ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯತೆ ಹೆಸರಲ್ಲಿ ಹಿಂದುತ್ವದ ಮರುಹುಟ್ಟು

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದೇಶದ ರಾಜಕೀಯ ಇತಿಹಾಸವನ್ನು ನಿರ್ದಿಷ್ಟ ಕಾಲಘಟ್ಟಗಳಾಗಿ ವಿಭಜಿಸಿದರೆ ಅನೇಕ ಆಸಕ್ತಿದಾಯಕ ಸಂಗತಿಗಳು ಬೆಳಕಿಗೆ ಬರುತ್ತವೆ. 1969ರಲ್ಲಿ ಕಾಂಗ್ರೆಸ್‌ ವಿಭಜನೆ ನಂತರ ಇಂದಿರಾ ಗಾಂಧಿ ಅವರ ಯುಗ ಆರಂಭಗೊಳ್ಳುತ್ತದೆ. ರಾಜೀವ್‌ ಗಾಂಧಿ 1989ರಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದರೊಂದಿಗೆ ಇಂದಿರಾ ಯುಗ ಕೊನೆಗೊಳ್ಳುತ್ತದೆ. ಲೋಕಸಭೆಯಲ್ಲಿ ದೊರೆತಿದ್ದ ಅತಿ ದೊಡ್ಡ ಬಹುಮತವನ್ನು ವ್ಯರ್ಥ ಮಾಡಿದ್ದರಿಂದಲೇ ಕಾಂಗ್ರೆಸ್‌ಗೆ ಈ ಗತಿ ಎದುರಾಗಿತ್ತು. 

ರಾಜೀವ್‌ ಅವರ ರಾಜಕೀಯ ಪತನ ಆರಂಭಗೊಳ್ಳಲು ಪ್ರತಿಸ್ಪರ್ಧಿ ಶಕ್ತಿಗಳಾದ ಮಂದಿರ ಮತ್ತು ಮಂಡಲ್‌ ಕೂಡ ಕಾರಣವಾಗಿದ್ದವು. ನಂತರದ ಹದಿನೈದು ವರ್ಷಗಳ ಅಧಿಕಾರಾವಧಿಯಲ್ಲಿಯೂ ಕಾಂಗ್ರೆಸ್‌ ಯಾವತ್ತೂ ಚೈತನ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಪಿ.ವಿ.ನರಸಿಂಹರಾವ್‌ ಅವರ ಒಂದು ಬಾರಿಯ ಮತ್ತು ಮನಮೋಹನ್‌ ಸಿಂಗ್ ಅವರ ಎರಡು ಬಾರಿಯ ಅಧಿಕಾರಾವಧಿಯಲ್ಲಿ ಪಕ್ಷವು ತನ್ನ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು, ಕಾರ್ಯವಿಧಾನ ಬದಲಿಸಿಕೊಳ್ಳಲು, ಉತ್ಸಾಹ ರೂಢಿಸಿಕೊಳ್ಳಲು ಮುಂದಾಗಲಿಲ್ಲ.

ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಎದುರಾಳಿ ತಂಡಗಳು ಒಬ್ಬರ ನಂತರ ಒಬ್ಬರು ಆಟವಾಡುವಂತೆ, ನಂತರದ ವರ್ಷಗಳಲ್ಲಿ ಮಂದಿರ ಮತ್ತು ಮಂಡಲ್‌ ಬೆಂಬಲಿಗರು ನಿಯಮಿತವಾಗಿ ಅಧಿಕಾರ ಹಂಚಿಕೊಂಡರು. ಅಂತಹ ರಾಜಕೀಯ ಟೆಸ್ಟ್‌ ಪಂದ್ಯ ಈಗ ಕೊನೆಗೊಂಡಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯು 325 ಸ್ಥಾನಗಳನ್ನು ಗೆದ್ದಿರುವುದು ಮತ್ತು ಯೋಗಿ ಆದಿತ್ಯನಾಥ ಅವರಿಗೆ ಮುಖ್ಯಮಂತ್ರಿಯ ಪಟ್ಟಾಭಿಷೇಕ ಮಾಡಿರುವುದು 1989ರ ನಂತರದ ರಾಜಕೀಯಕ್ಕೆ ತೆರೆ ಎಳೆದಿದೆ. ರಾಜಕೀಯದಲ್ಲಿನ ಸಾಂಪ್ರದಾಯಿಕ ಎದುರಾಳಿಗಳ ಪಾತ್ರ ಬದಲಾಗಿದೆಯಷ್ಟೇ ಎಂದು ಭಾವಿಸುವುದು ತಪ್ಪು. ಈ ಬದಲಾವಣೆಯು ಹೆಚ್ಚು ಮೂಲಭೂತವಾಗಿದೆ.

ಈ ಎಲ್ಲ ವಿದ್ಯಮಾನಗಳು ದೇಶದ ರಾಜಕೀಯದಲ್ಲಿ ಹೊಸ ಗಾಳಿ ಬೀಸಲು ಕಾರಣವಾಗಿರುವುದಂತೂ ನಿಜ. ಹಳೆಯ ನಿಯಮಗಳ ಪ್ರಕಾರ, ಅನೇಕರಿಗೆ ಕಲ್ಯಾಣ್‌ ಸಿಂಗ್‌ ಮತ್ತು ರಾಜನಾಥ ಸಿಂಗ್‌ ಅವರೇ ಇಷ್ಟವಾಗಬಹುದು. ಕಟ್ಟಾ ಎಡಪಂಥೀಯರೂ ಯೋಗಿ ಬದಲಿಗೆ ತಮ್ಮಂತಹವರು ಬಿಜೆಪಿಯ ಮುಖ್ಯಮಂತ್ರಿಯಾದರೂ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಆದರೆ, ದೇಶಿ ರಾಜಕೀಯದಲ್ಲಿನ ಹೊಸ ನಿಯಮಗಳು ಯೋಗಿ ಅವರಂತಹವರನ್ನೇ ಮುಂಚೂಣಿಗೆ ತರುತ್ತಿವೆ.

ಇಷ್ಟಾಗಿಯೂ ನೀವು ಅಧಿಕಾರವನ್ನು ಕೈವಶ ಮಾಡಿಕೊಳ್ಳಬೇಕೆಂದರೆ, ಅವರನ್ನು ಸೋಲಿಸುವ ಹೊಸ ಸೂತ್ರವನ್ನೇ ಶೋಧಿಸಬೇಕಾಗುತ್ತದೆ. ಹಳೆಯ ಸೂತ್ರದ ಪ್ರಕಾರ, ರಾಜಕೀಯ ಪಕ್ಷವೊಂದು ಒಂದು ಅಥವಾ ಎರಡು ಪ್ರಮುಖ ಹಿಂದುಳಿದ ವರ್ಗ ಇಲ್ಲವೆ ಪರಿಶಿಷ್ಟ ಜಾತಿ ಜತೆಗೆ ಮುಸ್ಲಿಮರನ್ನು ಓಲೈಸಿಕೊಂಡಿದ್ದರೆ ಚುನಾವಣೆಯಲ್ಲಿ ಗೆಲುವು ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು. ಈ ಸೂತ್ರ ಈಗ ಸವಕಲಾಗಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ರಾಮ ಮಂದಿರ ನಿರ್ಮಾಣ ವಿವಾದವನ್ನು ಕೋರ್ಟ್‌ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಲಹೆ ನೀಡಿರುವುದನ್ನು ಈ ಸಂದರ್ಭದಲ್ಲಿ ಪ್ರಾಸಂಗಿಕ ಘಟನೆಯನ್ನಾಗಿ ಪರಿಗಣಿಸಬಹುದು. ಬಿಜೆಪಿಗೆ ನಿರ್ಣಾಯಕವಾದ ರಾಜಕೀಯ ಗೆಲುವು ಸಿಕ್ಕಿರುವ ಸದ್ಯದ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ ಕೂಡ ಈ ವಿವಾದದಿಂದ ದೂರ ಉಳಿಯಲು ಬಯಸಿದೆಯೇ ಎನ್ನುವ ಅನುಮಾನ ಮೂಡುತ್ತದೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಹುತೇಕ ಮುಸ್ಲಿಮರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವುದು ಸುಳ್ಳು.  ವಾಸ್ತವ ಸಂಗತಿ ಬೇರೆಯೇ ಇದೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಪಕ್ಷ, ಬಿಜೆಪಿಗೆ ಬಿದ್ದ ಶೇ 39.7 ಮತಗಳಿಗೆ ಪ್ರತಿಯಾಗಿ ತಮಗೆ ಬಿದ್ದ ಶೇ 50ರಷ್ಟು ವೋಟುಗಳನ್ನು  ಹರಿದು ಹಂಚಿಕೊಂಡಿವೆ. ಹಿಂದೂಗಳಲ್ಲಿ ಮಧ್ಯಮ ವರ್ಗದವರು, ಹಿಂದುಳಿದವರು ಮತ್ತು ಕೆಲ ಪರಿಶಿಷ್ಟ ಜಾತಿಗಳಿಗೆ ಸೇರಿದವರು ತಮ್ಮ ಹಳೆಯ ರಾಜಕೀಯ ನಂಟು ಕಳಚಿಕೊಂಡು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ.

ರಾಮಮಂದಿರ ನಿರ್ಮಾಣ ಆಗಲಿ, ಗೋವುಗಳ ರಕ್ಷಣೆಯಾಗಲಿ, ಮುಸ್ಲಿಮರ ಖಬರಸ್ತಾನ್‌ಗಳಿಗಿಂತ ಸ್ಮಶಾನ್‌ ಘಾಟ್‌ಗಳಿಗೆ ಹೆಚ್ಚು ಹಣ ಬೇಕು ಎನ್ನುವ ಕಾರಣಗಳಿಗಷ್ಟೇ ಹಿಂದೂಗಳು ಬಿಜೆಪಿಗೆ ವೋಟ್‌ ಹಾಕಿಲ್ಲ. ಈ ಎಲ್ಲ ಗುರಿಗಳ ಸಾಧನೆಗೆ ಮೋದಿ ಅವರು ಯೋಗಿ ಆದಿತ್ಯನಾಥ ಅವರನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯವೂ ಇದ್ದಿರಲಿಲ್ಲ. ಬಿಜೆಪಿಯ ಯಾವುದೇ ಸಾಂಪ್ರದಾಯಿಕ ಮುಖಂಡನೇ ಇವೆಲ್ಲವನ್ನೂ ಮಾಡಬಹುದಾಗಿತ್ತು.

ಯೋಗಿ ಆದಿತ್ಯನಾಥ ಅವರು ಮೋದಿ ಅವರ ಆಯ್ಕೆಯಲ್ಲ,  ಯೋಗಿ ಅವರನ್ನೇ ಆಯ್ಕೆ ಮಾಡಬೇಕೆಂದು ಮೋದಿ ಅವರ ಮೇಲೆ ಆರ್‌ಎಸ್‌ಎಸ್‌ ತೀವ್ರ ಒತ್ತಡ ಹೇರಿತ್ತು ಎಂದು ಅನೇಕರು ಮಾತನಾಡುತ್ತಿದ್ದಾರೆ. ಅದೊಂದು ಅಸಂಬದ್ಧ ಮಾತಷ್ಟೆ.

ಏಳು ದಶಕಗಳ ಕಾಲ ನಮ್ಮ ರಾಜಕೀಯದಲ್ಲಿ ಕಾಂಗ್ರೆಸ್ ಅಥವಾ ಕಾಂಗ್ರೆಸ್‌ನಂತಹ ಎಡಪಂಥ ಕೇಂದ್ರಿತ ರಾಜಕಾರಣವು ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿತ್ತು.  ಈಗ ಆ ಸ್ಥಾನವನ್ನು ಬಲಪಂಥೀಯ ವಿಚಾರಧಾರೆಯ ಬಿಜೆಪಿ ಆಕ್ರಮಿಸಿಕೊಂಡಿದೆ. ಈ ಹಿಂದೆ, ಅಧಿಕಾರದ ಎಲ್ಲ ಸವಾಲುಗಳು ಇಂತಹ ರಾಜಕಾರಣದ ಸುತ್ತ ಗಿರಕಿ ಹೊಡೆಯುತ್ತಿದ್ದವು. ಈಗ ರಾಜಕೀಯದ ಪಾತ್ರಗಳೆಲ್ಲ ನಿರ್ಣಾಯಕವಾಗಿ ಬದಲಾಗಿವೆ. ಹೊಸ ಪಾತ್ರಧಾರಿಗಳು 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಗೆಲುವಿನಲ್ಲಿ ಅಥವಾ ಅದಕ್ಕೂ ಹಿಂದಿನ ವಾಜಪೇಯಿ ಮತ್ತು ಅಡ್ವಾಣಿ ಅವರ ಕಾಲದಲ್ಲಿ ಯಾವುದೇ ಪ್ರಭಾವ ಹೊಂದಿರಲಿಲ್ಲ.

ಈ ಹಿಂದೆ ರಾಜಕೀಯ ಸ್ಪರ್ಧೆಯು, ಅಭದ್ರತೆಯಿಂದ ಕೂಡಿದ ಬಹುಮತ ಪಡೆಯಲು ದೇಶದ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಜಾತ್ಯತೀತ ಶಕ್ತಿಗಳು, ಕೆಲ ಜಾತಿ ಆಧಾರಿತ ವೋಟ್‌ ಬ್ಯಾಂಕ್‌ ಮತ್ತು ಬಿಜೆಪಿ ಮಧ್ಯೆ ನಡೆಯುತ್ತಿತ್ತು. ಈಗ ಇಂತಹ ಸ್ಪರ್ಧೆಯಲ್ಲಿ ಹಿಂದೂ ವೋಟ್‌ ಬ್ಯಾಂಕ್‌ ಅಸಾಮಾನ್ಯ ಬಗೆಯಲ್ಲಿ ಮುಂಚೂಣಿಯಲ್ಲಿ ಇದೆ. ಈ ಹಿಂದೆ ಮುಂಚೂಣಿಯಲ್ಲಿ ಇರುತ್ತಿದ್ದ ಅಸುರಕ್ಷಿತ ಭಾವನೆ ಈಗ ಇಲ್ಲವಾಗಿದೆ. ಹೊಸ ಭರವಸೆ ಈಗ ಮುಂಚೂಣಿಗೆ ಬಂದಿದೆ.

ಇದನ್ನೆಲ್ಲ ನಾನು ಇಲ್ಲಿ ವಿವರಿಸಲು ಬಯಸುವೆ. 1995ರಲ್ಲಿ ಲಂಡನ್ನಿನ  ಅಂತರರಾಷ್ಟ್ರೀಯ ಅಧ್ಯಯನ ಸಂಸ್ಥೆಯ ಪ್ರಬಂಧವೊಂದರಲ್ಲಿ, ಬಿಜೆಪಿಯು ಭಾರತದ ರಾಜಕೀಯ ಭೂಪಟದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿರುವುದರ ಬಗ್ಗೆ ವಿವರಿಸಲಾಗಿತ್ತು. ಭಾರತದ ರಾಜಕೀಯವು ವಿಶಿಷ್ಟ ಹಂತವೊಂದನ್ನು ಹಾದು ಹೋಗುತ್ತಿದೆ ಎಂದು ನಾನು ಆಗ ಪ್ರತಿಪಾದಿಸಿದ್ದೆ. ಬಹುತೇಕ ಬಹುಸಂಖ್ಯಾತರಲ್ಲಿ ಇರುವ ಅಸುರಕ್ಷಿತ ಭಾವನೆ ಮತ್ತು ಅವರ ಸಮಸ್ಯೆಗಳನ್ನೇ ಪ್ರಮುಖವಾಗಿ ಪರಿಗಣಿಸಿ  ಆರ್‌ಎಸ್‌ಎಸ್‌ ಮತ್ತು ಎಲ್‌.ಕೆ.ಅಡ್ವಾಣಿ  ಅವರು ತಮ್ಮ ಚುನಾವಣಾ ಪ್ರಚಾರ ಕಾರ್ಯತಂತ್ರ ರೂಪಿಸಿದ್ದರು.

ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಕಾಂಗ್ರೆಸ್‌ ಮಾದರಿಯ ಜಾತ್ಯತೀತತೆಯಲ್ಲಿ ವಿಶೇಷ ಸ್ಥಾನಮಾನ  ನೀಡಲಾಗುತ್ತಿದೆ, ಹಜ್‌ ಸಬ್ಸಿಡಿ, ಸಚಿವರ ದುಬಾರಿ ಇಫ್ತಾರ್‌ ಔತಣಕೂಟದ ವೆಚ್ಚ ಭರಿಸಲಾಗುತ್ತಿದೆ, ಶಿಕ್ಷಣ ಹಕ್ಕು ಕಾಯ್ದೆಯಿಂದ (ಆರ್‌ಟಿಇ) ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ರಕ್ಷಣೆ ನೀಡಲಾಗುತ್ತಿದೆ, ಹೆಚ್ಚುತ್ತಿರುವ ಪಾಕಿಸ್ತಾನದ ಭಯೋತ್ಪಾದನೆ ಬೆದರಿಕೆಯು ಹಿಂದೂಗಳಲ್ಲಿ ಅಭದ್ರತೆಯ ಭಾವನೆ ಬೆಳೆಸುತ್ತಿದೆ ಎನ್ನುವುದನ್ನು ಹಿಂದೂಗಳೆಲ್ಲ ನಂಬುವಂತೆ ಅವರ ಮನವೊಲಿಸುವ ರೀತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯತಂತ್ರ ಹೆಣೆಯಲಾಗಿತ್ತು.

ಇಂತಹ ಪ್ರಯತ್ನಗಳೆಲ್ಲ ಒಟ್ಟುಗೂಡಿ ಬಿಜೆಪಿಗೆ ಲಾಭ ತಂದುಕೊಟ್ಟಿದ್ದವು. 1998ರಿಂದ 2004ರ ಅವಧಿಯಲ್ಲಿನ ಆರು ವರ್ಷಗಳ ಕಾಲ ಬಹುತೇಕ ‘ಜಾತ್ಯತೀತ’ ಶಕ್ತಿಗಳು ಬಿಜೆಪಿ ವಿರುದ್ಧ ಒಗ್ಗಟ್ಟಾಗಿದ್ದರೂ, ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ಅನುಭವಿಸಿತ್ತು. ಬಹುಸಂಖ್ಯಾತ ಸಮುದಾಯಗಳಲ್ಲಿನ ಅಭದ್ರತೆ ಭಾವನೆ ಮೇಲೆ ಸವಾರಿ ಮಾಡುವ ಬಿಜೆಪಿಯ ಕಾರ್ಯತಂತ್ರಕ್ಕೆ ಅದರದ್ದೇ ಆದ ಕೆಲ ಮಿತಿಗಳೂ ಇದ್ದವು.

ಆರ್ಥಿಕ ಸುಧಾರಣಾ ಕ್ರಮಗಳ ನಂತರದ ಎರಡು ದಶಕಗಳ ಅವಧಿಯಲ್ಲಿ, ಎಲ್ಲರೂ ಅದರಲ್ಲೂ ವಿಶೇಷವಾಗಿ ನಗರವಾಸಿ ಹಿಂದೂಗಳು ಮತ್ತು ಖಾಸಗಿ ವಲಯದಲ್ಲಿ ಗ್ರಾಮೀಣ ಪ್ರದೇಶದ ಗಣ್ಯರು ಆರ್ಥಿಕವಾಗಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದರು. 2004ರಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಅವರು ‘ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಘೋಷಣೆಯಡಿ ಚುನಾವಣೆ ಎದುರಿಸಿದ್ದರು. ಆರ್ಥಿಕ ಉದಾರೀಕರಣ ತಂದುಕೊಟ್ಟ ಹಿತಾನುಭವದ ಹೆಚ್ಚಿನ ಪ್ರಯೋಜನ ಪಡೆಯದ ಬಿಜೆಪಿಯ ಕೆಲ ಹಿಂದೂ ಮತದಾರರು ಜಾತಿ ನಿಷ್ಠೆಯ ಹಳೆಯ ವ್ಯವಸ್ಥೆಗೆ ಮರಳಿದ್ದರು.

ಬದಲಾವಣೆ ಬಯಸಿ ಶಾಂತಚಿತ್ತದಿಂದ ವೋಟು ಚಲಾಯಿಸಿದ್ದರು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಎರವಾಗಿತ್ತು. ಅಧಿಕಾರಕ್ಕೆ ಬಂದ ಯುಪಿಎ, ಭಯೋತ್ಪಾದನೆ ತಡೆ ಕಾಯ್ದೆ (ಪೋಟಾ) ರದ್ದುಪಡಿಸಲು ಉತ್ಸುಕತೆ ತೋರಿಸಿತ್ತು. ಬಿಜೆಪಿಯಲ್ಲಿ ಬಹುಮತ ಇಲ್ಲದ ಕಾರಣಕ್ಕೆ ಸಂಸತ್ತಿನ ಜಂಟಿ ಸಭೆ ಕರೆದು ಈ ಕಾಯ್ದೆ ರದ್ದುಪಡಿಸಿತ್ತು. ಇದನ್ನು ಬಂಡವಾಳ ಮಾಡಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿತ್ತು. ಆರ್ಥಿಕ ಬೆಳವಣಿಗೆಯ ಆಶಾವಾದವು, ಯುಪಿಎ ಸರ್ಕಾರ ಹೆಚ್ಚಿನ ಬಹುಮತದ ಜತೆ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಕಾರಣವಾಗಿತ್ತು.

ನವದೆಹಲಿಯಿಂದ ದೂರದ ಅಹಮದಾಬಾದ್‌ನಲ್ಲಿ ಕುಳಿತುಕೊಂಡೇ ನರೇಂದ್ರ ಮೋದಿ ಈ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದು ನನಗೆ ಭಾಸವಾಗುತ್ತದೆ. ಬಿಜೆಪಿಯ ಹಳೆಯ ಸೂತ್ರ ತನ್ನ ಮಹತ್ವ ಕಳೆದುಕೊಂಡಿರುವುದನ್ನು ಅಥವಾ ಬಹುಸಂಖ್ಯಾತರಲ್ಲಿನ ಅಲ್ಪಸಂಖ್ಯಾತ ಭಾವನೆಗಳನ್ನೇ ಬಂಡವಾಳ ಮಾಡಿಕೊಳ್ಳುವುದು ಇನ್ನು ಮುಂದೆ ಪಕ್ಷಕ್ಕೆ ನಿರೀಕ್ಷಿಸಿದ ಫಲ ನೀಡಲಾರದು ಎಂಬ  ತೀರ್ಮಾನಕ್ಕೆ ಅವರು ಬಂದಿದ್ದರು ಎಂದು ನಾವು ಖಚಿತವಾಗಿ ಹೇಳಲುಬಾರದು. ಆದರೆ, ಅವರ ಆಲೋಚನೆ ಈ ದಿಕ್ಕಿನಲ್ಲಿ ಸಾಗಿತ್ತು ಎಂದು ಊಹಿಸಬಹುದು. ಬೆಳವಣಿಗೆ ಮತ್ತು ಅಭಿವೃದ್ಧಿಯ ಭರವಸೆ ನೀಡುವ ಸಶಕ್ತ ರಾಷ್ಟ್ರೀಯವಾದಿ ಹಿಂದೂ ಮುಖಂಡನೊಬ್ಬನ ರಾಜಕೀಯವೇ ದೇಶದಲ್ಲಿ ಈಗ ಹೆಚ್ಚು ಪ್ರಸ್ತುತವಾಗಿರಲಿದೆ ಎನ್ನುವ ಹೊಸ ತತ್ವದಲ್ಲಿ ಮೋದಿ ಅವರು ಹೆಚ್ಚು ವಿಶ್ವಾಸ ಇರಿಸತೊಡಗಿದ್ದರು.

ಅಲ್ಲಿಂದಾಚೆಗೆ ಅವರು ಅಲ್ಪಸಂಖ್ಯಾತರ ಬಗ್ಗೆ ಒರಟು ಧೋರಣೆಯನ್ನೇನೂ ಮೈಗೂಡಿಸಿಕೊಂಡಿಲ್ಲ. ಜತೆಗೆ ಅವರು ಅಲ್ಪಸಂಖ್ಯಾತರ ಕ್ಷಮೆಯನ್ನೇನೂ ಕೇಳಿಲ್ಲ.  ಇದೇ ಕಾರಣಕ್ಕೆ ಅವರ ಕೆಲ  ವರ್ತನೆಗಳ ಹಿಂದಿನ ಉದ್ದೇಶ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು. ಮೌಲ್ವಿಯೊಬ್ಬರು ನೀಡಿದ ಟೋಪಿ ಧರಿಸುವುದನ್ನು ನಿರಾಕರಿಸಿದ, ಪ್ರಧಾನಿ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಇಫ್ತಾರ್‌ ಔತಣಕೂಟ ರದ್ದುಗೊಳಿಸಿದ, ಮುಸ್ಲಿಂ ಅಥವಾ ಕ್ರೈಸ್ತರಿಗೆ ತಮ್ಮ ಸಚಿವ ಸಂಪುಟದಲ್ಲಿ ಹೆಚ್ಚು ಪ್ರಾಧಾನ್ಯ ನೀಡದ ಮತ್ತು ಉತ್ತರ ಪ್ರದೇಶದ 403 ಮತಕ್ಷೇತ್ರಗಳ ಪೈಕಿ ಒಂದೇ ಒಂದು ಸೀಟನ್ನು ಮುಸ್ಲಿಮರಿಗೆ ಬಿಟ್ಟುಕೊಡದಿರುವ ನಿರ್ಧಾರಗಳು ಖಂಡಿತವಾಗಿಯೂ ಚರ್ಚಾಸ್ಪದವಾಗಿವೆ.

ಮುಸ್ಲಿಮರಿಗೆ ನೆರವಾಗಬಾರದೆನ್ನುವ ಕಾರಣಕ್ಕೆ ಅವರು ಇಂತಹ ಕ್ರಮಗಳನ್ನು ಕೈಗೊಂಡಿಲ್ಲ. ಇಂತಹ ಚಿಂತನೆಗಳು ಪೂರ್ವಗ್ರಹಪೀಡಿತವೂ ಅಲ್ಲ. ರಾಜಕೀಯ ಜಾತ್ಯತೀತತೆ, ಹಿಂದೂಗಳ ಕೇಂದ್ರಿತ ಭಾರತದ ರಾಷ್ಟ್ರೀಯತೆಯನ್ನು ಹೊಸ ಬಗೆಯಲ್ಲಿ ವ್ಯಾಖ್ಯಾನಿಸುವ ಪ್ರಜ್ಞಾಪೂರ್ವಕ ನಡೆ ಇದಾಗಿದೆ. ಯೋಗಿ ಅವರ ನೇಮಕಾತಿಯೂ ಈ ಧೋರಣೆಗೆ ಅನುಗುಣವಾಗಿಯೇ ಇದೆ. ಭಾರತವು ಆತ್ಮವಿಶ್ವಾಸದ, ಹಿಂದೂ ಕ್ರಿಯಾಶೀಲತೆಯ, ಜಾತ್ಯತೀತ ದೇಶ ಎನ್ನುವುದು ಮೋದಿ – ಷಾ ಅವರ ಜಾತ್ಯತೀತತೆಯ ಹೊಸ ವ್ಯಾಖ್ಯಾನವಾಗಿದೆ.

ಅಲ್ಪಸಂಖ್ಯಾತರು ತಮ್ಮ ಮಿತಿ ಅರಿತು ನಡೆದುಕೊಂಡರೆ ಸುರಕ್ಷಿತವಾಗಿರುತ್ತಾರೆ. ಭಾರತವನ್ನು ಯಾರು ಆಳಬೇಕು ಅಥವಾ ಯಾರಲ್ಲ  ಎನ್ನುವ ವಿಶೇಷ ಅಧಿಕಾರ ಚಲಾಯಿಸುವ ಹಕ್ಕು ಅವರಿಗೆ ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿಯೂ ಸಿಗಲಾರದು. ಹಿಂದೂ ಬಹುಮತ ಈಗ ಗೆಲುವು ಕಂಡಿದೆ, ಅಧಿಕಾರ ಕೈವಶ ಮಾಡಿಕೊಂಡಿದೆ. ದೇಶದ ಇತಿಹಾಸದಲ್ಲೇ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆದು ನಿಂತಿದೆ. ಇದು ನಿರಂತರವಾಗಿ ಮುಂದುವರೆಯಬೇಕು. ಯಾವುದೇ ಘಟನೆ ಬಗ್ಗೆ ಅಥವಾ ಯಾರ ಬಗ್ಗೆಯಾಗಲಿ ಕ್ಷಮೆ ಕೇಳುವ ದಿನಗಳು ಕೊನೆಗೊಂಡಿವೆ. ಮೌಲ್ವಿ ಕೊಟ್ಟ ಟೋಪಿ ಧರಿಸಲು ಮೋದಿ ನಿರಾಕರಿಸಿದ ಉದ್ದೇಶಪೂರ್ವಕ ನಡೆಯಂತೆಯೇ, ಯೋಗಿ ಅವರ ಆಯ್ಕೆ ಹಿಂದೆಯೂ ಇಂಥ ಉದ್ದೇಶಪೂರ್ವಕ ಚಿಂತನೆ ಕೆಲಸ ಮಾಡಿದೆ.

ಬಿಜೆಪಿಯ ಇಂತಹ ನಡೆಗೆ ವಿರೋಧವೇ ವ್ಯಕ್ತವಾಗುತ್ತಿಲ್ಲ. ಕನಿಷ್ಠ ಕಾಂಗ್ರೆಸ್ ಪಕ್ಷವಾದರೂ ತನ್ನ ಹಳೆಯ ಘೋಷಣೆ ಅಥವಾ ಸೂತ್ರದಡಿ ವಿರೋಧ ದಾಖಲಿಸಬೇಕಾಗಿದೆ. ತನ್ನ ಜಾತ್ಯತೀತ ಧೋರಣೆ ಎತ್ತಿ ಹಿಡಿಯಲು ಮುಸ್ಲಿಮರನ್ನು ಒಂದುಗೂಡಿಸುತ್ತಿದ್ದ ಕಾಂಗ್ರೆಸ್‌, ಈ ಬಾರಿಯೂ ಉತ್ತರ ಪ್ರದೇಶದಲ್ಲಿ ತೀವ್ರ ಹಿನ್ನಡೆ ಕಂಡಿದೆ. ಕಾಂಗ್ರೆಸ್‌ ಪಕ್ಷವು ಹಿಂದೂ ಧರ್ಮಾಂಧತೆ ವಿರುದ್ಧ ಇದೆ ಎನ್ನುವ ಕಾರಣಕ್ಕೆ ಸೋಲು ಉಂಡಿಲ್ಲ. ಮೋದಿ ಅವರು ಈಗ ಬಹುಸಂಖ್ಯಾತರ ಸಂಕಷ್ಟ ಮತ್ತು ಅವರಲ್ಲಿನ ಅಸುರಕ್ಷಿತ ಭಾವನೆಯನ್ನು ಬಂಡವಾಳ ಮಾಡಿಕೊಳ್ಳುವ ಬದಲಿಗೆ, ಅದಕ್ಕಿಂತಲೂ ಹೆಚ್ಚು ಶಕ್ತಿಯುತವಾದ ಉಗ್ರ ರಾಷ್ಟ್ರೀಯವಾದ ಅಸ್ತ್ರವನ್ನು ಚುನಾವಣೆಯಲ್ಲಿ ಬಳಸಿ ಮತಗಳನ್ನು ಬಾಚಿಕೊಂಡಿದ್ದಾರೆ.

ಇಲ್ಲಿಯವರೆಗೆ, ಕಾಂಗ್ರೆಸ್‌ ಮಾದರಿಯ ಜಾತ್ಯತೀತತೆಯು ರಾಷ್ಟ್ರೀಯ ರಾಜಕೀಯ ಚರ್ಚೆಯ ದಿಕ್ಕನ್ನು ನಿರ್ಧರಿಸುತ್ತಿತ್ತು. ನಾವು ಕೂಡ ನಿಜವಾಗಿಯೂ ಜಾತ್ಯತೀತವಾದಿಗಳು. ಕಾಂಗ್ರೆಸ್‌ ಮಾತ್ರ ಸುಳ್ಳು ಜಾತ್ಯತೀತತೆ ತತ್ವ ಅನುಸರಿಸುತ್ತಿದೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪುನರುಚ್ಚರಿಸಿಕೊಂಡೇ ಬಂದಿದ್ದವು. ಈಗ ನರೇಂದ್ರ ಮೋದಿ ಅವರು ರಾಷ್ಟ್ರೀಯತೆಯೇ ಚರ್ಚೆಯ ಕೇಂದ್ರ ಬಿಂದುವಾಗಿರುವಂತೆ ಪ್ರಭಾವ ಬೀರಿದ್ದಾರೆ. ಜಾನ್‌ ಲೆನೊನ್‌ ಕಂಡ ಗಡಿರಹಿತ, ದೇಶದ ಅಸ್ತಿತ್ವವೇ ಇಲ್ಲದ ವಿಶ್ವದ ಪರಿಕಲ್ಪನೆಯಲ್ಲಿ ಇಂತಹ ಭಾರತಕ್ಕೆ ಅವಕಾಶವೇ ಇಲ್ಲ.  ಈ ಬದಲಾವಣೆಯ ಸವಾಲನ್ನು ಸ್ವೀಕರಿಸಿ, ಇಂತಹ ರಾಷ್ಟ್ರೀಯತೆಯ ವಿರುದ್ಧ  ರಾಷ್ಟ್ರೀಯತೆಯಿಂದಲೇ ಹೋರಾಡುವ ಛಲದಂಕ ಮಲ್ಲನನ್ನು ಪ್ರತಿಪಕ್ಷಗಳು ಹೋರಾಟದ ಮುಂಚೂಣಿಗೆ ತರುವವರೆಗೆ ನರೇಂದ್ರ ಮೋದಿ ಅವರ ಹೊಸ ವಿಚಾರಧಾರೆ ವಿರುದ್ಧ ಆಕ್ರಮಣ ನಡೆಸಲು ಸಾಧ್ಯವೇ ಇಲ್ಲ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT