ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯದ ಬಸಿರ ಬಯಲಲ್ಲಿ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೂಸಿನ ಮೊದಲ ವರ್ಷವೆಲ್ಲ ನಾದಲೀಲೆಯೇ. ಗಮನಿಸಿದಷ್ಟೂ ಕುತೂಹಲ, ಅರಿತಷ್ಟೂ ಪ್ರಶ್ನೆ. ನಮ್ಮ ಮಾತು ಕೂಸಿಗೆ ತಿಳಿಯದು, ಕೂಸು ಏನು ಹೇಳುತ್ತದೆ ಅಂದುಕೊಳ್ಳುತ್ತೇವೋ ಅದೆಲ್ಲ ಬರಿಯ ಊಹೆ.

ಅರ್ಥವಿರದ ಸ್ವಾರ್ಥವಿರದ ನಾದಲೀಲೆಗಿಂತ ಕೌತುಕ ಇನ್ನೇನು ಇದ್ದೀತು. ಕೂಸಿನ ನಾದಲೀಲೆಯ ವಿವರ ತಿಳಿದರೆ ಭಾಷೆಯ ಬಗ್ಗೆ ಜ್ಞಾನ ದೊರೆತೀತು ಅನ್ನುವ ಎಳೆ ಹಿಡಿದು ವಿಜ್ಞಾನಿಗಳು ಹೊರಟಿದ್ದಾರೆ.

ಒಂದು ತಿಂಗಳ ಕೂಸು ಮಾಡುವ ಸದ್ದು ಯಾವ ಭಾಷೆಯೂ ಅಲ್ಲ. ಕೂಸುಗಳು ತೀರ ತಮಗೆ ಅಗತ್ಯವಾದದ್ದನ್ನು ಪಡಕೊಳ್ಳುವುದಕ್ಕೆ ಸದ್ದು ಮಾಡುವುದಲ್ಲದೆ ಬೇರೇನು ಮಾಡಬಲ್ಲವು? ಸಂತೋಷವಾದಾಗ ಮೈಯೆಲ್ಲ ನಗು, ಇಲ್ಲದಿದ್ದರೆ ಅಳು ಎರಡೇ.
 
ಎಲ್ಲ ಅಳುವೂ ಒಂದೇ ಥರ ಇರುವುದಿಲ್ಲ. ಹಸಿವಾದಾಗ ಅತ್ತರೆ ವಾ ಅನ್ನುತ್ತವೆ, ಒಂದು `ವಾ~ಕ್ಕೂ ಇನ್ನೊಂದು `ವಾ~ಕ್ಕೂ ಪುಟ್ಟ ಅಂತರ. ಹಸಿವಾದಾಗ ಅತ್ತರೆ ಒಮ್ಮೆಗೇ ಜೋರಾಗಿ `ವಾ~ ಅಂತ ಶುರುವಾಗಿ ಸ್ಫೋಟ, ಸಣ್ಣ ವಿರಾಮದ ನಂತರ ಸ್ವಲ್ಪ ತಗ್ಗುದನಿಯಲ್ಲಿ ಮುಂದುವರೆಯುತ್ತದೆ.

ಯಾರಾದರೂ ಎತ್ತಿಕೊಂಡು ಮುದ್ದು ಮಾಡಿದರೆ ಊಡಿದರೆ ಅಳುವಿನ ಅವಧಿ ಕಿರಿದಾಗುತ್ತ ಕಿರಿದಾಗುತ್ತ, ಬಿಕ್ಕುಗಳಾಗಿ, ಕಣ್ಣಲ್ಲಿ ನೀರು ತುಂಬಿದ್ದರೂ ಮುಖದಲ್ಲಿ ನಗು ಮೂಡಿ ಸುಮ್ಮನಾಗುತ್ತದೆ. ಯಾರೂ ಬರದಿದ್ದರೆ ಬರುವವರೆಗೂ ಅಳು ಮುಂದುವರೆಯುತ್ತದೆ; ಸಮಾಧಾನವಾಗಿದ್ದರೆ ಗಂಟಲಲ್ಲೆ ಮುಕ್ಕುಳಿಸಿದ ಹಾಗೆ ಗಲಗಲ.

ಕೂಸಿನ ಬರಿಯ ಅಳುವನ್ನು ಮಾತ್ರ ಕೇಳಿ ಅದು ಯಾವ ಭಾಷೆಯಲ್ಲಿ ಅಳುತ್ತಿದೆ ಅಂತ ಗುರುತು ಹಿಡಿಯಬಹುದೆ? ಕನ್ನಡದ ಮಗು, ಅಸ್ಸಾಮಿ ಮಗು, ಚೀನೀ ಮಗು, ಇಂಗ್ಲಿಷ್ ಮಗು ಬೇರೆ ಬೇರೆ ಥರ ಅಳುತ್ತವೆಯೇ? ಇಲ್ಲ. ಎಳೆಯ ಕೂಸುಗಳು ಜಗತ್ತಿನಲ್ಲೆಲ್ಲ ಒಂದೇ ಥರ ಅಳುತ್ತವೆ. ಆ ಬಗ್ಗೆ ಸಂಶೋಧನೆ ನಡೆದು ಸಾಬೀತು ಆಗಿದೆ.
 
ಒಂದು ವರ್ಷವಾದ ಮೇಲೆ ಮಗು ಖಂಡಿತವಾಗಿ ಕನ್ನಡ ಮಗುವೋ ಅಸ್ಸಾಮಿ ಮಗುವೋ ಇಂಗ್ಲಿಷ್ ಮಗುವೋ ಅನ್ನುವುದು ಗೊತ್ತಾಗುತ್ತದೆ, ಅದರ ಅಳುವಿನಿಂದಲೇ. ಯಾಕೆಂದರೆ ಆ ಹೊತ್ತಿಗೆ ಆಗಲೇ ಅದು ತಾಯ್ನುಡಿಯ ಲಯದಲ್ಲಿ ಕೆಲವು ಶಬ್ದಗಳನ್ನು ಆಡುವುದು ಕಲಿತಿರುತ್ತದೆ.

ಕೂಸಿಗೆ ಮೂರು ತಿಂಗಳಾಗುವ ಹೊತ್ತಿಗೆ ಏನೋ ಬದಲಾವಣೆ, ಕಣ್ಣಿಗೂ ಕಾಣುತ್ತದೆ. ತುಟಿಯನ್ನೂ ಆಡಿಸುತ್ತ ಅಲುಗಿಸುತ್ತ ಊ ಅನ್ನುವ ಹಾಗೆ, ಬ್ರ್‌ಬ್ರ್‌ಬ್ರ್ ಅನ್ನುವ ಹಾಗೆ ಸದ್ದು ಹೊರಡಿಸುತ್ತದೆ. ತೀರ ಗಂಟಲ ಹಿಂಬದಿಯಲ್ಲಿ ಗುಳುಗುಳು ಗಲಗಲ ಸದ್ದು ಹೊರಡುತ್ತದೆ. ಇವನ್ನೆಲ್ಲ ಬರೆಯುವುದಕ್ಕೆ ಯಾವ ಭಾಷೆಯಲ್ಲೂ ಅಕ್ಷರಗಳಿಲ್ಲ, ಸಂಕೇತಗಳಿಲ್ಲ.
 
ಕಾಕು, ಕೇಕೆ, ಕೂಯಿಂಗ್ ಇತ್ಯಾದಿ ವಿವರಣೆ ಕೊಟ್ಟುಕೊಳ್ಳುತ್ತೇವೆ. ಮೂರು ತಿಂಗಳಾಗುವ ತನಕ ಕೂಸುಗಳ ಕಾಕುಗಳಲ್ಲಿ ಯಾವ ವಿಶಿಷ್ಟ ಭಾಷೆಯ ಲಕ್ಷಣವೂ ಇರುವುದಿಲ್ಲ. ತಾಯ್ನುಡಿ ಯಾವುದೇ ಆದರೂ ನಾದ ಮಾತ್ರ ಒಂದೇ.

ಆರು ತಿಂಗಳ ಹೊತ್ತಿಗೆ ಕೂಸಿಗೆ ನಾದದ ಮೇಲೆ ಸ್ವಲ್ಪ ಹತೋಟಿ ಬಂದಿರುತ್ತದೆ. ಹೊಸ ಹೊಸ ಪ್ರಯೋಗದಲ್ಲಿ ತೊಡಗುತ್ತದೆ. ಸುತ್ತಲೂ ಇರುವ ಜನ ಆಡುವ ಭಾಷೆಗೆ ಲಗತ್ತಾಗುವ ಹಾಗೆ ಕೆಲವಾದರೂ ಸದ್ದುಗಳು ಕೇಳಿಸುತ್ತವೆ; ವಿಶೇಷವಾಗಿ ಬ, ಪ, ಮ ಗಳು. ಈ ಸದ್ದು ಮಕ್ಕಳಿಗೆ ಎಷ್ಟು ಖುಷಿಕೊಡುತ್ತದೆಂದರೆ ಸಾಲು ಸಾಲಾಗಿ ಬಬಬಬ ಪಪಪ ಮಮಮಮಮ ಅನ್ನುತ್ತಲೇ ಇರುತ್ತವೆ. ತೊದಲುನುಡಿ ಇದು. 

ಆರರಿಂದ ಒಂಬತ್ತು ತಿಂಗಳವರೆಗೆ ಬಗೆಬಗೆಯ ಸದ್ದುಗಳ ಪ್ರಯೋಗ ನಡೆಯುತ್ತದೆ. ನ ನ ನ, ದದದ, ಬುಬುಬು ದಿದಿಗಳು, ಇವುಗಳ ಪರಸ್ಪರ ಜೋಡಣೆಗಳು ನಮಗೆ ಕೇಳುತ್ತವೆ. ಪ್ರಾಕ್ಟಿಸು ಮಾಡುತ್ತವೆ ಮಕ್ಕಳು.

ಹೀಗಂದುಕೊಂಡಾವು: `ನಾಲಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆತ್ತಿ ಮತ್ತೆ ಮತ್ತೆ ಬಡಿದರೆ ಏನಾಗುತ್ತದೆ ತತತ ತ್ಚ್‌ತ್ಚ್‌ತ್ಚ್. ಅರೆ ಚೆನ್ನಾಗಿದೆ. ಮತ್ತೆ ಇನ್ನೊಂದು ಸಾರಿ!~ ಜೊತೆಗೇ ತಾವು ಮಾಡುವ ಕೆಲವು ಸದ್ದುಗಳು ಸುತ್ತಲೂ ಇರುವ ದೊಡ್ಡವರಿಗೆ ರೋಮಾಂಚನ ಉಂಟುಮಾಡಿದ್ದೂ ಗೊತ್ತಾಗುತ್ತದೆ.

ತುಟಿ ಸೇರಿಸಿ `ಮಮಮ ಅಂದಾಗ ನನಗೆ ಹಾಲು ಕುಡಿಸಲು ಬರುತ್ತದಲ್ಲ ಅದಕ್ಕೆ, ದದದ ಅಂದರೆ ಅಗೋ ಆ ದೊಡ್ಡ ಗಾತ್ರದ ಇನ್ನೊಂದು ಇದೆಯಲ್ಲ ಅದಕ್ಕೆ ಖುಷಿ ಆಗುತ್ತದೆ, ನಾನು ಹೀಗೆ ಸದ್ದು ಮಾಡಿದಾಗ ಅವೂ ಅವರೂ ಹೀಗೆ ಸದ್ದು ಮಾಡುತ್ತವೆ ಇನೊಂದು ಸಾರಿ ಟ್ರೈಮಾಡಲಾ ಅಂದುಕೊಂಡೀತು~ ಕೂಸು.

ಅಪ್ಪ ಅಮ್ಮಂದಿರಿಗೆ ಖುಷಿಯಾಗುವುದು. ಮಕ್ಕಳು ನಮ್ಮನ್ನು ಗುರುತು ಹಿಡಿಯುತ್ತಿವೆ ಅಂದುಕೊಳ್ಳುತ್ತಾರೆ ದೊಡ್ಡವರು. ಆದರೆ ಈ ಹಂತದಲ್ಲಿ ಮಕ್ಕಳಿಗೆ ತಾವು ಏನು ಹೇಳುತ್ತಿದ್ದೇವೆ, ಏನಾದರೂ ಹೇಳುತ್ತಿದ್ದೇವಾ ಅನ್ನುವುದು ಗೊತ್ತೇ ಇರುವುದಿಲ್ಲ.
 
ಸದ್ದಿನ ಖುಷಿಗಾಗಿ ಸದ್ದು ಮಾಡುತ್ತವೆ. ಅದು ನಮ್ಮ ಭಾಷೆಯ ಯಾವುದೋ ಪದದಂತೆ ಅನಿಸಿದರೆ ಆಕಸ್ಮಿಕ. ಮಮ ಮಮ್ಮ ಅಮ್ಮ ಅನ್ನುವುದು ನಿಜವಾಗಿ ಅರ್ಥಕ್ಕೆ ಲಗತ್ತಾಗುತ್ತದೆ ಅನ್ನುವುದು ತಿಳಿಯುವುದಕ್ಕೆ ಕೂಸು ಇನ್ನೂ ಬೆಳೆಯಬೇಕು.
 
ಅಮ್ಮ ಎದುರಿಗೆ ಇಲ್ಲದಿರುವಾಗಲೂ ಬೇರೆ ಬೇರೆ ಸಂದರ್ಭಗಳಲ್ಲು ಅದು ಸುಮ್ಮನೆ ಮಮ ಮ್ಮಮ್ಮ ಅಮ್ಮಮ್ಮಮ್ಮ ಅನ್ನುತ್ತ ಇರುತ್ತದೆ. ಆರು ತಿಂಗಳಲ್ಲಿ ಮಗುವಿನ ಅರ್ಥಶಕ್ತಿ ಮಮ್ಮ ಅಂದರೆ ಅಮ್ಮ ಅನ್ನುವ ಅರ್ಥವನ್ನು ತಿಳಿಯುವ ಮಟ್ಟ ಮುಟ್ಟಿರುವುದಿಲ್ಲ.

ಇನ್ನೂ ಮೂರು ತಿಂಗಳು ಕಳೆಯಿತು. ಮಗು ಮೊದಲು ತೊದಲಿದಾಗ ಬಬಬಬ ಅನ್ನುವಲ್ಲಿ ಮೊದಲ ಬ ಸ್ಪಷ್ಟವಾಗಿ ಪ್ರಬಲವಾಗಿದ್ದು ಮಿಕ್ಕವು ಹೇಗೆ ಹೇಗೋ ಇರುತಿದ್ದವು.
 
ಸ್ಥಿರತೆ ಇರಲಿಲ್ಲ. ಬಕಾರದ ಸರಣಿಗೆ ನಿರ್ದಿಷ್ಟ ರೂಪವೂ ಇರಲಿಲ್ಲ. ಈಗ ಒಂಬತ್ತು ತಿಂಗಳ ಸುಮಾರಿಗೆ ಬಬ ಅನ್ನುವ ಸದ್ದುಗಳ ಸರಣಿಗೆ ಒಂದು ಖಚಿತ ರೂಪ ಬಂದಿರುತ್ತದೆ. ನಿಜವಾದ ಪದಗಳ ಹಾಗೆ ಕೇಳುತ್ತವೆ. ಮಗು ಹೇಗೆ ಕಲಿಯಿತು ಶಬ್ದಕ್ಕೆ ರೂಪ ಕೊಡುವುದನ್ನು?

ಹೇಗೆಂದರೆ ಮಗು ಈ ಹೊತ್ತಿಗೆ ಭಾಷೆಯ ಎರಡು ಪ್ರಮುಖ ಲಕ್ಷಣಗಳನ್ನು ಕಲಿತಿರುತ್ತದೆ. ಒಂದು, ಭಾಷೆಯ ಲಯ; ಇನ್ನೊಂದು ಮಾತಿನ ಏರಿಳಿತ. ಒಂದೊಂದು ಭಾಷೆಗೂ ಒಂದೊಂದು ಥರ ಲಯ ಇರುತ್ತದೆ. ಕನ್ನಡದ್ದು ಬೇರೆ, ಇಂಗ್ಲಿಷಿನದ್ದು ಬೇರೆ, ಚೀನೀ ಭಾಷೆಯದು ಇನ್ನೂ ಬೇರೆ.
 
ಒಂದು ಭಾಷೆಯ ಲಯಕ್ಕೆ ಮಾತ್ರ ಒಗ್ಗಿದ ಕಿವಿಗೆ ಇನ್ನೊಂದು ಭಾಷೆಯ ಲಯ ವಿಚಿತ್ರವಾಗಿ ಕಾಣುತ್ತದೆ. ಕನ್ನಡದ ಮಗು ಸುತ್ತಲ ಕನ್ನಡದ ವೈವಿಧ್ಯ ಯಾವುದಿದೆಯೋ ಅದರ ಲಯವನ್ನು ಒಂಬತ್ತನೆಯ ತಿಂಗಳ ಹೊತ್ತಿಗೆ ಗ್ರಹಿಸಿಬಿಟ್ಟಿರುತ್ತದೆ. ತಮ್ಮ ಸುತ್ತಲೂ ಇರುವ ಮಾತಿನ ಲಯವನ್ನು ತಮ್ಮ ಸದ್ದುಗಳಿಗೂ ತಂದುಕೊಳ್ಳುವುದಕ್ಕೆ ಪ್ರಯತ್ನಪಡುತ್ತಿರುತ್ತವೆ.
 
ಉಕ್ತಿಗಳನ್ನು ಪ್ರಯತ್ನಿಸುತ್ತ, ಮಮ ದದ ಗಳು ನಿಜ ಶಬ್ದಗಳ ಹಾಗೆ ನಮಗೆ ಕೇಳತೊಡಗುತ್ತವೆ. ಈ ಸದ್ದುಗಳಿಗೆ ಇನ್ನೂ ಖಚಿತ ಅರ್ಥ ಬಂದಿರುವುದಿಲ್ಲ, ಆದರೆ ಹೆಚ್ಚು ವಿಶ್ವಾಸಪೂರ್ಣವಾಗಿ, ಹೆಚ್ಚು ಸ್ಥಿರವಾಗಿ ಸದ್ದುಗಳು ಹೊಮ್ಮುತ್ತವೆ. ಇನ್ನೇನು ಮಗು ಭಾಷೆ ಕಲಿತುಬಿಟ್ಟಿತು ಅನ್ನಿಸುತ್ತದೆ ಅಪ್ಪ ಅಮ್ಮಂದಿರಿಗೆ.

ಜೊತೆಗೇ ದನಿಯ ಏರಿಳಿತ. `ಮಳೆ ಬರುತ್ತಾ ಇದೆ~, `ಮಳೆ ಬರತಾ ಇದೆಯಾ?~ ಈ ಎರಡು ವಾಕ್ಯಗಳನ್ನು ಜೋರಾಗಿ ಹೇಳಿ ನೋಡಿ. ಮಳೆ ಬರುತ್ತಿದೆ ಅನ್ನುವ ಮಾಹಿತಿ ಇನ್ನೊಬ್ಬರಿಗೆ ಹೇಳುವಾಗ ನಮ್ಮ ದನಿಯ ಏರು ಇಳಿತ ಹೇಗಿರುತ್ತದೆ, ಬರುತ್ತಿದೆಯ ಅನ್ನುವ ಪ್ರಶ್ನೆ ಕೇಳುವಾಗ ಹೇಗಿರುತ್ತದೆ.
 
ಹೇಳುವ ದನಿಗೂ ಪ್ರಶ್ನೆ ಕೇಳುವ ದನಿಗೂ ಇರುವ ವ್ಯತ್ಯಾಸ ಗಮನಕ್ಕೆ ಬಂತೇ? ಹೇಳುವಾಗ, ಪ್ರಶ್ನೆ ಕೇಳುವಾಗ ನಮ್ಮ ದನಿಯ ಎತ್ತರ, ತೀವ್ರತೆ ಎಲ್ಲ ಬದಲಾಗುತ್ತದೆ. ಇದನ್ನೂ ಮಗು ಭಾಷೆ ಕಲಿಯುವ ಮೊದಲೇ ಕಲಿತುಬಿಡುತ್ತದೆ.

ಕೂಸು ತನ್ನ ತಾಯ್ನುಡಿಯಲ್ಲಿ ಮೊದಲು ಕಲಿಯುವ ತುಣುಕು ಎಂದರೆ ಅದರ ಲಯ ಮತ್ತು ಏರಿಳಿತದ ವಿನ್ಯಾಸವೇ. ಬೇರೆ ಬೇರೆ ಭಾಷಾ ಹಿನ್ನೆಲೆಯ ಒಂಬತ್ತು ತಿಂಗಳ ಕೂಸುಗಳ ಧ್ವನಿಮುದ್ರಣ ಕೇಳಿಸಿಕೊಂಡರೆ ಅವು ಬೇರೆ ಬೇರೆ ಭಾಷೆ ಅನ್ನುವುದು ಸ್ಪಷ್ಟವಾಗಿರುತ್ತದೆ.

ಮೊದಲ ಹುಟ್ಟುಹಬ್ಬದ ಹೊತ್ತಿಗೆ ಕೂಸುಗಳಲ್ಲಿ ದನಿಯ ಏರಿಳಿತದ ವಿನ್ಯಾಸ ಖಚಿತವಾಗಿರುತ್ತದೆ. ಯಾವ ಭಾವವನ್ನು ಹೇಗೆ ಹೇಳಬೇಕು ಅನ್ನುವುದು ಒಂದು ವರ್ಷದ ಕೂಸುಗಳಾಗಿರುವಾಗಲೇ ನಮ್ಮಳಗೆ ದಾಖಲಾಗಿ ಬದುಕಿನ ಕೊನೆಯವರೆಗೂ ನಮ್ಮ ಭಾಷೆಯ ಭಾಗವಾಗಿ ಉಳಿಯುತ್ತದೆ.

ದನಿಯ ಏರಿಳಿತದ ಹಾಗೇ ದನಿಯ ಭಾವ ಕೂಡ ಮುಖ್ಯ. ಒಂದು ವರ್ಷವಾಗುವ ಹೊತ್ತಿಗೆ ಮಕ್ಕಳು ಭಾವ ಅಥವ ಟೋನ್‌ನ ಬಳಕೆ ಕಲಿತಿರುತ್ತಾರೆ. ತಾತಾ ಅಂದದ್ದು `ಬರುತ್ತಿರುವುದು ತಾತನೇ?~ ಅನ್ನುವ ಪ್ರಶ್ನೆಯಾಗಿ, ತಾತಾ ಅಂದದ್ದು `ಹೌದು, ಇದು ತಾತನೇ!~ ಅನ್ನುವ ಖುಷಿಯಾಗಿ, ತಾತಾ ಅಂದದ್ದು `ನನ್ನ ಎತ್ತಿಕೋ ತಾತ,~ ಅನ್ನುವ ಕೋರಿಕೆಯಾಗಿ, ಆಗಲೂ ಸುಮ್ಮನಿದ್ದರೆ ಮತ್ತೆ ತಾತಾ ಅಂದದ್ದು ಆಜ್ಞೆಯಾಗಿ ಕೇಳುವ ಹಾಗೆ ದನಿಯನ್ನು ಬಳಸುವುದು ಒಂದು ವರ್ಷದ ಮಗುವಿಗೆ ಗೊತ್ತಿರುತ್ತದೆ. ಆದರೆ ಪ್ರಶ್ನೆ, ಹೇಳಿಕೆ, ಕೋರಿಕೆ, ಆಜ್ಞೆಗಳನ್ನು ವಾಕ್ಯವಾಗಿ ರೂಪಿಸಲು ಬರುವುದಿಲ್ಲ. ಬರುವುದು ತಾತಾ ಅನ್ನುವುದು ಮಾತ್ರ.

ಅಮ್ಮನ ಬಸಿರಲ್ಲಿರುವಾಗಲೇ ಕೂಸು ಕೇಳಿಸಿಕೊಳ್ಳುತ್ತದೆ. ಮನೆಯ ಬಾಗಿಲು ದಡಾರನೆ ಸದ್ದು ಮಾಡಿದರೆ, ಸಿನಿಮಾ ಟಾಕೀಸಿನಲ್ಲಿ ಸೌಂಡು ಹೆಚ್ಚಾದರೆ ಬಸಿರಲ್ಲಿರುವ ಮಗು ಬೆಚ್ಚುತ್ತದೆ. ಬಸಿರೊಳಗೆ ಆರು ತಿಂಗಳು ವಾಸಮಾಡುವ ಹೊತ್ತಿಗೆ ಭ್ರೂಣಕ್ಕೆ ಪುಟ್ಟ ಕಿವಿಗಳು ಮೂಡಿರುತ್ತವೆ, ಶಬ್ದವು ಮಿದುಳಿಗೆ ತಲುಪಲು ಅಗತ್ಯವಾದ ಹಾದಿಯ ನಿರ್ಮಾಣವೂ ಪೂರಾ ಆಗಿರುತ್ತದೆ.
 
ಬಸಿರೊಳಗಿನ ಜೀವ ಕೇಳಿಸಿಕೊಳ್ಳುವುದು ಏನನ್ನು? ತಾಯ ಎದೆಬಡಿತ, ತಾಯ ನರನಾಡಿಗಳಲ್ಲಿ ಪ್ರವಹಿಸುವ ರಕ್ತದ ಸದ್ದು, ತಾಯ ಹೊಟ್ಟೆಯಲ್ಲಿ ಆಹಾರ ಜೀರ್ಣವಾಗುವಾಗ ಹುಟ್ಟುವ ಗುಳುಗುಳುಗುಡುಕ್ ಥರದ ಶಬ್ದ, ಮತ್ತೆ ತಾಯಿಯ ದನಿ ಕೂಡಾ.
 
ನಮ್ಮ ಕಿವಿಗೆ ಬೆರಳಿಟ್ಟುಕೊಂಡಾಗ ದೂರದಿಂದ ಕೇಳಿದ ಹಾಗೆ ಇರುತ್ತದಲ್ಲ, ಬೇರೆಯವರ ಮಾತು ಸ್ಪಷ್ಟವಾಗದಿದ್ದರೂ ಅವರ ಮಾತಿನ ಲಯ, ಏರಿಳಿತ ತಿಳಿಯುತ್ತದಲ್ಲ, ಹಾಗೆ. ತಾಯಿ ಮಾತಿನ ಲಯ, ಏರಿಳಿತಗಳನ್ನು ಹುಟ್ಟುವ ಮೊದಲೇ ಕಲಿಯುವುದಕ್ಕೆ ಶುರುಮಾಡಿರುತ್ತದೆ ಮಗು.

ಮಕ್ಕಳು ಮೊದಲ ಪದ ಯಾವಾಗ ಕಲಿಯುತ್ತಾರೆ, ಮೊದಲ ವಾಕ್ಯ ಯಾವಾಗ ಆಡುತ್ತಾರೆ, ಆ ಮಾಂತ್ರಿಕ ಗಳಿಗೆಯತ್ತ ಕೂಸು ನಡೆಸುವ ಪ್ರಯಾಣ ಕುತೂಹಲದ್ದು. ಅದು `ಮೂಕ ಮೊಗ್ಗೆ ಮುನ್ನೂಕಿ~ ತಲೆಯೆತ್ತುವ ಗಳಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT