ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕುಮಾರ್ ತೀರಿಹೋದ ಆ ದಿನ

Last Updated 14 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಪ್ರಮುಖ ಘಟನೆಗಳು ನಡೆದಾಗ, ಗಲಭೆಗಳಾದಾಗ ಪೊಲೀಸರ ವೈಫಲ್ಯದ ಬಗ್ಗೆ ಚರ್ಚೆ ನಡೆಯುವುದು ಮಾಮೂಲು. ಏಪ್ರಿಲ್ ತಿಂಗಳು ಬಂದಾಗಲೆಲ್ಲಾ ನನಗೆ ರಾಜ್‌ಕುಮಾರ್ ನೆನಪಾಗುತ್ತಾರೆ. ಅವರು ಹುಟ್ಟಿದ್ದು, ಮೃತಪಟ್ಟಿದ್ದು ಇದೇ ತಿಂಗಳಲ್ಲಿ. ಅವರ ಕುರಿತು ಜನರಿಗೆ ಇದ್ದ ಅಭಿಮಾನದ ತೀವ್ರತೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ.

ರಾಜ್‌ಕುಮಾರ್ ದಂತಕಥೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರು ಮೆಜೆಸ್ಟಿಕ್‌ಗೆ ಬಂದರೆ ಕ್ಷಣಾರ್ಧದಲ್ಲಿ ಸಾವಿರಾರು ಜನ ಸೇರುತ್ತಿದ್ದರು. ಅಂಥ ವರ್ಚಸ್ಸು ಅವರದ್ದು.
ಆರು ವರ್ಷಗಳ ಹಿಂದೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ರಾಜ್‌ಕುಮಾರ್ ತೀರಿಕೊಂಡಾಗ ಕಾಳ್ಗಿಚ್ಚಿನಂತೆ ಆ ಸುದ್ದಿ ನಾಡಿನಾದ್ಯಂತ ಹಬ್ಬಿತು.
 
ಅವರ ಮೃತದೇಹವನ್ನು ಸದಾಶಿವನಗರದ ಮನೆಗೆ ತೆಗೆದುಕೊಂಡುಹೋದರು. ತಕ್ಷಣ ಉನ್ನತ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಹೋದರು. ಅವರು ಆ ಕ್ಷಣದಲ್ಲೇ ಮುಂದಿನ ಕ್ರಮದ ಬಗ್ಗೆ ಚಿಂತಿಸಬೇಕಿತ್ತು. ಮನೆಯವರು, ಅಭಿಮಾನಿಗಳು, ಕನ್ನಡ ಚಿತ್ರರಂಗ ಆಘಾತಕ್ಕೆ ಒಳಗಾಗಿದ್ದ ಸಂದರ್ಭವದು. ಹಾಗಾಗಿ ಪೊಲೀಸರೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಅಲ್ಲಿದ್ದ ಉನ್ನತ ಅಧಿಕಾರಿಗಳು ಅದರ ಬಗ್ಗೆ ಸೂಕ್ತ ರೀತಿಯಲ್ಲಿ ವಿಚಾರ ಮಾಡಲಿಲ್ಲ.

ರಾಜ್‌ಕುಮಾರ್ ಅಂದರೆ ಜನರಿಗೆ ಎಂಥ ಅಭಿಮಾನ ಇತ್ತೆಂಬುದು ಗೋಕಾಕ್ ಚಳವಳಿಯ ಸಂದರ್ಭದಲ್ಲೇ ಸ್ಪಷ್ಟವಾಗಿತ್ತು. ಅವರ ಮೃತದೇಹವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಬಲು ಬೇಗ ಅಭಿಮಾನಿಗಳು ಹರಿದುಬರುವುದು ನಮಗೆಲ್ಲಾ ಸಹಜ ಸಂಗತಿ. ಆದರೆ, ಅಲ್ಲಿದ್ದ ಅಧಿಕಾರಿಗಳಲ್ಲಿ ಕರ್ನಾಟಕದ ಜನರ ಮನಸ್ಥಿತಿ ಅರಿತವರು ಕಡಿಮೆ ಇದ್ದರು.

ಕಮಿಷನರ್ ಸೇರಿದಂತೆ ಉತ್ತರ ಭಾರತದವರೇ ಹೆಚ್ಚಾಗಿದ್ದರು. ಇಲ್ಲಿನ ಅಭಿಮಾನಿಗಳ ಮನಸ್ಥಿತಿಯನ್ನು ಅಂದಾಜು ಮಾಡುವಷ್ಟು ಅನುಭವ ಅವರಿಗೆ ಇರಲಿಲ್ಲ.
ರಾಜ್‌ಕುಮಾರ್ ಅವರಂಥ ಸಾಂಸ್ಕೃತಿಕ ವರ್ಚಸ್ಸು ಇರುವ ವ್ಯಕ್ತಿ ಮೃತಪಟ್ಟಾಗ, ಅಭಿಮಾನಿಗಳ ಪ್ರವಾಹ ತಡೆಯಲು ಸಣ್ಣ ಪುಟ್ಟ ಬ್ಯಾರಿಕೇಡ್‌ಗಳು ಸಾಕಾಗುವುದಿಲ್ಲ.

90 ವರ್ಷದ ಅಜ್ಜನಿಂದ ಒಂಬತ್ತು ವರ್ಷದ ಮಗುವಿನವರೆಗೆ ಉತ್ಕಟ ಅಭಿಮಾನ ಇರುವವರು ಆ ದಿನ ಬಂದಿದ್ದರು. ಕುವೆಂಪು ಕೃತಿಗಳು ಮನೆಮನೆಯಲ್ಲಿ ಇದ್ದಂತೆ ರಾಜ್‌ಕುಮಾರ್ ಆಕೃತಿ ಅನೇಕರ ಮನೆಯಲ್ಲಿತ್ತು. ಕರ್ನಾಟಕದ ಇತಿಹಾಸ, ಕನ್ನಡ ಪ್ರೀತಿ ಇರುವವರಿಗೆ ತಮ್ಮ ಮನೆಯ ಆತ್ಮೀಯರೊಬ್ಬರನ್ನೋ, ಹಿರಿಯರನ್ನೋ ಕಳೆದುಕೊಂಡ ಭಾವವಿತ್ತು. ಎಲ್ಲೆಡೆ ಸೂತಕದ ಛಾಯೆ.

ಅಲ್ಲಿದ್ದ ಅಧಿಕಾರಿಗಳೇ ಅಂತಿಮ ದರ್ಶನಕ್ಕೆ ಹೇಗೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಿದರು. ಅವರು ಸಭೆ ಕರೆದು ಸ್ಥಳೀಯ ಪೊಲೀಸರ ಸಲಹೆ ಪಡೆದಿದ್ದಿದ್ದರೆ ಸರಿಯಿತ್ತು.
 
ಹಾಗೆ ಮಾಡಲಿಲ್ಲ. ದೊಡ್ಡ ಮಟ್ಟದ ಗಲಭೆ ಆದಾಗ ಅಥವಾ ಆಗುವ ಸಂಭವ ಇರುವಾಗ ಸಿಸಿಬಿ ಪೊಲೀಸರಿಗೆ ತಿಳಿಸುವುದು ಸಹಜ ಪ್ರಕ್ರಿಯೆ. ಆದರೆ, ಆ ದಿನ ತಕ್ಷಣ ಸಿಸಿಬಿಗೆ ಅಲ್ಲಿಗೆ ಬರುವಂತೆ ಸಂದೇಶ ರವಾನೆಯಾಗಲೇ ಇಲ್ಲ. ನಾನಾಗ ಸಿಸಿಬಿಯಲ್ಲೇ ಕೆಲಸ ಮಾಡುತ್ತಿದ್ದೆ.

ನೋಡನೋಡುತ್ತಲೇ ರಾಜ್‌ಕುಮಾರ್ ಮನೆಗೆ ಜನಸಾಗರ ಬರಲಾರಂಭಿಸಿತು. ಪೊಲೀಸರೇ ಗಲಿಬಿಲಿಗೊಳಗಾದರು. ಅಂತಿಮ ದರ್ಶನಕ್ಕೆ ಎಲ್ಲಿ ಏರ್ಪಾಟು ಮಾಡುವುದು ಎಂದು ಚರ್ಚೆ ನಡೆಯಿತು.

ಅರಮನೆ ಮೈದಾನ, ಕಂಠೀರವ ಒಳಾಂಗಣ ಕ್ರೀಡಾಂಗಣ, ಕಂಠೀರವ ಕ್ರೀಡಾಂಗಣ ಹೀಗೆ ಸ್ಥಳಗಳು ಪ್ರಸ್ತಾಪಗೊಂಡವು. ಚಲನಚಿತ್ರಗಳ ಮುಖಂಡರು, ರಾಜಕಾರಣಿಗಳು, ಅಭಿಮಾನಿ ಸಂಘದವರು ಎಲ್ಲರೂ ತಲೆಗೊಂದು ಸಲಹೆ ಕೊಟ್ಟರು. ಪೊಲೀಸರಲ್ಲೂ ಒಬ್ಬೊಬ್ಬ ಅಧಿಕಾರಿ ಒಂದೊಂದು ರೀತಿ ತೀರ್ಮಾನ ತೆಗೆದುಕೊಂಡರು.
 
ಬೇಗ ಒಮ್ಮತದ ತೀರ್ಮಾನಕ್ಕೆ ಬರದೇ ಹೋದದ್ದರಿಂದ ಜನಸಾಗರದ ಅಲೆಯುಬ್ಬಿತು. ರಾಜ್‌ಕುಮಾರ್ ಮೃತದೇಹ ನೋಡಲು ತುಂಬಾ ಹೊತ್ತು ಕಾದವರ ಅಸಹನೆ ಕಟ್ಟೆಯೊಡೆಯಿತು. ಮನೆಯ ಆವರಣದಲ್ಲೇ ದೊಂಬಿ ಉಂಟಾಯಿತು.

ಅರಮನೆ ಮೈದಾನದಲ್ಲಿ ಮೃತದೇಹವನ್ನು ದರ್ಶನಕ್ಕೆ ಇಡಬೇಕೆಂದು ತೀರ್ಮಾನವಾಗಿದೆ ಎನ್ನುತ್ತಿದ್ದಂತೆ ಅಭಿಮಾನಿಗಳೇ ಮೃತದೇಹದ ಪೆಟ್ಟಿಗೆ ಹೊತ್ತು ವ್ಯಾನ್‌ನಲ್ಲಿ ಇಟ್ಟು, ವಾಹನವನ್ನು ಮುನ್ನಡೆಸುತ್ತಾ ಹೊರಟೇಬಿಟ್ಟರು.

ಅರಮನೆ ಮೈದಾನದಲ್ಲಿ ದೊಡ್ಡ ಪೆಂಡಾಲು ಹಾಕಿಸಿ, ಜನ ಸರತಿ ಸಾಲಿನಲ್ಲಿ ಸುತ್ತಿ ಬಳಸಿ ಹೋಗುವಂತೆ ಉದ್ದುದ್ದ ಕಡ್ಡಿಗಳನ್ನು ಕಟ್ಟಿ, ಹಾದಿ ಮಾಡಿಸುವುದು ತಕ್ಷಣಕ್ಕೆ ಆಗುವ ಕೆಲಸವಲ್ಲ. ಹಾಗಾಗಿ ಅರಮನೆ ಮೈದಾನ ಅಂತಿಮ ದರ್ಶನಕ್ಕೆ ಸೂಕ್ತ ಸ್ಥಳವಲ್ಲ ಎಂದಾಯಿತು.

ಕೆಲವು ಅಭಿಮಾನಿಗಳು ವಿಧಾನಸೌಧದ ಪ್ರಧಾನ ಮೆಟ್ಟಿಲಿನ (ಗ್ರ್ಯಾಂಡ್ ಸ್ಟೆಪ್) ಮೇಲೆ ಪಾರ್ಥಿವ ಶರೀರ ಇಟ್ಟು ಅಂತಿಮ ದರ್ಶನಕ್ಕೆ ಎಡೆಮಾಡಿಕೊಡಬೇಕು ಎಂದರು. ಕಂಠೀರವ ಕ್ರೀಡಾಂಗಣದಲ್ಲಿ ಇಡಬೇಕು ಎಂದು ಚಿತ್ರರಂಗದ ಪ್ರಮುಖರು ಹಾಗೂ ಕೆಲವು ರಾಜಕಾರಣಿಗಳು ನಿರ್ಧರಿಸಿದರು.

ರಾಜ್‌ಕುಮಾರ್ ಮೃತದೇಹದ ಅಂತಿಮ ಸಂಸ್ಕಾರವನ್ನು ಬಿಡದಿಯಲ್ಲಿರುವ ತೋಟದಲ್ಲಿ ಮಾಡುವುದು ಕುಟುಂಬದವರ ಇಂಗಿತವಾಗಿತ್ತು. ಅಭಿಮಾನಿಗಳು ಅದಕ್ಕೆ ಒಪ್ಪಲಿಲ್ಲ. ಅವರು ರಾಜ್‌ಕುಮಾರ್ ಕುಟುಂಬವರ್ಗದವರಿಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ. ಕೆಲವು ಅಧಿಕಾರಿಗಳು ಲಾಠಿಚಾರ್ಜ್, ಫೈರಿಂಗ್ ಮಾಡಿ ಜನರನ್ನು ಚದುರಿಸಬೇಕೆಂದು ಮಾತಾಡುತ್ತಿದ್ದರು. ಹೇಗೋ ವಿಧಾನಸೌಧ ದಾಟಿಸಿ, ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ತಂದೆವು.

ಜಿ.ಬಿ.ಛಬ್ಬಿ ಆಗ ಡಿಸಿಪಿ ಆಗಿದ್ದರು. ದೊಂಬಿ, ಗಲಭೆ ತಪ್ಪಿಸುವುದರಲ್ಲಿ ಅವರದ್ದು ಎತ್ತಿದಕೈ. ಕೆ.ಆರ್.ಸರ್ಕಲ್‌ನಲ್ಲಿ ಅವರ ಮೇಲೆ ದುಷ್ಕರ್ಮಿಗಳು ಕಲ್ಲುಗಳನ್ನು ತೂರಿದ್ದಾರೆಂದು ಗೊತ್ತಾಯಿತು. ನಮಗೆ ತಡೆಯಲಾಗಲಿಲ್ಲ. ಸಿಸಿಬಿಯ ಹದಿನೈದು ಜನ ಸಮವಸ್ತ್ರ ತೊಟ್ಟು ಅಲ್ಲಿಗೆ ಹೋದೆವು.

ಅಲ್ಲಿ ಪುಂಡ ಪೋಕರಿಗಳು ಅಭಿಮಾನಿಗಳ ನಡುವೆ ಸೇರಿಕೊಂಡಿದ್ದರು. ನೃಪತುಂಗ ರಸ್ತೆಯಲ್ಲಿ ಪೆಟ್ರೋಲ್ ಬಂಕ್‌ಗೆ ಬೆಂಕಿ ಇಡುವ ಕೆಲವು ದುಷ್ಕರ್ಮಿಗಳ ಯತ್ನವನ್ನು ತಪ್ಪಿಸಿದೆವು. ಅಡಿಷನಲ್ ಕಮಿಷನರ್ ಸತ್ಯನಾರಾಯಣ ರಾವ್ ನಮ್ಮನ್ನು ಲೀಡ್ ಮಾಡಿದರು. ಕಷ್ಟಪಟ್ಟು ರಾಜ್‌ಕುಮಾರ್ ಅವರ ಮೃತದೇಹವನ್ನು ಕಂಠೀರವ ಕ್ರೀಡಾಂಗಣ ತಲುಪಿಸಿದೆವು.

ಶಾಂತಚಿತ್ತರಾಗಿರುವಂತೆ ಮೈಕ್‌ನಲ್ಲಿ ಎಲ್ಲರಿಗೂ ಹೇಳಿದೆವು. ಬಳೆಪೇಟೆ ಮುನಿಯಪ್ಪ ಎಂಬುವರು ಶವಪೆಟ್ಟಿಗೆಯಲ್ಲಿ ಕರೆಂಟ್ ಶಾಕ್ ಹೊಡೆದು ಕುಸಿದುಬಿದ್ದರು. ಅವರಿಗೆ ತಕ್ಷಣ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿಕೊಂಡೆವು. ಬೆಳಗಿನ ಜಾವದವರೆಗೆ ಜನರಿಗೆ ನೋಡಲು ಅವಕಾಶ ಕೊಡಲಾಗಿತ್ತು.

ಗ್ಯಾಲರಿಯ ಮೆಟ್ಟಿಲುಗಳ ಮೇಲೆ ಮಾತ್ರ ನಡೆಯುತ್ತಾ ರಾಜ್‌ಕುಮಾರ್ ಮೃತದೇಹ ನೋಡುವ ಅವಕಾಶವನ್ನು ನೀಡಲಾಗಿತ್ತು. ಮೂವತ್ತು ಸಾವಿರ ಜನ ಕೂರಬಹುದಾದ ಗ್ಯಾಲರಿಗಳಲ್ಲಿ ಆ ದಿನ ಬಹುಶಃ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅಂತಿಮ ದರ್ಶನ ಸಾಂಗವಾಗಿ ನಡೆಯಿತು. ರಾತ್ರಿ ಒಂದೆರಡು ಗಂಟೆಯ ಹೊತ್ತಿಗೆ ಪರಿಸ್ಥಿತಿ ಶಾಂತಸ್ಥಿತಿಗೆ ಬಂತು. ಆಮೇಲೆ ಶುರುವಾದದ್ದೇ ಕೊಂಕು, ಕುಹಕ.

ಬಿಡದಿಯ ತೋಟದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬದವರು ಸ್ಪಷ್ಟವಾಗಿ ಹೇಳಿದರು. ಅಭಿಮಾನಿ ಸಂಘದ ಕೆಲವರು ಹಾಗೂ ಇನ್ನಿತರರು ಜನರಲ್ ಪೋಸ್ಟ್ ಆಫೀಸ್ ಮುಂಭಾಗದ ಅಂಬೇಡ್ಕರ್ ವೀದಿಯ ಆಯಕಟ್ಟಿನ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ಪಟ್ಟುಹಿಡಿದರು.

ಅಲ್ಲಿದ್ದ ಅಧಿಕಾರಿಗಳು ಸಮಾಧಾನ ಮಾಡಿದರು. ಅದು ಶ್ರೇಯಸ್ಸಲ್ಲ ಎಂದರು. ಪ್ರಪಂಚದಲ್ಲಿ ಎಲ್ಲೂ ಆ ರೀತಿ ರಸ್ತೆ ಮೇಲೆ ಅಂತ್ಯಕ್ರಿಯೆ ನಡೆಸಿದ ಉದಾಹರಣೆಯೇ ಇಲ್ಲ. ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಚಿತ್ರರಂಗದವರು ಹೇಳಿದರೂ ಆ ಪ್ರಸ್ತಾಪ ಇಟ್ಟವರು ಕೇಳಲಿಲ್ಲ.

ಆಮೇಲೆ ನಾನೂ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ಅವರನ್ನು ಸಮಾಧಾನ ಮಾಡಿದೆವು. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕೆಂದು ತೀರ್ಮಾನವಾಯಿತು. `ಅಲ್ಲಿನ ಸ್ಥಳದ ಬಗ್ಗೆ ತಗಾದೆ ಇದ್ದು, ಕೇಸುಗಳಿವೆ. ಸಮಸ್ಯೆಯಾದೀತು~ ಎಂದು ಸಂಸ್ಕೃತಿ ಇಲಾಖೆಯವರು ಹೇಳಿದರು. ಕೊನೆಗೂ ಅಲ್ಲೇ ಅಂತಿಮ ಸಂಸ್ಕಾರವೆಂದು ನಿಗದಿಯಾಯಿತು.

ಮಹಿಳೆಯರೆಲ್ಲಾ ದೊಡ್ಡ ಕಲ್ಲು ಎಸೆಯುವ ದೃಶ್ಯಗಳು ಟೀವಿಗಳಲ್ಲಿ ಪ್ರಸಾರವಾಗಿತ್ತು. ಎಸೆಯಲು ಕಾಡುಗಲ್ಲುಗಳನ್ನು ಬಳಸಲಾಗಿತ್ತು. ಯಾರು ಕ್ಷೇತ್ರಕಾರ್ಯಕ್ಕೆ ಇಳಿಯದೆ, ಮನೆಯಲ್ಲೋ ಕಚೇರಿಯಲ್ಲೋ ಕೂತಿದ್ದರೋ ಅಂಥ ಪೊಲಿಸ್ ಅಧಿಕಾರಿಗಳು ಕಥೆ ಕಟ್ಟಿದರು. ಎಚ್.ಡಿ.ಕುಮಾರಸ್ವಾಮಿ ಆಗ ಮುಖ್ಯಮಂತ್ರಿ ಆಗಿದ್ದರು.

ಅವರ ವಿರೋಧಿಗಳು ಕಾಡುಗಲ್ಲುಗಳನ್ನು ವಾಹನಗಳಲ್ಲಿ ತರಿಸಿ, ಹಂಚಿ ಅವರಿಗೆ ಕೆಟ್ಟ ಹೆಸರು ತರಿಸಲು ಹೊಡೆಸುತ್ತಿದ್ದಾರೆ ಎಂದು ಇಲ್ಲಸಲ್ಲದ ಆರೋಪದ ಸುದ್ದಿ ಪ್ರಚಾರವಾಯಿತು. ಸದಾಶಿವನಗರದಲ್ಲಿರುವ ಪ್ರತಿಷ್ಠಿತ ಮನೆಗಳ ಎದುರಿನ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡು, ಜನ ಆ ಜಾಗದ ಅಲಂಕಾರಕ್ಕೆ ಕಾಡುಗಲ್ಲುಗಳನ್ನು ಬಳಸಿದ್ದಾರೆ.

ರೊಚ್ಚಿಗೆದ್ದವರು ಅವನ್ನೇ ಕಿತ್ತುಕೊಂಡು ಎಸೆದಿದ್ದಾರಷ್ಟೆ ಎಂದು ನಾನು ಆ ಅಭಿಪ್ರಾಯ ಸಮ್ಮತಿಸಿದ ಅಧಿಕಾರಿಗಳಿಗೆ ಮನದಟ್ಟು ಮಾಡಿಸಿದೆ. ಗಲಭೆ ನಿಯಂತ್ರಿಸಲಾಗದವರು ಕೊಟ್ಟ ಸಮಜಾಯಿಷಿ ಅದು.

ರಾಜ್‌ಕುಮಾರ್ ಮೃತದೇಹವನ್ನು ಹೆಲಿಕಾಪ್ಟರ್‌ನಲ್ಲಿ ತೆಗೆದುಕೊಂಡು ಹೋಗಬೇಕೆಂದು ನಾವು ಕೆಲವರು ಸಲಹೆ ಕೊಟ್ಟೆವು. ಸ್ಟೇಡಿಯಂನಲ್ಲಿ ನಿಯೋಜಿತರಾಗಿದ್ದ ಹಿರಿಯ ಅಧಿಕಾರಿಗಳು ಇಲ್ಲಿನ ಜನರ ನಾಡಿಮಿಡಿತ ಅರಿಯದೆ ಮೃತದೇಹವನ್ನು ಏಕಾಏಕಿ ಆ್ಯಂಬ್ಯುಲೆನ್ಸ್‌ನಲ್ಲಿಟ್ಟರು.

ಕಂಠೀರವ ಸ್ಟುಡಿಯೋ ಕಡೆಗೆ ಆ್ಯಂಬ್ಯುಲೆನ್ಸ್ ಹೊರಟಿತು. ಟಿಯರ್‌ಗ್ಯಾಸ್ ಹಾಕಿ, ಜನರನ್ನು ಚದುರಿಸಲು ಯತ್ನಿಸಿದರು. ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರಿಗೆ ಇರಿತವಾಗಿ ಮೃತಪಟ್ಟರು. ದಾರಿಯುದ್ದಕ್ಕೂ ಗಲಭೆ, ಬೆಂಕಿ, ಲೂಟಿ, ದಾಂಧಲೆ ನಡೆದುಹೋಯಿತು. ಸಣ್ಣ ತಪ್ಪು ತೀರ್ಮಾನದಿಂದ ಆದ ಅನಾಹುತವಿದು. ನೂರಾರು ಪೊಲೀಸರಿಗೆ ಗಾಯಗಳಾದವು. ಕೆಲವು ಅಮಾಯಕ ಯುವಕರು ಸತ್ತುಹೋದರು.

ಕೊನೆಗೆ ಟೀವಿ ವಾಹಿನಿಗಳ ವಿಡಿಯೋ ಟೇಪ್ ನೆರವಿನಿಂದ ಅನೇಕರನ್ನು ದಸ್ತಗಿರಿ ಮಾಡಿದೆವು. ಸ್ಥಳೀಯರ ನಾಡಿಮಿಡಿತ ಗೊತ್ತಿದ್ದ ಅಧಿಕಾರಿಗಳು ರಾಜ್‌ಕುಮಾರ್ ನಿಧನಾ ನಂತರ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಿದ್ದರೆ ನಿಜಕ್ಕೂ ಅಷ್ಟೆಲ್ಲಾ ಅವಘಡಗಳು ಆಗುತ್ತಲೇ ಇರಲಿಲ್ಲ.

ಮುಂದಿನ ವಾರ: ನನ್ನ ಅಂಕಣದ ಕೊನೆಯ ಕಂತು
ಶಿವರಾಂ ಅವರ ಮೊಬೈಲ್ ಸಂಖ್ಯೆ-9448313066.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT