ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅರ್ಥ ವ್ಯವಸ್ಥೆಗೆ ಎಚ್ಚರಿಕೆ ಗಂಟೆ

Last Updated 8 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ರಾಜ್ಯದ ಆರ್ಥಿಕ ಪರಿಸ್ಥಿತಿ ಬಗೆಗಿನ ಅನೇಕ ಅಧ್ಯಯನ ವರದಿಗಳು ಮತ್ತು ಸರ್ಕಾ­ರವೇ ಬಿಡುಗಡೆ ಮಾಡಿರುವ ಹೇಳಿಕೆಗಳು ರಾಜ್ಯ­ದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಎಚ್ಚರಿಕೆಯ ಗಂಟೆಯಾಗಿವೆ. ರಾಜ್ಯದ ಅರ್ಥ ವ್ಯವಸ್ಥೆಯ ಚಿತ್ರಣ ತುಂಬ ಕಳಪೆಯಾಗಿರುವುದರ ಬಗ್ಗೆ ಈ ವರದಿಗಳು ಬೆಳಕು ಚೆಲ್ಲಿವೆ.

ರಾಜ್ಯದ ಸಾಮಾಜಿಕ ಮತ್ತು ಅರ್ಥ ವ್ಯವಸ್ಥೆ­ಯ ಬಹುತೇಕ ಮಾನದಂಡ­ಗಳು ರಾಷ್ಟ್ರೀಯ ಮಾನದಂಡದಲ್ಲಿ ಕೆಳಗೆ ಕುಸಿದಿರುವುದು ರಾಜ್ಯದ ಅಧಿಕಾರ­­ಶಾಹಿಗೆ ಮತ್ತು ರಾಜಕಾರಣಿಗಳ ಪಾಲಿಗೆ ಚಿಂತೆಗೆ ಕಾರಣವಾಗಿದೆ. ಹತ್ತೊಂಬತ್ತು ದೊಡ್ಡ ರಾಜ್ಯಗಳ ಪೈಕಿ, ಕರ್ನಾಟಕವು ಒಟ್ಟಾರೆ ಸ್ಥಾನ­ಮಾನದಲ್ಲಿ 12ನೇ ಸ್ಥಾನಕ್ಕೆ ಕುಸಿದಿದೆ. ಹನ್ನೆರಡು ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳಲ್ಲಿ ರಾಜ್ಯದ ಏಳು ಮಾನ­ದಂಡಗಳು ರಾಷ್ಟ್ರೀಯ ಸರಾಸರಿ­ಗಿಂತ ಉತ್ತಮ ಮಟ್ಟದಲ್ಲಿದ್ದರೂ ಅವುಗಳಲ್ಲಿ ಕೆಲವು ತೀರ ಕಡಿಮೆ ಅಂತರದಲ್ಲಿ ಮುಂಚೂಣಿ­ಯಲ್ಲಿವೆಯಷ್ಟೆ.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಜನಸಂಖ್ಯೆ ಪ್ರಮಾಣವು ಶೇ 20.92ರಷ್ಟಿದ್ದು, ರಾಷ್ಟ್ರೀಯ ಪ್ರಮಾ­ಣವು ಶೇ 21.92ರಷ್ಟಿದೆ. ಅದೇ ಬಗೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಪೂರೈಕೆ ಪ್ರಮಾಣವು ಶೇ 92.3ರಷ್ಟಿದ್ದು, ಇದು ಕೂಡ ರಾಷ್ಟ್ರೀಯ ಪ್ರಮಾಣ ಶೇ 91.4ಕ್ಕಿಂತ ಕೊಂಚ ಹೆಚ್ಚಿಗೆ ಇದೆ. ಕೃಷಿ ಬೆಳವಣಿಗೆ, ಆರೋಗ್ಯ ವಲಯಗಳಲ್ಲಿನ ಸಾಧನೆಗಳೂ ರಾಜ್ಯಕ್ಕೆ ಹೆಸರು ತಂದು ಕೊಟ್ಟಿವೆ. ಈ ಬೆರಳೆಣಿಕೆಯ ಸಾಧನೆ ಹೊರತು­ಪಡಿಸಿದರೆ ಬಹುತೇಕ ಉಳಿದೆಲ್ಲ ಮಾನದಂಡಗಳಾದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ), ತಲಾ ಆದಾಯ ವರಮಾನ, ಶಿಕ್ಷಣ, ಸರಕುಗಳ ತಯಾರಿಕೆ ಬೆಳವಣಿಗೆ, ತಲಾ ವಿದ್ಯುತ್ ಬಳಕೆ ಮುಂತಾದವು ರಾಷ್ಟ್ರೀಯ ಸರಾಸರಿಗಿಂತ ಕೆಳ ಮಟ್ಟದಲ್ಲಿ ಇವೆ.

ಹಲವಾರು ವರ್ಷಗಳವರೆಗೆ ರಾಷ್ಟ್ರೀಯ ಸರಾಸರಿಗಿಂತ ಗರಿಷ್ಠ ಮಟ್ಟದಲ್ಲಿದ್ದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಬೆಳವಣಿಗೆ ದರವೂ ಕೂಡ ಈಗ ಸರಾಸರಿ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಜಿಎಸ್‌ಡಿಪಿ ವೃದ್ಧಿ ದರವು ರಾಜ್ಯದ ವರಮಾನ ಸಂಗ್ರಹ ಸಾಮರ್ಥ್ಯವನ್ನು ನಿರ್ಧರಿ­ಸುತ್ತದೆ. ಈ ಮೂಲಕ ಸಂಗ್ರಹವಾಗುವ ಹೆಚ್ಚುವರಿ ಸಂಪ­ನ್ಮೂಲ­­ವನ್ನು ಇತರ ಸಾಮಾಜಿಕ ಯೋಜನೆ­ಗಳಿಗೆ ವೆಚ್ಚ ಮಾಡಲು ನಿಗದಿ ಮಾಡಲಾಗುತ್ತದೆ.

ಸೇವಾ ವಲಯ ಮತ್ತು ತಯಾರಿಕಾ ರಂಗದ ಬೆಳವಣಿಗೆ ಕೂಡ ಗಮನಾರ್ಹವಾಗಿ ಕುಸಿತ ದಾಖಲಿ­ಸಿ­­ರುವುದನ್ನೂ ಇದು ಸೂಚಿ­ಸುತ್ತದೆ. ಕೃಷಿ ರಂಗದ ತೃಪ್ತಿದಾಯಕ ಸಾಧನೆ ಹೊರತಾ­ಗಿಯೂ ಜಿಎಸ್‌ಡಿಪಿ ವೃದ್ಧಿದರವು ರಾಷ್ಟ್ರೀಯ ಸರಾಸರಿಗಿಂತ ಕೆಳಗೆ ಇದೆ. ಸಂಪನ್ಮೂಲ ಮತ್ತು ವರಮಾನ ಹೆಚ್ಚಳಕ್ಕೆ ಕಾರಣ­ವಾಗುವ  ಈ ಎರಡೂ ವಲಯಗಳನ್ನು ರಾಜ್ಯ ಸರ್ಕಾರವು ನಿರ್ಲಕ್ಷಿಸಿದೆ ಎಂದು ಭಾವಿಸಲು ವಿಶೇಷ ಜ್ಞಾನವೇನೂ ಬೇಕಾಗುವುದಿಲ್ಲ.

ಇತ್ತೀಚಿನ ದಿನಗಳವರೆಗೆ ಕರ್ನಾಟಕ ರಾಜ್ಯವು  ಸರಕುಗಳ ತಯಾರಿಕೆಯ ಪರಿ­ಣತಿಗೆ ಖ್ಯಾತ­ವಾಗಿತ್ತು. ಕಳೆದ ದಶಕದಲ್ಲಿ ಸೇವಾ ವಲಯವು ಗಣನೀಯ ಸಾಧನೆ ಮಾಡಿ ಗಮನ ಸೆಳೆದಿತ್ತು ಎನ್ನು­ವುದರಲ್ಲಿ ಎರಡು ಮಾತಿಲ್ಲ. ಆದರೆ, ಕ್ರಮೇಣ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತ ಸಾಗಿತು. ತಯಾರಿಕೆ ಮತ್ತು ಸೇವಾ ವಲಯ­ಗಳಲ್ಲಿನ ಈ ಮೊದಲಿನ ಬೆಳವಣಿಗೆಗೆ ಹೋಲಿಸಿ­ದರೆ ರಾಜ್ಯವು ಈಗ ನಿರಾಶಾದಾಯಕ ಪ್ರಮಾ­ಣದ ಬೆಳವ­ಣಿಗೆ ದಾಖಲಿಸಿ ಒಂದರ್ಥದಲ್ಲಿ ಅತಂತ್ರ ಸ್ಥಿತಿಯಲ್ಲಿದೆ.

ಇತರ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಮತ್ತು ನೆರೆಹೊರೆಯ ರಾಜ್ಯ­ಗಳಾದ  ತಮಿಳುನಾಡು, ಆಂಧ್ರಪ್ರದೇಶ­ಗಳು ತಯಾರಿಕಾ ರಂಗದಲ್ಲಿ ಕರ್ನಾಟ­ಕಕ್ಕಿಂತ ಉತ್ತಮ ಸಾಧನೆ ಮಾಡಿವೆ.  2007 – - 2008 ರಿಂದ 2011 - 12ರ ಅವಧಿಯಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ರಾಜ್ಯ­ದಲ್ಲಿ ಶೇ 40­ರಷ್ಟು ಬೆಳವಣಿಗೆ ದಾಖಲಿಸಿದ್ದರೆ, ಆಂಧ್ರಪ್ರದೇಶದಲ್ಲಿ ಈ ಬೆಳವಣಿಗೆ ದರವು ಶೇ 107ರಷ್ಟಿದ್ದರೆ, ವಿದ್ಯುತ್ ಪೂರೈಕೆ ಪರಿಸ್ಥಿತಿ ಹದಗೆಟ್ಟಿದ್ದರೂ ತಮಿಳುನಾಡಿನಲ್ಲಿ ಶೇ 160ರಷ್ಟು ದಾಖಲಾಗಿದೆ.

ಹಿಂದೊಮ್ಮೆ ಕರ್ನಾಟಕ ರಾಜ್ಯವು ಸಾಮಾ­ಜಿಕ ಮತ್ತು ಆರ್ಥಿಕ ಮಾನ­ದಂಡ­ಗಳ ವಿಷಯ­ದಲ್ಲಿ ಪುರೋಗಾಮಿ ರಾಜ್ಯ ಎಂದೇ ದೇಶದಾ­ದ್ಯಂತ ಗಮನ ಸೆಳೆದಿತ್ತು.  ಇತರ ರಾಜ್ಯಗಳು ಕರ್ನಾಟಕ ತುಳಿದಿರುವ ಹಾದಿ ಅನುಸರಿಸಲು ಬಯಸುತ್ತಿದ್ದವು. ರಾಜ್ಯದಲ್ಲಿನ ಹಿರಿಯ ಉನ್ನತ ಅಧಿಕಾರಿಗಳ ಹುದ್ದೆಗಳನ್ನು ಅಲಂಕರಿ­ಸಲು ತೀವ್ರ ಪೈಪೋಟಿಯೂ ನಡೆಯುತ್ತಿತ್ತು.

ಇತ್ತೀಚೆಗೆ ನಿವೃತ್ತರಾದ, ರಾಜ್ಯ ಸರ್ಕಾರದ ಗೌರವಾನ್ವಿತ ಹಿರಿಯ ಅಧಿಕಾರಿಯೊಬ್ಬರು, ಕರ್ನಾಟಕ ಕೇಡರ್ ಸೇವೆಯು ಅಧಿಕಾರಿಗಳಿಗೆ ಗಮನಾರ್ಹ ಅನುಭವ ನೀಡುತ್ತದೆ ಎಂದು ನನ್ನೊಂದಿಗೆ ಮಾತನಾಡುತ್ತ ರಾಜ್ಯದ ಬಗೆಗಿನ ತಮ್ಮ ಅಭಿಮಾನ ಹಂಚಿ­ಕೊಂಡಿದ್ದರು. ಇಂತಹ ವಿಶಿಷ್ಟ ಹಿನ್ನೆಲೆ ಮತ್ತು ದಾಖಲೆ ಹೊಂದಿರುವ ರಾಜ್ಯವು ಈಗ ಹಿಂದೆ ಬಿದ್ದಿದೆ.

ಇತ್ತೀಚೆಗಷ್ಟೇ ಪ್ರಕಟವಾದ ಡಾ. ರಘುರಾಂ ರಾಜನ್ ವರದಿಯು ಕೂಡ ರಾಜ್ಯದ ಕಳಪೆ ಸಾಧನೆಯನ್ನು ಖಚಿತಪ­ಡಿಸಿದೆ. ಅಭಿವೃದ್ಧಿ ವಿಷಯದಲ್ಲಿ ರಾಜನ್ ಸಮಿತಿಯು ರಾಜ್ಯವನ್ನು ಎರಡನೆ ಗುಂಪಿನ ರಾಜ್ಯಗಳ ಸಾಲಿಗೆ ಸೇರಿಸಿದೆ.
ಪ್ರಮುಖ ಹಣಕಾಸು ಪತ್ರಿಕೆಯೊಂದು ನಡೆಸಿರುವ ಇನ್ನೊಂದು ಅಧ್ಯಯನದ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಆಡಳಿತ ಇರುವ ರಾಜ್ಯಗಳ ಸಾಧನೆ­ಯಲ್ಲಿ ಗುಜರಾತ್ ಮತ್ತು ಆಂಧ್ರಪ್ರದೇಶ­ಗಳು ಮುಂಚೂಣಿ­ಯಲ್ಲಿದ್ದರೆ ಕರ್ನಾಟಕವು ಕೊನೆಯ ಸ್ಥಾನದಲ್ಲಿ ಇದೆ. ಇದು ನಾಚಿಕೆಗೇಡಿನ ಸಂಗತಿಯಲ್ಲವೇ?

ಇಂತಹ ತೀವ್ರ ನಿರಾಶಾದಾಯಕ ಸಾಧನೆಗೆ ಅದಕ್ಷ ಆಡಳಿತ ಮತ್ತು  ಸಮರ್ಥ ನಾಯಕತ್ವ ಕೊರತೆಯೇ ಮುಖ್ಯ ಕಾರಣ. ಬೆಂಗಳೂರಿನಲ್ಲಿನ ಪರಿಸ್ಥಿತಿ ಬಗ್ಗೆ ಸೂಕ್ಷ್ಮ ದೃಷ್ಟಿ ಹರಿಸಿದರೆ ಮತ್ತು ನಗರದ ಅಸ್ತವ್ಯಸ್ತ ಮೂಲ­ಸೌಕರ್ಯಗಳನ್ನು ಗಮನಿಸಿದರೆ ರಾಜ್ಯ ಸರ್ಕಾರದ ಆಡಳಿತದ ಗುಣಮಟ್ಟ ಹೇಗಿದೆ ಎನ್ನುವುದಕ್ಕೆ ಸಾಕ್ಷಿ ಆಧಾರಗಳು ಸಿಗುತ್ತವೆ.

ಬೆಂಗಳೂರು ಮಹಾನಗರವು ರಾಜ್ಯದ ಮುಕುಟ ಇದ್ದಂತೆ. ನಾಡಿನ ಜನತೆಯ ಈ ಹೆಮ್ಮೆಯ ನಗರ ಕ್ರಮೇಣ ನಗರವಾಸಿಗಳ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿದೆ.

ನಾನು ಹುಟ್ಟಿ ಬೆಳೆದದ್ದು ಇದೇ ನಗರದಲ್ಲಿ. ಆದರೆ, ಯಾವತ್ತೂ ನಗರವು ಇಷ್ಟು ಕೆಟ್ಟ ಬಗೆಯಲ್ಲಿ ಗಬ್ಬೆದ್ದಿರುವುದನ್ನು ನಾನು ಇದು­ವರೆಗೂ ನೋಡಿಲ್ಲ.  ನಗರದ ರಸ್ತೆಗಳಲ್ಲಿ ವಾಹನ ಚಲಾಯಿಸುವ ಯಾರೇ ಆಗಲಿ ಕೇವಲ 100 ಮೀಟರ್ ದೂರ  ಸಾಗಲು ಹತ್ತಾರು ಗುಂಡಿಗಳನ್ನು ದಾಟುವ ಪರಿಸ್ಥಿತಿ ನಗರದಲ್ಲಿ ಇದೆ.

ತೆರವುಗೊಳಿಸದ ಕಸದ ರಾಶಿ, ಒಡೆದು ಹಾಳಾಗಿರುವ ಪಾದಚಾರಿ ರಸ್ತೆಗಳು ನಗರ­ವಾಸಿಗಳ ಪಾಲಿಗೆ ಅದೆಷ್ಟು ಅಪಾಯ­ಕಾರಿಯಾಗಿ ಪರಿಣ­ಮಿ­ಸಿವೆ ಎಂದರೆ, ರಸ್ತೆಯಲ್ಲಿ ಹೋಗು­ತ್ತಿದ್ದರೆ ಸಹಜವಾಗಿಯೇ ಎಲ್ಲರ ರಕ್ತದೊತ್ತಡ  ಏರುತ್ತದೆ.

ಬೆಂಗಳೂರು ಮಹಾನಗರವೊಂದೇ ರಾಜ್ಯದ ಒಟ್ಟು ವರಮಾನದಲ್ಲಿ ಶೇ 56ರಷ್ಟು ಕೊಡುಗೆ ನೀಡುತ್ತದೆ. ಆದರೆ, ನಗರಕ್ಕೆ ಸರ್ಕಾರ ನೀಡುವ ಆದ್ಯತೆ ಮತ್ತು ಗಮನವು ಸಿಗಬೇಕಾದ ಪ್ರಮಾಣದಲ್ಲಿ ದೊರೆಯುತ್ತಿಲ್ಲ.  ಇದಕ್ಕೆ  ಅದಕ್ಷ ಆಡಳಿತವೇ ಕಾರಣ.

ದೇಶದ ಇತರ ಮಹಾನಗರಗಳಾದ ಅಹ್ಮದಾಬಾದ್, ಜೈಪುರ ಮುಂತಾದವು ಸದ್ದಿಲ್ಲದೇ ಪ್ರಗತಿ ಪಥದಲ್ಲಿ ಸಾಗಿದ್ದರೆ, ಬೆಂಗಳೂರು ನಗರವು ನಾಗರಿಕರ ಕನಿಷ್ಠ ಮೂಲ ಸೌಕರ್ಯ ಒದಗಿಸಲು ಈಗಲೂ ಏದುಸಿರು ಬಿಡುತ್ತಿದೆ.
ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿ­ಕೊಂಡು ಕೆಲವೇ ತಿಂಗಳುಗಳು ಕಳೆದಿವೆ. ಸಿದ್ದರಾಮಯ್ಯ ಅವರು, ರಾಜ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಾರೆ ಎಂದೇ ರಾಜ್ಯದ ಜನತೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಇದು­ವರೆಗೂ ಅಂತಹ ಬೆಳವಣಿಗೆ ಕಂಡು ಬಂದಿಲ್ಲ.

ಬೆಂಗಳೂರು ಮತ್ತು ಮೈಸೂರು ಮಧ್ಯೆ ಅತ್ಯಂತ ವೇಗದ ರೈಲ್ವೆ ಸೇವೆ ಆರಂಭಿಸಲು ಮುಖ್ಯಮಂತ್ರಿಗಳು ಒಲವು ಹೊಂದಿದ್ದಾರೆ ಎನ್ನುವುದನ್ನು ಕೇಳಿ ನನಗೆ ವಿಚಿತ್ರ ಎನಿಸಿತು.  ಬೆಂಗಳೂರಿನಲ್ಲಿ ವಾಹನಗಳು ಚಕ್ಕಡಿಗಿಂತ ಕಡಿಮೆ ವೇಗದಲ್ಲಿ ಸಾಗುವಾಗ, ಎರಡು ನಗರಗಳ ಮಧ್ಯೆ ಅತ್ಯಂತ ವೇಗದ ರೈಲ್ವೆ ಸೌಲಭ್ಯದ ಬಗ್ಗೆ ಮಾತನಾಡುವುದು ತಮಾಷೆಯಾಗಿ ಕಾಣುತ್ತದೆ.

ಇಂತಹ ಯೋಜನೆ ಸ್ವಾಗತಾರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವುದು ಮೊದಲು ಆಗ­ಬೇಕು ಎನ್ನುವ ಪ್ರಜ್ಞೆಯೂ ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಇರಬೇಕು.

ರಾಜ್ಯ ಸರ್ಕಾರದ ಆರಂಭಿಕ ದಿನಗಳ ‘ಮಧುಚಂದ್ರ’ ಅವಧಿ ಕೊನೆಗೊಳ್ಳು­ತ್ತಿದೆ. ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತ ಅಧ್ಯಯನ ವರದಿಗಳತ್ತ ಗಮನ ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಸರಿಯಾದ ಸಮಯ. ಈ ವರದಿಗಳು ರಾಜ್ಯ ಸರ್ಕಾರದ ಪಾಲಿಗೆ ಎಚ್ಚರಿಕೆ ಗಂಟೆಯೂ ಹೌದು. ರಾಜ್ಯದಲ್ಲಿನ ನಿರಾಶಾದಾಯಕ ಆರ್ಥಿಕ ಚಿತ್ರಣ ಬದಲಿಸಲು, ಪ್ರಗತಿಯತ್ತ ದಾಪುಗಾಲು ಹಾಕಲು ಇದು ಸುಸಮಯವೂ ಹೌದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT