮದೇ ಜನರು’ ತತ್ವವು ಕಾಶ್ಮೀರ, ಈಶಾನ್ಯ ರಾಜ್ಯಗಳ ಆದಿವಾಸಿಗಳಿಗೇಕೆ ಅನ್ವಯವಾಗದು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.  ಅರೆ ಸೇನಾಪಡೆಗಳಲ್ಲಿ ನಮ್ಮ ಸೇನಾಪಡೆಗಳ ಬಗ್ಗೆ ಮೂಡುವ ಅಭಿಪ್ರಾಯ ಎಂತಹುದು ಎನ್ನುವುದೂ ಇಲ್ಲಿ ಹೆಚ್ಚು ಪ್ರಸ್ತುತ.

ಇಂದಿನ ಸೈನಿಕರು ಸನ್ನಿ ಡಿಯೊಲ್ ಅವರ ಏಕತಾನತೆಯ, ತೇಪೆ ಹಾಕಿದಂತೆ ಕಾಣುವ ಸಿನಿಮಾಗಳಲ್ಲಿ ಕಂಡುಬರುವಂತಹ ಹಳೆ ಮಾದರಿಯ ಸೈನಿಕರಾಗಿ ಉಳಿದಿಲ್ಲ. ಹೆಚ್ಚು ಸುಶಿಕ್ಷಿತರಾಗಿರುವ ಅವರಲ್ಲಿ ತಿಳಿವಳಿಕೆ ಹೆಚ್ಚಿದೆ. ಪ್ರಶ್ನಿಸುವ, ವಾದ ಮಾಡುವ, ತಮ್ಮ ಹಾಗೂ ತಮ್ಮ ಮಕ್ಕಳ ಆಸೆ ಆಕಾಂಕ್ಷೆಗಳು ಅವರಲ್ಲಿಯೂ ಹೊಸ ಹೊಸ ಬೇಡಿಕೆಗಳ ಪಟ್ಟಿ ಮುಂದಿಡಲು ಸ್ಫೂರ್ತಿ ನೀಡುತ್ತಿವೆ.

ಇತ್ತೀಚಿನ ದಿನಗಳಲ್ಲಿ, ದಾಳಿ ಕಾರ್ಯಾಚರಣೆ ಸಂದರ್ಭಗಳಲ್ಲಿ ‘ನನ್ನ ಮೇಲಧಿಕಾರಿಗಳು ಎಲ್ಲಿದ್ದಾರೆ’ ಎಂಬುದೇ ಯೋಧನೊಬ್ಬ ಕೇಳುವ ಮೊದಲ ಪ್ರಶ್ನೆಯಾಗಿದೆ. ಜೀವ ಪಣಕ್ಕೊಡ್ಡಿ ನಡೆಯುವ ಅಪಾಯಕಾರಿ ಕಾರ್ಯಾಚರಣೆಗಳನ್ನು ಉನ್ನತ ಹುದ್ದೆಯಲ್ಲಿ ಇರುವವರು ಖುದ್ದಾಗಿ ನೋಡಿರುವರೆ ಎನ್ನುವುದಕ್ಕೆ ಸಮಾಧಾನಕರವಾದ ಉತ್ತರವೂ ಸಿಗಲಾರದು. ಸಿಎಪಿಎಫ್‌ ಮತ್ತು ಭಯೋತ್ಪಾದನೆ ನಿಗ್ರಹ ಎನ್ಎಸ್‌ಜಿಗಳ ಉನ್ನತ ಹುದ್ದೆ ಅಲಂಕರಿಸಿರುವ ಐಪಿಎಸ್‌ ಅಧಿಕಾರಿಗಳು  ಬರೀ ಬಡಾಯಿ ಕೊಚ್ಚಿಕೊಳ್ಳುತ್ತಾರಷ್ಟೆ. ಲಾಭದಾಯಕ ಹುದ್ದೆ ಎನ್ನುವ ಕಾರಣಕ್ಕೆ ಅವರು ಅಂತಹ ಹುದ್ದೆಗಳನ್ನು ಸೀಮಿತ ಅವಧಿಗಾಗಿ ಒಪ್ಪಿಕೊಂಡಿರುತ್ತಾರೆ. ಅವರಿಗೆಲ್ಲ ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಠಿಣವಾಗಿರುತ್ತದೆ. ಅವರು ಇಂತಹ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳದಂತಹ ಪರಿಸ್ಥಿತಿಯೂ ಈಗ ನಿರ್ಮಾಣವಾಗಿದೆ.

ಕೇಂದ್ರೀಯ ಪೊಲೀಸ್‌ ಪಡೆಗಳ ಸಿಬ್ಬಂದಿಯಲ್ಲಿ ಮೂಡಿರುವ ಮುನಿಸು, ಹತಾಶೆ ಪ್ರವೃತ್ತಿ ಎಚ್ಚರಿಕೆ ಗಂಟೆಯಾಗಿ ಮೊಳಗುವಂತಹ ಹಂತಕ್ಕೆ ತಲುಪಿವೆ. ದೆಹಲಿಯಲ್ಲಿನ ಪ್ರತಿಷ್ಠಿತ ಕ್ಲಬ್‌ ಮತ್ತು ಸೇನಾ ಪಡೆಗಳ ಉನ್ನತ ಅಧಿಕಾರಿಗಳಿಗಾಗಿ ಇರುವ ಕ್ಲಬ್‌ಗಳಿಗೆ ಭೇಟಿ ನೀಡಿದರೆ ಅಲ್ಲಿ ಇಂತಹ ಕೋಪ ತಾಪಗಳೇನೂ ಕಂಡು ಬರಲಾರವು. ಸಾಂಪ್ರದಾಯಿಕ ಪಥಸಂಚಲನಗಳಲ್ಲಿ ಸಚಿವರ ಕಣ್ಣಿಗೆ ಬೀಳುವುದೂ ಇಲ್ಲ.

ಸಿಆರ್‌ಪಿಎಫ್‌ ಯೋಧರು ತುರ್ತು ಸಂದರ್ಭಗಳಲ್ಲಿ ಟ್ರಕ್‌ಗಳಲ್ಲಿ ಇಲ್ಲವೇ ಸರಕು ಸಾಗಣೆ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಇದೇ ಕಾರಣಕ್ಕೆ ಅವರು ‘ಎಲ್ಲದಕ್ಕೂ ಸಿದ್ಧವಾಗಿರು ಗೆಳೆಯಾ’ (ಚಲ್ತೆ ರಹೋ ಪ್ಯಾರೆ) ಎಂದು ತಮ್ಮಷ್ಟಕ್ಕೆ ತಾವೇ ಬಣ್ಣಿಸಿಕೊಳ್ಳುತ್ತಾರೆ. ಇಂತಹ ಮನೋಭಾವ ಅದೆಷ್ಟರ ಮಟ್ಟಿಗೆ ಈ ಸಿಬ್ಬಂದಿಯಲ್ಲಿ ಅಂತರ್ಗತವಾಗಿದೆ ಎಂದರೆ,  ಎಂಬತ್ತರ ದಶಕದಲ್ಲಿ ದಂತಕಥೆಯಾಗಿದ್ದ ಮಹಾನಿರ್ದೇಶಕರೊಬ್ಬರು ತಮ್ಮ ಬ್ಯಾಂಡ್‌ನ ಪಥಸಂಚಲನದ ರಾಗವನ್ನು ಅದೇ ಹೆಸರಿನಲ್ಲಿ ಸಂಯೋಜಿಸಿದ್ದರು. ಆದರೆ, ವಾಸ್ತವ ಸಂಗತಿ  ತಮಾಷೆಯಿಂದ ಕೂಡಿರಲಾರದು. ಕಾಶ್ಮೀರದಲ್ಲಿನ ಸೈನಿಕರ ನೆರವಿಗೆ ‘ಸೇನಾಪಡೆಗಳ ವಿಶೇಷ ರಕ್ಷಣಾ ಕಾಯ್ದೆ’ ಇದೆ. ಉಳಿದಂತೆ ಬಹುತೇಕ ಕಡೆ ಅರೆ ಸೇನಾಪಡೆ ಸಿಬ್ಬಂದಿ ಎರಡನೇ ದರ್ಜೆ ಸೈನಿಕರಂತೆ ಇದ್ದಾರೆ. ಅವರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ. ಕಳಪೆ ಆಹಾರ ಪೂರೈಸಲಾಗುತ್ತಿದೆ. ಸೈನಿಕರಿಗಿಂತ ಕಡಿಮೆ ಪಿಂಚಣಿಯನ್ನೂ ನೀಡಲಾಗುತ್ತಿದೆ.

ಸೇನೆಯಲ್ಲಿ ಮಾತಿನ ಮಲ್ಲರು ಅಥವಾ ನಿವೃತ್ತ ಹಿರಿಯ ಸೇನಾಧಿಕಾರಿಗಳು ವೇತನ ಆಯೋಗ, ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡುವ ಧೈರ್ಯ ಪ್ರದರ್ಶಿಸುತ್ತಾರೆ. ಇಂತಹ ಅದೃಷ್ಟ ಸಿಎಪಿಎಫ್‌ ಸಿಬ್ಬಂದಿಗಿಲ್ಲ. ಇವರ ಮುಖ್ಯಸ್ಥರಾಗಿ ಬರುವವರೆಲ್ಲ ಅಲ್ಪ ಸಮಯಕ್ಕೆ ವರ್ಗಾವಣೆ ಮೇಲೆ ಬರುವ ಐಪಿಎಸ್‌ ಅಧಿಕಾರಿಗಳು. ಅರೆ ಸೇನಾಪಡೆ ಸಿಬ್ಬಂದಿಯ  ಶಿಬಿರಗಳಿಗೆ ಸಾಕಷ್ಟು ಭದ್ರತೆ ಒದಗಿಸದಿರುವುದೂ ಇ.ಎನ್‌.ರಾಮಮೋಹನ್‌ ವಿಚಾರಣಾ ಸಮಿತಿ ರಚಿಸಿದ್ದ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು.

ಎರಡು ದಶಕಗಳ ಅವಧಿಯಲ್ಲಿ ಕೇಂದ್ರೀಯ ಅರೆ ಸೇನಾಪಡೆಗಳಾದ ಸಿಆರ್‌ಪಿಎಫ್‌,  ಬಿಎಸ್‌ಎಫ್‌, ಎಸ್‌ಎಸ್‌ಬಿ (ಸಶಸ್ತ್ರ ಸೀಮಾ ಬಲ), ಅಸ್ಸಾಂ ರೈಫಲ್ಸ್‌, ಎನ್‌ಎಸ್‌ಜಿ, ಐಟಿಬಿಟಿ (ಭಾರತ – ಟಿಬೆಟ್‌ ಗಡಿ ಪೊಲೀಸ್‌ ), ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಇನ್ಫೊಸಿಸ್‌ ಆವರಣದಲ್ಲಿ ಕಂಡು ಬರುವ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಸೇರಿದಂತೆ ಈ ಪಡೆಗಳಲ್ಲಿ ಕೆಲಸ ಮಾಡುವ ಯೋಧರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚಿಗೆ ಇದೆ. ದೇಶಿ ಸೇನಾ ಪಡೆ ವಿಶ್ವದಲ್ಲಿಯೇ ನಾಲ್ಕನೆ ಅತಿ ದೊಡ್ಡದೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಅರೆ ಸೇನಾಪಡೆಗಳ ಎಲ್ಲ ಘಟಕಗಳಲ್ಲಿ ಸುಧಾರಣೆ, ಆಧುನಿಕತೆ ಮತ್ತು ಎಲ್ಲ ಹಂತಗಳಲ್ಲಿ ನಾಯಕತ್ವ ಬದಲಾವಣೆಯ ಅಗತ್ಯ ಇದೆ. ಈ ಎಲ್ಲ ಅಗತ್ಯಗಳನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಕೇವಲ ಗೃಹ ಸಚಿವಾಲಯದ ಮೇಲೆ ಇರುವುದು ಕೂಡ ಅನೇಕ ಸಮಸ್ಯೆಗಳಿಗೆ ಕಾರಣ. ಸಚಿವಾಲಯವು ಅರೆ ಸೇನಾಪಡೆಗಳ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿ, ಕಲ್ಯಾಣ ಕಾರ್ಯಕ್ರಮ, ಕಟ್ಟುಪಾಡುಗಳ ಪರಾಮರ್ಶೆ ಮತ್ತು ಸಕ್ರಿಯ ರಾಜಕೀಯ ನಾಯಕತ್ವದ ಅಗತ್ಯ ಇದೆ.

ರಾಜೀವ್‌ ಗಾಂಧಿ ಅವರ ಅಧಿಕಾರಾವಧಿಯಲ್ಲಿ ಆಂತರಿಕ ಭದ್ರತೆಗೆ ಸಂಬಂಧಿಸಿದ ರಾಜ್ಯ ಸಚಿವರ ಉಸ್ತುವಾರಿಯಂತಹ ಸಕಾರಾತ್ಮಕ ಕ್ರಮ ಕೈಗೊಳ್ಳಲಾಗಿತ್ತು. ವಾಜಪೇಯಿ ನೇತೃತ್ವದಲ್ಲಿನ ಎನ್‌ಡಿಎ ಸರ್ಕಾರದಲ್ಲಿ ಈ ವ್ಯವಸ್ಥೆಗೆ ಎಳ್ಳುನೀರು ಬಿಡಲಾಗಿತ್ತು. ಮುಂಬೈ ಮೇಲಿನ 26/11ರ ದಾಳಿ ನಂತರ ಪಿ.ಚಿದಂಬರಂ ಕೆಲ ಕಾಲ ಈ ಬಗ್ಗೆ ಗಮನ ಕೇಂದ್ರೀಕರಿಸಿದ್ದನ್ನು ಹೊರತುಪಡಿಸಿದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಈ ವ್ಯವಸ್ಥೆಗೆ  ಪುನಶ್ಚೇತನವೂ ದೊರೆಯಲಿಲ್ಲ.

ಅರೆ ಸೇನಾಪಡೆಗಳ ಸಿಬ್ಬಂದಿಯ ನೋವಿಗೆ ತುರ್ತಾಗಿ ಸ್ಪಂದಿಸಲು ಇದು ಸೂಕ್ತ ಸಮಯವಾಗಿದೆ. ಇಲ್ಲದಿದ್ದರೆ ನಮ್ಮ ದೇಹದ ತುಂಬೆಲ್ಲ ಅಸಹ್ಯ ಮೂಡಿಸುವ, ಮುಜುಗರಕ್ಕೆ ಎಡೆಮಾಡಿಕೊಡುವ ಚರ್ಮದ ಗಂಟುಗಳು ಕಾಣಿಸಿಕೊಳ್ಳುತ್ತವೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ., ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT