ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಢಿಗತ ಯಜಮಾನ ಸಂಸ್ಕೃತಿಯ ಪ್ರತಿಪಾದನೆ

Last Updated 18 ಅಕ್ಟೋಬರ್ 2016, 2:52 IST
ಅಕ್ಷರ ಗಾತ್ರ

ಸಮಾಜದ ಮೂಲ ಘಟಕವಾದ ಕುಟುಂಬ, ಹೆಣ್ಣಿನ ಅಧೀನತೆಯನ್ನು ಪೋಷಿಸುವಂತಹದ್ದು. ಪಿತೃಪ್ರಧಾನ ಮೌಲ್ಯಗಳು ಕುಟುಂಬವನ್ನು ಪೊರೆಯುತ್ತವೆ. ಸುರಕ್ಷತೆ, ಸುಭದ್ರತೆಯ ಭಾವವನ್ನು ನೀಡುವಂತಹ ಕುಟುಂಬ, ಅನೇಕ ಸಲ ಸಂವಿಧಾನದತ್ತವಾದ ವ್ಯಕ್ತಿ ಸ್ವಾತಂತ್ರ್ಯವನ್ನು ಹೆಣ್ಣಿಗೆ ನಿರಾಕರಿಸಲೂಬಹುದು. ಕೌಟುಂಬಿಕ ಮೌಲ್ಯಗಳ ಕಟ್ಟುಪಾಡುಗಳು ಹೆಣ್ಣನ್ನು ದಾಸ್ಯಕ್ಕೂ ದೂಡಬಹುದು ಅನೇಕ ಮೂಲಭೂತ ಸ್ವಾತಂತ್ರ್ಯಗಳು ಇದರಿಂದ ಹರಣವಾಗುತ್ತವೆ ಎಂಬುದು ಕಟು ವಾಸ್ತವ.

ಕುಟುಂಬದೊಳಗಿನ ಇಂತಹ ಅಧಿಕಾರ ಸಂಬಂಧಬಲಪಡಿಸುವಂತಹ ತೀರ್ಪನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದೆ. ಹೆತ್ತವರಿಂದ ದೂರ ಮಾಡಲು ಪ್ರಯತ್ನಿಸುವ ಪತ್ನಿಗೆ ಹಿಂದೂ ಪುತ್ರ ವಿಚ್ಛೇದನ ನೀಡಬಹುದು ಎಂದು ಈ ತೀರ್ಪು ಹೇಳಿದೆ. ನ್ಯಾಯಮೂರ್ತಿಗಳಾದ ಅನಿಲ್ ಆರ್. ದವೆ ಹಾಗೂ ಎಲ್. ನಾಗೇಶ್ವರ  ರಾವ್ ಅವರಿದ್ದ ದ್ವಿಸದಸ್ಯ ಪೀಠ ನೀಡಿರುವ ಈ ತೀರ್ಪು ಪುರುಷನ ಪ್ರತಿಷ್ಠೆಗೆ ಕುಂದು ತಾರದಂತಹ ಹಿಂದೂ ಅವಿಭಕ್ತ ಕುಟುಂಬದ ಮೌಲ್ಯವನ್ನು ಎತ್ತಿ ಹಿಡಿದಿದೆ.

‘ಮದುವೆಯಾದ ನಂತರ ಪತ್ನಿಯ ಮಾತು ಕೇಳಿ ತಂದೆತಾಯಿಗಳಿಂದ ಹಿಂದೂ ಪುತ್ರ ಅದೂ ಕುಟುಂಬದ ಏಕೈಕ ದುಡಿಯುವ ಸದಸ್ಯನಾಗಿದ್ದಾಗ ಬೇರ್ಪಡುವುದು ಅಪೇಕ್ಷಣೀಯ ಸಂಸ್ಕೃತಿಯಲ್ಲ ಅಥವಾ ಸಾಮಾನ್ಯವಾಗಿ ಅನುಸರಿಸುವ ಆಚರಣೆಯೂ ಅಲ್ಲ. ಸಾಕಿ ಸಲಹಿ ಶಿಕ್ಷಣ ನೀಡಿದ ತಂದೆ ತಾಯಿಗೆ ವಯಸ್ಸಾಗಿ ಆದಾಯ  ಇಲ್ಲದಾಗ ಅಥವಾ ಆದಾಯ ಕಡಿಮೆಯಾದಾಗ ಅವರ ನಿಗಾ ವಹಿಸಿ ಪಾಲನೆ ಪೋಷಣೆ ಮಾಡುವ ನೈತಿಕ ಹಾಗೂ ಕಾನೂನಾತ್ಮಕ ಹೊಣೆಗಾರಿಕೆ ಪುತ್ರನಿಗಿರುತ್ತದೆ. ತಂದೆತಾಯಿಯನ್ನು ಬಿಟ್ಟು ತನ್ನೊಡನೆ ಪತಿ ಪ್ರತ್ಯೇಕವಾಗಿರಬೇಕೆಂದು ಬಯಸುವ ಪತ್ನಿ ನಮ್ಮ ಸಂಸ್ಕೃತಿ ಅಥವಾ ಸಂಪ್ರದಾಯಗಳಿಗೆ ಪರಕೀಯಳಾಗುತ್ತಾಳೆ. ಅದು ಪಾಶ್ಚಿಮಾತ್ಯ ಚಿಂತನೆ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಕರ್ನಾಟಕ ಮೂಲದ ದಂಪತಿಗೆ ಸಂಬಂಧಿಸಿದ ಪ್ರಕರಣ ಇದು. 1992ರಲ್ಲಿ ವಿವಾಹದ ನಂತರ, ನಿರಂತರವಾಗಿ ತನ್ನ ವೈವಾಹಿಕ ನಿಷ್ಠೆಯನ್ನು ಅನುಮಾನಿಸುತ್ತಿದ್ದುದಲ್ಲದೆ ಪ್ರತ್ಯೇಕವಾಗಿ ವಾಸ ಮಾಡಬೇಕೆಂದು ಪಟ್ಟು ಹಿಡಿದಿದ್ದ ಪತ್ನಿಯ ಕ್ರೌರ್ಯದ ಆರೋಪಗಳಿಗೆ ಈ ಪ್ರಕರಣ ಸಂಬಂಧಿಸಿತ್ತು. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಲೇ ಇದ್ದ ಪತ್ನಿಯಿಂದ 1995ರಲ್ಲಿ ಆತ್ಮಹತ್ಯೆಯ ವಿಫಲ ಯತ್ನವೂ ನಡೆದಿತ್ತು. ನಂತರ, 2001ರಲ್ಲಿ ಅಧೀನ ನ್ಯಾಯಾಲಯ ನೀಡಿದ ವಿಚ್ಛೇದನವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿತ್ತು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ, ಪತ್ನಿಯ ವಕೀಲರ ಹಾಜರಿ ಇಲ್ಲದಾಯಿತು. ಹೀಗಾಗಿ ಪತಿಯ ವಕೀಲರು ಮಂಡಿಸಿದ ವಾದಗಳ ಆಧಾರದ ಮೇಲೆ ಮೇಲ್ಮನವಿಯ ಬಗ್ಗೆ  ಈ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.

ಹಿಂದೂ ಪುತ್ರ ಹಾಗೂ ಹಿಂದೂ ಮಹಿಳೆಯ ಕರ್ತವ್ಯಗಳ ಬಗ್ಗೆ ಏನನ್ನೂ ಬೋಧಿಸದೆ ಅಧೀನ ನ್ಯಾಯಾಲಯದ ವಿಚ್ಛೇದನ  ಆದೇಶವನ್ನು ಎತ್ತಿ ಹಿಡಿಯಲು ಸುಪ್ರೀಂ ಕೋರ್ಟ್‌ಗೆ ಅವಕಾಶ ಇತ್ತು. ಆದರೆ, ನ್ಯಾಯಮೂರ್ತಿಗಳು ಬೋಧನೆಯನ್ನೂ ಮಾಡಿರುವುದು ವಿಶೇಷ ಎನಿಸುತ್ತದೆ. ‘ಪತ್ನಿಯ ನಡವಳಿಕೆ ಭಯಂಕರ. ಯಾವ ಗಂಡನೂ ಇಂತಹ ನಡವಳಿಕೆ ಸಹಿಸಬೇಕಾಗಿಲ್ಲ’ ಎಂದು ನ್ಯಾಯಮೂರ್ತಿಗಳು  ಹೇಳಿದ್ದಾರೆ.

‘ಭಾರತದಲ್ಲಿ ಸಾಮಾನ್ಯವಾಗಿ ಜನರು ಪಾಶ್ಚಿಮಾತ್ಯ ಚಿಂತನೆಯನ್ನು ಅಳವಡಿಸಿಕೊಂಡಿಲ್ಲ. ಹೀಗಾಗಿ, ವಿವಾಹದ ನಂತರ ಗಂಡನ ಕುಟುಂಬದ ಜೊತೆ ಪತ್ನಿ ಇರಬೇಕೆಂದು ನಿರೀಕ್ಷಿಸುವುದು ಸಹಜವಾದ ಸಂಗತಿ. ಆಕೆ ಗಂಡನ ಕುಟುಂಬದಲ್ಲಿ ಒಬ್ಬಳಾಗುತ್ತಾಳೆ. ಜೊತೆಗೆ ಯಾವುದೇ ಸಮರ್ಥನೀಯವಾದ ಬಲವಾದ ಕಾರಣಗಳಿಲ್ಲದೆ ಅತ್ತೆಮಾವಂದಿರಿಂದ ಬೇರ್ಪಟ್ಟು ತನ್ನ ಪತಿ ತನ್ಮೊಂದಿಗೆ ಮಾತ್ರ ವಾಸಿಸಬೇಕೆಂದು ಆಕೆ ಎಂದೂ ಒತ್ತಾಯಿಸುವುದಿಲ್ಲ’ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳ ಈ ವಿಚಾರಗಳು ಹಿಂದೂ ಮಹಿಳೆಯರನ್ನು ಪುರುಷರ ಭಾಗವಾಗಿಯೇ ಕಾಣುವಂತಹದ್ದು. ಪುರುಷನಿಗೆ ಸವಲತ್ತುಗಳನ್ನು ನೀಡಿ ಮಹಿಳೆಯನ್ನು ಅಧೀನ ನೆಲೆಯಲ್ಲಿ ಇರಿಸಿರುವಂತಹ ಭಾರತೀಯ ಕೌಟುಂಬಿಕ ಚೌಕಟ್ಟನ್ನು ಈ ತೀರ್ಪು ಮತ್ತೆ ಬಲಪಡಿಸುವಂತಹದ್ದಾಗಿದೆ.

ಎರಡು ದಶಕಗಳಿಗೂ ಹೆಚ್ಚು ಕಾಲ ಒಟ್ಟಿಗೆ ಜೀವಿಸಿರದ ದಂಪತಿಗೆ ವಿಚ್ಛೇದನವನ್ನು ಎತ್ತಿ ಹಿಡಿಯುವುದು ವಾದದ ಮಂಡನೆಯಲ್ಲಿ ಹೆಚ್ಚು ಪ್ರಾಮುಖ್ಯ ಪಡೆದಿಲ್ಲ. ದಂಪತಿಯ ಪುತ್ರಿ ಈಗಾಗಲೇ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಆಕೆಗೂ ಈ ಬೇರ್ಪಡಿಕೆ ಇಷ್ಟು ವರ್ಷಗಳಲ್ಲಿ ಮಾಮೂಲಾಗಿ ಹೋಗಿರುತ್ತದೆ’ ಎಂದು ಕೋರ್ಟ್ ಪ್ರಸ್ತಾಪಿಸಿದೆ. ‘ಹೀಗಾಗಿ ಇಂತಹ ಸಂದರ್ಭದಲ್ಲಿ ಪತಿ ಪತ್ನಿಯನ್ನು ಒಟ್ಟು ಮಾಡುವುದು ಅನಗತ್ಯ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಆದರೆ ಈ ವಿಚ್ಛೇದನವನ್ನು ಎತ್ತಿ ಹಿಡಿಯಲು ಮಹಿಳೆಯ ಸಾಂಪ್ರದಾಯಿಕ ಕೌಟುಂಬಿಕ ಪಾತ್ರ ಕುರಿತಂತೆ ನೀಡಿರುವ ಬೋಧನೆ ಅಸಂಗತ. ಹಕ್ಕುಗಳನ್ನು ಎತ್ತಿ ಹಿಡಿಯಬೇಕಾದ ನ್ಯಾಯಾಲಯವೇ ಇಂತಹ ಬೋಧನೆ ಮೂಲಕ ಮಹಿಳೆಯ ಹಕ್ಕುಗಳನ್ನು ಮೊಟಕುಗೊಳಿಸಲು ಮುಂದಾಗಿರುವುದು ಅಚ್ಚರಿದಾಯಕ. ಸಾಂಪ್ರದಾಯಿಕ ನಂಬಿಕೆಗಳು ಹಾಗೂ ಆಚರಣೆಗಳ ಕುರಿತಂತೆ ನ್ಯಾಯಮೂರ್ತಿಗಳ ವ್ಯಕ್ತಿನಿಷ್ಠ ಅಭಿಪ್ರಾಯಗಳು ಇಲ್ಲಿ ದನಿ ಪಡೆದಂತಾಗಿದೆ. ಭಾರತದಲ್ಲಿ ಮಹಿಳೆಯರೂ ಸಮಾನ ಹಕ್ಕುಗಳುಳ್ಳ ಸ್ವತಂತ್ರ ನಾಗರಿಕರು ಎಂಬುದನ್ನೇ ನ್ಯಾಯಾಲಯ ಮರೆತಂತಿದೆ. ಯಾರದೋ ಪತ್ನಿ, ಪುತ್ರಿ ಅಥವಾ ಸೋದರಿ ಎಂಬ ನೆಲೆಯನ್ನೇ ಈ ತೀರ್ಪು ಪುಷ್ಟೀಕರಿಸುವಂತಿದೆ.

ಗಂಡು ಸಂತಾನ ಇಲ್ಲದ ವಿವಾಹಿತ ಮಹಿಳೆಯರ ವೃದ್ಧ ತಂದೆತಾಯಿಗಳ ಆರೈಕೆಯ ಹೊಣೆ ಯಾರು ಹೊರಬೇಕು ಎಂಬ ಬಗ್ಗೆ ನ್ಯಾಯಮೂರ್ತಿಗಳು ಜಾಣ ಮರೆವು ಪ್ರದರ್ಶಿಸಿದ್ದಾರೆ. ಮಗಳನ್ನು ಸಾಕಿ ಸಲುಹಿ ವಿದ್ಯಾವಂತೆಯನ್ನಾಗಿ ಮಾಡಿದ ತಂದೆತಾಯಿಗಳ ಬಗ್ಗೆ ಪುತ್ರನಿಗಿರಬೇಕಾದ ಹೊಣೆಗಾರಿಕೆ ಹೆಣ್ಣುಮಗಳಿಗೂ ಇರಬಾರದೆ?

ಆದಾಯದ ಕುರಿತು ಪ್ರಸ್ತಾಪಿಸಿರುವ ತೀರ್ಪು ತಂದೆ ತಾಯಿ ನೋಡಿಕೊಳ್ಳುವುದು ಪುತ್ರನ ಧಾರ್ಮಿಕ ಕರ್ತವ್ಯ ಎಂದಿದೆ. ಇದು ಬರೀ ಹಣಕಾಸಿನ ವಿಚಾರ ಮಾತ್ರವಲ್ಲ. ವಯಸ್ಸಾಗುತ್ತಿರುವ ತಂದೆತಾಯಿಗಳಿಗೆ ಕರ್ತವ್ಯನಿಷ್ಠ ಪುತ್ರ ಹಾಗೂ ಸೊಸೆ ಇರುವ ಪರಿಪೂರ್ಣ ಆದರ್ಶ  ಕುಟುಂಬದ ಚಿತ್ರಣವನ್ನು ಇಲ್ಲಿ ನೀಡಲಾಗುತ್ತಿದೆ. ಆದರೆ ಪತ್ನಿಯ ತಂದೆತಾಯಿಗಳ ಬಗೆಗಿನ ಮೌನ ಕುರಿತಾದ ಪ್ರಶ್ನೆಗೆ ಉತ್ತರಿಸುವವರಾರು? ಇದೇ ಕಾನೂನು ಪತ್ನಿಯ ತಂದೆತಾಯಿಗಳಿಗೂ ಏಕೆ ಅನ್ವಯವಾಗಬಾರದು? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಹಿಂದೂ ಪುತ್ರನಿಗೆ ಈ ವಿಶೇಷ ಸ್ಥಾನಮಾನ ಎಷ್ಟು ಸರಿ? ಈ ಬಗೆಯ ಆತಂಕಕಾರಿ ಸಾಮಾಜಿಕ ದೃಷ್ಟಿಕೋನಗಳು ಅಚ್ಚರಿಯದೇನೂ ಅಲ್ಲ. ಹೊಸದೂ ಅಲ್ಲ. ಆದರೆ ನ್ಯಾಯಾಲಯಗಳು ಇಂತಹ ಧೋರಣೆಗಳಿಗೆ ಅಧಿಕೃತ ಮುದ್ರೆ ಒತ್ತುವುದು ವಿಷಾದನೀಯ. ತಂದೆ ತಾಯಿ ಅಥವಾ ಅತ್ತೆಮಾವಂದಿರಿಗೆ ಪತಿ, ಪತ್ನಿಯ ಕರ್ತವ್ಯಗಳು ಹಾಗೂ ಹೊಣೆಗಾರಿಕೆಗಳು ವ್ಯಕ್ತಿನಿಷ್ಠವಾಗಿರುತ್ತವೆ. ನಿರ್ದಿಷ್ಟ ಸಂದರ್ಭಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಆದರೆ ಪುತ್ರನಿಗೆ ವಿಶೇಷ ಸ್ಥಾನಮಾನ ನೀಡುವ ಕುಟುಂಬ ಮಾದರಿಯನ್ನು ಎತ್ತಿ ಹಿಡಿಯುವ ಮೂಲಕ ಭಾರತದಲ್ಲಿ ಅಸ್ತಿತ್ವದಲ್ಲಿರುವ ವೈವಿಧ್ಯಮಯ ಕುಟುಂಬ ಮಾದರಿಗಳನ್ನು ಇಲ್ಲಿ ತಳ್ಳಿಹಾಕಿದಂತಾಗಿದೆ. ಹಲವು ಸಮುದಾಯಗಳಲ್ಲಿ ಅಳಿಯಕಟ್ಟು ಸಂತಾನ ಸಂಪ್ರದಾಯವೂ ಇರುವುದನ್ನು ಮರೆಯಲಾದೀತೆ? ಬಹುಸಂಸ್ಕೃತಿಯ ಭಾರತೀಯ ಸಮಾಜವನ್ನು ಹಿಂದೂ ಸಮಾಜದ ಜೊತೆ ಸಮೀಕರಿಸುವುದು ಎಷ್ಟು ಸರಿ? ಲಿಂಗತ್ವ ಹಾಗೂ ಧಾರ್ಮಿಕ ಪೂರ್ವಗ್ರಹಗಳನ್ನು ಬಿಂಬಿಸುತ್ತದೆ ಈ ತೀರ್ಪು.

ವಿಚ್ಛಿದ್ರಗೊಳ್ಳುವ ಸಾಧ್ಯತೆಯಿಂದ ನಿರ್ದಿಷ್ಟ ಕುಟುಂಬ ಮಾದರಿಯನ್ನು ಪಾರು ಮಾಡುವ ರಾಜಕೀಯ ಸಂದೇಶ  ಈ  ತೀರ್ಪಿನಲ್ಲಿ ಎದ್ದು ಕಾಣುತ್ತದೆ. ಹೀಗೆ ಮಾಡುವಾಗ, ಕುಟುಂಬದ ಬಹು ಸ್ವರೂಪಗಳ ಅಸ್ತಿತ್ವವನ್ನು ಕಡೆಗಣಿಸಲಾಗಿದೆ. ಕುಟುಂಬ ಕುರಿತಂತೆ ವಿವಿಧ ಜಾತಿ, ಧರ್ಮ, ವರ್ಗ ಅಥವಾ ಲೈಂಗಿಕ ಅಲ್ಪ ಸಂಖ್ಯಾತರ  ದೃಷ್ಟಿಕೋನಗಳನ್ನು ಮರೆಯಲಾಗದು. ಈ ವೈವಿಧ್ಯತೆಗಳು ಭಿನ್ನತೆಗಳನ್ನು ಬಹುಸಂಖ್ಯಾತಬಲದ ರಾಜಕೀಯ ದೃಷ್ಟಿಕೋನದಿಂದ ಅಲ್ಲಗಳೆಯಲಾಗದು.

ಹಿರಿಯರನ್ನು ಗೌರವಿಸುವ ಪರಂಪರೆ ನಮ್ಮದು. ಆದರೆ ಮನೆ ಸದಸ್ಯರಿಂದಲೇ  ಹಿರಿಯರ ಮೇಲಿನ ದೌರ್ಜನ್ಯ ಪ್ರಕರಣಗಳೂ ವರದಿಯಾಗುತ್ತವೆ. ಹಿರಿಯರನ್ನು ಘನತೆಯಿಂದ ಕಾಣುವ, ಗೌರವಿಸುವ ಮೌಲ್ಯಗಳು ಮರೆಯಾದಂತೆ ಅನಿಸುತ್ತದೆ. ಈ ಹೊಸ ವಾಸ್ತವವನ್ನು ನಿರ್ವಹಿಸಬೇಕಾದುದು ಅಗತ್ಯ. ಇದಕ್ಕೆ  ಅವಿಭಕ್ತ ಕುಟುಂಬಗಳು ಉತ್ತರವಾಗಬಲ್ಲುದೆ? ಅದೂ ಸೊಸೆಗೇ ಎಲ್ಲಾ ಜವಾಬ್ದಾರಿ ನೀಡಬೇಕೆ? ಅಥವಾ  ಹಣಕಾಸು, ಆರೋಗ್ಯ ಹಾಗೂ ಭಾವನಾತ್ಮಕ ನೆಲೆಗಳಲ್ಲಿ ಹಿರಿಯರ ಆರೈಕೆ ಕ್ಷೇತ್ರದಲ್ಲಿ ಸುಧಾರಣೆ ತರಬೇಕಾದುದು ಅಗತ್ಯವಲ್ಲವೆ? ಇಲ್ಲಿ ಸರ್ಕಾರದ ಹೊಣೆಗಾರಿಕೆ ಇಲ್ಲವೆ?

ಹದಗೆಟ್ಟ ವಿವಾಹ ಸಂಬಂಧಗಳು ಅಥವಾ ದೌರ್ಜನ್ಯ ನಡೆಸುವ ಪತಿಯಂದಿರ ಜೊತೆ ಬಾಳ್ವೆ ಮಾಡುತ್ತಿರುವ ಲಕ್ಷಾಂತರ ಮಹಿಳೆಯರ ಬಾಳನ್ನು ಈ ತೀರ್ಪು ಛಿದ್ರಗೊಳಿಸುವಂತಹದ್ದು. ಅದರಲ್ಲೂ ಕೋರ್ಟ್ ಬಳಸಿರುವ ಭಾಷೆ  ಪ್ರತಿಗಾಮಿಯಾದದ್ದು. ವಿಚ್ಛೇದನ ನೀಡಲು ಅಗತ್ಯ ನೆಲೆಯನ್ನು ಸುಲಭ ಮಾಡಿದಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾಗುವವಳು ಮಹಿಳೆ. ಲೈಂಗಿಕ ಹಿಂಸಾಚಾರ ಹೆಚ್ಚಳ. ಹೆಣ್ಣುಮಕ್ಕಳ ಅಕ್ರಮ ಸಾಗಣೆ ಇಂದು ದಿನನಿತ್ಯದ ವಿದ್ಯಮಾನಗಳಾಗಿವೆ, ವೈವಾಹಿಕ ಅತ್ಯಾಚಾರ ಎಂಬುದು ನಮ್ಮ ದೇಶದಲ್ಲಿ ಅಪರಾಧವಲ್ಲ.

ಲಿಂಗತಾರತಮ್ಯವಂತೂ ಮಾಮೂಲು ಆಗಿರುವ ಸದ್ಯದ ಸಂದರ್ಭದಲ್ಲಿ ಮಹಿಳಾ ಹಕ್ಕುಗಳಿಗೆ ಇದು ಮತ್ತೊಂದು ಹೊಡೆತ ಎಂದೇ ಭಾವಿಸಬೇಕಾಗುತ್ತದೆ. ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಲಿಂಗತ್ವ ಸಮಾನತೆ ಸಾಧನೆಗೆ ಮಹಿಳೆಯರಿನ್ನೂ ಹೋರಾಡುತ್ತಲೇ ಇದ್ದಾರೆ ಎಂಬುದನ್ನು ಮರೆಯಲಾಗದು.

ಅನಗತ್ಯ ಅನುಮಾನ ಪ್ರವೃತ್ತಿಯನ್ನು ವಿಚ್ಛೇದನಕ್ಕೆ ನ್ಯಾಯಬದ್ಧ ನೆಲೆಯಾಗಿ ವಿವಿಧ ಪ್ರಕರಣಗಳಲ್ಲಿ ವಿವಿಧ ಕೋರ್ಟ್‌ಗಳು ಒಪ್ಪಿಕೊಂಡಿವೆ. ಈಗ ತಂದೆತಾಯಿಯನ್ನು ನೋಡಿಕೊಳ್ಳಬೇಕಾದ ಪುತ್ರನ ನೈತಿಕ  ಕರ್ತವ್ಯ ಹಾಗೂ ಇದಕ್ಕೆ ಪತ್ನಿಯಿಂದಾಗಬಹುದಾದ ಅಡ್ಡಿಯೂ ವಿಚ್ಛೇದನಕ್ಕೆ ಹೊಸದೊಂದು ನೆಲೆಯಾಗಿ ಕೋರ್ಟ್ ಗುರುತಿಸಿದಂತಾಗಿದೆ. ತಂದೆತಾಯಿ ಮನೆಯಿಂದ ಪುತ್ರ ಹೊರಬರುವಂತೆ ಮಾಡುವುದು ಕ್ರೌರ್ಯ. ಆದರೆ ತಂದೆತಾಯಿ ಮನೆಯಿಂದ ಪುತ್ರಿ ಹೊರಬರುವುದು ಸಂಪ್ರದಾಯ  ಅಥವಾ ಹಿಂದೂ ಪರಂಪರೆ . ಇದು ವಿಪರ್ಯಾಸವಲ್ಲವೆ?

ಕಳೆದ ವಾರ ಅಂತರರಾಷ್ಟ್ರೀಯ ಹೆಣ್ಣುಮಗು ದಿನದಂದು (ಅ.11), ಮಹಿಳಾ ಹಕ್ಕುಗಳನ್ನು ಗೌರವಿಸುವ ಅಗತ್ಯದ ಕುರಿತು ಮಾತನಾಡುತ್ತಾ ‘ನಮ್ಮ ಮನೆಗಳಲ್ಲಿನ ಸೀತೆಯರನ್ನು ರಕ್ಷಿಸೋಣ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬೇಕು. ಶೀಲದ ಶಂಕೆಯಿಂದಾಗಿ ಪತಿಯಿಂದ ಪರಿತ್ಯಕ್ತಳಾದವಳು ಸೀತೆ.  ಇಂತಹ ಅವಮಾನ, ಸಂಕಷ್ಟಗಳನ್ನು  ಆಧುನಿಕ ಕಾಲದ ‘ಸೀತೆಯರು’ ಅನುಭವಿಸುತ್ತಲೇ ಇದ್ದಾರೆ.  ಭಾರತದಲ್ಲಿ ಮಹಿಳೆಯಾಗಿರುವುದು ಕಷ್ಟಕರ ಎಂದು ಜಾಗತಿಕ ಸಮೀಕ್ಷೆಯೊಂದು ಇತ್ತೀಚೆಗೆ ಹೇಳಿತ್ತು. ಇಂತಹ ಸಂದರ್ಭದಲ್ಲಿ, ‘ನಮ್ಮ ಮನೆಯ ಸೀತೆಯರನ್ನು ರಕ್ಷಿಸೋಣ, ಗಂಡು, ಹೆಣ್ಣು ಮಗುವಿನ ಮಧ್ಯೆ ಭೇದ ಭಾವ ಮಾಡುವುದು ಬೇಡ. ಎಷ್ಟು ಸೀತೆಯರನ್ನು ಗರ್ಭದಲ್ಲೇ ಕೊಲ್ಲುತ್ತಿದ್ದೇವೆ?.... ಹೆಣ್ಣು ಹುಟ್ಟಿದಾಗ ಹೆಚ್ಚು ಸಂಭ್ರಮ ಪಡಬೇಕು’ ಎಂದು ಮೋದಿಯವರು ಕರೆ ನೀಡಿದ್ದು ಸರಿಯಾಗಿಯೇ ಇದೆ.

ಆದರೆ ಸಮಾಜದ ಮನೋಧರ್ಮಗಳನ್ನು ಬದಲಿಸುವುದು ಹೇಗೆ? ಗಂಡುಮಗು ಕುಲದೀಪಕ, ಆದರೆ ಹೆಣ್ಣುಮಗು ಹೊರೆ. ಏಕೆಂದರೆ ವರದಕ್ಷಿಣೆ ಕೊಟ್ಟು ಮದುವೆಮಾಡಬೇಕು. ಆಕೆ ಎಂದಿದ್ದರೂ ಗಂಡನ ಮನೆ ಸೇರುವವಳು, ಪರರ ಸೊತ್ತು ಎಂಬಂತಹ ದೃಷ್ಟಿಕೋನಗಳನ್ನು ಬದಲಿಸುವುದು ಹೇಗೆ? ಹೀಗಾಗಿ ಹೆಣ್ಣುಹುಟ್ಟಿದರೂ ಪ್ರಯೋಜನವಿಲ್ಲ. ವೃದ್ಧಾಪ್ಯದಲ್ಲಿ ನೋಡಿಕೊಳ್ಳುವವನು ಗಂಡು ಮಗ. ಸೊಸೆಯನ್ನು ತರುತ್ತಾನೆ ಎಂಬಂತಹ ಧೋರಣೆಗಳನ್ನು ಬದಲಿಸುವುದು ಹೇಗೆ?  ಈ ದೃಷ್ಟಿಕೋನವನ್ನೇ ಈಗ ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿದೆ.  ಹೆಣ್ಣು , ಗಂಡನ ಮನೆ ಭಾಗವಾಗುತ್ತಾಳೆ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದೆ. ಈಗಾಗಲೇ 2011ರ ಜನಗಣತಿಯ ಪ್ರಕಾರ, 1000 ಬಾಲಕರಿಗೆ ಕೇವಲ 918 ಬಾಲಕಿಯರಿದ್ದಾರೆ. ‘ಹೆಣ್ಣು ಹುಟ್ಟುವುದು ಬೇಡ’ ಎಂದು ಜನ ಬಯಸುತ್ತಿದ್ದಾರೆ ಎಂಬುದಕ್ಕೆ ಇದು ದ್ಯೋತಕವಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT