ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದಲ್ಲಿ ತೆಲಂಗಾಣದ ಭಯ

ಅಕ್ಷರ ಗಾತ್ರ

`ತಕ್ಷಣ ಆಂಧ್ರಪ್ರದೇಶಕ್ಕೆ ಹೋಗಿ, ಏನು ಗಲಾಟೆ ನೋಡಿ ಬನ್ನಿ' ಎಂಬ ಆದೇಶ ಬಂದ ಕೂಡಲೇ ಪೆಕರ ನೇರ ಬಸ್ ನಿಲ್ದಾಣಕ್ಕೆ ಓಡಿದ. `ಸೀಮಾಂಧ್ರ ರಾಜ್ಯಕ್ಕೆ ಹೋಗಬೇಕಾ? ತೆಲಂಗಾಣ ರಾಜ್ಯಕ್ಕೆ ಹೋಗಬೇಕಾ' ಎನ್ನುವ ತರಲೆ ಪ್ರಶ್ನೆಯೊಂದು ತಲೆಯೊಳಗೆ ಓಡಾಡುತ್ತಲೇ ಇತ್ತು.

ಕರಾವಳಿ, ರಾಯಲಸೀಮೆಗಳಲ್ಲಿ ತೆಲಂಗಾಣ ರಚನೆ ವಿರೋಧಿಸಿ ಬಂದ್, ಹಿಂಸಾಚಾರ ನಡೆ ಯುತ್ತಿರುವುದರಿಂದ ಆಂಧ್ರ ಕಡೆ ಹೋಗುವ ಎಲ್ಲ ಬಸ್‌ಗಳನ್ನು ರದ್ದುಪಡಿಸಲಾಗಿದೆ ಎಂಬ ಸುದ್ದಿ ಬಂದೊಡನೆಯೇ ಪೆಕರ ಏಡುಕೊಂಡಲವಾಡನಿಗೆ ನಮಸ್ಕಾರ ಹಾಕಿದ. ಕುಳಿತಿದ್ದ ತೆಲುಗು ವಾಳ್ಳು ಗಳನ್ನೇ ಮಾತನಾಡಿಸಿ, ಏನಾದರೂ ಪಾಯಿಂಟ್ ಸಂಗ್ರಹಿಸಬೇಕೆಂದುಕೊಂಡ.

`ನಮಸ್ಕಾರಮಂಡಿ...'
`ನಾನು ಆಂಧ್ರದವನೇ ಆದ್ರೂ ಕರ್ನಾಟಕದಲ್ಲೇ ನನ್ನ ಎಲ್ಲ ವ್ಯವಹಾರ. ಕನ್ನಡದಲ್ಲೇ ಹೇಳ್ರಿ' ಎಂದು ಆ ವ್ಯಕ್ತಿ ಬಾಯಿಂದ ಬೀಡಿ ತೆಗೆದು ಉತ್ತರಿಸಿದ.

`ತೆಲುಗರಿಗೆ ಎರಡು ರಾಜ್ಯ ಸಿಕ್ಕಂತಾಗಿದೆ. ವಿಭಜನೆ ಬಗ್ಗೆ ಏನು ಹೇಳ್ತೀರಾ?'
`ವಿಭಜನೆ ಆದ್ರೆ ಏನೀಗ? ನಿಮಗೇನು ಸಂಕಟ? ಕರ್ನಾಟಕದಲ್ಲೇ ಆಗಿಲ್ವ?'

`ಸ್ವಾಮಿ, ನಿಮಗೆ ನಾನು ಕೇಳಿದ್ದು ಆಂಧ್ರದ ವಿಚಾರ. ಕರ್ನಾಟಕದಲ್ಲಿ ನೀವು ವ್ಯವಹಾರ ಮಾಡಿರಬಹುದು. ಆದರೆ ನಿಮಗೆ ಕರ್ನಾಟಕದ ಬಗ್ಗೆ ಪೂರ್ಣ ಜ್ಞಾನ ಇದ್ದಂತಿಲ್ಲ. ಏನೂ ಗೊತ್ತಿಲ್ಲದೆ, ಹುದ್ದೆಯಿಂದ ಕೆಳಗಿಳಿದ ಮುಖ್ಯ ಮಂತ್ರಿಗಳ ತರಹ ಮಾತಾಡ್ತಾ ಇದ್ದೀರಿ. ಕರ್ನಾಟಕದಲ್ಲಿ ಏನಾಗಿದೆ ವಿಭಜನೆ? ಕುವೆಂಪು ಮತ್ತು ರಾಜ್‌ಕುಮಾರ್ ಕನ್ನಡದ ಅನನ್ಯತೆ ಕಟ್ಟಿಕೊಟ್ಟಿರುವುದರಿಂದ ರಾಜ್ಯದಲ್ಲಿ ತೆಲಂಗಾಣ ಮಾದರಿಯ ಪ್ರತ್ಯೇಕತೆ ಕೂಗು ಏಳಲು ಸಾಧ್ಯವಿಲ್ಲ ಎಂದು ಮರುಳಪ್ಪನವರು ಸಂಶೋಧನೆ ಮಾಡಿರು ವುದು ನಿಮಗೆ ಗೊತ್ತಿಲ್ವೆ?'

`ನನಗೆ ಎಲ್ಲಾ ಗೊತ್ತು ಸ್ವಾಮಿ. ಹಾಸನ, ರಾಮನಗರ, ಮಂಡ್ಯ ಒಬ್ಬರದಂತೆ. ಶಿವಮೊಗ್ಗ ಮತ್ತೊಬ್ಬರದಂತೆ. ರಾಯಚೂರು, ಕೊಪ್ಪಳ, ಮೈಸೂರು ಅಯ್ಯ ಅವರದಂತೆ. ಗುಲ್ಬರ್ಗ, ಬೀದರ್ ಮತ್ತೊಬ್ಬರ ಜಹಗೀರ್ ಅಂತೆ... ನಮಗೂ ಎಲ್ಲಾ ಗೊತ್ತಿದೆ ಸ್ವಾಮಿ, ಎಲ್ಲಾ ಓದಿ ದ್ದೀನಿ. ನಮ್ದು ಕಮ್ಮ ಬ್ರೈನ್, ಯಾವುದಕ್ಕೂ ಕಮ್ಮಿ ಇಲ್ಲ' ಎಂದು ತೆಲುಗು ವಿಲನ್ ತರಹ ರೇಗಿದ.

ನಿಮ್ಮಂತಹವರಿಂದಲೇ ತೆಲಂಗಾಣಕ್ಕೆ ಇಷ್ಟು ವರ್ಷ ಅನ್ಯಾಯವಾಯ್ತು ಬಿಡ್ರಿ ಎಂದು ಗೊಣ ಗುತ್ತಾ ಪೆಕರ, ಮತ್ತೊಬ್ಬರನ್ನು ಮಾತನಾಡಿಸಲು ಹೆಜ್ಜೆ ಹಾಕಿದ.

`ನೀವು ಎವರು? ಎಕ್ಕಡನುಂಡಿ ವಚ್ಚಾರು? ಎಂದುಕು ವಚ್ಚಾರು?'
ಪೆಕರ ಬೆಂಗಳೂರು ಶೈಲಿಯಲ್ಲಿ ಪ್ರಶ್ನಿಸಿದ.

`ನಾನು ಹೈದರಾಬಾದು ಸ್ವಾಮಿ, ರೆಡ್ಡಾಂಧ್ರಕ್ಕೆ ಬಂದಿದ್ದೆ. ಮತ್ತೆ ಹೈದರಾಬಾದ್‌ಗೆ ಹೋಗಲು ಕಾಯ್ತೊ ಇದ್ದೇನೆ' ಎಂದ.
ಪೆಕರ ಬೆಚ್ಚಿಬಿದ್ದ. ತೆಲಂಗಾಣ ಗೊತ್ತು. ರಾಯಲಸೀಮೆ ಗೊತ್ತು. ಸೀಮಾಂಧ್ರ ಗೊತ್ತು. ಆದರೆ ಇದ್ಯಾವುದು ರೆಡ್ಡಾಂಧ್ರ?! ಯಾರಿಗೂ ಗೊತ್ತಿಲ್ಲದಂತೆ ದೆಹಲಿ ಮೇಡಂ ಇಂಥದೊಂದು ರಾಜ್ಯಕ್ಕೆ ಅನುಮತಿ ಯಾವಾಗ ಕೊಟ್ಟರು? ಎಂದು ಪೆಕರ ಚಿಂತಿಸಲಾರಂಭಿಸಿದ.

ತೆಲಂಗಾಣ ರಚನೆ ಆದ್ರೆ ಕಷ್ಟ ಆಗುತ್ತೆ ಅಂತ ಹೈದರಾಬಾದ್ ರೆಡ್ಡಿಗಳೆಲ್ಲಾ ಬೆಂಗಳೂರಿಗೆ ಓಡಿಬಂದು, ಹೊರವಲಯದಲ್ಲಿ ಜಮೀನು ಖರೀದಿಸಿ ಸೆಟಲ್ ಆಗಿ ಮೂವತ್ತು ವರ್ಷ ಆಯ್ತು ಸ್ವಾಮಿ. ರಾಜಧಾನಿ ಸುತ್ತ ಇರುವ ಎಲ್ಲ ಜಾಗವೂ ರೆಡ್ಡಿಗಳದು. ಹೀಗಾಗಿ ಸಿಟಿ ಬಿಟ್ಟು, ಉಳಿದೆಲ್ಲಾ ಜಾಗವೂ ರೆಡ್ಡಾಂಧ್ರ ಸ್ವಾಮಿ ಎಂದು ಆ ವ್ಯಕ್ತಿ, ಸದ್ದಿಲ್ಲದೆ ಹುಟ್ಟಿಕೊಂಡಿರುವ ಹೊಸ ರಾಜ್ಯದ ಹುಳವನ್ನು ಪೆಕರನ ತಲೆಗೆ ಬಿಟ್ಟ.

ಲೋಕಸಭೆ ಚುನಾವಣೆ ತಕ್ಷಣ ನಡೆದ್ರೆ ಕಾಂಗ್ರೆಸ್‌ಗೆ ಛಾನ್ಸ್ ಎಂದು ಸಮೀಕ್ಷೆಗಳು ಹೇಳುತ್ತಿದ್ದಂತೆಯೇ ದೆಹಲಿ ಮೇಡಂ ಆಂಧ್ರವನ್ನು ಕೈಯೊಳಗೆ ಹಾಕಿಕೊಳ್ಳಬೇಕೆಂದು ಉದ್ದೇಶಿಸಿ ಪಿಎಂಜೀ ಅವರ ಬಳಿಗೆ ದೌಡಾಯಿಸಿಕೊಂಡು ಬಂದರಂತೆ.

`ತಕ್ಷಣ ತೆಲಂಗಾಣ ರಾಜ್ಯ ಅನೌನ್ಸ್ ಮಾಡೋಣವೇ' ಎಂದು ಕೇಳಿದಾಗ, `ರಾಹುಲ್‌ಜೀ ಅವರ ದಿವ್ಯ ಸಾನ್ನಿಧ್ಯಕ್ಕೆ ಪೊಡಮಟ್ಟು, ನಾನು ಹೇಳುವುದೇನೆಂದರೆ..' ಎಂದು ಕ್ಷೀಣದನಿಯಲ್ಲಿ ಪಿಎಂಜೀ ಮಾತು ಆರಂಭಿಸುವುದರ ಒಳಗೆ ಸೋನಿಯಾ ಮೇಡಂ ಅವರ ಇಂಗಿತ ಬ್ರೇಕಿಂಗ್ ನ್ಯೂಸಾಗಿ ಹೋಯ್ತಂತೆ. ಹಾಗಾದರೆ ಕಾಂಗ್ರೆಸ್ ಲೀಡರ್‌ಗಳ ಅಭಿಪ್ರಾಯ ಮುಖ್ಯ ಎಂದು ಭಾವಿಸಿದ ಪೆಕರ ವಿಧಾನಸೌಧದ ಕಡೆ ನಡೆದ.

ಪೆಕರ ವಿಧಾನಸಭೆ ಪ್ರವೇಶಿಸುತ್ತಿದ್ದಂತೆಯೇ, ನಾನೇ, ನಾನೇ, ನಾನೇ ಎಂದು ಎರಡು ದಿಗ್ಗಜಗಳು ಜಟಾಪಟಿ ನಡೆಸುತ್ತಿದ್ದವು. `ನೀವು 97 ರಲ್ಲಿ ಸಿಎಂ ಆಗೋದನ್ನು ತಪ್ಪಿಸಿದ್ದು ನಾನೇ, ನಾನೇ' ಎಂದು ಮಾರಸ್ವಾಮಿಗಳು ಗಟ್ಟಿದನಿಯಲ್ಲಿ ಹೇಳುತ್ತಿದ್ದರು. `ದೊಡ್ಡಗೌಡರು ಪಿಎಮ್ಮೋಗಲು ಕಾರಣ ನಾನೇ' ಎಂದು ಅಯ್ಯ ಅವರು ಕೂಗಿಕೂಗಿ ಹೇಳುತ್ತಿದ್ದರು. `ಏನ್ಸಾಮಿ ಇದು, ಜನತಾ ಪರಿವಾರದವರೇ ಹೀಗೆ ಕಿತ್ತಾಡಿಕೊಂಡರೆ ಹೇಗೆ? ಮುಂದೆ ರಾಮನಗರ, ಮಂಡ್ಯದಲ್ಲಿ ಇದೇ ಬನ್ನಿ ಮಾರೀಹಬ್ಬ' ಎಂದು ಬಿಜೆಪಿ, ಕೆಜೆಪಿಗಳು ಗುಸುಗುಸುಮಾಡಿಕೊಂಡರು.
ಪೆಕರ ರಾಮನಗರದತ್ತ ಬರುತ್ತಿದ್ದಂತೆಯೇ ಜೋರಾಗಿ ಗಾಳಿ ಬೀಸಿ, ಅವನ ತಲೆಯ ಮೇಲಿದ್ದ ಟೋಪಿ ಹಾರಿಹೋಯಿತು.

`ಏನ್ಸಾರ್, ರಾಮನಗರದಲ್ಲಿ ಗಾಳಿ ಜೋರಾಗಿ ಬೀಸ್ತಾ ಇದೆ. ಒಳ್ಳೆಯ ವಾತಾವರಣ, ಮಳೆ ಹನಿ ಬೇರೆ ಬೀಳ್ತಾ ಇದೆ. ಒಳ್ಳೆ ಮಳೆ ಆಗಿದೆ ಈ ಸಲ' ಎಂದು ಪೆಕರ ಮಾರಸ್ವಾಮಿಗಳನ್ನು ಪ್ರಶ್ನಿಸಿದ.

`ಬೀಸ್ತಾ ಇರೋದು ಅನುಕಂಪದ ಅಲೆ. ಹನಿ ಬೀಳ್ತಾ ಇದೆ ಅಂದ್ರಲ್ಲಾ ಅದು ಮಳೆ ಅಲ್ಲ ಅನಿತಕ್ಕನ ಕಣ್ಣೀರು. ಕಳೆದ ಸಲ ವಿಧಾನಸಭೆ ಎಲೆಕ್ಷನ್‌ನಲ್ಲಿ ಮಾವನವರನ್ನು ನೋಡಿಕೊಳ್ಳಲು ಆಗ್ತಾ ಇಲ್ಲ ಎಂದು ಹೋದಹೋದ ಕಡೆ ಅತ್ತರು. ಆದರೂ ಜನ ಮತ ಹಾಕ್ಲಿಲ್ಲ. ಈಗ್ಲಾದ್ರೂ ಗೆಲ್ಲಿಸಿ, ಮಾವನವರ ಸೇವೆ ಮಾಡಬೇಕಾಗಿದೆ ಅಂತ ಅನಿತಕ್ಕ ಸುರಿಸ್ತಾ ಇರೋ ಕಣ್ಣೀರೇ ಹಾಗೆ ಬಂದು ಬೀಳ್ತಾ ಇದೆ' ಎಂದು ಮಾರಸ್ವಾಮಿಗಳು ವಿವರಣೆ ಕೊಟ್ಟರು.

`ಅಲ್ಲಾ ಸಾರ್, ಡಿಕು ಶಿಮಾರ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ ಅವರು ಸಮಾಜದ ಹಿತ ಕಾಪಾಡ್ತಾ ಇದ್ರು, ಅವರಿಗೆ ಸಚಿವ ಸ್ಥಾನ ತಪ್ಪಿಸಿದ್ರು ಅಂತ ನೀವು ಸಹಾನುಭೂತಿ ತೋರಿ ಸಿದ್ರಿ. ಈಗ ಅವರ ತಮ್ಮನ ವಿರುದ್ಧ ಮಡದಿಯನ್ನೇ ನಿಲ್ಲಿಸಿದ್ದೀರಿ. ಹೀಗಾದ್ರೆ ಸಮಾಜದ ಹಿತ ಕಾಪಾಡೋದು ಹೇಗೆ?' ಎಂದು ಪೆಕರ ಕೇಳಬಾರದ ಪ್ರಶ್ನೆ ಕೇಳಿಯೇ ಬಿಟ್ಟ.

`ಮತದಾರರ ಮನೆ ಮುಂದೆ ಹಳ್ಳ ತೋಡಿ, ದಿಗ್ಬಂಧನ ಹಾಕಿದವರೆಲ್ಲಾ ಎಲೆಕ್ಷನ್‌ಗೆ ನಿಂತ್ರೆ ಹೇಗೆ? ಡಿಕು ಶಿಮಾರ ನನ್ನನ್ನ ನಂಬಿದ್ರೆ ಅವರಿಗೆ ಸಚಿವ ಸ್ಥಾನ ಕೊಡಿಸ್ತಿದ್ದೆ. ಧರಂಜೀಗೆ ಸಿಎಂ ಮಾಡ ಲಿಲ್ಲವೇ ಹಾಗೆ. ಇಲ್ಲಿ ಕಾಂಗ್ರೆಸ್ ಗೆದ್ದರೆ ಸಚಿವ ಸ್ಥಾನ ಗ್ಯಾರಂಟಿ ಎಂದು ಅಯ್ಯ ಅವರು ಡಿಕು ಶಿಮಾರ ಅವರಿಗೆ ಪ್ರಾಮಿಸ್ ಮಾಡಿದ್ದಾರಂತೆ. ಈ ಮೂಲಂಗಿಯನ್ನು ನಂಬಿಕೊಂಡು ನಮ್ಮ ಕುಮಾರ ಕನಸು ಕಾಣ್ತಿದ್ದಾನೆ. ಎಂಥಾ ಜನಾರೀ' ಎಂದು ಮಾರಸ್ವಾಮಿಗಳು ನಕ್ಕರು.

`ಮಂಡ್ಯದಲ್ಲಿ ನಂಬರ್ ಒನ್ ನಟಿ ನಿತ್ಕಂಡು, ಅದಕ್ಕೆ ಕಷ್ಣಾಶೀರ್ವಾದವೂ ಇದ್ದು, ನಿಮಗೆ ಕಷ್ಟ ಆಗ್ತಿದೆ ಎಂದು ಜನ ಮಾತಾಡಿಕೊಳ್ತಾ ಇದ್ದಾರೆ ಸಾರ್'.

`ವಿಧಾನಸೌಧಕ್ಕೆ ಹೀರೊ, ಲೋಕಸಭೆಗೆ ಹೀರೋಯಿನ್ನಾ? ಇದೇನು ಸಿನಿಮಾ ಕ್ಷೇತ್ರ ಕೆಟ್ಟೋಯ್ತೇನ್ರಿ? ಜನ ಇಂಥಾ ಗ್ಲಾಮರ್‌ಗೆಲ್ಲಾ ಬಗ್ಗಲ್ಲ. ನಾವು ನೀರಿಗಾಗಿ ಹೋರಾಡಿದ್ದೀವಿ. ಸಿನಿಮಾದವರದೆಲ್ಲಾ ಗ್ಲಿಸರಿನ್ ನೀರು' ಎಂದು ಮಾರಸ್ವಾಮಿಗಳು ಖಾರವಾದರು.

`ಸಾರ್, ಲಾಸ್ಟ್ ಕೊಶ್ಚನ್. ಆಂಧ್ರಪ್ರದೇಶ ವಿಭಜನೆ ಆಗಿದೆ. ಇದರ ಬಗ್ಗೆ ಏನು ಹೇಳ್ತೀರಿ?'
`ಮಿಸ್ಟರ್ ಪೆಕರ ಅವರೇ, ನಿಮಗೆ ಬೇರೆ ಕೆಲಸ ಇಲ್ಲವೇ? ವಿಧಾನಸಭಾ ಎಲೆಕ್ಷನ್‌ನಲ್ಲಿ ಸೋತಾಗ ಅದೃಷ್ಟವಶಾತ್ ಏನೂ ಅಗಲಿಲ್ಲ. ಈ ಸಲ ಸೋತರೆ ಮನೇನೇ ತೆಲಂಗಾಣ ಆಗುತ್ತೆ. ನಡೀರಿ' ಎಂದು ಹೇಳುತ್ತಾ ಮಾರಸ್ವಾಮಿಗಳು ಪ್ರಚಾರಕಾರ್ಯಕ್ಕೆ ಭರ್ರನೆ ತೆರಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT