ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರನಾಥ ಟಾಗೋರ್: ಇಂದು ಅಪ್ರಸ್ತುತವೇ?

ಅಕ್ಷರ ಗಾತ್ರ

ದರ್ಶನಕ್ಕೆ ಹೊರತಾದ ಕಾವ್ಯ ಎಷ್ಟೇ ಮೋಹಕವಾಗಿದ್ದರೂ, ಅದು ಮೊದಲ ದರ್ಜೆಗೆ ಸೇರುವುದಿಲ್ಲ. ಕೆಲವು ಕಾಲ, ಕೆಲವರನ್ನು ರಂಜಿಸೀತು. ಎಲ್ಲ ಕಾಲಕ್ಕೂ ಸಲ್ಲುವ, ಎಲ್ಲರಿಗೂ ಬೇಕಾಗುವ ಕವಿಯನ್ನು ದಾರ್ಶನಿಕ ಎನ್ನುತ್ತೇವೆ. ದಾರ್ಶನಿಕರಿಗೆ ಮಾತ್ರ ಅನಂತ ಆದರ್ಶಗಳ ಕನಸುಗಳಿರುತ್ತವೆ.

ಟಾಗೋರರ ಗೀತಾಂಜಲಿಯನ್ನು ಅಭ್ಯಾಸ ಮಾಡುವಾಗ ಮೇಲಿನ ಮಾತುಗಳು ಸತ್ಯ ಅನಿಸುತ್ತವೆ. ನಾವು ಶಾಲೆಯಲ್ಲಿ ಓದುವಾಗ ಪ್ರತಿ ಹಂತದಲ್ಲೂ, ಒಂದಲ್ಲ ಒಂದು ಸಾಲು ಅಥವಾ ಬಿಡಿಭಾಗಗಳು ಪಠ್ಯದಲ್ಲಿ ಸೇರ್ಪಡೆಯಾಗಿರುತ್ತಿದ್ದವು. ಅರ್ಥ ತಿಳಿಯದೆ ಪರೀಕ್ಷೆಗಾಗಿ ಬಾಯಿಪಾಠ ಮಾಡುತ್ತಿದ್ದೆವು.

ಗೀತಾಂಜಲಿಯ ಪೂರ್ಣಪಾಠವನ್ನು ನಾನು ಓದಿದ್ದು ಅಧ್ಯಾಪಕನಾದ ಮೇಲೆಯೇ. ಈಗಲೂ ನನಗೆ ಗೀತಾಂಜಲಿಯ ದರ್ಶನ ಪೂರ್ತಿ ದಕ್ಕಿದೆ ಎಂದು ಹೇಳಲಾರೆ. ಆದರೆ ಅದು ನನ್ನನ್ನು ಚಕಿತಗೊಳಿಸುತ್ತದೆ. ಬದುಕನ್ನು ಹೀಗೆ ನೋಡಲು ಸಾಧ್ಯವಿದೆಯೆ ಎಂದು ಕಂಗಾಲು ಮಾಡುತ್ತದೆ. ತಬ್ಬಿಬ್ಬಾಗಿ ದಿಕ್ಕುಗಾಣದೆ ಕುಳಿತಾಗ ಗೀತಾಂಜಲಿಯ ಮತ್ತಾವುದೋ ಪುಟದ ಮತ್ತಾವುದೋ ಸಾಲು ಪ್ರಣತಿಯಂತೆ ದಾರಿ ತೋರಿಸುತ್ತದೆ. ಮೂಲತಃ ನಾನು ಮುದ್ದಣನ ಪಂಥದವನು. ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದು ನಂಬಿದವನು. ಚಕಿತಗೊಳಿಸುವ, ಬೆಚ್ಚಿ ಬೀಳಿಸುವ, ದಿಕ್ಕುದಿಕ್ಕಿಗೆ ದೀಪ ಹಚ್ಚುವ, ಕೆಲವೇ ಕೆಲವು ಕವಿಗಳು ಮತ್ತವರ ಕಾವ್ಯವನ್ನು ಬಿಟ್ಟರೆ ಗದ್ಯವೇ ನನಗಿಷ್ಟ.

ಅತ್ಯಂತ ದುರುಪಯೋಗವಾಗಿರುವ ಮತ್ತು ದೌರ್ಜನ್ಯಕ್ಕೊಳಗಾಗಿರುವ ಪ್ರಕಾರವೆಂದರೆ ಕಾವ್ಯ; ಅನೇಕರು ಕಾವ್ಯ ಬರೆಯುವುದನ್ನು ನಿಲ್ಲಿಸಿದರೆ ಬಿದಿರೂ ಉಳಿಯುತ್ತದೆ ; ಕಾಡೂ ಉಳಿಯುತ್ತದೆ; ಕವಿಗೋಷ್ಠಿಗಳೆಂದರೆ ಲಾಠಿಚಾರ್ಜುಗಳೆಂದು ಹೇಳಿ ನಾನು ನನ್ನ ಕವಿಮಿತ್ರರನ್ನು ಗೇಲಿ ಮಾಡಿ ಅವರ ಕೋಪಕ್ಕೆ ತುತ್ತಾದವನು. ಆದರೆ ಪಂಪ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಟಾಗೋರ್ ಮುಂತಾದವರ ಬಗ್ಗೆ ಈ ಮಾತು ಹೇಳಲಾರೆ. ಅದಕ್ಕೆ ನೋಬೆಲ್, ಜ್ಞಾನಪೀಠ ಇತ್ಯಾದಿ ಪುರಸ್ಕಾರಗಳು ಕಾರಣವಲ್ಲ. ಗೀತಾಂಜಲಿಯ ಕೆನೆಯ ಸಾರವನ್ನು ಆಸ್ವಾದಿಸುವಾಗ ಅನ್ನಿಸಿದ್ದು.

  ಗೀತಾಂಜಲಿ ಒಂದು ಅನ್ವೇಷಣೆ. ಒಂದು ಆತ್ಮಗೀತೆ. ಇದರ ಇಂಗ್ಲಿಷ್ ಅನುವಾದಕ್ಕೆ ಮುನ್ನುಡಿ ಬರೆದ ಯೇಟ್ಸ್ : ‘I have carried the manscript of these translations about with me for days, reading it in railway trains, or on the top of omnibuses and in restaurants and I have often had to close it lest some stranger would see how much it moved me!’ಎನ್ನುತ್ತಾನೆ. ಅವನ ಮುನ್ನುಡಿಯ ಕಾರಣಕ್ಕೂ ನಾನು ಇದನ್ನು ಶ್ರೇಷ್ಠ ಎನ್ನುತ್ತಿಲ್ಲ. ಟಾಗೋರರು ನಿತ್ಯಸತ್ಯದ ಇರುವಿಕೆಯನ್ನು ಸೃಷ್ಟಿಯ ಸೌಂದರ್ಯದಲ್ಲಿ ಅನ್ವೇಷಿಸುತ್ತಾರಾದ್ದರಿಂದ, ಅದು ನನಗೆ ಮುಖ್ಯ ಎನಿಸುತ್ತದೆ. ಸಣ್ಣ ಬಿದಿರಿನ ಕೊಳಲಾದ ನನ್ನಲ್ಲಿ ಉಸಿರನ್ನು ತುಂಬಿ ಸಾರ್ಥಕಗೊಳಿಸಿದ ಸೃಷ್ಟಿಯ ಆನಂದದ ಬಗ್ಗೆ ಕವಿಗೆ ಧನ್ಯತಾಭಾವ. ಈ ಧನ್ಯತಾಭಾವದಿಂದಲೇ ಕವಿ ವಿಶ್ವದ ಉಸಿರಿಗೆ ತಾನು ಕೊಳಲಾಗುತ್ತಾನೆ. ಗಾನವು ದಿವ್ಯಗಾನವಾಗಿ, ಮಹಾಗಾನವಾಗಿ ಪರಿಣಮಿಸುತ್ತದೆ. ಎಲ್ಲಿ? ಕಾಡಿನ ಅಗಣಿತ ಗಂಧಕುಸುಮಗಳಲ್ಲಿ; ನಟ್ಟಿರುಳ ನಭದ ತಾರಾನಿಲಯದ ಮಹಾಮೌನದಲ್ಲಿ; ಸೂರ್ಯೋದಯದ ಚಿನ್ನದ ಬಣ್ಣದಲ್ಲಿ. ಈ ಅನಂತ ಶಕ್ತಿ ಯಾವುದು? ಅದನ್ನು ಕಾಣುವುದು ಹೇಗೆ? ಬದುಕೆಲ್ಲ ವೀಣೆಯನ್ನು ಶ್ರುತಿ ಮಾಡುವುದರಲ್ಲೇ ಕಳೆದುಹೋಯಿತು.ನಾನು ಹಾಡಬಯ ಸಿದ ಹಾಡು ಇನ್ನೂ ನನಗೆ ಬಾರದಾಗಿದೆ. ಮಹಾಭಾರತದಲ್ಲಿ ಭೀಷ್ಮ ಕಾಯುವಿಕೆ ಒಂದು ತಪಸ್ಸು ಎನ್ನುತ್ತಾನೆ.

ಟಾಗೋರರು:
‘I live in the hope of meeting with him: this meeting is not yet’ ಎನ್ನುತ್ತಾರೆ. ಲೌಕಿಕದಲ್ಲಿ ಮುಳುಗುವ ಮನಸ್ಸಿನೆದುರು ಪ್ರಾರ್ಥಿಸುತ್ತಾರೆ : ‘Give me strength to raise my mind high above daily trifles’.

ಎಲ್ಲರಿಗೂ ಗೊತ್ತಿರುವ ಮತ್ತು ಜಗನ್ಮಾನ್ಯವಾದ ಟಾಗೋರರ ಮಾತುಗಳನ್ನು--– ಅವು ಸರಳವಾಗಿದ್ದರೂ– -ಇಲ್ಲಿ ಕಾಣಿಸಬೇಕು: ‘ನಿನ್ನ ಜಪತಪ ಮಂತ್ರಘೋಷ ನಿಲ್ಲಿಸು. ಏಕಾಂಗಿಯಾಗಿ ಕುಳಿತು, ಕತ್ತಲ ಕೋಣೆಯಲ್ಲಿ ಆರಾಧಿಸುವುದು ವ್ಯರ್ಥ. ಬಿರುನೆಲವನ್ನುಳುವ ರೈತನಲ್ಲಿ, ರಸ್ತೆ ಮಾಡಲು ಕಲ್ಲುಕುಟುಕುವ ಶ್ರಮಿಕನಲ್ಲಿ, ಬಿಸಿಲಲ್ಲಿ, ಧೂಳಲ್ಲಿ, ಮಳೆಯಲ್ಲಿ, ಬೆವರಲ್ಲಿ ದೇವನಿದ್ದಾನೆ. ನಿನ್ನ ಮಡಿಯನ್ನು ಕಿತ್ತೆಸೆದು ಧೂಳಿಗೆ ಧುಮುಕು!’ ನವೋದಯ ಮತ್ತು ಪ್ರಗತಿಶೀಲ ಪಂಥದ ಮತ್ತು ಆ ಕಾಲಘಟ್ಟದ, ಅನೇಕ ಭಾರತೀಯ ಭಾಷೆಗಳ ಬರಹಗಾರರನ್ನು ಟಾಗೋರರ ಈ ಮಾತುಗಳು ತೀವ್ರವಾಗಿ ಪ್ರಭಾವಿಸಿದವು. ಅವು ಅವರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡಿತು ಕೂಡಾ.

ಜೀವದ ಮೊದಲ ಹೋರಾಟ ತನ್ನ ಪರ್ಯಾಯವರಣದೊಡನೆ ಅಲ್ಲ; ತನ್ನೊಡನೆಯೇ. ಬದುಕಿನ ಉದ್ದೇಶ ಮರೆತು ನಮ್ಮ ಸುತ್ತ ಗೋಡೆ ಕಟ್ಟಿಕೊಳ್ಳುತ್ತೇವೆ. ಕ್ರಮೇಣ ನಾವು ಕಟ್ಟಿದ ಗೋಡೆ ಸೆರೆಮನೆಯಾಗಿ ನಾವೇ ಅದರಲ್ಲಿ ಬಂಧಿಯಾಗುತ್ತೇವೆ. ‘I am very busy building this wall around; and this wall goes up in to the sky day by day I loose sight of my true being in its dark shadow’.

ನೋಡನೋಡುತ್ತ ಸಾವು ಬಂದೇಬಿಟ್ಟಿತು. ಮೃತ್ಯುವಿಗೆ ಅಂಜುವುದು ಅಪೂರ್ಣದೃಷ್ಟಿ. ಜನನ-ಮರಣಗಳು, ಮಗುವಿಗೆ ಹಾಲು ಕುಡಿಸುವಾಗ ತಾಯಿ ಸ್ತನಗಳನ್ನು ಬದಲಿಸಿದಂತೆ. ಇಂಥ ಪ್ರತಿಮೆಗಳು, ರೂಪಕಗಳು ದಂಡಿಯಾಗಿ ಇವೆಯೇ ಹೊರತು, ಟಾಗೋರರಲ್ಲಿ ದೇವಾನುದೇವತೆಗಳ ಸ್ತುತಿಯಾಗಲೀ, ಹೆಸರಾಗಲೀ, ಮತೀಯಮಿತಿಯಾಗಲೀ ಇಲ್ಲ. ಅಲ್ಲಿ ಧ್ವನಿಪೂರ್ಣವಾದ ಪ್ರತಿಮೆಗಳ ದಿಬ್ಬಣವೇ ಸಾಗುತ್ತದೆ. ಆದ್ದರಿಂದಲೇ ಗೀತಾಂಜಲಿ ಅನನ್ಯ, ಅಖಂಡ ಮತ್ತು ಅಪೂರ್ವ.

ನನಗೆ ಪ್ರಿಯವಾದ ಲೇಖಕರ, ಚಿಂತಕರ ಮತ್ತು ಸಾಧಕರ ಮನೆಮಠಮಾರುಗಳನ್ನು ಹುಡುಕಿ ಹೋಗುವುದು ನನ್ನ ವ್ಯಸನ. ದೇಶದ ಒಳಹೊರಗೆ ಸುತ್ತಿ ಕುವೆಂಪು, ಬೇಂದ್ರೆ, ಪುತಿನ, ಗಾಂಧಿ, ಶೇಕ್ಸ್‌ಪಿಯರ್, ವ್ಯಾನ್‌ಗಾಹ್, ಆಸ್ಕರ್‌ವೈಲ್ಡ್, ಮೊಜಾರ್ಟ್ ಕೊನೆಗೆ ಹಿಟ್ಲರ್ ಹುಟ್ಟಿದ ಮನೆಗೂ ಹೋಗಿ ಬಂದಿದ್ದೇನೆ. ಅಂಥವರನ್ನು ಅರ್ಥ ಮಾಡಿಕೊಳ್ಳಲು ಇದು ಅಗತ್ಯವೆ? ಅನಿವಾರ್ಯವೆ? ಅವರ ಬಗೆಗಿನ ಕೃತಿಗಳನ್ನು ಓದಿದರೆ ಸಾಲದೆ? ಖಂಡಿತಾ ಸಾಕು. ಎಲ್ಲರ ಮನೆ, ಹಿತ್ತಿಲು, ಮಂಚ, ಈಳಿಗೆ ಮಣೆ, ಚರಕ, ಪೆನ್ನು ನೋಡಲೇಬೇಕೆಂದೇನಿಲ್ಲ. ಆದರೆ ನೋಡುವುದರಿಂದ ನಮ್ಮ ಗ್ರಹಿಕೆ ವಿಸ್ತಾರವಾಗುತ್ತದೆ. ಮಾಂತ್ರಿಕ ಸಂಗೀತ ಸಂಯೋಜಕ ಮೊಜಾರ್ಟನೂ, ಸರ್ವಾಧಿಕಾರಿ ಹಿಟ್ಲರನೂ ಒಂದೇ ನೆಲದಲ್ಲಿ ಹುಟ್ಟಿಬರುತ್ತಾರೆ. ಪರಸ್ಪರ ವಿರುದ್ಧ ಆಶಯಗಳುಳ್ಳ ಗಾಂಧಿ-–ಮೋದಿ ಒಂದೇ ನೆಲದಲ್ಲಿ ಹುಟ್ಟಿ ಬರುತ್ತಾರೆ. ಮಣ್ಣಿನ ಗುಣ ಅನ್ನುವುದು ಶುದ್ಧ ಸುಳ್ಳು. ಅದು ಮನುಷ್ಯರ ಗುಣ ; ಅಷ್ಟೆ.
ಟಾಗೋರರ ಶಾಂತಿನಿಕೇತನ, ಶ್ರೀನಿಕೇತನಗಳನ್ನು ನೋಡಿದಾಗ ಪಿಚ್ಚೆನಿಸುತ್ತದೆ. ಗುರುದೇವ ಶಾಂತಿನಿಕೇತನಕ್ಕೆ ಬಂದು ನೆಲೆಸಿದ್ದು ಒಂದು ಶತಮಾನದ ಹಿಂದೆ. ಗುರುಶಿಷ್ಯ ಪರಂಪರೆಯಲ್ಲಿ ಅಧ್ಯಾತ್ಮ, ವಿಜ್ಞಾನ, ಕಲೆ, ಸಂಗೀತ ಎಲ್ಲವನ್ನೂ ಕಲಿಸುತ್ತಿದ್ದ ಶಾಂತಿನಿಕೇತನ ಹಾಳು ಸುರಿಯುತ್ತಿದೆ.

ಕೃಷಿಗಾಗಿ ಸೃಷ್ಟಿಸಿದ ಶ್ರೀನಿಕೇತನ ಕೂಡಾ. ಸರ್ಕಾರ ವಹಿಸಿಕೊಂಡು ಒಂದು ಪ್ರವಾಸೀ ತಾಣವನ್ನಾಗಿಸಿ ಕೈ ತೊಳೆದುಕೊಂಡಿರುವುದರಿಂದ ಅಗ್ಗವೂ, ಕೊಳಕೂ ಆಗಿದೆ. ಗುರುದೇವರು ಕುಳಿತು ಕಲಿಸುತ್ತಿದ್ದ ಬಯಲು ಪಾಠಶಾಲೆಯ ಪೀಠಗಳ ಮೇಲೆ ಪ್ರೇಮಿಗಳು ಅಥವಾ ನಾಯಿಗಳು ಮಲಗಿರುತ್ತವೆ. ಆ ಪೀಠ ನಿರ್ಲಕ್ಷ್ಯಕ್ಕೊಳಗಾದ ಅನಾಮಿಕರ ಸಮಾಧಿಯನ್ನು ಹೋಲುತ್ತದೆ. ನನ್ನ ಅನುಭವದ ಪರಿಧಿಯಲ್ಲಿ ಹೇಳುವುದಾದರೆ ಕುಪ್ಪಳಿಯ ಕುವೆಂಪು ಅವರ ಮನೆಯೊಂದೇ ಉತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಕವಿಮನೆ. ಟಾಗೋರರ ಮನೆಯ ದುರವಸ್ಥೆಯನ್ನು ಕಂಡಾಗ, ಕುವೆಂಪು ಮನೆಯನ್ನು ಕಾಪಾಡುತ್ತಿರುವ ಕಡಿದಾಳ್ ಪ್ರಕಾಶ್ ಮತ್ತು ಸಿಬ್ಬಂದಿಯವರ ಪ್ರಯತ್ನ ಮೆಚ್ಚತಕ್ಕದ್ದು. ರಾಷ್ಟ್ರಗೀತೆಯನ್ನು ಕೊಟ್ಟ ಟಾಗೋರರ ಮನೆಯಲ್ಲಿ ದೇಶವೂ, ಕಾವ್ಯವೂ ಕಣ್ಮರೆಯಾಗಿದೆ. ತುಂಬು ಕುಟುಂಬದ ಸದಸ್ಯರ ಜೊತೆ, ಧನಿಕ ಪರಂಪರೆಯಲ್ಲಿ ಬಂದ ಟಾಗೋರ್ ವಂಶಸ್ಥರು ಈಗ ಯಾರೂ ಇಲ್ಲ. ಇದನ್ನೆಲ್ಲ ನೋಡಿದಾಗ ಕವಿ ಮೂಲಗಳನ್ನು ಶೋಧಿಸಲು ಹೋಗದೆ ಅವರು ಬರೆದದ್ದನ್ನು ಓದಿಕೊಂಡು ಸುಮ್ಮನಿರುವುದು ಲೇಸು ಅನಿಸುತ್ತದೆ.
ಆದರೂ ಕೊಲ್ಕತ್ತಾ ನಗರದ ನಡುವೆ ಇರುವ ಟಾಗೋರ್‌ರ ಮನೆಯಂಗಳದಲ್ಲಿ ಕುಳಿತು ‘ಇದನ್ನು ಕಾವ್ಯಾತ್ಮಕವಾಗಿ ಕಾದಿರಿಸಲು ಸಾಧ್ಯವೆ ? ದಯವಿಟ್ಟು ಪ್ರಯತ್ನಿಸಿ’ ಎಂದು ಮಮತಾದೀದಿಗೆ ಟ್ವೀಟ್ ಮಾಡಿದೆ. ನನ್ನ ಸಲಹೆ ಆಕೆಗೆ ತೃಣಸಮಾನವಾಗಿ ಕಂಡಿರಲಿಕ್ಕೂ ಸಾಕು.
* * *
ಇದಕ್ಕಿಂತ ಮುಖ್ಯವಾದ ಇನ್ನೊಂದು ಘಟನೆ ನನ್ನನ್ನು ಅಲುಗಿಸಿತು. ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ನಡೆದಿದ್ದ ಹತ್ಯಾಕಾಂಡವನ್ನು ವಿರೋಧಿಸಿ ತಮಗೆ ಲಭಿಸಿದ್ದ ನೈಟ್‌ಹುಡ್ ಪುರಸ್ಕಾರವನ್ನು ಟಾಗೋರ್, ಪ್ರತಿಭಟನಾರ್ಥವಾಗಿ ೧೯೧೯ರಲ್ಲಿ ಬ್ರಿಟಿಷ್ ವ್ಯವಸ್ಥೆಗೆ ಹಿಂತಿರುಗಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯು ಜಲಿಯನ್ ವಾಲಾಬಾಗ್‌ನಲ್ಲಿ ಟಾಗೋರ್ ಸ್ಮರಣೆಗಾಗಿ ಬಹುಭಾಷಾ ಕವಿಗೋಷ್ಠಿ ಏರ್ಪಡಿಸಿತ್ತು. ನನ್ನ ಮಗಳು ಕನಸು ಪುಟ್ಟಿ ಕೂಡಾ ಆಯ್ಕೆಯಾಗಿದ್ದಳು. ಅಭ್ಯಾಗತನಾಗಿ ನಾನೂ ಹೋಗಿದ್ದೆ. ಆ ಸಂಜೆಯ ಅನೌಪಚಾರಿಕ ಚರ್ಚೆಯಲ್ಲಿ ಬಹುತೇಕ ಕವಿಗಳಿದ್ದರು.

‘ಗೀತಾಂಜಲಿಯ ನನ್ನ ಹಾಡುಗಳನ್ನು ಕೇಳಿ ಜನ ಆನಂದಿಸುತ್ತಾರೆ. ಆದರೆ ಹಾಡುಗಳಿಂದಾಗುವ ಲಾಭ ಈ ಆನಂದಕ್ಕೂ ಅತೀತವಾದದ್ದು’ ಎಂಬ ಗುರುದೇವರ ಮಾತುಗಳನ್ನು ಯೋಚಿಸುತ್ತಿದ್ದೆ. ಆದರೆ ಅಲ್ಲಿದ್ದ ಹಿರಿಯ, ಪ್ರಸಿದ್ಧ ಕವಿದ್ವಯರು ‘Enough is enough. ಟಾಗೋರ್ ಭಜನೆಯನ್ನು ಇನ್ನು ನಿಲ್ಲಿಸುವುದು ಒಳಿತು. ಇಡೀ ಭಾರತೀಯ ಕಾವ್ಯ ಪ್ರಪಂಚ, ಟಾಗೋರ್ ಎಂಬ ಬಿಂದುವಿನಲ್ಲಿ ಸಿಕ್ಕಿ ನರಳುತ್ತಿದೆ. ಹೊಗಳಿಕೆಗಳು ಕ್ಲೀಷೆ ಹುಟ್ಟಿಸುತ್ತಿವೆ.

ಟಾಗೋರ್‌ರನ್ನು ಮೀರಿದ ಕಾವ್ಯವನ್ನು ಇಂದಿನ ಯುವಕವಿಗಳು ಆಗಲೇ ಬರೆದಾಗಿದೆ. ನಾವು ಬಂಗಾಳಿಗಳು ಟಾಗೋರ್‌ರನ್ನು ಪಕ್ಕಕ್ಕೆ ಸರಿಸಿ ಮುಂದೆ ಸಾಗಿದ್ದೇವೆ. ಅನ್ಯ ಭಾಷೆಯ ನೀವುಗಳೇ ಇನ್ನೂ ಭಜನಾಮಂಡಳಿಯಿಂದ ಹೊರಬಂದಿಲ್ಲ’ ಎಂದರು. ಅವರ ಮಾತುಗಳು ದಿಟವೋ, ಹುಸಿಯೋ, ಉತ್ಪ್ರೇಕ್ಷೆಯೋ ಅಥವಾ ತಲೆಹರಟೆಯ ಮಾತುಗಳೋ ಎಂದು ಯೋಚಿಸುತ್ತಿದ್ದೇನೆ. ಸ್ಮಾರಕಗಳ ನಿರ್ವಹಣೆಯ ಬಗೆಗೆ ಸರ್ಕಾರದ ಧೋರಣೆಗಳಿಗೂ, ಈ ಕವಿದ್ವಯರು ಟಾಗೋರರನ್ನು out dated ಎನ್ನುತ್ತಿರುವುದಕ್ಕೂ ಪರಸ್ಪರ ಸಂಬಂಧವಿರುವಂತೆ ತೋರುತ್ತದೆ.

ಸ್ಮಾರಕಗಳನ್ನು ನಿರ್ಮಿಸಿ ಕಾಪಾಡುವುದು, ಒಂದು ಆಕಾರವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವಾಯಿತು. ಆದರೆ ಸಾಕಾರದಿಂದ, ನಿರಾಕಾರಕ್ಕೆ ಏರಲು ಪ್ರಯತ್ನಿಸಿದ ರಸಋಷಿಯ ಚಿಂತನೆಗಳನ್ನೂ ಉಪೇಕ್ಷೆ ಮಾಡುವುದು, ಸಾಹಿತ್ಯದ ವಿದ್ಯಾರ್ಥಿಯಾದ ನನ್ನಂಥವರಿಗೆ ಆತಂಕ ಹುಟ್ಟಿಸುತ್ತದೆ. ಜನರಿಗೆ ಈಗ ಆಕಾರವೂ ಬೇಡ; ನಿರಾಕಾರವೂ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT